ಪೋಲ್ ಪಾಟ್ ಎಂಬ ನರರಾಕ್ಷಸ : ಹೆಜ್ಜೆ 7
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕಾಂಬೋಡಿಯಾ ಪ್ರವಾಸ ಕಥನ
”ಇಲ್ಲಿ ರಣದುಂಧುಭಿ, ಅಲ್ಲೊಂದು ವೀಣೆ”
ಸಂಗೀತ, ನೃತ್ಯ, ಶಿಲ್ಪಕಲೆಯ ಬೀಡಾದ ಆಂಕೊರ್ ವಾಟ್‌ನ ಭವ್ಯವಾದ ದೇಗುಲಗಳನ್ನು ನೋಡಿದ ಮೇಲೆ ನಾವು ಸಿಯಾಮ್ ರೀಪ್‌ನಲ್ಲಿದ್ದ ‘ಕಿಲ್ಲಿಂಗ್ ಫೀಲ್ಡ್ಸ್‌ಗೆ’ (Killing Fields) ಭೇಟಿ ನೀಡಿದೆವು. ವೀಣೆಯ ನಾದವನ್ನು ಆಲಿಸಿದವರು ಈಗ ರಣದುಂಧುಭಿಯ ಕಹಳೆಯನ್ನು ಕೇಳುವ ಸಂದರ್ಭ ಬಂದಿತ್ತು.
ದೃಶ್ಯ-1 ಧಡ್, ಧಡ್, ಧಡ್ — ಬಾಗಿಲ ಬಡಿತ ಜೋರಾಗಿತ್ತು. ನಡುರಾತ್ರಿಯ ಸಮಯ, ಈ ಸದ್ದಿಗೆ ಬೆಚ್ಚಿ ಬಿದ್ದ ಮಕ್ಕಳು ತಾಯಿಯನ್ನು ಬಿಗಿದಪ್ಪಿ ಮಲಗಿದರು, ಗಾಬರಿಗೊಂಡ ಮನೆಯೊಡೆಯನು ತನ್ನ ಮಡದಿ ಮಕ್ಕಳನ್ನು ಅವಸರವಸರವಾಗಿ ಮನೆಯ ಹಿಂಬದಿಯಲ್ಲಿದ್ದ ಬಚ್ಚಲುಮನೆಯಲ್ಲಿ ಅಡಗಿಸಿಟ್ಟನು. ನಂತರ ಮನೆಯ ಮುಂಬಾಗಿಲನ್ನು ತೆರೆದನು. ಹೊರಗಡೆ ನಿಂತಿದ್ದ ಸೈನಿಕರು ಮನೆಯೊಳಗೆ ನುಗ್ಗಿ ಅವನ ಕುಟುಂಬ ವರ್ಗದವರಿಗಾಗಿ ಹುಡುಕಾಡಿದರು. ಮನಯೊಡೆಯನು, ‘ಅವರೆಲ್ಲಾ ಊರಿಗೆ ಹೋಗಿದ್ದಾರೆ’ ಎಂದಾಗ ಮರುಮಾತಾಡದೇ ಅವನನ್ನು ಎಳೆದುಕೊಂಡು ಹೋಗಿ ಜೈಲಿಗೆ ಹಾಕಿದರು. ಎರಡು ದಿನ ಚಿತ್ರಹಿಂಸೆ ನೀಡಿ, ವಿಚಾರಣೆ ನಡೆಸಿದ ನಾಟಕವನ್ನಾಡಿ, ಅವನಿಗೆ ದೇಶದ್ರೋಹಿಯೆಂಬ ಪಟ್ಟಕಟ್ಟಿ ಅವನ ಶಿರಚ್ಛೇದನ ಮಾಡುವರು.
