ದೇವರಿಲ್ಲದ ಗುಡಿಗಳು: ಕಾಂಬೋಡಿಯಾ..ಹೆಜ್ಜೆ 5
ಕಾಂಬೋಡಿಯಾ…
ಪುರಾತನ ದೇಗುಲಗಳ ಸಮುಚ್ಛಯವಾಗಿರುವ ನಿನ್ನನ್ನು ಏನೆಂದು ಕರೆಯಲಿ – ಕಾಂಭೋಜ ಎಂದೇ ಅಥವಾ ಕಾಂಪೋಚಿಯಾ ಎಂದೇ ಅಥವಾ ಕಾಂಬೋಡಿಯಾ ಎಂದೇ? ಐದು ಬಾರಿ ಹೆಸರು ಬದಲಿಸಿರುವ ನೀನು ನನ್ನ ತಾಯ್ನಾಡಾದ ಭಾರತಕ್ಕೆ ಹತ್ತಿರವಾದದ್ದಾರೂ ಹೇಗೆ? ಹಿಂದೂ ಧರ್ಮದಲ್ಲಿ ಸೃಷ್ಟಿ, ಸ್ಥಿತಿ, ಲಯದ ಕತೃಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ದೇಗುಲಗಳನ್ನು ಇಲ್ಲಿ ಕಟ್ಟಿದವರಾರು? ನಿನ್ನ ಮಡಿಲಲ್ಲಿ ಬೌದ್ಧಧರ್ಮವು ವಿಕಾಸ ಹೊಂದಿದ ಪರಿ ಅದ್ಭುತ. ವಾಯುಮಾರ್ಗವಾಗಿ ಭಾರತದಿಂದ ಸುಮಾರು ನಾಲ್ಕು ಸಾವಿರ ಕಿ.ಮೀ. ದೂರದಲ್ಲಿರುವ ನೀನು ನಮ್ಮ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ಪಠಣ ಮಾಡಿದ್ದಾದರೂ ಹೇಗೆ? ನಿನ್ನ ನೆಲದಲ್ಲಿ ನಮ್ಮ ದೇವಭಾಷೆಯಾದ ಸಂಸ್ಕೃತದ ಶಿಲಾ ಶಾಸನಗಳು ಹುಟ್ಟಿ ಬಂದದ್ದಾದರೂ ಹೇಗೆ?
ನಾನು ಕಾಂಬೋಡಿಯಾ ರಾಷ್ಟ್ರಕ್ಕೆ ಮುಕುಟಪ್ರಾಯವಾಗಿರುವ ಆಂಕೊರ್‌ವಾಟ್ ಮುಂದೆ ನಿಂತಿದ್ದಾಗ, ಇಷ್ಟೆಲ್ಲಾ ಪ್ರಶ್ನೆಗಳು ಮನದಲ್ಲಿ ಮೂಡಿದ್ದವು. ಇದ್ದಕ್ಕಿದ್ದಂತೆ ಆಂಕೊರ್‌ವಾಟ್‌ನ ದೇಗುಲಗಳ ಮಧ್ಯದಿಂದ ಒಂದು ಧ್ವನಿ ಕೇಳಿ ಬಂತು ”ತಂಗಿ ಹೇಳುವೆನು ಕೇಳು ನನ್ನ ಕಥೆಯನ್ನು. ಎರಡು ಸಾವಿರ ವರ್ಷಗಳ ಹಿಂದೆ ಕಡಲತೀರದಲ್ಲಿದ್ದ ನನ್ನ ನಾಡಿಗೆ ಇಂಡಿಯಾ ಹಾಗೂ ಚೈನಾದಿಂದ ಕೆಲವು ವರ್ತಕರು ವ್ಯಾಪಾರಕ್ಕಾಗಿ ಸಮುದ್ರ ಮಾರ್ಗವಾಗಿ ಬಂದಿಳಿದರು. ನನ್ನ ನಿಸರ್ಗ ಸಂಪತ್ತು, ಪ್ರಾಕೃತಿಕ ಸೌಂದರ್ಯ, ವಾಸವಾಗಿದ್ದ ಮುಗ್ಧ ಜನರನ್ನು ಕಂಡು ಕೆಲವರು ನನ್ನ ಮಡಿಲಿನಲ್ಲಿಯೇ ಬೀಡುಬಿಟ್ಟರು. ಚೋಳರು, ಪಲ್ಲವರು ಮುಂತಾದ ರಾಜವಂಶಸ್ಥರು ಇಲ್ಲಿಗೆ ಭೇಟಿ ನೀಡಿ, ಹಿಂದೂ ಧರ್ಮವನ್ನು ಪ್ರಸಾರ ಮಾಡಿದರು. ನಿಮ್ಮ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತವನ್ನೂ ಪರಿಚಯಿಸಿದರು. ಒಂಭತ್ತನೇ ಶತಮಾನದಲ್ಲಿ ಕಾಂಭೋಜದ ಚಕ್ರವರ್ತಿಯಾದ ಎರಡನೇ ಸೂರ್ಯವರ್ಮನು ಈ ಬೃಹತ್ ದೇಗುಲಗಳ ಸಂಕೀರ್ಣವನ್ನು ನಿರ್ಮಿಸಲಾರಂಭಿಸಿದ, ನಂತರದಲ್ಲಿ ಬಂದ ರಾಜರು ಒಂದೊಂದು ದೇಗುಲಗಳನ್ನು ಕಟ್ಟಿಸುತ್ತಾ ಹೊದರು. ಒಂಭತ್ತರಿಂದ ಹದಿನೈದನೇ ಶತಮಾನದವರೆಗೆ ಸುಮಾರು ನಾನ್ನೂರು ಎಕರೆ ವಿಸ್ತೀರ್ಣದಲ್ಲಿ ಅಂದಾಜು ನಾಲ್ಕು ಸಾವಿರ ದೇಗುಲಗಳನ್ನು ಕಟ್ಟಿಸಿರಬಹುದು. ಇಷ್ಟು ವೈಭವದಿಂದ ಮೆರೆದ ನಾನು ಈಗ ಹೇಗಿರುವೆ ನೋಡು” ಎಂದು ಹೇಳುತ್ತಾ ಮೌನಕ್ಕೆ ಜಾರಿತು.
ಹಿಂದಿನ ದಿನ ನಾನು ಗೂಗಲ್ ಸರ್ವಜ್ಞನ ಮೊರೆ ಹೋಗಿದ್ದಾಗ ಅಲ್ಲಿ ಓದಿದ್ದ ಸಂಗತಿಗಳು ನೆನಪಾದವು. ”ಆಂಕೊರ್‌ವಾಟ್ ಎಂದರೆ ದೇಗುಲಗಳ ನಗರ, ಇಂದು ಈ ದೇಗುಲಗಳ ಸಮುಚ್ಛಯ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದ್ದು, ದೇಶ ವಿದೇಶಗಳಿಂದ ಲಕ್ಷಗಟ್ಟಲೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಸುಮಾರು ಒಂದು ಸಾವಿರ ವರ್ಷ ಇತಿಹಾಸವುಳ್ಳ ಈ ದೇಗುಲಗಳು, ಈ ನೆಲದ ಭವ್ಯವಾದ ಸಂಸ್ಕೃತಿ, ಸಂಗೀತ, ನೃತ್ಯ, ಸಾಹಿತ್ಯ, ಶಿಲ್ಪಕಲೆಗಳುಳ್ಳ ಸಂಪದ್ಭರಿತವಾದ ರಾಜ್ಯದ ಕೈಗನ್ನಡಿಯಂತಿವೆ. 1901 ರಲ್ಲಿ ಕಾಂಬೋಡಿಯಾದ ದಟ್ಟವಾದ ಅರಣ್ಯದೊಳಗೆ ಬೇಟೆಗಾಗಿ ಹೋಗಿದ್ದ ಫ್ರೆಂಚ್ ಯಾತ್ರಿಕನೊಬ್ಬನು ವಿನಾಶದಂಚಿನಲ್ಲಿದ್ದ ಬೃಹತ್ತಾದ ಈ ದೇಗುಲಗಳನ್ನು ಅಕಸ್ಮಿಕವಾಗಿ ಕಂಡು ಬೆರಗಾದನಂತೆ. ಈ ದೇಗುಲಗಳಲ್ಲಿ ಕೆತ್ತಲಾಗಿದ್ದ ನಗುಮೊಗದ ದೇವಾನುದೇವತೆಗಳ ಶಿಲ್ಪಗಳು, ನರ್ತಿಸುತ್ತಿರುವ ಅಪ್ಸರೆಯರು ಹೊಸಲೋಕವನ್ನು ಈ ಯಾತ್ರಿಕನ ಮುಂದೆ ತೆರೆದಿಟ್ಟಿದ್ದರು. ಈ ದೇಗುಲಗಳನ್ನು ನಿರ್ಮಿಸಿದ್ದು ಸ್ವರ್ಗದಿಂದ ಬಂದಿಳಿದ ದೇವಾನುದೇವತೆಗಳು, ಹುಲುಮಾನವರಲ್ಲ ಎಂಬುದು ಸ್ಥಳೀಯರ ನಂಬಿಕೆ”. ನನ್ನ ಕಣ್ಣ ಮುಂದೆ ತೇಲಿ ಬಂದದ್ದು ಇಂದು ಹಾಳು ಹಂಪಿಯಾಗಿ ನಿಂತಿರುವ ಸಾಹಿತ್ಯ, ಸಂಗೀತ, ಶಿಲ್ಪಕಲೆಯ ತವರೂರಾಗಿದ್ದ ವಿಜಯನಗರ ಸಾಮ್ರಾಜ್ಯ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಾಮ್ರಾಜ್ಯ.
ಆಂಕೊರ್‌ವಾಟ್‌ನ ವಿಷ್ಣು ದೇಗುಲವು ಕಾಂಬೋಡಿಯನ್ನರ ಹೆಮ್ಮೆಯ ರಾಷ್ಟ್ರೀಯ ಚಿಹ್ನೆಯಾಗಿದೆ. ಈ ಐದು ಶಿಖರಗಳು ನಮ್ಮ ದೇಗುಲಗಳಲ್ಲಿ ಬೆಳಗುವ ಆರತಿಯ ದೀಪಗಳಂತೆ ಕಾಣುತ್ತಿದ್ದವು. ಎತ್ತರವಾದ ಈ ಶಿಖರಗಳು ಹಿಂದೂಗಳ ಪವಿತ್ರ ತಾಣವಾದ ಮೇರು ಪರ್ವತದ ಸಂಕೇತವಾದರೆ, ಸುತ್ತಲೂ ಇರುವ ಹದಿನೈದು ಅಡಿ ಎತ್ತರದ ಗೋಡೆ ಹಿಮಾಲಯದ ಪರ್ವತಶ್ರೇಣಿಗಳ ಪ್ರತೀಕವಾಗಿದ್ದು, ಸುತ್ತಲೂ ಇರುವ ಕಂದಕದಲ್ಲಿರುವ ನೀರು ಸಪ್ತ ಸಮುದ್ರಗಳ ಸಂಕೇತವಾಗಿದೆ. ಪ್ರವಾಸಿಗರ ಆಕರ್ಷಣೆಯಾಗಿರುವ ಬೆಲೂನ್‌ನಲ್ಲಿ ಕುಳಿತು, ಸುಮಾರು ನೂರಿಪ್ಪತ್ತು ಅಡಿ ಮೇಲಿನಿಂದ ನೋಡಿದಾಗ ಆಂಕೊರ್‌ವಾಟ್ ನೀರಿನಲ್ಲಿ ತೇಲುವ ದೇಗುಲದಂತೆ ತೋರುತ್ತಿತ್ತು ಇಲ್ಲಿನ ರಿಯಲ್ ನೋಟುಗಳ ಮೇಲೆ ಆಂಕೊರ್‌ವಾಟ್‌ನ ಐದು ಶಿಖರಗಳು ಅಚ್ಚಾಗಿವೆ. ಆಂಕೊರ್‌ವಾಟ್. ದೇಗುಲದ ಸುತ್ತಮುತ್ತಲಿದ್ದ ಗಿಡಮರಗಳು ಬಿಸಿಲಿನ ಝಳವನ್ನು ಕಡಿಮೆ ಮಾಡಿದ್ದವು. ದೇಗುಲಕ್ಕೆ ಸಾಗುವ ಹಾದಿಯ ಇಕ್ಕೆಲಗಳಲ್ಲಿಯೂ ಐದು ಹೆಡೆಯುಳ್ಳ ಭಾರಿ ಗಾತ್ರದ ಸರ್ಪಗಳ ಶಿಲ್ಪವನ್ನು ಕೆತ್ತಲಾಗಿತ್ತು. ಆದಿಶೇಷನು ತನ್ನೊಡೆಯನ ದರ್ಶನ ಮಾಡಲು ಬರುವ ಭಕ್ತರನ್ನು ಗಮನಿಸಲು ತನ್ನ ಹೆಡೆ ಬಿಚ್ಚಿ ಕಾಯುತ್ತಿರುವಂತೆ ತೋರುತ್ತಿತ್ತು. ನಾವು ಮುಂದೆ ಸಾಗಿದಂತೆ ಕಂಡ ಶಿಲ್ಪಗಳು ಕುವೆಂಪುರವರ ಗೀತೆಯೊಂದನ್ನು ನೆನಪಿಸಿತ್ತು; ‘‘ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ / ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು” ಒಂದೊಂದು ಶಿಲ್ಪವೂ ಹಿಂದೂ ಧರ್ಮದಲ್ಲಿರುವ ವಿಗ್ರಹಾರಾಧನೆ, ಪೌರಾಣ ಕ ಪ್ರಸಂಗಗಳನ್ನೂ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಬಿಂಬಿಸುತ್ತಿದ್ದವು.
ನಮ್ಮ ಗೈಡ್ ಆಂಕೊರ್‌ವಾಟ್‌ನ ಇತಿಹಾಸವನ್ನು ಹೇಳತೊಡಗಿದ – ಒಂಭತ್ತನೇ ಶತಮಾನದಲ್ಲಿ ಈ ರಾಜ್ಯವನ್ನು ಆಳಿದ ಎರಡನೇ ಸೂರ್ಯವರ್ಮನು ದೇವರಾಜನೆಂಮ ಬಿರುದನ್ನು ಹೊತ್ತಿದ್ದ. ಮೆಕಾಂಗ್ ನದೀ ತೀರದಲ್ಲಿದ್ದ ಈ ರಾಜ್ಯವು ಸಂಪದ್ಭರಿತವಾಗಿತ್ತು, ಆರ್ಥಿಕವಾಗಿ ಶಕ್ತಿಯುತವಾಗಿತ್ತು. ಈ ನಾಡನ್ನು ಆಳಿದ ದೊರೆಗಳು ತಮ್ಮ ಅಕ್ಕ ಪಕ್ಕದ ರಾಜ್ಯಗಳ ಮೇಲೆ ಆಕ್ರಮಣ ಮಾಡಿ, ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋದರು. ಸಾಕಷ್ಟು ಪ್ರಮಾಣದಲ್ಲಿ ಭತ್ತವನ್ನು ಬೆಳೆಯುತ್ತಿದ್ದ ಕೃಷಿಕರು, ಹೊರದೇಶಗಳಿಗೆ ರಫ್ತು ಮಾಡುತ್ತಿದ್ದರು. ಕಡಲ ತೀರದಲ್ಲಿರುವ ಪ್ರದೇಶಗಳಲ್ಲಿ ನಡೆಸುತ್ತಿದ್ದ ಮೀನುಗಾರಿಕೆ ಸಾಕಷ್ಟು ಲಾಭದಾಯಕವಾಗಿತ್ತು. ಆರ್ಥಿಕವಾಗಿ ಸಬಲರಾಗಿದ್ದ ಕಾಂಬೋಡಿಯನ್ನರು, ತಮ್ಮ ಚಕ್ರವರ್ತಿಗಳ ಪ್ರೋತ್ಸಾಹದಿಂದ ಲಲಿತ ಕಲೆಗಳಲ್ಲಿ ಮಂಚೂಣ ಯಲ್ಲಿದ್ದರು. ಕೆಲವು ವಿದ್ವಾಂಸರ ಪ್ರಕಾರ, ನಾಡಿನ ದೊರೆಯು ಭಾರತದಿಂದ ತೊಂಭತ್ತು ಸಾವಿರ ಕುಶಲಕರ್ಮಿಗಳನ್ನು ಕಾಂಭೋಜಕ್ಕೆ ಕರೆತಂದು ಈ ದೇಗುಲಗಳನ್ನು ನಿರ್ಮಿಸಿದನೆಂಬ ಐತಿಹ್ಯವೂ ಇದೆ. ಭಾರತ, ಚೈನಾ, ಹಾಗೂ ಕಾಂಬೋಡಿಯಾದ ವಾಸ್ತುಶಿಲ್ಪ ಸಮ್ಮಿಲನವೇ ಇಂದಿನ ಆಂಕೊರ್‌ವಾಟ್. ಎಲ್ಲಿ ನೋಡಿದರೂ ಗುಡಿ ಗೋಪುರಗಳು, ಮೇರು ಪರ್ವತಕ್ಕೆ ಸರಿಸಾಟಿಯಾಗಿ ನಿಲ್ಲುವ ಮುಗಿಲೆತ್ತರದ ಶಿಖರಗಳು, ದೇಗುಲದ ಗೋಡೆಗಳ ಮೇಲೆಲ್ಲಾ ಕುಸುರಿ ಕೆಲಸದಂತೆ ಕೆತ್ತನೆ ಮಾಡಲಾದ ಶಿಲ್ಪಗಳು ನಮ್ಮ ಮನ ಸೂರೆಗೊಂಡಿದ್ದವು. ಪುರಾತತ್ವಶಾಸ್ತ್ರಜ್ಞರು ಹೇಳುವಂತೆ, ಈ ದೇಗುಲಗಳನ್ನು ನಿರ್ಮಿಸಲು ಸುಮಾರು ಮೂರು ಲಕ್ಷ ಕುಶಲ ಕರ್ಮಿಗಳು ನಲವತ್ತು ವರ್ಷಗಳ ಕಾಲ ಹಗಲಿರುಳೆನ್ನದೆ ಶ್ರಮಿಸಿರಬಹುದು. ದೇಗುಲದ ಪ್ರವೇಶ ದ್ವಾರದಲ್ಲಿಯೇ ಐದು ಮೀಟರ್ ಇದ್ದ ಭವ್ಯವಾದ ವಿಷ್ಣುವಿನ ಮೂರ್ತಿ, ಹಿಂದೂ ಧರ್ಮದ ಹಿಂದೆಯೇ ಬೌದ್ಧ ಧರ್ಮವೂ ಕಾಂಬೋಡಿಯಾದ ನೆಲದಲ್ಲಿ ಅಡಿಯಿಟ್ಟಿತು. ಬಹುಸಂಖ್ಯಾತರಾದ ಬೌದ್ಧರು ಹಿಂದೂಗಳ ಆರಾಧ್ಯ ದೈವವಾದ ವಿಷ್ಣುವಿನ ವಿಗ್ರಹದ ಬದಲಿಗೆ ಬುದ್ಧನ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ದೇವನೊಬ್ಬ ನಾಮ ಹಲವು ಎಂಬ ಮಾತುಗಳನ್ನು ಮೆಲುಕು ಹಾಕುತ್ತಾ, ಮುಂದೆ ನಡೆದಾಗ ನೆನಪಾದ ಗೀತೆಯ ಸಾಲುಗಳು, ”ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು / ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ”.
ಈ ಬೃಹತ್ ದೇಗುಲದ ಸುತ್ತ ಮೂರು ಸುತ್ತು ಗೋಡೆಗಳಿದ್ದು, ಪ್ರತಿಯೊಂದು ಗೋಡೆಯ ಮೇಲೂ ಕಲೆಯ ಬಲೆಯನ್ನು ಶಿಲ್ಪಿಗಳು ಅದ್ಭುತವಾಗಿ ಹೆಣೆದಿದ್ದಾರೆ. ದೇಗುಲದ ಗೋಡೆಗಳ ಮೇಲೆ ಸಮುದ್ರ ಮಂಥನ, ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಬಹು ಸೂಕ್ಷ್ಮವಾಗಿ ಬಿಡಿಸಲಾಗಿತ್ತು. ಬನ್ನಿ, ಸಮುದ್ರಮಂಥನದ ಚಿತ್ರಣ ನೋಡೋಣ – ಒಂದೆಡೆ ದಾನವರು ಮತ್ತೊಂದೆಡೆ ದೇವತೆಗಳು ಆದಿಶೇಷನನ್ನೇ ಹಗ್ಗವನ್ನಾಗಿ ಬಳಸಿ ಸಮುದ್ರವನ್ನು ಮಥಿಸುತ್ತಿರುವಾಗ ಸೃಷ್ಟಿಯಾದ ಅಪ್ಸರೆಯರು ಆಗಸzಲ್ಲಿ ತೇಲುತ್ತಿದ್ದರು, ಹಾಲಾಹಲ ಉಕ್ಕಿ ಬಂದಾಗ ಅದನ್ನು ತನ್ನ ಕಂಠದಲ್ಲಿ ಧರಿಸಿದ ಶಿವನ ಮೂರ್ತಿಯಿತ್ತು ಅಲ್ಲಿ, ಅಮೃತದ ಕಳಶ ಸಮುದ್ರದ ಗರ್ಭದಿಂದ ಹೊಮ್ಮಿದಾಗ ದೇವಲೋಕದಿಂದ ಬಂದ ಇಂದ್ರನು ಅದನ್ನು ಹೊತ್ತೊಯ್ಯುತ್ತಿರುವ ದೃಶ್ಯ ಮುಂತಾದ ಚಿತ್ರಗಳು ನಮ್ಮನ್ನು ಚಕಿತಗೊಳಿಸಿದ್ದವು.
ನಮ್ಮ ಗೈಡ್ ಭಾವಪರವಶನಾಗಿ ಮಹಾಭಾರತದ ಕುರುಕ್ಷೇತ್ರ ಯುದ್ಧದ ಪ್ರಸಂಗವನ್ನು ವಿವರಿಸುತ್ತಿದ್ದ. ಕೌರವರ ಕಡೆ ಇದ್ದ ಹದಿನೆಂಟು ಅಕ್ಷೋಹಿಣಿ ಸೈನ್ಯಗಳು ಒಂದೆಡೆ, ಇನ್ನೊಂದೆಡೆ ಶ್ರೀಕೃಷ್ಣನ ಮುಂದಾಳತ್ವದಲ್ಲಿ ಹೋರಾಡುತ್ತಿದ್ದ ಐವರು ಪಾಂಡವರು. ಆ ಗೋಡೆಯ ಕೆಳಭಾಗದಲ್ಲಿ ಕಾಲ್ದಳದ ಸೈನಿಕರು ಕತ್ತಿ ಗುರಾಣಿ ಹಿಡಿದು ಚಲಿಸುತ್ತಿದ್ದರೆ, ಮಧ್ಯೆ ಕುದುರೆಯ ಮೇಲೆ ಕುಳಿತ ಅಶ್ವದಳದವರು ಬಿಲ್ಲನ್ನು ಹೆದೆಯೇರಿಸಿ ಬಾಣಗಳಿಂದ ಶತ್ರುಗಳನ್ನು ಸಂಹರಿಸುತ್ತಿರುವ ದೃಶ್ಯ, ಆನೆಯ ಮೇಲೆ ಕುಳಿತ ಸೇನಾಧಿಪತಿಗಳು ಸೈನ್ಯದ ಮಂಚೂಣಿಯಲ್ಲಿದ್ದು ತಮ್ಮ ತಮ್ಮ ಸೈನಿಕರನ್ನು ಹುರಿದುಂಬಿಸುತ್ತಿರುವ ದೃಶ್ಯ. ಆ ಗೋಡೆಯ ಒಂದೆಡೆ ಭೀಷ್ಮನು ಶರಶಯ್ಯೆಯ ಮೇಲೆ ಮಲಗಿರುವ ದೃಶ್ಯ ಮನಕಲಕುವಂತಿತ್ತು. ಇನ್ನೊಂದೆಡೆ ಕುಂತಿಯು ತನ್ನ ಜ್ಯೇಷ್ಠ ಪುತ್ರನಾದ ಕರ್ಣನ ಬಳಿ ನಿಂತು ಅವನ ಜನ್ಮ ರಹಸ್ಯವನ್ನು ತಿಳಿಸಿ, ಅವನು ತನ್ನ ಅನುಜರ ಜೊತೆ ಗುರುತಿಸಿಕೊಳ್ಳಬೇಕೆಂಬ ಹಂಬಲವನ್ನು ವ್ಯಕ್ತಪಡಿಸುವ ಚಿತ್ರ. ಮಧ್ಯೆ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆ ಬೋಧಿಸುತ್ತಿರುವ ಚಿತ್ರ. ಎಲ್ಲಾ ಶಿಲ್ಪಗಳ ಅಂಗಸೌಷ್ಠವ, ವಿನ್ಯಾಸ, ಮುಖದ ಮೇಲೆ ಮೂಡಿರುವ ಭಾವ ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಮತ್ತೆ ಕುವೆಂಪುರವರ ಕವನದ ಸಾಲುಗಳು ಮನದಲ್ಲಿ ರಿಂಗಣಿಸಿದವು, ”ಭಗವಂತನಾನಂದ ರೂಪುಗೊಂಡಿಹುದಿಲ್ಲಿ / ರಸಿಕತೆಯ ಕಡಲುಕ್ಕಿ ಹರಿಹುದಿಲ್ಲಿ”.
ದೇಗುಲದ ಮತ್ತೊಂದು ಬದಿಯ ಗೋಡೆಯ ಮೇಲೆ ರಾಮಾಯಣದ ಪ್ರಮುಖ ಪ್ರಸಂಗಗಳಿದ್ದವು, ದಶರಥನು ಪುತ್ರಕಾಮೇಷ್ಠಿ ಯಜ್ಞ ಮಾಡಿ ದೇವತೆಗಳಿಂದ ಒಂದು ಬಟ್ಟಲು ಪಾಯಸವನ್ನು ಪಡೆಯುತ್ತಿರುವ ದೃಶ್ಯ, ವಿಶ್ವಾಮಿತ್ರರು ಯಜ್ಞಕ್ಕೆ ತಡೆಯೊಡ್ಡುತ್ತಿರುವ ಅಸುರರನ್ನು ಸಂಹರಿಸಲು ರಾಮ ಲಕ್ಷ್ಮಣರನ್ನು ಕಳುಹಿಸಲು ದಶರಥನಿಗೆ ಆದೇಶೀಸುತ್ತಿರುವ ದೃಶ್ಯ, ಸೀತಾ ಸ್ವಯಂವರದಲ್ಲಿ ಶಿವ ಧನುಸ್ಸನ್ನು ಮುರಿದ ಶ್ರೀರಾಮ, ರಾಮನಿಗೆ ಹದಿನಾಲ್ಕು ವರ್ಷ ವನವಾಸವನ್ನೂ, ಭರತನಿಗೆ ಪಟ್ಟಾಭಿಷೇಕವನ್ನೂ ದಶರಥನ ಬಳಿ ಬೇಡುತ್ತಿರುವ ಕೈಕೇಯಿ, ಹೊಂಬಣ್ಣದ ಜಿಂಕೆಗೆ ಮರುಳಾದ ಸೀತೆ, ಮೋಸದಿಂದ ಸೀತೆಯನ್ನು ಹೊತ್ತೊಯ್ಯುತ್ತಿರುವ ಲಂಕಾಧಿಪತಿ ರಾವಣ, ವಾಲಿ ಸುಗ್ರೀವರ ಕಾಳಗ, ಅಶೋಕವನದಲ್ಲಿದ್ದ ಸೀತೆಯ ಬಳಿ ಹೋಗಿ ರಾಮನ ಮುದ್ರೆಯುಂಗುರವನ್ನು ನೀಡುತ್ತಿರುವ ಹನುಮಂತ, ರಾಮ ರಾವಣರ ಕಾಳಗ ಇನ್ನೂ ಮುಂತಾದ ಚಿತ್ರಗಳನ್ನು ಕಣ್ಣಿಗೆ ಕಟ್ಟುವಂತೆ ಬಿಡಿಸಲಾಗಿತ್ತು. ಆಗ ನೆನಪಾದ ಸಾಲುಗಳು, ”ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ / ಬಾದರಾಯಣನಂತೆ ಬೋಧಿಸಿದೆ ಭಾರತವನಿಲ್ಲಿ”.
ಮುಂದೆ ಸಾಗಿದಾಗ ಯಮಲೋಕದ ಚಿತ್ರಣವಿತ್ತು ಅಲ್ಲಿ ಯಮಧರ್ಮರಾಯನು ತನ್ನ ಕೋಣದ ಮೇಲೆ ಕುಳಿತು ಭೂಲೋಕದಿಂದ ಬಂದಿರುವ ಜೀವಿಗಳನ್ನು ಅವರವರ ಪುಣ್ಯ, ಪಾಪದ ಕ್ರಿಯೆಗಳ ಆಧಾರದ ಮೇಲೆ ನರಕಕ್ಕೂ ಸ್ವರ್ಗಕ್ಕೂ ಕಳುಹಿಸುತ್ತಿರುವ ದೃಶ್ಯ. ನರಕದಲ್ಲಿ ಉರಿಯುತ್ತಿರುವ ಬೆಂಕಿಯಲ್ಲಿಟ್ಟ ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ಪಾಪಿಗಳನ್ನು ಹಾಕುತ್ತಿರುವ ದೃಶ್ಯ, ಸ್ವರ್ಗಲೋಕದಲ್ಲಿ ನರ್ತಿಸುತ್ತಿರುವ ಅಪ್ಸರೆಯರನ್ನು ನೋಡುತ್ತಾ ಸುರಾಪಾನ ಮಾಡುತ್ತಿರುವ ಪುಣ್ಯಜೀವಿಗಳ ಚಿತ್ರ ಮುಂತಾದ ಉಬ್ಬು ಶಿಲ್ಪಗಳು ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ದಿದ್ದವು.
ವಿಷ್ಣುವಿನ ಈ ದೇಗುಲವನ್ನು ಮೂರು ಅಂತಸ್ತುಗಳಲ್ಲಿ ನಿರ್ಮಿಸಲಾಗಿದ್ದು, ಕೆಳಗಿನದು ಪಾತಾಳಲೋಕದ ಸಂಕೇತವೆಂದೂ, ಮಧ್ಯೆ ಇರುವುದು ಭೂಲೋಕವೆಂದೂ ಹಾಗೂ ಮೇಲಿನದು ಸ್ವರ್ಗಲೋಕದ ರೂಪಕವಾಗಿ ನಿಂತಿದೆಯೆಂದೂ ಹೇಳಲಾಗುವುದು. ನಾವು ಪಾತಾಳಲೋಕದಿಂದ ಭೂಲೋಕದೆಡೆ ಸಾಗಲು ಹತ್ತಾರು ಮೆಟ್ಟಿಲುಗಳನ್ನು ಏರಬೇಕಿತ್ತು. ಅಲ್ಲೊಂದು ಗುಡಿಯಲ್ಲಿ ಬುದ್ಧ ಧ್ಯಾನಸ್ಥನಾಗಿ ಕುಳಿತಿರುವ ಮೂರ್ತಿ ಇತ್ತು. ಕಾಂಬೋಡಿಯನ್ ದಂಪತಿಗಳಿಬ್ಬರು ಬುದ್ಧನ ಮುಂದೆ ಮೇಣದ ಬತ್ತಿ ಹಚ್ಚಿಟ್ಟು, ಹಣ್ಣು ಹೂಗಳನ್ನು ನೈವೇದ್ಯಕ್ಕೆಂದು ಇಟ್ಟು ಕಣ್ಣುಮುಚ್ಚಿ ಪ್ರಾರ್ಥಿಸುತ್ತಿದ್ದರು. ನಾವೂ ಅವರೊಂದಿಗೆ ಕುಳಿತು ಸ್ವಲ್ಪ ಹೊತ್ತು ಧ್ಯಾನ ಮಾಡಿದೆವು. ಭೂಲೋಕದಿಂದ ಸ್ವರ್ಗಲೋಕಕ್ಕೆ ಸಾಗಲು ಐವತ್ತು ಅರವತ್ತು ಕಡಿದಾದ ಮೆಟ್ಟಿಲುಗಳನ್ನು ಏರಬೇಕಿತ್ತು, ನಮ್ಮ ಜೊತೆಗೆ ಬಂದ ಕೆಲವು ಸಹಪ್ರಯಾಣಿಕರು ನಮಗೆ ಭೂಲೋಕವೇ ಸಾಕು ಸ್ವರ್ಗಲೋಕದ ಸಹವಾಸ ಬೇಡ ಎನ್ನುತ್ತಾ, ಅಲ್ಲಿಯೇ ಕುಳಿತುಬಿಟ್ಟರು. ನಾವು ಬಿಸಿಲಿನ ಝಳವನ್ನು ಲೆಕ್ಕಿಸದೆ ನಿಧಾನವಾಗಿ ಮೆಟ್ಟಿಲುಗಳನ್ನೇರಿದೆವು, ಅಲ್ಲಿರುವ ಗುಡಿಯಲ್ಲಿ ಮಲಗಿರುವ ಬುದ್ಧನ ಮೂರ್ತಿ ಇತ್ತು. ಬುದ್ಧನಿಗೆ ತಲೆಬಾಗಿ ವಂದಿಸಿ ಸುತ್ತಮುತ್ತಲಿನ ದೃಶ್ಯವನ್ನು ನೋಡುತ್ತಾ ಮೈಮರೆತೆವು. ಇಡೀ ಆಂಕೊರ್‌ವಾಟ್‌ನ ಪಕ್ಷಿನೋಟ ಅಲ್ಲಿಂದ ಕಾಣುತ್ತಿತ್ತು, ಬೀಸುತ್ತಿದ್ದ ತಂಗಾಳಿ, ಕಣ್ಣ ಮುಂದಿದ್ದ ಸುಂದರವಾದ ನೋಟ ನಮ್ಮ ಆಯಾಸವನ್ನೆಲ್ಲಾ ಮರೆಸಿತ್ತು. ಆಗ ಕಿವಿಯಲ್ಲಿ ಗುಯ್‌ಗುಟ್ಟಿದ ಸಾಲುಗಳು, ”ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ / ಕರ್ಪೂರದಾರತಿಯ ಜ್ಯೋತಿ ಇಲ್ಲಾ”. ಸ್ವರ್ಗಲೋಕದಿಂದ ಕೆಳಗಿಳಿದು ಬರುವಾಗ ನಮ್ಮ ಗೈಡ್ ಫೋಟೋ ಕ್ಲಿಕ್ಕಿಸಿದ, ನಮ್ಮ ತಂಡದವರು ನಮ್ಮನ್ನು ಎವರೆಸ್ಟ್ ಶಿಖರವನ್ನು ಏರಿದ ತಾನ್‌ಸೇನ್ ಅಥವಾ ಹಿಲೇರಿಯಂತೆ ಸ್ವಾಗತಿಸಿದರು.
ನಮ್ಮ ಮುಂದಿನ ಪಯಣ ಬೆಯಾನ್, ಆಂಕರ್ ಥಾಮ್, ಥಾ ಪ್ರೋಮ್‌ನಲ್ಲಿದ್ದ ಪಾಳುಬಿದ್ದ ದೇಗುಲಗಳನ್ನು ನೋಡಲು. ಸೂರ್ಯವರ್ಮ, ಯಶೋಧರವರ್ಮ, ರವಿವರ್ಮ ಮುಂತಾದ ದೊರೆಗಳು ಈ ದೇಗುಲಗಳನ್ನು ಒಂಭತ್ತನೇ ಶತಮಾನದಿಂದ ಹದಿನೈದನೇ ಶತಮಾನದವರೆಗೆ ನಿರ್ಮಿಸಿದರು. ಬೆಯಾನ್‌ನಲ್ಲಿರುವ ದೇಗುಲಗಳ ಗೋಪುರಗಳ ಮೇಲೆ ನಾಲ್ಕು ಮುಖಗಳಿದ್ದು, ಇದನ್ನು ಶಿವನ ದೇಗುಲವೆಂದು ಹೇಳಲಾಗುವುದು. ನಂತರದಲ್ಲಿ ಬಂದ ಅರಸರು ಶತ್ರುಗಳ ಜೊತೆ ಸೆಣಸಲಾರದೆ ಸೋತು ಹಿಮ್ಮೆಟ್ಟಿದರು, ಅದರ ಪರಿಣಾಮ ಶತ್ರುಗಳು ಈ ಅದ್ಭುತ ದೇಗುಲಗಳನ್ನು ಭಗ್ನಗೊಳಿಸಿದರು. ಕೆಲವು ದೇಗುಲಗಳು ಕಾಲನ ಹೊಡೆತಕ್ಕೆ ಸಿಕ್ಕು ಭಗ್ನವಾಗಿರುವುವು, ಯಾವುದು ಶಾಶ್ವತವೆಂದು ಭಾವಿಸಿ ನಾವು ಸಂಭ್ರಮಿಸುವೆವೋ, ಅವೆಲ್ಲವೂ ನಶ್ವರವೆಂದು ಸಾರಿ ಸಾರಿ ಹೇಳುವಂತಿದೆ ಈ ಶಿಲೆಗಳು. ವಿಕೃತ ಮನಸ್ಸಿನ ಮಾನವರ ಜೊತೆ ಪ್ರಕೃತಿಯೂ ಕೈ ಜೋಡಿಸಿತೆನ್ನಬಹುದು. ಪ್ರಖರವಾದ ಬಿಸಿಲು, ಮಳೆ, ಸಮುದ್ರದ ಮೇಲಿನಿಂದ ಬೀಸುವ ಉಪ್ಪಿನಂಶ ಹೊಂದಿರುವ ಬಿರುಗಾಳಿ ಎಲ್ಲವೂ ಸೇರಿ ನಿಧಾನವಾಗಿ ಈ ದೇಗುಲಗಳನ್ನು ವಿನಾಶದ ಅಂಚಿಗೆ ಒಯ್ದವು. ಆದರೆ ಇಲ್ಲೊಂದು ಚಮತ್ಕಾರವನ್ನು ನಾವು ಗಮನಿಸಿದೆವು. ದೇಗುಲವೊಂದನ್ನು ರಕ್ಷಿಸಲು ಹಲವಾರು ಮರಗಳು ತಮ್ಮ ಬಾಹುಗಳನ್ನು ಚಾಚಿ ಅಪ್ಪಿಕೊಂಡಿದ್ದವು, ಈ ಮರಗಳ ಒಡನಾಟದಿಂದ ಬೀಳುವಂತಿದ್ದ ದೇಗುಲದ ಗೋಡೆಗಳು ಇನ್ನೂ ನಿಂತಿವೆ. ಹೀಗಿತ್ತು ಪ್ರಕೃತಿಮಾತೆಯ ಆಸರೆ.
ಚೋಳರು ಹಿಂದೂ ಧರ್ಮವನ್ನು ಪಸರಿಸಿದರೆ, ಕಾಲಾನುಕ್ರಮದಲ್ಲಿ ಬಂದ ಬೌದ್ಧರು ತಮ್ಮ ಧರ್ಮವನ್ನು ಈ ನೆಲದಲ್ಲಿ ಹರಡಿದರು. ಈ ಎರಡು ಧರ್ಮಗಳ ನಡುವೆ ನಡೆದ ಸಂಘರ್ಷದ ಜೊತೆ ಜೊತೆಗೇ ಹುಟ್ಟಿದ್ದು ಅನಿಮಿಸಂ. ಸ್ಥಳೀಯರಿಗೆ ತಮ್ಮ ಸುತ್ತಮುತ್ತಲೂ ಇರುವ ಕಣ್ಣಿಗೆ ಕಾಣದ ಪ್ರೇತಾತ್ಮಗಳ ಮೇಲೆ ಅಪರಿಮಿತ ನಂಬಿಕೆ, ಶ್ರದ್ಧೆ ಹಾಗೂ ಭಯ. ಇವುಗಳಲ್ಲಿ ಕೆಲವು ಒಳಿತನ್ನು ಮಾಡುವ ದೈವಗಳೂ ಮತ್ತು ಕೆಡುಕನ್ನುಂಟುಮಾಡುವ ದೆವ್ವಗಳೂ ಸೇರಿಕೊಂಡಿವೆ. ತಮ್ಮ ಪೂರ್ವಜರ ಆತ್ಮಗಳೂ ಇಲ್ಲಿ ನೆಲೆಸುತ್ತವೆಯೆಂಬ ಭಾವ ಅವರಲ್ಲಿ ಮನೆಮಾಡಿದೆ. ಪ್ರತಿಯೊಂದು ಮನೆಯ ಮುಂದೆಯೂ ಒಂದು ತುಳಸಿಕಟ್ಟೆಯನ್ನು ಹೋಲುವ ಕಟ್ಟೆಯನ್ನು ಕಟ್ಟಿ ಪುಷ್ಪಾಲಂಕಾರ ಮಾಡಿ, ದೀಪ ಬೆಳಗಿಸಿ, ತಮ್ಮ ಪೂರ್ವಜರ ಆತ್ಮಗಳನ್ನು ಪೂಜಿಸುವ ಪದ್ಧತಿಯನ್ನು ಬೆಳೆಸಿಕೊಂಡಿದ್ದಾರೆ.
ಕಾಲಚಕ್ರ ಉರುಳಿದಂತೆ ದೇಗುಲಗಳು ವಿನಾಶದಂಚಿಗೆ ತಲುಪಿದ್ದು, ಹಲವು ದೇಶಗಳು ಇವುಗಳ ಪುನರ್ ನಿರ್ಮಾಣಕ್ಕೆ ಕಟಿಬದ್ಧವಾಗಿ ನಿಂತಿವೆ. ಭಾರತದ ಪುರಾತತ್ವಶಾಸ್ತ್ರಜ್ಞರು ಜರ್ಮನ್ನರ ಜೊತೆಗೂಡಿ ಹಲವು ದೇಗುಗಳ ಜೀರ್ಣೋದ್ಧಾರ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಲ್ಲವೇ? ಮತ್ತೊಂದು ವಿಶೇಷವಾದ ಸಂಗತಿಯೆಂದರೆ, ಸಾಮಾನ್ಯವಾಗಿ ದೇಗುಲಗಳು ಪೂರ್ವ ದಿಕ್ಕಿನೆಡೆ ಮುಖ ಮಾಡಿರುತ್ತವೆ ಆದರೆ ಆಂಕೊರ್‌ವಾಟ್‌ನ ದೇಗುಲಗಳು ಪಶ್ಚಿಮದತ್ತ ಮುಖ ಮಾಡಿವೆ, ಬಹುಶಃ ಸೂರ್ಯವರ್ಮನು ಸಮಾಧಿಯೂ ಇಲ್ಲಿರಬಹುದು.
ಆರು ಶತಮಾನಗಳ ಹಿಂದೆ ನಾವು ಇಲ್ಲಿಗೆ ಭೇಟಿ ನೀಡಿದ್ದಿದ್ದರೆ, ಈ ದೇಗುಲಗಳ ಸಮುಚ್ಛಯವನ್ನು ಬೆರಗುಗಣ್ಣುಗಳಿಂದ ನೋಡಬಹುದಿತ್ತು. ವಿಷ್ಣುವಿನ ದೇಗುಲ, ಶಿವನ ದೇಗುಲ, ಬೌದ್ಧರ ದೇಗುಲಗಳ ಕಲಾವೈಭವವನ್ನು ಕಣ್ತುಂಬಿಕೊಳ್ಳಬಹುದಿತ್ತು. ಆ ಸಾಂಸ್ಕೃತಿಕ ವೈಭವ ನಮ್ಮ ಕಲ್ಪನೆಯಲ್ಲಿ ಮೂಡತೊಡಗಿದಾಗ ಕುವೆಂಪುರವರ ಗೀತೆಯ ಸಾಲುಗಳು ಮತ್ತೆ ಕಾಡತೊಡಗಿದವು ”ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ / ಮೂರ್ಛೆಯಲಿ ಮೈಮರೆತು ತೇಲುತಿದೆ ಭೂಭಾರವಿಲ್ಲಿ”.
ಈ ಬರಹದ ಹಿಂದಿನ ಭಾಗ ಇಲ್ಲಿದೆ : https://www.surahonne.com/?p=40317
(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
ಎಂದಿನಂತೆ ಪ್ರವಾಸ ಕಥನ ಕುತೂಹಲಕರ ವಾಗಿ..ಉತ್ತಮ ಮಾಹಿತಿಯನ್ನು ಒದಗಿಸಿತು..ಅದಕ್ಕೆ ಪೂರಕ ಚಿತ್ರ ಗಳು..ಮುದತಂದಿತು… ಕುವೆಂಪು ರವರ ಭಾವಗಿತೆಯ ಸಾಲುಗಳು ಔಚಿತ್ಯ ಪೂರ್ಣ ವಾಗಿ ತ್ತು…ಗಾಯತ್ರಿ ಮೇಡಂ
ನಿಮ್ಮ ಪ್ರವಾಸಕಥನದ ನಿರೂಪಣೆ ಮೈನವಿರೇಳಿಸುವಂತೆ ಇದೆ ಮೇಡಂ
ಲೇಖನವನ್ನು ಪ್ರಕಟಿಸಿದ ಹೇಮಮಾಲಾ ಮೇಡಂಗೆ ವಂದನೆಗಳು
ಗೆಳತಿ ನಾಗರತ್ನ ಅವರ ಪ್ರತಿಕ್ರಿಯೆಗೆ ಧನ್ಯವಾದಗಳು
Beautiful
ಪ್ರವಾಸಕಥನ ಸ್ವಾರಸ್ಯಕರವಾಗಿದೆ!
ವಂದನೆಗಳು ನಯನ ಹಾಗೂ ಪದ್ಮನಿಯವರಿಗೆ
ನಿಮ್ಮ ನಿರೂಪಣೆಯ ಓಘ ತುಂಬಾ ಚೆನ್ನಾಗಿದೆ ಮೇಡಂ. ಬಹಳ ಸ್ವಾರಸ್ಯಕರವಾಗಿ ಹೇಳುತ್ತಾ ಹೋಗುತ್ತೀರಾ ಮಧ್ಯೆ ಮಧ್ಯೆ ಕವಿಯ ಸಾಲುಗಳನ್ನು ಉಲ್ಲೇಖಿಸುತ್ತಾ ಸಾಗುವುದು ವಿನೂತನ ಪ್ರಯತ್ನ. ದುಡ್ಡು ಖರ್ಚು ಮಾಡದೆ ನಾವು ಕಾಂಬೋಡಿಯಾ ನೋಡಿದಂತಾಯಿತು
ಹಿಂದೂ ದೇವಾಲಯಗಳಿರುವ ಕಾಂಬೋಡಿಯಾದೊಳಗೆ ನಮ್ಮನ್ನು ಸುತ್ತಾಡಿಸಿದ ಲೇಖನ ಬಹಳ ಚೆನ್ನಾಗಿದೆ ಮೇಡಂ.
ಕಾಂಬೋಡಿಯಾ ಪ್ರವಾಸ ಕಥನ ಸವಿಸ್ತಾರ ವಿವರಗಳನ್ನೊಳಗೊಂಡು ಮುದ ನೀಡಿತು.
ಕಾಂಬೋಡಿಯ ಬಗ್ಗೆ ಕೇಳಿದೆ ಆದರೆ ನಿಮ್ಮ ಪ್ರವಾಸ ಕಥನ ನನಗೆ ಕಾಂಬೋಡಿಯನ್ನು ನೋಡಲೇಬೇಕು ಎನ್ನುವ ಹುಚ್ಚು ಹಚ್ಚಿಸಿತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ. ತುಂಬಾ ತುಂಬಾ ಧನ್ಯವಾದಗಳು