ಉಪಮಾಲಂಕಾರ
ಬರೆಹದ ಶೀರ್ಷಿಕೆ ನೋಡಿ ಇದೇನೋ ಕಾವ್ಯಮೀಮಾಂಸೆ ಅಥವಾ ಅಲಂಕಾರದ ಪಾಠ ಎಂದು ಗಾಬರಿಯಾಗದಿರಿ. ದೋಸೆ ಮತ್ತು ಇಡ್ಲಿಗಳ ಅನೂಚಾನ, ಸನಾತನ ಮತ್ತು ಅರ್ವಾಚೀನ ವೈಭವವನ್ನು ಕುರಿತು ಬರೆದ ಮೇಲೆ ಅನಿಸಿದ್ದು: ಅರೇ, ಜಗತ್ತಿನ ಸ್ತುತಿ ನಿಂದೆಗಳನ್ನು ಸಮಾನವಾಗಿ ಸ್ವೀಕರಿಸಿ, ಸದಾ ನಗುತ್ತಿರುವ ನಮ್ಮ ಉಪ್ಪಿಟ್ಟಿನ ಬಗ್ಗೆಯೂ ಬರೆಯಬೇಕು ಅಂತ. ಹಾಗಾಗಿ ಈ ಉಪಮಾ – ಅಲಂಕಾರ ವರ್ಣನ; ಪ್ರತಿ ಮನೆಯ ಬೆಳಗಿನ ನಂದನವನ! ಅಭಿವಂದನ!
ಉಪ್ಪಿಟ್ಟಿನ ಹೆಸರು ಕೇಳಿದರಲ್ಲ; ಹೆಸರೆತ್ತಿದರೆ ಸಾಕು, ಮೂಗು ಮುರಿಯುವವರೇ ಬಹಳ. ಇದನ್ನು ಇಷ್ಟಪಟ್ಟು ತಿನ್ನುವವರೇ ವಿರಳ. ಅದಕ್ಕೆ ಪ್ರಬಲ ಕಾರಣವಿದೆ. ಲೋಕದಲ್ಲಿ ಅತ್ಯದ್ಭುತವಾಗಿಯೂ ಅಷ್ಟೇ ಕೆಟ್ಟದಾಗಿಯೂ ಮಾಡಬಹುದಾದ ಯಾವುದಾದರೂ ಉಪಾಹಾರವಿದ್ದರೆ ಅದು ಉಪ್ಪಿಟ್ಟೇ! ಇದನ್ನು ಸೊಗಸಾಗಿಯೂ ರುಚಿಕರವಾಗಿಯೂ ಮಾಡುವವರೂ ವಿರಳ; ತಿಂದವರೂ ವಿರಳ! ರವೆಯ ವ್ಯಾಲ್ಯೂ ತಿಳಿಯಬೇಕಾದರೆ ಸುರ ಸುಂದರವಾದ ಉಪ್ಪಿಟ್ಟನ್ನು ತಿನ್ನಬೇಕು; ಜೊತೆಗೆ ಹೊಟ್ಟೆ ಹಸಿದಿರಬೇಕು!
ಉಪ್ಪಿಟ್ಟು ಮಾಡುವುದೂ ಸುಲಭ; ಹಾಗೆಯೇ ಕೆಡಿಸುವುದೂ ಸುಲಭ. ನಿಷ್ಠೆಯಿಂದ ಮಾಡಿದ ಉಪ್ಪಿಟ್ಟು ರುಚಿಯಾಗಿಯೇ ಇರುತ್ತದೆ. ಎಲ್ಲವೂ ಹದವಾಗಿ ಅಷ್ಟಷ್ಟೇ ಪ್ರಮಾಣಬದ್ಧವಾಗಿ ಇರಬೇಕಷ್ಟೇ. ಕೆಲವರಿಗೆ ಉದುರು ಉದುರಾಗಿರಬೇಕು; ಇನ್ನು ಕೆಲವರಿಗೆ ಉದುರಾಗಿರುವ ಉಪ್ಪಿಟ್ಟು ಇಷ್ಟವಾಗದು; ಅವರಿಗೆ ಮುದ್ಮುದ್ದೆಯಾಗಿಯೇ ಇರಬೇಕು. ಆದರೆ ರವೆಯ ಗಂಟು ಹಾಗೆ ಹಾಗೆಯೇ ಇದ್ದರೆ ಮಾತ್ರ ಅದು ಸಹಿಸಲಸಾಧ್ಯ. ಅದೆಷ್ಟು ರುಚಿಯಿದ್ದರೂ ಲಕ್ಷಣವಾಗಿಲ್ಲದಿದ್ದರೆ ತಿನ್ನಲು ಮನಸು ಬಾರದು. ರವೆಯೇ ಸರಿಯಾಗಿ ಬೇಯದೆ, ಎಲ್ಲದರೊಂದಿಗೆ ಬೆರೆಯದೇ, ಗಂಟಾದರೆ ರುಚಿ ತಾನೇ ಎಲ್ಲಿಂದ ಸಿಕ್ಕೀತು? ಒಟ್ಟಿನಲ್ಲಿ ಉಪ್ಪಿಟ್ಟು ಮಾಡುವುದು ಮೇಲ್ನೋಟಕ್ಕೆ ಸರಳವಾದ ಪ್ರಕ್ರಿಯೆಯಂತೆ ಕಂಡರೂ ಶುಚಿಯಾಗಿಯೂ ರುಚಿಯಾಗಿಯೂ ತಯಾರಿಸಿ, ಬಡಿಸುವುದೊಂದು ಕಲೆ. ಮೇಲ್ನೋಟಕ್ಕೆ ಯಾವುದು ಸರಳವಾಗಿ ಕಾಣುವುದೋ ಅದು ಅಂತರಂಗದಲ್ಲಿ ಅಷ್ಟು ಸುಲಭವಾಗಿರುವುದಿಲ್ಲವೆಂಬ ತಾತ್ತ್ವಿಕತೆಗೆ ಇದೇ ನಿದರ್ಶನ. ಮೊದಲಿಗೇ ನನ್ನದೊಂದು ಭೀಕರ ಅನುಭವವೊಂದನ್ನು ಹೇಳಿ ಬಿಡಬೇಕು: ಚುನಾವಣಾ ಕರ್ತವ್ಯಕ್ಕೆಂದು ಒಂದು ಹಳ್ಳಿಗೆ ಹೋದ ನನಗೆ ‘ನಾಳೆ ಬೆಳಗ್ಗೆ ಊರಿನ ಯಜಮಾನರ ಮನೆಯಿಂದ ಉಪಾಹಾರ ಬರುತ್ತದೆ, ಯೋಚಿಸಬೇಡಿ’ ಎಂಬ ಆಶ್ವಾಸನೆ ದೊರೆತಿದ್ದರಿಂದ ಸ್ವಲ್ಪ ಸಮಾಧಾನವಾಗಿದ್ದೆ. ಏಕೆಂದರೆ ನನಗೆ ಪ್ರತಿ ದಿನದ ಬೆಳಗಿನ ಆಕರ್ಷಣೆಯೆಂದರೆ ಸೂರ್ಯೋದಯಕಿಂತಲೂ ಮುಖ್ಯವಾದದ್ದು ತಿನ್ನುವ ತಿಂಡಿ! ತಿಂಡಿ ತಿಂದು ತಲೆನೋವಿನ ಮಾತ್ರೆ ನುಂಗಿದರಷ್ಟೇ ನಾನು ಮನುಷ್ಯ. ಆದರೆ ಆದದ್ದೇ ಬೇರೆ. ಎಲ್ಲ ಪೂರ್ವಸಿದ್ಧತೆಗಳೂ ಮುಗಿದು, ಮತಚಲಾವಣೆ ವೇಗ ಪಡೆದ ಹೊತ್ತು. ಬೆಳಗಿನ ಒಂಬತ್ತು ಗಂಟೆ. ಇನ್ನೂ ತಿಂಡಿ ಬರಲಿಲ್ಲವಲ್ಲವೆಂದೇ ನನ್ನ ಆತಂಕವಾಗಿತ್ತು. ಅಂತೂ ಬಂತು. ಎಲ್ಲರ ಕೈಗೂ ಅಗಲವಾದ ಸ್ಟೀಲ್ ತಟ್ಟೆ ಕೊಟ್ಟರು. ದೊಡ್ಡ ಡಬ್ಬಿಯ ಮುಚ್ಚಳ ತೆಗೆದು ಸೌಟಿನಲ್ಲಿ ಬಡಿಸಲು ಶುರು ಮಾಡಿದರು. ನೋಡಿದರೆ, ಬೆಳ್ಳಗೆ ಹೊಳೆಯುತ್ತಿರುವ ರವೆಯ ಗಂಜಿಯಂಥ ಪದಾರ್ಥ. ಸೌಟಿನಲ್ಲಿ ಬಡಿಸಿದರು. ‘ನೀರು ಸ್ವಲ್ಪ ಜಾಸ್ತಿಯಾಗಿದೆ, ಅಡ್ಜಸ್ಟ್ ಮಾಡಿಕೊಳ್ಳಿ’ ಎಂದುಬಿಟ್ಟರು. ಅದು ಉಪ್ಪಿಟ್ಟಲ್ಲ; ಖಾರದ ರವೆ ಪಾಯಸ! ತಿನ್ನಲಾಗುತ್ತಿಲ್ಲ; ಕುಡಿಯಲು ಮನಸು ಬಾರದು. ಜೊತೆಗೆ ಬೆಳ್ಳುಳ್ಳಿಯ ಗಾಢ ವಗ್ಗರಣೆಯ ಘಮಲು. ನನ್ನ ಆತಂಕವು ಭಯವಾಗಿ ಪರಿಣಮಿಸಿತು. ಉಳಿದವರೆಲ್ಲರೂ ಮುಲಾಜಿಲ್ಲದೇ ತಟ್ಟೆಯನ್ನೆತ್ತಿ ಬಾಯಿಗಿಟ್ಟು, ಸೊರ ಸೊರ ಎಂದು ಆಸ್ವಾದಿಸುತ್ತಿದ್ದಾರೆ! ನನ್ನ ಕೈಲಿ ಸಾಧ್ಯವಿಲ್ಲವೆಂಬ ನಿರ್ಧಾರಕ್ಕೆ ಬಂದು ‘ತಪ್ಪು ತಿಳಿಯಬೇಡಿರಿ, ನನಗೆ ಬೆಳ್ಳುಳ್ಳಿಯ ಅಭ್ಯಾಸವಿಲ್ಲ’ ವೆಂದು ಹೇಳಿ, ತಟ್ಟೆ ಸಮೇತ ಹೊರಗೆ ಹೋದೆ. ಪಾಪ, ಆತಿಥ್ಯ ವಹಿಸಿಕೊಂಡವರು ನನ್ನನ್ನು ಸಮಾಧಾನಿಸಿದರು: ಸ್ವಲ್ಪ ಹೊತ್ತು ತಾಳಿ; ಗಟ್ಟಿಯಾಗುತ್ತದೆಂದು ಭರವಸೆ ನೀಡಿದರು. ನನಗೆ ತಲೆ ಗಿರ್ರನೆ ತಿರುಗಿತು. ಅಂಥ ತೆಳ್ಳನೆಯ ನೀರ ಝರಿಯಂಥ ಉಪ್ಪಿಟ್ಟನ್ನು ನನ್ನ ಲೈಫಲ್ಲೇ ನೋಡಿರಲಿಲ್ಲ. ವಿಚಿತ್ರವೆಂದರೆ, ಈ ಅನುಭವ ಆಗಿ ಸುಮಾರು ಇಪ್ಪತ್ತು ವರುಷಗಳಾದ ಮೇಲಿನ ಇನ್ನೊಂದು ಇಂಥದೇ ಅನುಭವ: ನಮ್ಮ ಬಡಾವಣೆಯ ಫ್ಯಾಮಿಲೀ ಫ್ರೆಂಡ್ ಕಮ್ ನೆಂಟರು ಒಂದು ಬೆಳ್ಳಂಬೆಳಗ್ಗೆ ಕರೆದುಕೊಂಡು ಹೋದರು; ನಿಮಗೆ ವಿಶೇಷವಾದಂಥ ಉಪ್ಪಿಟ್ಟನ್ನು ಪರಿಚಯಿಸುತ್ತೇನೆಂದು! ಮೈಸೂರಿನ ವಿಶ್ವಮಾನವ ಡಬಲ್ ರೋಡಿನ ಕುವೆಂಪುನಗರ ಗ್ರಂಥಾಲಯದ ಎದುರು ಇರುವ ಪುಟ್ಟ ಹೊಟೆಲು: ಜನ ಮುಗಿಬಿದ್ದು ತಿನ್ನುತ್ತಿದ್ದಾರೆ. ಅದೇ ಉಪ್ಪಿಟ್ಟು! ಆ ಹೊಟೆಲಿನವನೋ ಲೋಟದ ತುಂಬ ನೀರುಪ್ಪಿಟ್ಟು ಕೊಟ್ಟು ಜೊತೆಗೊಂದು ಚಮಚೆಯಿಟ್ಟು ದಂಗುಬಡಿಸಿದ! ನನಗೆ ಆಯಾಚಿತವಾಗಿ ಚುನಾವಣಾ ಸಂದರ್ಭದ ಕಹಿ ಅನುಭವ ನುಗ್ಗಿ ಬಂತು. ‘ಅಯ್ಯಯ್ಯೋ ಇದು ಬೇಡʼವೆಂದು ಮರ್ಯಾದೆಯಿಂದ ಇಡ್ಲಿಚಟ್ನಿ ತಿಂದು ಕೈ ತೊಳೆದೆ!
ಚಿಕ್ಕವನಿದ್ದಾಗ ಹೊಟೆಲಿನಲ್ಲಿ ಖಾರಾಬಾತ್ ಎಂಬ ಹೆಸರಿನಲ್ಲಿ ಉಪ್ಪಿಟ್ಟನ್ನೇ ತಂದಿಡುತ್ತಿದ್ದರು. ರುಚಿಯಾಗಿದ್ದರೆ ಅದು ಖಾರಾಬಾತ್; ಇಲ್ಲದಿದ್ದರೆ ಅದು ಉಪ್ಪಿಟ್ಟೇ! ಎಂದುಕೊಳ್ಳುತ್ತಿದ್ದೆ. ಚೌಚೌಬಾತ್ ಎಂಬ ಹೆಸರಿನಲ್ಲಿ ಇದೇ ಉಪ್ಪಿಟ್ಟನ್ನು ಗೋಡಂಬಿ ಕಾಣುವಂತೆ ಕೇಸರಿಬಾತಿನೊಂದಿಗೆ ತಂದಿಟ್ಟು ದಂಗು ಬಡಿಸುತ್ತಾರೆ. ತಿನ್ನುವಾಗ ಉಪ್ಪಿಟ್ಟಿಗೆ ಹಾಕಿದ್ದ ಒಣಮೆಣಸಿನಕಾಯಿಯ ಚೂರೊಂದು ಅದು ಹೇಗೋ ಕೇಸರಿಬಾತಿನೊಂದಿಗೆ ಸೇರಿಕೊಂಡು ಬಾಯ್ಗೆ ಬಂದು ಪೇಚಾಟವಾಗುತ್ತಿತ್ತು. ಅದೇ ಕೇಸರಿಬಾತಿನ ದ್ರಾಕ್ಷಿಯೋ ಗೋಡಂಬಿಯೋ ಉಪ್ಪಟ್ಟಿನ ಜೊತೆಗೆ ಬಂದರೆ ಇಷ್ಟವಾಗುತ್ತಿತ್ತು. ಇದು ದ್ರಾಕ್ಷಿ ಮತ್ತು ಗೋಡಂಬಿಯ ಮೆಹನತ್ತೇ ಹೊರತು ಉಪ್ಪಿಟ್ಟು ಕೇಸರಿಬಾತುಗಳದ್ದಲ್ಲ ಎಂಬ ವಿಮರ್ಶೆಯ ಷರಾ ಬರೆಯುತ್ತಿದ್ದೆ. ನಮ್ಮಮ್ಮ ಮಾತ್ರ ಹೊಟೆಲುಪ್ಪಿಟ್ಟಿನ ಕಡು ವಿರೋಧಿ. ‘ಹಾಳಾದವರು, ಅಂಗಡಿಯಿಂದ ತಂದ ರವೆಯನ್ನು ಹುರಿಯದೇ ಹಾಗೆಯೇ ನೀರಿಗೆ ಸುರಿದು ಮುದ್ದೆ ಮಾಡುತ್ತಾರೆ. ಹಸಗು ವಾಸನೆ!’ ಎಂದು ಬಯ್ಯುತ್ತಿದ್ದರು. ಇವರೇಕೆ ಹುರಿಯದೇ ಹಾಗೇ ನೀರಿಗೆ ಸುರಿಯುತ್ತಾರೆ? ಎಂದು ನನ್ನಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದೆ. ರವೆ ಹುರಿಯುವಷ್ಟು ಸಮಯ ಮತ್ತು ಲೇಬರು ಇರುವುದಿಲ್ಲ ಎಂದು ಆಮೇಲೆ ಗೊತ್ತಾಯಿತು. ಹೊಟೆಲುಪ್ಪಿಟ್ಟೇ ಹಾಗೆ ಎಂಬ ಸಾರ್ವತ್ರಿಕ ತೀರ್ಮಾನವನ್ನು ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನನ್ನ ಹಿರಿಯ ಸಹೋದ್ಯೋಗೀ ಸನ್ಮಿತ್ರರೊಬ್ಬರು ಬಹು ಇಷ್ಟಪಡುವ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಬ್ರಾಹ್ಮಿನ್ಸ್ ಕೆಫೆಯಲ್ಲಿ ಮಾಡುವ ರವಾ ವಾಂಗೀಬಾತನ್ನು ಹೆಸರಿಸಲೇ ಬೇಕು. ನೀರು ನೀರಾಗಿದ್ದರೂ ತುಂಬ ಇಷ್ಟವಾಗುವ ಉಪ್ಪಿಟ್ಟಿದು. ರವೆಗಿರುವ ವ್ಯಾಲ್ಯೂ ಏನು? ಎಂಬುದಕ್ಕಾದರೂ ಇದನ್ನು ಸವಿಯಲೇಬೇಕು. ಈ ರವಾ ವಾಂಗೀಬಾತು ಸೆಕೆಂಡ್ ಪ್ರೈಜ಼್ ತೆಗೆದುಕೊಳ್ಳುವುದು ಯಾದವಗಿರಿಯಲ್ಲಿರುವ ಟಿ ಕೆ ಎಸ್ ಅಯ್ಯಂಗಾರ್ ಹೊಟೆಲಿನಲ್ಲಿ! ಉಪ್ಪಿಟ್ಟಿನ ವಿಷಯದಲ್ಲಿ ಬದಲಾಗದ ಒಂದು ನಿಯಮವೆಂದರೆ, ಒಂದು ಕಪ್ ರವೆಗೆ ಮೂರು ಕಪ್ ನೀರು. ರವೆಯನ್ನು ಅಳತೆ ಮಾಡಿದ ಕಪ್ಪನ್ನೇ ಬಳಸಬೇಕು. ಇನ್ನುಳಿದವು ಬದಲಾಗುತ್ತಿರುತ್ತವೆ. ಕೆಲವರು ಬದನೆಕಾಯಿ, ದೊಣ್ಣೆ ಮೆಣಸಿನಕಾಯಿ ಮತ್ತು ಟೊಮ್ಯಾಟೊ ವಿರೋಧಿಗಳು. ಇವುಗಳ ವಿರೋಧಿಗಳನ್ನುವುದಕಿಂತಲೂ ಇದರ ಬೀಜ ವಿರೋಧಿಗಳು! ಇವೇ ಕಿಡ್ನಿಯ ಕಲ್ಲುಗಳಾಗಿ ರೂಪಾಂತರ ಹೊಂದುತ್ತವೆಂಬ ಭ್ರಮಾಧೀನರು. ‘ನೀವೂ ತಿನ್ನಬೇಡಿʼ ಎಂದು ಉಪದೇಶಿಸಿದಾಗ ನಾನೆಂದೆ: ‘ಎಂಥ ಮಾತಾಡ್ತೀರಿ! ಗಂಡಸರಾಗಿ ಅದಕ್ಕೆಲ್ಲಾ ಹೆದರುವುದೇ?’ ಇದನ್ನು ಕೇಳಿದ ಮೇಲೆ ಅವರು ಇನ್ನಾವ ಉಪದೇಶವನ್ನೂ ಈವರೆಗೆ ನೀಡಿಲ್ಲ. ಅಂದರೆ ತರಕಾರಿಗಳನ್ನು ಬಳಸಿದರೆ ಉಪ್ಪಿಟ್ಟಿನ ಪಾತಿವ್ರತ್ಯ ಕೆಟ್ಟು ಹೋಗುತ್ತದೆಂದು ಅವರು ಅಲವತ್ತುಕೊಂಡಿದ್ದನ್ನು ನಾನು ಕೇಳಿ ಬೆಚ್ಚಿಬಿದ್ದೆ. ನನಗೆ ತರಕಾರಿಯುಪ್ಪಿಟ್ಟು ಇಷ್ಟ; ಜೊತೆಗೆ ಏಕಾದಶಿಯ ಉಪ್ಪಿಟ್ಟೂ ಇಷ್ಟವೇ! ಇದನ್ನು ಮುಂದೆ ವಿವರಿಸುವೆ.
ರವೆಯನ್ನು ಬೆಚ್ಚಗೆ ಮಾಡಿ ಆನಂತರ ವಗ್ಗರಣೆಗೆ ಬೆರೆಸುವುದು ಒಂದು ವಿಧಾನ. ರವೆಯನ್ನು ಕೆಂಪಗೆ ಹುರಿದು ಬಿಸಿನೀರಿಗೆ ಸೇರಿಸಿ, ಕದಡುತ್ತಾ, ಈರುಳ್ಳಿ, ಮೆಣಸಿನಕಾಯಿಯ ವಗ್ಗರಣೆಯನ್ನು ಬೆರೆಸುವುದು ಇನ್ನೊಂದು ವಿಧಾನ. ವಗ್ಗರಣೆಗೇ ರವೆಯನ್ನು ಬೆರೆಸಿ, ಆನಂತರ ನೀರು ಹಾಕಿ ಕೆದಕುವುದು ಇನ್ನೊಂದು ವಿಧಾನ. ಅವರವರಿಗೆ ಅಭ್ಯಾಸವಾದಂತೆ ಮತ್ತು ಅವರವರಿಗೆ ಸರಿಯೆನಿಸುವಂತೆ ಉಪ್ಪಿಟ್ಟಿನ ತಯಾರಿ. ಒಟ್ಟಿನಲ್ಲಿ ಇದು ಪ್ರಜಾಸತ್ತಾತ್ಮಕ. ಅವರವರ ಭಾವಕೆ ಮತ್ತು ಬಕುತಿಗೆ ತಕ್ಕಂತೆ ಹೊಂದುವಂಥ ಸರಳಜೀವಿ. ಹಸಿ ಮೆಣಸಿನಕಾಯಿಯ ಬದಲು ಒಣಮೆಣಸಿನಕಾಯಿ ಬಳಸಬಹುದು. ಇವೆರಡೂ ಬೇಡವೆಂದರೆ ಪಲ್ಯದ ಪುಡಿಯನ್ನು ಹಾಕಬಹುದು. ತರಕಾರಿ ಬಳಸಬಹುದು. ಟೊಮ್ಯಾಟೊ ಬೇಡವೆಂದರೆ ಬಿಡಬಹುದು. ನಿಂಬೆಹಣ್ಣಿನ ರಸದೊಂದಿಗೆ ಕಲೆಸಿ, ಬಡಿಸಬಹುದು. ಮೀಡಿಯಂ ರವೆ ಬೇಡವೆಂದರೆ ಬನ್ಸಿರವೆಯನ್ನೋ ಅದೂ ಬೇಡವೆಂದರೆ ಅಕ್ಕಿತರಿಯನ್ನೋ ಉಪಯೋಗಿಸಬಹುದು. ಹಿಂದಿನ ಕಾಲದಲ್ಲಿ ರವೆಯು ಮಡಿಗೆ ಬರುವುದಿಲ್ಲವೆಂದು ತಾವೇ ಕೈಯ್ಯಾರೆ ಬೀಸುವಕಲ್ಲಿನಿಂದ ತಯಾರಿಸಿದ ಅಕ್ಕಿತರಿಯನ್ನು ಉಪ್ಪಿಟ್ಟಿಗೆ ಬಳಸುತ್ತಿದ್ದರು. ಅಕ್ಕಿತರಿಯುಪ್ಪಿಟ್ಟಿನ ಸ್ವಾದವೇ ಬೇರೆ. ಇದು ತೀರಾ ಉದುರುದುರಾದರೆ ಚೆಂದವಿರುವುದಿಲ್ಲ. ನಾನು ನಮ್ಮಜ್ಜಿ ಮನೆಯಲ್ಲಿದ್ದಾಗ ಫಳಾರ (ಫಲಾಹಾರದ ಅಪಭ್ರಂಶ ರೂಪ)ಕ್ಕೆಂದು ಅವರು ಮಾಡಿಕೊಂಡಾಗ ನನಗೆ ಈ ಬೋಳುಪ್ಪಿಟ್ಟಿನ ಭಾಗ್ಯ ಒದಗಿ ಬರುತ್ತಿತ್ತು. ಒಂದು ಪಿಡಚಿ ಕೊಡುತ್ತಿದ್ದರು. ಅದನ್ನು ದೇವರ ಪ್ರಸಾದವೆಂಬಂತೆ ಸ್ವೀಕರಿಸಿ ತಿನ್ನುತ್ತಿದ್ದೆ. ನುರಿತ ಅವರ ಕೈಯ ಹದವೇ ಬೇರೆ. ‘ಹಾಳಾದೋನೆ, ಎಲ್ಲೋದ್ಯೋ, ಬಾರೋ ಇಲ್ಲಿ, ಮುಂಡೇದೆ, ತೊಗೊಳೋ, ಹುಷಾರು, ನನ್ನ ಮುಟ್ ಗಿಟ್ಟೀಯಾ…..’ಎಂದು ಬಯ್ಯುತ್ತಲೇ ಪಿಡಿಚಿ ಕಟ್ಟಿ ಮೇಲಿಂದ ಎತ್ತಿ ಹಾಕುತ್ತಿದ್ದರು. ಅವರು ಅದೆಷ್ಟು ಅವಜ್ಞೆಯಿಂದ ಕೊಟ್ಟರೂ ಅದರಲ್ಲಿ ಪ್ರೀತಿ ಮಮಕಾರ ಬೆರೆತಿರುತ್ತಿತ್ತು. ಹಾಗಾಗಿ ಅದಕ್ಕೊಂದು ಮಮತೆಯ ರುಚಿ ಸೇರ್ಪಡೆಯಾಗಿ ದೇವಲೋಕದ ಅಮೃತವಾಗುತ್ತಿತ್ತು. ತಿಂದು ಕೈ ತೊಳೆದು, ಕಣ್ಣು ಮೂಗು ಬಾಯಿ ಒರೆಸಿಕೊಂಡು ಹೊರಗೆ ಬಂದರೆ ಸಾಕು; ಅಡುಗೆಮನೆಯಲ್ಲಿ ತಯಾರಾಗಿದ್ದ ಉಪ್ಪಿಟ್ಟಿನ ಘಮವು ನನ್ನೊಂದಿಗೇ ಬೀದಿಗೆ ಬಂದಂತಾಗುತ್ತಿತ್ತು. ಆಗೆಲ್ಲಾ ನಮ್ಮಜ್ಜಿಯ ಮಡಿಯನ್ನು ವಿಡಂಬಿಸುತ್ತಿದ್ದ ಎದುರು ಮನೆಯ ಮೈಸೂರಿನ ರಾಜಾ ಕಾಫಿ ಅಂಗಡಿಯ ಓನರು ‘ಬೋಡಮ್ಮನ ಬೋಳುಪ್ಪಿಟ್ಟು’ ತಿಂದು ಬಂದ್ಯಾ? ಆಹಹಾ! ತರಕಾರಿ ಇರಲ್ಲ; ಈರುಳ್ಳಿ ಮೊದಲೇ ಇರಲ್ಲ, ಟೊಮ್ಯಾಟೊ ನಿಮ್ಮನೆಗೇ ತರಲ್ಲ ಅಂದ ಮೇಲೆ ಅದ್ಯಾಕೆ ಅದಕ್ಕೋಸ್ಕರ ಆಡ್ತಿರೋ ಆಟ ಬಿಟ್ಟು ಒಳಗೆ ಓಡೋದ್ಯಾ?’ ಎಂದು ನನ್ನನ್ನು ಛೇಡಿಸುತ್ತಿದ್ದರು. ತಲೆ ಬೋಳಿಸಿಕೊಂಡು, ಕೆಂಪು ಸೀರೆ ಉಟ್ಟುಕೊಂಡು ಮಡಿ ಹೆಂಗಸಾಗಿದ್ದ ನಮ್ಮಜ್ಜಿಯನ್ನು ಆತ ಬಯ್ಯುತ್ತಿದ್ದಾರೆಂಬ ಕೋಪ ಒಂದು ಕಡೆ; ಆಗ ತಾನೇ ದೇವೇಂದ್ರ ಲೋಕದ ಉಪ್ಪಿಟ್ಟಿನ ಸೊಗಡನ್ನು ಸವಿದು ಅದನ್ನು ಮೆಲುಕು ಹಾಕುವ ನೆನಪಿನ ಗಳಿಗೆ ಇನ್ನೊಂದು ಕಡೆ. ಯಾವುದನ್ನು ಅನುಭವಿಸುವುದೆಂಬುದನ್ನು ತೀರ್ಮಾನಿಸದೇ ನಾನು ಕಕ್ಕಾಬಿಕ್ಕಿಯಾಗುತ್ತಿದ್ದೆ. ನನ್ನ ಈ ತೊಳಲಾಟವನ್ನು ಅರಿಯದ ಆತ, ‘ಅಯ್ಯೋ ಮೂಗ!’ ಎಂದು ಬಯ್ದು ನನ್ನ ಮೇಲೂ ಸೇಡು ತೀರಿಸಿಕೊಳ್ಳುತ್ತಿದ್ದರು. ನನಗೀಗ ಅರಿವಾಗುತ್ತಿದೆ: ಆತ ನಮ್ಮಜ್ಜಿ ಮಾಡುವ ಉಪ್ಪಿಟ್ಟಿನ ಅಭಿಮಾನಿ. ಯಾವಾಗಲೋ ಅದರ ರುಚಿಯನ್ನು ಕಂಡವರು. ತನಗೆ ಸಿಗದೇ ಹೋಯಿತಲ್ಲಾ ಎಂಬ ಹೊಟ್ಟೆಯ ಕಿಚ್ಚು ಹಾಗೆ ಮಾತಾಡಿಸುತ್ತಿತ್ತು ಎಂಬುದು. ಕಿತ್ತು ತಿನ್ನುವ ಬಡತನವಿದ್ದರೂ ಪದಾರ್ಥಗಳು ಹೇರಳವಾಗಿ ಮನೆಯಲ್ಲಿ ಇರದಿದ್ದರೂ ಅದು ಹೇಗೆ ಅಷ್ಟೊಂದು ರುಚಿಯಾದ ಉಪ್ಪಿಟ್ಟನ್ನು ನಮ್ಮಜ್ಜಿ ಮಾಡುತ್ತಿದ್ದರು? ಎಂಬುದು ನನಗೆ ಮಿಲಿಯನ್ ಡಾಲರ್ ಪ್ರಶ್ನೆ. ಅಕ್ಕಿಯನ್ನು ವಂದರಿ ಆಡಿದ ಮೇಲೆ ಬೀಳುವ ಅಕ್ಕಿಯ ನುಚ್ಚಿನಿಂದ ಮಾಡುವ ಉಪ್ಪಿಟ್ಟು ನನಗೆ ಇಷ್ಟವಾಗುತ್ತಿತ್ತು. ಇದನ್ನಂತೂ ಉದುರುದುರಾಗಿ ಮಾಡಲು ಆಗುವುದೇ ಇಲ್ಲ. ಬಿಸಿಬಿಸಿಯಾದ ಈ ನುಚ್ಚಿನುಪ್ಪಿಟ್ಟಿಗೆ ಹಸುವಿನ ತುಪ್ಪವನ್ನು ಹಾಕಿಕೊಂಡು ಹದವಾಗಿ ಕಲೆಸಿಕೊಂಡು, ತಟ್ಟೆಯ ತುದಿಯಲ್ಲಿ ನೆಲ್ಲೀಕಾಯಿ-ಹುಣಸೇಕಾಯಿಯಿಂದ ಮಾಡಿದ ಉಪ್ಪಿನಕಾಯಿರಸವನ್ನು ಆಗಾಗ ನಂಚಿಕೊಂಡು ಸೇವನೆ ಮಾಡುತ್ತಿದ್ದರೆ ಜಗತ್ತೇ ಕಳೆದು ಹೋಗಿ ಬಿಡುತ್ತದೆ. ನಾನತ್ವ ಕಣ್ಮರೆಯಾಗಿ ತಿಂದ ಸಾರ್ಥಕತೆಗೆ ಮಾಡಿ ಬಡಿಸಿದವರ ಮೇಲಿನ ಧನ್ಯತೆ ಜೊತೆಯಾಗಿ ಆನಂದಬಾಷ್ಪ ಸುರಿಯುತ್ತದೆ. ಇದನ್ನರಿಯದವರು ಯಾಕೋ ಖಾರವಾಯ್ತೇನೋ? ಎಂದುಕೊಂಡು ಗಟ್ಟಿ ಮೊಸರು ತಂದಿಡುತ್ತಾರೆ. ಮರು ಮಾತಾಡದೆ, ಸ್ವಲ್ಪ ಮೊಸರನ್ನು ಸೇರಿಸಿಕೊಂಡು ನುಚ್ಚಿನುಪ್ಪಿಟ್ಟು ತಿನ್ನುತ್ತಿದ್ದರೆ ‘ಆಹಾ! ಇದರ ಮುಂದೆ ಇನ್ನಾವ ಸುಖಕೂ ಅರ್ಥವಿಲ್ಲ!’ ಎಂಬ ನಿರ್ಣಯ ತಂತಾನೇ ಮನದ ಗೋಡೆಯಲ್ಲಿ ಬರೆಯಲ್ಪಡುತ್ತಿರುತ್ತದೆ.
