ಕರ್ನಾಟಕ ರತ್ನ “ರಾಜ್ ಕುಮಾರ್” 

Share Button



“ಡಾ ರಾಜ್ ಕುಮಾರ್” ಎಂಬ ಹೆಸರು ಕೇಳಿದರೆ ಸಾಕು ಮೈ-ಮನಗಳು ರೋಮಾಂಚನಗೊಳ್ಳುತ್ತವೆ. ಸಾಧನೆಯ ಶಿಖರವೇರಿ, ಬದುಕಿದ್ದಾಗಲೇ ದಂತಕತೆಯಾಗಿದ್ದ ರಾಜ್ ರವರ ಬಹುಮುಖ ವ್ಯಕ್ತಿತ್ವದ ಪ್ರತಿಭೆಯ ಅನಾವರಣಕ್ಕೆ ಸಾಟಿ ಇಲ್ಲ.  ಕನ್ನಡ ಚಿತ್ರರಂಗ ಎಂದರೆ ರಾಜ್, ರಾಜ್ ಎಂದರೆ ಕನ್ನಡ ಚಿತ್ರರಂಗ ಎನ್ನುವಂತಾಗಿದೆ. ಅವರು ಕನ್ನಡದ ಚಿತ್ರಗಳನ್ನು ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಕೂಡ ನಟಿಸದೆ ತಮ್ಮ ಕನ್ನಡಾಭಿಮಾನವನ್ನು ತಮ್ಮ ಅಂತರಂಗದಲ್ಲಿ ಪ್ರತಿಷ್ಠಾಪಿಸಿಕೊಂಡು ಬಿಟ್ಟಿದ್ದರು. ಇದರಿಂದಾಗಿ ಅವರು ಎಲ್ಲರಿಗೂ ಮಾದರಿಯಾದರು.  “ತನು ಕನ್ನಡ, ಮನ ಕನ್ನಡ”- ಎನ್ನುವಂತೆ ಅವರ ಬದುಕಿನುದ್ದಕ್ಕೂ  ಕೂಡ ಕನ್ನಡದ ಬಗ್ಗೆ, ಕನ್ನಡದ ಹೋರಾಟದ ಬಗ್ಗೆ, ನಾಡು- ನುಡಿ, ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. 

ಅವರು ನಟಿಸಿರುವ ಎಲ್ಲಾ ಚಿತ್ರಗಳನ್ನು ನೋಡಿದರೆ, ಗೀತೆಗಳನ್ನು ಕೇಳಿದರೆ  ರಾಜ್ ಕನ್ನಡ ಎನ್ನುವುದು ಇದ್ದೇ ಇದೆ!. ಅವರ ಮಾತಿನ ಸೊಗಸು, ಹಾಡಿನ ಹಿಂಪು, ನಟನೆಯ ಮೇರು, ಸಹನೆಯ ವ್ಯಕ್ತಿತ್ವ, ಎಲ್ಲರೊಂದಿಗೆ ಒಟ್ಟಿಗೆ ಬೆರೆಯುವ ಮನಸ್ಸು, ಎಲ್ಲವೂ ಇದ್ದಿದ್ದರಿಂದಲೇ ಅವರು ಕನ್ನಡ ಚಿತ್ರರಂಗದಲ್ಲಿ  ವಿಶಾಲವಾದ ದೊಡ್ಡ ಆಲದ ಮರದಂತೆ ನಮ್ಮ ಮುಂದೆ ನಿಲ್ಲುತ್ತಾರೆ.  ಅಂತಹ ಮೇರು ನಟ  ನಮ್ಮನ್ನಗಲಿದ್ದು ಏಪ್ರಿಲ್ ತಿಂಗಳಿನಲ್ಲಿ. ಜೊತೆಗೆ ಅವರು ಹುಟ್ಟಿದ್ದು ಕೂಡ ಏಪ್ರಿಲ್ ತಿಂಗಳಿನಲ್ಲಿ. ಅವರ ಬಗ್ಗೆ ಬರೆಯಲು ಪದಗಳು ಸಾಲದು. ಅವರ ವ್ಯಕ್ತಿತ್ವದ ಬಗ್ಗೆ ಚಿಕ್ಕದಾಗಿ ಬೆಳಕು ಚೆಲ್ಲುವ ಲೇಖನ.

ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ “ಅಣ್ಣಾವ್ರು” ಎಂದೇ ಪ್ರಖ್ಯಾತರಾದವರು. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ತಮ್ಮ ನಟನೆ, ಗಾಯನ, ಚಿತ್ರ ನಿರ್ಮಾಣದ ಮೂಲಕ ವರನಟರಾಗಿ, ನಟಸಾರ್ವಭೌಮನಾಗಿ, ಜನರಿಂದ, ವಿವಿಧ ಸಂಘ-ಸಂಸ್ಥೆಗಳಿಂದ, ಸರ್ಕಾರದಿಂದ, ಹಿರಿಯರಿಂದ, ಅನೇಕ ಪ್ರಶಸ್ತಿಗಳನ್ನು ತಮ್ಮ ಕೊರಳಿಗೆ ಹಾಕಿಕೊಂಡು ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದುಕೊಂಡು, ಹಂಪಿ ವಿಶ್ವವಿದ್ಯಾಲಯದಲ್ಲಿ ನಾಡೋಜ ಪದವಿಯನ್ನು ಪಡೆದುಕೊಂಡು, ತಾವು ನಟಿಸಿದ ಪ್ರತಿಯೊಂದು ಚಿತ್ರದಲ್ಲೂ ಕೂಡ  ಒಂದಲ್ಲ ಒಂದು ರೀತಿಯ ಸಂದೇಶ ಸಾರಿ, ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಯೂರಿ ನಿಂತಿರುವ ಡಾ ರಾಜ್ ಎಂದರೆ ವಿಸ್ಮಯ ಪ್ರಪಂಚ!. ರಾಜ್ ಎಂದರೆ ವಿಶೇಷಗಳಲ್ಲಿ ವಿಶೇಷತೆ ಕಂಡು ಬರುತ್ತದೆ. 

ಗೋಕಾಕ್ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಇವರು. ಕನ್ನಡ ಎಂದರೆ ಒಂದು ರೀತಿಯಲ್ಲಿ ಸಡಗರ ಸಂಭ್ರಮ. ಯಾವುದಾದರೂ ಸಮಾರಂಭದಲ್ಲಿ ಅವರ ಮಾತುಗಳನ್ನು ಕೇಳಲೆಂದೇ ಅಭಿಮಾನಿಗಳು ಕಾತುರ ಪಡುತ್ತಿದ್ದರು. ಅದರಿಂದಾಗಿ ಅವರು ಅಭಿಮಾನಿಗಳನ್ನೇ ದೇವರೆಂದರು. ಅದರಿಂದಲೇ “ಶಬ್ದವೇದಿ” ಚಿತ್ರದಲ್ಲಿ ಬರುವ “ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೇ” ಎಂಬ ಹಾಡಿನ ಮೂಲಕ, ನಟನೆಯ ಮೂಲಕ ಮತ್ತಷ್ಟು ಪ್ರಸಿದ್ಧಿ ಪಡೆದರು. 

ಅವರ ಹಾದಿಯ ಜೊತೆ ತಮ್ಮ ಮಕ್ಕಳಾದ ಶಿವರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜಕುಮಾರ್ ರವರನ್ನು ಕೂಡ ಚಿತ್ರರಂಗಕ್ಕೆ ಪರಿಚಯ ಮಾಡುವುದರ ಮೂಲಕ  ಕನ್ನಡದ ಹಲವು ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಇನ್ನು ಅವರ ಶ್ರೀಮತಿಯಾದ ಪಾರ್ವತಮ್ಮ ರಾಜಕುಮಾರ್ ಅವರು ಹಲವು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುವುದರ ಮೂಲಕ ಕನ್ನಡದ ಸೇವೆಯನ್ನು ಮತ್ತಷ್ಟು ವಿಸ್ತಾರ ಮಾಡಿಕೊಂಡವರು.

ಐದು ದಶಕದ ತಮ್ಮ ಚಿತ್ರರಂಗದ ಪಯಣದಲ್ಲಿ ನಾಯಕನಾಗಿ ನಟಿಸಿರುವ ಹೆಗ್ಗಳಿಕೆ ಡಾ ರಾಜಕುಮಾರ್ ರವರದು. ನಟನೆಯ ಜೊತೆಗೆ ಗಾಯಕರಾಗಿ ತಮ್ಮ ಗಾಯನ ಸುಧೆ ಹರಿಸಿದ ಅವರಿಗೆ ಅವರೇ ಸಾಟಿ. ಕರ್ನಾಟಕ ರತ್ನ, ಪದ್ಮಭೂಷಣ, ಮುಂತಾದ ಪ್ರಶಸ್ತಿ ಪಡೆದವರು. ಚಿತ್ರರಂಗದ ತಮ್ಮ ಜೀವಮಾನದ ಸಾಧನೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದು ಒಂದು ದಾಖಲೆಯ ಸರಿ.

ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ದೊಡ್ಡ ಗಾಜನೂರು ಗ್ರಾಮದಲ್ಲಿ 24.04.1926 ರಲ್ಲಿ ಜನಿಸಿದರು. ಇವರ ಮೊದಲು ಹೆಸರು ಮುತ್ತುರಾಜ.   “ನನ್ನ ತಂದೆ ರಂಗದ ಮೇಲೆ ಹುರಿ ಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತವರಿಗೂ ಒಂದು ಬಾರಿ ನಡುಕ ಬರುತ್ತಿತ್ತು”- ಎಂದು ತಂದೆಯವರ ಅಭಿನಯವನ್ನು ರಾಜರವರೇ ಬಣ್ಣಿಸುತ್ತಾರೆ!. ನಟನೆಯಲ್ಲಿ ಒಂದು ರೀತಿ ತಂದೆಯವರೇ ಸ್ಪೂರ್ತಿಯ ಸೆಲೆಯಾದರು.

ನಿರ್ದೇಶಕ ಎಚ್ ಎಲ್ ಎನ್ ಸಿಂಹ ಅವರಿಂದ ಮುತ್ತುರಾಜ್,  ರಾಜ್ ಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು. ಇವರ ಪ್ರತಿಯೊಂದು ಚಿತ್ರಗಳ ಬಗ್ಗೆಯೂ ಕೂಡ ವಿಮರ್ಶೆ ಮಾಡುತ್ತಾ ಹೋದರೆ ಪುಟಗಳು ಸಾಲದು. ಜೊತೆಗೆ ಅವರ ಜೊತೆಯಲ್ಲಿ ನಟಿಸಿದ ಅನೇಕ ನಟಿಯರ ಪಟ್ಟಿಯೇ ಇದೆ……… ಎಂ ವಿ ರಾಜಮ್ಮ, ಪಂಡರಿ ಬಾಯಿ, ಪ್ರತಿಮಾದೇವಿ, ಹರಿಣಿ, ಸಾಹುಕಾರ್ ಜಾನಕಿ, ಕೃಷ್ಣ ಕುಮಾರಿ, ರಾಜ ಸುಲೋಚನ, ಬಿ ಸರೋಜಾದೇವಿ, ಮೈನಾವತಿ, ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ವಂದನಾ, ಚಂದ್ರಕಲಾ, ಉದಯಚಂದ್ರಿಕಾ, ಬಿ ವಿ ರಾಧ, ಶೈಲಶ್ರೀ, ರಾಜಶ್ರೀ, ಆರತಿ ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದ, ಗಾಯತ್ರಿ, ಸರಿತಾ, ಕಾಂಚನ, ವಾಣಿಶ್ರೀ, ಮಾಧವಿ, ಗೀತಾ, ಅಂಬಿಕಾ, ರೂಪಾ ದೇವಿ, ಮುಂತಾದವರು. 

ಐತಿಹಾಸಿಕ ಚಿತ್ರಗಳಾದ ಮಯೂರ, ಶ್ರೀ ಕೃಷ್ಣದೇವರಾಯ, ರಣಧೀರ, ಕಂಠೀರವ ಇಮ್ಮಡಿ ಪುಲಿಕೇಶಿ, ಕಿತ್ತೂರು ಚೆನ್ನಮ್ಮ, ಕವಿರತ್ನ ಕಾಳಿದಾಸ, ಬಬ್ರುವಾಹನ ಮುಂತಾದವು.ಇನ್ನು ಅವರು ನಟಿಸಿರುವ ಭಕ್ತ ಪ್ರಧಾನ ಪಾತ್ರಗಳೆಂದರೆ ಭಕ್ತ ಕನಕದಾಸ, ನವಕೋಟಿ ನಾರಾಯಣ, ವಾಲ್ಮೀಕಿ, ಭಕ್ತ ವಿಜಯ, ಭಕ್ತ ಕುಂಬಾರ, ಮುಂತಾದವು.ದೇವರ ಪಾತ್ರಗಳ ನಟನೆ ಎಂದರೆ ಮಂತ್ರಾಲಯ ಮಹಾತ್ಮೆ, ಶ್ರೀ ಶ್ರೀನಿವಾಸ ಕಲ್ಯಾಣ, ಶ್ರೀ ರಾಮಾಂಜನೇಯ ಯುದ್ಧ, ಶ್ರೀ ಕೃಷ್ಣ ರುಕ್ಮಿಣಿ, ಸತ್ಯಭಾಮ, ಶಿವ ಮೆಚ್ಚಿದ ಕಣ್ಣಪ್ಪ ಮುಂತಾದವು. ಪತ್ತೆದಾರಿ ಚಿತ್ರಗಳಾದ ಜೇಡರ ಬಲೆ, ಆಪರೇಷನ್ ಜಾಕ್ಪಟ್ಟಲ್ಲಿ ಸಿಐಡಿ 999, ಸಿಐಡಿ ರಾಜಣ್ಣ, ಬೆಂಗಳೂರು ಮೇಲ್, ಆಪರೇಷನ್ ಡೈಮಂಡ್ ರಾಕೆಟ್, ಚೂರಿ ಚಿಕ್ಕಣ್ಣ ಮುಂತಾದವು. ಇನ್ನು ಖಳನಾಯಕನ ಪಾತ್ರದಲ್ಲಿ ದಾರಿ ತಪ್ಪಿದ ಮಗ, ನಾನೊಬ್ಬ ಕಳ್ಳ, ಭಕ್ತ ಪ್ರಹ್ಲಾದ, ಮುಂತಾದವು.

ಡಾ ರಾಜಕುಮಾರ್ ಅವರು ಅತಿಥಿ ನಟನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಾ  ರಾಜಕುಮಾರ್ ಅವರು ನಟನೆಯಂತೆ ಅವರ ಗಾಯನವೂ ಕೂಡ ಸುಮಧುರವಾದದ್ದು. 1956 ರಲ್ಲಿ “ಓಹಿಲೇಶ್ವರ” ಚಿತ್ರದಲ್ಲಿ “ಶರಣು ಶಂಭೋ” ಎಂಬ ಗೀತೆಯನ್ನ “ಮಹಿಷಾಸುರ ಮರ್ದಿನಿ” ಚಿತ್ರದಲ್ಲಿ ಎಸ್ ಜಾನಕಿ ಅವರೊಂದಿಗೆ “ತುಂಬಿತು ಮನವು ತಂದಿದ್ದು ಸುಖವ” ನಿಮ್ಮ ಯುಗಳ ಗೀತೆಯನ್ನು ಹಾಡಿದ್ದರು.  ನಂತರದಲ್ಲಿ ಅವರು “ಸಂಪತ್ತಿಗೆ ಸವಾಲ್” ಚಿತ್ರದ ಮೂಲಕ “ಯಾರೇ ಕೂಗಾಡಲಿ ಊರೆ ಹೋರಾಡಲಿ….” ಎನ್ನುವ ಎಮ್ಮೆಯ ಹಾಡನ್ನು ಹಾಡುವುದರ ಮೂಲಕ ಪೂರ್ಣ ಪ್ರಮಾಣದ ಗಾಯಕರಾಗಿ ಬಂದರು.  ನಂತರದಲ್ಲಿ ಅವರು ತಮ್ಮ ಚಿತ್ರಗಳಿಗೆ ತಾವೇ ಹಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಪ್ರಸಿದ್ಧಿಯಾದರು. ಎಸ್ ಜಾನಕಿ, ಪಿ ಸುಶೀಲಾ, ವಾಣಿ ಜಯರಾಮ್, ರತ್ನ ಮಾಲಾ ಪ್ರಕಾಶ್, ಚಿತ್ರ, ಬಿ ಆರ್ ಛಾಯಾ,  ಕಸ್ತೂರಿ ಶಂಕರ್, ಮುಂತಾದವರೊಂದಿಗೆ ಯುಗಳ ಗೀತೆಯನ್ನು ಹಾಡಿದ್ದಾರೆ. 

ರಾಜಕುಮಾರ್ ಅವರ ಬೇರೆ ನಟರಿಗೂ ಕೂಡ ತಮ್ಮ ಗಾಯನ ಸಿರಿಕಂಠ ನೀಡಿದ್ದಾರೆ.  ಹೀಗೆ ಡಾ ರಾಜಕುಮಾರ್ ಅವರು ನಟಿಸಿರುವ ಪ್ರತಿಯೊಂದು ಚಿತ್ರಗಳ ಸುತ್ತಮುತ್ತ ಬರೆಯುತ್ತಾ ಹೋದರೆ ಮಾತನಾಡುತ್ತಾ ಹೋದರೆ ಸಮಯ ಸಾಲದು. ಒಂದು ರೀತಿಯಲ್ಲಿ ಚಿತ್ರ ವಿಶ್ವವಿದ್ಯಾಲಯವಿದ್ದಂತೆ. ಅವರು ಚಿತ್ರೀಕರಣದ ಸಮಯದಲ್ಲೂ ಕೂಡ ತಮ್ಮ ಸಹ ನಟರೊಂದಿಗೆ ಅನ್ಯೋನ್ಯವಾಗಿ ಒಂದೇ ಕುಟುಂಬದಂತೆ ಊಟ ಮಾಡಿ, ಹಾಸ್ಯ ಮಾಡಿ, ತಮ್ಮ ಸ್ಪೂರ್ತಿಯುತ ಮಾತುಗಳನ್ನು ಆಡಿ ಎಲ್ಲರ ಮನವನ್ನು ಸಂತೃಪ್ತಗೊಳಿಸುತ್ತಿದ್ದರು. ತಾವು ಬೆಳೆದು ಇತರರನ್ನು ಕೂಡ ಬೆಳೆಸುತ್ತಿದ್ದರು. ಅವರು ಯಾವಾಗಲೂ ಕೂಡ ದರ್ಪ ತೋರಿದ್ದೇ ಇಲ್ಲ. ನಯ, ವಿನಯದಿಂದ ಎಲ್ಲರ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು.

ದಂತ ಚೋರ ವೀರಪ್ಪನ್ ನಿಂದ 2000 ರಲ್ಲಿ ಡಾ ರಾಜ್ ಅವರು ಗಾಜನೂರಿನ ತಮ್ಮ ತೋಟದ ಮನೆಯಲ್ಲಿ ಅಪರಣವಾದಾಗ ಇಡೀ ಚಿತ್ರರಂಗ ಕನ್ನಡ ನಾಡು ಸಂಕಟಪಟ್ಟಿತು. ಕೊನೆಯಲ್ಲಿ ಅಪಹರಣ ಸುಖಾಂತವಾಯಿತು. ರಾಜ್ ರವರು ಸುರಕ್ಷಿತವಾಗಿ ನಾಡಿಗೆ ಮರಳಿದರು. ಎಲ್ಲರಲ್ಲೂ ಆನಂದಭಾಷ್ಪ ತುಂಬಿತು. 

ನಂತರ ಆರು ವರ್ಷ ನಮ್ಮೊಟ್ಟಿಗಿದ್ದರು. 12.04.2006 ರಂದು ನಮ್ಮನ್ನಗಲಿದರು. ಇಡೀ ಕರ್ನಾಟಕ ಸೂತಕದ ಮನೆಯಾಯಿತು. ಅಭಿಮಾನಿ ದೇವರುಗಳ ದಂಡೇ ಬೆಂಗಳೂರಿಗೆ ಓಡಿತು. ಜನರನ್ನು ನಿಯಂತ್ರಿಸುವುದೇ ಕಷ್ಟವಾಯಿತು. ಅವರ ಶವ ಸಂಸ್ಕಾರ ಮಾಡಿದ್ದೆ ಬಹಳ ಕಷ್ಟದೊಂದಿಗೆ!. ಏಕೆಂದರೆ ಹಲವು ಕಡೆ ಜನರನ್ನು ನಿಯಂತ್ರಿಸುವುದೇ ಕಷ್ಟವಾಯಿತು. ಹಲವರು ಸಾವನ್ನಪ್ಪಿದ್ದರು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಅನೇಕ ಘಟನೆಗಳು ನಡೆದು ಹೋದವು. ಅಭಿಮಾನದ ಪರಕಾಷ್ಠೆ, ಏನು ಮಾಡುವುದಕ್ಕೆ ಆಗುವುದಿಲ್ಲ.

ವೀರಪ್ಪನ್ ಅಪಹರಣ ಮಾಡಿದಾಗ ಅವರು ಬಂದೇ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ “ಕರ್ನಾಟಕ ರತ್ನ”  ಡಾ ರಾಜ್ ರವರನ್ನು ದೇವರೇ ಅಪಹರಿಸಿಬಿಟ್ಟ!. ಇವರ ಸಾವು ನ್ಯಾಯವೇ? ಆದರೂ ಕೂಡ ಅವರು ಕನ್ನಡ ಚಿತ್ರರಂಗದಲ್ಲಿ ಬಿಟ್ಟು ಹೋದ ಹೆಜ್ಜೆ ಗುರುತುಗಳು ಎಂದೆಂದಿಗೂ ಅಮರ. ಅವರ ಆತ್ಮಕ್ಕೆ ಯಾವಾಗಲೂ ಸಾವಿಲ್ಲ. ಡಾ ರಾಜ್ ರವರಂತಹ ಅಪರೂಪದ ನಟರು  ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟಿ ಬರಬೇಕು. ಕೇವಲ  ನಾಟಕ ರಂಗ, ಚಿತ್ರರಂಗ  ಅಲ್ಲದೆ ಇಡೀ ಕರ್ನಾಟಕವೇ ಅವರನ್ನು ಸದಾಕಾಲ ನೆನೆದುಕೊಳ್ಳಲೇಬೇಕು.

ಕನ್ನಡ ಇರುವವರಿಗೆ ಡಾ. ರಾಜ್ ರವರು ನಮ್ಮ ಮನೆ- ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇವರ ಬಗ್ಗೆ ನಂತರ ಅನೇಕ ಪುಸ್ತಕಗಳು ಹೊರಬಂದವು. ಡಾ ರಾಜಕುಮಾರ್ – ಸಮಗ್ರ ಚರಿತ್ರೆ ಬಿಡುಗಡೆ – 2 ಪುಸ್ತಕಗಳ ಸೆಟ್ + ಡಾ ರಾಜ್‌ಕುಮಾರ್ ಜೀವನಧಾರೆ 3 ಡಿವಿಡಿಗಳ ಪ್ಯಾಕ್ (ಡಾ ರಾಜ್‌ಕುಮಾರ್ ಅವರ ಸಂದರ್ಶನ).ಮೊದಲ ಸಂಪುಟವು ಅವರ ಆರಂಭಿಕ ಜೀವನ, ಸಮಯ ಮತ್ತು ಕುಟುಂಬದ ವಿವರಗಳನ್ನು ವಿವರಿಸುತ್ತದೆ. ಎರಡನೇ ಸಂಪುಟವು ರಾಜ್‌ಕುಮಾರ್ ನಟಿಸಿದ 200 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪರಿಶೀಲಿಸುತ್ತದೆ. ರಾಜಕುಮಾರ್ ಕುರಿತ ದೊಡ್ಡ ಹುಲ್ಲೂರು ರುಕ್ಕೋಜಿ ಅವರ ಪುಸ್ತಕ ಸಂಗ್ರಹಕಾರರ ಮನಸೂರೆಗೊಳ್ಳುತ್ತದೆ.  2,148 ಪುಟಗಳನ್ನು ಎರಡು ಸಂಪುಟಗಳಲ್ಲಿ ಬಿಡುಗಡೆ ಮಾಡಲು ಲೇಖಕರು 15 ವರ್ಷಗಳ ಕಠಿಣ ಪರಿಶ್ರಮವನ್ನು ತೆಗೆದುಕೊಂಡಿದ್ದಾರೆ. ಪುಸ್ತಕದ ಮೊದಲ ಭಾಗವು ರಾಜ್‌ಕುಮಾರ್ ಅವರ ಆರಂಭಿಕ ಜೀವನ ಮತ್ತು ಕುಟುಂಬದ ಮೇಲೆ ಕೇಂದ್ರೀಕರಿಸಿದರೆ, ಎರಡನೇ ಸಂಪುಟವು ಅವರ ಚಲನಚಿತ್ರಗಳ ಬಗ್ಗೆ ಮಾತನಾಡುತ್ತದೆ. ಅಲ್ಲದೇ ಪುನೀತ್ ರಾಜಕುಮಾರ್ ಅವರು ಕೂಡ ರಾಜರವರ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ. 

ಜೊತೆಗೆ “ಡಾ ರಾಜಕುಮಾರ್ ನಾಡು- ನುಡಿಯ ಅಸ್ಮಿತೆ” ಶೀರ್ಷಿಕೆಯ ಪುಸ್ತಕ. ಜಿ ವಿ ಆನಂದಮೂರ್ತಿ ರವರ ಸಂಪಾದಕತ್ವದಲ್ಲಿ ನಾಡಿನ ಹಲವು ಹಿರಿಯ ಪ್ರಮುಖ ಲೇಖಕರು ಬರೆದಿರುವ ಡಾ ರಾಜಕುಮಾರ್ ರವರ ವ್ಯಕ್ತಿತ್ವದ ವಿವಿಧ ಮುಖಗಳ ಪರಿಚಯ ಮಾಡಿಸಿದೆ. ಈ ಪುಸ್ತಕವು ದೊಡ್ಡ ಹುಲ್ಲೂರು ರುಕ್ಕೋಜಿ ರವರ ಪ್ರೀತಿ ಪುಸ್ತಕ ಪ್ರಕಾಶನದಿಂದ ಹೊರ ಬಂದಿದೆ. ಎರಡು ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. 

ಅಲ್ಲದೆ ಇವರ ಬಗ್ಗೆ ಅನೇಕ ಲೇಖಕರು ಸಮಗ್ರ ಚಿತ್ರಗಳೊಂದಿಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ರಾಜಕುಮಾರ್ ಎಂಬ ವಿಸ್ಮಯ ಪ್ರಪಂಚದ ಬಗ್ಗೆ ನಾವು ಎಷ್ಟು ತಿಳಿದರು ಕೂಡ ಕುತೂಹಲ ಮೂಡಿಸುವಂಥದ್ದು. ನಿಜಕ್ಕೂ ಎಲ್ಲರೂ ಇಷ್ಟ ಪಡುವಂತ ಅಜಾತಶತ್ರು ಈ ನಟ. ಇವರು ನಟಿಸಿರುವ ಚಿತ್ರಗಳು ಪ್ರತಿಯೊಂದು ಕೂಡ ಒಂದೊಂದು ಸಂದೇಶ ಸಾರುತ್ತವೆ. ಜೊತೆಗೆ ಹಾಡುಗಳು ಮೈ- ಮನಗಳಿಗೆ ಮುದ ನೀಡುತ್ತವೆ. ಕನ್ನಡ ನಾಡು ಇರುವವರೆಗೂ ಕೂಡ ರಾಜ್ ರವರು ಅಮರರು ಇಂತಹ ಧೀಮಂತ ನಟ ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಬರಬೇಕು.  

-ಕಾಳಿಹುಂಡಿ ಶಿವಕುಮಾರ್ ಮೈಸೂರು.

6 Responses

  1. ನಯನ ಬಜಕೂಡ್ಲು says:

    ಸೊಗಸಾದ ಬರಹ. ರಾಜ್ ಅವರ ಎಲ್ಲ ಚಿತ್ರಗಳು ಮೌಲ್ಯಯುತವಾಗಿದ್ದವು. ಎಲ್ಲರೂ ಇಷ್ಟ ಪಡುವ ಹಾಗೆ ಇದ್ದವು.

  2. ಡಾ..ರಾಜಕುಮಾರ್ ಅವರ ಬಗ್ಗೆ ಬರದಿರುವ ಲೇಖನ ಬಹಳ ಸೊಗಸಾಗಿ ಮೂಡಿಬಂದಿದೆ.. ಧನ್ಯವಾದಗಳು..ಸಾರ್

  3. Padmini Hegde says:

    ಲೇಖನ ಚೆನ್ನಾಗಿದೆ

  4. ಶಂಕರಿ ಶರ್ಮ says:

    ಮೇರುನಟ, ಅಪ್ರತಿಮ ಹಾಡುಗಾರ, ಸದ್ಗುಣ ಸಂಪನ್ನ, ಎಲ್ಲರ ನೆಚ್ಚಿನ ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ಸಕಾಲಿಕ ಬರಹ ಚೆನ್ನಾಗಿದೆ.

  5. ಪದ್ಮಾ ಆನಂದ್ says:

    ರಾಜ್‌ ಬಗೆಗೆ ಓದಿದಷ್ಟೂ ಕಡಿಮೆಯೇ. ತಮ್ಮ ಚಿತ್ರಗಳ ಮೂಲಕ ಉತ್ತಮ ಸಂದೇಶ ನೀಡುತ್ತಾ ವಿನಯವಂತಿಕೆಯ ಸರಳ ಬಾಳು ಬಾಳಿದ ರಾಜ್‌ ಕುಮಾರ್‌ ಅವರ ಜೀವನ ನೀವಂದಂತೆ ನಮ್ಮ ಸಮಕಾಲೀನ ದಂತ ಕಥೆಯೇ ಹೌದು.

    • Anonymous says:

      “ಕನ್ನಡದ ಕಂಪು – ಅಣ್ಣಾವ್ರ ನಟನೆಯ ಛಾಪು” ಎಂಬಂತೆ ಕನ್ನಡದ ಮೆರು ನಟನ ವ್ಯಕ್ತಿತ್ವವನ್ನು ತುಂಬಾ ಸೊಗಸಾಗಿ ಬರೆದಿದ್ದೀರಾ ಸರ್..
      ಧನ್ಯವಾದಗಳು ಶಿವಕುಮಾರ್ ಸರ್…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: