ನೈತಿಕತೆ ಮತ್ತು ನ್ಯಾಯಸಮ್ಮತ
ಸಾಲು ಮನೆಗಳಲ್ಲಿ ವಾಸವಿದ್ದ ತಂಗಿ ರೇವತಿಯ ಮನೆಗೆ ಬಂದಿದ್ದ ಕಲ್ಪನಾಗೆ ಅಕ್ಕಪಕ್ಕಗಳ ಮನೆಗಳಲ್ಲಿ ನಡೆಯುತ್ತಿದ್ದ ಮಾತುಕತೆಗಳೆಲ್ಲಾ ಕೇಳುತಿತ್ತು.
ಈ ರೀತಿಯ ಮನೆಗಳಿಗೆ ವಾಸಕ್ಕೆ ಬಂದ ಕೆಲದಿವಸಗಳು ಅವರಿವರ ಮನೆಯ ಮಾತುಗಳು, ಕೆಲವು ವೇಳೆ ಖಾಸಗೀತನವೆಲ್ಲಾ ಹರಾಜು ಆದಂತೆನಿಸಿ ತಾವುಗಳು ಮಾತನಾಡುವಾಗ ದನಿ ತಗ್ಗಿಸಿ ಮಾತನಾಡುವುದನ್ನೂ ರೂಢಿಸಿಕೊಂಡರೂ ಕೆಲವು ದಿನಗಳಲ್ಲೇ ಪರಿಸ್ಥಿತಿಯ ತೀವ್ರತೆಗನುಸಾರವಾಗಿ, – ಅಯ್ಯೋ ಹೋಗಲಿ ಬಿಡು, ಇಂದು ನಮ್ಮ ಮನೆ, ನಾಳೆ ಪಕ್ಕದ ಮನೆ, ನಾಡಿದ್ದು ಆಚೆ ಮನೆ, ಎಲ್ಲರ ಮನೆಯ ದೋಸೆಯೂ ತೂತೇ – ಎಂಬ ಭಾವ ಮೂಡಿ ಕಿವಿಗಳ ಮೇಲೆ ಮಾತುಗಳು ಬಿದ್ದರೂ ಮನಸ್ಸಿನಾಳಕ್ಕೆ ಇಳಿಯದಂತಾಗಿ ಬಿಡುತ್ತದೆ.
ಅಪರೂಪಕ್ಕೆ ಬಂದಿದ್ದ ಕಲ್ಪನಾಗೆ, ತಂಗಿ ರೇವತಿ ಕಾರ್ಯನಿಮಿತ್ತ ಆಚೆ ಹೋಗಿದ್ದರಿಂದ ಪುಸ್ತಕವೊಂದನ್ನು ಹಿಡಿದು ಕೋಣೆಯೊಳಗೆ ಕುಳಿತಿದ್ದಾಗ ಒಂದೇ ಗೋಡೆಯ ಆಚೆಗಿದ್ದ ಪಕ್ಕದ ಮನೆಯ ಅಣ್ಣ ತಂಗಿಯರ ಮಾತುಕತೆಗಳು ಕಿವಿಯ ಮೇಲೆ ಬೀಳಹತ್ತಿದವು.
12 ವರ್ಷದ ತಂಗಿ ಅಣ್ಣನಿಗೆ ಹೇಳುತ್ತಿದ್ದಳು – ಅಮ್ಮ ಇಲ್ಲಾ ಅಂತ ಡಬ್ಬದಿಂದ ಸ್ಪೂನ್ ಗಟ್ಟಲೆ ತುಪ್ಪ ತೊಗೊಂಡು ತಿಂತೀದೀಯಾ, ಅಮ್ಮ ಬಂದ್ಮೇಲೆ ಹೇಳ್ತೀನಿ ನೋಡು.
15 ವರ್ಷದ ಅಣ್ಣ ನಿರ್ಭಡೆಯಿಂದ ಹೇಳುತ್ತಿದ್ದ – ಹೇಳ್ಕೋ ಹೋಗು, ಅಮ್ಮ ನಂಗೇನೂ ಮಾಡೋಲ್ಲ.
ಯಾಕೆ ಮಾಡೋಲ್ಲ? ಊಟಕ್ಕೆ ಕುಳಿತಾಗ ಚೂರು ತುಪ್ಪ ಜಾಸ್ತಿ ಹಾಕು ಅಂದ್ರೆ, ಇಷ್ಟರಲ್ಲೇ ತಿಂಗಳು ಪೂರ್ತಾ ಮಾಡಬೇಕು, ಜಾಸ್ತಿ ಕೇಳ್ಬಾರ್ದು ಅಂತ ಬೈತಾಳೆ, ಅಮ್ಮ ಬರ್ಲಿ ಇರು, ಮಾಡ್ತಾಳೆ
ಹೇಳ್ಕೋ ಹೋಗೇ.
ಮಾತುಕತೆಗಳು ನಿಂತು ಹೋದವು. ಸ್ವಲ್ಪ ಹೊತ್ತಿನಲ್ಲಿ, ಅಲ್ಲಿಲ್ಲದಿದ್ದ ಅವರಮ್ಮ ಬಂದಿರಬೇಕು. ತಂಗಿಯ ದನಿ ಕಲ್ಪನಾಗೆ ಕೇಳಿಸಿತು –
”ಅಮ್ಮಾ, ಅಣ್ಣ ಸ್ಪೂನ್ ಗಟ್ಟಲೆ ತುಪ್ಪ ತಿಂತಾ ಇದ್ದ”
”ಇಲ್ಲಮ್ಮಾ, ಇವ್ಳು ಸುಳ್ಳು ಹೇಳ್ತಾ ಇದ್ದಾಳೆ, ನಾನು ತುಪ್ಪ ಖಂಡಿತಾ ತಿಂದಿಲ್ಲ”
ಕಲ್ಪನಾಗೆ ಆಶ್ಚರ್ಯವಾಯಿತು. ಸ್ವಲ್ಪಹೊತ್ತಿನ ಮುಂಚೆ ʼಹೇಳ್ಕೋ ಹೋಗುʼ ಎಂದಿದ್ದ ಪೋರ, ಈಗ ಲೀಲಾಜಾಲವಾಗಿ ʼನಾನು ತಿಂದೇ ಇಲ್ಲʼ ಅಂತ ಧೃಡವಾಗಿ ವಾದ ಮಾಡುತ್ತಿದ್ದ. ʼನಾನು ತಿಂದಿದ್ದಕ್ಕೆ ಏನು ಗ್ಯಾರಂಟಿ, ಹೇಳು ನೋಡೋಣʼ ಎನ್ನುತಿದ್ದ. ಅವನ ದನಿಯ ಗಡಸುತನದ ಮುಂದೆ ನಿಜ ಹೇಳುತ್ತಿದ್ದ ತಂಗಿಯ ದನಿ ಸತ್ವ ಕಳೆದುಕೊಂಡಂತೆ ಆಯಿತೇನೋ, ಅಮ್ಮ, ಮಗಳನ್ನೇ ಬೈದು ಬಿಟ್ಟರು – ಏ ಸುಮ್ಮನೆ ಆಡ್ಕೋ ಹೋಗೇ, ಯಾವಾಗ ನೋಡಿದ್ರೂ ಅವನ ಮೇಲೆ ಚಾಡಿ ಹೇಳ್ತಾ ಇರ್ತೀಯಾ.
ಕಲ್ಪನಾ ಮನಸ್ಸು ವಿಷಣ್ಣವಾಯಿತು, ಆ ಹುಡುಗ ವಿಶ್ವಾಸದಿಂದ ಹೇಳಿದ್ದ ಹುಸಿಮಾತುಗಳು ಹುಡುಗಿಯ ಸಾತ್ವಿಕ ನಿಜದ ಮುಂದೆ ಸತ್ವಹೀನವಾಗಿಬಿಟ್ಟವು.