ದೃಶ್ಯ- 2 ತಂಗೀ ಇತ್ತ ಬಾ, ನನ್ನ ಕಾಂಡದ ಮೇಲಿರುವ ರಕ್ತದ ಕಲೆಗಳನ್ನು ನೋಡು. ಈ ರಕ್ತದ ಕಲೆಗಳು ಇನ್ನೂ ಪ್ರಪಂಚ ಏನೆಂದು ಗೊತ್ತಿಲ್ಲದ ಹಸುಳೆಗಳದು. ತಂದೆ ತಾಯಿಯರನ್ನು ಕಳೆದುಕೊಂಡ ಮಕ್ಕಳು ಮುಂದೆ ದೊಡ್ಡವರಾದಾಗ, ಸೇಡಿನ ಜ್ವಾಲೆಯನ್ನು ಬೆಳೆಸಿಕೊಂಡು ಪ್ರಭುತ್ವದ ಮೇಲೆ ಆಕ್ರಮಣ ಮಾಡಿಯಾರು ಎಂಬ ಆತಂಕದಿಂದ, ಅವರನ್ನೆಲ್ಲಾ ಕೊಂದು ಹಾಕಿದ ದಾರುಣ ಕಥೆಯಿದು. ಮಕ್ಕಳನ್ನು ಕೊಲ್ಲಲು ಬುಲೆಟ್‌ಗಳನ್ನು ಏಕೆ ವ್ಯರ್ಥ ಮಾಡಬೇಕು ಎಂದು ಪುಟಾಣಿಗಳ ತಲೆಗಳನ್ನು ನನ್ನಂತಹ ಭಾರೀ ಮರಗಳ ಕಾಂಡಕ್ಕೆ ಚಚ್ಚಿ ಚಚ್ಚಿ ಕೊಲ್ಲುತ್ತಿದ್ದರು. ಆ ಪುಟಾಣಿಗಳ ಕಿರುಚಾಟ, ಕೂಗಾಟ ಯಾರಿಗೂ ಕೇಳದಿರಲೆಂದು ಧ್ವನಿವರ್ಧಕಗಳಲ್ಲಿ ಗಟ್ಟಿಯಾಗಿ ಹಾಡುಗಳನ್ನು ಹಾಕುತ್ತಿದ್ದರು.
ದೃಶ್ಯ-3 ಬೌದ್ಧ ಭಿಕ್ಷುವೊಬ್ಬ ಪಗೋಡದಲ್ಲಿ ಧ್ಯಾನ ಮಾಡುತ್ತಿದ್ದ, ಮತ್ತೊಬ್ಬ ಭಿಕ್ಷು ಮಂತ್ರ ಪಠಿಸುತ್ತಾ ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತಿದ್ದ, ಇನ್ನೊಬ್ಬ ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಎಂದು ಪಠಿಸುತ್ತಾ ಬುದ್ಧನ ಮೂರ್ತಿಯ ಮುಂದೆ ನಿಂತು ನಮಸ್ಕರಿಸುತ್ತಿದ್ದ. ಇದ್ದಕ್ಕಿದ್ದಂತೆ ಸೈನ್ಯದ ಪಡೆ ಬಂದು ಅವರನ್ನೆಲ್ಲಾ ಮಿಲಿಟರಿ ಜೀಪುಗಳಲ್ಲಿ ತುಂಬಿಕೊಂಡು ಹೋದರು. ಎರಡು ದಿನಗಳಲ್ಲಿ ಅವರೆಲ್ಲಾ ಚಿತ್ರಹಿಂಸೆಯನ್ನು ಅನುಭವಿಸಿ, ತಾವು ದೇಶ ದ್ರೋಹಿಗಳೆಂದು ಸಾರ್ವಜನಿಕರ ಮುಂದೆ ಒಪ್ಪಿಕೊಂಡರು. ಅವರನ್ನೆಲ್ಲಾ ಅಲ್ಲಿಯೇ ಗುಂಡು ಹೊಡೆದು ಕೊಲ್ಲಲಾಯಿತು.
ದೃಶ್ಯ-4 ಅಲ್ಲೊಂದು ಸರ್ಕಾರೀ ಕಛೇರಿಯಿತ್ತು. ಕೆಲವು ಕಾಂಬೋಡಿಯನ್ ಯುವಕರು ಇಂಗ್ಲಿಷ್ ಭಾಷೆಯಲ್ಲಿ ಸಂವಾದ ಮಾಡುತ್ತಾ ಸಾಗಿದ್ದರು, ಮತ್ತೆ ಕೆಲವರು ಫ್ರೆಂಚ್ ಬಾಷೆಯಲ್ಲಿ ಮಾತನಾಡುತ್ತಿದ್ದರು. ಅವರೆಲ್ಲಾ ಹೊರದೇಶದಲ್ಲಿ ತಯಾರಾದ ಉಡುಪುಗಳನ್ನು ಹಾಕಿಕೊಂಡಿದ್ದರು. ಅವರಲ್ಲಿ ಕೆಲವರು ವೈದ್ಯರು ಮತ್ತೆ ಕೆಲವರು ವಕೀಲರಾಗಿದ್ದರು, ಎಲ್ಲರೂ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಕಲಿತ ಸುಸಂಸ್ಕೃತರೇ. ಇದ್ದಕ್ಕಿದ್ದ ಹಾಗೆ ಸೈನಿಕರ ಗುಂಪೊಂದು ಅವರ ಮೇಲೆ ಧಾಳಿ ಮಾಡಿ, ಅವರನ್ನೆಲ್ಲಾ ಕಾರಾಗೃಹಕ್ಕೆ ದೂಡಿತು. ಕೇವಲ ಎರಡು ದಿನದಲ್ಲಿ ಅವರೆಲ್ಲಾ ವಿದೇಶೀ ಗೂಢಚಾರರು ಎಂದು ಸಾಬೀತು ಪಡಿಸಿ, ಗಲ್ಲುಶಿಕ್ಷೆ ನೀಡಲಾಗಿತ್ತು.
ದೃಶ್ಯ-5 ಅಲ್ಲೊಂದು ಬಯಲಿತ್ತು. ಅಲ್ಲೊಂದು ಇಲ್ಲೊಂದು ಶೆಡ್‌ಗಳು ಇದ್ದವು. ಶೆಡ್‌ಗಳಲ್ಲಿ ಭಯಭೀತರಾದ ಜನರ ದಂಡೇ ನೆರದಿತ್ತು. ಆ ಜನರು ತಮ್ಮ ಸಾವಿಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು, ಕೆಲವರು ಸತ್ತವರನ್ನು ಹೂಳಲು ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆಯುತ್ತಿದ್ದರು. ಸೈನಿಕರು ಕೆಲವರನ್ನು ಗುಂಡಿಟ್ಟು ಹತ್ಯೆ ಮಾಡುತ್ತಿದ್ದರು ಮತ್ತೆ ಕೆಲವರ ರುಂಡವನ್ನು ಕೊಡಲಿಗಳಿಂದ ಕತ್ತರಿಸುತ್ತಿದ್ದರು. ಅವರ ಚೀರಾಟ, ಕಿರುಚಾಟ ಮುಗಿಲು ಮುಟ್ಟಿತ್ತು.
ಈ ಘಟನೆಗಳು ಕಪೋಲ ಕಲ್ಪಿತವಲ್ಲ, ಇವು ನಡೆದದ್ದು ಕಾಂಬೋಡಿಯಾದ ಕೆಮರ್ ರೂಜ್‌ನ ಆಳ್ವಿಕೆಯಲ್ಲಿ. ಈ ರಕ್ಕಸರ ಆಳ್ವಿಕೆಯಲ್ಲಿ ಸಾಮಾನ್ಯ ಜನರ ಮಾರಣಹೋಮ ನಡೆದಿತ್ತು. 1995 ರಿಂದ 1998 ರವರೆಗೆ ಇವರ ಮಹಾದಂಡನಾಯಕನಾಗಿದ್ದ ಪೋಲ್ ಪಾಟ್ ಇಂತಹ ಸಾವಿರಾರು ಅಮಾಯಕರ ಬೇಟೆಯಾಡಿದ್ದ,. ದೇಶದ ಸಂಪತ್ತಿನ ಸಮಾನ ಹಂಚಿಕೆ ಎಂಬ ನೆಪದಲ್ಲಿ ನೂರಾರು ಮಂದಿಯ ಮಾರಣಹೋಮ ನಡೆಸಿದ್ದ ರಕ್ತಪಿಪಾಸು. ಈ ರಕ್ಕಸನ ಆಳ್ವಿಕೆಯಲ್ಲಿ ಜನರು ಅನುಭವಿಸಿದ ತಲ್ಲಣ, ಸಂಕಟ, ತಳಮಳ ಅಷ್ಟಿಷ್ಟಲ್ಲ.
ಇವರ ಇತಿಹಾಸವನ್ನು ಒಮ್ಮೆ ಅವಲೋಕನ ಮಾಡೋಣ ಬನ್ನಿ. ಒಂಭತ್ತನೇ ಶತಮಾನದಿಂದ ಹದಿನೈದನೇ ಶತಮಾನದವರೆಗೆ ಉತ್ತುಂಗಕ್ಕೇರಿದ್ದ ರಾಜ್ಯ ಕಾಂಬೋಜ. ಅವರ ಸಂಪದ್ಭರಿತ, ಸುಸಂಸ್ಕೃತವಾದ ಕಾಲದ ರೂಪಕವಾಗಿ ನಿಂತಿವೆ ಆಂಕರ್‌ವಾಟ್ ದೇಗುಲಗಳ ಸಮುಚ್ಛಯ. ಹದಿನೈದನೇ ಶತಮಾನದಿಂದ ಕಾಂಬೋಡಿಯಾ ರಾಜ್ಯವು ನಿಧಾನವಾಗಿ ಕಳೆಗುಂದತೊಡಗಿತ್ತು. ನೆರೆಹೊರೆಯವರ ಆಕ್ರಮಣದಿಂದ ನಲುಗಿಹೋದ ಕಾಂಬೋಡಿಯಾ ಹತ್ತೊಂಬತ್ತನೇ ಶತಮಾನದಲ್ಲಿ ತಮ್ಮ ತಾಯ್ನಾಡಿನ ರಕ್ಷಣೆಗಾಗಿ ಫ್ರೆಂಚರ ಮೊರೆಹೊಕ್ಕಿತು. ಸ್ವತಂತ್ರರಾಗಲು ಬಯಸಿದ್ದ ಕಾಂಬೋಡಿಯನ್ನರು ಫ್ರೆಂಚರ ಗುಲಾಮರಾಗಬೇಕಾಯಿತು, ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವವಾಗಿತ್ತು. ಎರಡನೇ ಮಹಾಯುದ್ದದ ಸಮಯದಲ್ಲಿ ಜಪಾನೀಯರ ಆಕ್ರಮಣಕ್ಕೆ ಒಳಗಾದರು, ನಂತರದಲ್ಲಿ ವಿಯೆಟ್ನಾಂ, ಅಮೆರಿಕಾದವರ ಧಾಳಿಗೆ ಸಿಕ್ಕು ದಿವಾಳಿಯಾದರು. 1953 ರಲ್ಲಿ ತಮ್ಮ ನಾಡು ಸ್ವಾತಂತ್ರ್ಯರಾಷ್ಟ್ರವೆಂದು ಘೋಷಿಸಿದರು. ಛಿದ್ರ ಛಿದ್ರವಾಗಿದ್ದ ನಾಡಿನಲ್ಲಿ ಎಂಟು ವರ್ಷಗಳ ಕಾಲ ನಡೆದ ದೊಂಬಿ, ಗೆರಿಲ್ಲಾ ಯುದ್ಧದಲ್ಲಿ ಬೆಂದು ಹೋದರು. ಎಲ್ಲೆಡೆ ಹಿಂಸೆ, ಕೊಲೆ ಸುಲಿಗೆ ತಾಂಡವವಾಡಿದವು. ಜನರು ಹಸಿವಿನಿಂದ ಕಂಗೆಟ್ಟರು. ಇಂತಹ ಬಲಹೀನವಾಗಿದ್ದ ರಾಷ್ಟ್ರವು ಸುಲಭವಾಗಿ ವಿಯೆಟ್ನಾಮಿನ ಕಮ್ಯುನಿಸ್ಟ್ ಪಡೆಯ ನೆರವು ಪಡೆದ ಕೆಮರ್ ರೂಜ್ ದಳದ ಕೈಗೊಂಬೆಯಾಯಿತು. ಪೋಲ್ ಪಾಟ್ ನೇತೃತ್ವದಲ್ಲಿ ತಲೆ ಎತ್ತಿದ ಕೆಮರ್ ರೂಜ್‌ನ ಆಳ್ವಿಕೆಯು ಇತಿಹಾಸ ಕಂಡ ರಕ್ತಸಿಕ್ತ ಅಧ್ಯಾಯವಾಗಿತ್ತು. ಸ್ಟಾಲಿನ್ ಮತ್ತು ಮಾವೋ ಸಿದ್ಧಾಂತದಿಂದ ಪ್ರಭಾವಿತನಾಗಿದ್ದ ಪೋಲ್ ಪಾಟ್ ಅಧಿಕಾರದ ಗದ್ದುಗೆಯನ್ನು ಏರುತ್ತಾನೆ. ರಾತ್ರೋರಾತ್ರಿ ರೈತರನ್ನು, ಬಡ ಕಾರ್ಮಿಕರನ್ನು ಉದ್ಧರಿಸುವ ನೆಪದಲ್ಲಿ ಉದ್ಯಮಿಗಳ, ಮಧ್ಯಮ ವರ್ಗದವರ ಆಸ್ತಿಯನ್ನು, ಅಧಿಕಾರವನ್ನು ಮಟ್ಟುಗೋಲು ಹಾಕಿಕೊಳ್ಳುತ್ತಾನೆ. ರಾಷ್ಟ್ರೀಯತೆಯನ್ನು ದಾಳವನ್ನಾಗಿ ಮಾಡಿಕೊಂಡಿದ್ದ ಪೋಲ್ ಪಾಟ್ ತಮ್ಮ ಪರಿಶ್ರಮದಿಂದ ಆಸ್ತಿ ಮಾಡಿದವರನ್ನೆಲ್ಲಾ ದೇಶದ್ರೋಹಿಗಳೆಂದು ಪರಿಗಣಿಸಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸುವನು. ಶಿಕ್ಷಕರನ್ನು, ವೈದ್ಯರನ್ನು, ವಕೀಲರನ್ನು ದೇಶದ ಶತ್ರುಗಳೆಂದು ನಿರ್ಧರಿಸಿ, ಅವರ ರುಂಡ ಚೆಂಡಾಡುತ್ತಾನೆ. ಕೊನೆಗೆ ಯಾರಾದರೂ ಕನ್ನಡಕ ಧರಿಸಿ ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದರೆ, ಅವರು ಬುದ್ಧಿಜೀವಿಗಳೆಂದೂ, ಜನರಲ್ಲಿ ದೇಶದ್ರೋಹದ ವಿಷಬೀಜ ಬಿತ್ತುವವರೆಂದೂ, ವಿದೇಶಗಳ ಗುಪ್ತಚಾರರೆಂದೂ ಆಪಾದನೆ ಹೊರಿಸಿ ಗಲ್ಲುಶಿಕ್ಷೆ ನೀಡುತ್ತಿದ್ದ. ವರ್ಗರಹಿತವಾದ ಸಮಾಜವನ್ನು ಕಟ್ಟಿ ಬಡವರನ್ನು ಉದ್ಧಾರ ಮಾಡುವೆನೆಂಬ ಭ್ರಮೆಯಲ್ಲಿ ಮುಳುಗಿ ಹೋದ ಸರ್ವಾಧಿಕಾರಿಯಾದ ಪೋಲ್ ಪಾಟ್, ಸುಮಾರು ಮೂರು ಮಿಲಿಯನ್ ಜನರ ಮಾರಣಹೋಮ ಮಾಡುತ್ತಾನೆ.
ಪೋಲ್ ಪಾಟ್ ಜನರ ಆಸ್ತಿಯ ಹಕ್ಕನ್ನು ಕಸಿದುಕೊಳ್ಳುತ್ತಾನೆ, ದೇಗುಲಗಳನ್ನು ಕೆಡವಿ ಯಾರೂ ದೇವರನ್ನು ಪೂಜಿಸುವ ಹಾಗಿಲ್ಲ ಎಂದು ಸಾರುತ್ತಾನೆ, ವಿದ್ಯಾವಂತರು ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡಬೇಕೆಂದು ಕಟ್ಟಪ್ಪಣೆ ಮಾಡುತ್ತಾನೆ. ಭೂಮಿಯು ಯಾರ ಒಡೆತನಕ್ಕೂ ಸೇರಿದ್ದಲ್ಲ, ಅದು ದೇಶದ ಆಸ್ತಿ, ಎಲ್ಲರೂ ಅಲ್ಲಿ ದುಡಿಯಬೇಕು, ಬಂದ ಫಸಲನ್ನು ರಾಜ್ಯಕ್ಕೆ ಒಪ್ಪಿಸಿ, ಅವರು ಕೊಟ್ಟಷ್ಟು ಅಕ್ಕಿಯಿಂದ ಜೀವನ ನಡೆಸಬೇಕು ಎಂಬ ರಾಜಾಜ್ಞೆ ಹೊರಡಿಸುತ್ತಾನೆ. ಎಷ್ಟೋ ಮಂದಿ ಹಸಿವಿನಿಂದ ಸತ್ತರು, ಖಾಯಿಲೆಗಳಿಂದ ನರಳಿದರು, ದಂಡನಾಯಕನ ಕ್ರೌರ್ಯಕ್ಕೆ ಬಲಿಯಾದರು. ಅಲ್ಪ ಸಂಖ್ಯಾತರಾದ ಬುಡಕಟ್ಟು ಜನಾಂಗದವರನ್ನೂ, ಬೌದ್ಧರನ್ನೂ ಹಾಗೂ ಕ್ರಿಶ್ಚಿಯನ್ನರನ್ನೂ ನಿರ್ದಯೆಯಿಂದ ಹತ್ಯೆ ಮಾಡುತ್ತಿದ್ದರು. ಎಲ್ಲಾ ನಾಗರೀಕರ ರಾಜಕೀಯ ಹಕ್ಕುಗಳನ್ನು ಮೊಟಕುಗೊಳಿಸಿದನು.
ನಾವು ಸಿಯಮ್ ರೀಪ್ ನಲ್ಲಿ ಭೀಕರವಾದ ಹತ್ಯಾಕಾಂಡವಾದ ಸ್ಥಳದಲ್ಲಿ ನಿಂತಿದ್ದೆವು. ಆ ಸ್ಥಳದಲ್ಲಿ ಇಂದು ಬೌದ್ಧರ ಪಗೋಡಾಗಳು ಎದ್ದು ನಿಂತಿವೆ. ನಾವು ಮಂದಿರದ ಒಳಹೊಕ್ಕಾಗ ಅಲ್ಲಿ ಹೆಚ್ಚು ಜನರಿರಲಿಲ್ಲ, ಒಬ್ಬ ಬೌದ್ಧ ಬಿಕ್ಷು ಮಾತ್ರ ಮಂತ್ರ ಪಠಿಸುತ್ತಾ ಕುಳಿತಿದ್ದ, ನಮಗೆ ಅಲ್ಲಿ ಕುಳಿತು ಧ್ಯಾನ ಮಾಡಲು ಸಂಜ್ಞೆ ಮಾಡಿದ. ನನಗೆ ಅಲ್ಲಿ ಒಂದು ನಿಮಿಷವೂ ನಿಲ್ಲಲು ಮನಸ್ಸಾಗಲಿಲ್ಲ, ಜನರ ಚೀರಾಟ, ಕಿರುಚಾಟಗಳೇ ಕೇಳುತ್ತಿದ್ದವು. ಅಲ್ಲಿಂದ ಹೊರ ಬಂದೆ, ಎದುರಿಗೇ ಇತ್ತು ಬೌದ್ಧ ಸ್ತೂಪ – ಸ್ತೂಪದ ನಾಲ್ಕು ದಿಕ್ಕಿನಲ್ಲಿಯೂ ಅಲ್ಲಿ ಸಿಕ್ಕ ತಲೆಬುರುಡೆಗಳನ್ನು ಜೋಡಿಸಿ ಅವುಗಳ ಮೇಲೆ ಗಾಜಿನ ಕವಚ ಹಾಕಿದ್ದರು. ಸ್ತೂಪದ ಕೆಳ ಭಾಗದಲ್ಲಿ ಎಲುಬುಗಳನ್ನು ತುಂಬಿಸಿದ್ದರು. ಸ್ತೂಪದ ಬಳಿಯಲ್ಲಿ ಒಂದು ಭಾವಿಯಿತ್ತು, ಆ ಭಾವಿಯೊಳಗೆ ಸುಮಾರು ಅರವತ್ತು ಶವಗಳನ್ನು ಎಸೆದಿದ್ದರೆಂದು ಅದರ ಮೇಲೆ ಬರೆಯಲಾಗಿತ್ತು. ಅಬ್ಬಾ, ಈ ನರಹಂತಕರ ಕ್ರೌರ್ಯವನ್ನು ಕಂಡು ಹೃದಯ ಮೂಕವಾಗಿ ರೋಧಿಸುತ್ತಿತ್ತು. ಕಾಂಬೋಡಿಯಾದಲ್ಲಿ ಇಂತಹ ಮುನ್ನೂರು ಹತ್ಯಾಕಾಂಡದ ಸ್ಥಳಗಳಿದ್ದು ಸುಮಾರು ಇಪ್ಪತ್ತು ಸಾವಿರ ಸಾಮೂಹಿಕ ಸಮಾಧಿಗಳಿವೆ (ಒಚಿss ಉಡಿಚಿves) ಎಂದು ಗೈಡ್ ಹೇಳಿದಾಗ ಬೆಚ್ಚಿ ಬಿದ್ದೆ. ಹುಚ್ಚುದೊರೆಯ ಶಾಸನಗಳಿಗೆ ಬಲಿಯಾದ ಅಮಾಯಕರ ಸ್ಮಾರಕವನ್ನು ನೋಡಿ ಕಲ್ಲಾಗಿ ನಿಂತೆ. ಇಂತಹ ಸ್ಥಳಗಳನ್ನೂ ಪ್ರವಾಸೀ ಕೇಂದ್ರಗಳನ್ನಾಗಿ ಮಾರ್ಪಡಿಸಿ, ಪ್ರವಾಸೋದ್ಯಮವನ್ನು ಲಾಭದಾಯಕವನ್ನಾಗಿ ಮಾಡಿರುವವರ ಜಾಣ್ಮೆಯನ್ನು ಕಂಡು ಬೆರಗಾಗುವ ಸರದಿ ನನ್ನದಾಗಿತ್ತು.
ಅಲ್ಲಿಂದ ನೇರವಾಗಿ ಯುದ್ಧದ ಮ್ಯೂಸಿಯಂಗೆ ಹೋದೆವು. ಕೆಮರ್ ರೂಜ್ನ ಹಿಂಸಾತ್ಮಕ ಆಡಳಿತವನ್ನು ಬಿಂಬಿಸುವ ಚಿತ್ರ ವಿಚಿತ್ರವಾದ ಸಲಕರಣೆಗಳೂ, ಹತ್ಯೆಯಾದವರ ಚಿತ್ರಗಳು, ಸಾಮೂಹಿಕ ಸಮಾಧಿಗಳನ್ನು ತೋಡುತ್ತಿರುವ ಕೈದಿಗಳು, ಮಕ್ಕಳನ್ನು ಅಮಾನುಷವಾಗಿ ಕೊಲ್ಲುತ್ತಿರುವ ಪ್ರಭುತ್ವ ಇತ್ಯಾದಿ ಮನಕಲಕುವ ಚಿತ್ರಗಳನ್ನು ತೂಗು ಹಾಕಿದ್ದರು. ಈ ಸ್ಮಾರಕಗಳನ್ನು ನೋಡಿ ಹಿಂತಿರುಗುವಾಗ ನನ್ನ ಮನದಲ್ಲಿ ಜರ್ಮನಿಯ ದಂಡನಾಯಕ ಹಿಟ್ಲರ್ ಯಹೂದಿಗಳನ್ನು ಹತ್ಯೆ ಮಾಡಿದ ದೃಶ್ಯಗಳು, ಪಂಜಾಬಿನ ಜಲಿಯನ್‌ವಾಲಾಬಾಗ್‌ನಲ್ಲಿ ಪ್ರಾರ್ಥನೆ ಮಾಡಲು ಸೇರಿದ್ದ ಭಾರತೀಯರ ಗುಂಪಿನ ಮೇಲೆ ಬ್ರಿಟಿಷರ ಗುಂಡಿನ ಸುರಿಮಳೆ, ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಎರಡು ನಗರಗಳ ಮೇಲೆ ಅಮೆರಿಕನ್ನರು ಹಾಕಿದ ಅಣುಬಾಂಬುಗಳು ಮನವನ್ನು ಕಲಕುತ್ತಿದ್ದವು. ನಾವ್ಯಾಕೆ ಮಾನವರಂತೆ ಬಾಳುವುದನ್ನು ಕಲಿಯಲೇ ಇಲ್ಲ, ಭಸ್ಮಾಸುರರಂತೆ ಎಲ್ಲವನ್ನೂ ವಿನಾಶ ಮಾಡುವ ಮನಸ್ಥಿತಿಯನ್ನು ಹೊಂದಿದ್ದೇವೆ ಎನ್ನುವ ಆಲೋಚನೆಗಳು ಮೂಡಿದಾಗ, ಡಾ. ರಾಧಾಕೃಷ್ಣನ್‌ರವರು ಹೇಳಿದ ಮಾತುಗಳ ಮನದಲ್ಲಿ ಪ್ರತಿಧ್ವನಿಸಿದವು – ”ಮಾನವನು ಹಕ್ಕಿಯ ಹಾಗೆ ಗಗನದಲ್ಲಿ ಹಾರಬಲ್ಲ, ಸಾಗರದಲ್ಲಿ ಮೀನಿನಂತೆ ಈಜಬಲ್ಲ ಆದರೆ ಈ ಭೂಮಿಯ ಮೇಲೆ ಮನುಷ್ಯನಂತೆ ಓಡಾಡುವುದನ್ನು ಕಲಿಯಲೇ ಇಲ್ಲ”.
ಈ ಬರಹದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40401
(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಅಬ್ಬಾ ಎಂತಹಾ ಕೌರ್ಯ ಓದಿ ಎದೆ ಝಲ್ಲೆನೆಸಿತು ಹೌದು ಅಲ್ಲಿ ಧ್ಯಾನ ಮಾಡಲು ಸಾಧ್ಯವೇಇಲ್ಲಾ ಬರಹ ಚಿತ್ರಕ ಶಕ್ತಿಯಿಂದ ಕೂಡಿದೆ
ಅತೀ ಭಯಂಕರವಾಗಿವೆ ಒಂದೊಂದು ಸನ್ನಿವೇಶಗಳು. ಎಂತಹ ರಕ್ತ ಪಿಪಾಸಗಳು.
ನಿಜವಾಗಲೂ…ಮೈನವಿರೇಣಿಸುವಂಥಹ.. ಪ್ರವೃತ್ತಿ… ಅದನ್ನು ಸೊಗಸಾಗಿ ನಿರೂಪಿಸುವ ಮೂಲಕ..ಅಭಿವ್ಯಕ್ತಿ ಪಡಿಸಿರುವ ನಿಮಗೆ ಧನ್ಯವಾದಗಳು ಗಾಯತ್ರಿ ಮೇಡಂ..
ಓದುವಾಗ ಮೈ ತಣ್ಣಗಾದ ಅನುಭವ…ಹಿಟ್ಲರ್ ಮಾತ್ರ ಜಗತ್ತು ಕಂಡ ಅತಿಕ್ರೂರಿ ಅಂದುಕೊಂಡಿದ್ದೆ. ಕಾಂಬೋಡಿಯಾದಲ್ಲಿಯೂ ಸಮಾನ ಶ್ರೇಣಿಯ ನರರಾಕ್ಷಸ ಇದ್ದ ಎಂದು ಈಗ ಗೊತ್ತಾಯಿತು. ಇದು ಮನುಕುಲದ ದುರಂತ..ಕಣ್ಣಿಗೆ ಕಟ್ಟುವ ವಿವರಣೆ. ಮನಸ್ಸು ಆರ್ದ್ರವಾಯಿತು ಮೇಡಂ.
ಲೇಖನಕ್ಕೆ ಸೂಕ್ತವಾದ ಚಿತ್ರವನ್ನು ಹಾಕಿ
ಪ್ರತಿಕ್ರಿಯೆಯನ್ನು ನೀಡಿರುವ ಸುರಹೊನ್ನೆ ಯು ಸಂಪಾದಕರಾದ ಹೇಮಮಾಲಾ ಮೇಡಂ ಗೆ ವಂದನೆಗಳು
ಲೇಖನವನ್ನು ಓದಿ ಪ್ರತಿಕ್ರಿಯೆಗಳನ್ನು ತಿಳಿಸಿರುವ ಮಂಜುಳಾ , ನಾಗರತ್ನ, ಗೋಪಾಲಸ್ವಾಮಿ ಅವರಿಗೆ ಕೃತಜ್ಞತೆಗಳು
ಹೃದಯ ವಿದ್ರಾವಕ. ಹೇಮಕ್ಕನ ಅನಿಸಿಕೆಯೇ ನನ್ನದು ಕೂಡಾ.
ಕಾಂಬೋಡಿಯಾದಲ್ಲಿ ಕೆಮರ್ ರೂಜ್ನ ಹಿಂಸಾತ್ಮಕ ಆಡಳಿತವನ್ನು ಮನಮುಟ್ಟುವಂತೆ ಚಿತ್ರಿಸಿದ ಲೇಖನವು ಮನಮಿಡಿಯುವಂತಿದೆ! ಇಂಥಹವರೂ ಜಗತ್ತಿನಲ್ಲಿ ಇದ್ದರು ಎಂಬುದು ಮಾನವ ಕುಲಕ್ಕೇ ಕಪ್ಪುಚುಕ್ಕೆ!!
ಮೂರು ಮಿಲಿಯನ್ ಜನರನ್ನು ಕೊಂದಿದ್ದ ಅಂದರೆ ಅವನು ಎಂತಹ ರಾಕ್ಷಸ ಇರಬಹುದು. ಶಿಕ್ಷಕರನ್ನು ಕನ್ನಡಕ ಧರಿಸಿದವರನ್ನು ಕೊಲ್ಲುತ್ತಿದ್ದರು ಅಂದರೆ ಆಗಿನ ಪರಿಸ್ಥಿತಿ ನೆನಸಿಕೊಂಡರೆ ಭಯ ಬರುತ್ತದೆ. ತುಂಬಾ ಚೆನ್ನಾಗಿ ಬಂದಿದೆ ಲೇಖನ ಮೇಡಂ
ಲೇಖನವನ್ನು ಓದುವಾಗ ಕ್ರೂರತೆಯ ತೀವ್ರತೆಗೆ ಬೆಚ್ಚಿಬೀಳುವ ಅನುಭವವಾಯಿತು.