ಮುಕ್ತಕಗಳು
1
ಮೊದಲಾಗಿ ಗಣಪನಿಗೆ ಬಾಗಿಹೆನು ಪೊಡಮಡುತ
ಮುದಮನದಿ ನೆನೆಯುತಲಿ ಬಹು ಭಕುತಿಯಿಂದ
ಪದತಲವ ಸುಮಗಳಲಿ ಪೂಜಿಸುತ ವಂದಿಸುವೆ
ವರನೀಡಿ ಸಲಹೆಮ್ಮ ಬನಶಂಕರಿ
2
ಮನದೊಳಗೆ ಸುಳ್ಳುಗಳ ಕಂತೆಯನು ಹೆಣೆಯುತಿರೆ
ಮನದಲ್ಲಿ ಮುಳ್ಳಿನಾ ಬಾಣವದು ನಾಟಿ
ನನಸಿನಲಿ ನೆಮ್ಮದಿಯ ಬಾಗಿಲದು ತೆರೆಯುವುದು
ಅನುದಿನವು ನಿಜ ನುಡಿಯೆ ಬನಶಂಕರಿ
3
ಬಿಳಿಯಿರುವ ಸಕಲವೂ ಹಾಲೆಂದು ನಂಬದಿರು
ಒಳಿತು ಕೆಡುಕುಗಳೆಡೆಗೆ ನಿಗವಿಡಲು ಬೇಕು
ಮಲಿನವಾಗಿಹ ಮನವ ತಿಳಿಗೊಳಿಸುತಿರುವಂತೆ
ಬಲ ನೀಡಿ ಹರಸು ನೀ ಬನಶಂಕರಿ
4
ಅಡೆತಡೆಗಳಾಗದೆಯೆ ಕೆಲಸಗಳು ತಾ ನಡೆದು
ಕಡಿಮೆ ಸಮಯದ ಒಳಗೆ ಜಯಭೇರಿ ಹೊಡೆದು
ಒಡನಾಡಿಗಳು ನಾವು ಹರುಷದಲಿ ಮಿಂದೆದ್ದು
ಕರಮುಗಿದು ವಂದಿಪೆವು ಬನಶಂಕರಿ
5
ಗರಗರನೆ ತಿರುಗುತಿವೆ ಬುಗರಿಗಳು ಎಡೆಬಿಡದೆ
ತರತರದ ಪಥಗಳಲಿ ಬ್ರಹ್ಮಾಂಡದಲ್ಲಿ
ಸರಿಯಾಗಿ ಮಾಡುತಲಿ ನಿತ್ಯ ಕಾಯಕಗಳನು
ವಿರಮಿಸದೆ ಸಾಗುತಿರು ಬನಶಂಕರಿ
–ಶಂಕರಿ ಶರ್ಮ, ಪುತ್ತೂರು.
ಚಿಂತನೆ ಗೆ ಹಚ್ಚುವಂತಿದೆ ಮುಕ್ತಕಗಳು ಶಂಕರಿ ಮೇಡಂ …ಚೆನ್ನಾಗಿ ವೆ…
ಧನ್ಯವಾದಗಳು ನಾಗರತ್ನ ಮೇಡಂ.
ಅರ್ಥಪೂರ್ಣವಾದ ಮುಕ್ತಕಗಳು, ಚೆನ್ನಾಗಿವೆ.
ಸುಂದರ, ಸೂಕ್ತ ಚಿತ್ರದೊಂದಿಗೆ ಪ್ರಕಟಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ಸಂಪಾದಕಿ ಹೇಮಮಾಲಾ ಅವರಿಗೆ ಹೃತ್ಪೂರ್ವಕ ನಮನಗಳು.
ಚೆನ್ನಾಗಿದೆ
ಧನ್ಯವಾದಗಳು ನಯನಾ ಮೇಡಂ.
ಅರ್ಥಪೂರ್ಣ ಮುಕ್ತಕಗಳು.