ಧರ್ಮ ರಕ್ಷಣೆಗೆ ವೇದಿಕೆ
ಓಂ ಶ್ರೀ ಗುರುಭ್ಯೋ ನಮಃ
ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ I
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ II
ಜಗದ್ಗುರು, ಗೀತಾಚಾರ್ಯ ಮೊದಲಾಗಿ ಸ್ತುತಿಸಲ್ಪಡುವ ಶ್ರೀ ಕೃಷ್ಣನ ಅವತಾರವು ವಿಶಿಷ್ಟವಾದದು.
ಹಿಂದೆ ಕೋಟ್ಯಾನು ಕೋಟಿ ದಾನವರು ಭೂಲೋಕದಲ್ಲಿ ಲೋಕಕಂಟಕರಾಗಿ ಮೆರೆಯುತ್ತಿದ್ದರು. ಅವರ ದುರ್ವರ್ತನೆಯನ್ನು ತಾಳಲಾರದೆ ಭೂದೇವಿಯು ಗೋ ರೂಪವನ್ನು ತಾಳಿ ಬ್ರಹ್ಮ ದೇವರಲ್ಲಿ
ಮೊರೆಇಟ್ಟಳು. ಭೂ ದೇವಿಯ ಕಷ್ಟವನ್ನು ಪರಿಹರಿಸಲು ತಾನು ಶಕ್ತನಲ್ಲವೆಂದು ಅರಿತ ಬ್ರಹ್ಮದೇವನು ಭೂದೇವಿಯನ್ನು ಕೂಡಿಕೊಂಡು, ಸಕಲ ದೇವತೆಗಳನ್ನು ಕರೆದುಕೊಂಡು ಕ್ಷೀರಸಮುದ್ರದೆಡೆಗೆ ಬಂದನು. ಅಲ್ಲಿ ಶ್ರೀಮನ್ನಾರಾಯಣನನ್ನು ತದೇಕ ಚಿತ್ತದಿಂದ ಧ್ಯಾನ ಮಾಡತೊಡಗಿದರು.
ನಾರಾಯಣಮ್
ತ್ರಿಧಾಮಾನಂ ಸ್ಥಿತಿ ಕಾರ್ಯಧು ರಂಧರಂ I
ದೈತ್ಯ ದಾನವ ಹಂತಾರಂ ಭಕ್ತಾಭೀಷ್ಟ ಪ್ರದಾಯಕಂII
ಅಷ್ಟಾಕ್ಷರೀ ಮನುಸ್ತುತ್ಯಂ ಸರ್ವದೇವ ನಮಸ್ಕೃತಮ್ I
ಅಲಂಕಾರ ಪ್ರಿಯಂ ದೇವಂ ಮಹಾವಿಷ್ಣುಂ ನಮಾಮ್ಯಹಮ್ II
ಅಂತಿರಲು ಬ್ರಹ್ಮದೇವನಿಗೆ ಮಾತ್ರ ಕೇಳಿಸುವಂತೆ ಒಂದು ಅಶರೀರವಾಣಿಯಾಯಿತು. ಇದರಿಂದ ಸಂತುಷ್ಟನಾದ ಬ್ರಹ್ಮನು ತನ್ನ ಜೊತೆಗೆ ಬಂದ ಸಕಲ ದೇವತೆಗಳಿಗೆ ಈ ರೀತಿಯಾಗಿ ಹೇಳಿದನು. ನಮ್ಮ ಕೆಲಸವಾಯಿತು; ನಿಮ್ಮ ಭಾರವನ್ನಿಳಿಸಲು ಸ್ವತ: ಶ್ರೀಮನ್ನಾರಾಯಣನೇ ಅವತರಿಸುತ್ತಾನೆ. ದುಷ್ಟ ನಿಗ್ರಹಕ್ಕಾಗಿ ಇನ್ನು ಕೆಲವೇ ದಿನಗಳಲ್ಲಿ ಆ ಭಗವಂತನೇ ಯಾದವ ವಂಶದಲ್ಲಿ ವಸುದೇವನ ಮಗನಾಗಿ ಜನಿಸುತ್ತಾನೆ. ಶೇಷನು ಬಲರಾಮನಾಗಿಯೂ, ಮಹಾವಿಷ್ಣುವು ಶ್ರೀ ಕೃಷ್ಣನಾಗಿಯೂ ಜನ್ಮ ತಳೆಯುತ್ತಾರೆ. ಆದಕಾರಣ ನೀವೆಲ್ಲರೂ ಭೂಲೋಕದಲ್ಲಿ ಯಾದವರಾಗಿ ಜನಿಸಿರಿ. ಋಷಿಗಳೆಲ್ಲರೂ ಆಕಳುಗಳಾಗಿ ಜನಿಸಿರಿ. ಅಲ್ಲದೆ ವಿಷ್ಣು ಮಾಯೆಯು ಕೂಡ ಸ್ತ್ರೀ ರೂಪದಿಂದ ಅವತರಿಸುವಳು; ಎಂದು ಹೇಳಿ, ಇದೆಲ್ಲವನ್ನು ಶ್ರೀಹರಿಯೇ ನನಗೆ ಹೇಳಿದನು ಎಂದನು; ಮತ್ತು ಎಲ್ಲರನ್ನು ಹಿಂದಕ್ಕೆ ಕಳುಹಿಸಿದನು. ಅಂತೆಯೇ ಸಕಲ ದೇವತೆಗಳು, ದೇವತಾ ಸ್ತ್ರೀಯರೂ, ಋಷಿಗಳು ಭೂಲೋಕದಲ್ಲಿ ಅವತರಿಸಿದರು.