ಆಚೆ ಬಂದು ನೋಡಿದರೆ, ಅಮ್ಮ ಒಳಗೆ ಹೋಗಿರಬೇಕು, ಹೊರ ಬಂದಿದ್ದ ಮಕ್ಕಳಲ್ಲಿ ಹುಡುಗ ವಿಜಯದ ನಗೆ ನಗುತ್ತಾ ಅಣಕಿಸುವಂತೆ ಹೆಬ್ಬೆರಳನ್ನು ಆಡಿಸುತ್ತಿದ್ದರೆ, ಹುಡುಗಿಯ ಮುಖದಲ್ಲಿ ಗೊಂದಲ, ಅವಮಾನಗಳು ತಾಂಡವವಾಡುತ್ತಿದ್ದವು.
ಹಿಂದೆಯೂ ಇದ್ದರಬಹುದಾದ ಈ ಅನ್ಯಾಯದ ಅಟ್ಟಹಾಸ ಇಂದಿನ ದಿನಗಳಲ್ಲಿ ಗರಿಷ್ಟಮಟ್ಟವನ್ನು ಮುಟ್ಟಿದೆಯೇನೋ ಅನ್ನಿಸದೆ ಇರದು, ಇದೊಂದು ಸಣ್ಣ ಉದಾಹರಣೆ ಅಷ್ಟೆ.
ದೃಶ್ಯ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಬಿತ್ತರಿಸುವ ದೋಷಾರೋಪಣೆ, ಕೆಸರೆರಚಾಟಗಳಿಂದ ನಿಜಕ್ಕೂ ಮನಸ್ಸುಗಳು ಪ್ರಕ್ಷುಬ್ಧಗೊಳ್ಳದೆ ಇರದು. ಹಲವಾರು ಪ್ರಸಂಗಗಳಲ್ಲಿ, ನಾಯಕರುಗಳ, ಅಲ್ಲಲ್ಲ, ಇವರುಗಳನ್ನು ನಾಯಕರು ಎಂದೊಪ್ಪಿಕೊಳ್ಳಲು ಮನಸ್ಸು ಬಾರದು, ರಾಜಕೀಯ ಧುರೀಣರುಗಳ ಹೇಳಿಕೆಗಳು ಜಿಗುಪ್ಸೆಯನ್ನುಂಟುಮಾಡುತ್ತವೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಅನಾಚಾರಗಳು ಎಲ್ಲೆ ಮೀರಿವೆ. ನ್ಯಾಯಾಲಯದಿಂದ ಬೇಲ್ ಮೇಲೆ ಹೊರಬಂದೊಡನೆಯೇ ʼತಮ್ಮ ತಪ್ಪೇ ಇಲ್ಲ ಎಂದು ಸುಪ್ರೀಂ ಕೋರ್ಟೇ ತೀರ್ಮಾನ ಹೇಳಿಬಿಟ್ಟಿದೆಯೇನೋ ಎಂಬಂತೆ ವಿಜೃಂಭಿಸುವುದು, ಅವರ ಚೇಲಾಗಳ ಸಂಭ್ರಮಾಚರಣೆಗಳು, ಎಲ್ಲವನ್ನೂ ನೋಡಿದಾಗ ಸಾರ್ವಜನಿಕ ರಂಗದಲ್ಲಿರುವ ವ್ಯಕ್ತಿಗಳಲ್ಲಿ ನೈತಿಕತೆ ಎಂಬುದು ಹೇಳಹೆಸರಿಲ್ಲದಂತೆ ಮಾಯವಾಗಿಬಿಟ್ಟಿದೆಯೇನೋ ಅನ್ನಿಸದೆ ಇರದು. ಕೆಲವೊಂದು ಅಪವಾದಗಳನ್ನು ಬಿಟ್ಟು.
ಸಮಾಜದ ಕಟ್ಟುಪಾಡುಗಳಿಗೆ ಬದ್ಧರಾಗಿ ಸುತ್ತಲಿನ ಯಾರಿಗೂ ತೊಂದರೆ ಉಂಟುಮಾಡದೆ, ಎಲ್ಲರನ್ನೂ ಗೌರವಿಸುತ್ತಾ ಮಾನವೀಯತೆ, ಒಳ್ಳೆಯ ಕುಟುಂಬ ವ್ಯವಸ್ಥೆ, ದೇಶಪ್ರೇಮ ಮುಂತಾದ ಸದ್ಗುಣಗಳನ್ನು ರೂಢಿಸಿಕೊಂಡು, ಶಾಂತಿ, ಸೌಹಾರ್ದಯುತವಾದ ಬಾಳುವೆಯ ನಡೆಸಬೇಕು ಎಂಬ ನೀತಿ ಪಾಠದ ನೈತಿಕತೆಯಿಂದೊಡಗೂಡಿದ ನಮ್ಮ ಸಮಾಜದಲ್ಲಿ ಅಕಸ್ಮಾತ್ ತಪ್ಪಾದರೆ, ಪರೀಕ್ಷಿಸಿ ಶಿಕ್ಷಿಸಲು ಇದ್ದವು ನ್ಯಾಯಾಲಯಗಳು. ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ಬೃಹತ್ ಭಾರತ ದೇಶದಲ್ಲಿ “ಅಕಸ್ಮಾತ್ ತಪ್ಪಾದರೆ” ಎಂಬ ಧೋರಣೆಯನ್ನು ಹೊಂದಿದ್ದಾಗಲೇ ಒಂದೊಂದು ಮೊಕದ್ದಮೆ ಇತ್ಯರ್ಥವಾಗಲು ದಶಕಗಳೇ ಹಿಡಿಯುತ್ತಿದ್ದವು.
ಈಗಂತೂ ಯಾರಿಗೂ ಯಾವ ತಪ್ಪು ಮಾಡಲೂ ಹಿಂಜರಿಕೆಯೇ ಇಲ್ಲದಂತಾಗಿದೆ. ಮಾಡಬಾರದ ತಪ್ಪನ್ನೆಲ್ಲಾ ಮಾಡಿ, ಆಡಬಾರದ ಆಟವನ್ನೆಲ್ಲಾ ಆಡಿ, ಕುಟುಂಬ, ಮಾನವೀಯತೆ, ದೇಶ, ಭಾಷೆ ಯಾವುದರ ಎಗ್ಗೂ ಇಲ್ಲದೆ ದ್ರೋಹವೆಸೆಗಿ, ಬೇಲ್ ಮುಖಾಂತರ ಹೊರಬಂದು “ನಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬುಗೆ ಇದೆ” ಎಂಬ ಬಣ್ಣದ, ಕಣ್ಣೊರಸುವ ಮಾತುಗಳನ್ನಾಡುತ್ತಾ, “ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯಸ್ಸು” ಎಂಬಂತೆ, “ಬೇಲ್ ನಿಂದ ಹೊರಬಂದರೆ, ಹತ್ತಿಪ್ಪತ್ತು ವರುಷ ಭಯವಿಲ್ಲ” ಎಂಬಂತ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯವೇ ಸರಿ.
ಯಾರಾದರೂ ಕಾನೂನು ಕಟ್ಟಳೆಗಳ ಬಗ್ಗೆ ಮಾತನಾಡಿದರೆ, ಕಾನೂನು ಇರುವುದೇ ಮುರಿಯಲು, ಎನ್ನುತ್ತಾ ತಮ್ಮಿಷ್ಟದಂತೆ ನಡೆದರೆ ಉಳಿಗಾಲವಿದೆಯೆ?
ಒಂದು ಕಡೆ ನಮ್ಮ ದೇಶ ಹಲವು ರಂಗಗಳಲ್ಲಿ ಯಶಸ್ಸು ಸಾಧಿಸುತ್ತಾ ಮುನ್ನಡೆಯುತ್ತಿದ್ದರೆ ಕೆಳಸ್ತರದಲ್ಲಿ ಅನ್ಯಾಯಗಳು, ಅನೈತಿಕತೆಯ ಚಟುವಟಿಕೆಗಳು, ನಾವು ಮಾಡಿದ್ದೇ ಸರಿ ಎಂಬ ಧೋರಣೆಗಳು, ಜನರಿಗೆ ನಮ್ಮಗಳ ಬಗ್ಗೆ ಯೋಚಿಸಲು ಪುರಸೊತ್ತು ಎಲ್ಲಿದೆ, ಎಲ್ಲವನ್ನು ಸ್ವಲ್ಪ ದಿನಗಳಲ್ಲೇ ಮರೆತು ಬಿಡುತ್ತಾರೆ ಎಂದು ತಮ್ಮಾತ್ಮಕ್ಕೆ ತಾವೇ ಮೋಸ ಮಾಡಿಕೊಳ್ಳುತ್ತಾ, ದೇವಾಲಯಗಳಿಗೆ ಭೇಟಿ ನೀಡುತ್ತಾ, ಬಣ್ಣದ ಮಾತುಗಳನ್ನು ಆಡುತ್ತಾ ಆಷಾಡಭೂತಿತನವನ್ನು ತೋರುತ್ತಾ, ಕೋರ್ಟಿನಿಂದ ಕೋರ್ಟಿಗೆ ವರ್ಗಾಯಿಸುತ್ತಾ ಕಾಲ ಕಳೆಯುತ್ತಾ ಹೋದರೆ ದೇಶದ ಅಡಿಪಾಯವೇ ಅಲುಗಾಡದೆ? ಹಾಗೆ ನೋಡಿದರೆ ಸಾಮಾನ್ಯ ಜನರು ಸನ್ನಡತೆಯವರೇ ಆಗಿದ್ದಾರೆ. ಆದರೂ ರಸಯುಕ್ತ ಹಣ್ಣಿನ ಬುಟ್ಟಿಯಲ್ಲಿರುವ ಒಂದು ಕೊಳೆತ ಹಣ್ಣೂ ಎಲ್ಲಾ ಒಳ್ಳೆಯ ಹಣ್ಣುಗಳನ್ನು ಹಾಳುಗೆಡವದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು, ಬೆಕ್ಕಿನ ಕೊರಳಿಗೆ ಯಾರಾದರೂ ಗಂಟೆ ಕಟ್ಟಲಿ, ಎಂದು ಬಿಡದೆ ಸತ್ಕಾರ್ಯ ಮನೆಯಿಂದಲೇ ಪ್ರಾರಂಭ ಎಂಬ ನಾಣ್ನುಡಿಯಂತೆ ನೈತಿಕತೆಯ ಬೀಜವನ್ನು ಮಕ್ಕಳಲ್ಲಿ, ಯುವಜನತೆಯಲ್ಲಿ ಬಿತ್ತಲು ಹೊಸ ಹೊಸ ಉಪಾಯಗಳನ್ನು ಹುಡುಕಲು ಮನಸ್ಸನ್ನು ಚಿಂತನೆಗೆ ಹಚ್ಚೋಣ.
–ಪದ್ಮಾ ಆನಂದ್, ಮೈಸೂರು
ಮೇಲುನೋಟಕ್ಕೆ ಸರಳ ಬರಹವೆನಿಸಿದರೂ ಚಿಂತನೆಗೆ ಹಚ್ಚುವಂತಿದೆ.. ನಿಮ್ಮ ಆಲೋಚನೆಗೆ ಧನ್ಯವಾದಗಳು ಪದ್ಮಾ ಮೇಡಂ
Excellent. ವಾಸ್ತವದ ಅನಾವರಣ
ಇಂದಿನ ಸಮಾಜದ ಕಟುಸತ್ಯವನ್ನು ಬಿಚ್ಚಿಟ್ಟ ಲೇಖನವು ನಮ್ಮೆಲ್ಲರ ಮನದಾಳದ ಮಾತೂ ಹೌದು. ಎಂದಿಗೂ ಸುಧಾರಿಸಲಾರದಷ್ಟು ಗಬ್ಬೆದ್ದು ಹೋಗಿರುವ ರಾಜಕಾರಿಣಿಗಳ ಕಾರ್ಯವೈಖರಿಯ ಕುರಿತು ಯೋಚಿಸಲೂ ಮನಸ್ಸಿಲ್ಲದಂತಾಗಿದೆ. ವಾಸ್ತವಿಕತೆಗೆ ಕನ್ನಡಿ ಹಿಡಿದಿರುವುದು ಇಷ್ಟವಾಯಿತು ಪದ್ಮಾ ಮೇಡಂ.