ಬೆಳಕು-ಬಳ್ಳಿ

ನೊರೆಗಟ್ಟಿದ ತಕ್ಷಣದ ಪರಿಹಾರ

Share Button


ಈಗಲೇ ಗುಟುಕರಿಸು ನಿನ್ನ ಚಹಾವನ್ನ
ಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ

ಪ್ರತಿ ಗುಟುಕಿನ ಸ್ವಾದವ ಅನುಭವಿಸು
ಅದರ ಬಣ್ಣದ ಸೊಬಗ ಆನಂದಿಸು

ಮೇಲಿನ ಕೆನೆ ಪದರ ಸೆಳೆದು ರುಚಿಸು
ತೇಲಿರುವ ನೊರೆಯ ಊದಿ ಹಿಂದೆ ಸರಿಸು

ತುಸು ಬಿಸಿಯಿರುವ ಲೋಟದ ಕಂಠ ಹಿಡಿದು
ಸ್ವಲ್ಪ ಸ್ವಲ್ಪವೇ ಗುಟುಕು ಗುಟುಕಾಗಿ ಹೀರು

ಕಂದುಬಣ್ಣದ ಬಿಸಿದ್ರವ ತುಟಿ ತಲುಪಿ ಇಳಿಯಲಿ
ಹಾಲಿನ ಘಮಲು ಸಕ್ಕರೆಯ ಸಿಹಿ ಭಾವ ಬಾಯಲ್ಲಿ ಹರಡಲಿ

ನಾಳೆ ಏನಾಗುವುದೋ ಯಾರಿಗೆ‌ ಗೊತ್ತು
ಸಿಕ್ಕ ಸಮಯದಲೇ ಸವಿದುಬಿಡು ನಿನ್ನ ಚಹಾ
ನಿಧಾನದಲಿ ಪರಮ ಸಮಾಧಾನದಲಿ

ನೀರ ಮೇಲಿನ ಗುಳ್ಳೆಯಂತೆ ಈ ಜೀವನ
ಯಾವಾಗ ಮುಗಿಯುವುದೋ ಬಲ್ಲವರು ‌ಯಾರಣ್ಣ

ಮನವು ಭಾರವಾಗಿ ಒಂಟಿತನ ಕಾಡಿದಾಗ ಬಲು ದೀರ್ಘ ಈ ಬದುಕು
ಮನದಲ್ಲೇ ಕಳೆದ ಖುಷಿಯ ಕ್ಷಣಗಳ ಮೆಲುಕು ಹಾಕು

ಮಾಡಲು‌ ಮೈ ಮುರಿಯುವಷ್ಟು ಕೆಲಸವಿದೆ
ತಪ್ಪಗಳ ಮಾಡಿ ಕಲಿಯಲು ಸಾಕಷ್ಟು ಸಮಯವಿದೆ

ಇರುವ ಕಾಲವೆಲ್ಲಾ‌ ಗಟ್ಟಿಯಾಗಿ ಕಠೋರತೆಯ ಪಡೆಯಲು ಹೋರಾಡಿರುವೆ
ಕ್ಷಣ ಕ್ಷಣಕ್ಕೂ ಭವಿಷ್ಯದ ಒಳಿತಿಗಾಗಿ ದುಡಿದಿರುವೆ

ಸಮಯ ಕಳೆದುಹೋಗಿ ಬದುಕು ಮುಗಿದುಹೋಗುವ ಮುನ್ನ
ಈಗಲೇ ಗುಟುಕರಿಸು ನಿನ್ನ ಚಹಾವನ್ನಾ…

ಕೆಲ ಜೀವದ ಗೆಳೆಯರು ಜೊತೆಗಿರುವರು
ಹಲವರು ಮರೆಯದ ಪಾಠ ಕಲಿಸಿ ತೆರಳುವುರು

ಹಂಬಲಿಸಿ ಇಷ್ಟಪಟ್ಟವರ ನೆನಹು ಮನದಲ್ಲಿ ಹಸಿರ ತುಂಬಿದೆ
ಸ್ವಾರಸ್ಯಮಯ ಘಟನಾವಳಿಗಳ ಜಾತ್ರೆಯೇ ನೆರೆದಿದೆ

ಗುಡಿಗುಡಿಯ ಸುತ್ತಿ ಹರಕೆ ಹೊತ್ತು ಪಡೆದ ಮಕ್ಕಳು
ಬೆಳೆದು ದೊಡ್ಡವರಾಗಿ ತಮ್ಮ ಬದುಕ ಕಂಡುಕೊಂಡಿಹರು

ರೆಕ್ಕೆ ಬಲಿತ ಮೇಲೆ ಗೂಡು ತೊರೆದು ಹಾರಿಹರು

ಪ್ರತಿ ಘಟನೆಗಳು ಹೇಗೆ ಜರುಗುವುವು ಎಂಬುದು ಅರಿಯದಾಗಿದೆ
ಅನಿರೀಕ್ಷಿತ ತಿರುವುಗಳಿಗೆ ಈ ಬಾಳು ಸಾಕ್ಷಿಯಾಗಿದೆ

ಸಮಸ್ತ ಜಗದ ಒಲವ ಮೈ ತುಂಬಿಸಿಕೊಳ್ಳೋಣ
ನಮ್ಮ ಕಾಳಜಿವಹಿಸುವವರ ಮರೆಯದೆ ನೆನೆಯೋಣ

ದೀರ್ಘ ಉಸಿರು ತೆಗೆದುಕೊಂಡು ಮೊಗದೀ ನಗುವ ತುಂಬಿಕೊಂಡು
ಗಂಟಲುಬ್ಬಿ ಒತ್ತರಿಸುವ ದುಃಖವ ಹೊರಹಾಕೋಣ
ಸವಿಯೋಣ…. ಜೀವನದ ಚಹಾ ಸವಿಯೋಣ…

ಸದ್ದಿಲ್ಲದೆ……..ಯಾವುದೇ ಗಡಿಬಿಡಿಯಿಲ್ಲದೆ…..

ಶರಣಬಸವೇಶ ಕೆ. ಎಂ

11 Comments on “ನೊರೆಗಟ್ಟಿದ ತಕ್ಷಣದ ಪರಿಹಾರ

  1. ಪ್ರತಿ ವಾರದ ಸುರಹೊನ್ನೆಯ ಎಲ್ಲಾ ಬರಹಗಳನ್ನು ಓದಿ ತಪ್ಪದೇ ಪ್ರತಿಕ್ರಿಯೆ ನೀಡುವ ನಾಲ್ಕು ಹೃದಯವಂತ ಜನರಲ್ಲಿ ನಾಗರತ್ನ ಬಿ.ಆರ್ ಅವರು ಒಬ್ಬರು. ‌ಇವರ ಸಾಹಿತ್ಯ ಪ್ರೇಮ ‌ಕಂಡು ಅಚ್ಚರಿಯೆನಿಸುತ್ತದೆ. ನಿಮ್ಮ ಈ ಪ್ರೋತ್ಸಹದ ನುಡಿಗಳೇ ನಮಗೆ ದಾರಿದೀಪವಾಗಿವೆ. ಧನ್ಯವಾದಗಳು ಮೇಡಂ

  2. ಚಹಾ ಮತ್ತು ಬದುಕು ಎರಡನ್ನೂ ಚೆನ್ನಾಗಿ ವಿವರಿಸಿದ್ರಿ. ಓದಿಯೇ ಉಲ್ಲಾಸಗೊಂಡಿತು ಮನ.

  3. ತುಂಬಾ ಚೆನ್ನಾಗಿದೆ, ನಾನು ಚಹಾ ಪ್ರೇಮಿ,,
    ಎಲ್ಲದರ ಸ್ವಾದ ಸವಿಯಬೇಕೆನ್ನುವವಳು

  4. ಮಹಾಕವಿಯ ಪದ್ಯ ಎಂದೆನ್ನಿಸುವ ಸುಂದರ ಆತ್ಮೀಯ ಕವನ!

    1. ನಮ್ಮ ಸುರಹೊನ್ನೆಯ ಸಹೃದಯ ಓದುಗರು ಸ್ವತಃ ತಾವೇ ಪ್ರತಿಭಾನ್ವಿತ ಬರಹಗಾರರಾಗಿದ್ದರೂ ನಮ್ಮಂತಹ ಉದಯೋನ್ಮುಖ ಬರಹಗಾರರ ಬರಹಗಳನ್ನು ಓದಿ ಮೆಚ್ಚುಗೆ ಪ್ರತಿಕ್ರಿಯೆ ನೀಡುತ್ತಾ ಈ ಅಂತರ್ಜಾಲ ಪತ್ರಿಕೆಯ ಮೌಲ್ಯ ಹೆಚ್ಚಿಸುತ್ತಾ ನಮಗೆಲ್ಲಾ ಸ್ಪೂರ್ತಿ ತುಂಬುವ ಪದ್ಮಿನಿ ಹೆಗ್ಗಡೆ,ನಯನ ಬಜಕೂಡ್ಲು ಅವರಿಗೆ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನಮಗೆ ಬಲ ತಂದಿದೆ.

  5. ಬಿಸಿ ಬಿಸಿಯಾದ ಸ್ವಾದಿಷ್ಟ ಚಹಾವನ್ನು ಸವಿಯುವಂತೆ; ಎಲ್ಲಾ ಚಿಂತೆಗಳನ್ನು ಮರೆತು, ಜೀವನದ ಕ್ಷಣ ಕ್ಷಣದ ಆನಂದವನ್ನು ಸವಿಯುತ್ತಾ ಬದುಕಲು ನೀಡಿದ ಸಂದೇಶಯುಕ್ತ ಸುಂದರ ಕವನ.

  6. ಸ್ವಾದಿಷ್ಟಭರಿತ ಚಹಾದ ವರ್ಣನೆಯೊಂದಿಗೆ ಪ್ರಾರಂಭವಾದ ಕವಿತೆ ಮುಂದೆ ಮುಂದೆ ಸಾಗಿದಂತೆಲ್ಲಾ ಜೀವನದ ಪಾಠವನ್ನೇ ಹೇಳಿಬಿಟ್ಟಿತು. ಮನ ತಟ್ಟುವ ಕವಿತೆ.

  7. ಧನ್ಯವಾದಗಳು ಶಂಕರಿ ಶರ್ಮ ಮೇಡಂ ಅವರಿಗೆ

Leave a Reply to ವಿದ್ಯಾ Cancel reply

 Click this button or press Ctrl+G to toggle between Kannada and English

Your email address will not be published. Required fields are marked *