
ತಳುಕು ಬಳುಕು ತೋರಿಸಿ
ಬಳಿಗೆ ಬಾರದಿರುವೆಯಾ..
ಮಳಿಗೆ ಮೇಲೆ ನರ್ತಿಸಿ
ಕೆಳಗಿಳಿವುದ ಮರೆತೆಯಾ..
ಏನು ಸದ್ದು ಯಾಕದು..
ಹುಸಿಮುನಿಸಿನ ಗಡಿಬಿಡಿ
ಬಾನಿನಂತಪುರದಲಿ
ಕಸಿವಿಸಿಗಳ ದಾಂಗುಡಿ
ಜಳಪಿಸುವುದದೇನನು
ಪುಳಕ ಪುಟಿಯುತಿರುವುದು
ಕರಿಯ ಬಾನ ಮರೆಯಲಿ
ವ್ಯವಹಾರವದೇನದು??
ಮುಗಿಲು ದಿಗಿಲುಗೊಳ್ಳುತ
ಭೋರ್ಗರೆಯುತ ಅಳುತಿದೆ
ದುಃಖ ನಿಲ್ಲುತಿಲ್ಲವೋ
ಸಂತೈಸುವರಿಲ್ಲದೆ…
ಇಳೆಯು ನಾಚಿ ಸೂಸಿದೆ
ಮಕರಂದದ ಘಮ ಸುಮ
ನೊಂದು ಬೆಂದ ಬಸವಳಿಕೆ
ನೀಗುವಂತ ಸಂಭ್ರಮ
ಹೊತ್ತು ಸರಿಯುತಿದ್ದರೂ
ಕತ್ತಲಾಟ ನಿಲ್ಲದು
ಪ್ರಕೃತಿಯೊಡಲ ಒಲವ ಹೂಟ
ಮೈ ಮನವನು ಸೆಳೆವುದು
ಒಲಿದು ಬರಲಿ ಭಾಸ್ಕರ
ಬೆಳಕ ಬಿಲ್ಲು ಹಿಡಿಯುತ
ನೋವ ಇರಿದು ನಲಿವು ಚಿಗುರಿ
ನೆಲೆಗೊಳ್ಳಲಿ ಸಂತತ
-ವಿದ್ಯಾಶ್ರೀ ಅಡೂರ್ ,ಮುಂಡಾಜೆ
ಬೆಳಕ ಬಿಲ್ಲು ಎಂಬುದು ಸುಂದರ ಕಲ್ಪನೆ. ಕವಿ ಕಾಣದ್ದನೂ ಕವಯಿತ್ರಿ ಕಾಣುವಳೆಂಬ
ಮಾತು ಈಗ ನನ್ನಿಂದ ಆಯಾಚಿತ ಬಂತು. ಇಂಥವುಗಳ ರಚನೆ ಕಷ್ಟಕರ. ಪ್ರತಿಭೆ
ಇದ್ದರಷ್ಟೇ ಸಾಧ್ಯ. “ಪ್ರತಿಭಾ ನವನವೋಲ್ಲೇಖಶಾಲಿನೀ” ಎಂಬ ರಾಜಶೇಖರನ ಮಾತು
ನೆನಪಾಯಿತು. ಅಭಿವಂದನೆ ಮೇಡಂ
ತುಂಬಾ ಧನ್ಯವಾದಗಳು ನಿಮಗೆ
ಬೆಳಕಬಿಲ್ಲು..ಸುಂದರ..ಕಲ್ಪನೆಯ..ಕವನ..ಚಂದವಾಗಿ..ಮೂಡಿಬಂದಿದೆ…ಮೇಡಂ
ಚಂದದ ಕವನ
ಆರ್ಭಟಿಸುವ ಮಳೆ, ತಂಪಾದ ಇಳೆ, ಭಾಸ್ಕರನ ಆಗಮನದ ನಿರೀಕ್ಷೆ…ಎಲ್ಲವೂ ಮೇಳೈಸಿದ ಸೊಗಸಾದ ಕವನ ಮೇಡಂ.