ಕಾವ್ಯ ಭಾಗವತ – ಪುಟ 1
ಪೀಠಿಕೆ
ಸುಬೋಧ ರಾಮರಾಯರು ತಾವು ನಡೆಸುತ್ತಿದ್ದ “ಸುಬೋಧ” ಮಾಸಪತ್ರಿಕೆಯಲ್ಲಿ ಅಂಕಣಬರಹವಾಗಿ ಭಾಗವತ ಕಥಾಮೃತವನ್ನು ದಶಕಗಳ ಕಾಲ ಉಣಬಡಿಸುತ್ತಿದ್ದರು. ಅದು ಅತ್ಯಂತ ಜನಪ್ರೀತಿಯನ್ನು ಗಳಿಸಿತ್ತು. ಅದು ಪುಸ್ತಕ ರೂಪದಲ್ಲಿ ಮೊದಲ ಬಾರಿ 1959 ರಲ್ಲಿ ಪ್ರಕಟವಾಯಿತು. ನಂತರ ಐದು ಬಾರಿ ಮರುಮುದ್ರಣಗಳನ್ನು ಕಂಡಿದೆ. ಸುಬೋಧ ರಾಮರಾಯರು ನನ್ನ ಚಿಕ್ಕತಾತನಾಗಿದ್ದರು ಎಂಬುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ.
ಇತ್ತೀಚಿನ ವರ್ಷಗಳಲ್ಲಿ ನಾನು ವೃತ್ತಿಯಿಂದ ನಿವೃತ್ತನಾದ ನಂತರ ಅವರು ಬರೆದ ಭಾಗವತವನ್ನು ಓದುವಾಗ ಮನಸ್ಸಿಗೆ ಸಿಗುತ್ತಿದ್ದ ಅಪಾರವಾದ ಆನಂದ ಮತ್ತು ಅರಿವುಗಳನ್ನು ಸಜ್ಜನರೊಂದಿಗೆ ಹಂಚಿಕೊಳ್ಳುವ ಬಯಕೆಯಾಗಿ ಅವರು ಬರೆದಿರುವ ಭಾಗವತದ ಪ್ರತಿ ಸ್ಕಂದ, ಅಧ್ಯಾಯಗಳ ಮುಖ್ಯವಾದ ತಿರುಳನ್ನು ಕವನ ರೂಪದಲ್ಲಿ ಬರೆಯಬೇಕೆಂಬ ತುಡಿತ ಉಂಟಾಗಿ ಪ್ರಯತ್ನಿಸಿದ್ದೇನೆ. ಎಷ್ಟರ ಮಟ್ಟಿಗೆ ಅದು ಸಫಲವಾಗಿದೆ ತಿಳಿದಿಲ್ಲ. ಅವರು ಬರೆದಿರುವ ಭಾಗವತ ಕಥಾಸಾರದ ಸಾವಿರದ ಒಂದು ಅಂಶವಾದರೂ ಇದರಿಂದ ಜನರಿಗೆ ತಲುಪಿ ಅವರನ್ನು ಭಾಗವತ ಪಠಣಕ್ಕೆ ಪ್ರೇರೇಪಿಸಿದರೆ ನಾನು ಧನ್ಯ. ಭಾಗವತ ಗ್ರಹಿಕೆಯಲ್ಲಿ ನನ್ನಲ್ಲಿರಬಹುದಾದ ತಪ್ಪು ಒಪ್ಪುಗಳನ್ನೆಲ್ಲಾ ಮನ್ನಿಸಿ ಕವನಗಳನ್ನು ಓದಿ ಪ್ರೋತ್ಸಾಹಿಸುತ್ತೀರೆಂಬ ನಂಬಿಕೆ ನನ್ನದು.
ಅರಿಕೆ
ಶ್ರೀಮದ್ ಭಾಗವತ ಕಥಾಸಾಗರದಿಂ
ಬೊಗಸೆಯೊಡ್ಡಿ
ದಕ್ಕಿದ
ನನ್ನರಿವಿಗೆ
ಪ್ರಾಪ್ತವಾದ
ಕೃಷ್ಣಕಥೆಯ
ಅರುಹಲು
ತಲೆಬಾಗಿ ನಮಿಸಿ
ಬಂದಿಹ
ಎನಗೆ
ಎಲ್ಲ ಭಗವದ್ಬಕ್ತರ
ಹರಕೆ ಇರಲಿ
ಭಾಗವತ ಕಥಾಮೃತವು
ವೇದ ಕಲ್ಪವೃಕ್ಷದಿಂ
ಶುಕದೆಂಜಲದಿಂ
ಪಕ್ಕಾದ
ಜೇನರುಚಿಯಂತಿರ್ಪ
ರಸಾಲ ಫಲದ
ತೆರದಿ
ಸರ್ವವೇದ
ರಸಾಮೃತವಂ
ಸವಿದು,
ಅಸ್ವಾದಿಸಲು
ರಸಿಕರೆಲ್ಲರಿಗಿದು
ಆಹ್ವಾನ
ಧರ್ಮಾರ್ಥ, ಕಾಮ, ಮೋಕ್ಷ
ವೆಂಬೆಲ್ಲ ಪುರುಷಾರ್ಥಕೆ
ಭಕ್ತಿ ಸಾಧನೆಯ ಅರಿವೊಂದೆ
ಮಾರ್ಗ,
ಭಗವತ್ ಕಥಾ ಶ್ರವಣವೆ
ಸಾಧನ
ಮನದ
ಕಾಮ ಕ್ರೋಧ ಲೋಭ ಮೋಹ
ವೆಂಬೆಲ್ಲ
ಮಾಲಿನ್ಯವಂ
ಶ್ರೀಹರಿಕಥಾಮೃತ ಸಿಂಚನದಿಂ
ಶುಚಿರ್ಗೊಳಿಸಿ
ಧನ್ಯರಾಗೋಣ ಬನ್ನಿ
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಆರಂಭ..ವಿನಯಪೂರ್ವಕವಾಗಿ ಪ್ರಾರಂಭವಾಗಿದೆ…ಈ ಕಾವ್ಯ ಮಾರ್ಗ ದಮೂಲಕ.. ಭಾಗವತದಮೂಲಕ..ತಿಳಿಯ ಪಡಿಸುವ ನಿಮ್ಮ ಪ್ರಯತ್ನ ಕ್ಕೆ…ಶರಣು..ಸಾರ್
ಹೊಸದಾಗಿದೆ. ಚೆನ್ನಾಗಿದೆ.
ಕಾವ್ಯ ರೂಪದ ಭಾಗವತ ಸಾರದ ಕೃಷ್ಣಕಥೆಯ ಶುಭಾರಂಭ ಮನಸ್ಸಿಗೆ ಮುದ ನೀಡಿತು.
ಹೊಸ ಪರಿಕಲ್ಪನೆಯ ಕಾವ್ಯ ರೂಪದ ಭಾಗವತ ಕಥಾಮೃತದ ಪೀಠಿಕೆ ಕಾವ್ಯವು ಚೆನ್ನಾಗಿದೆ.
ಆಸ್ಥೆಯಿಂದ ಪ್ರಕಟಿಸಿದ “ಸುರಹೊನ್ನೆ” ಸಂಪಾದಕಿ ಶ್ರೀಮತಿ ಹೇಮಮಾಲಾ ಅವರಿಗೂ, ಓದಿದ, ಓದಿ ಪ್ರತಿಕ್ರಿಯಿಸಿದ ಸಹೃದಯ ವಾಚಕರಿಗೂ ಅನಂತಾನಂತ ಧನ್ಯವಾದಗಳು