ಎ ಎನ್ ಮೂರ್ತಿರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರರು ಉಪ್ಪಿಟ್ಟಿನ ನಾನಾ ಅವಸ್ಥೆಗಳನ್ನೂ ಅದರ ರೂಪ ಸ್ವರೂಪಗಳನ್ನೂ ಕುರಿತು ತಮ್ಮ ಪ್ರಬಂಧಗಳಲ್ಲಿ ಪ್ರಾಸಂಗಿಕವಾಗಿ ಬರೆದಿರುವುದನ್ನು ಓದಿದಾಗಲೆಲ್ಲಾ ಸಹಜವಾಗಿ ನಮ್ಮ ಅನುಭವಗಳೊಂದಿಗೆ ತಳುಕು ಹಾಕುವಂತಾಗುತ್ತದೆ. ‘ಲೋಕದಲಿ ಹುಟ್ಟಿರ್ದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂದು ಮಹದೇವಿಯಕ್ಕ ತನ್ನೊಂದು ವಚನದಲ್ಲುಸುರುವಂತೆ, ಉಪ್ಪಿಟ್ಟು ಮಾತ್ರ ಅನಾದಿ ಕಾಲದಿಂದಲೂ ವಿಪರೀತ ಬಯ್ಯಿಸಿಕೊಂಡರೂ ಹೊಗಳಿಸಿಕೊಂಡರೂ ತನ್ನ ಸಮಚಿತ್ತತೆಯನ್ನು ಕಾಪಾಡಿಕೊಂಡಿದೆ. ‘ಅವನು ಇಟ್ಟಂತೆ, ಅವನಿ ಇಟ್ಟಂತೆ ನಾನು ಇರುತೀನಿ. ನಿಮ್ಮ ಕೈಯ ಹದದ ಪ್ರಕಾರ ತಯಾರಾಗುತೀನಿ. ನನ್ನದೆನ್ನುವುದೇನೂ ಇಲ್ಲ; ನಿಮ್ಮದೇ ಎಲ್ಲ’ ಎಂಬ ನಿರ್ಲಿಪ್ತತೆಯನ್ನು ತೋರಿದೆ. ನಿಷ್ಠೆಯಿಂದಲೂ ಕಾಳಜಿಯಿಂದಲೂ ಮಾಡಿದರೆ ಉಪ್ಪಿಟ್ಟಿನ ಮೂಲಕವೇ ಸ್ವರ್ಗ ಕಾಣಬಹುದು; ಹೇಗೆ ಹೇಗೋ ಮಾಡಿದರೆ ನರಕ ದರ್ಶನಕೆ ಇದೇ ದಾರಿಯಾಬಹುದು.
ಇಲ್ಲಿಯೇ ಇನ್ನೊಂದು ವಿಚಾರವನ್ನೂ ಪ್ರಸ್ತಾಪಿಸಬೇಕು. ನಾನು ಮೊದಲು ಮಾಡಲು ಕಲಿತಿದ್ದೇ ಈ ಉಪ್ಪಿಟ್ಟನ್ನು. ಅದರಲ್ಲೂ ದಿಢೀರ್ ಉಪ್ಪಿಟ್ಟು. ನನ್ನವಳು ಒಂದೆರಡು ದಿವಸ ನನ್ನನ್ನು ಬಿಟ್ಟು ಊರುಕೇರಿಗೆ ಹೊರಡುವಾಗ ಮೊದಲು ಸಿದ್ಧಪಡಿಸಿಡುವುದೇ ಈ ಇನ್‌ಸ್ಟಾಂಟ್ ಉಪಮಾ ಮಿಕ್ಸ್ ಅನ್ನು. ರವೆ ಹುರಿದು, ಅದಕ್ಕೆ ಮೆಣಸಿನಕಾಯಿ, ಅರಿಶಿನ ಸಮೇತ ವಗ್ಗರಣೆ ಕೊಟ್ಟು ಡಬ್ಬಿಯಲ್ಲಿ ಹಾಕಿಟ್ಟಿರುತ್ತಾಳೆ. ನಾನು ಈರುಳ್ಳಿ, ಟೊಮ್ಯಾಟೊ ಹೆಚ್ಚಿ ಎಣ್ಣೆಯಲಿ ಬಾಡಿಸಿ, ನೀರು ಸೇರಿಸಿ, ಅರ್ಧ ರೆಡಿಯಾದ ಉಪ್ಪಿಟ್ಟು ಮಿಕ್ಸನ್ನು ಜೊತೆಗೂಡಿಸಿ, ಕೊಬ್ಬರಿ ಉದುರಿಸಿ, ಕೊತ್ತಂಬರಿ ಸೊಪ್ಪು ತೋರಿಸಿ, ನಿಂಬೆರಸ ಹಿಂಡಿ ಮೂರು ನಿಮಿಷ ಮುಚ್ಚಿಟ್ಟು ಪೂರ್ಣ ಪ್ರಮಾಣದಲ್ಲಿ ಸಿದ್ಧ ಮಾಡಿಕೊಳ್ಳುತ್ತೇನೆ. ಸಮಯಾವಕಾಶವಿದ್ದರೆ ನನಗಿಷ್ಟವಾದ ಆಲೂಗಡ್ಡೆ, ದಪ್ಪ ಮೆಣಸಿನಕಾಯಿ, ಹುರುಳೀಕಾಯಿ ಮುಂತಾದ ತರಕಾರಿಗಳನ್ನೂ ಸೇರ್ಪಡೆ ಮಾಡುತ್ತೇನೆ. ಒಟ್ಟಿನಲ್ಲಿ ಈ ಉಪ್ಪಿಟ್ಟನ್ನು ತಯಾರಿಸುವುದಕಿಂತ ಕೆದಕುವುದೇ ಸುಲಭ. ತುಪ್ಪ ಸೇರಿಸಿ, ಹದವಾಗಿ ಕಲಸಿ, ತಿನ್ನುವುದು ಒಂದು ವಿಧ. ಮೊಸರಿನ ಜೊತೆಗೂಡಿಸಿ ತಿನ್ನುವುದು ಇನ್ನೊಂದು ರೀತಿ. ಇವೆರಡೂ ಬೇಡವೆಂದರೆ ನಿಂಬೆಕಾಯಿ ಉಪ್ಪಿನಕಾಯಿಯೊಂದಿಗೆ. ಇನ್ನೊಂದು ವಿಧವಿದೆ. ಜೀರಿಗೆ ಮೆಣಸನ್ನು ಕುಟ್ಟಿ ಪುಡಿ ಮಾಡಿ, ತುಪ್ಪದ ವಗ್ಗರಣೆಯಾಗಿಸಿ, ಉಪ್ಪಿಟ್ಟಿಗೆ ಕಲೆಸಿ ತಿನ್ನುವುದು. ಇದಂತೂ ಪರಮಾನಂದ. ಅದರಲ್ಲೂ ಅವರೆಕಾಳು ಉಪ್ಪಿಟ್ಟಿಗೆ ಇದು ಅದ್ಭುತವಾದ ಕಾಂಬಿನೇಷನ್ನು. ಎಳೆ ಅವರೆಕಾಳಿನ ಘಮದ ಸೊಗಡು ಉಪ್ಪಿಟ್ಟನ್ನು ದೇವಲೋಕಕ್ಕೆ ರವಾನಿಸಲು ಇರುವ ಏಣಿಯೆಂದೇ ನಾನು ಭಾವಿಸಿದ್ದೇನೆ. ಇಂಥ ಅವರೆಕಾಳು ಉಪ್ಪಿಟ್ಟನ್ನು ಸಿದ್ಧಪಡಿಸಿದ ಮೇಲೆ ಅದರ ಮೌಲ್ಯಮಾಪನ ಮಾಡುವುದಕ್ಕೆ ಒಂದು ವಿಧಾನವಿದೆ. ಒಂದು ಪಿಡಚಿ (ಸುಲಭವಾಗಿ ಬಾಯಿಗೆ ಹಾಕಿಕೊಳ್ಳುವಷ್ಟು ಗಾತ್ರದ ಮುಷ್ಟಿಯುಂಡೆ) ಕೈಗೆ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವ ಮುಂಚೆ ಪರೀಕ್ಷೆ ಮಾಡಬೇಕು. ಅದರಲ್ಲಿ ಎದ್ದು ಕಾಣುವಂತೆ ಅವರೆಕಾಳು, ಜೀರಿಗೆ ಮೆಣಸಿನ ವಿಭಜಿತ ಭಾಗ, ವಗ್ಗರಣೆಯಲಿ ಹದವಾಗಿ ಹುರಿದು ಕೆಂಪಾದ ಕಡಲೇಬೇಳೆ, ಉದ್ದಿನಬೇಳೆ, ಸಾಸುವೆಕಾಳು, ಕರಿಬೇವು, ಕೊತ್ತಂಬರಿ ಸೊಪ್ಪಿನ ಎಸಳು ಇರಬೇಕು. ನೆಲದಲ್ಲಿ ಹುದುಗಿ ಹೋಗಿರುವ ಚಿನ್ನದದಿರಿನಂತೆ ಆ ಪಿಡಚಿಯೊಳಗೆ ಅಡಗಿರುವ ನಿಧಿಯದು ಬೇರೆ ವಿಷಯ. ಪಾತ್ರೆಯಿಂದ ತಟ್ಟೆಗೆ ಹಾಕಿಕೊಟ್ಟ ಉಪ್ಪಿಟನ್ನು ಘಮಘಮಿಸುವ ಹೊಳೆನರಸೀಪುರದ ತುಪ್ಪದೊಂದಿಗೆ ಹದವಾಗಿ ಕಲೆಸಿ, ಒಂದು ಪಿಡಚಿ ಕಟ್ಟಿದರೆ ಇವು ಆಕರ್ಷಕವಾಗಿ ಎದ್ದು ಕಾಣುತ್ತಿರಬೇಕು. ಕನಿಷ್ಟವೆಂದರೂ ನಾಲ್ಕೈದು ಬೆಂದು ಬನಿಯಾದ ಅವರೆಕಾಳು ಸಿಂಹಾಸನದಲಿ ಹೊಳೆಯುತ್ತಿರುವ ವಜ್ರದ ಹರಳುಗಳಂತೆ ಶೋಭಿಸುತ್ತಿರಬೇಕು. ಆ ಅವರೆಕಾಳಿನೊಂದಿಗೆ ಸಹಬಾಳ್ವೆಯನ್ನು ಮಾಡುತ್ತಿರುವಂತೆ ಮೇಲೆ ಹೆಸರಿಸಿದ ವಗ್ಗರಣೆ ಸಾಮಗ್ರಿಗಳು ರಾರಾಜಿಸುತ್ತಿರಬೇಕು. ಕಟ್ಟಿದ ಉಪ್ಪಿಟ್ಟಿನ ಉಂಡೆಯನ್ನು ತಿರುಗಿಸಿ ನೋಡುತ್ತಿದ್ದರೆ ಸಾಸುವೆ, ಜೀರಿಗೆ, ಮೆಣಸಿನ ಪುಟ್ಪುಟ್ಟ ಚೂರುಗಳು ರಾತ್ರಿಯಾಕಾಶದಲಿ ಮಿನುಗುತ್ತಿರುವ ನಕ್ಷತ್ರಗಳಂತೆ ಹೊಳೆಯುತ್ತಿರಬೇಕು. ಕರಿಬೇವಿನ ಮತ್ತು ಕೊತ್ತಂಬರಿ ಸೊಪ್ಪಿನ ಎಸಳುಗಳು ಉಂಡೆಯೊಳಗೆ ಹುದುಗಿಯೂ ನಾವೂ ಇದ್ದೇವೆಂಬಂತೆ ಕಾಣಿಸುತ್ತಿರಬೇಕು. ತುಪ್ಪದ ವಗ್ಗರಣೆಯಿಂದ ಒಂದಾದ ರವೆಯ ಕಣಗಳು ಇವೆಲ್ಲವನ್ನೂ ತನ್ನೊಡಲಲ್ಲಿ ಹಿಡಿದಿರಿಸಿಕೊಂಡಿರಬೇಕು. ಈ ಎಲ್ಲವುಗಳ ಘಮವು ತುಪ್ಪದ ಸುವಾಸನೆಯೊಂದಿಗೆ ಬೆರೆತು ಒಂದು ವಿಶಿಷ್ಟ ಕಂಪನ್ನು ಪಸರಿಸುತ್ತಿರಬೇಕು! ಹೀಗೆ ಒಂದೊಳ್ಳೆಯ ಅದ್ಭುತ ಉಪ್ಪಿಟ್ಟು ಸಕಲ ಇಂದ್ರಿಯಗಳಿಗೂ ತೃಪ್ತಿ ಕೊಡುವಂತಿರಬೇಕು. ಕಣ್ಣಿಗಿಂಪಣವಾದದ್ದು ಕರುಳಿಗೂ ಇಂಪಣ ಎಂಬ ಮಾತಿದೆ. ಉಪ್ಪಿಟ್ಟಿನ ಬಣ್ಣ ಬಣ್ಣದ ಚೆಲುವನ್ನು ಕಣ್ಣು ಸೆಳೆಯುತ್ತಿದ್ದರೆ ನಮ್ಮ ಮೂಗು ಅದರ ಸುಗಂಧವನ್ನು ಹೀರುತ್ತಿರುತ್ತದೆ. ಉಪ್ಪಿಟ್ಟನ್ನು ತಿನ್ನಲು ಬಳಸುವ ಪರಿಕರಗಳ ಸಶಬ್ದವೇ ಕರ್ಣಾನಂದ. ಕೊಟ್ಟ ಚಮಚೆಯನ್ನು ಪಕ್ಕಕಿಟ್ಟು, ನಮ್ಮ ನಯವಾದ ಬೆರಳುಗಳನ್ನು ಬಳಸಿ ಮುಟ್ಟಿ, ನಾಲಗೆಯನ್ನು ತಟ್ಟುವಾಗ ಏಕಕಾಲಕೆ ಅದರ ಸ್ಪರ್ಶ ಸುಖವೂ ಜಿಹ್ವಾಸಂತಸವೂ ಉಂಟಾಗಿ, ಲೋಕದ ಎಲ್ಲ ಸಂತೋಷವು ಬೇರೆಲ್ಲೂ ಇಲ್ಲ, ತಿನ್ನುತ್ತಿರುವ ತಟ್ಟೆಯಲ್ಲೇ ಇದೆ ಎಂಬ ಜ್ಞಾನೋದಯವಾದರೆ ಅದು ಈ ಜಗತ್ತಿನ ಶ್ರೇಷ್ಠವಾದ ಉಪಮಾಲಂಕಾರ!
ಅವರೆಕಾಳಿನ ಬದಲು ಎಳೆಯ ಹಸಿ ಹಲಸಂದೆಕಾಳನ್ನಾಗಲೀ ತೊಗರಿಕಾಳನ್ನಾಗಲೀ ಬಳಸಬಹುದು. ಆದರೆ ಅವರೆಕಾಳುಪ್ಪಿಟ್ಟು ಕೊಡುವ ಖುಷಿಯನ್ನು ಇನ್ನಾವುದೂ ಕೊಡಲಾರದು. ಉಪ್ಪಿಟ್ಟಿನ ಗುಣವೆಂದರೆ ಅದು ಸಿರಿವಂತಿಕೆಯನ್ನೂ ತಡೆದುಕೊಳ್ಳುತ್ತದೆ; ಬಡವರ ಮನೆಯಲ್ಲೂ ಬದುಕುತ್ತದೆ. ಎಂಥದೇ ಸಿಂಗಾರ ಬಂಗಾರ ಮಾಡಿದರೂ ನಡೆಯುತ್ತದೆ. ಕಾಳು, ತರಕಾರಿಗಳನ್ನು ಬಳಸಿದರೂ ರುಚಿಸುತ್ತದೆ. ಅವಿಲ್ಲದೇ ಬರೀ ಬೋಳುಪ್ಪಿಟ್ಟು ಮಾಡಿದರೂ ಆಗಲೂ ಅದರದೇ ಆದ ಸ್ವಾದವನ್ನು ಹೊಂದಿರುತ್ತದೆ. ಹೆಂಗಸರ ಅಡುಗೆಮನೆಯ ಮಾನ ಮರ್ಯಾದೆಯನ್ನು ಕಾಪಾಡುವಲ್ಲಿ ಈ ಉಪ್ಪಿಟ್ಟಿನದೇ ಪ್ರಮುಖ ಪಾತ್ರ. ವಧುಪರೀಕ್ಷೆಯಲ್ಲಿ ಇದರದು ಮಹತ್ವದ ಸ್ಥಾನ. ‘ಈ ಭಾನುವಾರ ಯಾರ ಮನೆಯಲ್ಲಿ ಉಪ್ಪಿಟ್ಟು-ಕಾಫಿ?’ ಎಂದೇ ಹಿಂದಿನ ಕಾಲದ ಸ್ನೇಹಿತರು ವಧುವಿನ ಅನ್ವೇಷಣೆಯಲ್ಲಿ ನಿರತನಾದ ತಮ್ಮ ಸ್ನೇಹಿತನನ್ನು ಚುಡಾಯಿಸುತ್ತಿದ್ದರು. ಉಪ್ಪಿಟ್ಟು ಚೆನ್ನಾಗಿದೆಯೆಂಬ ಅಭಿಪ್ರಾಯವು ಗಂಡಿನ ಕಡೆಯವರಿಂದ ಬಂದರೆ, ಹೆಣ್ಣಿನ ಮನೆಯವರಿಗೆ ಎಂಥದೋ ವಿಶ್ವಾಸ, ಭರವಸೆ. ನಮ್ಮ ಮಗು ಅವರಿಗೆ ಮೇಲ್ನೋಟಕ್ಕೆ ಇಷ್ಟವಾಗಿದೆ ಎಂಬ ಭಾವ. ಹಾಗಾಗಿ, ಈ ಉಪ್ಪಿಟ್ಟು ವಿವಾಹಪೂರ್ವ ಮತ್ತು ವಿವಾಹೋತ್ತರ ಎರಡು ನೆಲೆಗಳಲ್ಲೂ ತನ್ನ ಬಾವುಟವನ್ನು ನೆಟ್ಟಿದೆ; ವಿಜಯಪತಾಕೆಯನ್ನು ಹಾರಿಸಿ ದಕ್ಷಿಣ ಭಾರತದ ಖ್ಯಾತಿಯನ್ನು ಹೆಚ್ಚಿಸಿದೆ.
ನನಗಂತೂ ಉಪ್ಪಿಟ್ಟಿಗೆ ನಂಚಿಕೊಳ್ಳಲು ಏನಾದರೊಂದು ಕರಿದ ತಿಂಡಿ ಇರಬೇಕು. ಇಲ್ಲದಿದ್ದರೆ ಸೊಗಸೆನಿಸುವುದಿಲ್ಲ. ಖಾರಸೇವಿಗೆ, ಖಾರಾಬೂಂದಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಪಕೋಡ ಯಾವುದಾದರೂ ಆದೀತು. ಹಪ್ಪಳ, ಸಂಡಿಗೆ, ಉಪ್ಪಚ್ಚಿ ಮೆಣಸಿನಕಾಯಿ ಇದ್ದರೂ ನಡೆದೀತು. ಉಪ್ಪಿಟ್ಟಿಗೆ ದಿ ಬೆಸ್ಟ್ ಕಾಂಬಿನೇಷನ್ ಎಂದರೆ ಮನೆಯದೇ ಆದರೆ ನಿಂಬೆಹಣ್ಣಿನ ಉಪ್ಪಿನಕಾಯಿ ಅಥವಾ ಹುಣಸೆಕಾಯಿ ತೊಕ್ಕು. ಹೊರಗಡೆಯದಾದರೆ ಆಲೂಗಡ್ಡೆ ಚಿಪ್ಸು. ಆದರೆ ನನ್ನೋರ್ವ ಹಿರಿಯ ಮಿತ್ರರ ತರ್ಕವೇ ಬೇರೆ. ಅವರ ಪ್ರಕಾರ ‘ಕೆಟ್ಟುಪ್ಪಿಟ್ಟು ತಿನ್ನಬೇಕಾದ ಕರ್ಮ ಎದುರಾದಾಗ ಇವೆಲ್ಲ ಬೇಕು; ಇಲ್ಲದಿದ್ದರೆ ಈ ಕುರುಕು ತಿಂಡಿಗಳು ಒಂದೊಳ್ಳೆಯ ಉಪ್ಪಿಟ್ಟಿಗೆ ಅವಮಾನ ಮಾಡಿದಂತೆ!’ ಹೌದೆನಿಸಿತು. ಇನ್ನೊಂದು ವಿಚಿತ್ರ ಗಮನಿಸಿದ್ದೇನೆ. ಬೆಳಗಿನ ಹೊತ್ತು ಮಾಡುವ ಉಪ್ಪಿಟ್ಟಿನ ರುಚಿಯು ಸಂಜೆಯ ವೇಳೆ ಮಾಡುವ ಉಪ್ಪಿಟ್ಟಿಗೆ ಹೋಲಿಸಿದರೆ ಸ್ವಲ್ಪ ಕಡಮೆಯೇ ಇರುತ್ತದೆ. ಇದು ನನ್ನೊಬ್ಬನ ಅನುಭವವಲ್ಲ; ಬಹಳ ಮಂದಿಯನ್ನು ಕೇಳಿ ಸರ್ವೇ ಮಾಡಿ ಈ ವಿಚಿತ್ರವಾದ ವಿಶಿಷ್ಟತೆಯನ್ನು ಕಂಡುಕೊಂಡಿದ್ದೇನೆ. ಇದು ಕೇವಲ ಭ್ರಮೆಯೂ ಇರಬಹುದು. ಆದರೆ ಉಪ್ಪಿಟ್ಟನ್ನು ತಿನ್ನಲು ಮುಖ್ಯವಾಗಿ ಮನಸಿರಬೇಕು ಮತ್ತು ಹಸಿವೆ ಇರಬೇಕು! ಈ ಸಂದರ್ಭದಲ್ಲಿ ಮರೆಯದೇ ದಾಖಲಿಸ ಬೇಕಾದ ಇನ್ನೊಂದು ಅಂಶವೆಂದರೆ ಉಪ್ಪಿಟ್ಟನ್ನು ವಿದೇಶದಲ್ಲಿ ಜನಪ್ರಿಯಗೊಳಿಸಿದ ನಮ್ಮ ವಿಜ್ಞಾನದ ಮೇಷ್ಟ್ರು, ಗಾಂಧೀವಾದಿ ಹೆಚ್ ನರಸಿಂಹಯ್ಯನವರ ಉಪಮಾಪ್ರೇಮವನ್ನು. ಇವರು ಅಮೆರಿಕದಲ್ಲಿದ್ದ ನಾಲ್ಕೂ ವರುಷಗಳ ಕಾಲ ಅತಿ ಹೆಚ್ಚು ಸಲ ಉಪ್ಪಿಟ್ಟನ್ನು ಸ್ವತಃ ತಯಾರಿಸಿ, ಅಲ್ಲಿನವರಿಗೆ ಪರಿಚಯಿಸಿದ್ದು. ಆಕಾಶವಾಣಿಗಾಗಿ ನಾನು ಇವರನ್ನು ಸಂದರ್ಶಿಸುವ ಅವಕಾಶ ಲಭಿಸಿದ್ದಾಗ ಇದರ ಮೇಲೊಂದು ಪ್ರಶ್ನೆಯನ್ನು ಗುರುತು ಹಾಕಿಕೊಂಡು ಮರೆಯದೇ ಕೇಳಿದ್ದೆ. ವಿನೋದ ಪ್ರವೃತ್ತಿಯವರಾದ ಹೆಚ್ಚೆನ್ ಅವರು ‘ಏನು ಮಾಡೋದಪ್ಪಾ, ನಾನು ಮೊದಲೇ ಬ್ರಹ್ಮಚಾರಿ, ಜೊತೆಗೆ ಸಸ್ಯಾಹಾರಿ, ಚೆನ್ನಾಗಿ ಮಾಡೋದಕ್ಕೆ ಬರ್ತಾ ಇದ್ದಿದ್ದೇ ಅದೊಂದೇ ರೀ!’ ಎಂದು ಪ್ರಾಸಬದ್ಧವಾಗಿ ಉತ್ತರಿಸಿ ನಗು ತರಿಸಿದರು. ಎಂಎ ಮುಗಿಸಿ ಗಂಗೋತ್ರಿಯಲ್ಲೇ ರಿಸರ್ಚು ಮಾಡುವಾಗಿನ ದಿನಗಳವು. 1993 ರ ಆಸುಪಾಸು. ಪಿಜಿ ಹಾಸ್ಟೆಲಿನಲಿದ್ದರೂ ಅಲ್ಲಿ ರಾತ್ರಿಯೂಟ ಮಾತ್ರ ಮಾಡುತ್ತಿದ್ದೆ, ಬೆಳಗಿನ ತಿಂಡಿ ಡೌನ್ಸ್ ಎಂದು ಕರೆಯುತ್ತಿದ್ದ ಈಗಿನ ಜೆಸಿಇ ಕಾಲೇಜಿನ ಸಮೀಪವಿದ್ದ ಹೊಟೆಲಿನಲ್ಲಿ. ಅಲ್ಲಿ ಉಪ್ಪಿಟ್ಟಿಗೆ ಕೆಟ್ಟ ಹೆಸರು. ಆದರೆ ಅವರು ಬಿಸಿಬೇಳೆಬಾತನ್ನು ಅದ್ಭುತವಾಗಿ ಮಾಡುತ್ತಿದ್ದರು. ಬಹಳ ಮಂದಿಗೆ ಅದರ ರುಚಿ ತೋರಿಸಿದ್ದೆ. ಮಧ್ಯಾಹ್ನದ ನನ್ನ ಊಟ ಮಾತ್ರ ಗಂಗೋತ್ರಿ ಕ್ಯಾಂಟೀನಿನಲ್ಲೇ. ಹೀಗಿರುವಾಗ ಅಲ್ಲಿನ ಕ್ಯಾಂಟೀನಿಗೆ ಬಂದಿದ್ದ ನೂತನ ಅಡುಗೆಭಟ್ಟರು ಥರಾವರೀ ಉಪ್ಪಿಟ್ಟನ್ನು ಮಾಡಿ, ಮಾರಿ ಸೈ ಎನಿಸಿಕೊಂಡಿದ್ದರು. ಮಧ್ಯಾಹ್ನದ ವೇಳೆ ಇಷ್ಟಪಟ್ಟು ಅಂಥ ಖಾರಾಬಾತನ್ನು ತಿನ್ನುತ್ತಿದ್ದ ದಿನಗಳವು. ಈಗ ನೆನಪಿಸಿಕೊಂಡರೂ ಬಾಯಲ್ಲಿ ನೀರೂರುತ್ತದೆ. ಈರುಳ್ಳಿ ಪಕೋಡ ಸೈಡಿಗಿಟ್ಟುಕೊಂಡು ಆಗಾಗ ಬಾಯಿಗೆಸೆದುಕೊಂಡು ಉಪ್ಪಿಟ್ಟನ್ನು ಕೈಯ ಬೆರಳುಗಳ ಮೂಲಕ ಮುಟ್ಟಿ, ತಟ್ಟಿ ಪಿಡಚೆ ಕಟ್ಟಿ ಬಾಯಿಗೆ ಹಾಕಿಕೊಳ್ಳುತ್ತಿದ್ದರೆ ನನಗೆ ಮಾನಸ ಗಂಗೋತ್ರಿಯಲ್ಲೇ ಹಿಮಾಲಯದ ಸುಖ ಲಭಿಸುತ್ತಿತ್ತು. ಬಹಳ ಮಂದಿ ಕ್ಯಾಂಟೀನಿನ ಹೊರಗಡೆಯೇ ಉಂಡು, ತಿಂದು, ಕಾಫಿ ಕುಡಿಯುತ್ತಾ ಧೂಮಲೋಲುಪರಾಗುತಿದ್ದರು. ಕ್ಯಾಂಟೀನಿನ ಒಳಗಡೆ ತಿನ್ನುತ್ತಿದ್ದವರು ಕಡಮೆ. ಹಾಗಾಗಿಯೇ ನಾನು ಆ ಖಾರಾಬಾತು ತಿನ್ನುತ್ತಾ ಧ್ಯಾನಸ್ಥನಾಗಲು ಅವಕಾಶ ಒದಗುತ್ತಿತ್ತು. ಆಗೆಲ್ಲಾ ರವೆಯಲ್ಲಾಗಲೀ, ತರಕಾರಿಗಳಲ್ಲಾಗಲೀ, ದಿನಸಿ ಐಟಂಗಳಲ್ಲಾಗಲೀ ಒಂದು ರೀತಿಯ ಹಿತವೂ ಮಧುರವೂ ಆದ ಬನಿ ಇರುತ್ತಿತ್ತು. ಒಂದು ಇನ್ನೊಂದರ ಜೊತೆ ಸೇರಿ ಹೊಂದಾಣಿಕೆಗೊಂಡು, ತನ್ನ ಮೂಲಗುಣವನ್ನು ಬಿಟ್ಟು ಕೊಡದೆಯೂ ಬೆರೆತು ಭವಿಸುತ್ತಿತ್ತು; ಊಟೋಪಚಾರಗಳು ಸಂಭ್ರಮಿಸುತ್ತಿತ್ತು. ಮುಖ್ಯವಾಗಿ ನಮಗಾಗ ವಯಸ್ಸು ಚಿಕ್ಕದಿತ್ತು!
ಕೆಲವರು ವಗ್ಗರಣೆಯವಲಕ್ಕಿಯನ್ನು ಅವಲಕ್ಕಿಯುಪ್ಪಿಟ್ಟು ಎಂದೇ ಕರೆಯುವರು. ಹೀಗೆ ಕರೆಯುವಾಗೆಲ್ಲಾ ಇದು ಅವಲಕ್ಕಿ ವಗ್ಗರಣೆಗೆ ಸಿಕ್ಕ ಪ್ರಮೋಷನ್ನೋ ಡಿಮೋಷನ್ನೋ ಗೊತ್ತಾಗದಂತಾಗಿ ಕಂಗಾಲಾಗುವೆ. ಬಹಳ ಮಂದಿಗೆ ಗಟ್ಟಿ ಅವಲಕ್ಕಿಯನ್ನು ನೆನೆಸಿ, ಉಪ್ಪಿಟ್ಟಿಗೆ ಬಳಸುವ ಎಲ್ಲ ಪರಿಕರಗಳನ್ನು (ಟೊಮ್ಯಾಟೊ ಹೊರತುಪಡಿಸಿ) ಹಾಕಿ ವಗ್ಗರಣೆಯವಲಕ್ಕಿಯನ್ನು ತಯಾರಿಸಬಹುದೆಂಬುದೇ ಗೊತ್ತಿಲ್ಲ. ಮೊಸರವಲಕ್ಕಿಯಂತೂ ಅಪರೂಪವೇ ಸರಿ. ಅಂದರೆ ಉಪ್ಪಿಟ್ಟನ್ನು ಉಪ್ಪಿಟ್ಟೆನ್ನದೇ ಇತರೆ ಹೆಸರುಗಳಿಂದ ಕರೆಯುವ ಹಂಬಲ ಹಲವರದು. ಕೆಲವು ಮಂದಿಯಂತೂ ಕಾಂಕ್ರೀಟು ಎನ್ನಿ ಎಂದು ತಮ್ಮ ಅಸಹನೆ ಬೆರೆತ ವ್ಯಂಗ್ಯವನ್ನು ಹೊರಹಾಕಿ ಉಪ್ಪಿಟ್ಟಿನ ಬಗ್ಗೆ ಇರುವ ಅಸಡ್ಡೆಯನ್ನೂ ಶತ್ರುತ್ವವನ್ನೂ ವ್ಯಕ್ತಪಡಿಸಿದ್ದುಂಟು. ಅದು ಎಷ್ಟೇ ಚೆನ್ನಾಗಿದ್ದರೂ ಉಪ್ಪಿಟ್ಟು ತಣ್ಣಗಾದ ಮೇಲೆ ತಿನ್ನುವುದು ಶಿಕ್ಷೆಯೇ ಸರಿ. ನಾನಂತೂ ಮೊದ ಮೊದಲು ಅಳತೆ ಗೊತ್ತಾಗದೇ ಹೆಚ್ಚು ಮಾಡಿ, ತಿಂಡಿ ತಿಂದೂ ಮತ್ತೆ ಉಳಿದದ್ದನ್ನು ಮಧ್ಯಾಹ್ನದ ಡಬ್ಬಿಗೆಂದು ತಂದವನೇ ಊಟಕ್ಕೆ ಕುಳಿತಾಗ ‘ಮತ್ತೆ ತಿನ್ನಬೇಕೇ?’ ಎಂಬ ಧರ್ಮಸಂಕಟಕ್ಕೆ ಸಿಕ್ಕಿಕೊಂಡಿದ್ದೆ. ಇದಕ್ಕೆ ವಿರುದ್ಧವಾಗಿ, ನಮ್ಮ ಮನೆಯಲ್ಲಿ ತುಂಬಾ ಚೆನ್ನಾಗಿ ಉಪ್ಪಿಟ್ಟು ಸಿದ್ಧವಾಗಿದ್ದ ದಿನಗಳಲ್ಲಿ ಉಳಿದರೆ, ರಾತ್ರಿಯೂಟದ ತನಕ ಅದು ಲವಲವಿಕೆಯಿಂದ ಇದ್ದರೆ, ಅದನ್ನೇ ಸ್ವಲ್ಪವೇ ಬೆಚ್ಚಗೆ ಮಾಡಿ ಇಷ್ಟಪಟ್ಟು ತಿಂದಿದ್ದೂ ಉಂಟು. ಇದೆಲ್ಲವೂ ಉಪ್ಪಿಟ್ಟು ಮಾಡುವಾಗಿನ ಮತ್ತು ತಿನ್ನುವಾಗಿನ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ರವೆಗೆ ವ್ಯಾಲ್ಯೂ ಬರಬೇಕಾದರೆ ಮತ್ತು ಕೊಡಬೇಕಾದರೆ ರವೆಗೂ ಅದೃಷ್ಟ ಬೇಕು; ತಯಾರಿಸುವವರಿಗೂ ಇರಬೇಕು ಜೊತೆಗೆ ಒಂದೊಳ್ಳೆಯ ಉಪ್ಪಿಟ್ಟನ್ನು ತಿನ್ನುವುದು ನಮ್ಮ ಹಣೆಯಲ್ಲಿ ಬರೆದಿರಬೇಕು. ಇಲ್ಲಿದಿದ್ದರೆ ಅದು ಮೂಲೆಗುಂಪು. ಬೇರಾವ ತಿಂಡಿಗೂ ಸಿಗದ ಮರ್ಯಾದೆಯನ್ನೂ ಅವಜ್ಞೆಯನ್ನೂ ಒಟ್ಟೊಟ್ಟಿಗೆ ಪಡೆದು ಜೀವನದಲ್ಲಿ ನೊಂದು ಬೆಂದು ಬಸವಳಿದ ಉಪಾಹಾರವೆಂದರೆ ಅದು ಉಪ್ಪಿಟ್ಟೇ ಇರಬೇಕು. ಅತಿ ಹೆಚ್ಚು ಉಳಿಪೆಟ್ಟನ್ನು ತಿಂದ ಕಗ್ಗಲ್ಲು ದೇವರ ವಿಗ್ರಹವಾಗುವಂತೆ, ವಿಪರೀತ ಬಯ್ಯಿಸಿಕೊಳ್ಳುವ ಉಪ್ಪಿಟ್ಟು ಒಮ್ಮೊಮ್ಮೆ ಅದ್ಭುತವಾಗಿ ಅರಳಿ ಬಿಡುತ್ತದೆ. ಇದು ನಮ್ಮ ಅರಿವಿಗೆ ಬರುವುದು ಯಾವಾಗೆಂದರೆ ಸಭೆ ಸಮಾರಂಭಗಳಂದು.
ಅದರಲ್ಲೂ ಮದುವೆ ಮನೆಗಳ ಬೆಳಗಿನ ಉಪಾಹಾರಕ್ಕೆ ಇಡ್ಲಿ ಚಟ್ನಿ ಸಾಂಬಾರು ಬಿಟ್ಟರೆ ಇನ್ನೊಂದು ಆಯ್ಕೆ ಇರುವುದೇ ಈ ಉಪಮಾಗೆ. ಸ್ವಲ್ಪವೇ ಖಾರ ಮುಂದಿರುವ ತರಕಾರಿಯುಪ್ಪಿಟ್ಟನ್ನು ಅಡುಗೆಯವರು ಲಾರ್ಜ್ ಕ್ವಾಂಟಿಟಿಯಲ್ಲಿ ತಯಾರು ಮಾಡಿದರೆಂದರೆ ತಿಂದವರು ಇನ್ನೊಮ್ಮೆ ಬಡಿಸಿಕೊಳ್ಳಲು ಕಾಯುವಂತಾಗಿರುತ್ತದೆ. ಈಗಂತೂ ಊಟೋಪಚಾರಕ್ಕೆ ಪ್ರಮುಖ ಆದ್ಯತೆ ನೀಡುವ ಮದುವೆ ಮನೆಯವರು ಒಂದಕ್ಕಿಂತ ಹೆಚ್ಚಿನ ಐಟಂಗಳನ್ನು ಮಾಡಿಸಿ, ಬಡಿಸಿ, ತಿನ್ನಿಸಿ ಸಂತಸ ಪಡಿಸುವರು. ಹಾಗಿರುವಾಗ ಉಪ್ಪಿಟ್ಟು ತನ್ನ ಸ್ಥಾನವನ್ನು ಸದಾ ಕಾಯ್ದುಕೊಳ್ಳುವುದು. ಅದರಲ್ಲೂ ಸಮಯಾಭಾವ ಇದ್ದಾಗಲಂತೂ ತಕ್ಷಣಕೆ ಅಡುಗೆಯವರಿಗೆ ಜ್ಞಾಪಕಕ್ಕೆ ಬರುವುದು ಈ ಉಪಮಾಲಂಕಾರವೇ! ಮಾಡುವುದೂ ಬಡಿಸುವುದೂ ತಿನ್ನುವುದೂ ಎಲ್ಲವೂ ಸುಲಭ. ಬಡವರಿಗೂ ಭಾಗ್ಯವಂತರಿಗೂ ಉಪ್ಪಿಟ್ಟು ಪ್ರಿಯವಾದ ಉಪಾಹಾರ. ಆದರೆ ರುಚಿಯಾಗಿರಬೇಕು. ಹಿಂದೆ ‘ಉಪ್ಪಿಟ್ಟು ಕಾಫಿ ಆತಿಥ್ಯ’ವೆಂದರೆ ಗೌರವ ಮತ್ತು ಮರ್ಯಾದೆಗಳು ಉಳಿಯುತ್ತಿದ್ದವು. ಮಿನಿಮಮ್ ಆತಿಥ್ಯವೆಂದು ಪರಿಗಣಿಸಲಾಗುತ್ತಿತ್ತು. ಹೆಣ್ಣು ನೋಡಲು ಹೋಗುವ ಗಂಡಿನ ಮನೆಯವರು ಕನಿಷ್ಠವೆಂದರೆ ಉಪ್ಪಿಟ್ಟು ಕಾಫಿಯನ್ನಾದರೂ ನಿರೀಕ್ಷಿಸುತ್ತಿದ್ದರು. ಉಪ್ಪಿಟ್ಟನ್ನೂ ಸರಿಯಾಗಿ ಮಾಡಲು ಬರದ ಕುಟುಂಬದಿಂದ ಹೆಣ್ಣು ತರುವುದು ನಮ್ಮ ಮನೆತನಕ್ಕೆ ಮತ್ತು ಊಟೋಪಚಾರದ ಹೆಸರುವಾಸಿಗೆ ಕುಂದೆಂದು ಭಾವಿಸುತ್ತಿದ್ದರು.
ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿಯ ಸೋದರತ್ತೆ ಬಿಳಿಸೀರೆ ನಾಗುಬಾಯಿ ಎಂಬುವವರು ನಮ್ಮ ಹತ್ತಿರದ ನೆಂಟರ ಹುಡುಗನ ಮನೆಯವರಿಗೆ ಎಲ್ಲವೂ ಒಪ್ಪಿತವಾಗಿದ್ದ ಸಂಬಂಧವೊಂದನ್ನು ಕೆಟ್ಟುಪ್ಪಿಟ್ಟು ತಿಂದ ಕಾರಣವಾಗಿ ತುಂಡರಿಸಿ, ವಿಘ್ನ ಸಂತೋಷಿಗಳಾಗಿದ್ದು ನನಗಿನ್ನೂ ನೆನಪಿದೆ. ಅಚ್ಚರಿಯೆಂದರೆ, ನಾಗೂಬಾಯಿಯ ಬಾಲವಿಧವಾತನದ ಹಿನ್ನೆಲೆಯಲ್ಲಿ ಹುಟ್ಟಿದ ಮಾನಸಿಕ ಅಸಮತೋಲನದ ಪರಿಣಾಮವಾಗಿ ಉಂಟಾದ ಅತೃಪ್ತಿ-ಅಸಮಾಧಾನಗಳ ದುಷ್ಟ ಪ್ರವೃತ್ತಿಯನ್ನು ಅರ್ಥ ಮಾಡಿಕೊಳ್ಳದ ನಮ್ಮ ಬಂಧುಗಳು ಪಾಪದ ಪದಾರ್ಥ ಉಪ್ಪಿಟ್ಟನ್ನು ವಿಲನ್ ಮಾಡಿದ್ದು, ಸಂಬಂಧ ಮಾಡಲು ಹಿಂಜರಿದದ್ದು. ಪರಸ್ಪರ ಮನಸಾರೆ ಒಪ್ಪಿತವಾಗಿದ್ದ ಆ ಗಂಡೂ ಹೆಣ್ಣು ಇಬ್ಬರೂ ಜೀವಮಾನ ಪರ್ಯಂತ ಈ ಕಾರಣವಾಗಿ, ಉಪ್ಪಿಟ್ಟಿನ ದ್ವೇಷಿಗಳಾಗಿಬಿಟ್ಟರೇನೋ ಎಂದು ಈಗ ನನಗನ್ನಿಸ ಹತ್ತಿದೆ! ಹೀಗೆ, ಕಣ್ಣು ಕಿವಿ ಬಾಯಿ ಮಾಡಿದ ತಪ್ಪಿಗೆ ಕೆನ್ನೆಗೆ ಏಟು ಬೀಳುವಂತೆ, ಉಪ್ಪಿಟ್ಟು ವಿನಾಕಾರಣ ವಿಲನಾಗಿ ಶಿಕ್ಷೆ ಅನುಭವಿಸುವಂತಾಯಿತು.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿಯೂ ಟ್ರ್ಯಾಜಿಕ್ ಕಮೆಡಿಯನ್ ಆಗಿಯೂ ಹೆಸರಾಗಿರುವ ಶ್ರೀ ಸುಜಯ್ ಶಾಸ್ತ್ರೀಯವರು ತಮ್ಮ ವೆಬ್ ಸೀರಿಸ್‌ನಲ್ಲಿ ‘ನೊಂದ ನಾಣಿʼ ಯಾಗಿ ತಮ್ಮದೊಂದು ಪಾತ್ರವನ್ನು ನಿಭಾಯಿಸುತ್ತಾ, ‘ಉಪ್ಪಿಟ್ಟಿಗೂ ಫೋರ್ಕ್ ಹಾಕಿ ಕೊಡೋ ಈ ಸಮಾಜದಲ್ಲಿ……..’ ಎಂಬ ಡೈಲಾಗು ಹೇಳುತ್ತಾರೆ. ಪುಣ್ಯಕ್ಕೆ ಉಪ್ಪಿಟ್ಟನ್ನು ಹೀಗಳೆಯದೇ, ಸ್ಪೂನಿನ ಬದಲು ಫೋರ್ಕ್ ಕೊಡುವ ಮಂದಿಯ ಮಾನಸಿಕ ಕೀಟಲೆಗಳನ್ನು ಬಹಿರಂಗಗೊಳಿಸುತ್ತಾರೆ. ಇದನ್ನು ಹೊರತುಪಡಿಸಿದಂತೆ, ಚಲನಚಿತ್ರಗಳಲ್ಲೂ ಉಪ್ಪಿಟ್ಟು ಕುಖ್ಯಾತಿಯಾಗಿಯೇ ಚಿತ್ರಿತವಾಗಿದೆ. ಒಂದು ಸಿನಿಮಾದಲ್ಲಂತೂ ಹೆಂಡತಿ ಮಾಡಿದ ಉಪ್ಪಿಟ್ಟನ್ನು ಗಂಡನು ತಿನ್ನದೇ, ಡೈನಿಂಗ್ ಟೇಬಲಿನಿಂದ ಸೀದಾ ಎದ್ದು ‘ನೀನೇ ತಿನ್ಕೋ’ ಎನ್ನುತ್ತಾ ಆಫೀಸಿಗೆ ಹೊರಟು ಬಿಡುತ್ತಾನೆ. ಇಂಥಲ್ಲಿ ನಿರ್ದೇಶಕರು ಮಡದಿಯ ಮೇಲಿರುವ ಗಂಡನ ಅಸಹನೆ ಬೆರೆತ ಸಿಟ್ಟನ್ನು ಉಪ್ಪಿಟ್ಟಿನ ಮೂಲಕ ಹೊರ ಹಾಕಿಸಿ, ತಮ್ಮ ಸೃಷ್ಟಿಶೀಲತೆಯನ್ನು ಮೆರೆಯುತ್ತಾರೆ. ನಿಜ ಹೇಳಬೇಕೆಂದರೆ ನನಗೂ ಉಪ್ಪಿಟ್ಟು ಎಂದಾಗ ತಿಂಡಿ ತಿನ್ನುವ ಉತ್ಸಾಹವಂತೂ ಸ್ವಲ್ಪ ಕುಗ್ಗುತ್ತದೆ; ಆದರೆ ಅಂದು ರುಚಿಕರವಾಗಿದ್ದರೆ ಎರಡನೆಯ ಸಲ ಕೇಳಿ ಹಾಕಿಸಿಕೊಳ್ಳುತ್ತೇನೆ. ಕೆಲವೊಂದು ತಿಂಡಿಗಳು ಹಾಗೆಯೇ. ವಸ್ತುವಿನ ಜೊತೆ ವಾಸ್ತುವೂ ಮುಖ್ಯವೆನಿಸಿ ಬಿಡುತ್ತದೆ. ಒಮ್ಮೆ ಚೆನ್ನಾದದ್ದು ಇನ್ನೊಮ್ಮೆ ಚೆನ್ನಾಗದೇ, ಬಂದ ನೆಂಟರಿಷ್ಟರ ಮುಂದೆ ಮಾನ ತೆಗೆದು ಬಿಡುತ್ತದೆ. ಕೆಲವೊಮ್ಮೆ ಕಾಟಾಚಾರಕ್ಕೆ ಮಾಡಿದ ಬೋಳುಪ್ಪಿಟ್ಟು ಅದ್ಭುತವಾದ ರುಚಿಯಿಂದಾಗಿ ದಶಕಗಳ ಕಾಲ ನೆನಪಿನಲ್ಲಿಡುವಂತೆ ಮಾಡಿ ಬಿಡುತ್ತದೆ. ಹವಾಮಾನ ಮತ್ತು ಹೆಂಡತಿಯ ಸ್ವಭಾವ – ಇವೆರಡೂ ಯಾವಾಗ ಬೇಕಾದರೂ ಬದಲಾಗಬಹುದು ಎಂಬ ಮಾತಿದೆ. ಅದರಂತೆ ಈ ಉಪ್ಪಿಟ್ಟೆಂಬುದು ಯಾವಾಗ ಯಾರ ಕೈಲಿ ಹೇಗೆ ಚೆನ್ನಾಗುತ್ತದೋ ಆ ಪರಮಾತ್ಮನಿಗೂ ತಿಳಿಯದ ನಿಗೂಢ. ಅದರಂತೆ ಯಾರ ಕೈಲಿ ಕೆಡುತ್ತದೋ ಅದನ್ನೂ ಶಿವನೇ ಬಲ್ಲ. ಎಲ್ಲೋ ಒಂದು ಸ್ವಲ್ಪ ವ್ಯತ್ಯಾಸವಾದರೂ ಉಪ್ಪಿಟ್ಟನ್ನು ತಿನ್ನಲಾಗದು. ರವೆಯು ಹದವಾಗಿ ಹುರಿಯದೇ ಇದ್ದಾಗ, ಹೆಚ್ಚು ಹುರಿದು ಸೀದು ಹೋದಾಗ, ನೀರು ಹೆಚ್ಚಾದರೆ, ಉಪ್ಪು ಖಾರ ಕಡಮೆಯಾದರೆ, ವಗ್ಗರಣೆಯು ಹೆಚ್ಚು ತಾಪದಿಂದ ಕರ್ರಗಾದರೆ ಟೋಟಲಿ ಉಪ್ಪಿಟ್ಟು ಕಸದ ಬುಟ್ಟಿ ಸೇರುತ್ತದೆ.
ಹೊಟೆಲುಗಳಲ್ಲಿ ನಾನು ಉಪ್ಪಿಟ್ಟು ತಿನ್ನುವುದು ತುಂಬಾನೇ ಅಪರೂಪ. ಆದರೆ ಉಪ್ಪಿಟ್ಟೇ ಫೇಮಸಾದ ಹೊಟೆಲುಗಳಿಗೆ ಹೋಗಬೇಕಾದ ಆಕಸ್ಮಿಕ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ತಿಂದದ್ದುಂಟು. ನಮ್ಮ ತಾಯಿಯ ಅಕ್ಕನ ಪತಿ (ನನಗೆ ದೊಡ್ಡಪ್ಪ) ದೂರದ ಬಾಂಬೆಯಲ್ಲಿ ಮೆಡಿಕಲ್ ರೆಪ್ ಆಗಿದ್ದರು. ವರ್ಷಕ್ಕೊಂದೆರಡು ಬಾರಿ ಬಂದಾಗ ನಮ್ಮ ಮನೆಗೆ ಬಂದು ಮಾತಾಡಿಸಿಕೊಂಡು, ನನ್ನನ್ನು ಜೊತೆಗೆ ಕರೆದುಕೊಂಡು ಹೋಗಿ, ಕೃಷ್ಣಮೂರ್ತಿಪುರಂನ ‘ಹೊಟೆಲ್ ಬಲ್ಲಾಳ್’ ನಲ್ಲಿ ತಪ್ಪದೇ ಉಪ್ಪಿಟ್ಟು ತಿಂದು, ನನಗೂ ತಿನ್ನಿಸುತ್ತಿದ್ದರು ಮತ್ತು ಕಾಫಿ ಕುಡಿಯುತ್ತಿದ್ದರು. ‘ದೊ ಖಾರಾಬಾತ್, ಚಾಯೆ ಗರ್ಮೀ ಹೋ’ ಎನ್ನುತ್ತಿದ್ದರು. ನಾನಾಗ ಚಿಕ್ಕವನು; ನನಗದು ಬಾಯಿಪಾಠವಾಗಿತ್ತು. ಕನ್ನಡಭಾಷೆ ಬಂದರೂ ಬಾಂಬೆಯಲ್ಲೇ ಇದ್ದೇನೆಂಬ ಭ್ರಮೆಯಿಂದ ಮಧ್ಯೆ ಮಧ್ಯೆ ಹಿಂದಿ ಬಳಸುತ್ತಿದ್ದರು. ಏನೇ ಹೇಳಲಿ, ಕೇಳಲಿ, ಅಚ್ಛಾ ಎನ್ನುತ್ತಿದ್ದರು. ‘ಖಾರಾಬಾತ್ ಅಂದ್ರು, ಉಪ್ಪಿಟ್ಟು ತಂದಿಡುತ್ತಿದ್ದಾನಲ್ಲ’ ಎಂದು ನಾನು ಹುಬ್ಬುಗಂಟಿಕ್ಕಿದ್ದಿದೆ. ‘ಚಾಯ್ ಅಂದ್ರು, ಇದೇನಿದು ಕಾಫಿ ಸ್ಮೆಲ್ ಬರ್ತಿದೆಯಲ್ಲಾ’ ಎಂದು ನಾನು ಗೊಂದಲವಾಗಿದ್ದಿದೆ. ‘ದೊಡ್ಡಪ್ಪ, ನೀವು ಟೀ ಬೇಕು ಅಂದ್ರೀ ಅಲ್ವಾ, ಮತ್ತೆ ಕಾಫಿ ತಂದೀದಾನಲ್ಲ’ ಅಂದರೆ ಜೋರಾಗಿ ನಕ್ಕು, ಉಪ್ಪಿಟ್ಟು ಬಿಸಿ ಇರಲಿ ಎಂದಿದ್ದು ಎಂದು ಕರೆಕ್ಷನ್ ಮಾಡಿದ್ದರು. ಇದು ಬಿಟ್ಟರೆ ಇನ್ನು ಚಾಮುಂಡಿಪುರಂನ ಗಾಯತ್ರಿ ಹೊಟೆಲ್(ಜಿಟಿಆರ್) ನಲ್ಲಿ ಉಪ್ಪಿಟ್ಟು ಫೇಮಸ್ಸು. ಸಯ್ಯಾಜಿರಾವ್ ರೋಡಲ್ಲಿ ಹೊಟೆಲ್ ಆನಂದಭವನ ಅಂತ ಇತ್ತು. ಅಲ್ಲಿಯೂ ಉಪ್ಪಿಟ್ಟು ಬಹು ಜನಪ್ರಿಯ. ಇಡ್ಲಿ ತಿಂದೂ ತಿಂದೂ ಬೇಜಾರಾದ ಕೆ ಆರ್ ಆಸ್ಪತ್ರೆಯ ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುತ್ತಿದ್ದ ಮಂದಿಯೇ ಈ ಹೊಟೆಲಿನ ಖಾಯಂ ಗಿರಾಕಿಗಳು. ಟ್ರಾಫಿಕ್ಕೇ ಇಲ್ಲದ ಆಗಿನ ಮೈಸೂರಿನಲ್ಲಿ ಸಯ್ಯಾಜಿರಾವ್ ರೋಡಿಗೆ ನಿವೃತ್ತರನೇಕರು ವಾಕಿಂಗ್ ಎಂದು ಬಂದು ಈ ಹೊಟೆಲಿನ ಉಪ್ಪಿಟ್ಟು ತಿಂದು ಹರಟೆ ಮುಗಿಸಿ ತೆರಳುತ್ತಿದ್ದರು. ಇಡ್ಲಿ ದೋಸೆಗಳ ನಂತರದ ಸ್ಥಾನವೇ ಉಪ್ಪಿಟ್ಟಿಗೆ ದೊರಕಿದ್ದರೂ ಪಾಪ, ಅದು ಎಂದೂ ಬೇಸರ ಮಾಡಿಕೊಂಡೇ ಇಲ್ಲ. ನನಗೆ ಮೂರನೆಯ ಬಹುಮಾನ ಬಂತಲ್ಲ ಎಂದು ಪೇಚಾಡುವುದಕಿಂತ ಸದ್ಯ, ಗುರುತಿಸಿದ್ದಾರಲ್ಲ ಎಂಬುದೇ ಅದರ ಸಮಾಧಾನ! ಅಂತೂ ಈ ಉಪಮಾಲಂಕಾರವು ಎಲ್ಲರ ಮನೆಯ ಖಾಯಂ ಗಿರಾಕಿ. ವಾರಕ್ಕೊಮ್ಮೆಯಾದರೂ ಇದನ್ನು ಮಾಡುವ ಗೃಹಿಣಿಯರೂ ತಿಂದು ಖುಷಿ ಪಡುವ ಗೃಹಸ್ಥರೂ ಇದ್ದಾರೆ. ಉಪ್ಪಿಟ್ಟು ಎಂದರೆ ಹಳೆಕಾಲದವರು. ಉಪಮಾ ಎಂದರೆ ಈಗಿನ ಕಾಲದವರು! ಜೊತೆಗೆ ಹಳೆಗಾಲದ ಉಪಾಹಾರವನ್ನು ಅಪ್‌ಗ್ರೇಡ್ ಮಾಡಿದ ಖುಷಿಯೂ. ಕೊನೆಗೊಂದು ಮಾತು: ಉಪ್ಪಿಟ್ಟನ್ನೂ ನಿಷ್ಠೆ ಮತ್ತು ಪ್ರೀತಿಯಿಂದ ಮಾಡುತ್ತಾರೆಂದರೆ ಅವರು ಇನ್ನೆಲ್ಲ ಅಡುಗೆಯನ್ನೂ ಚೆನ್ನಾಗಿ ಮಾಡುತ್ತಾರೆ ಎಂದೇ ಅರ್ಥ. ಯಾರು ಉಪ್ಪಿಟ್ಟನ್ನು ಕೆಡಿಸುತ್ತಾರೋ ಅವರು ಅಡುಗೆಯಲ್ಲಿ ಅಷ್ಟಕಷ್ಟೇ! ಇದು ಬದುಕಿನ ಸತ್ಯ. ಹಾಗಾಗಿ ಜೀವನದ ಬಹುಮುಖ್ಯವಾದ ಸತ್ಯವನ್ನು ತಿಳಿಯಲು ಉಪ್ಪಿಟ್ಟೇ ಮಾನದಂಡ. ‘ಉಪ್ಪಿಟ್ಟವರನ್ನು ಮುಪ್ಪಿನ ತನಕ ನೆನೆ’ (Be ever grateful to those who helped you) ಎಂಬ ಮಾತು ಜನಜನಿತ. ಅದರಂತೆ ಒಂದೊಳ್ಳೆಯ ಉಪ್ಪಿಟ್ಟು ಮಾಡಿ ಬಡಿಸಿದವರನ್ನೂ ಬಾಳುವೆಯ ಕೊನೆಯವರೆಗೂ ನೆನೆಯಬೇಕು. ಉಪ್ಪಿಟ್ಟು ಎಂಬ ಹೆಸರಿನಲ್ಲಿ ಉಪ್ಪು ಮತ್ತು ಹಿಟ್ಟು ಎರಡೇ ಇರಬಹುದು. ಆದರೆ ಇವೆರಡಕ್ಕೆ ಸೇರ್ಪಡೆಯಾಗುವ ಇನ್ನಿತರ ಇನ್‌ಗ್ರಿಡೆಂಟ್ಸ್ ಎಂಬವು ಉಪ್ಪಿಟ್ಟಿನ ಹಣೆಯ ಬರೆಹವನ್ನೇ ಬದಲಾಯಿಸಬಲ್ಲವು! ಯಾರ ಜೊತೆ ಸೇರಿದರೆ ಏನಾಗುತ್ತೇವೆ? ಏನೇನಾಗುತ್ತೇವೆ? ಎಂಬ ಸಹವಾಸಗುಣದೋಷಕ್ಕೆ ಇದಕ್ಕಿಂತ ಬೇರೆ ಪ್ರತಿಮೆ ಬೇಕೆ? ಹಾಗಾಗಿ ಇದು ಕೇವಲ ಉಪಮಾಲಂಕಾರ ಮಾತ್ರವಲ್ಲ; ಪ್ರತಿಮಾಲಂಕಾರ ಕೂಡ! ಕೆಲವೊಂದಕ್ಕೆ ಕೆಲವೊಂದು ನಿರ್ದಿಷ್ಟ ಕ್ರಿಯಾಪದಗಳು ಬಳಕೆಯಾಗುತ್ತವೆ. ಆ ವಿಚಾರದಲ್ಲಿ ದೋಸೆ ಬರೆಯುವುದು, ಇಡ್ಲಿ ಬೇಯಿಸುವುದು, ರೊಟ್ಟಿ ಬಡಿಯುವುದು, ಸಾರು ಕುದಿಸುವುದು, ಚಪಾತಿ ಸುಡುವುದು, ಉಪ್ಪಿಟ್ಟು ಕೆದಕುವುದು ಎಂದೆಲ್ಲಾ ಹೇಳುವುದುಂಟು. ಅಡುಗೆ ಮಾಡಬೇಕಲ್ಲಾ ಎಂಬ ಬೇಸರಾಲಸ್ಯಗಳು ಇದರೊಳಗೆ ಹುದುಗಿವೆ. ಅದರಂತೆ ಉಪ್ಪಿಟ್ಟನ್ನು ಕೆದಕುವುದೆಂದರೆ ಅದು ಕೆಟ್ಟುಪ್ಪಿಟ್ಟೇ; ಉಪಮಾಲಂಕಾರದಿಂದ ನಿನ್ನನ್ನು ಸಂತಸಗೊಳಿಸುವೆ ಎಂದರೆ ಅದು ತಿನ್ನಬಲ್ ಉಪ್ಪಿಟ್ಟೇ!
ಕೊನೆಯಲ್ಲೊಂದು ಕತೆ: ಕೃಷ್ಣ ಪರಮಾತ್ಮನಿಗೆ ಅವಲಕ್ಕಿ ಬಲು ಪ್ರಿಯವೇ ಇರಬಹುದು. ಆದರೆ ಆತನೂ ಉಪ್ಪಿಟ್ಟಿಗೆ ಮಾರು ಹೋದ ಪ್ರಸಂಗವೊಂದಿದೆ. ಒಂದೇ ಗುರುಕುಲದಲ್ಲಿ ಕಲಿಯುತ್ತಿದ್ದ ಕೃಷ್ಣ ಸುಧಾಮರಿಬ್ಬರು ಒಮ್ಮೆ ಗುರುಗಳಾದ ಸಾಂದೀಪ ಮುನಿಯ ಸೂಚನೆಯಂತೆ, ಅಧ್ಯಯನದ ಕಾರಣವಾಗಿ, ಅರಣ್ಯದ ಬಳಿಗೆ ಹೋಗಿ ಯಾವುದೋ ಔಷಧೀಯ ಸಸ್ಯವನ್ನು ಹುಡುಕಿ ತರಬೇಕಾಗುತ್ತದೆ. ಎಷ್ಟು ಹುಡುಕಿದರೂ ಅದು ಕಣ್ಣಿಗೆ ಬೀಳುವುದಿಲ್ಲ. ಆ ವೇಳೆಗಾಗಲೇ ಮಧ್ಯಾಹ್ನವಾಗಿ ಕೃಷ್ಣನಿಗೆ ಹಸಿವಾಗುತ್ತದೆ; ಜೊತೆಗೆ ನೀರಡಿಕೆಯೂ. ಸುಧಾಮನಿಗೆ ಹೇಳಿದಾಗ ಅವನು ಚಿಂತಿತನಾಗುತ್ತಾನೆ. ಗುರುಗಳ ಕುಟೀರಕ್ಕಿಂತ ನಮ್ಮ ಮನೆಯೇ ಇಲ್ಲಿಂದ ಸಮೀಪವಿದೆ ಎಂಬುದನ್ನು ಕಂಡುಕೊಂಡು, ಸುಧಾಮನು ಕೃಷ್ಣನನ್ನು ಕರೆದುಕೊಂಡು ಹೋಗುವನು. ಅದೃಷ್ಟವೆಂಬಂತೆ, ಸುಧಾಮನ ಮನೆಗೆ ಹೋಗುವ ದಾರಿಯಲ್ಲಿ ಆ ಔಷಧೀಯ ಸಸ್ಯವು ಕಣ್ಣಿಗೆ ಕಂಡು ಇಬ್ಬರೂ ಸಂತೋಷಭರಿತರಾಗುವರು. ಆದಾಗ್ಯೂ ಸುಧಾಮನ ಮನೆಗೆ ಹೋದಾಗ ಕೃಷ್ಣನಿಗೆ ಇಷ್ಟವಾದ ಅವಲಕ್ಕಿಯು ಮನೆಯಲ್ಲಿ ಇಲ್ಲದೇ ಪೇಚಾಟವಾಗುತ್ತದೆ. ಕೊನೆಗೆ ಇಬ್ಬರು ಮಕ್ಕಳಿಗೂ ಸುಧಾಮನ ಅಜ್ಜಿಯು ಗೋಧಿಯ ನುಚ್ಚಿನಿಂದ ಉಪ್ಪಿಟ್ಟು ತಯಾರಿಸಿ ಉಣಬಡಿಸುವರು. ಇದರ ರುಚಿ ನೋಡಿರದಿದ್ದ ಕೃಷ್ಣನು ಇಷ್ಟಪಟ್ಟು ತಿನ್ನುವನು ಮತ್ತು ಮನಸಾರೆ ಶ್ಲಾಘಿಸುವನು. ಕಡು ಬಡವರಾದ ಸುಧಾಮನ ಮನೆಯವರು ಸೌದೆಕಟ್ಟಿಗೆಯಲ್ಲಿ ಮಾಡಿದ ಉಪ್ಪಿಟ್ಟು ಕೃಷ್ಣನಿಗೆ ತುಂಬಾ ಇಷ್ಟವಾಗಿ, ತನ್ನ ಮನೆಗೆ ಹೋದ ಮೇಲೆ ತಾಯಿಗೆ ಹೇಳಿ ಮಾಡಿಸಿಕೊಂಡು, ಅದರ ಮೇಲೆ ತುಪ್ಪ ಸುರಿದುಕೊಂಡು ತಿಂದರೂ ಆತನಿಗೆ ತನ್ನ ಗೆಳೆಯನ ಮನೆಯ ಉಪ್ಪಿಟ್ಟಿನ ರುಚಿ ದೊರಕುವುದಿಲ್ಲ! ಆಗ ಆತ ಅಂದುಕೊಳ್ಳುವನು: ಅವರ ಮನೆಯಲ್ಲಿ ಸಮೃದ್ಧಿಯಾಗಿ ಪದಾರ್ಥಗಳು ಇಲ್ಲದಿದ್ದರೂ ಪ್ರೀತಿ ಮಮತೆಗಳಿಂದ ಮಾಡಿ, ಬಡಿಸಿದ್ದರಿಂದಲೇ ಆ ಉಪ್ಪಿಟ್ಟಿಗೆ ಅಂಥ ದಿವಿನಾದ ರುಚಿ ಲಭಿಸಿದ್ದು ಎಂಬುದಾಗಿ. ನಾನು ಪುಟ್ಟವನಾಗಿದ್ದಾಗ ನಮ್ಮಜ್ಜಿಯ ಜೊತೆಯಲ್ಲಿ ಮೈಸೂರಿನ ನಲ್ಲಪ್ಪ ಠಾಣಾ ಪೊಲೀಸ್ ಕಛೇರಿಯ ಎದುರು ಇರುವ ಶ್ರೀ ಕೃಷ್ಣಮಂದಿರಕ್ಕೆ ಹೋಗಿದ್ದಾಗ ಅಲ್ಲಿನ ಪುರಾಣಿಕರು ಹೇಳಿದ್ದ ಉಪಕತೆಯಿದು. ಅದಾದ ಮೇಲೆ ಸುಧಾಮನ ಅಜ್ಜಿಯ ಜಾಗದಲ್ಲಿ ನಾನು ನಮ್ಮಜ್ಜಿಯನ್ನಿಟ್ಟು, ನೋಡುತ್ತಿದ್ದೆ. ಅದರಲ್ಲೂ ವಿಶೇಷವಾಗಿ ಬೋಳುಪ್ಪಿಟ್ಟನ್ನು ತಿನ್ನುವಾಗಲೆಲ್ಲ.
ಇದರ ಕತೆ ಏನೇ ಇರಲಿ, ಹೇಗೆ ಇರಲಿ, ಯಾರೇ ಹೇಳಿರಲಿ ನೀತಿಯಿಷ್ಟೆ: ಬರೀ ಅವಲಕ್ಕಿ ಮಾತ್ರವಲ್ಲ, ಉಪ್ಪಿಟ್ಟೂ ಶ್ರೀ ಕೃಷ್ಣ ಪರಮಾತ್ಮನಿಗೆ ಪ್ರಿಯವಾದದ್ದು ಜೊತೆಗೆ ನಿಷ್ಠೆ ಮತ್ತು ಭಕ್ತಿಯಿಂದ ಮಾಡಿ, ಪ್ರೀತಿಯಿಂದ ಬಡಿಸಿದರೆ ಆಗ ಎಂಥ ಉಪ್ಪಿಟ್ಟಿಗೂ ನೈವೇದ್ಯಗೊಂಡ ಪ್ರಸಾದದ ರುಚಿ ಹತ್ತುತ್ತದೆಂಬುದು. ನಿಜ, ಎಲ್ಲವೂ ಆ ದೇವರ ಪ್ರಸಾದವಾದರೂ ದೇವಸ್ಥಾನದ ಪ್ರಸಾದಕ್ಕೆ ವಿಶೇಷವಾದ ರುಚಿ ಬರುವಂತೆ, ಉಪ್ಪಿಟ್ಟಿಗೂ ದಿವ್ಯವೂ ಭವ್ಯವೂ ಆದ ಟೇಸ್ಟು ಬರಬೇಕಾದರೆ ತಯಾರಿಸುವಾಗ ಕಾಳಜಿ ಇರಬೇಕು; ತಿನ್ನುವಾಗ ಹಸಿವೆಯಿರಬೇಕು ಅಷ್ಟೇ. ಓಂ ನಮೋ ಉಪ್ಪಿಟ್ಟಾಯಃ ; ಓಂ ಉಪಮಾಲಂಕಾರ ಭೂಷಿತಾಯ ನಮಃ!
–ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ
ಉಪ್ಪಿಟ್ಟು ಪುರಾಣ ತುಂಬ ಚೆನ್ನಾಗಿ ದೆ
ಹೌದೇ, ಧನ್ಯವಾದ ಮೇಡಂ….
ಸುರಹೊನ್ನೆಗೆ ಅನಂತಾನಂತ ಕೃತಜ್ಞತೆಗಳು.
ಹಾಗೆಯೇ ಪೂರ್ಣ ಓದಿ, ಪ್ರತಿಕ್ರಿಯಿಸುವ ಸಹೃದಯೀ ಓದುಗ ಬಳಗಕ್ಕೂ ಧನ್ಯವಾದಗಳು.
-ಹೆಚ್ ಎನ್ ಮಂಜುರಾಜ್
ಉಪಮಾಲಂಕಾರ ಬಹಳ ಸೊಗಸಾಗಿದೆ, ನನಗೂ ಖಾರಾಬಾತ್ ಎಂದರೆ ಬಹಳ ಇಷ್ಟ, ಕೆಲವು ಸಲ ನಾನೇ ಮಾಡಲು ಹೋಗಿ ಕೆಡಿಸಿಬಿಟ್ಟಿದ್ದೇನೆ, ಆಮೇಲೆ ಮನೇಲಿ ಒಬ್ಬರು ಸಹಾಯಕ್ಕೆ ಅಂತ ಇರ್ತಾರಲ್ಲ ಅದೇ ಮಡದಿ, ಅವರು ಬಂದು ಸರಿ ಮಾಡೋದು ಸರ್
ವ್ಹಾವ್ ಪ್ರಸನ್ನ! ನಿಮ್ಮ ಕಮೆಂಟು ಇಷ್ಟವಾಯಿತು. ಧನ್ಯವಾದಗಳು.
ಅದೊಂದೇ ಅಲ್ಲ, ಎಲ್ಲವೂ ಮಡದಿಯಿಂದಲೇ ಸರಿ ಪಡಿಸಿಕೊಳ್ಳಬೇಕು.
ನನ್ನದೇ ವಕ್ರೋಕ್ತಿ : ಮದುವೆಯಾದ ಸ್ವಲ್ಪ ಹೊತ್ತು ಅಳುತ್ತಾನೆ; ಮದುವೆಯಾಗದವ ಅಳುತ್ತಲೇ ಇರುತ್ತಾನೆ !
ನಿಮ್ಮ ಉಪ್ಪಿಟ್ಟು ಪುರಾಣ ಅದ್ಭುತವಾಗಿ ಮೂಡಿ ಬಂದಿದೆ. ನೀವು ಇಷ್ಟು ಸುದೀರ್ಘವಾಗಿ ಬರೆದ ಮೇಲೆ ಒಮ್ಮೆ ರುಚಿ ನೋಡಬೇಕಾಗಿ ಅನಿಸಿದೆ. ನಿಮ್ಮ ಬರವಣಿಗೆಯಲ್ಲಿ ಏನೂ ಉತ್ಪ್ರೇಕ್ಷೆ ಅಥವಾ ಅತಿಶಯೋಕ್ತಿ ಅಲಂಕಾರಗಳು ವಶೀಲಿ ಹಚ್ಚಿಲ್ಲ ತಾನೇ!?
ಖಂಡಿತ ಇಲ್ಲ ದೇವ್ರು.
ನಿಮ್ಮ ಕಾಳಜಿಗೆ, ಪ್ರತಿಕ್ರಿಯಿಸಿದ ಮಮತೆಗೆ ಮತ್ತು ಓದಿನ ಖುಷಿಗೆ ನನ್ನ ಅನಂತ ಧನ್ಯವಾದಗಳು ಸರ್.
ಉಪಮಾ ಮತ್ತು ಪ್ರತಿಮಾ ಬಿಟ್ಟರೆ ಇನ್ನಾವ ಅಲಂಕಾರಗಳನೂ ಹಚ್ಚಿಲ್ಲ!
Sikkapatte Chennai decision uppittu
ಧನ್ಯವಾದಗಳು
ಯಾವ ವಿಷಯದ ಬಗ್ಗೆ ಆದರೂ ಆಳವಾದ ಅಧ್ಯಯನ ಮಾಡಿ, ತಿಳಿ ಹಾಸ್ಯದ ಲೇಪನದೊಂದಿಗೆ ಪ್ರಸ್ತುತ ಪಡಿಸುವ ನಿಮ್ಮ ಕ್ರಿಯಾಶೀಲತೆ ಅನುಪಮ! ಉಪ್ಪಿಟ್ಟಿನಂತಹ ಸರಳ ತಿನಿಸಿಗೆ ರಾಜಮರ್ಯಾದೆ ಕೊಟ್ಟ ಅದ್ಭುತವಾದ ‘ಉಪಮಾಲಂಕಾರ’ ಬರಹವನ್ನು ತಾವು ಇಷ್ಟಪಟ್ಟು ಉಪ್ಪಿಟ್ಟು ಸವಿದ ಹೋಟೆಲ್ ನವರಿಗೆ ತಲಪಿಸಿದರೆ ಅವರೂ ಸಂತಸಗೊಳ್ಳುವುದರಲ್ಲಿ ಸಂದೇಹವಿಲ್ಲ.
2016 ರಲ್ಲಿ, ನಾನು ಉತ್ತರಾಖಂಡದ ಬದರಿನಾಥ ಕ್ಷೇತ್ರದ ಸಮೀಪದಲ್ಲಿರುವ ಭಾರತದ ಕೊನೆಯ ಹಳ್ಳಿ ‘ಮಾನಾ’ ಎಂಬಲ್ಲಿಗೆ ಹೋಗಿದ್ದೆ. ಅಲ್ಲಿಂದ ಮುಂದೆ ಸೇನಾ ಸರಹದ್ದು. ಚೀನಾ ಆಕ್ರಮಿತ ಟಿಬೆಟ್ ಇದೆ. ಈ ಭಾಗದಲ್ಲಿ ‘ಭಾರತದ ಕೊನೆಯ ಚಹಾ ಸ್ಟಾಲ್’ ಎಂಬ ಫಲಕ ತಗಲಿಸಿಕೊಂಡಿದ್ದ ಚಿಕ್ಕ ಅಂಗಡಿಯಲ್ಲಿ ಚಹಾ ಮತ್ತು ಸ್ಠಳೀಯ ತಿನಿಸೊಂದನ್ನು ಖರೀದಿಸಿ ‘ಸೂಪರ್’ ಅಂದಿದ್ದೆ. ಅದೂ ಇದೂ ಹರಟುವಾಗ ಸಾಂದರ್ಭಿಕವಾಗಿ ನಾನು ಹವ್ಯಾಸಿ ಬರಹಗಾರ್ತಿ ಅಂದಿದ್ದೆ. ಕೂಡಲೇ, ಅಂಗಡಿಯಾತ ನನಗೆ ‘ಆಪ್ ಲಿಖ್ತೇ ಫೀಡ್ ಬ್ಯಾಕ್ ದೇತೇ ತೊ, ಮೈ ಇಧರ್ ಪ್ರಿಂಟ್ ಕರ್ ಕೇ ರಖೂಂಗಾ’ ಅಂದರು. ಅಲ್ಲಿ ತೂಗುಹಾಕಿದ್ದ ಕೆಲವು ಪತ್ರಿಕಾ ಪ್ರಕಟಣೆಗಳು, ಫೀಡ್ ಬ್ಯಾಕ್ ಗಳನ್ನೂ ತೋರಿಸಿದರು. ಆ ಅಂಗಡಿಯ ಬಗ್ಗೆ ‘ಸುರಹೊನ್ನೆ’ಯಲ್ಲಿ ಬರೆದಿದ್ದೆ. ಅವರಿಗೂ ಬರಹದ ಲಿಂಕ್ ಕಳಿಸಿದ್ದೆ. ಒಟ್ಟಿನಲ್ಲಿ, ‘ಉಪಮಾಲಂಕಾರ’ ಲೇಖನವು ಕ್ಷಣಮಾತ್ರದಲ್ಲಿ ನನ್ನನ್ನು ‘ಮಾನಾ’ ಹಳ್ಳಿಗೆ ತಲಪಿಸಿತು! ಧನ್ಯವಾದಗಳು.
ಧನ್ಯವಾದಗಳು ಹೇಮಾ ಮೇಡಂ,
ಈ ಲೇಖನಕ್ಕೆ ನಿಮ್ಮ ಮಾತುಗಳೇ ಸ್ಫೂರ್ತಿ. ದೋಸೆ ಮತ್ತು ಇಡ್ಲಿ ಕುರಿತು ಬರೆದಾಗ ನೀವು ಪ್ರತಿಕ್ರಿಯಿಸಿದ್ದಿರಿ.
ಇನ್ನೊಂದಷ್ಟು ತಿನಿಸುಗಳು ಬರೆಸಿಕೊಳ್ಳಲು ಕಾಯುತ್ತಿವೆ ಎಂದು ಪ್ರೇರಿಸಿದ್ದಿರಿ. ಹಾಗಾಗಿ…….ಬರೆಸಿಕೊಂಡಿತು.
ಸುರಹೊನ್ನೆಯು ಪ್ರೀತಿಯಿಂದ ಬರೆಹವನು ನೇವರಿಸಿ, ಪ್ರಕಟಿಸಿತು. ಅಷ್ಟೇ. ನನ್ನದೇನಿಲ್ಲ!
ನಿಮ್ಮ ಮೆಚ್ಚುಮಾತುಗಳಿಗೆ ನಾನು ಆಭಾರಿ, ಪ್ರತಿ ಬಾರಿ. ಈ ಮೂಲಕ ಮಾನಾ ಹಳ್ಳಿಯ ಸವಿನೆನಪುಗಳು
ಕಡಲಲೆಗಳಂತೆ ನಿಮ್ಮತ್ತ ನುಗ್ಗಿ ಬಂದು ಮನವ ತೋಯಿಸಿದ ಸಂದರ್ಭವನು ಹಂಚಿಕೊಂಡಿದ್ದಕೆ ಇನ್ನೊಂದು ಧನ್ಯವಾದ.
ನಾನೂ ಓದಿದ್ದ ನೆನಪು. ತಕ್ಷಣ ನೆನಪಾಗುತ್ತಿಲ್ಲ. ಸುರಹೊನ್ನೆಯಲಿ ಹುಡುಕಿ ಮತ್ತೆ ಓದುವೆ. ಖಂಡಿತ. ಸಂಪಾದಕರು ಎಂಬ
ಯಾವ ಹಮ್ಮು ಬಿಮ್ಮು ಇಲ್ಲದೆ, ಉಳಿದ ಓದುಗರಂತೆ ನೀವು ಪ್ರತಿಕ್ರಿಯಿಸಿದ್ದಕ್ಕೆ ನಾನು ಧನ್ಯೋಸ್ಮಿ. ನಿಮ್ಮ ಸರಳತೆ ಮತ್ತು
ಸಹೃದಯತೆಗಳ ದ್ಯೋತಕವಿದು. ಸಾಹಿತ್ಯದಿಂದ ನಾವೆಲ್ಲ ಕಲಿಯಬೇಕಾದ ಮತ್ತು ಅಳವಡಿಸಿಕೊಳ್ಳಬೇಕಾದ ಗುಣಲಕ್ಷಣ ಕೂಡ.
ನೀವು ಸಲಹಿಸಿದಂತೆ, ಆಯಾಯ ಹೊಟೆಲಿನವರು ಖಂಡಿತಾ ಖುಷಿಪಡುವರು. ನನಗಿದು ಹೊಳೆದೇ ಇರಲಿಲ್ಲ. ಅವರ ನಂಬರುಗಳಿಗೆ
ಕಳಿಸುವೆ. ನನ್ನ ಲೇಖನಕಿಂತ ಸುರಹೊನ್ನೆಯ ಪರಿಚಯ ಅವರಿಗಾಗುತ್ತದೆ ಎಂಬುದೇ ವಿಶೇಷ.
ನಿಮ್ಮ ವಿಶ್ವಾಸ, ಕಾಳಜಿಗಳು ಹೀಗೆಯೇ ಇರಲಿ. ಕನ್ನಡದ ಕೆಲಸ ಮುಂದುವರಿಯಲಿ ಎಂದು ಹಾರೈಸುವೆ. ಬರೆಹಗಾರರಿಗೆ ವೇದಿಕೆ
ಒದಗಿಸುತ್ತಿರುವ ನಿಮ್ಮ ಕಾಯಕಕೆ ಶುಭವಾಗಲಿ. ಹೃದಯಪೂರ್ವಕ ಕೃತಜ್ಞತೆಗಳು.
ಅನಂತ ಧನ್ಯವಾದಗಳು.
ಸರ್, ಉಪ್ಪಿಟ್ಟಿನ ಬಗ್ಗೆ ನಾನೂ ಕೂಾ ಒಂದು ದೀರ್ಘವಾದ ಪ್ರಬಂಧವನ್ನು ಬರೆದಿರುವೆನಾದರೂ, ನಿಮ್ಮ ಲೇಖನ ಓದಿದಾಗ ಅನಿಸಿದ್ದು, ಉಪ್ಪಿಟ್ಟಿಗೆ ಅದೆಷ್ಟು ಉಪಮೆಗಳನ್ನು ಕೊಡಬಹುದು ಎಂದು! ನಿಮ್ಮ ಉಪ್ಪಿಟ್ಟು ಬರೆದ ಧಾಟಿ ನೋಡಿದರೆ, ನೀವು ನುರಿತ ಪಾಕಪ್ರವೀಣರು ಎನ್ನಲು ಎರಡು ಮಾತಿಲ್ಲ.ನೀವು ತಿಳಿಸಿರುವಂತೆ ನನಗೂ ಉಪ್ಪಿಟ್ಟು ಅಚ್ಚುಮೆಚ್ಚಿನ ಉಪಹಾರ. ಉಪ್ಪಿಟ್ಟು ನನಗೆ ಸೂಪರ್ ಆದರೆ, ನಿಮ್ಮ ಉಪ್ಪಿಟ್ಟು ಲೇಖನ ಸೂಪರೋ ಸೂಪರು.❤️
ಧನ್ಯವಾದ ಮೇಡಂ. ಬರೆದ ಮಾತ್ರಕೇ ಚೆನ್ನಾಗಿ ಮಾಡುತ್ತೇನೆಂದು ಭಾವಿಸದಿರಿ; ಅನಾಹುತವಾದೀತು.
ಬಹಳ ಚೆನ್ನಾಗಿದೆ. ಉಪ್ಪಿಟ್ಟು ಎಂದರೆ ಹೆಚ್ಚಿನವರಲ್ಲಿ ಅಸಡ್ಡೆಯ ಭಾವವೇ. ನಿಮ್ಮ ಬರಹ ಓದಿದ ಮೇಲೆ ಉಪ್ಪಿಟ್ಟು ತಿನ್ನುವ ಮನಸಾಗಿದೆ.
ಹೌದೇ….. ಒಳಿತಾಗಲಿ
ಅಭ್ಭಾ…ಉಪ್ಪಿಟ್ಟು..ವಿಧವಿಧವಾಗಿ ಅಲಂಕೃತ ಗೊಂಡು ಸೊಗಸಾದ ನಿರೂಪಣೆಯ ಲ್ಲಿ ಅನಾವರಣಗೊಂಡು ಮನಕ್ಕೆ ಮುದತಂದಿತು ಸಾರ್….. ನಾನು ನನ್ನ ಮ್ಮನ ಗೈರುಹಾಜರಿಯಲ್ಲಿ.. ನನ್ನ ತಮ್ಮಂದಿರೊಡಗೂಡಿ ಮಾಡಿದ ಉಪ್ಪಿಟ್ಟಿನ ನೆನಪಿಗೆ ಬಂತು ಅದಕ್ಕೆ ಉಪ್ಪೇ ಹಾಕಿರಲಿಲ್ಲ ಅವರೆಲ್ಲಾ ಪ್ರಶ್ನಿಸಿದಾಗ..ಏ..ಉಪ್ಪಿಟ್ಟಿಗೆ ಯಾರಾದರೂ ಉಪ್ಪುಹಾಕುತ್ತಾರಾ ಅದರಲ್ಲೇ ಇರುತ್ತೆ ತಿನ್ನಿ ಎಂದು ಜೋರುಮಾಡಿದ್ದೆ…ಆನಂತರ ಅವರುಗಳು ಬಲವಂತವಾಗಿ..ನನಗೂ ಸ್ವಲ್ಪ ರುಚಿ ನೋಡಿ ಸಿದಾಗ ತಪ್ಪು ಅರಿವಾಗಿ.. ಮೊಸರಿಗೆ ಉಪ್ಪು ಹಾಕಿಕೊಂಡು ಆ ಮೂಲಕ ಹೇಗೋ ತಿಂದು ಮುಗಿಸಿದೆವು…ಈಗ..ಉಪ್ಪಿಟ್ಟು ಮಾಡುವುದರಲ್ಲಿ…ಎಕ್ಸ್ ಫರ್ಟ….
ಹೌದೇ ಮೇಡಂ, ತ್ಯಾಂಕ್ಯೂ……
ಉಪ್ಪಿಲ್ಲದ ಉಪ್ಪಿಟ್ಟಿನ ಬಗ್ಗೆ ನೀವೂ ಬರೆಯಬಹುದು. ಬಿಡುವು ಮಾಡಿಕೊಂಡು ದಯಮಾಡಿ ಬರೆಯಿರಿ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ. ಸಹೃದಯರ ಎಲ್ಲ ಕಮೆಂಟುಗಳೂ ಒಂದೊಳ್ಳೆಯ ಉಪ್ಪಿಟ್ಟಿಗೆ ಅರ್ಪಿಸುವೆ.
ತಮ್ಮ ಸುದೀರ್ಘ ಲೇಖನದಲ್ಲಿ, ಉಪ್ಪಿಟ್ಟು ತನ್ನ ವಿವಿಧ ರೂಪಗಳಲ್ಲಿ ಪ್ರಕಟಗೊಂಡ ಬಗೆ ನಿಜಕ್ಕೂ ಶ್ಲಾಘನೀಯ! ಅಡುಗೆ ಕಲಿಯುವವರಿಗೆ, ಮೊತ್ತ ಮೊದಲಿಗೆ ಉಪ್ಪಿಟ್ಟು ಚೆನ್ನಾಗಿ ಮಾಡಲು ಬಂದರೆ ಗೆದ್ದಂತೇ ಸೈ! ನಮ್ಮ ನೆರೆಮನೆಯರ ಪತ್ನಿ ತಿಂಗಳುಗಟ್ಟಲೆ ಮಗಳ ಮನೆಗೆ ಹೋಗಿದ್ದ ಸಂದರ್ಭ; ಅವರು ಅಷ್ಟೂ ಸಮಯ ಬರೇ ಉಪ್ಪಿಟ್ಟಿನಿಂದಲೇ ಬೆಳಗ್ಗಿನ ಉಪಹಾರ ಸಂಪನ್ನಗೊಳಿಸುತ್ತಿದ್ದರು ಎಂದರೆ ಅದರ ಮಹಿಮೆ ಅಪಾರ ಅಲ್ಲವೇ?
ನಿಜ………ನಿಮ್ಮ ಮಾತು ಒಪ್ಪಿತ
ಪ್ರತಿಕ್ರಿಯೆಗೆ ಧನ್ಯವಾದ
ಉಪ್ಪಿಟ್ಟೆಂದರೆ ನನಗೆವಪಂಚಪ್ರಾಣ. ಅದರಷ್ಟೇ ಸೊಗಸಾದ ಬರಹ. ತುಂಬಾ ಇಷ್ಟವಾಯಿತು
ಉಪ್ಪಿಟ್ಟು ನನಗೂ ಬಹಳ ಪ್ರಿಯ…ತುಂಬಾ ಖಾರವಾಗಿ ಮಾಡಿ ಧಾರಾಳವಾಗಿ ಮೊಸರು ಸುರಿದುಕೊಂಡು ತಿನ್ನುವ ಸುಖವೇ ಬೇರೆ…ತಂಗಳು ಉಪ್ಪಿಟ್ಟು ಕೂಡ ಮೊಸರಿದ್ದರೆ ಸಾಕು ತಟ್ಟೆಗಟ್ಟಲೇ ತಿನ್ನುವವಳೇ…ಒಂದು ಅಂಶ ಬಿಟ್ಟು ಹೋಗಿದೆ..ಬಿಸಿ ಬಿಸಿ ಉಪ್ಪಿಟ್ಟಿನ ಮೇಲೆ ಸಕ್ಕರೆ ಉದುರಿಸಿ ಅದು ನಿಧಾನ ವಾಗಿ ಕರಗುತ್ತಿರುವಾಗ ತಿನ್ನುವ ಮಜವೇ ಬೇರೆ…ಅಕ್ಕಿ ತರಿ ಉಪ್ಪಿಟ್ಟಿಗೆ kg ಗಟ್ಟಲೆ ಈರುಳ್ಳಿ,ತೆಂಗಿನ ತುರಿ ಹಾಗು ಒಣಮೆಣಸು ಹಾಕಿ ಮಾಡಿದರೆ ತಟ್ಟೆ ಸಮೇತ ತಿನ್ನುವ ಹಾಗಾಗುತ್ತೆ…ನನಗೊಂದು ಗುಮಾನಿ..ಎಲ್ಲರಿಗೂ ಉಪ್ಪಿಟು ಇಷ್ಟವೇ ಇರುತ್ತದೆ ಆದರೆ ಬೇಗ ತಯಾರಾಗುವ ತಿಂಡಿ ಆದ್ದರಿಂದ ಇದೇನ್ ಮಹಾ ಅನ್ನೋ ಉಡಾಫೆ ಯಿಂದ ಇಷ್ಟ ಇಲ್ಲ ಅಂತ ಪೋಸ್ ಕೊಡುತ್ತಾರೆ ಅನ್ನಿಸುತ್ತೆ….ಲೇಖನ ಖುಷಿಯಾಗಿ ಓದಿಸಿ ಕೊಂಡುಹೋಯಿತು… ಇನ್ನು ಮೈಸೂರಿನ ಎಲ್ಲಾ ಉಪ್ಪಿಟ್ಟು ಜಾಯಿಂಟ್ ಗಳನ್ನ ನಿಮ್ಮ ಲೇಖನವನ್ನು ಜಿಪಿಎಸ್ ತರಹ ಇಟ್ಟುಕೊಂಡು ಹುಡುಕುತ್ತಾ ಹೋಗ ಬೇಕಷ್ಟೇ
ಧನ್ಯವಾದಗಳು ಸಮತಾ….
ನಿಮ್ಮ ಶ್ಲಾಘನೆ ಮತ್ತು ಪ್ರತಿಕ್ರಿಯೆಗೆ
ನಾನು ಆಭಾರಿ