ಮುಕ್ತಕಗಳು
ಅರೆಘಳಿಗೆ ನಿರ್ಣಯವು ಜೀವವನೆ ತೆಗೆಯುವುದು
ತರುವುದದು ಚಿಂತೆಯನು ಒಡನಾಡಿಗಳಿಗೆ
ಕರೆ ಬರುವ ತನಕವೂ ಕಾಯುವುದು ಸಹನೆಯಲಿ
ಹರಿಚಿತ್ತ ಸತ್ಯವದು ಬನಶಂಕರಿ
ಕೋಪವದು ಮನದಲ್ಲಿ ಕುದಿಯುತಿಹ ಲಾವವದು
ತಾಪವನು ಹಿಂಗಿಸಲು ಸಹನೆಯದು ಇರಲಿ
ದೀಪವದು ತನ್ನುರಿಯ ಶಾಂತಿಯಲಿ ಕೊಡುವಂತೆ
ರೂಪುಗೊಳಿಸುತ ಬಾಳು ಬನಶಂಕರಿ
ಮಾನವಗೆ ಧನದಾಸೆ ಅತಿರೇಕವಿರುತಿರಲು
ಮಾನ ಹೋದರು ಬಿಡನು ಸಂಪತ್ತಿನಾಸೆ
ದಾನ ನೀಡಲು ಮನವು ಶಾಂತಿಯನು ಪಡೆಯುವುದು
ದೀನರಿಗೆ ಕರುಣೆಯಲಿ ಬನಶಂಕರಿ
ಪರರಲ್ಲಿ ಅತಿಯಾದ ನಂಬಿಕೆಯು ತರವಲ್ಲ
ತರತರಹ ಜನರಿಹರು ಎಲ್ಲೆಲ್ಲು ನೋಡು
ವರವಹುದು ಸುಜನರನು ಗೆಳೆತನದಿ ಕಾಣುವುದು
ಬರಿದೆ ಮರುಗುವುದಲ್ಲ ಬನಶಂಕರಿ
ಕಾಣದಾ ಕೈಯೊಂದು ಕುಣಿಸುತಿದೆ ಸಕಲರನು
ಕಾಣುತಿರೆ ರಂಗದಲಿ ಬಹುವಿಧದ ನಟರ
ವೇಣುವನು ನುಡಿಸುತಿಹ ಮಾಧವಗೆ ನಮಿಸುತಲಿ
ಜಾಣಳಾಗುತ ಬದುಕು ಬನಶಂಕರಿ
-ಶಂಕರಿ ಶರ್ಮ., ಪುತ್ತೂರು.
ಅರ್ಥಪೂರ್ಣ ವಾದ ಮುಕ್ತಕಗಳನ್ನು..
ನೀಡಿ…ಚಿಂತನೆಗೆ ಹಚ್ಚಿ ದ ನಿಮಗೆ ಧನ್ಯವಾದಗಳು ಶಂಕರಿ ಮೇಡಂ
ಧನ್ಯವಾದಗಳು ನಾಗರತ್ನ ಮೇಡಂ.
ಸೊಗಸಾಗಿದೆ ಮೇಡಂ
ಧನ್ಯವಾದಗಳು ನಯನಾ ಮೇಡಂ.
ಒಂದೊಂದು ಮುಕ್ತಕವೂ ಮಾನವೀಯ
ಮೌಲ್ಯಗಳ ಬುತ್ತಿಯಂತಿದೆ ವಂದನೆಗಳು
Nice word for present situation.
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು
ಒಂದೊಂದು ಮುಕ್ತಕಗಳು ನೀತಿಯುಕ್ತವಾಗಿವೆ. ಬದುಕಲು ಮಾರ್ಗದರ್ಶನ ನೀಡುತ್ತವೆ. ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿವೆ. ವಂದನೆಗಳು ಮೇಡಂ
ತಮ್ಮ ಸಹೃದಯೀ ನುಡಿಗಳಿಗೆ ಶರಣೆಂಬೆ.
ತಮ್ಮ ಮೆಚ್ಚುಗೆಯ ನುಡಿಗಳಿಗೆ ವಂದನೆಗಳು ಗಾಯತ್ರಿ ಮೇಡಂ.