ಮುಕ್ತಕಗಳು
ಗೆಲುವಿಹುದು ಬಾಳಿನಲಿ ಸಾಗುತಿರೆ ಮುಂದಕ್ಕೆ
ಬಲಹೀನನಾಗದೆಯೆ ಛಲದಿ ನೀ ಬದುಕು
ಕೆಲಸಗಳು ಕೆಡದಂತೆ ಕಾಯುತಿರೆ ಭಗವಂತ
ಫಲ ಸಿಗುವುದದು ಖಚಿತ ಬನಶಂಕರಿ
ಅಪರಂಜಿಯಂತಿರುವ ಗುಣವ ಹೊಂದಲು ಬೇಕು
ಉಪಕಾರ ಮಾಡುತಲಿ ಅಸಹಾಯ ಜನಕೆ
ಕಪಟ ಮನವನು ತೊರೆದು ಕಾಯಕವ ಮಾಡುತಿರೆ
ತಪವದುವೆ ಜೀವನದಿ ಬನಶಂಕರಿ
ಮುತ್ತಿನಾ ಮಾತುಗಳು ಮನಕೆ ಹಿತವಾಗಿರಲು
ಸುತ್ತಲಿನ ಜನಕೆ ಮುದ ನೀಡುವವು ನಿತ್ಯ
ಕತ್ತಲನು ತೊಲಗಿಸುತ ಬೆಳಕ ಪಸರಿಸುತಿರುವ
ಚಿತ್ತವಿರುವುದೆ ಚೆನ್ನ ಬನಶಂಕರಿ
ಕಹಿಮಾತು ಕುಹಕಗಳ ಕಡೆಗಣಿಸಿ ಸಾಗುತಿರು
ಸಹಿಸುತಲಿ ಎಲ್ಲವನು ಶಾಂತಮನದಿಂದ
ಸಹಕರಿಸು ಸಕಲರಿಗು ಸಕಲ ಕಾಯಕಗಳಲಿ
ಮಹಿಯೊಳಗೆ ಸಂತಸದಿ ಬನಶಂಕರಿ
ಆಡಿಸುವ ಪರಮೇಶ ಗೊಂಬೆಯಂತೆಯೆ ನಮ್ಮ
ರಾಡಿಯಾಗಿಸುತ ತಿಳಿ ಮನದ ಕೊಳವ
ಗಾಡಿಯದು ಜೀವನದ ಪಥದಲ್ಲಿ ಚಲಿಸಲ್ಕೆ
ಮಾಡುತಿರು ಕಾಯಕವ ಬನಶಂಕರಿ
-ಶಂಕರಿ ಶರ್ಮ, ಪುತ್ತೂರು.
ಮುದನೀಡುವುದಷ್ಟೇ ಅಲ್ಲದೆ ನೀತಿಭೋದಕವಾಗಿವೆ ಮುಕ್ತ ಕಗಳು ಶಂಕರಿ ಮೇಡಂ.
ಪ್ರೀತಿಯ ಸ್ಪಂದನೆಗೆ ವಂದನೆಗಳು…ನಾಗರತ್ನ ಮೇಡಂ.
ಸುಂದರ ಮುಕ್ತಕಗಳು
ಪ್ರೀತಿಯ ಪ್ರತಿಕ್ರಿಯೆಗೆ ನಮನಗಳು…ನಯನಾ ಮೇಡಂ.
ಕವನ ತುಂಬಾ ಚೆನ್ನಾಗಿದೆ ಶಂಕರಿ ಅಕ್ಕ
ದಾರಿದೀಪವಾಗಬಲ್ಲ ಸವಿಮಾತುಗಳು ಮುಕ್ತಕಗಳಲ್ಲಿ ಹಾಸುಹೊಕ್ಕಾಗಿ ಮುದ ನೀಡಿದವು.