ಉಗ್ರಸೇನ ಎಂಬ ರಾಜನು ಮಥುರಾ ದೇಶದಲ್ಲಿ ಯಾದವರನ್ನು ಆಳುತ್ತಿದ್ದನು. ಅವನ ಪ್ರೀತಿಯ ಮಗಳಾದ ದೇವಕಿಯನ್ನು ಶೂರನ ಮಗನಾದ ವಸುದೇವನಿಗೆ ಮದುವೆ ಮಾಡಿ ಕೊಟ್ಟನು. ದೇವಕಿಯ ಅಣ್ಣ ಕಂಸನು ತಂಗಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದನು. ಮದುಮಗ- ಮದುಮಗಳಾದ ವಸುದೇವ- ದೇವಕಿಯರನ್ನು ಸರ್ವಾಲಂಕೃತ ಬಂಗಾರದ ರಥದಲ್ಲಿ ಕುಳ್ಳಿರಿಸಿ ಸ್ವತ: ಕಂಸನೇ ಸಾರಥಿಯಾಗಿ ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೊರಟನು. ಅಂತಹ ಸಂತೋಷದ ಸಮಯದಲ್ಲಿ ಎಲ್ಲರಿಗೂ ಕೇಳಿಸುವಂತೆ ಒಂದು ಅಶರೀರವಾಣಿ ಆಯಿತು. ”ಎಲವೋ ಕಂಸಾ! ನಿನ್ನ ಪ್ರೀತಿಯ ತಂಗಿಯ ಎಂಟನೇ ಗರ್ಭದಿಂದ ಬಂದ ಶಿಶುವೇ ನಿನ್ನ ಮರಣಕ್ಕೆ ಕಾರಣವಾಗುವುದು; ಎಚ್ಚರ!” ಎಂಬ ಘರ್ಜನೆ ಕೇಳಿಸಿತು.
ತಕ್ಷಣ ರಥದಿಂದ ಕೆಳಗಿಳಿದ ಕಂಸನು ತಂಗಿಯನ್ನು ಈಗಲೇ ಕೊಲ್ಲುವುದಾಗಿ ಖಡ್ಗವನ್ನು ಎತ್ತಿದನು. ಇದನ್ನೆಲ್ಲ ನೋಡುತ್ತಿದ್ದ ವಸುದೇವನು, ಗಡ-ಗಡ ನಡುಗುತ್ತ ”ಭಾವ! ಕಂಸಾ ! ನೀನು ಮಹಾ ಶೂರನೆಂದೂ, ನೀತಿವಂತನೆಂದೂ ಎಲ್ಲರೂ ಹೊಗಳುವರು. ಇಂಥ ನೀನು ಒಬ್ಬ ಅಬಲೆಯನ್ನು ಕೊಲ್ಲಲು ಮುಂದಾದೆಯಾ? ಆಕಾಶವಾಣಿಯು ನಿನ್ನ ಮರಣಕ್ಕೆ ದೇವಕಿ ಕಾರಣ ಎಂದು ಹೇಳಲಿಲ್ಲ; ಇವಳ ಎಂಟನೆಯ ಗರ್ಭದಲ್ಲಿ ಜನಿಸಿದ ಶಿಶು ಎಂದು ಹೇಳಿರುವುದು. ಇವಳಲ್ಲಿ ಜನಿಸುವ ಎಲ್ಲಾ ಮಕ್ಕಳನ್ನು ನಿನಗೆ ತಂದೊಪ್ಪಿಸುತ್ತೇನೆ” ಎಂದು ವಿನಂತಿಸಿಕೊಂಡನು.
ಕೆಲ ದಿನಗಳ ನಂತರ ಒಂದು ದಿನ ನಾರದರು ಕಂಸನಲ್ಲಿಗೆ ಬಂದು ಕಂಸನ ಬಳಿ ಒಂದು ರಹಸ್ಯವನ್ನು ಹೇಳಿದರು. ”ಹೋದ ಜನ್ಮದಲ್ಲಿ ಕಾಲನೇಮಿ ಎಂಬ ದೈತ್ಯನನ್ನು ಶ್ರೀವಿಷ್ಣುವು ಕೊಂದಿದ್ದನು. ಆ ಕಾಲನೇಮಿಯ ಮರು ಜನ್ಮವೇ ನೀನಾಗಿದ್ದೀಯ. ಅಲ್ಲದೆ ಅವನ ಅನುಚರರೂ, ಬಾಂಧವರಾಗಿದ್ದ ದೈತ್ಯರು ಈಗ ನಿನ್ನ ಅನುಚರರಾಗಿ ಅವತರಿಸಿದ್ದಾರೆ .ಈಗ ಶ್ರೀಹರಿಯು ಪುನಃ ದೇವಕಿಯ ಎಂಟನೆಯ ಗರ್ಭದಲ್ಲಿ ಜನಿಸಿ ನಿನ್ನನ್ನು ಕೊಲ್ಲುವನು. ಗೋಕುಲದಲ್ಲಿರುವ ನಂದನೇ ಮೊದಲಾದ ಯಾದವರು, ಯಾದವ ಸ್ತ್ರೀಯರು ಮತ್ತು ಗೋಪಿಕಾ ಸ್ತ್ರೀಯರು ಎಲ್ಲರೂ ದೇವ -ದೇವತೆಗಳ ಅವತಾರವೇ ಆಗಿದ್ದಾರೆ. ಆದ್ದರಿಂದ ಯಾದವ ಸಮೂಹವೇ ನಿನ್ನ ವಿರುದ್ಧ ನಿಲ್ಲಬಹುದು ಜೋಕೆ!” ಎಂದು ಹೇಳಿ ಹೋದರು.
ನಾರದರ ಕರ್ಣ ಕಠೋರ ಮಾತನ್ನು ಕೇಳಿದ ದೈತ್ಯ ಕಂಸನು ವಸುದೇವ -ದೇವಕಿಯರನ್ನು ಬಂಧನದಲ್ಲಿ ಇರಿಸಿದನು. ಅಲ್ಲದೆ ತನ್ನ ತಂದೆ ಉಗ್ರಸೇನನ ಮೇಲೆಯೇ ಅವಿಶ್ವಾಸ ತಾಳಿ ಅವನನ್ನು ಬಂಧನದಲ್ಲಿಟ್ಟನು. ರಾಜ್ಯದ ಸಕಲ ಸೂತ್ರಗಳನ್ನು ಸ್ವಾಧೀನ ಪಡಿಸಿಕೊಂಡನು. ತಾನೇ ರಾಜನೆಂದು ಸಾರಿ ಬಿಟ್ಟನು. ಇವನ ಉಪಟಳವನ್ನು ಸಹಿಸದೆ ಎಷ್ಟೋ ಜನ ದೇಶ ಬಿಟ್ಟು ಪರ ರಾಜರ ಆಶ್ರಯ ಪಡೆದರು. ಕಂಸನಂತೆ ದೈತ್ಯಾಂಶದಿಂದ ಹುಟ್ಟಿದ ಪ್ರಲಂಬಾಸುರ ,ಬಕ, ಚಾಣೂರ, ತೃಣಾವರ್ತ, ಗರ್ದಭ, ಮುಷ್ಟಿಕ, ಅರಿಷ್ಟ, ದ್ವಿವಿಧ, ಕೇಶಿ, ದೇನುಕ, ಬಾಣಾಸುರ, ನರಕಾಸುರರೆಂಬ ದೈತ್ಯರಾಜರೂ, ಪೂತನಿ ಎಂಬ ಮಹಾದೈತಳು ಕಂಸನಿಗೆ ಸಹಾಯಕರಾಗಿ ಸದಾ ಜೊತೆಗಿದ್ದರು.
ದೇವಕಿಯು ಪ್ರತಿವರ್ಷವೂ ಗರ್ಭ ಧರಿಸಿ ಮಗುವನ್ನು ಹಡೆಯುತ್ತಿದ್ದಂತೆ ಹುಟ್ಟಿದ ಶಿಶುಗಳನ್ನೆಲ್ಲ ಕಂಸನು ಕೊಲ್ಲುತ್ತಾ ಬಂದನು. ದೇವಕಿಯು ಏಳನೇ ಗರ್ಭ ಧರಿಸಿದಳು. ಆ ಗರ್ಭದಲ್ಲಿ ಜನಿಸಲಿರುವವನೇ ಆದಿಶೇಷನ ಅಂಶ ಸಂಭೂತನಾದ ಬಲರಾಮ. ಆಗ ಅವನನ್ನು ಉಳಿಸುವ ಸಲುವಾಗಿ ಶ್ರೀಮನ್ನಾರಾಯಣನು ತನ್ನ ಯೋಗ ಮಾಯೆಯನ್ನು ಕರೆದು ದೇವಕಿಯ ಗರ್ಭದಲ್ಲಿದ್ದ ಪಿಂಡವನ್ನು ವಸುದೇವನ ಇನ್ನೋರ್ವ ಪತ್ನಿಯಾದ ರೋಹಿಣಿಯ ಗರ್ಭಕ್ಕೆ ಸ್ಥಳಾಂತರಿಸಲು ಆಜ್ಞಾಪಿಸಿದನು. ವಸುದೇವನು ಕಂಸನ ಉಪಟಳಕ್ಕೆ ಹೆದರಿ ತನ್ನ ಉಳಿದ ಪತ್ನಿಯರನ್ನು ಬೇರೆ ಬೇರೆ ಕಡೆಗೆಗಳಿಗೆ ಕಳಿಸಿದ್ದನು. ರೋಹಿಣಿಯು ನಂದನ ಆಶ್ರಯದಲ್ಲಿ ಇದ್ದಳು. ಶ್ರೀಹರಿಯು ತನ್ನ ಯೋಗ ಮಾಯೆಗೆ ”ನೀನು ನಂದಗೋಪನ ಪತ್ನಿಯಾದ ಯಶೋಧೆಯ ಗರ್ಭದಲ್ಲಿ ಸೇರು. ನಾನು ದೇವಕಿಯ ಗರ್ಭವನ್ನು ಪ್ರವೇಶಿಸುತ್ತೇನೆ. ನಾನು ದೇವಕಿಯ ಗರ್ಭದಿಂದ ಹುಟ್ಟಿದ ಮೇಲೆ ಸರ್ವಭೀಷ್ಟಪ್ರದಳಾಗಿ ಇತರ ಎಲ್ಲ ಶಕ್ತಿ ದೇವತೆಗಳಿಗೂ ಅಧೀಶ್ವರಿಯಾಗಿ ನೀನು ಮೆರೆಯುವೆ; ಅನೇಕ ನಾಮಗಳನ್ನು ಹೊಂದಿದವಳಾಗಿ ನೀನು ಪೂಜಿಸಲ್ಪಟ್ಟು ವಂದ್ಯಳಾಗು” ಎಂದು ಆಶೀರ್ವದಿಸಿ ಕಳಿಸಿಕೊಟ್ಟನು.
ಹೀಗೆ ಶ್ರೀಮನ್ನಾರಾಯಣನು ಶ್ರೀಕೃಷ್ಣನ ಅವತಾರಕ್ಕೆ ಬೇಕಾದ ಹಿನ್ನೆಲೆಯನ್ನು ನಿರ್ಮಿಸಿದನು.
“ಲಕ್ಷ್ಮೀ ಕಾಂತಮ್ ಚತುರ್ಬಾಹುಂಶಂಖಚಕ್ರ ವರಾಭಯಂ I
ದಶಾವತಾರ ಲೀಲಾಡ್ಯಮ್ ಮಧುಕೈಟಭ ಮರ್ದನಮ್ II”
ಹರಿ: ಓಂ .
–-ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು.
ಚೆನ್ನಾದ ಬರಹ ಮತ್ತೆ ಮತ್ತೆ…ಓದಿಸಿಕೊಂಡು ಅರ್ಥೈಸಿಕೊಳ್ಳುವಂತಿದೆ..ಮೇಡಂ
ಶ್ರೀಕೃಷ್ಣನ ಜನನಕ್ಕೆ ಮೊದಲು ಸಜ್ಜಾದ ವೇದಿಕೆಯ ಕಥಾಭಾಗವು ಬಹಳ ಚೆನ್ನಾಗಿ ಮೂಡಿಬಂದಿದೆ… ವನಿತಕ್ಕನಿಗೆ ವಂದನೆಗಳು.
ತುಂಬು ಹೃದಯದ ಧನ್ಯವಾದಗಳು, ಶಂಕರಿ ಅಕ್ಕ, ನಾಗರತ್ನ ಮೇಡಂ.
ನನ್ನ ಬರಹಗಳನ್ನು ಪ್ರಕಟಿಸುತ್ತಿರುವ ಹೇಮಮಾಲ ಮೇಡಂ ಅವರಿಗೆ ಹೃತ್ಪೂರ್ವಕ ವಂದನೆಗಳು.
Vivarane thumba chennagide
ಕೃಷ್ಣಜನನಕ್ಕೆ ವೇದಿಕೆ ಸಿದ್ದವಾದ ವಿವರಣೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ.