ಕಾದಂಬರಿ : ಕಾಲಗರ್ಭ – ಚರಣ 13
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಊರಿಗೆ ಹೊರಡುವ ದಿನ ಗೊತ್ತು ಮಾಡುತ್ತಿದ್ದಂತೆ ನೀಲಕಂಠಪ್ಪನವರ ಸಡಗರ ಹೇಳತೀರದು. ಕಾರನ್ನು ಮೈಸೂರಿಗೆ ಕಳುಹಿಸಿ ಸರ್ವೀಸ್ ಮಾಡಿಸಿ ತರಿಸಿದರು. ಡ್ರೈವರ್ ರಾಮುವಿಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ನೀಡಿದರು. ಮೊಮ್ಮಗಳಿಗೂ ಕಿವಿಮಾತುಗಳನ್ನು ಹೇಳಿದರು. ಇದರಿಂದ ಹಿರಿಯವರಿಗಲ್ಲದೆ ಸುಬ್ಬು ದಂಪತಿಗಳಿಗೂ ಹೆಚ್ಚು ಸಂತಸವಾಗಿತ್ತು. ”ಮಹೇಶಣ್ಣ, ದೇವಿಯಕ್ಕ ಇಲ್ಲಿನ ಯೋಚನೆಯನ್ನೆಲ್ಲ ಬಿಟ್ಟು ಆರಾಮವಾಗಿ ಹೋಗಿಬನ್ನಿ, ನಾವು ಈಗ ಮೂವರಾಗಿದ್ದೇವೆ” ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ.
ಅದನ್ನು ಕೇಳಿ ನೀಲಕಂಠಪ್ಪ ”ಏನು ಸುಬ್ಬು ! ಆಗಲೇ ಮೂರುಜನರಾದಿರಾ?” ಎಂದು ಛೇಡಿಸಿದರು.
ಅವರ ಮಾತನ್ನು ಕೇಳಿ ಚಂದ್ರಿಕಾಳ ಮುಖ ಕೆಂಪೇರಿತು. ನಾಚಿಕೆಯಿಂದ ತಲೆ ತಗ್ಗಿಸಿದಳು. ಅದಕ್ಕೆ ಸುಬ್ಬು ”ಅರೇ ತಾತನವರೇ, ನಾನು ಹೇಳಿದ್ದು ಆ ಅರ್ಥದಲ್ಲಲ್ಲಾ. ಮೊದಲು ನಾನು, ಅಮ್ಮ ಇಬ್ಬರಿದ್ದೆವು, ಈಗ ಚಂದ್ರಿಕಾ ಸೇರಿ ಮೂವರಾಗಿದ್ದೇವೆ ಎಂದು. ಎಲ್ಲರೂ ಜೊತೆಗೂಡಿ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತೇವೆಂದು. ನೀವು ಯಾವಾಗಲೂ ತಮಾಷೆ ಮಾಡುತ್ತಿರುತ್ತೀರಿ” ಎಂದು ಹುಸಿಮುನಿಸು ತೋರಿದ ಸುಬ್ಬು.
ತಾತ ನೀಲಕಂಠಪ್ಪನವರು ಇಳೀವಯಸ್ಸಿನಲ್ಲಿಯೂ ಕಳೆದುಕೊಳ್ಳದ ಲವಲವಿಕೆ, ಹಾಸ್ಯಪ್ರವೃತ್ತಿ, ಜೀವನ ಪ್ರೀತಿಗೆ ಅವಳ ಮನತುಂಬಿಬಂತು. ಅರಿವಿಲ್ಲದೆ ಅವರ ಕಾಲಿಗೆರಗಿ ”ಆಶೀರ್ವಾದ ಮಾಡಿ ತಾತ” ಎಂದು ಬೇಡಿದಳು ದೇವಿ.
”ಆಹಾ ತಾತನಿಗೆ ತಕ್ಕ ಮೊಮ್ಮಗಳು, ಹಿರಿಯರು ಇಷ್ಟೂ ಜರಿದ್ದೇವೆ. ಅವರೊಬ್ಬರಿಗೆ ಮಾತ್ರ ನಮಸ್ಕಾರ” ಎಂದು ಹುಸಿ ಆರೋಪ ಮಾಡಿದರು ಬಸಮ್ಮ.
”ಆಯ್ತು ನಿಮಗೇಕೆ ಹೊಟ್ಟೆಕಿಚ್ಚು? ನಿಮಗೂ ಒಂದು ನಮಸ್ಕಾರ ಹಾಕುತ್ತೇನೆ” ಎಂದು ಅವರ ಬಳಿಗೆ ಹೋದಳು ದೇವಿ.
”ಸುಮ್ಮನೆ ತಮಾಷೆಗೆ ಹಾಗೆಂದೆ ಪುಟ್ಟೀ” ಎಂದಂದು ಅವಳನ್ನಪ್ಪಿ ಮುದ್ದಿಸಿ ”ಹೋಗಿ ಬನ್ನಿ ಶುಭಪ್ರಯಾಣವಾಗಲಿ. ಇನ್ನು ಹೊರಡಿ ಹೊತ್ತಾಗುತ್ತೆ” ಎಂದು ಮೊಮ್ಮಗಳನ್ನು ಕಾರು ಹತ್ತಿಸಿ ಮಹೇಶನಿಗೂ ಶುಭ ಕೋರಿದರು. ಎಲ್ಲರಿಂದ ಬೀಳ್ಕೊಂಡ ದಂಪತಿಗಳನ್ನು ಕಳುಹಿಸಿ ಮನೆಯೊಳಕ್ಕೆ ನಡೆದರು ಎರಡೂ ಕುಟುಂಬದವರು.
ಕಾರಿನಲ್ಲಿ ತನ್ನ ಪಕ್ಕ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹೇಶನನ್ನು ಡ್ರೈವರ್ ರಾಮು ”ಮಹೇಶಣ್ಣಾ ನೀವು ಹಿಂದಿನ ಸೀಟಿನಲ್ಲಿ ಅಕ್ಕನ ಜೊತೆ ಕುಳಿತುಕೊಳ್ಳಿ” ಎಂದನು.
”ಬೇಡ ರಾಮು, ಅವಳು ಆರಾಮವಾಗಿ ಕೂಡಲಿ. ಅಲ್ಲದೆ ಧರ್ಮಸ್ಥಳಕ್ಕೆ ತಲುಪಲು ಇನ್ನೂ ಹತ್ತಿರದ ದಾರಿಗಳು ನನಗೆ ಗೊತ್ತು. ನಾನು ನಿನಗೆ ಗೈಡ್ ಮಾಡುತ್ತೇನೆ. ಅದಕ್ಕಿಲ್ಲೇ ಕುಳಿತೆ” ಎಂದ ಮಹೇಶ.
”ಅಯ್ಯೋ ಮಹೇಶಣ್ಣ ನಾನು ಇಲ್ಲೆಲ್ಲಾ ಹೆಚ್ಚು ಓಡಾಡಿದ್ದೇನೆ. ನನಗೂ ಸುಮಾರು ದಾರಿಗಳು ಗೊತ್ತು” ಎಂದು ಧರ್ಮಸ್ಥಳಕ್ಕೆ ಬಹಳಷ್ಟು ಸಾರಿ ಬಂದಿದ್ದರಿಂದ ತನಗೆ ತಿಳಿದಿದ್ದ ಅಲ್ಲಿನ ಪ್ರತಿಯೊಂದು ವಿವರಗಳನ್ನೂ ಚಾಚೂ ತಪ್ಪದಂತೆ ಹೇಳುತ್ತಾ ಹೊದ ರಾಮು. ಮಧ್ಯೆ ಮಧ್ಯೆ ಮಹೇಶನೂ ಅವನಿಗೆ ಧ್ವನಿ ಕೂಡಿಸುತ್ತಿದ್ದ. ಇಬ್ಬರ ಭಾಷಣಗಳಂತಿದ್ದ ಸಂಭಾಷಣೆಯನ್ನು ಕೇಳಿಕೇಳಿ ಬೇಸರವಾಗಿ ಕೈಲಿದ್ದ ಹ್ಯಾಂಡ್‌ಬ್ಯಾಗನ್ನೇ ತಲೆದಿಂಬಾಗಿಸಿಕೊಂಡು ಹಿಂದಿನ ಸೀಟಿನುದ್ದಕ್ಕೂ ಮಲಗಿಬಿಟ್ಟಳು ದೇವಿ. ಧರ್ಮಸ್ಥಳ ತಲುಪಿದಾಗಲೇ ಅವಳಿಗೆ ಎಚ್ಚರವಾಗಿದ್ದು.
ಮುಂಚಿತವಾಗೇ ಅಲ್ಲಿ ರೂಮನ್ನು ಬುಕ್ ಮಾಡಿಸಿದ್ದರಿಂದ ನೇರವಾಗಿ ಅಲ್ಲಿಗೆ ಹೋಗಿ ಫ್ರೆಷ್ ಆಗಿ ದರ್ಶನಕ್ಕಾಗಿ ಇನ್ನೂ ಸಮಯವಿದ್ದುದರಿಂದ ಸಾಲಿನಲ್ಲಿ ನಿಂತುಕೊಂಡರು. ದೇವರ ದರ್ಶನ ಮುಗಿಸಿ ಪ್ರಸಾದದ ಊಟ ಮುಗಿಸಿ ರೂಮಿಗೆ ಹಿಂತಿರುಗಿದರು.
”ಮಹೀ..ದೇವರ ದರ್ಶನ ಪೂರ್ತಿಯಾಯಿತಲ್ಲಾ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ನಂತರ ನಿಮ್ಮ ಗೆಳೆಯರ ಊರಿಗೆ ಹೋಗೋಣವೇ?” ಎಂದು ಕೇಳಿದಳು ದೇವಿ.
”ಈಗಲೇ ಬೇಡ ದೇವೀ, ಮತ್ತೆ ಸಂಜೆ ದರ್ಶನ ಮತ್ತು ನಾಳೆ ಬೆಳಗಿನ ಪೂಜಾನಂತರದ ದರ್ಶನ ಮಾಡಿಕೊಂಡು ನಂತರ ಹೋಗೋಣ. ಇದು ಅಮ್ಮನ ಆಜ್ಞೆಯಾಗಿದೆ. ನಾನು ವಿಶ್ರಾಂತಿ ಪಡೆಯುತ್ತೇನೆ” ಎಂದು ಅವಳ ಉತ್ತರಕ್ಕೂ ಕಾಯದೆ ಹಾಸಿಗೆಯ ಮೇಲೆ ಪವಡಿಸಿದ ಮಹೇಶ.
ಸರಿ ಸುಮಾರು ಇನ್ನೂರು ಕಿಲೊಮೀಟರ್‍ಗೂ ಹೆಚ್ಚು ದೂರದವರೆಗೆ ಕುಳಿತೇ ಇದ್ದ ಅವನಿಗೆ ಆಯಾಸವಾಗಿರುವುದು ಸಹಜ. ಮಲಗಲಿ ಬಿಡು ಎಂದು ಸಮಾಧಾನ ತಂದುಕೊಂಡಳು ದೇವಿ. ಸೋಫಾದಲ್ಲಿ ಕುಳಿತು ಬಳಿಯಲ್ಲಿದ್ದ ಪೇಪರ್ ಕೈಗೆತ್ತಿಕೊಂಡಳು. ಅದು ನೆಪಮಾತ್ರಕ್ಕೆ ಕೈಯಲ್ಲಿದ್ದರೂ ಅವಳ ಮನಸ್ಸು ಮಾತ್ರ ಅತ್ತೆ ಯಾವ ಮಾಯದಲ್ಲಿ ಮಗನಿಗೆ ಹೀಗೇ ದರ್ಶನ ಮಾಡಬೇಕೆಂದು ಹೇಳಿದರು ಎಂಬ ಸಂಶಯ ಮೂಡಿತು. ಅವರ ಮನೆಯ ಬಹುತೇಕ ವಿದ್ಯಮಾನಗಳು ಮೊದಲೇ ತನಗೆ ಗೊತ್ತಿದ್ದರೂ ಈ ಅಮ್ಮ ಮಗನ ಒಡನಾಟದ ಬಗ್ಗೆ ತಾನೇನೂ ತಿಳಿದುಕೊಂಡಿಲ್ಲ ಎನ್ನಿಸಿತು. ಇರಲಿಬಿಡು ಇದರಿಂದ ನನಗೇನೂ ನಷ್ಟವಿಲ್ಲ. ನನ್ನೊಡನೆ ಅವರು ಚೆನ್ನಾಗಿದ್ದರೆ ಸಾಕು ಎಂದುಕೊಂಡಳು.
ಸಂಜೆ ಹಾಗೂ ಬೆಳಗ್ಗೆ ಮಂಜುನಾಥನ ದರ್ಶನ ಪಡೆದದ್ದಾಯಿತು. ತಾವು ಉಳಿದುಕೊಂಡಿದ್ದಲ್ಲೇ ಲಭ್ಯವಿದ್ದ ಉಪಾಹಾರ ಮುಗಿಸಿ ಮಹೇಶನ ಗೆಳೆಯನ ಊರಿನ ದಾರಿ ಹಿಡಿದು ಪ್ರಯಾಣಿಸಿದರು ದಂಪತಿಗಳು.
”ಮಹೀ ನಿಮ್ಮ ಗೆಳೆಯರ ಊರಿನ ಹೆಸರೇನು? ಇಲ್ಲಿಂದ ಎಷ್ಟು ದೂರದಲ್ಲಿದೆ?” ಎಂದು ಪ್ರಶ್ನಿಸಿದಳು ದೇವಿ.
”ಓ ! ನಾನು ನಿನಗೆ ಅವನ ಊರಿನ ಹೆಸರನ್ನೇ ಹೇಳಲಿಲ್ಲ ಅಲ್ಲವೇ, ಬೆಳ್ತಂಗಡಿ ಅಂತ. ಧರ್ಮಸ್ಥಳದಿಂದ ಸುಮಾರು ಐವತ್ತೈದು ಕಿಲೋಮೀಟರ್ ಇದೆ. ನಾವು ಊರಿನೊಳಗೇನೂ ಹೋಗಬೇಕಾಗಿಲ್ಲ. ಅವನ ತೋಟ ಇನ್ನೂ ಮೊದಲೇ ಸಿಗುತ್ತದೆ. ವಿಳಾಸ ಮತ್ತು ಲ್ಯಾಂಡ್‌ಮಾರ್ಕ್ ಕೊಟ್ಟಿದ್ದಾನೆ. ನೋಡೆಂದು” ಅವಳಿಗೆ ಬರೆದುಕೊಂಡಿದ್ದ ವಿವರಗಳನ್ನು ತೋರಿಸಿದ. ಈಗ ಮುಂದಿನ ಸೀಟಿನಲ್ಲಿ ಕೂಡದೆ ಅವಳ ಪಕ್ಕದಲ್ಲಿಯೇ ಕುಳಿತದ್ದು ಒಂದು ರೀತಿಯ ಖುಷಿಯಾಗಿತ್ತು.
ದಾರಿಯಲ್ಲಿ ಗೆಳೆಯನೊಡನೆ ಒಡನಾಟ, ಅವನ ಹೆತ್ತವರ ಬಗ್ಗೆ ಮಾಹಿತಿ, ಅವನ ಆಸಕ್ತಿಯ ವಿಷಯ, ಮದುವೆಯಾಗದೇ ಇರಲು ಕಾರಣ ಇತ್ಯಾದಿಗಳ ಬಗ್ಗೆ ಮಾತನಾಡುತ್ತಾ ದಾರಿಸವೆದದ್ದೇ ಗೊತ್ತಾಗಲಿಲ್ಲ. ಅದರ ಮಧ್ಯದಲ್ಲಿಯೆ ಗೆಳೆಯನ ಫೋನ್ ಮತ್ತು ನಿರ್ದೇಶನಗಳು ದೊರಕಿ ಎಲ್ಲಿಯೂ ಸುತ್ತದೆ ನಿರಾಯಾಸವಾಗಿ ಮಿತ್ರನ ತೋಟವನ್ನು ತಲುಪಿದರು.
ತೋಟದ ಬಾಗಿಲಿಗೇ ಕಾಯುತ್ತಾ ನಿಂತಿದ್ದ ಮಹೇಶನ ಗೆಳೆಯ. ಕಾರನ್ನು ಒಳಗೆ ಬರುವಂತೆ ಮುಂದಿನ ಗೇಟನ್ನು ವಿಶಾಲವಾಗಿ ತೆರೆದು ಆಹ್ವಾನಿದ. ಕಾರು ಸ್ವಲ್ಪ ಮುಂದಕ್ಕೆ ಹೋಗಿ ನಿಂತ ತಕ್ಷಣ ಕೆಳಗಿಳಿದ ಮಹೇಶ ಗೆಳೆಯನನ್ನು ಅಪ್ಪಿ ಸಂತಸಪಟ್ಟನು. ”ಎಷ್ಟು ಸಾರಿ ನಮ್ಮೂರಿಗೆ ಬರಲು ಕರೆದರೂ ಬಾರದವನು ಈಗ ಜೊತೆಯಾಗಿಯೇ ಬಂದಿದ್ದೀಯೆ ಬಾ..ಬಾ.. ನಿನಗೆ ನಿನ್ನ ಬಾಲ್ಯದ ಗೆಳತಿಯೇ ಪತ್ನಿಯಾಗಿ ಸಿಕ್ಕಿದ್ದಾರೆ. ನಿಮಗೂ ನನ್ನ ಆತ್ಮೀಯ ಸ್ವಾಗತ” ಎಂದು ದೇವಿಯನ್ನೂ ಆಹ್ವಾನಿಸಿದ ಗಣಪತಿ. ಎರಡೂ ಕೈಗಳನ್ನೂ ಜೋಡಿಸಿ ಮುಗಿದ.
ಅಬ್ಬಾ ! ಎಂಥಹ ರೂಪವಂತ ಇವನು, ಆರು ಅಡಿಗೂ ಮಿಗಿಲಾದ ಎತ್ತರ, ಯೋಗಾಭ್ಯಾಸದಿಂದ ಹುರಿಗೊಂಡ ಮೈಕಟ್ಟು, ಚೆಲುವಾದ ಮೈಬಣ್ಣ, ಸ್ನೇಹಭರಿತ ಕಣ್ಣುಗಳು. ತುಂಬ ಲಕ್ಷಣವಾಗಿದ್ದ ಗಣಪತಿ. ಚೆಲುವನೆನ್ನಿಸಿಕೊಂಡ ಮಹೇಶನೇ ಅವನ ಮುಂದೆ ಸಾಧಾರಣನೆಂಬಂತೆ ಭಾಸವಾಗುತ್ತಿತ್ತು. ”ಛೇ ..ನನಗೇನಾಗಿದೆ?” ಎಂದುಕೊಂಡಳು ದೇವಿ.
ಅಷ್ಟರಲ್ಲಿ ”ಹಲೋ ನಮಸ್ತೆ ನಮ್ಮ ಮನೆಗೆ ಸ್ವಾಗತ” ಎಂದು ತುಸು ಏರುಧ್ವನಿಯಲ್ಲಿ ಹೇಳಿದಾಗ ಎಚ್ಚೆತ್ತುಕೊಂಡ ದೇವಿ ತಡಬಡಾಯಿಸಿಕೊಂಡು ಮರುವಂದನೆ ಮಾಡಿದಳು. ಚಾಲಕ ರಾಮುವಿಗೆ ಗ್ಯಾರೇಜಿನ ದಾರಿ ತೋರಿಸಿ ಅಲ್ಲಿ ಕಾರು ನಿಲ್ಲಿಸಿ ಲಗೇಜ್‌ಗಳನ್ನು ತೆಗೆದುಕೊಂಡು ಬರಲು ತಿಳಿಸಿ ತಾವು ಗೆಳೆಯನೊಡನೆ ಒಳನಡೆದರು ಗಣಪತಿ.
ಅವರಿಬ್ಬರನ್ನೂ ಹಿಂಬಾಲಿಸಿ ಬರುತ್ತಿದ್ದ ದೇವಿ ಸುತ್ತಲೂ ನೋಟ ಹರಿಸುತ್ತಿದ್ದಳು. ಹಾಗೇ ಗೆಳೆಯರ ಮಾತುಕತೆಗಳನ್ನೂ ಕೇಳಿಸಿಕೊಳ್ಳುತ್ತಿದ್ದಳು. ”ಇಲ್ಲಿ ಮನೆ ಕಟ್ಟುತ್ತೇನೆಂದಾಗ ಊರೊಳಗೆ ವಾಸಿಸುತ್ತಿದ್ದ ನನ್ನ ಹೆತ್ತವರು ಬಲವಾಗಿ ವಿರೋಧಿಸಿದ್ದರು. ಈಗ ಅವರೇ ಇಲ್ಲಿ ನನಗಿಂತ ಹೆಚ್ಚು ಖುಷಿಯಾಗಿ ಇದ್ದಾರೆ. ಇದೋ ಬಲಭಾಗದಲ್ಲಿರುವ ವಿಶಾಲವಾದ ಪ್ರಾಂಗಣ ಯೋಗ ನಡೆಸುವ ತಾಣ, ಎಡಭಾಗದಲ್ಲಿರುವ ಕಟ್ಟಡದ ಭಾಗ ನನ್ನ ನಾಟಿ ವೈದ್ಯಕೀಯ ಕೆಲಸಗಳಿಗೆ. ಅದೋ ಅಲ್ಲಿ ಮತ್ತೊಂದು ಮೂಲೆಯಲ್ಲಿರುವುದು ನನ್ನ ಜ್ಯೋತಿಷ್ಯಾಲಯ. ಇವೆಲ್ಲವುಗಳ ಮಧ್ಯೆ ನಮ್ಮ ನಿವಾಸ ಬನ್ನಿ” ಎಂದು ಪಾದರಕ್ಷೆಗಳನ್ನು ಅಲ್ಲಿಯೇ ಬಿಟ್ಟು ಕಟ್ಟೆಯ ಮೇಲಿರಿಸಿದ್ದ ಕೊಳಗದಿಂದ ನೀರು ಮೊಗೆದು ಕೈಕಾಲಿಗೆ ಹಾಕಿಕೊಂಡವರೇ ಮತ್ತೊಮ್ಮೆ ತಂಬಿಗೆಯಲ್ಲಿ ನೀರು ತುಂಬಿಸಿ ತಂಬಿಗೆಯನ್ನು ಮಹೇಶನಿಗಿತ್ತರು. ನಂತರದ ಸರದಿ ದೇವಿಯದು. ಆಕೆ ಕೈಕಾಲು ತೊಳೆದುಕೊಂಡಳು. ಮುಂದಡಿಯಿಡುತ್ತ ತಲೆಯೆತ್ತಿ ನೋಡಿದಳು.
ಇತ್ತೀಚೆಗೆ ಕಟ್ಟಿಸಿದ್ದ ಮನೆ ಎಂದು ಹೇಳಿದರೂ ಹಳೆಯ ಕಾಲದ ಮಾದರಿಯಂತಿತ್ತು. ತಮ್ಮೂರಿನಲ್ಲಿರುವ ಕಂಬದ ಮನೆ ಇದ್ದಂತೆ. ದೊಡ್ಡದಾದ ಹೊರಾಂಗಣ, ಅದನ್ನು ದಾಟಿ ಮುಂಬಾಗಿಲಿಗೆ ಬಂದರು. ಇನ್ನೇನು ಹೊಸ್ತಿಲು ದಾಟಬೇಕೆನ್ನುವಷ್ಟರಲ್ಲಿ ”ಒಂದು ನಿಮಿಷ ಅಲ್ಲೇ ನಿಲ್ಲಿ” ಎಂಬ ಧ್ವನಿ ಕೇಳಿತು. ಧ್ವನಿ ಬಂದೆಡೆಗೆ ತಲೆಯೆತ್ತಿದರೆ ಲಕ್ಷಣವಾದ ಮುತ್ತೈದೆಯೊಬ್ಬರು ಆರತಿ ತಟ್ಟೆಯೊಂದಿಗೆ ಒಳಗಿನಿಂದ ಬಂದರು. ”ಲೋ ಮಗಾ ಗಣಪ, ನೀನು ಸ್ವಲ್ಪ ಪಕ್ಕ ಸರಿದು ನಿಂತುಕೋ” ಎಂದು ದಂಪತಿಗಳನ್ನು ಸರಿಯಾಗಿ ನಿಲ್ಲಿಸಿದರು. ಆರತಿ ಎತ್ತಿ ದೃಷ್ಟಿ ನೀವಳಿಸಿ ಒಳಕ್ಕೆ ಬರಲು ಆದೇಶಿಸಿದರು.
ವಿಶಾಲವಾದ ಹಾಲು, ಅಕ್ಕಪಕ್ಕದಲ್ಲಿ ರೂಮುಗಳಿದ್ದವು. ಹಾಗೇ ನೋಡುತ್ತ ನಿಂತಿದ್ದ ದೇವಿಯ ಕೈಹಿಡಿದು ”ಬಾರಮ್ಮ ಒಳಕ್ಕೆ ಇಬ್ಬರೂ ಗೆಳೆಯರು ಬಹಳ ಕಾಲದ ನಂತರ ಭೇಟಿಯಾಗಿ ನಿನ್ನನ್ನೇ ಮರೆತಿದ್ದಾರೆ. ಮನೆಯನ್ನೆಲ್ಲ ನೋಡುವೆಯಂತೆ. ಒಂದು ಸುತ್ತು ಹಾಕು. ಆಸರಿಗೇನಾದರೂ ಕುಡಿಯುವಿರಂತೆ. ಬೈರಾ ಎಳನೀರು ತರಲು ಹೋಗಿದ್ದಾನೆ. ನಮ್ಮ ನಿರೀಕ್ಷೆಗೂ ಮುಂಚಿತವಾಗೇ ಬಂದಿರಿ” ಎಂದರು.
”ಹೌದಮ್ಮಾ ಅಡ್ರೆಸ್ ಕೊಟ್ಟಿದ್ದರು ಜೊತೆಗೆ ನಿಮ್ಮ ಮಗ ಎಲ್ಲಿದ್ದೀರಿ ಎಂದು ಫೋನ್ ಮಾಡುತ್ತಾ ಹೇಗೆ ಹತ್ತಿರದ ದಾರಿಯಲ್ಲಿ ಬರಬೇಕು ಎಂದು ನಿರ್ದೇಶಿಸುತ್ತಿದ್ದರು. ಅದರಿಂದ ಏನೂ ತೊಂದರೆಯಾಗದೆ ಬಂದು ತಲುಪಿದೆವು” ಎಂದಳು ದೇವಿ.
”ಆಯಿತು ..ಬಾ” ಎಂದು ಮನೆಯ ಪ್ರತಿಯೊಂದು ಮೂಲೆಯನ್ನೂ ತೋರಿಸಿದರು. ಊಟದ ಮನೆ, ಪೂಜಾಮನೆ, ಅಡುಗೆಮನೆ, ಉಗ್ರಾಣ, ಅವನ್ನೆಲ್ಲ ದಾಟಿಹೋದರೆ ಮತ್ತೊಂದು ವೆರಾಂಡಾ, ಬಾತ್‌ರೂಮು, ಸಂಪ್ರದಾಯಬದ್ಧರಂತೆ ಕಾಣುತ್ತಾರೆ ಎಂದುಕೊಂಡಳು ದೇವಿ. ಅತಿಯಾದ ಆಡಂಬರ ಕಾಣಿಸದಿದ್ದರೂ ಅಚ್ಚುಕಟ್ಟುತನ ಎದ್ದುಕಾಣುತ್ತಿತ್ತು. ಅಡುಗೆ ಮನೆಯಲ್ಲಿ ಒಬ್ಬರು ವಯಸ್ಸಾದ ಮಹಿಳೆ ಮತ್ತು ಸುಮಾರು ಹತ್ತು ಹನ್ನೆರಡು ವರ್ಷದ ಒಬ್ಬ ಹುಡುಗ ಕಾಣಿಸಿದರು. ಅವರನ್ನು ದೇವಿಗೆ ಪರಿಚಯಿಸುತ್ತಾ ”ನೋಡು ಮಗೂ ಇವರು ನಮ್ಮ ಬಾಣಸಿಗರು ತಾಯಮ್ಮ, ಈತ ಅವರ ಮೊಮ್ಮಗ ಧೃವ. ಶಾಲೆಗೆ ಇವತ್ತು ರಜೆ. ಅದಕ್ಕೆ ಅಜ್ಜಿಯ ಹಿಂದೆ ಅಡ್ಡಾಡುತ್ತಿದ್ದಾನೆ. ಇವರ ಕುಟುಂಬ ಇಲ್ಲೇ ನಮ್ಮ ತೋಟದಲ್ಲಿಯೇ ಇದೆ. ಅಷ್ಟೇ ಅಲ್ಲ ಸುಮಾರು ಕೆಲಸಗಾರರಿಗೆ ಇಲ್ಲೇ ಮನೆ ಕಟ್ಟಿಸಿಕೊಟ್ಟಿದ್ದಾನೆ ಗಣಪತಿ. ಎಲ್ಲರೂ ಒಂದೇ ಮನೆಯವರಂತೆ ಇದ್ದೇವೆ. ನಮ್ಮ ತಂದೆಯಿಂದ ನಾಟಿವೈದ್ಯ, ನನ್ನವರಿಂದ ಯೋಗ, ಹೊರಗಿನ ವಿದ್ಯೆಯಿಂದ ಕೃಷಿಜ್ಞಾನ, ಎಲ್ಲವೂ ಅವನಿಗೆ ಬಂದಿವೆ. ಮಿಗಿಲಾಗಿ ಎಲ್ಲರ ಗ್ರಹಬಲ, ಕಷ್ಟಸುಖ, ಎಲ್ಲಕ್ಕೂ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ. ತನ್ನ ವೈಯಕ್ತಿಕ ಹಣೆಬರಹವೊಂದನ್ನು ಬಿಟ್ಟು. ಎಷ್ಟು ಹೇಳಿದರೂ ಅವನ ತಲೆಗೇ ಹಾಕಿಕೊಳ್ಳುವುದಿಲ್ಲ. ಯಾವುದೋ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದನಂತೆ, ಅವಳಿಗೆ ಅವರ ಮನೆಯವರನ್ನು ಬಿಟ್ಟುಬರುವ ಧೈರ್ಯ ಸಾಲದಾಯಿತು. ಅಲ್ಲಿಗೆ ಮುಗಿಯಿತು ನನ್ನ ಮಗನ ಕಲ್ಯಾಣ. ಬೇರೆ ಯಾರನ್ನೂ ಇಷ್ಟಪಟ್ಟಿಲ್ಲ. ಹೀಗೆ ಇಲ್ಲಿಯ ಸಮಸ್ತ ಆಸ್ತಿಗೂ ಅವನೇ ಒಡೆಯ. ನಂತರದ್ದು ಏನೋ? ನಾವು ಪಡೆದು ಬಂದದ್ದು ಇಷ್ಟೇ. ನಿನ್ನ ಬಗ್ಗೆ ನನ್ನ ಮಗ ಎಲ್ಲಾ ಹೇಳಿದ್ದರಿಂದ ನನಗೆ ನೀನು ಬೇರೆಯವಳಲ್ಲ ಎನ್ನಿಸಿತು ಮಗೂ, ಎಲ್ಲವನ್ನೂ ನಿನ್ನೊಡನೆ ಹಂಚಿಕೊಂಡೆ. ನನ್ನೆದೆಯ ತಳಮಳವನ್ನು ಹಗುರ ಮಾಡಿಕೊಂಡೆ ಅಷ್ಟೇ. ತಪ್ಪು ತಿಳಿಯಬೇಡಮ್ಮ” ಎಂದರು.
ಅಷ್ಟರಲ್ಲಿ ”ಲೇ ಶಾಂತಾ ಎಲ್ಲಿದ್ದೀ ಬೇಗನೆ ಬಾ, ಪ್ರಯಾಣ ಮಾಡಿ ಬಂದವರಿಗೆ ಏನಾದರೂ ಕುಡಿಯಲು ಕೊಡುವುದನ್ನು ಬಿಟ್ಟು ಎಲ್ಲಿ ಹೋದೆ. ಅವರೆಲ್ಲ ಎಲ್ಲಿ?” ಎಂದು ಕೂಗಿದ ಸದ್ದಿಗೆ ಎಚ್ಚೆತ್ತು ”ಈ ಕಂಚಿನಧ್ವನಿ ನನ್ನವರದ್ದು. ಅವರ ಹೆಸರು ಸೋಮಣ್ಣಾಂತ. ಸುತ್ತಮುತ್ತಲಿನವರಿಗೆ ಜಟ್ಟಿಸೋಮಣ್ಣ ಅಂತಲೇ ಪರಿಚಿತ, ಒಂದು ಕಾಲದಲ್ಲಿ ಕುಸ್ತಿ ಪಟು, ಆದರೆ ಈಗಲ್ಲ. ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಜೊತೆಗೆ ತೋಟದ ಕೆಲಸದ ಉಸ್ತುವಾರಿ, ನಮ್ಮೊಡನೆ ಬದುಕು ಸಾಗಿಸುತ್ತಿದ್ದಾರೆ. ಸೀದಾಸಾದಾ ಮನುಷ್ಯ.ಅವರಿಗೂ ತಮ್ಮ ಮಗನ ಬಗ್ಗೆ ಚಿಂತೆಯಿದೆ. ಆದರೆ ನನ್ನ ಹಾಗೆ ಹೊರಗೆ ತೋರ್ಪಡಿಸಿಕೊಳ್ಳುವುದಿಲ್ಲ. ಈ ಹುಡುಗರೆಲ್ಲೋ ರೂಮು ಸೇರಿಕೊಂಡಿರಬೇಕು ಅಥವಾ ಹೊರಗಡೆ ಹೋಗಿರಬೇಕು. ಇನ್ನು ತಡಮಾಡಿದರೆ ಮತ್ತೊಮ್ಮೆ ತಾರಕದಲ್ಲಿ ಕೂಗು ಕೇಳಬಹುದು” ಎಂದು ಮುಂದೆ ನಡೆದರು ಶಾಂತಮ್ಮ. ಅವರನ್ನು ಹಿಂಬಾಲಿಸುತ್ತ ದೇವಿಕೂಡ ಹೆಜ್ಜೆ ಹಾಕಿದಳು. ಹೆಂಡತಿ ಕಾಣಿಸಿದ ಕೂಡಲೆ ಸೋಮಣ್ಣನವರು ”ಎಲ್ಲಿಗೆ ಹೋಗಿದ್ದೆ ಶಾಂತು? ಗಣಪ ಅವನ ಗೆಳೆಯನ ಕುಟುಂಬ ಎಲ್ಲಿ?” ಎಂದು ಕೇಳಿದರು.
”ಗೆಳೆಯರಿಬ್ಬರೂ ರೂಮು ಸೇರಿರಬೇಕು. ಒಬ್ಬಳೇ ನಿಂತಿದ್ದ ಹುಡುಗಿಗೆ ನಾನೇ ಕೈಹಿಡಿದು ಮನೆಯನ್ನೆಲ್ಲ ತೋರಿಸಲೆಂದು ಕರೆದುಕೊಂಡು ಹೋಗಿದ್ದೆ. ಒಂದು ಸುತ್ತು ಹಾಕುವಷ್ಟರಲ್ಲಿ ನಿಮ್ಮ ಕೂಗು ಕೇಳಿ ಬಂದೆ. ಇಲ್ಲಿ ನೋಡಿ ಈ ಚೆಲುವೆಯೇ ಗಣಪನ ಗೆಳೆಯ ಮಹೇಶನ ಹೆಂಡತಿ. ಬಾ ಮಗೂ ನೋಡಿವರೇ ಗಣಪನ ತಂದೆ” ಎಂದು ಪರಿಚಯಿಸಿದರು ಶಾಂತಮ್ಮ.
‘ಬಾಮ್ಮ, ನಿನ್ನ ಹೆಸರೇನು ತಾಯಿ?’ ಎಂದು ಬಹಳ ಪ್ರೀತಿಯಿಂದ ಕೇಳಿದರು ಸೋಮಣ್ಣ.
ಅವರ ಮಾತಿಗೆ ತಲೆಯೆತ್ತಿದ ಮಾದೇವಿ ತನ್ನ ಹೆಸರು ಹೇಳುವುದಿರಲಿ, ನಮಸ್ಕರಿಸುವುದನ್ನೂ ಮರೆತು ಅವರನ್ನೇ ದಿಟ್ಟಿಸಿ ನೋಡಿದಳು. ”ಅಬ್ಬಾ ! ತಂದೆ ಮಕ್ಕಳಲ್ಲಿ ಎಷ್ಟೊಂದು ಸಾಮ್ಯತೆ ಇದೆ. ಎರಕ ಹೊಯ್ದ ಪ್ರತಿಮೆಗಳಂತೆ ಇದ್ದಾರಲ್ಲಾ ! ಇವರಿಗೆ ಇಷ್ಟು ದೊಡ್ಡ ಮಗನಿದ್ದಾನೆಂದು ಅನ್ನಿಸುವುದೇ ಇಲ್ಲ. ಈಗತಾನೇ ಅಮ್ಮ ಕುಸ್ತಿಪಟುವಾಗಿದ್ದರೆಂದು ಹೇಳಿದರಲ್ಲ , ಯೋಗಾಚಾರ್ಯ” ಎಲ್ಲವೂ ಕಣ್ಮುಂದೆ ಬಂದು ನಿಂತಿತು.
ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ: https://www.surahonne.com/?p=40758
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ತುಂಬಾ ಚೆನ್ನಾಗಿದೆ
ನವದಂಪತಿ, ಧರ್ಮಸ್ಥಳದ ಮಂಜುನಾಥೇಶ್ವರನನ್ನು ದರ್ಶನಗೈದು, ಸಮೀಪದ ಬೆಳ್ತಂಗಡಿಯಲ್ಲಿರುವ ಗೆಳೆಯ ಗಣಪತಿ ಮನೆಗೆ ಭೇಟಿಕೊಡುತ್ತಿದ್ದಾರೆ… ಹಳ್ಳಿಯ ಸೊಗಡು ತುಂಬಿದ ಕಥಾಹಂದರ ಇಷ್ಟವಾಯ್ತು.. ಧನ್ಯವಾದಗಳು ನಾಗರತ್ನ ಮೇಡಂ.
ನಿಮ್ಮ ಪ್ರತಿ ಕ್ರಿಯೆಗೆ ಅನಂತ ಧನ್ಯವಾದಗಳು ಶಂಕರಿ ಮೇಡಂ
ಧನ್ಯವಾದಗಳು ನಯನಾ ಮೇಡಂ
ನಾನು ಬರೆದ ಕಾದಂಬರಿಯ ನ್ನು ಧಾರಾವಾಹಿಯಾಗಿ ಪ್ರಕಟಿಸುತ್ತಿರುವ ಗೆಳತಿ ಸುರಹೊನ್ನೆಯ ಪತ್ರಿಕೆಯ ಒಡತಿ ಹೇಮಾರವರಿಗೆ..ಹೃತ್ಪೂರ್ವಕವಾದ ಧನ್ಯವಾದಗಳು..
ಬಹಳ ಸುಂದರವಾಗಿ ಬರೆಯುತ್ತಿದ್ದೀರಿ ಧನ್ಯವಾದಗಳು ನಾಗರತ್ನ ಮೇಡಂ
ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು ವನಿತಾ ಮೇಡಂ
ಕುತೂಹಲದಿಂದ ಮುಂದೆ ಸಾಗುತ್ತಿದೆ ಕಾದಂಬರಿ. ಈ ಹೊಸ ಪ್ರಶಾಂತವಾದ ಜಾಗದಲ್ಲದರೂ ನವದಂಪತಿಗಳ ಸಮಸ್ಯಗೊಂದು ಪರಿಹಾರ ದೊರೆಯಬಹುದೆ?
ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು..