ಮನುಷ್ಯನಿಗೆ ಒಂದು ಕಾಲ “ಬೆಕ್ಕಿಗೂ” ಒಂದು ಕಾಲ!
ನಿಜಕ್ಕೂ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದೊಂದು ಬೆಕ್ಕು ಇದ್ದೇ ಇರುತ್ತದೆ. ನಮ್ಮ ಮನೆಯಲ್ಲಿ ಇಲ್ಲದಿದ್ದರೂ ಕೂಡ ಪಕ್ಕದ ಮನೆಯವರ ಬೆಕ್ಕು ನಮ್ಮ ಮನೆಗೆ ಬಂದು ನಮಗೆ ಗೊತ್ತಾಗದ ರೀತಿಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಇರಿಸಿ ಬಿಟ್ಟಿರುತ್ತದೆ!. ಜೊತೆಗೆ ಹಲವು ಬಾರಿ ಕದ್ದು ಕಿಟಕಿಯ ಮೂಲಕ ಬಂದು, ಕಾಯಿಸಿ ಇಟ್ಟಿರುವ ಹಾಲನ್ನು ಕಣ್ಣು ಮುಚ್ಚಿಕೊಂಡು ಕುಡಿದು….. “ಸದ್ಯ ಯಾರಿಗೂ ಗೊತ್ತಾಗಿಲ್ಲ…”! ಎನ್ನುವಂತೆ ಕ್ಷಣ ಮಾತ್ರದಲ್ಲಿ ಪಾತ್ರೆ ಸದ್ದು ಮಾಡಿ ಹೋಗಿಬಿಟ್ಟಿರುತ್ತದೆ!!. ಮನೆಯಲ್ಲಿ ಬಂದು ನೋಡಿದರೆ ಕಾಯಿಸಿ ಇಟ್ಟಿದ್ದ ಹಾಲು ಮಂಗಮಾಯ!. ಎಷ್ಟೋ ಬಾರಿ ಕದ್ದು ಕುಡಿದ ಬೆಕ್ಕಿನ ನಡೆಯಿಂದಾಗಿ ಮನೆಯಲ್ಲಿ ಮಹಿಳೆಯರು ಯಾರೋ ಹಾಲನ್ನು ಕಾಯಿಸಿ ಕುಡಿದುಬಿಟ್ಟಿದ್ದಾರೆ ಎಂದು ಜಗಳವಾಡಿದ್ದು ಉಂಟು!!. ಬೆಕ್ಕು ನಿಜಕ್ಕೂ ನಮ್ಮ ಕುಟುಂಬದ ಸದಸ್ಯನಂತೆ ನಮ್ಮೊಟ್ಟಿಗೆ ಬದುಕುತ್ತಾ ಬರುತ್ತಿದೆ. ಬೆಕ್ಕಿದ್ದರೆ ನಮಗೆ ಯಾವುದೇ ರೀತಿಯಲ್ಲಿ ಭಯವಿರುವುದಿಲ್ಲ. ಇಷ್ಟೆಲ್ಲ ಏಕೆ ಪೀಠಿಕೆ ಎಂದರೆ… ಆಗಸ್ಟ್ ೮ ರಂದು ಇವತ್ತು “ವಿಶ್ವ ಬೆಕ್ಕುಗಳ ದಿನಾಚರಣೆ”- ಈ ಸಂದರ್ಭದಲ್ಲಿ ನಾವು ಬೆಕ್ಕಿನ ಬಗ್ಗೆ ತಿಳಿದುಕೊಳ್ಳುತ್ತಾ, ಅದರ ಮತ್ತು ನಮ್ಮ ಒಡನಾಟ, ನಮ್ಮ ಪರಿಸರದೊಂದಿಗೆ ಅದರ ಸಾಮರಸ್ಯ, ಅದರ ಜೀವನ ಕ್ರಮ ಎಲ್ಲದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
ಎಷ್ಟೋ ಮನೆಯಲ್ಲಿ ಒಂದು ಬೆಕ್ಕು ಕನಿಷ್ಠ ನಾಲ್ಕೈದು ಮರಿಗಳನ್ನು ಹಾಕಿಬಿಡುತ್ತದೆ. ನಂತರ ಆ ಮರಿಗಳು ಮನೆಯ ತುಂಬೆಲ್ಲ ಗಲೀಜು ಮಾಡಿಕೊಂಡು ಓಡಾಡುತ್ತವೆ. ಆದರೂ ಕೂಡ ನಾವು ಅದನ್ನೆಲ್ಲ ಸಹಿಸಿಕೊಂಡು ಬದುಕುತ್ತೇವೆ. ಮನೆಯಲ್ಲಿ ಮಕ್ಕಳಿದ್ದರೆ ಮುಗಿಯಿತು. ಮಕ್ಕಳು ಬೆಕ್ಕಿನೊಂದಿಗೆ ಸದಾ ಆಟವಾಡುತ್ತಾರೆ. ಅದು ಕೂಡ ಬೆಳೆದು ದೊಡ್ಡದಾಗುವ ತನಕ ಮಕ್ಕಳ ಜೊತೆಯಲ್ಲಿ ಬೆರೆತು ಬಿಡುತ್ತದೆ. ಅದರ ಜೊತೆಗೆ ಮಕ್ಕಳು ಕೂಡ ಸಲಿಗೆಯಿಂದ ತಾನು ತಿನ್ನುವ ಆಹಾರವನ್ನು ಬೆಕ್ಕಿಗೂ ತಿನ್ನಿಸುತ್ತಾ, ಆಟವಾಡುತ್ತಾ ಆ ದಿನವನ್ನು ಕಳೆಯುತ್ತವೆ.
ಈ ಕ್ಷಣದಲ್ಲಿ ನಮಗೆ ಬಾಲ್ಯದ ದಿನಗಳು ನೆನಪಾಗುತ್ತವೆ!. ನಿಮಗೂ ಕೂಡ!!. ನಾವು ಎಷ್ಟೋ ಬಾರಿ ನಮ್ಮ ಮನೆಯಲ್ಲಿ ಬೆಕ್ಕು ಇಲ್ಲದಾಗ ಪಕ್ಕದ ಮನೆಯಿಂದ ಬೆಕ್ಕನ್ನು ತಂದು, ನಾವು ಅದಕ್ಕೆ ಮೈ- ಸವರಿ ಅದಕ್ಕೆ ಸ್ವಲ್ಪ ಆಹಾರ ತಿನ್ನಿಸಿ, ಹಾಲು ಕುಡಿಸಿ, ಸಂಭ್ರಮ ಪಡುತ್ತಿದ್ದೆವು. ಈ ವಿಷಯದಲ್ಲಿ ನಾವು ದೊಡ್ಡವರ ಜೊತೆಯಲ್ಲಿ ಬೈಸಿಕೊಂಡಿದ್ದು ಉಂಟು. ನಾವು ದೊಡ್ಡವರ ಎದುರು ಬೈಸಿಕೊಂಡರು ನಾವು ಮರೆಯಾಗಿ ನಮಗೆ ನೀಡಿದ್ದ ಹಾಲನ್ನು ತಿಂಡಿಯನ್ನು ಎಷ್ಟೋ ಬಾರಿ ಬೆಕ್ಕಿಗೆ ತಿನ್ನಿಸಿ, ಕುಡಿಸಿದ್ದು ಉಂಟು. ನನಗೆ ಇನ್ನು ನೆನಪಿದೆ…. ನಮ್ಮ ಬಾಲ್ಯದಲ್ಲಿ ಒಬ್ಬೊಬ್ಬರು ಒಂದೊಂದು ಬೆಕ್ಕನ್ನು ಸಾಕಿದ್ದೆವು. ನಮಗೆ ಬೆಳಿಗ್ಗೆ ಆಯಿತು ಎಂದರೆ ಬೆಕ್ಕಿಗೆ ಬೆನ್ನು ಸವರಿ, ಅದು ನಿದ್ದೆ ಮಾಡುವಂತೆ ಮಾಡಿ, ನಾವು ಅದರ ಜೊತೆಯಲ್ಲಿ ಮಲಗಿ ಒಂದು ರೀತಿಯಲ್ಲಿ ಸಲುಗೆಯಿಂದ ಬೆಳೆಯುತ್ತಿದ್ದೆವು. ಇಂತಹ ಸಂದರ್ಭದಲ್ಲಿ ಯಾರ ಬೆಕ್ಕು ಎಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತದೆ ಎಂದು ನಮ್ಮಷ್ಟಕ್ಕೆ ನಾವೇ ದೊಡ್ಡವರಿಗೆ ಗೊತ್ತಾಗದ ರೀತಿಯಲ್ಲಿ ಒಂದು ಲೋಟದಲ್ಲಿ ಪಕ್ಕದ ಮನೆಯಿಂದ ಹಾಲು ತಂದು, ಅವಕ್ಕೆ ಸ್ವಲ್ಪ ನೀರು ಬೆರೆಸಿ ಕುಡಿಸುತ್ತಿದ್ದೆವು. ಇದರಿಂದಾಗಿ ಬೆಕ್ಕು ದಷ್ಟಪುಷ್ಟವಾಗಿ ಬೆಳೆದು ಮಿಯಾವ್ ಎಂದು ಮನೆಯ ತುಂಬಾ ಸಲಿಗೆಯಿಂದ ಬೆಳೆಯುತ್ತಿತ್ತು. ಬೆಕ್ಕುಗಳು ಓಡಾಡುವ ಹಂತಕ್ಕೆ ಬಂದಾಗ ಅಕ್ಕಪಕ್ಕದಲ್ಲಿ ಇರುವ ಮಿಡತೆಗಳು ಇನ್ನಿತರ ಹಸಿರು ಹುಳಗಳನ್ನು ಕರುಮ್ ಕರುಂ ಎಂದು ತಿನ್ನುತ್ತಿದ್ದವು. ಅದರಲ್ಲೂ ವಿದ್ಯುತ್ ದೀಪಕ್ಕೆ ಬರುವ ಚಿಟ್ಟೆಗಳನ್ನು ಕೂಡ ನೆಗೆದು ಹಿಡಿಯುತ್ತಿದ್ದವು. ಆ ಸಮಯದಲ್ಲಿ ನಮಗೆ ನೋಡುವುದೇ ಒಂದು ರೀತಿಯಲ್ಲಿ ಸಂಭ್ರಮ. ಆದರೆ ಚಿಟ್ಟೆ ಇನ್ನಿತರ ಹುಳುಗಳಿಗೆ ಪ್ರಾಣಸಂಕಟ. ಮುಖ್ಯವಾಗಿ ಬೆಕ್ಕುಗಳು ಮನೆಯ ಹೊರಗಡೆ ಹೋಗಿ ಎಲ್ಲೋ ಒಂದು ಕಡೆ ಸಂಚು ಹೂಡಿ ಬಿಲದಿಂದ ನಮಗೆ ಗೊತ್ತಾಗದ ರೀತಿಯಲ್ಲಿ ಇಲಿಯನ್ನು ಹಿಡಿದುಕೊಂಡು ಮನೆಗೆ ಬಂದುಬಿಡುತ್ತಿತ್ತು. ಆಗ ನಾವು ಅದನ್ನು ಬಲವಂತವಾಗಿ ಓಡಿಸಿದ್ದು ಉಂಟು. ಒಂದು ರೀತಿಯಲ್ಲಿ ಮನೆಯಲ್ಲಿ ದಿನಸಿ ಪದಾರ್ಥಗಳನ್ನು ತಿನ್ನುವ ಇಲಿಗಳನ್ನು ನಿರ್ಮೂಲನ ಮಾಡುವ ಏಕೈಕ ಸಾಧನ ಇದಾಗಿತ್ತು. ನಾವು ಮನೆಯಲ್ಲಿ ಸಾಕಿದ ಹಲವು ಬೆಕ್ಕುಗಳು ಚುರುಕಾಗಿದ್ದವು. ಕೆಲವು ಮಾತ್ರ ಯಾವುದೇ ರೀತಿಯ ಬೇಟೆಯನ್ನಾಡದೆ, ನಾವು ಹಾಕುವ ಆಹಾರವನ್ನ ತಿನ್ನುತ್ತಾ ನಮ್ಮಂತೆ ಸಸ್ಯಾಹಾರಿಯಾಗುತ್ತಿದ್ದವು!
ಒಟ್ಟು ಕುಟುಂಬದಲ್ಲಿ ಬೆಕ್ಕಿಗೆ ತನ್ನದೇ ಆದ ಮಹತ್ವ ಇರುತ್ತಿತ್ತು. ಅಕ್ಕ ಪಕ್ಕದಲ್ಲಿ ತಿಂದು ತನ್ನ ಸಂಸಾರ ಜೀವನವನ್ನು ನಡೆಸುತ್ತಿತ್ತು. ಅದರಲ್ಲೂ ಅದು ಮರಿ ಹಾಕುವ ಹಂತಕ್ಕೆ ಬಂದಾಗ ಬಹಳ ನಾಜೂಕಾಗಿ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತಿತ್ತು. ಅದರ ಬಾಣಂತನವನ್ನು ನಾವು ಕದ್ದು ಕದ್ದು ನೋಡುತ್ತಿದ್ದೆವು!. ತಾಯಿ ಬೆಕ್ಕು ಮರಿಗಳನ್ನು ಮುಟ್ಟಿದರೆ ಗುರ್ ಎನ್ನುತ್ತಿತ್ತು. ಅದು ತನ್ನ ಆಹಾರಕ್ಕಾಗಿ ಹೊರಗಡೆ ಹೋದಾಗ ಮಾತ್ರ ನಾವು ಆ ಮರಿಗಳನ್ನು ಎತ್ತಿಕೊಂಡು ಮುದ್ದಾಡುತ್ತಿದ್ದೆವು.
ಒಟ್ಟು ಕುಟುಂಬಗಳು ಮಾಯವಾದಂತೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಉದ್ಯೋಗ ಇನ್ನಿತರ ಚಟುವಟಿಕೆಗಳಿಗೆ ನಗರ ಪ್ರದೇಶಕ್ಕೆ ವಲಸೆ ಬಂದಾಗ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಬೆಕ್ಕನ್ನು ಸಾಕುವವರ ಸಂಖ್ಯೆಯೂ ಕೂಡ ಕಡಿಮೆಯಾಯಿತು.ಏಕೆಂದರೆ ಹಳ್ಳಿಯಲ್ಲಿ ಬೆಕ್ಕು ಸಾಕುವಂತೆ ನಗರ ಪ್ರದೇಶದಲ್ಲಿ ಬೆಕ್ಕು ಸಾಕುವುದು ಎಂದರೆ ಒಂದು ದುಸ್ಸಾಹಸವೇ ಸರಿ. ಏಕೆಂದರೆ ಮಕ್ಕಳು ಶಾಲೆಗೆ ಹೋಗುತ್ತಾರೆ, ತಂದೆ-ತಾಯಿಗಳು ಕೂಡ ಉದ್ಯೋಗ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಹೋಗುವ ಸಂದರ್ಭದಲ್ಲಿ ಹೆಚ್ಚು ಇರುವಾಗ ಬೆಕ್ಕು ಮನೆಯಲ್ಲೇ ಇದ್ದರೆ ಅವರು ಮತ್ತೆ ಮರಳಿ ಮನೆಗೆ ಬರುವಷ್ಟರಲ್ಲಿ ಏನಾದರೂ ಒಂದು ಕಿತಾಪತಿ ಮಾಡಿ ಬಿಟ್ಟಿರುತ್ತಿತ್ತು.
ಇದರಿಂದಾಗಿ ಅನೇಕರು ನಗರ ಪ್ರದೇಶದಲ್ಲಿ ಬೆಕ್ಕುಗಳನ್ನು ಸಾಕುವುದನ್ನು ನಿಲ್ಲಿಸಿದ್ದಾರೆ. ಮನೆಯಲ್ಲಿ ನಾಲ್ಕೈದು ಜನ ಇರುವವರು ಮಾತ್ರ ಅನಿವಾರ್ಯವಾಗಿ ಬೆಕ್ಕನ್ನು ಸಾಕಿ ಅದನ್ನು ಮುದ್ದು ಮಾಡುತ್ತಾರೆ. ಇದರಿಂದಾಗಿ ಬೆಕ್ಕು ನಮ್ಮ ಜೊತೆಯಲ್ಲಿಯೇ ಬರುತ್ತದೆ, ಹೋಗುತ್ತದೆ. ಎಲ್ಲಾ ಪ್ರಾಣಿಗಳ ರೀತಿ ಬೆಕ್ಕುಗಳಿಗೂ ಕೂಡ ಈಗ ಆಸ್ಪತ್ರೆಗಳು ತೆರೆದಿವೆ. ಬೆಕ್ಕಿನ ತಜ್ಞರೇ ಇದ್ದಾರೆ!. ಬೆಕ್ಕಿಗೆ ಏನಾದರೂ ಜ್ವರ ಬಂದಾಗ ಅಥವಾ ಆರೋಗ್ಯದಲ್ಲಿ ಏರುಪೇರು ಆದಾಗ ಅದನ್ನ ಕರೆದುಕೊಂಡು ಹೋಗಿ ತೋರಿಸುವುದು ಉಂಟು. ನಾವು ಹೇಗೆ ನಾಯಿ ಸಾಕುತ್ತೇವೆ ಅದೇ ರೀತಿ ಬೆಕ್ಕನ್ನು ಕೂಡ ಸಾಕುವವರು ಕೂಡ ಈಗ ನಮ್ಮ ಎದುರು ಕಾಣುತ್ತಿದ್ದಾರೆ.
ಎಲ್ಲೋ ಪತ್ರಿಕೆಯಲ್ಲೋ ಟಿವಿ ಯಲ್ಲೋ ಓದಿದ, ನೋಡಿದ ನೆನಪು…… ಒಂದು ದೊಡ್ಡ ಮನೆಯಲ್ಲಿ ಬೆಕ್ಕುಗಳೇ ಅಲ್ಲಿ ಸಾಮ್ರಾಜ್ಯ ಎನ್ನುವಂತೆ ವಾಸ ಮಾಡುತ್ತಾ ಇವೆ. ಅವುಗಳಿಗೆಲ್ಲ ಒಬ್ಬ ಒಡೆಯ ಅವಕ್ಕೆ ಆಹಾರ ಪದಾರ್ಥ, ಹಾಲು ಹಾಕಿ ಮನೆಯ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ಒಡೆಯ ಮನೆಗೆ ಬಂದರೆ ಅವನ ಹಿಂದೆ ಮಿಯಾವ್ ಎಂದು ಓಡೋಡಿ ಬರುತ್ತವೆ. ಅದು ಒಂದು ರೀತಿಯಲ್ಲಿ ಬೆಕ್ಕಿನ ಅರಮನೆಯ ರೀತಿ ನಮಗೆ ಕಾಣಿಸಿತು. ಅನೇಕ ಫ್ಯಾಶನ್ ಬೆಕ್ಕುಗಳು ಇವೆ.
ನಾವು ಬೆಕ್ಕಿನ ಬಗ್ಗೆ ಬರೆಯುತ್ತಾ ಹೋದರೆ ಕೇಳುತ್ತಾ ಹೋದರೆ ಒಂದು ರೀತಿಯಲ್ಲಿ ಸೋಜಿಗ ಪ್ರಪಂಚ ಉದ್ಭವ ಆಗುತ್ತಾ ಹೋಗುತ್ತದೆ. ನಮಗೆ ಬಾಲ್ಯದಲ್ಲಿ ಬೆಕ್ಕಿನ ಒಡನಾಟ ಪ್ರತಿಯೊಬ್ಬರಿಗೂ ಆಗಿರುತ್ತದೆ. ತ್ರಿವೇಣಿ ಅವರು “ಬೆಕ್ಕಿನ ಕಣ್ಣು”- ಎಂದು ಕಾದಂಬರಿಯನ್ನೇ ಬರೆದಿದ್ದಾರೆ. ಸಾಹಿತ್ಯದಲ್ಲೂ ಕೂಡ ಬೆಕ್ಕಿನ ಬಗ್ಗೆ ಅನೇಕ ಸಂಶೋಧನೆಗಳು, ಅದರ ಪ್ರಭೇದದ ಬಗ್ಗೆ, ಅದರ ಜೀವನ ಕ್ರಮದ ಬಗ್ಗೆ, ಅನೇಕರು ಪುಸ್ತಕಗಳನ್ನು ಬರೆದಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆಯಲ್ಲಿ “ಕ್ಯಾಟ್ ವಾಕ್” ಎಂಬ ಹೆಸರು ಕೂಡ ಜನಜನಿತವಾಗಿದೆ!ಬೆಕ್ಕು ಹೇಗೆ ನಮ್ಮ ಜೊತೆಗೆ ಒಡನಾಟ, ಅದೇ ರೀತಿಯಲ್ಲಿ ಯಾವುದಾದರೂ ಶುಭ ಸಮಾರಂಭಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅದು ಅಪಶಕುನ ಎನ್ನುವ ನಂಬಿಕೆಯೂ ಕೂಡ ಈಗ ಜನರಲ್ಲಿ ಅಗಾಧವಾಗಿ ಬೆಳೆದಿದೆ. ಒಂದು ಕಡೆ ಬೆಕ್ಕನ್ನು ಅಪಶಕುನ ಎಂದರು ಬೆಕ್ಕು ಮನೆಯಲ್ಲಿರುವಾಗ ಅದರೊಂದಿಗಿನ ಚೆಲ್ಲಾಟ ಅಥವಾ ಒಡನಾಟ ನಮ್ಮ ಮನಸ್ಸನ್ನ ಪ್ರಫುಲ್ಲಗೊಳಿಸುತ್ತದೆ.
ಒಂದು ಸನ್ಯಾಸಿಯ ಕಥೆ ಇದೆ……. ಅವನು ಇಲಿಗಳ ಕಾಟದಿಂದಾಗಿ ಒಂದು ಬೆಕ್ಕನ್ನು ಸಾಕಿದ ಆ ಬೆಕ್ಕಿಗೆ ಹಾಲು ಕುಡಿಸಲು ಒಂದು ಹಸುವನ್ನು ಸಾಕಿದ ಆ ಹಸುವನ್ನು ನೋಡಿಕೊಳ್ಳಲು ಹಾಲು ಕರೆಯಲು ಒಬ್ಬರನ್ನು ನೇಮಿಸಿದ ಹೀಗೆ ಒಂದು ಕುಟುಂಬವೇ ಬೆಳೆದ ರೀತಿಯಲ್ಲಿ ಆಯಿತು, ಮಾರ್ಜಾಲ ನ್ಯಾಯ ಎನ್ನುವವರು ಇದ್ದಾರೆ. ಅದರಲ್ಲೂ ಮನೆಯಲ್ಲಿ ಇರುವ ಗಡವ ಬೆಕ್ಕು ಕಂಡರೆ ಹಲವರು ಹೆದರಿಕೊಳ್ಳುವುದು ಉಂಟು. ಒಮ್ಮೊಮ್ಮೆ ಮಕ್ಕಳ ಕೀಟಲಿಯಿಂದಾಗಿ ಅದು ಹತ್ತಿರಕ್ಕೆ ಬಂದು ನೆಗೆದು ತನ್ನ ಬೆರಳುಗಳಿಂದ ಪರಚಿದ್ದು ಉಂಟು.
ನಾವು ಬೆಕ್ಕನ್ನು ಹೇಗೆ ಸಾಕುತ್ತೇವೆ ಅದರ ಮೇಲೆ ಅದು ನಮ್ಮನ್ನು, ನಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತದೆ. ಅದರಲ್ಲೂ ಬೆಕ್ಕು ಸಾಮಾನ್ಯವಾಗಿ ಮನೆಯಲ್ಲಿ ಗಲೀಜು ಮಾಡುವುದಿಲ್ಲ. ಮನೆಯ ಹೊರಗಡೆ ಹೋಗಿ ಎಲ್ಲ ಕೆಲಸ ಮುಗಿಸಿ ತನ್ನ ಕಾಲು ಬೆರಳಿನ ಸಹಾಯದಿಂದ ಅದರ ಮೇಲೆ ಮಣ್ಣು ಮುಚ್ಚಿ ಬರುತ್ತದೆ. ಸಾಮಾನ್ಯವಾಗಿ ಬೆಕ್ಕು ನಾಯಿ ಜಗಳ ಆಗಿಂದಾಗೆ ನಡೆಯುತ್ತಲೇ ಇರುತ್ತದೆ.
ಬೆಕ್ಕನ್ನು “ಹುಲಿಗೆ ಗುರು” ಎಂದು ಕೂಡ ಕರೆಯುತ್ತಾರೆ. ಏಕೆಂದರೆ ಅದರ ಆವ-ಭಾವ ಎಲ್ಲವೂ ಕೂಡ ಹುಲಿಯ ರೀತಿಯಲ್ಲಿ ಇರುತ್ತದೆ. ಅದರ ಚಲನೆ ಹಾವ ಭಾವ ಜೊತೆಗೆ ಅದು ಕ್ರಿಮಿಕೀಟ ಗಳನ್ನು ಬೇಟೆಯಾಡುವ ರೀತಿ ವ್ಯತ್ಯಾಸ ಇದ್ದೇ ಇದೆ.
ಬೆಕ್ಕುಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳು……..
ಬೆಕ್ಕುಗಳು ಸುಮಾರು 9500 ವರ್ಷಗಳಿಂದ ಮನುಷ್ಯರ ಒಡನಾಡಿಗಳಾಗಿವೆ.
ಪ್ರಪಂಚದ ಅತ್ಯಂತ ಪ್ರೀತಿಯ ಪ್ರಾಣಿಗಳಲ್ಲಿ ಬೆಕ್ಕು ಅತ್ಯಂತ ಜನಪ್ರಿಯ ಸಾಕುಪ್ರಾಣಿಯಾಗಿದೆ.
ಬೆಕ್ಕುಗಳು ತಮ್ಮ ಕಿವಿಗಳಲ್ಲಿ 32 ಸ್ನಾಯುಗಳನ್ನು ಹೊಂದಿರುತ್ತವೆ.
ಬೆಕ್ಕು ತನ್ನ ಎತ್ತರಕ್ಕಿಂತ 7 ಪಟ್ಟು ಹೆಚ್ಚು ನೆಗೆಯಬಲ್ಲದು.
ಬೆಕ್ಕುಗಳು ಮನುಷ್ಯರಿಗಿಂತ ಹದಿನಾಲ್ಕು ಪಟ್ಟು ಹೆಚ್ಚು ವಾಸನೆಯನ್ನು ಹೊಂದಿವೆ.
ನಮ್ಮ ಸಾಕು ಬೆಕ್ಕುಗಳ ಡಿಎನ್ಎ ಹುಲಿಗಳ ಡಿಎನ್ಎಗೆ 96% ಹೋಲುತ್ತದೆ.
ಬೆಕ್ಕುಗಳು ತಮ್ಮ ಜೀವನದ 70% ನಿದ್ದೆ ಮಾಡುತ್ತವೆ, ಅವರು ದಿನಕ್ಕೆ 13 ರಿಂದ 14 ಗಂಟೆಗಳ ಕಾಲ ನಿದ್ರಿಸುತ್ತವೆ.
ಬೆಕ್ಕುಗಳು ಮನುಷ್ಯರಿಗಿಂತ 14 ಪಟ್ಟು ಹೆಚ್ಚು ಶ್ರವಣವನ್ನು ಹೊಂದಿವೆ.
ಬೆಕ್ಕುಗಳು 12 ರಿಂದ 15 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತವೆ.
ಬೆಕ್ಕುಗಳು ತಮ್ಮ ಪಂಜಗಳ ಮೇಲೆ ಮಾತ್ರ ಬೆವರು ಮಾಡುತ್ತವೆ.
ಈಜಿಪ್ಟ್ ನಾಗರಿಕತೆಯಲ್ಲಿ ಸಿಂಹದ ಜೊತೆಗೆ ಬೆಕ್ಕನ್ನು ಕೂಡಾ ದೇವರನ್ನಾಗಿ ಆರಾಧಿಸುತ್ತಿದ್ದರು. ಬೆಕ್ಕುಗಳ ಕಿವಿ ಬಹಳ ಚುರುಕು, ಆದರೆ ಅವು ನಾಯಿಗಳಿಗಿಂತ ಕಡಿಮೆ ದೃಷ್ಟಿ ಹೊಂದಿವೆ. ಮನುಷ್ಯನಿಗಿಂತ ಉತ್ತಮ ಬಣ್ಣಗಳನ್ನು ನೋಡಬಲ್ಲ ಶಕ್ತಿ ಬೆಕ್ಕುಗಳಿಗೆ ಇವೆ. ಆದರೆ ಈಗ ಮನುಷ್ಯನಿಗೊಂದು ಕಾಲ, ಬೆಕ್ಕಿಗೊಂದು ಕಾಲ ಎನ್ನುವಂತಾಗಿದೆ. ಏಕೆಂದರೆ ಬೆಕ್ಕಿಗೂ ಒಂದು ದಿನ ಮೀಸಲಾಗಿದೆ. ಅಂತಾರಾಷ್ಟ್ರೀಯ ಬೆಕ್ಕಿನ ದಿನವನ್ನ ಈ ದಿನ ಆಚರಿಸುತ್ತಿದ್ದೇವೆ.
ಪ್ರಾಣಿಪ್ರಿಯರಿಗೆ ಮುದ್ದು ಮುದ್ಧಾಗಿರುವ ಬೆಕ್ಕು ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಬೆಕ್ಕಿನ ಮರಿಗಳು ಎಂದರೆ ಎತ್ತಿ ಮುದ್ದಾಡೋಣ ಅನ್ನಿಸುತ್ತದೆ. ಅವುಗಳ ಪಿಳಿ ಪಿಳಿ ಕಣ್ಣುಗಳು, ಎತ್ತಿಕೊಳ್ಳಲು ಹೋದವರನ್ನು ಬುಸ್ ಎಂಬ ಶಬ್ಧ ಮಾಡಿ ಎದುರಿಸುವುದು, ಗಬ್ಬಕ್ಕನೆ ಬಂದು ಕೈ ಕಾಲು ಹಿಡಿದುಕೊಳ್ಳುವುದು, ಅತ್ತಿದ್ದಿಂತ್ತ ಚಂಗನೆ ನೆಗೆಯುವುದು, ಇಲಿ ಕಂಡರೆ ಅದನ್ನು ಹಿಡಿಯಲು ಓಡುವುದು…ಹೀಗೆ ಬೆಕ್ಕಿನ ತುಂಟಾಟ ಒಂದೇ ಎರಡಾ..? ಬೆಕ್ಕಿನ ಕೂದಲು ಆರೋಗ್ಯಕ್ಕೆ ಅಪಾಯಕಾರಿ ಎನ್ನಲಾದರೂ, ಈ ಮುದ್ದು ಬೆಕ್ಕು ನಿಮ್ಮ ಟೆನ್ಷನ್ ಕಡಿಮೆ ಮಾಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಊಟ ಮಾಡುವಾಗ ಬೆಕ್ಕಿನಿಂದ ದೂರ ಇರುವುದು, ಬೆಕ್ಕನ್ನು ಮುಟ್ಟಿದ ನಂತರ ಕೈ ಸ್ವಚ್ಛ ಮಾಡಿಕೊಂಡರೆ ಮುಗಿಯಿತು.
ಬೆಕ್ಕುಗಳ ಚಾಣಾಕ್ಷತನದ ಬಗ್ಗೆ ಹೇಳುವುದಾದರೆ ಇದು ಬೇಟೆಯಾಡುವುದರಲ್ಲಿ ಎತ್ತಿದ ಕೈ. ಇಲಿ, ಪಕ್ಷಿಗಳು, ಅಳಿಲು ಕಣ್ಣಿಗೆ ಕಂಡರೆ ಸ್ವಲ್ಪವೂ ಸದ್ದು ಮಾಡದೆ, ಅದನ್ನೇ ದಿಟ್ಟಿಸಿ ನೋಡುತ್ತಾ, ಲಬಕ್ಕನೆ ಅವನ್ನು ಹಿಡಿಯುತ್ತದೆ. ಇನ್ನು ಇಲಿ ಕೈಗೆ ಸಿಕ್ಕಿದರೆ, ಸತ್ತ ಇಲಿಯೊಂದಿಗೆ ಆಟವಾಡುತ್ತಲೇ ಅದನ್ನು ತಿನ್ನುತ್ತವೆ ಬೆಕ್ಕುಗಳು. ಬಹುತೇಕ ಬೆಕ್ಕುಗಳು ಮರವನ್ನು ಸುಲಭವಾಗಿ ಹತ್ತುತ್ತವೆ. ಆದರೆ ಇಳಿಯಲು ಪಾಡು ಪಡುತ್ತವೆ. ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ ಒಂದು ತಿಂಗಳ ಅವಧಿಯಲ್ಲಿ 3-4 ಜಾಗಗಳನ್ನು ಬದಲಿಸುತ್ತವೆ. ತಮ್ಮ ಬಾಯಿಂದ ಮರಿಗಳ ಕತ್ತಿನ ಭಾಗವನ್ನು ಮೃದುವಾಗಿ ಕಚ್ಚಿಕೊಂಡು ಚಲಿಸುತ್ತವೆ.
ಬೆಕ್ಕುಗಳ ಕಿವಿ ಬಹಳ ಚುರುಕು, ಆದರೆ ಅವು ನಾಯಿಗಳಿಗಿಂತ ಕಡಿಮೆ ದೃಷ್ಟಿ ಹೊಂದಿವೆ. ಮನುಷ್ಯನಿಗಿಂತ ಉತ್ತಮ ಬಣ್ಣಗಳನ್ನು ನೋಡಬಲ್ಲ ಶಕ್ತಿ ಬೆಕ್ಕುಗಳಿಗೆ ಇವೆ. ಬೆಕ್ಕುಗಳನ್ನು ಸೋಂಬೇರಿ ಎಂದೇ ಕರೆಯಲಾಗುತ್ತದೆ. ಏಕೆಂದರೆ ಅವು ಜೀವನದ ಶೇ.50ಕ್ಕಿಂತ ಹೆಚ್ಚು ಕಾಲ ನಿದ್ರೆಯಲ್ಲೇ ಕಳೆಯುತ್ತವೆ. ಅದರಲ್ಲೂ ಸಿಕ್ಕ ಸಿಕ್ಕ ಕಡೆಗಳಲ್ಲಿ ಮಲಗುವುದನ್ನು ನೀವು ನೋಡಬಹುದು.
ಬೆಕ್ಕು, ಹುಲಿಗಳ ಜಾತಿಗೆ ಸೇರಿದ ಪ್ರಾಣಿ ಎಂಬ ಮಾತಿದೆ. ಬೆಕ್ಕುಗಳಲ್ಲಿ ಪಾರ್ಡೊಫೆಲಿಸ್, ಲಿಂಕ್ಸ್, ಪೂಮಾ, ಕ್ಯಾರಕಲ್, ಫೆಲಿಸ್, ಒಟೊಕೊಲೊಬಸ್ ಎಂಬ ನಾನಾ ರೀತಿಯ ವಿಧಗಳಿವೆ. ಬೆಕ್ಕುಗಳು ತಮ್ಮ ಎತ್ತರಕ್ಕಿಂದ ಸುಮಾರು 6 ಪಟ್ಟು ಎತ್ತರಕ್ಕೆ ನೆಗೆಯುತ್ತವೆ. ರಾತ್ರಿ, ಬೇಟೆಗಾಗಿ ಕಿಲೋ ಮೀಟರ್ಗಟ್ಟಲೆ ಪ್ರಯಾಣಿಸುತ್ತವೆ. ಕೆಲವೊಂದು ಸಾಕು ಬೆಕ್ಕುಗಳು ದಿನಗಟ್ಟೆಲೆ ಮನೆಗೆ ಸೇರುವುದಿಲ್ಲ.
ಬೆಕ್ಕು ಅಪಶಕುನ ಎಂಬ ಮೂಢನಂಬಿಕೆಯನ್ನು ಬಿಡಿ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಬೆಕ್ಕಳಲೆ ಎಂಬ ಹೆಸರಿನ ಗ್ರಾಮವೇ ಇದೆ. ಈ ಊರಿನಲ್ಲಿ ಬೆಕ್ಕಿಗೆ ಪೂಜ್ಯಸ್ಥಾನ ನೀಡಲಾಗಿದೆ. ಬೆಕ್ಕು ಗ್ರಾಮದೇವತೆ ಆಗಿರುವುದರಿಂದ ಈ ಗ್ರಾಮಕ್ಕೆ ‘ಬೆಕ್ಕಳಲೆ’ ಎಂಬ ಹೆಸರು ಬಂದಿದೆ. ಗ್ರಾಮಸ್ಥರು ಬೆಕ್ಕಿಗೆ ದೇವಾಲಯ ಕಟ್ಟಿದ್ದು ಬೆಕ್ಕಿನ ಮಂಗಮ್ಮ ಹೆಸರಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಬೆಕ್ಕಿನ ದಿನದ ಮಹತ್ವ
ಪ್ರಾಣಿಗಳಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ತನ್ನ ಭಾವನೆಗಳನ್ನು ತನ್ನ ಮಾತುಗಳು ಮತ್ತು ಸನ್ನೆಗಳ ಮೂಲಕ ವ್ಯಕ್ತಪಡಿಸಬಹುದು. ಅಂತಹ ಪ್ರಾಣಿಗಳಲ್ಲಿ ಬೆಕ್ಕುಗಳು ತುಂಬಾ ಮುದ್ದಾದ ಮತ್ತು ಸಾಕುಪ್ರಾಣಿಗಳಾಗಿವೆ. ಮತ್ತು ಅವುಗಳನ್ನು ರಕ್ಷಿಸುವ ಮತ್ತು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಪ್ರತಿ ವರ್ಷ ಆಗಸ್ಟ್ 8 ರಂದು ಅಂತಾರಾಷ್ಟ್ರೀಯ ಬೆಕ್ಕಿನ ದಿನವನ್ನು ಆಚರಿಸಲಾಗುತ್ತದೆ. ಈ ಮುದ್ದು ಬೆಕ್ಕುಗಳನ್ನು ಶ್ಲಾಘಿಸುವ ಸಲುವಾಗಿ, ಬೆಕ್ಕುಗಳನ್ನು ಸಾಕಲು ಪ್ರೇರೇಪಿಸಲು 2002 ರಲ್ಲಿ ಅಂತಾರಾಷ್ಟ್ರೀಯ ಪ್ರಾಣಿ ನಿಧಿಯು ಬೆಕ್ಕಿನ ದಿನವನ್ನು ಘೋಷಿಸಿದೆ. ವಿದೇಶದಲ್ಲಿ ಬಹಳ ವಿಭಿನ್ನವಾಗಿ ಅಂತಾರಾಷ್ಟ್ರೀಯ ಕ್ಯಾಟ್ ಡೇ ಆಚರಿಸಲಾಗುತ್ತದೆ. ‘ಬೆಕ್ಕುಸ್ನೇಹಿ ಸಂಪನ್ಮೂಲಗಳು’ ಎಂಬ ಥೀಮ್ನೊಂದಿಗೆ ಕ್ಯಾಟ್ ಡೇ ಆಚರಿಸಲಾಗುತ್ತದೆ.
–ಕಾಳಿಹುಂಡಿ ಶಿವಕುಮಾರ್, ಮೈಸೂರು.
ಕೆಲವೆಡೆ ಸಂಗತಿ ಪುನರುಕ್ತಿ ಎಂದೆನಿಸಿದರೂ ಬೆಕ್ಕಿನ ಬಗ್ಗೆ.. ಮಾಹಿತಿಪೂರ್ಣ ಲೇಖನ ..ಚೆನ್ನಾಗಿ ಬಂದಿದೆ ಸಾರ್
ನಿಮ್ಮ ನೇರ, ಪ್ರಾಮಾಣಿಕ ಅನಿಸಿಕೆಗೆ ತುಂಬ ತುಂಬ ಧನ್ಯವಾದಗಳು ಮೇಡಂ.
Super
ನಿಮಗೆ ತುಂಬಾ ತುಂಬ ಧನ್ಯವಾದಗಳು
ಚೆನ್ನಾಗಿದೆ ಸರ್
ಧನ್ಯವಾದಗಳು ಮೇಡಂ
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ… ಚಿಕ್ಕಂದಿನ ಪ್ರಿಯವಾದ ಹಾಡು. ನಾನಂತೂ ಬೆಕ್ಕು ಪ್ರಿಯಳು. ಅವುಗಳ ಬಗ್ಗೆ ಸಮಗ್ರ ಮಾಹಿತಿ ಹೊತ್ತ ಬರಹವೂ ಅಷ್ಟೇ ಇಷ್ಟವಾಯ್ತು.
ನಿಮ್ಮ ಪ್ರಿಯವಾದ ಹಾಡು ಕೂಡ ನಾನು ಓದಿದ್ದೇನೆ. ಬೆಕ್ಕಿನ ಬಗ್ಗೆ ಬರೆಯುತ್ತಾ ಹೋದರೆ ಪುಟಗಳು ಸಾಲದು. ಸಮಗ್ರವಾಗಿ ದಾಖಲಿಸಬಹುದು. ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು.