ಹುಣ್ಣಿಮೆಯ ಚಂದ್ರ

Share Button


(23-05-2024)ರಂದು ಬುದ್ಧ ಪೂಣ ಮೆಯ ಸಂದರ್ಭದಲ್ಲಿ ಲೇಖನ

ಚಿಕ್ಕಂದಿನಿಂದ ನನಗೆ, ರಾಷ್ಟ್ರೀಯ ಹಾಗೂ ಧಾರ್ಮಿಕ ಮಹಾಪುರುಷರ ಬಗ್ಗೆ ಬಹಳ ಆಸಕ್ತಿ ಇತ್ತು. ಹೀಗಾಗಿ ಪತ್ರಿಕೆಗಳಲ್ಲಿ, ಸಾಪ್ತಾಹಿಕಗಳಲ್ಲಿ, ಮಾಸಿಕಗಳಲ್ಲಿ, ಅಂತಹವರ ಬಗ್ಗೆ ಬಂದ ಲೇಖನಗಳನ್ನು ಮತ್ತೆ ಮತ್ತೆ ಓದುತ್ತಿದ್ದೆ. ಅಲ್ಲದೇ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮಗಳನ್ನು ಪ್ರತಿನಿತ್ಯ ಕೇಳುತ್ತಿದ್ದೆ. ಆಗ ಧಾರವಾಡ ಆಕಾಶವಾಣಿಯಿಂದ 1958 ರಿಂದ 1979 ರ ಅವಧಿಯಲ್ಲಿ, ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಯಶೋಧರೆ, ವಾಸವದತ್ತ, ಆಮ್ರಪಾಲಿ, ಕಿಸಾ ಗೌತಮಿ ಮುಂತಾದ ಪಾತ್ರಗಳ ಬಗ್ಗೆ ಪ್ರಸಾರವಾದ ಅನೇಕ ನಾಟಕಗಳಲ್ಲಿ ನನ್ನ ತಂದೆ ಎನ್.ಎಸ್. ವಾಮನ್ ಅಭಿನಯಿಸಿ, ಆ ನಾಟಕಗಳ ನಿರ್ದೇಶನ, ನಿರ್ಮಾಣ ಮಾಡಿದ್ದರು..

ನಾನೂ ನನ್ನ ಆಕಾಶವಾಣಿಯ 36 ವರ್ಷಗಳ ಸೇವಾವಧಿಯಲ್ಲಿ ಬುದ್ಧ-ಮಹಾವೀರರಂತಹ ಧರ್ಮ ಬೋಧಕರು, ಪುರಂದರದಾಸ-ಕನಕದಾಸ ಮುಂತಾದ 26 ದಾಸರು, ಶಂಕರಾಚಾರ್ಯರು, ರಾಘವೇಂದ್ರ ಸ್ವಾಮಿಗಳು ಮುಂತಾದ ದಾರ್ಶನಿಕರು, ಬಸವೇಶ್ವರ-ಅಲ್ಲಮಪ್ರಭು-ಅಕ್ಕ ಮಹಾದೇವಿ ಮುಂತಾದ 30 ಶರಣ-ಶರಣೆಯರು, ಗುರುನಾನಕ್-ಕಬೀರ್‌ದಾಸ್, ತುಳಸೀದಾಸ್ ಮುಂತಾದ ಸಂತರು ಇವರೆಲ್ಲರ ಜೀವನ ಹಾಗೂ ಸಂದೇಶ ಹೊಂದಿದ ನಾಟಕಗಳನ್ನು ರೂಪಕಗಳನ್ನು ಬರೆದು, ನಿರ್ದೇಶಿಸಿ, ನಿರ್ಮಾಣ ಮಾಡುವುದರ ಜೊತೆಗೆ ಆ ಎಲ್ಲ ಶೀರ್ಷಿಕಾ ಪಾತ್ರಗಳಲ್ಲಿ ಅಭಿನಯಿಸುವ ಭಾಗ್ಯ ನನ್ನದಾಗಿತ್ತು.

ವಿಶೇಷವಾಗಿ ಸ್ಮರಿಸಿಕೊಂಡರೆ ಸದ್ಯ ಗೌತಮ ಬುದ್ಧನಿಗೆ ಸಂಬಂಧಿಸಿದ ನಾಟಕ ಹಾಗೂ ಗೀತನಾಟಕವನ್ನು ಇಲ್ಲಿ ಸ್ಮರಿಸಿಕೊಳ್ಳಲೇಬೇಕು. ಮೈಸೂರು ಆಕಾಶವಾಣಿಯಲ್ಲಿ ಬುದ್ಧನ ಜಾತಕ ಕಥೆಗಳನ್ನು ಆಧರಿಸಿ ಬಿ.ಎಂ. ಚಂದ್ರಯ್ಯ ಬರೆದಿದ್ದ ನಾಟಕದಲ್ಲಿ ನಾನು ಬೋಧಿಸತ್ವ-ಜಿಂಕೆ ಹಾಗೂ ಬುದ್ಧನ ಪಾತ್ರಗಳನ್ನು ವಹಿಸಿದ್ದೆ.

ಭದ್ರಾವತಿ ಆಕಾಶವಾಣಿಯಲ್ಲಿದ್ದಾಗ, ಪ್ರೊ. ಎ.ಎಸ್. ವೇಣುಗೋಪಾಲರಾವ್ ಅವರು ಬರೆದಿದ್ದ ‘ಹುಣ್ಣಿಮೆಯ ಚಂದ್ರ‘ ಎಂಬ ಗೀತ ನಾಟಕದಲ್ಲಿ ನಾನು ಬುದ್ಧನ ಪಾತ್ರ ವಹಿಸಿ, ಆ ಗೀತ ನಾಟಕದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದೆ. ಈ ನಾಟಕದಲ್ಲಿ ವೈರಾಗ್ಯದಿಂದ ಸಿದ್ಧಾರ್ಥ ತನ್ನ ಹೆಂಡತಿ ಯಶೋಧರೆ ಹಾಗೂ ಮಗ ರಾಹುಲನನ್ನು ಬಿಟ್ಟು ಹೋಗುವ ಸಂದರ್ಭ, ತನ್ನ ಎಲ್ಲ ಉಡುಪುಗಳನ್ನು ತನ್ನ ಅಂಗರಕ್ಷಕನ ಬಳಿ ಕೊಟ್ಟು ಹೋದ ಸಂದರ್ಭ, ಜ್ಞಾನೋದಯವಾದ ಮೇಲೆ ಬುದ್ಧನಾಗಿ ಬೋಧನೆ ಮಾಡಿದ್ದು, ಕಿಸಾ ಗೌತಮಿಯ ಸಂದರ್ಭ ಹಾಗೂ ಮಹಾನಿರ್ವಾಣದ ಸನ್ನಿವೇಶಗಳಲ್ಲಿ ನಾನು ಸಿದ್ಧಾರ್ಥ ಹಾಗೂ ಬುದ್ಧನಾಗಿ ಅಭಿನಯಿಸಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಅವಿಸ್ಮರಣೀಯ ಸಂದರ್ಭ.

ಈ ಹಿನ್ನೆಲೆಯಲ್ಲಿ ಬುದ್ಧನ ಜೀವನ ಹಾಗೂ ಸಂದೇಶಗಳ ಬಗ್ಗೆ ಈ ಲೇಖನದಲ್ಲಿ ಗಮನಿಸೋಣ:- ಕಪಿಲವಸ್ತು ರಾಜಧಾನಿಯಾಗಿರುವ ಶಾಕ್ಯ ಕುಲದ ರಾಜಾ ಶುದ್ಧೋಧನನ ಮಗನಾಗಿ ಹುಟ್ಟಬೇಕೆಂದು ಈತ ನಿರ್ಧರಿಸಿದ. ಕೆಲವೇ ದಿನಗಳಲ್ಲಿ, ಈತನ ತಾಯಿ ರಾಣಿ ಮಹಾಮಾಯಾ ಕನಸಿನಲ್ಲಿ ಕಂಡಂತೆ, ಒಂದು ಬಿಳಿಯ ಆನೆ ಆಕೆಯ ಗರ್ಭ ಹೊಕ್ಕಿತಂತೆ. 10 ಚಂದ್ರಮಾಸಗಳ ನಂತರ, ಲುಂಬಿನಿ ಉದ್ಯಾನವನದಲ್ಲಿ ಅಡ್ಡಾಡುವಾಗ, ಆಕೆಯ ಬಲತೋಳಿನ ಕೆಳಗಿಂದ ಒಂದು ಶಿಶು ಉದ್ಭವವಾಯಿತು. ತಕ್ಷಣವೇ ಆ ಶಿಶು ನಡೆಯಲು ಹಾಗೂ ಮಾತನಾಡಲು ಆರಂಭಿಸಿತು. ಆತನ ಪಾದದ ಪ್ರತಿ ಹೆಜ್ಜೆಯ ಕೆಳಗೆ ಒಂದು ಕಮಲದ ಹೂವು ಅರಳಲಾರಂಭಿಸಿತು. ಆಗ ಆತ, ಇದುವೇ ತನ್ನ ಅಂತಿಮ ಜನ್ಮ ಎಂದು ಪ್ರಕಟಿಸಿದ. ಆಗ ರಾಜಾ ಆಸ್ಥಾನದ ಜ್ಯೋತಿಷಿಗಳನ್ನು ಕರೆಸಿ, ಮಗುವಿನ ಭವಿಷ್ಯದ ಬಗ್ಗೆ ಕೇಳಿದ. 7 ಜನ ಜ್ಯೋತಿಷಿಗಳು ಹೇಳಿದರಂತೆ, ಈತ ವಿಶ್ವದ ಚಕ್ರವರ್ತಿಯಾಗುತ್ತಾನೆ ಅಥವಾ ಬುದ್ಧನಾಗುತ್ತಾನೆ ಎಂದು. ಒಬ್ಬ ಜ್ಯೋತಿಷಿ ಹೇಳಿದ – ಸಂದೇಹವೇ ಇಲ್ಲದೇ ಈ ಶಿಶು ಬುದ್ಧನೇ ಆಗುತ್ತಾನೆ. ಈತನ ತಾಯಿ ಶಿಶು ಹುಟ್ಟಿದ 7 ನೇ ದಿನ ನಿಧನ ಹೊಂದಿದಳು. ಹೀಗಾಗಿ ತಾಯಿಯ ಸೋದರಿ, ಮಹಾ ಪ್ರಜಾಪತಿಯ ಕಾಳಜಿಯಲ್ಲಿ ಆರೈಕೆ ಹೊಂದಿದ. ಮಗುವಾಗಿದ್ದಾಗ ಒಂದು ಉತ್ಸವದ ಕಾಲದಲ್ಲಿ ಯಾರೂ ಗಮನಿಸದಿದ್ದಾಗ, ಈ ಮಗು ಏನು ಮಾಡುತ್ತಿದ್ದ ಗೊತ್ತೇ? ನಂತರ ತಿಳಿಯಿತು – ಒಂದು ಮರದ ಕೆಳಗೆ, ಈ ಮಗು ಧ್ಯಾನ ಮಾಡುತ್ತಿತ್ತು – ಆದರೆ ಈತನ ನೆರಳು ಇಡೀ ದಿನ ಚಲಿಸದೇ ಇದ್ದು ಈತನನ್ನು ಸೂರ್ಯನ ತಾಪದಿಂದ ರಕ್ಷಿಸುತ್ತಿತ್ತು ಎಂದು.

ಈ ರಾಜಕುಮಾರ ಶ್ರೀಮಂತ ಜೀವನ ಅನುಭವಿಸಿದ. ಈತನ ತಂದೆ, ವೃದ್ಧಾಪ್ಯ-ಕಾಯಿಲೆ ಹಾಗೂ ಮರಣ ಮುಂತಾದ ಪ್ರಪಂಚದ ಕೆಡುಕುಗಳು ಈತನ ಮುಂದೆ ಬಾರದಂತೆ ವ್ಯವಸ್ಥೆ ಮಾಡಿದ್ದ. ಬೇಸಿಗೆ, ಚಳಿಗಾಲ ಹಾಗೂ ಮಳೆಗಾಲಗಳಿಗಾಗಿ ಎಲ್ಲ ವಿವಿಧ ಅರಮನೆಗಳನ್ನು ಕೊಟ್ಟು ಎಲ್ಲ ರೀತಿಯ ವೈಭೋಗಗಳ ಮನರಂಜನೆಗಳನ್ನು ಏರ್ಪಡಿಸಿದ್ದ. ಕೆಲವು ಕಡೆ ಹೇಳಿರುವಂತೆ ಈತನ ವ್ಯವಸ್ಥೆಗಾಗಿ 40000 ಸೇವಕಿಯರನ್ನು ವ್ಯವಸ್ಥೆ ಮಾಡಿದ್ದನಂತೆ. ಯಶೋಧರಾ ಈತನ ಮಡದಿ. ರಾಹುಲ ಈತನ ಮಗ. ರಾಜಕುಮಾರ ಸಿದ್ಧಾರ್ಥನಿಗೆ 29 ವರ್ಷವಾದಾಗ, ಆತನ ಜೀವನ ದಿಢೀರನೇ ಅಪಾರ ಬದಲಾವಣೆಗೆ ತುತ್ತಾಯಿತು. ರಥದಲ್ಲಿ ನಗರ ಸಂಚಾರಕ್ಕೆ ತನ್ನನ್ನು ಕರೆದೊಯ್ಯಬೇಕೆಂದು ಆತ ಕೇಳಿಕೊಂಡ. ಅನುಮತಿ ಕೊಡುವುದಕ್ಕೆ ಮೊದಲು ರಾಜಕುಮಾರ ಸಂಚರಿಸುವ ಮಾರ್ಗದಲ್ಲಿದ್ದ ಎಲ್ಲ ಕಾಯಿಲೆಯವರನ್ನೂ, ವೃದ್ಧರನ್ನೂ, ಆ ಮಾರ್ಗದಿಂದ ದೂರ ಕಳಿಸಬೇಕೆಂಬ ವ್ಯವಸ್ಥೆಯನ್ನು ರಾಜಾ ಮಾಡಿದ. ಆದರೆ ಒಬ್ಬ ವೃದ್ಧ ಈ ಸೂಚನೆಯನ್ನು ಗಮನಿಸಿರಲಿಲ್ಲ. ರಾಜಕುಮಾರ ಈ ವೃದ್ಧನನ್ನು ನೋಡಿದೊಡನೆ ಇದು ಯಾರು ಎಂದು ಕೇಳಿದ. ಆಗ ಅವನಿಗೆ ಇದು ಒಬ್ಬ ವೃದ್ಧ ಎಂಬ ಉತ್ತರ ದೊರೆಯಿತು. ಅಲ್ಲದೇ ಇಡೀ ಪ್ರಪಂಚದಲ್ಲಿ ಇವನೊಬ್ಬನೇ ಮುದುಕನಲ್ಲ – ರಾಜಕುಮಾರ, ಆತನ ಹೆಂಡತಿ, ತಂದೆ, ಪರಿವಾರದವರು ಎಲ್ಲರೂ ವಯಸ್ಸಾದಂತೆ ಮುದುಕರಾಗುತ್ತಾರೆ ಎಂಬ ಮಾಹಿತಿ ರಾಜಕುಮಾರನಿಗೆ ಸಿಕ್ಕಿತು. ಈ ಮೊದಲನೇ ಸಂಚಾರದ ನಂತರ ಅರಮನೆಯ ಗೋಡೆಗಳನ್ನು ದಾಟಿ 3 ಬಾರಿ ಈ ರಾಜಕುಮಾರ ಸಂಚಾರ ಹೊರಟ. ಮೊದಲು ಕಾಯಿಲೆಯಿಂದ ನರಳುತ್ತಿರುವ ಒಬ್ಬ ವ್ಯಕ್ತಿಯನ್ನು ಕಂಡ. ನಂತರ ಸ್ಮಶಾನಕ್ಕೆ ಒಯ್ಯಲಾಗುತ್ತಿರುವ ಒಂದು ಹೆಣವನ್ನು ಕಂಡ, ಅಂತಿಮವಾಗಿ ಒಂದು ಮರದ ಕೆಳಗೆ ಧ್ಯಾನ ಮಾಡುತ್ತಿದ್ದ ಭಿಕ್ಷುಕನನ್ನು ಕಂಡ. ಮಾನವ ಜೀವನದ ವಿವಿಧ ಕೆಡುಕುಗಳನ್ನು ಕಂಡ ನಂತರ, ಈ ಸ್ಥಿತಿಯನ್ನು ದಾಟಿದವರನ್ನೂ ಕಂಡ. ಆಗ ಆತ ನಗರ ಬಿಟ್ಟು ಅರಣ್ಯದಲ್ಲಿ ವಿಶ್ರಾಂತಿ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ.

ಮಗ ಏನನ್ನೇ ಕೇಳಿದರೂ ಕೊಡಲು ರಾಜಾ ಸಿದ್ಧನಿದ್ದ. ಆಗ ರಾಜಕುಮಾರ ತಂದೆಯನ್ನು ಕೇಳಿದ – ”ನೀನು ಸಾಯಲಾರೆ, ಕಾಯಿಲೆ ಬೀಳಲಾರೆ, ವೃದ್ಧನಾಗಲಾರೆ, ಹಾಗೂ ಶ್ರೀಮಂತಿಕೆ ಕಳೆದುಕೊಳ್ಳಲಾರೆ ಎಂಬ ಖಾತರಿ ಕೊಡಬಲ್ಲೆಯಾ?”. ಆಗ ತಂದೆ ಉತ್ತರಿಸಿದ – ‘‘ಇದು ನನ್ನಿಂದ ಸಾಧ್ಯವಿಲ್ಲ”. ಅರಮನೆಯ ತನ್ನ ಕೋಣೆಗೆ ಸಿದ್ಧಾರ್ಥ ಹಿಂದಿರುಗಿದ. ಸುಂದರ ಸ್ತ್ರೀಯರು ಅಲ್ಲಿ ಮನರಂಜನೆ ನೀಡಿದರೂ, ಸಿದ್ಧಾರ್ಥನಿಗೆ ಸಮಾಧಾನವಾಗಲಿಲ್ಲ. ಜನನ-ಮರಣಗಳನ್ನು ಮೀರಿದ ಸ್ಥಿತಿ ಹುಡುಕಲು ತಾನು ಆ ರಾತ್ರಿಯೇ ಅರಮನೆಯಿಂದ ಹೊರಗೆ ತೆರಳಬೇಕೆಂಬ ನಿರ್ಧಾರ ಮಾಡಿದ.

ಏಳು ದಿನಗಳ ಮೊದಲು ಆತನ ಹೆಂಡತಿ ಒಬ್ಬ ಮಗನಿಗೆ ಜನ್ಮ ಕೊಟ್ಟಿದ್ದಾಳೆ ಎಂಬ ವಿಚಾರ ತಿಳಿದಾಗ, ಆತ ಅಂದುಕೊಂಡನಂತೆ ಒಂದು ಸಂಕೋಲೆ ಉದಯಿಸಿದೆ. ಮಗುವಿಗೆ ರಾಹುಲ ಎಂದು ಹೆಸರಿಡಲಾಯಿತು. ರಾಹುಲ ಎಂದರೆ ಸಂಕೋಲೆ. ಈ ರಾಜಕುಮಾರನು ಅರಮನೆ ಬಿಟ್ಟು ಹೋಗುವ ಮೊದಲು, ಹೆಂಡತಿಯ ಕೋಣೆಗೆ ಹೋದ. ಅಲ್ಲಿ ನಿದ್ರಿಸುತ್ತಿದ್ದ ಪತ್ನಿ, ಆಕೆಯ ಬಳಿಯಿದ್ದ ಶಿಶುವನ್ನು ಕಂಡ. ಈ ಕಥೆಯ ಇನ್ನೊಂದು ಅವತರಣಿಕೆಯಲ್ಲಿ ಹೇಳಲಾಗಿರುವಂತೆ, ಸಿದ್ಧಾರ್ಥ ಅರಮನೆ ಬಿಟ್ಟು ತೆರಳುವ ರಾತ್ರಿ, ರಾಹುಲ ಇನ್ನೂ ಹುಟ್ಟಿರಲಿಲ್ಲವಂತೆ. ಇದರ ಬದಲು ಜ್ಞಾನೋದಯಕ್ಕಾಗಿ ತಂದೆಯ ಹುಡುಕಾಟದ 6 ವರ್ಷಗಳವರೆಗೆ, ಆತನ ಮಗುವಿನ ಶಿಶುಪಾಲನಾ ಅವಧಿಯೇ ಮುಂದುವರೆಯಿತಂತೆ. ಈ ಮೂಲಗಳ ಪ್ರಕಾರ ತಂದೆಗೆ ಬುದ್ಧತ್ವ ದೊರೆತ ರಾತ್ರಿಯೇ ರಾಹುಲ ಹುಟ್ಟಿದನಂತೆ.


ಈ ರಾಜಕುಮಾರ ಕಪಿಲವಸ್ತುವನ್ನೂ, ರಾಜ ಜೀವನವನ್ನೂ ಹಿಂದೆ ಬಿಟ್ಟು ಕಾಡನ್ನು ಹೊಕ್ಕ. ಅಲ್ಲಿ ತನ್ನ ತಲೆಕೂದಲನ್ನು ಕತ್ತರಿಸಿಕೊಂಡ. ರಾಜ‌ಉಡುಗೆಯನ್ನು ಬಿಟ್ಟು, ಬೇಟೆಗಾರನ ಸರಳ ಉಡುಪು ಧರಿಸಿದ. ಆ ಘಳಿಗೆಯಿಂದ ತನ್ನ ಭಿಕ್ಷಾಪಾತ್ರೆಯಲ್ಲಿ ಏನು ಬೀಳುತ್ತಿತ್ತೋ ಅದನ್ನೇ ತಿನ್ನುತ್ತಾ ಹೋದ.

ಜನನ-ಮರಣಗಳನ್ನು ದಾಟಿದ ಸ್ಥಿತಿ ಕಂಡುಕೊಳ್ಳುವವರೆಗೆ ನಾನು ಒಂದು ಮರದ ಕೆಳಗೆ ಕುಳಿತುಕೊಳ್ಳುವೆ. ಅಲ್ಲಿಂದ ಏಳುವುದಿಲ್ಲ. ಎಂಬ ನಿರ್ಧಾರ ಮಾಡಿದ ಈ ರಾಜಕುಮಾರ ಅರಮನೆಯನ್ನು ಬಿಟ್ಟು 6 ವರ್ಷಗಳ ವರೆಗೆ ಧ್ಯಾನ ಮಾಡಿದ. ಅದೊಂದು ಸಂಜೆ ಮೇ ತಿಂಗಳ ಹುಣ್ಣಿಮೆ. ಅಂದು ಮೂರನೇ ಜಾವದಲ್ಲಿ ಬೆಳಕಾಗಲು ಕೆಲವೇ ಗಂಟೆಗಳಿದ್ದಾಗ ಸಿದ್ಧಾರ್ಥನಿಗೆ ಜ್ಞಾನೋದಯವಾಯಿತು. ಬುದ್ಧ ಕಂಡುಕೊಂಡ 4 ಸತ್ಯಗಳು. ನರಳುವಿಕೆ, ನರಳುವಿಕೆಯ ಮೂಲ, ನರಳುವಿಕೆಯ ನಿಲುಗಡೆ, ನರಳುವಿಕೆಯ ನಿಲುಗಡೆಗೆ ಮಾರ್ಗ.

ದಾಖಲೆಗಳು ಹಾಗೂ ಕೆಲವು ತಜ್ಞರ ಅಭಿಪ್ರಾಯದಂತೆ ಬುದ್ಧ ಜನಿಸಿದ್ದು, ಆತನಿಗೆ ಜ್ಞಾನೋದಯವಾಗಿದ್ದು ಹಾಗೂ ಆತನ ನಿರ್ವಾಣವಾಗಿದ್ದು, ಎಲ್ಲಾ ಬುದ್ಧ ಪೂರ್ಣಿಮೆಯಂದೇ.!

-ಎನ್.ವ್ಹಿ ರಮೇಶ್

4 Responses

  1. ಸಕಾಲಿಕ ಲೇಖನ…ಚೆನ್ನಾಗಿದೆ.. ಸಾರ್..

  2. ನಯನ ಬಜಕೂಡ್ಲು says:

    Nice

  3. ಶಂಕರಿ ಶರ್ಮ says:

    ಬುದ್ಧನ ಕುರಿತಾದ ಸಕಾಲಿಕ ಲೇಖನ ಚೆನ್ನಾಗಿದೆ. ಹಲವಾರು ಬಾರಿ ತಾವು ಬುದ್ಧನ ಪಾತ್ರದಲ್ಲಿ ಮಿಂಚಿದ ವಿಚಾರವು ಬಹಳ ಪ್ರಸ್ತುತವೆನಿಸಿತು…ಧನ್ಯವಾದಗಳು.

  4. ಪದ್ಮಾ ಆನಂದ್ says:

    ಬುದ್ದ ಪೂರ್ಣಿಮೆಯ ಮಹತ್ವವನ್ನು ತಿಳಿಸಿಕೊಡುವ ಚಂದದ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: