ಕಾದಂಬರಿ : ಕಾಲಗರ್ಭ – ಚರಣ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

”ಅಯ್ಯೊ ಶಿವನೇ ! ಎಲ್ಲಿ ಕಳೆದು ಹೋಗಿದ್ದೀರಿ? ನಿಮ್ಮ ಗೆಳೆಯರೊಡನೆ ಆಡಿದ ಮಾತುಗಳನ್ನು ಮೆಲುಕು ಹಾಕುತ್ತಿದ್ದೀರಾ?” ಎಂದರು ಬಸಮ್ಮ.
”ಹಾಗೇನಿಲ್ಲ ಕಣೇ, ನನಗೇನು ಅಂತಾ ಹಸಿವೆ ಕಾಣಿಸುತ್ತಿಲ್ಲ. ಸ್ವಲ್ಪ ಹೊತ್ತು ಕಾಯ್ದು ಒಟ್ಟಿಗೇ ಊಟ ಮಾಡೋಣ” ಎಂದರು.
ಅವರಿಗೆ ಯಾವಾಗಲೂ ಒಬ್ಬರೇ ಕುಳಿತು ಊಟ ಮಾಡುವ ಅಭ್ಯಾಸ ಇಲ್ಲದ್ದು ತಿಳಿದಿದ್ದರೂ ಬೆಳಗಿನಿಂದ ಖಾಲಿಹೊಟ್ಟೆಯಲ್ಲಿ ಇದ್ದಾರಲ್ಲಾ ಎಂದು ಬಸಮ್ಮನವರ ಕರುಳು ಚುರ್ರೆಂದಿತ್ತು. ”ಹೋಗಲಿ ಸ್ವಲ್ಪ ಕಷಾಯ ಮಾಡಿ ತರಲೇ?” ಎಂದು ಕೇಳಿದರು.
ನಾನು ಏನೂ ತೆಗೆದಕೊಳ್ಳದಿರುವುದರ ಬಗ್ಗೆ ಕನಿಕರ ಬಂದಂತಿದೆ. ನನ್ನವಳಿಗೆ ಬೇಸರ ಮಾಡಬಾರದೆಂದು ”ಆಯಿತು ಒಂದರ್ಧ ಲೋಟ ಮಾಡಿಕೊಂಡು ಬಾ” ಎಂದು ಹೇಳಿದರು ನೀಲಕಂಠಪ್ಪ.

‘ಸರಿ’ ಎಂದು ಲಗುಬಗೆಯಿಂದ ಹೊರಟವರಿಗೆ ಮೊಮ್ಮಗಳು ದೇವಿ ಎದುರಾದಳು. ಅವಳ ಕೈಯಲ್ಲಿ ಲೋಟ. ‘ಅದೇನು?’ ಕೇಳಿದರು ಬಸಮ್ಮ.” ಅದೇ ಅಜ್ಜಿ, ಪಾಪ ತಾತ ಬೆಳಗಿನಿಂದೇನು ತಿನ್ನದೆ ಇದ್ದರೂ ಈಗಲೂ ಊಟಕ್ಕೇಳದೆ ಇರುವುದರಿಂದ ನೀವು ವಿಲವಿಲ ಒದ್ದಾಡುತ್ತಿರುವುದನ್ನು ನೋಡಲಾಗದೇ ನಿಮಗೆ ಸಮಾಧಾನವಾಗಲೆಂದು ನಾನೇ ಕಷಾಯ ಮಾಡಿಕೊಂಡು ತಂದೆ. ಹಿಡಿಯಿರಿ. ನೀವೇ ನಿಮ್ಮ ಲೈಫ್‌ಪಾರ್ಟನರ್‌ಗೆ ಕೊಡಿ” ಎಂದು ಲೋಟವನ್ನು ಅಜ್ಜಿಯ ಕೈಗೆ ವರ್ಗಾಯಿಸಿದಳು. ಮೊಮ್ಮಗಳ ಕೈಯಿಂದ ಲೋಟ ತೆಗೆದುಕೊಂಡು ”ಆಡು..ಆಡು..ಇನ್ನೆಷ್ಟು ದಿನ ಆಡುತ್ತೀ, ಆಮೇಲೆ ನಾನೂ ನೋಡ್ತೀನಿ” ಎಂದರು ಬಸಮ್ಮ.

”ಹ್ಹ..ಹ್ಹ ಆಡುತ್ತಲೇ ಇರುತ್ತೇನೆ. ಎದುರಿಗೇ ಇರುತ್ತೇನಲ್ಲಾ, ಮನೆ ಬೇರೆಯಷ್ಟೇ” ಎಂದು ನಗುತ್ತಾ ಅಜ್ಜಿಯ ಎದುರಿನಲ್ಲಿದ್ದ ಕುರ್ಚಿಯ ಮೇಲೆ ಕುಳಿತಳು ಮಾದೇವಿ.

ಇತ್ತ ಗೆಳೆಯನನ್ನು ಬೀಳ್ಕೊಂಡು ಮನೆಗೆ ಬಂದ ಗಂಗಾಧರಪ್ಪನವರಿಗೆ ಬಾಗಿಲಲ್ಲೇ ಎದುರಾದವನು ಮಹೇಶ. ”ಇದೇನಪ್ಪಾ ! ಬೆಳಗ್ಗೆ ಬೆಳಗ್ಗೇನೇ ಜಮೀನಿನ ಹತ್ತಿರ ಹೋಗಿದ್ದಿರಂತೆ. ಏನು ಸಮಾಚಾರ? ಯಾರಿಂದಾದರೂ ಫೋನ್ ಬಂದಿತ್ತಾ? ಅರ್ಜೆಂಟಿದ್ದರೆ ನನಗೆ ಹೇಳಬಹುದಾಗಿತ್ತಲ್ಲಾ” ಎಂದ ಮಹೇಶ.

”ಹಾ..ಫೋನ್ ಕಿರ್ ಅನ್ನೋಕೂ ಬಿಡೋಲ್ಲಪ್ಪಾ. ಎಲ್ಲಾ ಮೆಸೇಜ್ ಮಾಡ್ತಾರೆ. ಅವಳಿದ್ದಾಳಲ್ಲಾ ಮಾದೇವಿ ಅವರ ತಾತನಿಗೆ ಫೋನಿನ ಬಳಕೆ ಬಗ್ಗೆ ಸಾಕಷ್ಟು ಕಲಿಸಿಕೊಟ್ಟವಳೆ. ಅದರಿಂದ ಇವರಿಗೂ ವರ್ಗಾಯಿಸಿಕೊಂಡಿದೆ. ನಮ್ಮೆದುರಿನಲ್ಲಿ ಮಾತನಾಡಿದ್ದು ಸಾಕಾಗದೆ ಅವರಿಬ್ಬರೂ ಕಾನಾಸಿ ಜಾಗ ಅದೇ ಶಿವಪ್ಪನ ಗುಡಿಗೆ ಹೋಗಿದ್ದರು. ಬಹುಶಃ ಮೆಸೇಜ್ ಮಾಡಿದ್ದರೇನೋ. ಅದೇನು ಅಷ್ಟೊಂದು ಮಾತನಾಡುತ್ತಾರೋಪ್ಪ ನಾ ಬೇರೆ ಕಾಣೆ. ಸ್ನಾನವೂ ಮಾಡದೆ ಕಂಬಿಕಿತ್ತರು. ಬೆಳಗ್ಗೆ ಗಂಜಿಯೂ ಕುಡಿದಿಲ್ಲ. ಪೂಜೆಗೆ ಒಂದು ಗಂಟೆಯಾದರೂ ಬೇಕು ಅಂತಾ ನೀಲಕಂಠಪ್ಪನವರನ್ನು ಅಣಕಿಸುತ್ತಿದ್ದರು. ಆಹಾ ನನ್ನ ಗೆಳೆಯ ಶಿವನನ್ನೇ ಧರೆಗಿಳಿಸಿಬಿಡುತ್ತಾನೆ ಎನ್ನುವಷ್ಟು ಪೂಜೆ, ಹಾಗೇ ಹೀಗೇ ಅಂತ. ಈಗಿವರು ಎಲ್ಲ ಜವಾಬ್ದಾರಿಯನ್ನು ನೀನು ತೆಗೆದುಕೊಂಡಮೇಲೆ ಇದ್ದಬದ್ದ ಶ್ಲೋಕಗಳು, ಹಾಡುಗಳು, ಮಂತ್ರಗಳು ಒಂದೇ ಎರಡೇ ಪುಂಖಾನುಪುಂಖವಾಗಿ ಬಾಯಿಂದ ಬರುತ್ತಿವೆ. ಹೊತ್ತುಗೊತ್ತಿನ ಪರಿವೇ ಇಲ್ಲದಂತೆ ಪೂಜೆಯಲ್ಲಿ ಮುಳುಗಿ ಹೋಗುತ್ತಾರೆ. ಅಬ್ಬಾ ! ನಾನೇ ಕಾಯ್ದು ಸಾಕಾಗಿ ಕೂಗುತ್ತೇನೆ ದೇವರ ಮನೆಯಲ್ಲೇ ಐಕ್ಯರಾಗಿಬಿಟ್ಟರೇನೋ ಎನ್ನುವ ಅನುಮಾನದಿಂದ” ಎಂದು ವರದಿ ಮಾಡಿದರು ಗೌರಮ್ಮ.

ಅವರಿಬ್ಬರ ಮಾತುಗಳು ತಮಗೆ ಕೇಳಿಸಲಿಲ್ಲವೇನೋ ಎಂಬಂತೆ ”ಈಗೇನು ತಾಯಿ ಮಗ ನನಗೆ ಜಾಗ ಬಿಡುತ್ತೀರಾ” ಕೇಳಿದರು ಗಂಗಾಧರಪ್ಪ.

”ನೋಡಿದೆಯಲ್ಲಪ್ಪಾ ನಿಮ್ಮಪ್ಪನ ಮಾತಿನ ವರಸೆ” ಎಂದು ಪಕ್ಕಕ್ಕೆ ಸರಿದು ಅವರಿಗೆ ಒಳಬರಲು ಜಾಗ ಬಿಟ್ಟರು.
ತಾಯಿಯ ಮಾತಿಗೆ ಹುಸಿನಗೆ ನಗುತ್ತಾ ”ಸರಿಯಾಗಿ ವಿಚಾರಿಸಿಕೊಳ್ಳಮ್ಮಾ. ನಾನು ಜಮೀನಿನ ಕಡೆಗೆ ಹೊರಟೆ” ಎಂದು ಹೇಳುತ್ತಾ ಬಾಗಿಲು ದಾಟಿದ ಮಹೇಶ.

ಮಗನನ್ನು ಕಳುಹಿಸಿ ಮುಂಭಾಗಿಲು ಹಾಕಿ ಒಳಬಂದ ಗೌರಮ್ಮ ತನ್ನವರನ್ನು ಅಲ್ಲೆಲ್ಲೂ ಕಾಣದೆ ಎಲ್ಲಿ ಹೋದರೆಂದುಕೊಳ್ಳುವಷ್ಟರಲ್ಲಿ ”ಅಕ್ಕಾ ಅಯ್ಯಾವರು ಆಗಲೇ ಸ್ನಾನಕ್ಕೋದರು” ಎಂದು ಹೇಳಿದಳು ಮಂಗಳಾ.
ಅವಳ ಮಾತು ಕೆಳಿ ನಸುನಗುತ್ತಾ ”ಇಲ್ಲಿದ್ದರೆ ಮತ್ತೇನಾದರೂ ಹೇಳಿ ಕೆಣಕುತ್ತಾಳೆಂದು ಪೇರಿಕಿತ್ತಿದ್ದಾರೆ, ಹೋಗಲಿ ಹೆಚ್ಚು ರೇಗಿಸುವುದು ಬೇಡ. ಅವರು ಪೂಜೆ ಮುಗಿಸುವಷ್ಟರಲ್ಲಿ ಉಳಿದಿರುವ ಕೆಲಸ ಮುಗಿಸೋಣ ಬಾ” ಎಂದು ಅವಳೊಡನೆ ಅಡುಗೆ ಮನೆ ಸೇರಿದರು.

ಊಟಮಾಡಿ ಮಲಗಿದ್ದ ನೀಲಕಂಠಪ್ಪನವರಿಗೆ ಹೊರಗಡೆ ಹಾಲಿನಲ್ಲಿ ಏನೋ ಗಲಗಲ ಸದ್ದು ಕೇಳಿಸಿತು. ಯಾರೋ ಬಂದಹಾಗಿದೆ ಎಂದುಕೊಂಡು ಗಡಿಯಾರದ ಕಡೆ ನೋಡಿದರು. ಇನ್ನೂ ನಾಲ್ಕು ಗಂಟೆ. ಗುರುಗಳ ಮನೆಗೆ ಹೋಗಲು ಬೇಕಾದಷ್ಟು ಸಮಯವಿದೆ. ಯಾರು ಬಂದಿರಬಹುದು? ಮಲಗಿದ್ದಲ್ಲಿಂದಲೇ ಆಲಿಸಿದರು. ಅರೆ ಗಂಗಾಧರಪ್ಪನ ಹೆಂಡತಿ ಗೌರಮ್ಮನವರ ಸ್ವರ. ಅದರ ಜೊತೆಗೇ ಮತ್ತೊಬ್ಬರಾರದೋ ಧ್ವನಿ. ಬಹಳ ಪರಿಚಿತವೆನ್ನಿಸಿತು. ಏನೋ ಅನುಮಾನ ಬಂದಂತಾಗಿ ಎದ್ದು ರೂಮಿನಿಂದ ಹೊರಗೆ ಬಂದರು. ಹಾಲಿನಲ್ಲಿ ಹಾಸಿದ್ದ ಮಂದಲಿಗೆಗಳ ಮೇಲೆ ಗೆಳೆಯನ ಮಡದಿ ಗೌರಮ್ಮ, ಕೊನೆಯ ಮಗಳು ಕಾತ್ಯಾಯಿನಿ, ತನ್ನಾಕೆ ಬಸಮ್ಮ, ಮಂಗಳ ಎಲ್ಲರೂ ಏನೋ ಗಹನವಾದ ವಿಷಯದ ಬಗ್ಗೆ ಚರ್ಚಿಸುತ್ತಿದ್ದರೆಂದು ಅನ್ನಿಸಿತು. ಅವರೊಡನೆ ಮಾದೇವಿ, ಅವಳಕೈಯಲ್ಲಿ ಎಂತದ್ದೋ ಹಾಳೆಗಳು. ಅವುಗಳನ್ನು ಅತ್ತಿತ್ತ ತಿರುಗಿಸುತ್ತಾ ”ಅತ್ತೇ ಯಾವ ಮೂಲೆಯಲ್ಲಿ ಮುದುರಿ ಹಾಕಿದ್ದಿರಿ? ಇಂತಹ ಅವಸ್ಥೆಯಾಗಿದೆಯಲ್ಲಾ, ಇರಿ ಸ್ವಲ್ಪ ಇದನ್ನು ಲೈಟಾಗಿ ಇಸ್ತ್ರಿಮಾಡಿ ಇನ್ನೊಂದು ಕಾಪಿ ಜೆರಾಕ್ಸ್ ಮಾಡಿ ತರುತ್ತೇನೆ” ಎಂದು ತನ್ನ ರೂಮಿಗೆ ಹೋದಳು. ಬಾಗಿಲಲ್ಲೇ ನಿಂತು ಅದನ್ನು ನೋಡಿದರು. ಎಲ್ಲರೂ ಆ ಕಡೆಗೆ ಮುಖಮಾಡಿ ಕುಳಿತಿದ್ದರಿಂದ ಇವರು ನಿಂತಿರುವುದು ಅವರಿಗೆ ಕಾಣಲಿಲ್ಲ. ಇದೇನಿರಬಹುದು ಫೋನ್ ಇಲ್ಲದೆ ಜೊತೆಗೆ ಯಾರೂ ಇಲ್ಲದೆ ಧಿಢೀರ್ ಅಂತ ತಮ್ಮ ಮಗಳ ಆಗಮನ, ತಮ್ಮ ಮೊಮ್ಮಗಳ ಕೈಲಿದ್ದ ಕಾಗದವ್ಯಾವುದು. ಏಕೆಂದರೆ ಅವಳ ಜಾತಕ ಭದ್ರವಾಗಿ ತಮ್ಮ ತಿಜೋರಿಯಲ್ಲಿತ್ತು. ಬೆಳಗ್ಗೆ ನಾನೇ ಅದನ್ನು ತೆಗೆದಿಟ್ಟಿದ್ದೇನೆ. ತಮ್ಮ ಕುತೂಹಲವನ್ನು ಹತ್ತಿಕ್ಕಲಾಗದೆ ”ಏನು ಮಗಳೇ ಇದ್ದಕ್ಕಿದ್ದಂತೆ ಬರೋಣವಾಗಿದೆ” ಎನ್ನುತ್ತಾ ಅವರುಗಳಿದ್ದೆಡೆಗೆ ಆಗ ತಾನೇ ಎದ್ದು ಬಂದವರಂತೆ ಬಂದರು.

”ಎದ್ದಿರಾ? ಬನ್ನಿ ಅವಳನ್ನು ನಾನೇ ಫೋನ್‌ಮಾಡಿ ಕರೆಸಿದೆ” ಎಂದರು ಬಸಮ್ಮ.

”ನೆನ್ನೆಯಷ್ಟೇ ಮಕ್ಕಳು ತಮ್ಮ ಸಮ್ಮತಿಯನ್ನು ತಿಳಿಸಿದ್ದಾರೆ. ಇನ್ನೇನಿದ್ದರೂ ಗುರುಗಳ ಬಳಿ ಜಾತಕ ತೋರಿಸಿ ಲಗ್ನಗಳ ದಿನಾಂಕಗಳನ್ನು ಗುರ್ತುಹಾಕಿಸಿಕೊಂಡು ಬರಬೇಕು. ಏನಾದರೂ ದೋಷನಿವಾರಣೆಗೆ ಶಾಂತಿಪೂಜೆ ಅಂದರೆ ಅದನ್ನು ಮಾಡಬೇಕು. ಅ ನಂತರ ಎಲ್ಲರಿಗೂ ಒಟ್ಟಿಗೇ ತಿಳಿಸಿದರಾಗುತ್ತಿತ್ತು” ಎಂದರು.

”ಹಾ..ನೀವು ಹೇಳುವುದೂ ಸರಿಯಾದದ್ದೇ, ಆದರೆ ಗೌರಾ ನೀನೇ ಹೇಳು” ಎಂದರು ಬಸಮ್ಮ.
”ಅಣ್ಣಾ ಅದು ನಮ್ಮ ಮಕ್ಕಳ ಜೊತೆಯಲ್ಲೇ ಇನ್ನೊಂದು ತೆಕ್ಕೆ ಹಾಕ್ಕೊಂಡದೆ. ಎರಡು ಒಟ್ಟಿಗೆ ಆದರೆ ಒಳ್ಳೆಯದು ಅಂತ ಬಸಕ್ಕ ಕಾತ್ಯಾಯಿನಿಯನ್ನು ಕರೆಸಿಕೊಂಡಿದ್ದಾರೆ. ಏಕೆಂದರೆ” ಎಂದು ಪೀಠಿಕೆಯೊಡನೆ ಸುಬ್ಬಣ್ಣ, ಚಂದ್ರಿಕಾರ ವಿಷಯವನ್ನು ಚುಟುಕಾಗಿ ಹೇಳಿದರು ಗೌರಮ್ಮ.

”ವಾವ್ ! ಪರವಾಗಿಲ್ಲವೇ ! ಪಾಪದ ಹುಡುಗನಾಗಿ ಮನೆಗೆ ಬಂದ ಸುಬ್ಬು ಈ ಊರು, ಮನೆ,ಜೊತೆಗೆ ಬದುಕಿನ ಸಂಗಾತಿಯನ್ನು ತಾನೇ ಆರಿಸಿಕೊಳ್ಳುವಷ್ಟು ದಾಷ್ಟಿಕತೆ ಬಂದುಬಿಟ್ಟದೆ. ಇದಕ್ಕೆ ನನ್ನ ಮಗಳು ಏನೇಳ್ತಾಳೆ?” ಎಂದು ಕೇಳಿದರು ನೀಲಕಂಠಪ್ಪ.
”ಇದರಲ್ಲಿ ನನ್ನದೇನಿದೆ ಅಪ್ಪಯ್ಯ, ನನ್ನ ಮಗಳ ಇಷ್ಟಾನಿಷ್ಟವೇ ಮುಖ್ಯ. ಸುಬ್ಬಣ್ಣ ನಾವು ಮೊದಲಿನಿಂದಲೂ ನೋಡಿದ ಹುಡುಗ. ಕಷ್ಟಜೀವಿ, ಅಂತಃಕರಣವುಳ್ಳವನು. ಯಾವುದೇ ದುಶ್ಚಟಗಳೂ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇವಿ ಸೇರುವ ಮನೆಯಲ್ಲಿ ನನ್ನ ಮಗಳೂ ಸೇರಿದರೆ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುತ್ತಾರೆ. ಅಮ್ಮ ನನಗೆ ಫೋನ್ ಮಾಡಿದಾಗಲೇ ವಿಷಯವನ್ನು ನನ್ನ ಗಂಡನಿಗೆ ಹೇಳಿದೆ. ಅವರು ಮಾವ, ಅತ್ತೆಗೆ ಹೇಳಿ ಗುರುಗಳನ್ನು ಕೇಳಿಕೊಂಡು ಬಾ ಎಂದು ಜಾತಕವನ್ನು ಕೊಟ್ಟು ಸಂತೋಷವಾಗೇ ಕಳಿಸಿಕೊಟ್ಟರು. ಅದನ್ನೇ ಈಗ ದೇವಿ ತೆಗೆದುಕೊಂಡು ಹೋದದ್ದು” ಎಂದಳು ಕಾತ್ಯಾಯಿನಿ.

”’ಒಳ್ಳೆಯದೇ ಆಯಿತು ಬಿಡು, ಎಲ್ಲಾ ಒಂದೇಸಾರಿ ತೋರಿಸಿ ದಿನ ಗೊತ್ತುಮಾಡಿ ಜೈ ಅನ್ನಿಸಿಬಿಡೋಣ”ಎಂದರು ನೀಲಕಂಠಪ್ಪ.
”ಕೈಕಾಲು ಮುಖ ತೊಳೆದು ಬನ್ನಿ ಪಾನಕ ಮಾಡಿದ್ದೇನೆ. ಕುಡಿದು ಆರಾಮವಾಗಿ ಕುಳಿತಿರಿ. ಗುರುಗಳು ಇಲ್ಲಿಗೇ ಬರುತ್ತಾರೆ. ನಿಮ್ಮ ಗೆಳೆಯರು ಅವರನ್ನು ಕರೆತರಲು ಹೋಗಿದ್ದಾರೆ‌” ಎಂದರು ಬಸಮ್ಮ.
”ಓಹೋ ! ನಾನ ಮಲಗಿ ಏಳುವಷ್ಟರಲ್ಲಿ ಇಷ್ಟೆಲ್ಲಾ ನಡೆದಿದೆ. ಅಂದಮ್ಯಾಲೆ ನಾನ್ಯಾಕೆ ತಳ್ಳಿಹಾಕಲಿ’ ” ಎಂದುಕೊಂಡು ಹೆಂಡತಿ ಹೇಳಿದಂತೆ ಕೈಕಾಲು ಮುಖ ತೊಳೆದು ಮೇಲೊಂದು ಅಂಗಿ ಹಾಕಿಕೊಂಡು ಮುದುರಿದ್ದ ಪಂಚೆಯನ್ನು ಸರಿಯಾಗಿ ಉಟ್ಟರು. ತಮ್ಮ ತಿಜೋರಿಯಲ್ಲಿರಿಸಿದ್ದ ದೇವಿಯ ಜಾತಕ ಹೊರತಂದು ತಮ್ಮಬಳಿ ಇಟ್ಟುಕೊಂಡರು. ಅಷ್ಟರಲ್ಲಿ ಬಸಮ್ಮ ಕೊಟ್ಟ ನಿಂಬೆಹಣ್ಣಿನ ಪಾನಕ ಕುಡಿದು ಅಲ್ಲಿಯೇ ಇದ್ದ ಕುರ್ಚಿಯೊಂದರಲ್ಲಿ ಆಸೀನರಾದರು ನೀಲಕಂಠಪ್ಪ.

ಒಳಗೆ ಬಂದು ಮಾದೇವಿ ”ನೋಡಿ ಅತ್ತೇ, ನಿಮ್ಮ ಮಗಳ ಜಾತಕ ಮುದುರಿ ಮಂಕಾಗಿದ್ದುದು ಈಗ ಹೇಗೆ ಗರಿಗರಿಯಾಗಿ ಮಿಂಚುತ್ತಿದೆ. ಇದನ್ನು ನೀವಿಟ್ಟುಕೊಳ್ಳಿ. ಇನ್ನೊಂದು ಜೆರಾಕ್ಸ್ ಪ್ರತಿಯನ್ನು ಗುರುಗಳಿಗೆ ಕೊಡಿ” ಎಂದು ಕಾತ್ಯಾಯಿನಿಯ ಕೈಗೆ ಕೊಟ್ಟಳು.

”ಹ್ಹಾ..ತಾತನನ್ನು ಎಬ್ಬಿಸಿಕೊಂಡು ಬರುತ್ತೇನೆ. ಹಾಗೇ ಬಿಟ್ಟರೆ ನಾಳೆ ಬೆಳಗ್ಗೆಗೆ ಎದ್ದರೂ ಅಚ್ಚರಿಯೇನಿಲ್ಲ. ನೆನ್ನೆ ರಾತ್ರಿ ಅವರು ನಿದ್ರೆ ಮಾಡಿದ ಹಾಗೆ ಕಾಣೆ. ಇವತ್ತು ಹೊಟ್ಟೆಗೆ ಬಿಸಿಬಿಸಿ ಊಟ ಬಿದ್ದ ತಕ್ಷಣ ಸ್ವಲ್ಪ ಅತ್ತಿತ್ತ ನಡೆದಾಡಿ ಅವರ ರೂಮಿನ ಕಡೆ ತಿರುಗುವಷ್ಟರಲ್ಲಿ” ಎಂದು ಹೇಳುತ್ತಿದ್ದಂತೆ ಯಾರೋ ಅವಳ ಕಿವಿ ಹಿಂಡಿದಂತಾಯಿತು. ತಿರುಗಿ ನೋಡಿದರೆ ಅಜ್ಜಿ. ”ನಿನಗೆ ಅವರು ಮಾಡುತ್ತಿರುವ ಮುದ್ದು ಹೆಚ್ಚಾಯಿತು. ಆಹ ನಿನ್ನ ಕಣ್ಣಿಗೆ ಕಾಣದಷ್ಟು ಬಡಕಲ ಶರೀರವೇ ನಿಮ್ಮ ತಾತನದ್ದು. ಅವರಾಗಲೇ ಎದ್ದು ಸಿದ್ಧರಾಗಿ ಕುಳಿತಿದ್ದಾರೆ. ಏನು ಮಾಡುತ್ತೀ ಹೇಳು ಒಳಗೆ ಬಂದವಳು ಅತ್ತಿತ್ತ ಕಣ್ಣಹಾಯಿಸುವ ಅಭ್ಯಾಸವೇ ಇಲ್ಲ” ಎಂದು ಚುಡಾಯಿಸಿದರು.

”ಆಹಾ ನೀವು ತಾತನನ್ನು ಎಷ್ಟು ಬೇಕಾದರೂ ಛೇಡಿಸಬಹುದು, ರೇಗಿಸಬಹುದು, ಅಣಕಿಸಬಹುದು. ಅದೇ ಬೇರೆ ಯಾರಾದರೂ ತಮ್ಮ ಗಂಡನನ್ನು ಏನಾದರೂ ಅಂದರೆ ಅವರ ಗ್ರಹಚಾರ ಬಿಡಿಸಿಬಿಡುತ್ತೀರಿ‌” ಎಂದು ಅಜ್ಜಿಯಿಂದ ಕಿವಿ ಬಿಡಿಸಿಕೊಂಡು ತಾತನೆಡೆಗೆ ಓಡಿದಳು ಮಾದೇವಿ.

ಇದನ್ನು ನೋಡುತ್ತಾ ಶಾರದೆ ”ದೇವಿ , ಸದ್ಯಕ್ಕೆ ತಾತನವರ ವಿಷಯ ಬಿಟ್ಟು ತೊಗೋ ಈ ಜಮಖಾನ ಹಾಸಿ ಮಂದಲಿಗೆಗಳನ್ನು ಸುತ್ತಿಡು. ಹಾಗೇ ಅವರಿಗೊಂದು ಒರಗುದಿಂಬಿಡು. ಮುಂಭಾಗಿಲ ಹತ್ತಿರ ಒಂದು ಕೊಳಗದಲ್ಲಿ ನೀರು, ಒಂದು ಚೊಂಬಿಡು. ಗುರುಗಳು ಕಾಲು ತೊಳೆಯದೆ ಮನೆಯೊಳಕ್ಕೆ ಬರುವುದಿಲ್ಲ. ಅವರೂ ನಿನ್ನ ತಾತನ ಥರವೇ. ನೆನಪಿದೆ ತಾನೇ ಹೋಗು ಅವರು ಬರುವ ಸಮಯವಾಯಿತು” ಎಂದು ಹೇಳಿದಳು.

ಆಯಿತೆಂದು ತಾಯಿ ಹೇಳಿದ ಕೆಲಸವನ್ನು ಮುಗಿಸುತ್ತಿದ್ದಂತೆ ಹೊರಗಡೆ ಸದ್ದಾಯಿತು. ಬಂದರೆ ಕಾಣಿಸೀತು ಎಂದು ನೀಲಕಂಠಪ್ಪನವರು ಈಸೀಛೇರಿನಿಂದೆದ್ದು ಗುರುಗಳನ್ನು ಎದುರುಗೊಳ್ಳಲು ಮುಂಬಾಗಿಲತ್ತ ಹೋದರು.

ಗುರುಗಳು ಬಸವರಾಜಪ್ಪನವರು ಗಂಗಾಧರಪ್ಪನವರೊಡನೆ ಬಂದರು. ಶಾರದೆ ಹೇಳಿದಂತೆ ದೇವಿಯು ಅಲ್ಲಿಟ್ಟಿದ್ದ ಕೊಳಗದಲ್ಲಿನ ನೀರಿನಿಂದ ಕಾಲು ತೊಳೆದು ಬಾಗಿಲಲ್ಲೇ ನಮಸ್ಕರಿಸಿದ ನೀಲಕಂಠಪ್ಪನವರಿಗೆ ಪ್ರತಿವಂದಿಸಿ ಮನೆಯೊಳಕ್ಕೆ ಅಡಿಯಿಟ್ಟರು. ಅಲ್ಲಿದ್ದ ಹೆಂಗಸರೆಲ್ಲ ಅವರಿಗೆ ನಮಸ್ಕಾರ ಮಾಡಿದರು. ಎದುರಿಗಿದ್ದ ಕಂಬದ ಹಿಂಬದಿಯಲ್ಲಿ ಕುಳಿತರು. ಮುಂಬಾಗಿಲನ್ನು ಭದ್ರಪಡಿಸಿ ಬಂದ ಮಾದೇವಿ ಹಿರಿಯರಿರುವ ಗುಂಪಿನಲ್ಲಿ ನಾನೇಕೆ ಎಂದು ತನ್ನ ರೂಮಿನೊಳಕ್ಕೆ ಹೋದಳು.

ಗುರುಗಳು ಬಸವರಾಜಪ್ಪನವರು ಮತ್ತು ಅಲ್ಲಿದ್ದವರ ಜೊತೆ ಲೋಕಾಭಿರಾಮವಾಗಿ ಕೆಲವು ಮಾತುಗಳನ್ನಾಡಿದರು. ನಂತರ ”ವಿಷಯವೆಲ್ಲವನ್ನೂ ಗಂಗಾಧರಪ್ಪ ಹೇಳಿದ್ದಾನೆ. ಎಲ್ಲಿ ಜಾತಕಗಳನ್ನು ಕೊಡಿ” ಎಂದರು.

ಎರಡೂ ಜೋಡಿಗಳ ಜಾತಕಗಳನ್ನು ಕೈಯಲ್ಲಿಡಿದೇ ಇದ್ದ ನೀಲಕಂಠಪ್ಪನವರು ”ತೊಗೊಳ್ಳಿ ಗುರುಗಳೇ”ಎಂದು ಅವರ ಮುಂದಿಟ್ಟರು.

ಗುರುಗಳು ತಮ್ಮ ಚೀಲದಿಂದ ಪಂಚಾಂಗ ಮತ್ತು ಅವರ ಜ್ಯೋತಿಷ್ಯದ ಗಂಟನ್ನು ತೆಗೆದರು. ಮೊದಲಿಗೆ ಸುಬ್ಬಣ್ಣ, ಚಂದ್ರಿಕಾರ ಜೋಡಿಯನ್ನು ಪರಿಶೀಲಿಸಿದರು. ಎಲ್ಲವನ್ನೂ ಅವಲೋಕಿಸಿ ”ದಿವ್ಯವಾಗಿದೆ” ಎಂದರು. ನಂತರ ಮಹೇಶ ಮಾದೇವಿಯರ ಜಾತಕಗಳನ್ನು ಪರಿಶೀಲಿಸಿದರು. ”ಸಾಲಾವಳಿ ಚೆನ್ನಾಗಿದೆ. ಒಂದು ಸರ್ಪದೋಷವಿದೆ. ಅದರ ನಿವಾರಣೆಗಾಗಿ ನೀವು ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಪೂಜೆ ಮಾಡಿಸಿಕೊಂಡು ನಿವಾರಿಸಿಕೊಳ್ಳಬಹುದು. ಬಂದನಂತರ ವಿವಾಹದ ಏರ್ಪಾಡುಗಳನ್ನು ಮಾಡಿಕೊಳ್ಳಿ. ಏನೂ ಬಾಧಕವಿಲ್ಲ” ಎಂದು ಮುಹೂರ್ತಕ್ಕಾಗಿ ಸೂಕ್ತವಾದ ಒಂದೆರಡಕ್ಕಿಂತ ಹೆಚ್ಚಾಗಿಯೇ ದಿನಂಕಗಳನ್ನು ಗುರ್ತುಹಾಕಿಕೊಟ್ಟರು. ಇಷ್ಟು ಮುಗಿಯುವಷ್ಟರಲ್ಲಿ ಸಾಕಷ್ಟು ಸಮಯವಾಯಿತು.

ಈ ಕಾದಂಬರಿಯ ಹಿಂದಿನ ಚರಣ ಇಲ್ಲಿದೆ:  https://www.surahonne.com/?p=40453

(ಮುಂದುವರಿಯುವುದು)

ಬಿ.ಆರ್.ನಾಗರತ್ನ, ಮೈಸೂರು

9 Responses

  1. ಪ್ರಕಟಣೆಗಾಗಿ ಗೆಳತಿ ಹೇಮಾರವರಿಗೆ ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಸುಂದರವಾದ ಕಾದಂಬರಿ, ಚನ್ನಾಗಿ ಮೂಡಿ ಬರುತ್ತಿದೆ.

  3. ಧನ್ಯವಾದಗಳು ನಯನ ಮೇಡಂ

  4. ಶಂಕರಿ ಶರ್ಮ says:

    ಮದುವೆ ತಯಾರಿ ನಡೆಯುತ್ತಿದೆ…ಬರುವ ವಾರ ಗಡದ್ದು ಊಟಕ್ಕೆ ಬರ್ತೇವೆ!…ಕಥಾಹರಿವು ಸೊಗಸಾಗಿದೆ ನಾಗರತ್ನ ಮೇಡಂ.

  5. MANJURAJ H N says:

    ಹೌದು, ಸೊಗಸಾಗಿ ಮೂಡಿ ಬರುತ್ತಿದೆ. ಶುಭವಾಗಲಿ

  6. ಧನ್ಯವಾದಗಳು ಮಂಜುರಾಜ್ ಸಾರ್

  7. Padma Anand says:

    ಸುಂದರವಾದ ಕೌಟುಂಬಿಕ ಚಿತ್ರಣದಿಂದ ಓದುವ ಸುಖ ನೀಡುತ್ತಾ ಸಾಗುತ್ತಿದೆ.

  8. ಧನ್ಯವಾದಗಳು ಪದ್ಮಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: