ಚಕ್ರದ ಸುತ್ತ

Share Button


ಶೂನ್ಯ ಹಾಗೂ ಚಕ್ರ ಇವುಗಳಲ್ಲಿ ಯಾವುದು ಮೊದಲು ಸಂಶೋಧನೆ ಯಾಯಿತು ಎಂದರೆ ಚಕ್ರವೆಂದೇ ಹೇಳಬೇಕು. ಎರಡೂ ಒಂದೊಂದು ತರಹದ ಕ್ರಾಂತಿಯನ್ನೆಬ್ಬಿಸಿದರೆ, ಚಕ್ರ ತಂತ್ರಜ್ಞಾನದಲ್ಲಿ ತನ್ನ ಇನ್ನಿಲ್ಲದ ಛಾಪು ಮೂಡಿಸಿದೆ. ನಮ್ಮ ದಿನನಿತ್ಯದ ಆಗುಹೋಗುಗಳಲ್ಲಿ ಸೊನ್ನೆ ಅಥವಾ ಚಕ್ರಗಳಿಲ್ಲದ ವ್ಯವಹಾರವೇ ಇಲ್ಲ. ಚಕ್ರದಿಂದ ಕೈಗಾರಿಕಾ ಕ್ರಾಂತಿಯೇ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕೋಡುಬಳೆಯಿಂದ ರಾಕೆಟ್‌ವರೆಗೆ ಚಕ್ರದ ಪಾತ್ರವಿರುವುದರಲ್ಲಿ ಯಾವ ಸಂಶಯವೂ ಇಲ್ಲ.
ಸೊನ್ನೆ ಆರ್‍ಯಭಟನಿಂದ ಕ್ರಿ.ಶ. 476 ರಲ್ಲಿ ಕಂಡುಹಿಡಿದಿದ್ದರೆ ಕ್ರಿ.ಪೂ. 5500 ವರ್ಷಗಳ ಹಿಂದೆಯೇ ಮೆಸಪಟೋಮಿಯದಲ್ಲಿ ಚಕ್ರದ ಮೊದಲ ಕುರುಹು ಸಿಕ್ಕಿದೆ. ಅದೂ ಕುಂಬಾರರು ಪ್ರಥಮ ಬಾರಿ ಬಳಸಿರುವುದು ಮರದ ಚಕ್ರ.

ಚಕ್ರದ ಪರಿಚಯ ರಾಮಾಯಣ, ಮಹಾಭಾರತ ಕಾಲದಿಂದಲೂ ಇತ್ತೆಂಬುದು ಸರ್ವವಿದಿತ. ಕುರುಕ್ಷೇತ್ರ ಯುದ್ಧದಲ್ಲಿ ಚಕ್ರವ್ಯೂಹದ ರಚನೆ ಚಿರಪರಿಚಿತ. ಅಭಿಮನ್ಯು ವ್ಯೂಹದ ಒಳಗೆ ಸಿಕ್ಕಿ ತನ್ನ ಎಲ್ಲ ಆಯುಧಗಳನ್ನು ಕಳಕೊಂಡಾಗ ಅವನು ಕೊನೆಗೆ ಬಳಸಿದ್ದೇ ರಥದ ಚಕ್ರವನ್ನು! ಭೀಮನಿಗೂ ತನ್ನ ಗದೆ ಬಿಟ್ಟರೆ ಚಕ್ರವೇ ಒಂದು ಇಷ್ಟವಾದ ಅಸ್ತ್ರವಾಗಿತ್ತು ಎಂಬ ಮಾತಿದೆ. ಬಕಾಸುರನ ಬಂಡಿ, ರಾಮಾಯಣ, ಮಹಾಭಾರತದ ಎಲ್ಲಾ ಕಡೆ ರಥದ ಹಾಗೂ ಅದರ ಚಕ್ರಗಳ ವಿವರಣೆ ಸಾಕಷ್ಟು ಬರುತ್ತದೆ. ಅಂದರೆ ಆ ಕಾಲದಿಂದಲೂ ಈ ಚಕ್ರಗಳ ಪಾತ್ರ ಬಹುಮುಖ್ಯವಾಗಿತ್ತೆಂದು ತೋರುತ್ತದೆ.

ಕೃಷ್ಣನ ಸುದರ್ಶನ ಚಕ್ರ ಶಿಶುಪಾಲ ವಧೆಯಲ್ಲಿ ಬಳಸಿದ ಚಿತ್ರ ಸರ್ವರಿಗೂ ಪರಿಚಿತ. ಹಾಗೆಯೇ ಅಂಬರೀಶನನ್ನು ಕಾಪಾಡಲು ವಿಷ್ಣು ನಾರದರಿಗೆ ಬಳಸಿದ್ದು ಸುದರ್ಶನ ಚಕ್ರವನ್ನೇ! ಸೂರ್‍ಯದೇವನೂ ತನ್ನ ಒಂದು ಚಕ್ರದ ರಥದಲ್ಲಿ ತನ್ನ ಬೆಳಗಿನ ದಿನನಿತ್ಯದ ಪ್ರಯಾಣ ಆರಂಭಿಸುತ್ತಾನೆಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಚಕ್ರಗಳು ಬರೇ ಘನ ವಸ್ತುಗಳಿಂದ ಮಾತ್ರ ಆಗಬೇಕಾದ್ದಿಲ್ಲ ಎಂಬುದನ್ನು ಹಲವಾರು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಬಹುದು.
ಸುಂಟರಗಾಳಿ ಒಂದು ಚಕ್ರದ ರೂಪದಲ್ಲೇ ಪ್ರಾರಂಭವಾಗಿ ದೊಡ್ಡದಾದ ಚಕ್ರ ಮೇಲಕ್ಕೆ ಹೋಗುವಂತೆ ಸಣ್ಣ ಚಕ್ರವಾಗಿ ಬಿರುಸಿನಿಂದ ಹೋಗುವುದನ್ನು ನಾವೆಲ್ಲ ಕಂಡಿದ್ದೇವೆ. ಇದರ ವೇಗ ಮತ್ತು ಶಕ್ತಿ ಎಷ್ಟೆಂದರೆ ಒಂದು ವಾಹನವನ್ನು ಮೇಲಕ್ಕೆತ್ತಿ ದೂರ ಬಿಸಾಡುವ ಶಕ್ತಿ ಈ ಸುಂಟರಗಾಳಿಯ ಚಕ್ರಕ್ಕಿದೆ. ಜನರನ್ನು ಜಾನುವಾರುಗಳನ್ನು ಮೇಲಕ್ಕೆಸೆದು ಬಿಸುಟ ಹಲವಾರು ನಿದರ್ಶನಗಳಿವೆ.

PC: Internet

ಇನ್ನು ನೀರಿನಲ್ಲಿ ಚಕ್ರಾಕಾರವಾಗಿ ಬರುವ ಸುಳಿಗೆ ಚಕ್ರ ತೀರ್ಥ ಎಂಬ ಪ್ರಸಿದ್ಧ ಹೆಸರಿದೆ. ಈ ಸುಳಿಗೆ ಸಿಕ್ಕಿದ ಯಾವ ನರನೂ, ಪ್ರಾಣಿಯೂ ಬದುಕಿ ಉಳಿಯುವ ಸಂಭವ ತೀರ ಕಡಿಮೆ. ಕರ್ನಾಟಕದ ಪ್ರಸಿದ್ಧ ಕಾವೇರಿ ಸಂಗಮ ಎಡತೊರೆಯ ಸುಳಿ ಕೇಳದವರಿಲ್ಲ. ಇಲ್ಲಿ ಪ್ರಾಣ ಕಳೆದುಕೊಂಡವರ ಲೆಕ್ಕವಿಲ್ಲ.

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿರುವ ಬರ್ಮುಡಾ ತ್ರಿಕೋನ (Bermuda Triangle) ಒಂದು ಪ್ರಪಂಚದ ಅತ್ಯಂತ ನಿಗೂಢ ಸ್ಥಾನ ಎಂದೇ ಪ್ರಸಿದ್ಧ. ಇಲ್ಲಿನ ಚಕ್ರತೀರ್ಥ ಯಾ ಸುಳಿ ಮತ್ತು ಅಯಸ್ಕಾಂತದ ಆಕರ್ಷಣೆ ಎಷ್ಟು ಪ್ರಬಲ ಎಂದರೆ ಈವರೆಗೆ 50 ಕ್ಕೂ ಹೆಚ್ಚು ಹಡಗು ಹಾಗೂ 20 ಕ್ಕೂ ಹೆಚ್ಚು ವಿಮಾನಗಳು ಇಲ್ಲಿ ನಾಪತ್ತೆಯಾಗಿವೆ. ಕಾರಣ ಇಲ್ಲಿಯ ನೀರಿನ ಸುಳಿಯ ಪ್ರಭಾವ ಎಂದೇ ವಿಶ್ಲೇಷಿಸಲಾಗುತ್ತಿದೆ. ಚಕ್ರಗಳ ಸ್ಥೂಲವಾದ ಶಕ್ತಿಯ ಪರಿಚಯ ಇದರಿಂದ ಆಗುತ್ತದೆ. ಆ ಸ್ಥಳಕ್ಕೆ ಇಂದಿನವರೆಗೂ ಯಾವುದೇ ಹಡಗು ಯಾ ವಿಮಾನ ಹೋಗುವ ಧೈರ್ಯ ಮಾಡಿಲ್ಲ.

ಇನ್ನು ಜಲಚಕ್ರ ಹಾಗೂ ವಾಯುಚಕ್ರದ ಬಗ್ಗೆ ನೋಡೋಣ. ಜಲಚಕ್ರದಿಂದಲೇ ಅಪಾರ ವಿದ್ಯುತ್‌ನ ಉತ್ಪತ್ತಿಯಾಗುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಹಾಗೆಯೇ ವಾಯುಚಕ್ರದಿಂದ ಬೀಸುವ ಗಾಳಿಯಿಂದ ವಿದ್ಯುತ್ ಉತ್ಪತ್ತಿಯಾಗುತ್ತಿರುವುದು, ಇವೆಲ್ಲ ಅಸಾಂಪ್ರದಾಯಿಕ ವಿಧಾನದಿಂದ ವಿದ್ಯುತ್ ಉತ್ಪಾದನೆಗಳ ಕ್ರಿಯೆ. ಇದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ.

ಮೈಕೆಲ್ ಎಂಜೆಲೋ ಎಂಬ ಖ್ಯಾತ ಕಲಾಕಾರ. ತನ್ನ ಬೆರಳುಗಳಿಂದಲೇ ಯಾವ ಸಲಕರಣೆಯಿಲ್ಲದೆ ಪೂರ್ಣವೃತ್ತ ಯಾ ಚಕ್ರಾಕಾರವನ್ನು ನಿರ್ಧಿಷ್ಟವಾಗಿ ಬಿಡಿಸುತ್ತಿದ್ದನು. ಇವನಂತೆ ಈವರೆಗೂ ಯಾರೂ ಬಿಡಿಸದಿರುವುದು ನಿಜಕ್ಕೂ ಆಶ್ಚರ್ಯಕರ.

ಹಾಗೆಯೇ ಪ್ರಕೃತಿಯಲ್ಲೂ ಈ ಚಕ್ರಾಕಾರ ತನ್ನ ಛಾಪು ಮೂಡಿಸಿದೆ. ಸಾಮಾನ್ಯವಾಗಿ ಎಲ್ಲಾ ಹೂಗಳು ಚಕ್ರಕಾರವಾಗಿಯೇ ಇರುವುದು ನಿಜಕ್ಕೂ ವಿಸ್ಮಯಕರ. ಕಾಲಚಕ್ರ ಎಂಬುದು ಬಹಳ ಚಾಲ್ತಿಯಲ್ಲಿರುವ ಪದ ಎಲ್ಲವನ್ನು ಕಾಲವೇ ನಿರ್ಧರಿಸುವುದು ಎಂಬುದು ಬಹಳ ಜನರ ನಂಬಿಕೆ. ಹಾಗೆ ಸುಖ, ದುಃಖ, ಬಡತನದಿಂದ ಎಲ್ಲವೂ ಒಂದು ಚಕ್ರವಿದ್ದ ಹಾಗೆ. ಇದು ಕ್ರಿಮಿಕೀಟಗಳಲ್ಲಿ ಕೂಡ ಕಂಡುಬರುವ ಪ್ರಕ್ರಿಯೆ, ಮೊಟ್ಟೆ, ಡಿಂಬ, ಕೋಶಾವಸ್ಥೆ, ಚಿಟ್ಟೆ ಹೀಗೆ ಅವುಗಳಲ್ಲೂ ಒಂದು ಚಕ್ರಾಕಾರ ವ್ಯವಸ್ಥೆ ಇದೆ.

ಆಧ್ಯಾತ್ಮಿಕ ಲೋಕದಲ್ಲಿ ಚಕ್ರಗಳ ಪಾತ್ರ ಹಿರಿದು. ಚಕ್ರಗಳು ಪ್ರಜ್ಞೆಯ ಮತ್ತು ಶಕ್ತಿಯ ಕೇಂದ್ರಗಳು ಈ ಚಕ್ರಗಳು ಸ್ಥೂಲದೇಹದ ನಿರ್ಧಿಷ್ಟ ಭಾಗಗಳನ್ನು ಹೋಲುವ ಸೂಕ್ಷ್ಮ ಶರೀರದಲ್ಲಿ ಇರುವುದು. ಇವುಗಳು ಕ್ರಮವಾಗಿ ಮೂಲಾಧಾರ, ಸ್ವಾದಿಷ್ಟಾನ, ಮಣಿಪೂರ, ಅನಾಹತ, ವಿಶುಧ, ಆಜ್ಞಾ,ಸಹಸ್ರಾರ ಎಂಬ ಏಳು ಚಕ್ರಗಳು ಪ್ರತಿ ಮಾನವನ ದೇಹದಲ್ಲಿಯೂ ಇರುತ್ತವೆ ಎಂಬುದು ವೇದ್ಯ. ಇವೆಲ್ಲ ಅಂತಿಮವಾಗಿ ಮುಕ್ತಿ ಪ್ರಾಪ್ತಿಗೆ ಸಹಕಾರಿ ಎಂಬುದು ನಂಬುಗೆ.

ಇನ್ನು ಗಣಿತ ವಿಜ್ಞಾನದಲ್ಲಿ ಬಿರುಗಾಳಿ ಎಬ್ಬಿಸಿದ ಒಂದು ಪೈ ಎಂಬ ಸಂಜ್ಞೆ. ಯಾವುದೇ ಚಕ್ರದ ಪರಿಧಿಯನ್ನು ವ್ಯಾಸದಿಂದ ಭಾಗಿಸಿದರೆ ಬರುವ ಸಂಖ್ಯೆಯೇ ಪೈ (Pi ) ಇದು ಯಾವಾಗಲೂ 3.1416 ಆಗಿರುವುದು ವಿಶೇಷ. ಯಾವ ಪರಿಧಿಯಾಗಲೀ ಈ ಸಂಖ್ಯೆ ಮಾತ್ರ ಯಾವಾಗಲೂ ನಿರ್ದಿಷ್ಟ. ಇದು ಈಗ ಸಂಖ್ಯಾ ವಿಜ್ಞಾನ, ಗಣಿತ ವಿಜ್ಞಾನದಲ್ಲಿ ಅತ್ಯಂತ ಪ್ರಭಾವಕಾರಿ, ಪರಿಣಾಮಕಾರಿ ಸಂಜ್ಞೆಯಾಗಿದೆ. ಅಲ್ಲದೆ ಭೌತ, ರಾಸಾಯನಿಕ ವಿಜ್ಞಾನದಲ್ಲೂ ಇದು ಉಪಯೋಗಿಸಲ್ಪಡುತ್ತದೆ.

ಹೀಗೆ ಚಕ್ರದ ಆಧಿಪತ್ಯ ವಿಶಾಲವಾದುದು. ಬಗೆದಷ್ಟು ಇದರ ಬಗ್ಗೆ ಕೌತುಕವಾದ ವಿಷಯಗಳು ಹೊರಬೀಳುತ್ತವೆ. ಕೊರೋನಾ ವೈರಾಣುವಿನ ಸ್ವರೂಪವೂ ಚಕ್ರಾಕಾರವೇ. ಇದೇನು ಕಾಕತಾಳಿಯವೋ ಇಲ್ಲ ಆಕಸ್ಮಿಕವೋ ಗೊತ್ತಿಲ್ಲ. ನೀವೇನಂತೀರಿ?ದುಂಡಿರಾಜ್‌ರವರ ಹನಿಗವನದೊಂದಿಗೆ ಈ ಲೇಖನವನ್ನು ಮುಗಿಸೋಣವೇ?

ಎಷ್ಟೊಂದು ರುಂಡಗಳ
ಚಂಡಾಡಿತ್ತು ಅಂದು
ಮುರಾರಿಯ ಚಕ್ರ
ಇಂದು ಆ ಕಾರ್ಯ
ನಿರ್ವಹಿಸುತ್ತಿದೆ
ಬಸ್ಸು, ಕಾರು
ಲಾರಿಯ ಚಕ್ರ!

-ಕೆ.ರಮೇಶ್, ಮೈಸೂರು

9 Responses

  1. Hema Mala says:

    ಅಪರೂಪದ ಮಾಹಿತಿಯುಳ್ಳ ಚೆಂದದ ಬರಹ.

  2. ಚಕ್ರದ ಸುತ್ತ ಕಲಕಿತು ನಮ್ಮ ಚಿತ್ತ…ಒಳ್ಳೆಯ ಮಾಹಿತಿಯಳ್ಳ ಲೇಖನ ಸಾರ್.. ಚೆನ್ನಾಗಿದೆ.

  3. ನಯನ ಬಜಕೂಡ್ಲು says:

    ಸುಂದರ ಬರಹ

  4. ಶಂಕರಿ ಶರ್ಮ says:

    ಚಕ್ರದಾಕಾರದ ಉಗಮ, ವಿವಿಧ ಸ್ತರಗಳಲ್ಲಿ ಅದರ ಬಳಕೆ ಇತ್ಯಾದಿಗಳನ್ನು ಒಳಗೊಂಡ ಮಾಹಿತಿಪೂರ್ಣ ಲೇಖನ ಚೆನ್ನಾಗಿದೆ.

  5. MANJURAJ H N says:

    ಮಾಹಿತಿಯುಳ್ಳ ಆದರೆ ಸೊಗಸಾದ ನಿರೂಪಣೆಯೂ ಇರುವ ಬರೆಹ. ಬಹಳಷ್ಟು ವಿಷಯಗಳು ತಿಳಿದವು. ಧನ್ಯವಾದಗಳು ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: