ಪ್ರವಾಸ

ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ತಿರುವಯ್ಯಾರಿನಿಂದ ಕುಂಭಕೋಣಂನ ಕಡೆಗೆ ಹೊರಟೆವು. ಅಲ್ಲಿ ಊಟಕ್ಕೆ ನಿಲ್ಲಿಸಿ, ನಂತರ ಅಲ್ಲಿಂದ ಧಾರಾಸುರದ ಐರಾವತೇಶ್ವರ ದೇವಸ್ಥಾನಕ್ಕೆ ಹೊರಟೆವು. ಅಲ್ಲಿಯ ಪೂಜೆಗಳನ್ನೆಲ್ಲಾ ಮುಗಿಸಿಕೊಂಡು, ದೇವಾಲಯದ ಕುರಿತಾಗಿ ತಿಳಿದುಕೊಳ್ಳಲು ಸಂಪನ್ಮೂಲ ವ್ಯಕ್ತಿಯೊಬ್ಬನನ್ನು ಕರೆದೆವು. ಅವರು ಆಂಗ್ಲದಲ್ಲಿ ನಮಗೆ ದೇವಾಲಯದ ಕುರಿತು ಹೇಳತೊಡಗಿದರು. ಗುರುಗಳು ಮಾತಿನಲ್ಲಿ ಹೇಳುವುದಾದರೆ “ಮೊದಲು ಇವನ ಭಾಷೆ ಅಧ್ಯಯನ ಮಾಡಬೇಕು ಕಣೋ, ಆಮೇಲೆ ದೇಗುಲದ ಶಿಲ್ಪಕಲೆಯ ಅಧ್ಯಯನ”. ಸುಡು ಸುಡು ಬಿಸಿಲು ನಮ್ಮೆಲ್ಲರನ್ನೂ ಸುಸ್ತು ಹೊಡೆಸಿಬಿಟ್ಟಿತ್ತು. ಆದರೂ ನಾನು, ಹರ್ಷ ಅಣ್ಣ ಹಾಗು ವಿಜಯಸಾರಥಿ ಅಂಕಲ್‌ ಆ ವ್ಯಕ್ತಿಯೊಂದಿಗೆ ಹೋಗಿ ಎಲ್ಲದರ ವಿವರಣೆಯನ್ನು ಕೇಳತೊಡಗಿದೆವು. ಕೇವಲ ಕಂಬಗಳ ಮೇಲೆಯೇ ದಕ್ಷಯಜ್ಞ ನಾಶ, ಶಿವ-ಪಾರ್ವತಿ ವಿವಾಹ, ಕುಮಾರ ಸಂಭವ, ಸುಬ್ರಹ್ಮಣ್ಯನ ಮದುವೆ, ಗಜಚರ್ಮಾಂಬರನಾಗಿ ಶಿವ, ಇವೆಲ್ಲವನ್ನು ತೀಕ್ಷ್ಣವಾಗಿ ಕೆತ್ತಿದ್ದಾರೆ. ಆ ವ್ಯಕ್ತಿಗಂತೂ ಎಷ್ಟೊಂದು ಕಥೆಗಳು ಗೊತ್ತಿದ್ದವು. ತಮಿಳುನಾಡಿನ ದೇವಾಲಯಗಳು ಒಂದು ಸಾಮಾನ್ಯ ವಿನ್ಯಾಸ ಹೇಗಿರುತ್ತದೆ ಎಂಬುದನ್ನು ಸುಲಭವಾಗಿ ತಿಳಿಸಿಕೊಟ್ಟರು. ಅವರ ಜ್ಞಾನಕ್ಕೆ ಶ್ರಮಕ್ಕೆ ತಕ್ಕ ಸಂಭಾವನೆಯನ್ನು ನೀಡಿ ಅಲ್ಲಿಂದ ಹೊರಟೆವು. ಬಿಸಿಲಿನಿಂದ ಬಂದಾಗಲಷ್ಟೇ ಕಾರಿನೊಳಗಿನ ಎಸಿ ಬೆಲೆ ಗೊತ್ತಾಗುವುದು!

ಅಲ್ಲಿಂದ ಹೊರಟು, ಚಿಕ್ಕ ಚಿಕ್ಕ ಹಳ್ಳಿಗಳ ರಸ್ತೆ ಇವೆಲ್ಲವನ್ನೂ ದಾಟುವಾಗ ಗುರುಗಳು ಎಲ್ಲವನ್ನೂ ನೋಡುತ್ತಾ, “ಇವನೆ ಈ ಹಳ್ಳಿಗಳೆಲ್ಲಾ ಎಷ್ಟು ರಮಣೀಯವಾಗಿದೆ; ಆದರೂ ಒಂದು ಚೂರು ಚಟುವಟಿಕೆಯೇ ಇಲ್ಲ. ಅದಕ್ಕೇ ಇಲ್ಲಿನ ಜನ ನೂರು ನೂರು ವರ್ಷಗಳು ಬದುಕೋದು!” ಎಂದು ತಮಾಷೆ ಮಾಡಿದರು. ಅಲ್ಲಿಂದ ನಾವು ತಿರುಮೆಯಚೂರು ಎಂಬ ಪುಟ್ಟ ಊರನ್ನು ತಲುಪಿದೆವು. ಅಲ್ಲಿದ್ದಿದ್ದು ಮೇಘನಾಥ ಸನ್ನಿಧಿ. ಅದಕ್ಕಿಂತಲೂ ಮುಖ್ಯವಾಗಿ ಲಲಿತಾಂಬಿಕೆಯ ದೇವಾಲಯ. ಇಲ್ಲಿನ ಸ್ಥಳ ಪುರಾಣವೇನು ಗೊತ್ತೆ? ಲಲಿತಾ ಸಹಸ್ರನಾಮವನ್ನು ಹಯಗ್ರೀವಾಗಸ್ತ್ಯರು ಸಂವಾದ ಮಾಡಿದ ಸ್ಥಳವು ಅದೇ ಎಂಬುದು! ಅಲ್ಲಿಯ ಲಲಿತೆಯ ಮೂರ್ತಿ ಅತ್ಯಂತ ಮನೋಹರ. ಅದಕ್ಕೆ ತಕ್ಕಂತೆ ಅವರು ಮಾಡುವ ಅಲಂಕಾರಗಳು ಇನ್ನೂ ಸುಂದರ. ನಾವು ಅಲ್ಲಿ ಕುಳಿತು ಲಲಿತಾ ಸಹಸ್ರನಾಮವನ್ನು ಫಲಶೃತಿಯೊಂದಿಗೆ ಹೇಳಿದೆವು. ನಂತರ ಅಲ್ಲಿಂದ ನೇರವಾಗಿ ಹೊರಟಿದ್ದು ತಿರುವಾರೂರಿಗೆ. ಮುದ್ದುಸ್ವಾಮಿ ದೀಕ್ಷಿತರು ಕಮಲಾಂಬಿಕೆಯ ಕುರಿತಾಗಿ ನವಾವರಣ ಕೃತಿಗಳನ್ನು ರಚಿಸಿದ್ದಾರೆ. ಆ ಕಮಲಾಂಬಿಕೆ ಇರುವುದು ಈ ತಿರುವಾರೂರಿನ ದೇವಾಲಯದಲ್ಲೇ. ಈ ದೇವಸ್ಥಾನವೂ ಬೇರೆ ದೇವಸ್ಥಾನಗಳಂತೆ ಅತ್ಯಂತ ಬೃಹತ್‌ ದೇವಸ್ಥಾನ. ವಿಶೇಷವೆಂದರೆ ದೇವಸ್ಥಾನದ ಕಲ್ಯಾಣಿಯ ವಿಸ್ತೀರ್ಣವೇ ಇಪ್ಪತ್ತ ಮೂರು ಎಕರೆ! ಆ ಕಲ್ಯಾಣಿಯ ಮಧ್ಯದಲ್ಲಿ ಒಂದು ಸನ್ನಿಧಿ ಇದೆ. ಲಲಿತೆಯನ್ನು ಚಿದಗ್ನಿಕುಂಡ ಸಂಭೂತಾ ಎಂದು ಕರೆಯುತ್ತಾರೆ. ಆ ಚಿದಗ್ನಿ ಕುಂಡವು ಇದ್ದಿದ್ದು ಇಲ್ಲೆ ಎನ್ನುವುದು ಸ್ಥಳೀಯರ ನಂಬಿಕೆ.

ಕಮಲಾಂಬಿಕಾ ದೇವಾಲಯ, ಕಮಲಾಂಬಿಕಾ ದೇವಾಲಯ, ತಿರುವಾರೂರು


ತಿರುವಾರೂರಿನ ಮುಖ್ಯ ಸನ್ನಿಧಿ ತ್ಯಾಗರಾಜರ್‌ ಶಿವಲಿಂಗವನ್ನು ದರ್ಶಿಸಿ, ನಂತರ ಕಮಲಾಂಬಿಕೆಯ ದೇವಸ್ಥಾನಕ್ಕೆ ಹೋದೆವು. ಅಲ್ಲಿ ದೊಡ್ಡದಾದ ಮುದ್ದುಸ್ವಾಮಿ ದೀಕ್ಷಿತರ ಪಟವನ್ನೇ ಬಿಡಿಸಿದ್ದಾರೆ. ಜೊತೆಗೆ ಪಕ್ಕದಲ್ಲಿ ಅಮೃತಶಿಲೆಯ ಮೇಲೆ ನವಾವರಣ ಕೃತಿಗಳನ್ನು ಕೆತ್ತಿಸಿದ್ದಾರೆ. ಇಲ್ಲಿ ತಾಯಿಯು ಕಾಲು ಮಡಸಿರುವ ಮೂರ್ತಿ. ತುಂಬಾ ಮುದ್ದಾದ ಮೂರ್ತಿ. ಪೂಜಾರತಿಗಳ ನಂತರ ಅಲ್ಲೇ ಆವರಣದಲ್ಲಿ ಕುಳಿತು ಗುರುಗಳು ನವಾವರಣದಲ್ಲಿನ ಪ್ರಥಮ, ದ್ವಿತೀಯ, ಹಾಗೆ ಎಂಟನೆ ಹಾಗು ಕೊನೆಯ ಆವರಣದ ಕೃತಿಗಳನ್ನು ಹಾಡಿದರು. ಅವರೊಂದಿಗೆ ಕೌಸ್ತುಭ ಅಣ್ಣನೂ ಸೇರಿಕೊಂಡಂತೆ ನಡೆದ ದಿವ್ಯ ಗಾಯನದ ನಡುವೆ ನಾನು ಹರ್ಷ ಅಣ್ಣನನ್ನು ಗಮನಿಸುತ್ತಿದ್ದೆ. ಘಂಟಾ ರಾಗದ ಆವರಣ ಕೃತಿಯನ್ನು ಗುರುಗಳು ಹಾಡುತ್ತಿರಬೇಕಾದರೆ ಹರ್ಷ ಅಣ್ಣನ ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿದೆ! ಅದೆಂತಹ ಗುರುಭಕ್ತಿ ಅವರದ್ದು; ಅದೆಂತಹ ಮಮತೆ ಭಗವತಿಯ ಮೇಲೆ. ಇಲ್ಲಿ ಗುರುಗಳು ಹೇಳಿದ ವಿಶೇಷ ಸಂಗತಿಯೊಂದಿದೆ.

ಸಾಧಕನು ಕುಂಡಲಿನಿಯನ್ನು ಆಜ್ಞಾ ಚಕ್ರದ ತನಕವಷ್ಟೆ ತನ್ನ ಪ್ರಯತ್ನದಿಂದ ತೆಗೆದುಕೊಂಡು ಹೋಗ ಬಲ್ಲ. ನಂತರ ಸಾಕ್ಷಾತ್‌ ಗುರುವೇ ಭಗವತಿಯೊಂದಿಗೆ ಬಂದು ಝಲ್ಲಿ ಮದ್ದಲ ಝರ್ಝರ ನಾದ ಗಳೊಂದಿಗೆ ತುರೀಯಾವಸ್ಥೆಗೆ ಕರೆದುಕೊಂಡು ಹೋಗುತ್ತಾನೆ. ಗುರುಗಳು, “ಕಮಲಾಂಬಿಕೆ ದೇವಸ್ಥಾನದ ಹೊಸಲನ್ನೇ ಆಜ್ಞಾ ಚಕ್ರ ಎಂದುಕೊಂಡು ಹಣೆಯನ್ನು ಮುಟ್ಟಿಸಿ ಒಳ ಬನ್ನಿರಪ್ಪ” ಎಂದರು. ನನಗೆ ಆ ಕ್ಷಣಕ್ಕೆ ಅರ್ಥವಾಗಲಿಲ್ಲ. ಅವರು ಹೇಳಿದಂತೆಯೇ ಮಾಡಿ ಒಳಗೆ ಹೋದ ನಂತರ ಯೋಚಿಸಿದೆ. ಹೊಸಲೇ ಆಜ್ಞಾ ಚಕ್ರ. ನಮ್ಮ ಜೊತೆಗೆ ಗುರುಗಳಿದ್ದಾರೆ, ಇನ್ನು ದೇವಿ ಅಲ್ಲೇ ನೆಲೆಸಿದ್ದಾಳೆ. ಗರ್ಭಗುಡಿಯ ಆಕಾರವು ಸಹಸ್ರದಳ ಕಮಲದಂತೆ; ಸಹಸ್ರಾರ ಚಕ್ರದಂತೆ! ಆ ದೇವಾಲಯದೊಳಗೆ ನಾವು ಅನುಭವಿಸಿದ ಕ್ಷಣಗಳೇ ತುರೀಯಾ! ಆಹಾ ಒಂದೇ ವಾಕ್ಯದಲ್ಲಿ ಅದೆಷ್ಟು ಸುಂದರ ವಿಚಾರವನ್ನು ಗುರುಗಳು ಮಾಡಿಯೇ ತೋರಿಸಿಬಿಟ್ಟರು! ಪ್ರದಕ್ಷಿಣೆ ಮಾಡುವಾಗ ಗುರುಗಳು ನಮ್ಮನ್ನು ಕುಳ್ಳಿರಿಸಿ ಬಾಲಾ ತ್ರಿಪುರ ಸುಂದರಿ ಅಷ್ಟೋತ್ತರ ಶತನಾಮಾವಳಿಯ ಪಾರಾಯಣ ಮಾಡಿಸಿದರು. ಕಣ್ಣು ತೆರೆಯುವಷ್ಟರಲ್ಲಿ ಮುಂದೆ ಸಣ್ಣ ಬಾಲಿಕೆ! ಮುದ್ದು ಮುದ್ದಾಗಿ ಸಾಕ್ಷಾತ್‌ ಬಾಲಾ ತ್ರಿಪುರ ಸುಂದರಿಯೇ ಬಂದಳೆಂದು ಗುರುಗಳು ಆ ಪುಟ್ಟ ಬಾಲೆಗೆ ಹಾರಹಾಕಿ ಕಾಲಿಗೆರಗಿದರು. ನಾವೂ ಅವರು ಮಾಡಿದ್ದನ್ನೇ ಮಾಡಿದೆವು.

ಈ ಪ್ರವಾಸ ಕಥನದ ಹಿಂದಿನ ಭಾಗ ಇಲ್ಲಿದೆ :   http://surahonne.com/?p=40802

(ಮುಂದುವರಿಯುವುದು)

ತೇಜಸ್‌ ಎಚ್‌ ಬಾಡಾಲಮೈಸೂರು

3 Comments on “ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 6

  1. ಆಪ್ತವಾಗಿ ಪರಿಚಯಿಸುತ್ತೀರಿ ಎಲ್ಲವನ್ನು. ಸೊಗಸಾಗಿದೆ.

  2. ವೀಕ್ಷಿಸಿದ ದೇಗುಲದ ವಿವರಗಳನ್ನು ಒಳಗೊಂಡ ಪ್ರವಾಸ ಲೇಖನವು ಬಹಳ ಅಪ್ತವಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *