ಜನ-ಮನದ ಜೀವನಾಡಿ “ರೇಡಿಯೋ”.

Share Button

“ರಾಷ್ಟ್ರೀಯ ಪ್ರಸಾರ ದಿನ”ವೂ ಇದೆ. ನಮ್ಮ ಭಾರತದಲ್ಲಿ ಎಲ್ಲಾ ಜನರ ಜೀವನದಲ್ಲಿನ ಪ್ರಮುಖ ಒಡನಾಡಿಯಾಗಿರುವ, ಒಂದು ರೀತಿಯಲ್ಲಿ ಮಾಹಿತಿಗಳ ಆಗರವಾಗಿರುವ, ಜೊತೆಗೆ ಕುಳಿತಲ್ಲೇ ನಮಗೆ ಎಲ್ಲಾ ಬಗೆಯ ಸುದ್ದಿ,ಮಾಹಿತಿ, ಮನರಂಜನೆ….ಎಲ್ಲವನ್ನೂ ಕೂಡ ನಮ್ಮಮನೆ- ಮನಕ್ಕೆ ತಲುಪಿಸುವ ಒಂದು ಗುರುತರ ಜವಾಬ್ದಾರಿಯನ್ನು ಹೊಂದಿರುವ “ರೇಡಿಯೋ”ವನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು.

ಈ “ರೇಡಿಯೋ”- ಎಂದರೆ ನಿಜಕ್ಕೂ ಮೈ-ಮನಗಳು ರೋಮಾಂಚನಗೊಳ್ಳುತ್ತವೆ. ಏಕೆಂದರೆ ಯಾವುದೇ ಸಂಪರ್ಕ ಮಾಧ್ಯಮಗಳು ಇಲ್ಲದ ಕಾಲದಲ್ಲಿ ಈ ರೇಡಿಯೋ ಜನರ ಜೀವನಾಡಿಯಾಗಿತ್ತು!. ಅದು ರಾಜ್ಯದ ಸುದ್ದಿ ಆಗಿರಬಹುದು…. ರಾಷ್ಟ್ರೀಯ ಸುದ್ದಿ ಆಗಿರಬಹುದು…..ಅಂತರರಾಷ್ಟ್ರೀಯ ಸುದ್ದಿ ಆಗಿರಬಹುದು….. ಎಲ್ಲವನ್ನು ಕೂಡ ವಾರ್ತೆಗಳ ರೂಪದಲ್ಲಿ,ಮಾಹಿತಿಗಳ ರೂಪದಲ್ಲಿ ನಮಗೆ ಸಿಗುತ್ತಿತ್ತು. ಕೆಲವರು ಅಲ್ಲಿ ಬರಿ ಚಿತ್ರಗೀತೆಗಳು,ವಾರ್ತೆಗಳು ಬರುತ್ತವೆ ಎಂದು ಸಾತ್ಸಾರ ಮಾಡುವವರು ಕೂಡ ಇದ್ದಾರೆ.ಅಂದು ಪ್ರಸಾರವಾದ ರೇಡಿಯೋ ಇವತ್ತಿನವರೆಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ತನ್ನತನವನ್ನು ಕಾಯ್ದುಕೊಂಡು ಬಂದಿದೆ. ಮುಂದೆಯೂ ಕೂಡ ರೇಡಿಯೋ ತನ್ನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಮನರಂಜನೆಯ ಜೊತೆ ಜೊತೆಗೆ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಕೂಡ ಕಾರ್ಯಕ್ರಮಗಳ ಮಹಾಪೂರವನ್ನು ಹರಿಸಿ, ತಾನು ಬೆಳೆದು ಎಲ್ಲರನ್ನೂ ಬೆಳೆಸುತ್ತಿದೆ.

ಪ್ರತಿ ವರ್ಷ ಜುಲೈ 23 ನೆ ದಿನಾಂಕದಂದು ರಾಷ್ಟ್ರೀಯ ಪ್ರಸಾರ ದಿನವನ್ನಾಗಿ ಆಚರಿಸಲಾಗುತ್ತಾ ಬರುತ್ತಿದೆ. 1927 ರಲ್ಲಿ ಈ ದಿನದಂದು ಭಾರತೀಯ ಬ್ರಾಡ್ಕಾಸ್ಟಿಂಗ್ ಕಂಪನಿಯಡಿಯಲ್ಲಿ ಬಾಂಬೆ ಸ್ಟೇಷನ್ ನಿಂದ ದೇಶದ ಮೊದಲ ರೇಡಿಯೋ ಪ್ರಸಾರ ವನ್ನು ಆರಂಭಿಸಿತು. ಅದರಿಂದಾಗಿ ಮೊದಲ ರೇಡಿಯೋ ಪ್ರಸಾರವನ್ನು ಜುಲೈ 23, 1927ರಂದು ಬಾಂಬೆ ಸ್ಟೇಷನ್ ನಿಂದ ಮಾಡಲಾಯಿತು ಎನ್ನುವುದು ಈಗ ಇತಿಹಾಸ.ಇಂಡಿಯನ್ ಬ್ರಾಡ್ಕಾಸ್ಟಿಂಗ್ ಕಂಪನಿಯ ಒಡೆತನದಲ್ಲಿದ್ದ ಈ ಕೇಂದ್ರವನ್ನು ಸರ್ಕಾರವು ಏಪ್ರಿಲ್ 1, 1930 ರಂದು ವಹಿಸಿಕೊಂಡಿತು. ನಂತರದಲ್ಲಿ ತನ್ನದೇ ಆದ ಒಂದು ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುತ್ತಾ, ಅದನ್ನು ಒಂದು ಹಂತಕ್ಕೆ ತಂದಿತು. ಮತ್ತು ಅದನ್ನು “ಭಾರತೀಯ ರಾಜ್ಯ ಪ್ರಸಾರ ಸೇವೆ”- ಎಂದು ಮರುನಾಮಕರಣ ಮಾಡಿತು. ನಂತರ ಇದು 1932 ರಲ್ಲಿ ಶಾಶ್ವತವಾಗಿ ಸರ್ಕಾರದ ನಿಯಂತ್ರಣಕ್ಕೆ ಬಂದಿತು.ತದನಂತರ ಜೂನ್ 8, 1936 ರಂದು ಭಾರತೀಯ ರಾಜ್ಯ ಪ್ರಸಾರ ಸೇವೆಯು ಅಂದರೆ ಆಲ್ ಇಂಡಿಯಾ ರೇಡಿಯೋ ಆಯಿತು. ಅಂದಿನಿಂದ ಇವತ್ತಿನವರೆಗೂ ರೇಡಿಯೋ ತನ್ನ ವಿಶ್ವ ವ್ಯಾಪಿ ದರ್ಶನವನ್ನು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಮಾಡಿಸುತ್ತಾ ಬಂತು!

ಈ ರೇಡಿಯೋ ಪ್ರಸಾರದ ಕಾರ್ಯಕ್ರಮಗಳಿಗೆ ಮನಸೋಲದವರು ಯಾರು ಇಲ್ಲ!!. ಎಐಆರ್ ಈಗ ವಿಶ್ವದ ಅತಿ ದೊಡ್ಡ ಸಾರ್ವಜನಿಕ ಪ್ರಸಾರ ಸಂಸ್ಥೆಗಳಲ್ಲಿ ಒಂದಾಗಿದೆ. ಎಲ್ಲರೂ ಏಕೆ?! ಈ ರೇಡಿಯೋವನ್ನು ತುಂಬಾ ತುಂಬಾ ಇಷ್ಟ ಪಡುತ್ತಾರೆ. ಅಂದರೆ…….. ಈ ರೇಡಿಯೋದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಂದು ರೀತಿಯಲ್ಲಿ ಕೇವಲ ಮಾಹಿತಿಗಳ ಜೊತೆಗೆ, ಮನರಂಜನೆಯ ಜೊತೆಗೆ, ವಸ್ತುನಿಷ್ಠ ಸುದ್ದಿಗಳನ್ನು ಅಳೆದು, ಸುರಿದು, ಅದು ಪ್ರಸಾರ ಮಾಡಲು ಯೋಗ್ಯವೇ? ಎಂದು ತರ್ಕಿಸಿ, ಚಿಂತಿಸಿ, ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ಅವರಿಂದ ಲೇಖನಗಳನ್ನು ಬರೆಸಿ, ನಂತರ ಅದನ್ನು ಮತ್ತೊಮ್ಮೆ ಅಧಿಕಾರಿಗಳ ತಂಡ ಆಯ್ಕೆ ಮಾಡಿ, ತದನಂತರದಲ್ಲೇ ಅದು ಪ್ರಸಾರ ಮಾಡಲು ಯೋಗ್ಯ ಎಂಬ ಅಂತಿಮ ತೀರ್ಮಾನಕ್ಕೆ ಬರುತ್ತಾರೆ. ಅದುದರಿಂದ ರೇಡಿಯೋ ಐದು ನಿಮಿಷದ ಕಾರ್ಯಕ್ರಮ ಪ್ರಸಾರ ಮಾಡಿದರು, ಕಾಲು ಗಂಟೆ ಪ್ರಸಾರ ಮಾಡಿದರು, ಅರ್ಧ ಗಂಟೆ ಪ್ರಸಾರ ಮಾಡಿದರು ಮೌಲಿಕವಾಗಿರುತ್ತದೆ.ಆದುದರಿಂದಾಗಿ ಪ್ರಸಾರ ಮಾಡುವ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ಹೆಚ್ಚಿನ ಗುಣಮಟ್ಟದಿಂದ ಕೂಡಿರುತ್ತವೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ರೇಡಿಯೋ ಪ್ರಸಾರ ಮಾಡುವ ಪ್ರತಿಯೊಂದು ಕಾರ್ಯಕ್ರಮಗಳು ಸಹ ಪ್ರಸಾರ ಯೋಗ್ಯದ ಜೊತೆಗೆ ಮಾಹಿತಿಗಳ ಮಹಾಪೂರವನ್ನೇ ಹರಿಸಿಬಿಡುತ್ತದೆ. ಜೊತೆಗೆ ಅಲ್ಲಿನ ಭಾಷಾ ಶುದ್ಧತೆ, ಆಯ್ಕೆ ಮಾಡಿಕೊಳ್ಳುವ ವಿಷಯ, ಪ್ರಚಲಿತ ವಿಷಯಗಳು, ಆರೋಗ್ಯ, ಸಂಗೀತ, ಸಾಹಿತ್ಯ, ಆಧ್ಯಾತ್ಮಿಕ, ಒಟ್ಟಾರೆಯಾಗಿ ಮನರಂಜನೆಯ ಜೊತೆಗೆ ಮಾಹಿತಿಗಳನ್ನು ಕೂಡ ನಮಗೆ ನೀಡುತ್ತಾ ಬರುತ್ತಿದೆ.

ನಾವು ರೇಡಿಯೋ ಕಾರ್ಯಕ್ರಮಗಳನ್ನು ಕೇಳುತ್ತಾ ನಮ್ಮ ಇನ್ನಿತರ ಕೆಲಸ ಕಾರ್ಯಗಳನ್ನು ಕೂಡ ಮಾಡಿಕೊಳ್ಳಬಹುದು. ಮೊದಲೇ ನಮಗೆ ಸಮಯದ ಅಭಾವ ಇರುವುದರಿಂದ ಟಿವಿ ಮಾಧ್ಯಮಗಳ ರೀತಿಯಲ್ಲಿ ಅದರ ಮುಂದೆ ಕುಳಿತುಕೊಳ್ಳುವ ಸಂದರ್ಭ ನಮಗೆ ಬರುವುದಿಲ್ಲ. ಇದರಿಂದಾಗಿ ನಾವು ಬೆಳಿಗ್ಗೆ ಎದ್ದೊಡನೆ ರೇಡಿಯೋ ಆನ್ ಮಾಡಿದರೆ ಅದು ತನ್ನ ಕಾರ್ಯಕ್ರಮಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಾ ಹೋಗುತ್ತದೆ. ನಾವು ಕೂಡ ಅದರ ಜೊತೆಜೊತೆಗೆ ನಮ್ಮ ಕೆಲಸ ಕಾರ್ಯಗಳನ್ನು ಕೂಡ ಮಾಡಿಕೊಳ್ಳುತ್ತಾ ಹೋಗಬಹುದು. ಈ ಒಂದು ಕಾರಣದಿಂದಲೇ ರೇಡಿಯೋವನ್ನು ಎಲ್ಲರೂ ಇಷ್ಟಪಡುತ್ತಾರೆ. ನಾವು ಮೊದಮೊದಲು ಕೇವಲ ವಾರ್ತೆಗಳು, ಚಿತ್ರಗೀತೆಗಳನ್ನು ಮಾತ್ರ ಕೇಳಲು ಶುರು ಮಾಡಿದೆವು. ನಂತರ ಅದರಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಸವಿಯುತ್ತಾ ಬಂದೆವು.

ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕೂಡ ರೇಡಿಯೋ ಗಡಿಯಾರದಂತೆ ಕೆಲಸ ನಿರ್ವಹಣೆ ಮಾಡುತ್ತದೆ!. ವಿದ್ಯುನ್ಮಾನ ಸಂಪರ್ಕ ಮಾಧ್ಯಮಗಳು ಇಂದು ಹೆಚ್ಚುತ್ತಾ ಬರುತ್ತಿವೆ. ಈ ನಡುವೆಯೂ ಕೂಡ ರೇಡಿಯೋ ತನ್ನ ಸಾಮರ್ಥ್ಯವನ್ನು ಮೆರೆಯುತ್ತಾ ಬಂದಿದೆ!. ಯಾವುದೇ ಸಂಪರ್ಕ ಮಾಧ್ಯಮಗಳ ಜೊತೆ ರಾಜಿ ಮಾಡಿಕೊಳ್ಳುತ್ತಿಲ್ಲ. ಅದರಲ್ಲಿ ಭಾಗವಹಿಸುವ ಉದ್ಘೋಷಕರು,ಅಧಿಕಾರಿಗಳು, ಸಿಬ್ಬಂದಿ ವರ್ಗ, ಸಂಪನ್ಮೂಲ ವ್ಯಕ್ತಿಗಳು ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸದಾ ಜಾಗೃತವಾಗಿದ್ದುಕೊಂಡು ಈ ರೇಡಿಯೋ ಮೂಲಕ ಏನೆಲ್ಲಾ ಮಾಹಿತಿಗಳನ್ನು ತಲುಪಿಸಬೇಕು ಎನ್ನುವ ಒಂದು ಪೂರ್ವ ಯೋಜನೆಯನ್ನು ಹಾಕಿಕೊಂಡು ಅದರಂತೆ ದಿನದಿಂದ ದಿನಕ್ಕೆ ಕೇಳುಗರ ಅಭಿರುಚಿಗೆ ತಕ್ಕಂತಹ ಸದಾಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಹೋಗುತ್ತಿವೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ರೇಡಿಯೋವನ್ನು ಕೇಳುವವರ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ !. ಅದರಿಂದಾಗಿ ರೇಡಿಯೋ ಅತ್ಯಂತ ಪ್ರಭಾವಿ ಮಾಧ್ಯಮವಾಗಿದೆ. ಈ ರೇಡಿಯೋ ಕಾರ್ಯಕ್ರಮಗಳನ್ನು ಕೇಳಿಯೇ ಅನೇಕ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲೂ ಕೂಡ ಯಶಸ್ಸು ಸಾಧಿಸಿದ್ದಾರೆ. ಅನೇಕರು ಇದರಿಂದ ತಮ್ಮ ಜೀವನಾನುಭವವನ್ನು ವಿಸ್ತಾರ ಮಾಡಿಕೊಂಡಿದ್ದಾರೆ.

ಮಾಹಿತಿಯ ಜೊತೆಗೆ ಮನರಂಜನೆಯನ್ನು ನೀಡುವುದರಿಂದ ರೇಡಿಯೋ ಎಲ್ಲರಿಗೂ ಆಪ್ತ ಗೆಳೆಯನಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಕೂಡ ರೇಡಿಯೋ ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಟೀ ಅಂಗಡಿಗಳಲ್ಲಿ ಊರ ನಡುವೆ ಇರುವ ಅರಳಿಕಟ್ಟೆಯಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ರೇಡಿಯೋ ಕೇಂದ್ರಗಳು ಕೂಡ ಇವೆ. ಬೆಳಿಗ್ಗೆ ರೇಡಿಯೋವನ್ನು ಹಾಕಿದರೆ ರಾತ್ರಿಯವರೆಗೂ ಒಂದಲ್ಲ ಒಂದು ಕಾರ್ಯಕ್ರಮಗಳು ಬರುತ್ತಾ ಇರುತ್ತವೆ. ಇದರಿಂದಾಗಿ ಆ ಸ್ಥಳದಲ್ಲಿ ಕುಳಿತ ಅನೇಕರು ರೇಡಿಯೋವನ್ನು ಒಂದಲ್ಲ ಒಂದು ರೀತಿಯಲ್ಲಿ ಕೇಳುತ್ತಾ ಹೋಗುತ್ತಾರೆ. ರೈತರು ಕೂಡ ಈಗ ತಮ್ಮ ವ್ಯವಸಾಯದ ಜಮೀನುಗಳಲ್ಲೂ ಕೂಡ ರೇಡಿಯೋವನ್ನು ಆನ್ ಮಾಡಿ ತಮ್ಮ ಹೊಲಗದ್ದೆ ಕೆಲಸಗಳನ್ನು ಸುಗಮವಾಗಿ ಮಾಡುತ್ತಾ ಬರುತ್ತಿದ್ದಾರೆ. ರೈತನಿಗಾಗಿಯೇ ಅನೇಕ ಕಾರ್ಯಕ್ರಮಗಳು ರೇಡಿಯೋದಿಂದ ಬಿತ್ತರಗೊಂಡಿವೆ. ಕೃಷಿ ರಂಗ, ರೈತರಿಗೆ ಸಲಹೆಗಳು, ತಜ್ಞರ ಅಭಿಪ್ರಾಯಗಳು, ಕೃಷಿಯ ಬಗ್ಗೆ ಅನೇಕ ಪೂರಕ ಮಾಹಿತಿಗಳು, ಜೊತೆಗೆ ಅನೇಕ ನೇರ ಫೋನಿನ ಕಾರ್ಯಕ್ರಮಗಳು, ಜನರ ಜೊತೆಗೆ ಜಾನುವಾರು ಇನ್ನಿತರ ರೈತನ ಪೂರಕ ವಿಷಯಗಳ ಸುತ್ತ ಅನೇಕ ಭಾಷಣ, ಚರ್ಚೆ, ಸಂದರ್ಶನ, ಚಿಂತನ ಇವುಗಳೆಲ್ಲರ ಮೂಲಕ ರೈತರಿಗೆ ಸಲಹೆ ಸೂಚನೆಗಳು ದಿನದಿಂದ ದಿನಕ್ಕೆ
ಹೆಚ್ಚು ಪ್ರಸಾರ ಮಾಡುತ್ತಾ ಬರುತ್ತಿದೆ.ಇದರಿಂದಾಗಿ ಆರ್ಥಿಕತೆಯ ಬೆನ್ನೆಲುಬಾದ ರೈತನ ಸಂಜೀವಿನಿಯಂತೆ ರೇಡಿಯೋ ತನ್ನ ಪ್ರಾಮುಖ್ಯತೆಯನ್ನು ಬೀರುತ್ತಾ ಬಂದಿದೆ.

ರೇಡಿಯೋ ತನ್ನ ಪ್ರಸಾರದ ದಿನಗಳನ್ನು ನೆನಪಿಸಿಕೊಂಡರೆ……….ಯುದ್ಧಕಾಲದಲ್ಲಿ ಅನೇಕ ಸಂತ್ರಸ್ತರನ್ನು ಕೂಡ ಗುರುತಿಸುವ ಅವರಿಗೆ ಆರೋಗ್ಯ ಕಾರ್ಯಕ್ರಮಗಳನ್ನು ನೀಡುವ, ಸಲಹೆ ಸೂಚನೆ ನೀಡುವ, ಮಹತ್ತರ ಜವಾಬ್ದಾರಿಯನ್ನು ಕೂಡ ಮಾಡಿದೆ.ಅದರಲ್ಲೂ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ರೇಡಿಯೋ ಸಕ್ರಿಯವಾಗಿ ಪ್ರಮುಖ ಪಾತ್ರ ವಹಿಸಿದೆ. ನಮ್ಮ ರಾಷ್ಟ್ರ ನಾಯಕರು ತಮ್ಮ ವಿಚಾರ ಪೂರ್ಣ ಮಾಹಿತಿಗಳ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ರೇಡಿಯೋ ಮೂಲಕ ಹಚ್ಚಿದರು. ಅದನ್ನು ಕೇಳಿದ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇದರಿಂದಾಗಿ ರೇಡಿಯೋ ಕೇವಲ ಮಾಹಿತಿ ಮನರಂಜನೆಯ ಜೊತೆಗೆ ಯುದ್ಧ, ಪ್ರವಾಹ, ಬರ ಇನ್ನಿತರ ಸಮಯದಲ್ಲೂ ಕೂಡ ನಾಗರಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸ್ಪಂದಿಸಿದೆ.


ನೋಡಿ ಒಂದು ರೇಡಿಯೋ ಹಂತ ಹಂತವಾಗಿ ಮೇಲೆ ಬಂದು, ಏನೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಾ ಬಂದಿದೆ ಎಂಬುದನ್ನು ನೆನಪಿಸಿಕೊಂಡರೆ ಮೈಮನಗಳುರೋಮಾಂಚನಗೊಳ್ಳುತ್ತವೆ!. ಮತ್ತೆ ತನ್ನ ರೇಡಿಯೋ ಹಳೆಯ ಪ್ರಸಾರದ ದಿನಗಳನ್ನು ನೆನಪಿಸಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ಹೊಸ ಹೊಸ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಹೊಸ ಉದ್ಘೋಷಕರು, ಹೊಸ ಅಧಿಕಾರಿಗಳು, ಹೊಸ ಸಿಬ್ಬಂದಿಗಳು ತಮ್ಮ ಮತ್ತಷ್ಟು ಲವಲವಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ರೇಡಿಯೋವನ್ನು ಮತ್ತಷ್ಟು ಜನಪ್ರಿಯತೆಯತ್ತ ಕೊಂಡೊಯ್ಯುತ್ತಿದ್ದಾರೆ. ರಾಷ್ಟ್ರೀಯ ಪ್ರಸಾರದ ದಿನ ರೇಡಿಯೋದಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರತಿಯೊಬ್ಬರನ್ನು ನಾವು ನೆನಪಿಸಿಕೊಳ್ಳಲೇಬೇಕು. ರೇಡಿಯೋ ಒಬ್ಬರಿಂದ ಇದು ಜನಪ್ರಿಯಗೊಂಡಿಲ್ಲ. ಹಾಗಾಗಿ ಎಲ್ಲಾ ತಂತ್ರಜ್ಞರು, ಸಿಬ್ಬಂದಿ ವರ್ಗ, ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಇವರು ಪ್ರಮುಖ ಕಾರಣವಾಗುತ್ತಾರೆ. ಜೊತೆಗೆ ಇವರೆಲ್ಲರ ಶ್ರಮದಿಂದ ಪ್ರಸಾರದ ಕಾರ್ಯಕ್ರಮಗಳನ್ನು ಕೇಳುವುದು ಕೂಡ ಮುಖ್ಯವಾಗುತ್ತಾರೆ. ಕೇಳುವರಿಲ್ಲದ ರೇಡಿಯೋ ಅನ್ನು ನೆನಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ!. ಅದೇ ರೀತಿ ಕೇಳುಗರ ಅಭಿರುಚಿಗೆ ತಕ್ಕಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದ್ದಾರೆ.

ಈಗ ರಾಜ್ಯ ರಾಜ್ಯಗಳಲ್ಲೂ ಕೂಡ ಅನೇಕ ಸ್ಥಳೀಯ ಭಾಷಾ ಸೊಗಡಿನ ರೇಡಿಯೋಗಳು ಸ್ಥಳೀಯ ಮಾಹಿತಿಗಳಿಗೆ ಕಾರಣೀಭೂತವಾಗುತ್ತಿದೆ. ಇದರಿಂದಾಗಿ ರೇಡಿಯೋ ಹಳ್ಳಿಯಿಂದ ದಿಲ್ಲಿವರೆಗೆ ಎನ್ನುವಂತೆ ಎಲ್ಲರ ಮನೆ-ಮನದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ರೇಡಿಯೋ ಈಗ “ಆಕಾಶವಾಣಿ” ಎಂಬ ಹೊಸ ಪದದಿಂದ ನವ-ನಾವಿನ್ಯತೆಯಿಂದ ತನ್ನ ಹೆಜ್ಜೆ ಗುರುತನ್ನು ಮತ್ತಷ್ಟು ಪ್ರಖರವಾಗಿಸಿದೆ. ಭಾರತದ ಮೊದಲ ಆಕಾಶವಾಣಿ ಎಂಬ ಕೀರ್ತಿಗೆ ಉದ್ಯಾನ ನಗರಿ “ಮೈಸೂರು ಆಕಾಶವಾಣಿ” ಒಂದು ರೀತಿಯಲ್ಲಿ ಮುನ್ನುಡಿಯಾಗಿ ಎಲ್ಲರ ಕನ್ನಡಿಯಾಗಿದೆ.ರಾಜ್ಯದಲ್ಲಿ 14ಕ್ಕೂ ಹೆಚ್ಚು ಆಕಾಶವಾಣಿ ಕೇಂದ್ರಗಳು ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿವೆ. ಜೊತೆಗೆ ತಂತ್ರಜ್ಞಾನ ಬೆಳದಂತೆ ಎಫ್ ಎಂ ಕೇಂದ್ರಗಳು ಕೂಡ ಆಗಿ ಮತ್ತಷ್ಟು ಕಾರ್ಯಕ್ರಮದ ಪ್ರಸಾರದ ವಿಸ್ತರಣೆಯಾಗಿದೆ. ಆಕಾಶವಾಣಿಯಲ್ಲಿ ಸೃಷ್ಟಿಯಾಗುತ್ತಿರುವ ಸಾಹಿತ್ಯ ನಿಜಕ್ಕೂ ಅಮೋಘವಾದದ್ದು. ಆಕಾಶವಾಣಿಯಿಂದ ಅನೇಕರು ತಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡಿದ್ದಾರೆ.

ಈ ಸಮಯದಲ್ಲಿ ನಾವು ನಮ್ಮ ಮಕ್ಕಳಿಗೆ ರೇಡಿಯೋ ಕೇಳುವುದನ್ನು ರೂಢಿಗೊಳಿಸಬೇಕು. ರೇಡಿಯೋ ಈಗ ಶಿಕ್ಷಣ ಕ್ಷೇತ್ರದಲ್ಲೂ ಕೂಡ ಹೊಸ ಕ್ರಾಂತಿಯನ್ನು ಉಂಟುಮಾಡಿದೆ. ಅನೇಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ನೆರವಾಗುತ್ತಿವೆ.ಅದರಲ್ಲೂ ಕೋವಿಡ್ ಸಮಯದಲ್ಲಿ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೇಡಿಯೋ ಪ್ರಸಾರ ಮಾಡಿದೆ. ನಾವು ಮೊಬೈಲ್ ಇನ್ನಿತರ ವ್ಯರ್ಥ ಸಮಯವನ್ನು ಕಳೆಯುವುದರ ಬದಲು ರೇಡಿಯೋವನ್ನು ದಿನನಿತ್ಯ ಸ್ವಲ್ಪಮಟ್ಟಿಗೆ ಕೇಳುತ್ತಾ ಬಂದರೆ ನಮ್ಮ ಜೀವನವನ್ನೇ ಬದಲಾಯಿಸಿಬಿಡುತ್ತದೆ! ಬನ್ನಿ ಇವತ್ತಿನಿಂದಾದರೂ ನಾವು ರೇಡಿಯೋವನ್ನು ನಿರಂತರವಾಗಿ ಕೇಳುತ್ತಾ ಹೋಗೋಣ. ಅದು ಪ್ರಸಾರ ಮಾಡುವ ವೈವಿಧ್ಯಮಯ ಕಾರ್ಯಕ್ರಮಗಳ ಸವಿ ಸವಿಯೋಣ.

ಮತ್ತೊಮ್ಮೆ ನನ್ನೆಲ್ಲಾ ಆತ್ಮೀಯ ಕೇಳುಗರಿಗೆ, ಸಿಬ್ಬಂದಿ ವರ್ಗದವರಿಗೆ, ಅಧಿಕಾರಿ ವರ್ಗದವರಿಗೆ, ತಂತ್ರಜ್ಞರಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ… ಜೊತೆಗೆ ಒಂದು ಕಾರ್ಯಕ್ರಮದ ಪ್ರಾರಂಭದಿಂದ ಅಂತ್ಯದ ವರೆಗೂ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತಿರುವ ಪ್ರತಿಯೊಬ್ಬರಿಗೂ “ರಾಷ್ಟ್ರೀಯ ಪ್ರಸಾರ ದಿನ”ದ ಹಾರ್ದಿಕ ಶುಭಾಶಯಗಳು.

-ಕಾಳಿಹುಂಡಿ ಶಿವಕುಮಾರ್ ಮೈಸೂರು.

10 Responses

  1. ಆಶಾ ನೂಜಿ says:

    ಉತ್ತಮ ಮಾಹಿತಿ ನೀಡಿದ್ದೀರಿ ಸರ್ ಹೌದು ರೇಡಿಯೋ ಉತ್ತಮ ಮಾಧ್ಯಮ ಮೊಬೈಲ್ನಲ್ಲಿ ಕಾಲಹರಣ ಮಾಡುವ ಬದಲು ಆಲಿಸುವ ಈ ರೇಡಿಯೋ ಉತ್ತಮ

  2. ಅತ್ಯಂತ ಆಪ್ತವಾಗಿ ಮೂಡಿಬಂದಿದೆ ಲೇಖನ…ರೇಡಿಯೋ ನನ್ನ ಅಚ್ಚು ಮೆಚ್ಚಿನ ಸಂಗಾತಿ…ಈಗಲೂ..ನನಗಿಷ್ಟವಾದ ಕಾರ್ಯಕ್ರಮ ಗಳನ್ನು ಕೇಳುತಿರುತ್ತೇನೆ..ಸಾರ್.. ವಂದನೆಗಳು.

    • ನೀವು ಇಷ್ಟವಾದ ಕಾರ್ಯಕ್ರಮಗಳನ್ನು ಕೇಳುವುದರ ಜೊತೆಗೆ ನೀವು ಕೂಡ ಭಾಗವಹಿಸುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ ಮೇಡಂ. ಮಹಿಳಾ ರಂಗ, ಚಿಂತನ, ಇನ್ನಿತರ ಕಾರ್ಯಕ್ರಮಗಳಲ್ಲಿ ನಿಮ್ಮ ಭಾಗವಹಿಸುವಿಕೆ ನಮ್ಮಂತಹ ಕಿರಿಯರಿಗೆ ಸ್ಪೂರ್ತಿಯ ಸೆಲೆಯಾಗಿದೆ ಮೇಡಂ. ನಿಮಗೆ ಧನ್ಯವಾದಗಳು.

  3. ನಯನ ಬಜಕೂಡ್ಲು says:

    ಸೊಗಸಾದ, ಮಾಹಿತಿಪೂರ್ಣ ಲೇಖನ ಸರ್. ಕಾಲ ಬದಲಾಗಿರಬಹುದು, ಆದರೆ ಕಾಲದ ಜೊತೆಗೆ ಕೆಲವೊಂದು ಹವ್ಯಾಸಗಳು ಇನ್ನೂ ಬದಲಾಗಿಲ್ಲ. ಅದರಲ್ಲಿ ರೇಡಿಯೋ ದಲ್ಲಿ ಬರುವ ಕಾರ್ಯಕ್ರಮಗಳನ್ನು ಆಲಿಸುವುದು ಕೂಡಾ ಒಂದು.

    • ನಿಮ್ಮ ಮಾತು ನೂರಕ್ಕೆ ನೂರು ನಿಜ. ಜೊತೆಗೆ ಇಲ್ಲಿ ಬರುವ ಐದು ನಿಮಿಷದ ಕಾರ್ಯಕ್ರಮ ಆಗಿರಬಹುದು,. ಅರ್ಧ ಗಂಟೆಯ ಕಾರ್ಯಕ್ರಮ ಆಗಿರಬಹುದು, ಎಲ್ಲವೂ ಕೂಡ ಮೌಲಿಕ, ಮಾಹಿತಿದಾಯಕ. ಆಕಾಶವಾಣಿಯಲ್ಲಿ ಬರುವ ಪ್ರತಿಯೊಂದು ಸಾಹಿತ್ಯವು ಕೂಡ ಪುಸ್ತಕ ರೂಪದಲ್ಲಿ ಬರುವಂತಾಗಬೇಕು.. ನಿಮಗೆ ಧನ್ಯವಾದಗಳು ಮೇಡಂ.

  4. ಶಂಕರಿ ಶರ್ಮ says:

    ನನ್ನಂತಹ ರೇಡಿಯೊ ಪ್ರಿಯರಿಗೆಲ್ಲರಿಗೂ ಆಪ್ತವೆನಿಸುವ ಬರಹ ಚೆನ್ನಾಗಿದೆ.

    • ನಿಮ್ಮ ಚಿಕ್ಕ ಚೊಕ್ಕ ವಿಮರ್ಶೆಗೆ ತುಂಬ ತುಂಬ ಧನ್ಯವಾದಗಳು. ರೇಡಿಯೋದಿಂದ ನಾನು ಬರೆಯುವುದನ್ನು, ಮಾತನಾಡುವುದನ್ನು, ಮತ್ತು ಹಾಡುವುದನ್ನು ಕೂಡ ಕಲಿತಿದ್ದೇನೆ. ರೇಡಿಯೋ ತಾನು ಬೆಳೆದು ತನ್ನ ಸುತ್ತಮುತ್ತಲಿನ ಎಲ್ಲರನ್ನು ಬೆಳೆಸುತ್ತಾ ಹೋಗುತ್ತದೆ. ಅದರಿಂದಾಗಿ ರೇಡಿಯೋ ಎಂದಿಗೂ ಕೂಡ ಜನ-ಮನದ ಆಪ್ತ ಸಂಗಾತಿ.

  5. Padma Anand says:

    ರೇಡಿಯೋ ಕುರಿತಾದ ಮಾಹಿತಿಪೂರ್ಣ, ಆಪ್ತ, ಚಂದದ ಬರಹ.

  6. ನಿಮ್ಮ ಕಾರ್ಯಕ್ರಮವನ್ನು ಕೂಡ ನಾವು ರೇಡಿಯೋದಲ್ಲಿ ಕೇಳಿದ್ದೇನೆ. ಜೊತೆಗೆ ನಿಮ್ಮ ದಂಪತಿಗಳ ಸಾಹಿತ್ಯ ಸೇವೆ ಇದೇ ರೀತಿ ನಿರಂತರವಾಗಿ ಮುಂದುವರಿಯುತ್ತಿರಲಿ ಮೇಡಂ. ನಿಮಗೆ ತುಂಬಾ ತುಂಬಾ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: