ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 1
(ಕಾಂಬೋಡಿಯಾ ಮತ್ತು ವಿಯೆಟ್ನಾಂ)
ವಿಯೆಟ್ನಾಂ ಎಂಬ ಹೆಸರು ಕಿವಿಗೆ ಬಿದ್ದೊಡನೆ ಕೇಳುವುದು – ಬಾಂಬುಗಳ ಸ್ಫೋಟ, ಗುಂಡಿನ ಚಕಮಕಿ, ಯಮದೂತರ ರಣಕೇಕೆ, ಜನರ ಮಾರಣ ಹೋಮ. ಕೆಲವು ರಾಷ್ಟ್ರಗಳ ನಾಯಕರ ಅಧಿಕಾರ ಲಾಲಸೆಯಿಂದ ಧ್ವಂಸವಾಗುವ ಸಣ್ಣ ಪುಟ್ಟ ರಾಷ್ಟ್ರಗಳು, ರಷ್ಯಾ, ಅಮೆರಿಕಾ, ಚೈನಾ, ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ರಾಷ್ಟ್ರಗಳ ಕಬಂಧ ಬಾಹುಗಳಿಗೆ ಸಿಕ್ಕು ನಲುಗುತ್ತಿರುವ ಶ್ರೀಲಂಕಾ, ಮಾಲ್ಡೀವ್ಸ್, ಕೊರಿಯಾ, ಐರ್‌ಲ್ಯಾಂಡ್, ಹಾಂಗ್‌ಕಾಂಗ್, ಪಾಕಿಸ್ತಾನ, ಅಫಘಾನಿಸ್ತಾನ ಮುಂತಾದ ದೇಶಗಳು. ವ್ಯಾಪಾರಿಗಳ ಸೋಗಿನಲ್ಲಿ ಒಳನುಗ್ಗುವ ಇವರು ನಿಧಾನವಾಗಿ ಅವರನ್ನು ಸಾಲದ ಸುಳಿಗೆ ಸಿಲುಕಿಸಿ, ಅವರ ನಾಡನ್ನೇ ಆಪೋಶನ ತೆಗೆದುಕೊಳ್ಳುವ ಚಾಣಕ್ಯರು. ಇಂದು ಕಮ್ಯುನಿಸ್ಟ್ ದೇಶವಾದ ವಿಯೆಟ್ನಾಂ, ಸಾವಿರಾರು ವರ್ಷಗಳಿಂದ ಪರಕೀಯರ ದಾಳಿಯನ್ನು ಎದುರಿಸುತ್ತಾ ಬಂದಿದೆ, ಒಮ್ಮೆ ಚೈನಾ, ಫ್ರಾನ್ಸ್, ಇನ್ನೊಮ್ಮೆ ಅಮೆರಿಕಾ, ಮತ್ತೊಮ್ಮೆ ನೆರೆಹೊರೆಯ ರಾಷ್ಟ್ರಗಳಾದ ಕಾಂಬೋಡಿಯಾ, ಲಾವೋಸ್, ಥೈಲ್ಯಾಂಡ್ ಮಗದೊಮ್ಮೆ ತಮ್ಮ ತಮ್ಮಲ್ಲೇ ಒಳಜಗಳಗಳಿಗೆ ಬಲಿಯಾದ ನತದೃಷ್ಟ ರಾಷ್ಟ್ರ ಇದು. ಇವರು ತಮ್ಮ ಸಂಸ್ಕೃತಿ, ತಮ್ಮ ಸಾರ್ವಭೌಮತ್ವ ಹಾಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಲೇ ಇರುವ ಕೆಚ್ಚೆದೆಯ ವೀರರು.
ವಿಯೆಟ್ನಾಂ, ಕಾಂಬೋಡಿಯಾ ಹಾಗು ಥೈಲ್ಯಾಂಡ್ ಪ್ರವಾಸ ಮಾಡುವ ಹಂಬಲ ಹಲವು ವರ್ಷಗಳಿಂದ ನನ್ನನ್ನು ಎಡೆಬಿಡದೇ ಕಾಡಿತ್ತು. ಧರ್ಮಪ್ಪ ಭಾವನವರು ಜನವರಿ 1, 2024 ರಂದು ಹೊಸ ವರ್ಷದ ಶುಭಾಷಯಗಳನ್ನು ಹೇಳುತ್ತಲೇ ಮಾರ್ಚ್ ತಿಂಗಳಲ್ಲಿ ಕೇಸರಿ ಟೂರ್‍ಸ್ ಅಂಡ್ ಟ್ರಾವೆಲ್ಸ್‌ನವರ ಜೊತೆ ವಿಯೆಟ್ನಾಂ ಕಾಂಬೋಡಿಯಾ ಹೋಗೋಣ್ವಾ ಎಂದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ. ಮನೆಯವರು ಯಥಾಪ್ರಕಾರ ತಲೆಯಾಡಿಸಿ, ನಾನು ಬರುವುದಿಲ್ಲ, ನೀನು ಹೋಗಿ ಬಾ ಎಂದಾಗ ಜೊತೆಗಾತಿಗಾಗಿ ಹುಡುಕಾಡಿದೆ. ಗೆಳತಿ ಪುಷ್ಪಲತಾ ಜೊತೆಯಾದರು. ನಿರ್ಮಲಕ್ಕ ಕುಮಾರ್ ಭಾವ ಬೆಂಗಳೂರಿನ ಕೇಸರಿ ಆಫೀಸಿನವರ ಜೊತೆ ಮಾತನಾಡಿ ಎಲ್ಲ ವ್ಯವಸ್ಥೆ ಮಾಡಿದರು. ಮಾರ್ಚ್ ಹದಿನಾಲ್ಕು ನಡುರಾತ್ರಿ ನಮ್ಮನ್ನು ಮಲೇಷ್ಯಾ ಏರ್‌ಲೈನ್ಸ್ ವಿಮಾನ ಕೌಲಾಲಂಪರ್ ಮೂಲಕ ಉತ್ತರ ವಿಯೆಟ್ನಾಂನ ರಾಜಧಾನಿಯಾದ ಹಾನೋಯ್‌ಗೆ ಕರೆದೊಯ್ಯಿತು. ಬೆಂಗಳೂರಿನಿಂದ 23 ಜನ ಸಹಪ್ರಯಾಣಿಕರಿದ್ದು, ಹನ್ನೆರೆಡು ಜನರು ಬಾಂಬೆ, ಹೈದ್ರಾಬಾದ್‌ನಿಂದ ಬಂದವರು ಕೌಲಾಲಂಪರ್ ವಿಮಾನ ನಿಲ್ದಾಣದಲ್ಲಿ ಜೊತೆಯಾದರು. ಒಟ್ಟು 35 ಜನರ ಗುಂಪು ಉತ್ಸಾಹದಿಂದ ವಿಯೆಟ್ನಾಂ ನೋಡಲು ಹೊರಟೆವು. ಕೆಲವರು ನಲವತ್ತು, ಐವತ್ತು ದೇಶಗಳನ್ನು ನೋಡಿದ್ದೇವೆಂದು ಹೆಮ್ಮೆಯಿಂದ ಹೇಳುತ್ತಿದ್ದರು. ನಾನು ಮೌನವಾಗಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನಿತ್ಯ ಯೋಗಕೇಂದ್ರದಲ್ಲಿ ಭೇಟಿಯಾಗುತ್ತಿದ್ದ ಸಹೋದ್ಯೋಗಿ ಮಿತ್ರ ಪರಿಸರ ನಾಗರಾಜ್, ‘ಮೇಡಂ, ನಿಮ್ಮ ಪ್ರವಾಸದ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು’ ಎಂದದ್ದು ನೆನಪಾಗಿತ್ತು. ಮೊಮ್ಮಗ ಯಶೂ, ‘ಅಜ್ಜಿ, ನೀನು ಪ್ರವಾಸ ಕಥನಗಳನ್ನು ಬರೆಯಲಿಕ್ಕೆಂದೇ ಪ್ರವಾಸ ಹೋಗ್ತೀಯಾ ಎಂದು ಕೆಣಕಿದ್ದೂ ನೆನಪಾಗಿತ್ತು.’
ಆಗ್ನೇಯ ಏಷ್ಯಾ (South East Asia) ದಲ್ಲಿರುವ ವಿಯೆಟ್ನಾಂ ರಮಣೀಯವಾದ ನಿಸರ್ಗದ ಮಡಿಲಲ್ಲಿದ್ದು, ನೀಲಮಣಿಯಂತೆ ಕಂಗೊಳಿಸುವ ಸಾಗರದ ಮಧ್ಯೆ ಮೈಚೆಲ್ಲಿ ಮಲಗಿದೆ. ಮಂಜಿನ ಮುಸುಕು ಹಾಕಿ ನಿದ್ರಿಸುತ್ತಿರುವ ಪರ್ವತಶ್ರೇಣಿಗಳು, ಹಸಿರುಕ್ಕಿಸುವ ಭತ್ತದ ಗದೆಗಳು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಬೆಟ್ಟಗುಡ್ಡಗಳ ಮಡಿಲಲ್ಲಿರುವ ಪ್ರಾಕೃತಿಕ ವಿಸ್ಮಯಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ವಿಶ್ವದ ಪ್ರವಾಸೀ ತಾಣಗಳಲ್ಲಿ ಏಳನೆಯ ಸ್ಥಾನದಲ್ಲಿ ಇರುವ ಈ ರಾಷ್ಟ್ರವು ಡ್ರಾಗನ್ ಆಕಾರದಲ್ಲಿದೆ ಎಂದು ನಂಬುವರು. ಉತ್ತರ ವಿಯೆಟ್ನಾಂ ಬಾಲದ ಆಕಾರದಲ್ಲಿದ್ದು, ಉದ್ದನೆಯ ನೀಳವಾದ ಮೈಯುಳ್ಳ ಮಧ್ಯ ಭಾಗ ಹಾಗೂ ದಕ್ಷಿಣ ವಿಯೆಟ್ನಾಂ ಬೆಂಕಿಯುಗುಳುವ ಡ್ರಾಗನ್ ತಲೆಯಂತೆ ಗೋಚರಿಸುವುದು. ಇವರ ಜಾನಪದದಲ್ಲಿ ವಿಯೆಟ್ನಾಮೀಯರು ಡ್ರಾಗನ್ ವಂಶಸ್ಥರು ಎಂಬ ಐತಿಹ್ಯವಿದ್ದು, ಡ್ರಾಗನ್ ಪ್ರಸನ್ನಗೊಂಡರೆ ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆಯಾಗಿ ದೇಶವು ಸಮೃದ್ಧಗೊಳ್ಳುವುದು ಎಂಬ ನಂಬಿಕೆ ಮನೆಮಾಡಿದೆ. ‘ಯಿನ್’ ಮತ್ತು ‘ಯಾಂಗ್’ ಅಂದರೆ ಆಗಸ ಮತ್ತು ಭೂತಾಯಿಯ ಚೈತನ್ಯಗಳು ಡ್ರಾಗನ್‌ನಲ್ಲಿ ಒಂದಾಗಿ ಈ ನಾಡನ್ನು ಕಾಯುತ್ತ್ತಿವೆ ಎಂಬ ಪೌರಾಣಿಕ ಕಥೆಯೂ ಸೇರಿಕೊಂಡಿದೆ. ಹಾಗಾಗಿ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ಹೊತ್ತು ತರುವ ಡ್ರಾಗನ್‌ನನ್ನು ಶ್ರದ್ಧೆ ಮತ್ತು ಭಕ್ತಿಯಿಂದ ವಿಯೆಟ್ನಾಮೀಯರು ಪೂಜಿಸುತ್ತಾರೆ.
ವಿಯೆಟ್ನಾಂ ಒಳಗೆ ಹೆಜ್ಜೆಯಿಡುತ್ತಲೇ ಮೊದಲು ಕಂಡದ್ದು ಹಲವು ಭಂಗಿಗಳಲ್ಲಿ ನರ್ತಿಸುವಂತೆ ತೋರುವ ಡ್ರಾಗನ್‌ಗಳ ಚಿತ್ರ. ನಗರದ ಪಕ್ಕದಲ್ಲೇ ಸಾಗುವ ಹ್ವಾನ್ ಕಿಯಮ್ (Hoan Kiem Lake) ಸರೋವರ ಈ ಪಟ್ಟಣದ ಚೆಲುವನ್ನು ಇಮ್ಮಡಿಗೊಳಿಸಿದ್ದು, ಹಾದಿಯುದ್ಧಕ್ಕೂ ಹಳದಿ, ತಿಳಿ ನೇರಳೆ, ಕೆಂಪು, ನೀಲ ಮುಂತಾದ ಬಣ್ಣ ಬಣ್ಣದ ಹೂಗಳನ್ನು ಹೊತ್ತು ನಿಂತಿರುವ ಗಿಡಮರಗಳು ನಮ್ಮನ್ನು ಕೈಬೀಸಿ ಸ್ವಾಗತಿಸುವಂತಿತ್ತು. ತುಂತುರು ತುಂತುರಾಗಿ ಬೀಳುತ್ತಿದ್ದ ಹೂಮಳೆ, ಪ್ರಯಾಣದಿಂದ ದಣಿದಿದ್ದ ನಮಗೆ ಚೈತನ್ಯ ನೀಡಿತ್ತು. ನಮ್ಮ ಸ್ಥಳೀಯ ಗೈಡ್ ಕೆವಿನ್ ಬಹಳ ಸ್ವಾರಸ್ಯಕರವಾಗಿ ತನ್ನ ನಾಡಿನ ಕತೆಯನ್ನು ನಮಗೆ ತಿಳಿಸುತ್ತಿದ್ದ. ತನ್ನ ಹೆಸರು ‘ಸೇ’ ಎಂದೂ, ಅದರರ್ಥ ಬಲಭೀಮನ ಹಾಗೆ ಶಕ್ತಿಯುಳ್ಳವನು ಎಂದು ಹೆಮ್ಮೆಯಿಂದ ಹೇಳಿದ.. ಸೈನಿಕನಾಗಿದ್ದ ತನ್ನ ತಂದೆ ಅಮೆರಿಕನ್ನರ ಜೊತೆ ಗೆರಿಲ್ಲಾ ಯುದ್ಧ ಮಾಡಿದ್ದನೆಂದೂ, ತನ್ನ ತಾಯಿ ನರ್ಸ್ ಆಗಿದ್ದು ಗಾಯಾಳುಗಳ ಶುಶ್ರೂಷೆ ಮಾಡುತ್ತಿದ್ದಳೆಂದೂ ಹೇಳುತ್ತಲೇ ತನ್ನ ತಾಯ್ನಾಡು ಹೇಗೆ ನೂರಾರು ವರ್ಷಗಳ ಕಾಲ ಪರಕೀಯರ ಧಾಳಿಗೆ ತುತ್ತಾಗಿತ್ತು, ವಿಯೆಟ್ನಾಮೀಯರು ಹೇಗೆ ಅವರ ದಾಳಿಯನ್ನು ಎದುರಿಸಿದರು ಎಂಬ ಕಥೆಯನ್ನು ಸವಿಸ್ತಾರವಾಗಿ ಹೇಳಿದ.
ವಿಯೆಟ್ನಾಮಿನ ಇತಿಹಾಸವನ್ನು ತಿಳಿಯುವ ಮೊದಲು, ‘ಮೊದಲೊಂದಿಪೆ ನಿನಗೆ ಗಣನಾಥ’ ಕ್ಷಮೆಯಿರಲಿ, ‘ಮೊದಲೊಂದಿಪೆ ನಿನಗೆ ಆಮೆಯೇ’ ಎಂಬ ಪ್ರಾರ್ಥನೆಯನ್ನು ನಾಕ್ ಸನ್ ದೇಗುಲದಲ್ಲಿರುವ ಆಮೆಗಳಿಗೆ ಸಲ್ಲಿಸೋಣ ಬನ್ನಿ. ಇಲ್ಲಿರುವ ನಾಕ್ ಸನ್ ದೇಗುಲದಲ್ಲಿ (Ngoc Son Temple) ದೇವದೂತನಾದ ಹೊಂಬಣ್ಣದ ಆಮೆಗೆ ಮೊದಲ ಪೂಜೆ. ತಕ್ಷಣ ನನಗೆ ನೆನಪಾದದ್ದು ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಕೂರ್ಮಾವತಾರ. ಇವರು ಪೂಜಿಸುವ ಆಮೆಯ ಪೌರಾಣಿಕ ಹಿನ್ನೆಲೆಯನ್ನು ಕೇಳೋಣ ಬನ್ನಿ – ವಿಯೆಟ್ನಾಮೀಯರು ಚೈನಾದವರ ಆಕ್ರಮಣಕ್ಕೆ ತುತ್ತಾದಾಗ, ಅವರನ್ನು ರಕ್ಷಿಸಲು ದೇವದೂತನಾದ ಆಮೆಯು ದೇವರಾಜನಾದ ಡ್ರಾಗನ್‌ನಿಂದ ಮಾಂತ್ರಿಕ ಶಕ್ತಿಯುಳ್ಳ ಕತ್ತಿಯನ್ನು ಪಡೆದು, ಇವರ ದೊರೆ ಲೊ ಲಾಯ್‌ಗೆ ನೀಡುವನು. ಶೂರನಾದ ಲೊ ಲಾಯ್, ಆ ಕತ್ತಿಯಿಂದ ಶತ್ರುಗಳನ್ನು ಸದೆಬಡಿದು, ತನ್ನ ನಾಡನ್ನು ಸ್ವತಂತ್ರಗೊಳಿಸುವನು. ಆಗ ಪ್ರಸನ್ನನಾದ ಆಮೆಯು, ಅವರ ನಾಡಿನಲ್ಲಿ ಶಾಂತಿ ಸುಭಿಕ್ಷೆ ನೆಲಸಿರುವುದರಿಂದ ತಾನು ಉಡುಗೊರೆಯಾಗಿ ನೀಡಿದ್ದ ಕತ್ತಿಯನ್ನು ಹಿಂಪಡೆದು ಅದೃಶ್ಯವಾಗುವುದು. ಈ ಹೋರಾಟದ ಸ್ಮಾರಕವಾಗಿ ಸರೋವರದ ಮಧ್ಯೆ ‘ಟರ್ಟಲ್ ಟವರ್’ಎಂಬ ಗೋಪುರವನ್ನು 1886 ರಲ್ಲಿ ನಿರ್ಮಿಸಲಾಗಿದೆ. ಈ ಗೋಪುರದ ಬಳಿ ಸಾಗಲು ಪ್ರವಾಸಿಗರಿಗೆ ಯಾವುದೇ ಹಾದಿಯಿಲ್ಲ. ದೇವದೂತನಾದ ಆಮೆಯ ದೇಗುಲವನ್ನು ನೋಡೋಣ ಬನ್ನಿ – ಸರೋವರದ ಮಧ್ಯೆ ಇರುವ ನಡುಗಡ್ಡೆಯ ಮೇಲೆ 1841 ರಲ್ಲಿ ನಿರ್ಮಾಣವಾಗಿರುವ ಈ ದೇಗುಲ ವಿಶೇಷವಾಗಿದೆ. ಈ ದೇಗುಲಕ್ಕೆ ಮೂರು ಪ್ರವೇಶ ದ್ವಾರಗಳಿದ್ದು, ಒಂದೊಂದು ದ್ವಾರವೂ ಒಂದೊಂದು ಸಂಕೇತವಾಗಿದೆ. ಇವರಿಗೆ ಬೆಸ ಸಂಖ್ಯೆಯು ಅದೃಷ್ಟದ ಸಂಕೆತವಾಗಿ ನಿಲ್ಲುವುದು, ಹೌದಲ್ಲ ನಮಗೂ ಬೆಸ ಸಂಖ್ಯೆಯೇ ಶ್ರೇಷ್ಟವಲ್ಲವೇ? ಮೊದಲನೆಯ ದ್ವಾರದಲ್ಲಿ ಚೈನೀಸ್ ಲಿಪಿಯಿದ್ದು, ಬಲಬದಿಯಲ್ಲಿರುವ ಲಿಪಿ ಸಂತೋಷದ ಸಂಕೇತವಾಗಿದ್ದರೆ, ಎಡ ಬದಿಯಲ್ಲಿರುವ ಲಿಪಿ ಸಮೃದ್ಧಿಯ ಸಂಕೇತವಾಗಿದೆ. ಇಲ್ಲೊಂದು ಎತ್ತರವಾದ ಧ್ವಜ ಸ್ತಂಭವಿದ್ದು, ಅದರ ಮೇಲೆ ಕೆತ್ತಲಾಗಿರುವ ಉಕ್ತಿ ವಿಶೇಷವಾಗಿದೆ – ‘ನೀಲಾಕಾಶದಲ್ಲಿ ನಿಮ್ಮ ಛಾಪು ಮೂಡಿಸಬೇಕಾದಲ್ಲಿ ಬೇಕು ಧೃಢ ಸಂಕಲ್ಪ, ಶ್ರದ್ಧೆ ಹಾಗೂ ಪರಿಶ್ರಮ.’ ಎರಡನೇ ಪ್ರವೇಶ ದ್ವಾರದಲ್ಲಿ ಬಲಗಡೆ ಯಿನ್ ಎಂಬ ಪುರುಷ ಚೈತನ್ಯದ ಸಂಕೇತವಾದ ಡ್ರಾಗನ್ ಹಾಗೂ ಯಾಂಗ್ ಎಂಬ ಸ್ತ್ರೀ ಚೈತನ್ಯದ ಸಂಕೇತವಾದ ಶ್ವೇತವರ್ಣದ ಹುಲಿಯಿದ್ದು, ಡ್ರಾಗನ್ ಶಕ್ತಿ, ಜ್ಞಾನ ಮತ್ತು ಶೌರ್ಯದ ರೂಪಕವಾದರೆ ಹುಲಿಯು ರಕ್ಷಣೆಯ ರೂಪಕವಾಗಿ ನಿಲ್ಲುವುದು. ಮೂರನೆಯ ದ್ವಾರದಲ್ಲಿ ಬಲ ಬದಿಯಲ್ಲಿರುವ ಸಿಂಹದ ತಲೆಯುಳ್ಳ ಕುದುರೆಯು ಸ್ವಾಮಿನಿಷ್ಠೆ ಮತ್ತು ಶಕ್ತಿಯ ಸಂಕೇತವಾದರೆ ಎಡಬದಿಯಲ್ಲಿರುವ ಆಮೆಯು ಒಂದು ಕೈಲಿ ಕತ್ತಿಯನ್ನೂ ಮತ್ತೊಂದು ಕೈಲಿ ಪುಸ್ತಕವನ್ನೂ ಹಿಡಿದು ಶಕ್ತಿ ಹಾಗು ಜ್ಞಾನದ ಸಂಕೇತವಾಗಿ ನಿಂತಿದೆ. ಈ ದ್ವಾರಗಳ ಮೂಲಕ ಸಾಗುವ ಯಾತ್ರಿಕರಿಗೆ ಸಂಪತ್ತು, ನೆಮ್ಮದಿ, ಶಾಂತಿ, ಆರೋಗ್ಯ ಲಭಿಸುವುದು ಎಂಬ ನಂಬಿಕೆ ಇವರಲ್ಲಿ ಮನೆಮಾಡಿದೆ.
ದೇಗುಲದೊಳಗೆ ಸೇನಾ ನಾಯಕನಾದ ತ್ರಾನ್ ಹುಂಡಾನ (Tran hung Dao) ವಿಗ್ರಹವಿದ್ದು, ಬಲಬದಿಯಲ್ಲಿ ಲಾ ತೊ (La To) ಎಂಬ ಧನ್ವಂತರಿಯ ಮೂರ್ತಿ ಹಾಗೂ ಎಡಬದಿಯಲ್ಲಿ ತತ್ವಜ್ಞಾನಿಯಾದ ವನ್ ಸುಂಗ್ ದ ಕ್ವಾನ್ (Van Xuong De Quan) ಮೂರ್ತಿಯಿದೆ. ಈ ವಿಗ್ರಹಗಳನ್ನು ರಂಗುರಂಗಿನ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಒಂದು ದೊಡ್ಡ ಕುಂಡದಲ್ಲಿ ಉದ್ದನೆಯ ಊದಿನಕಡ್ಡಿಗಳನ್ನು ಹಚ್ಚಿಡಲಾಗಿತ್ತು ಹಾಗೂ ಬಗೆ ಬಗೆಯ ಹಣ್ಣುಗಳನ್ನು ನೈವೇದ್ಯಕ್ಕೆಂದು ಇಡಲಾಗಿತ್ತು. ದೇಗುಲದ ಪಕ್ಕದಲ್ಲಿ ಈ ಸರೋವರದಲ್ಲಿ ವಾಸವಾಗಿದ್ದ ಬೃಹದಾಕಾರದ ಎರಡು ಆಮೆಗಳನ್ನು ಎರಡು ಗಾಜಿನ ಪೆಟ್ಟಿಗೆಗಳಲ್ಲಿ ಸಂರಕ್ಷಿಸಿಡಲಾಗಿತ್ತು. ನಾವು ಕುತೂಹಲದಿಂದ ಆ ದೇಗುಲದ ಪೂಜಾರಿಯನ್ನು ಕೇಳಿದಾಗ, ಅವನು ತಾವೆಲ್ಲಾ ದೇವದೂತನಾದ ಆಮೆಯ ವಂಶಸ್ಥರೆಂದೂ ಹೆಮ್ಮೆಯಿಂದ ಹೇಳಿದ. ಆಮೆಯು ಧೀರ್ಘಾಯುಷ್ಯ, ಜ್ಞಾನ, ಸಹನೆ, ತಾಳ್ಮೆ ಮತ್ತು ಆನಂದದ ಸಂಕೇತವೆಂದೂ ತಿಳಿಸಿದ. ದೇಗುಲದ ಮುಂದೆ ಇದ್ದ ಒಂದು ಕರಂಡದಲ್ಲಿ ರೂಪಾಯಿ ನೋಟುಗಳ ನಕಲನ್ನು ಹೊತ್ತ ಹಾಳೆಗಳನ್ನು ಸುಡುತ್ತಿದ್ದರು, ಮತ್ತೆ ನಾವು ಆ ಭಕ್ತರನ್ನು ಕೇಳಿದಾಗ ಬಂದ ಉತ್ತರ ಹೀಗಿತ್ತು – ನಾವು ಸಂಪತ್ತನ್ನು ಅಗ್ನಿಯ ಮೂಲಕ ಸ್ವರ್ಗದಲ್ಲಿರುವ ದೇವತೆಗಳಿಗೆ, ಪಿತೃಗಳಿಗೆ ಹಾಗೂ ನಮ್ಮನ್ನು ಕಾಯುವ ದೈವಗಳಿಗೆ ಅರ್ಪಿಸುತ್ತಿದ್ದೇವೆ. ಅಬ್ಬಾ ಎಂತಹ ಕಾಕತಾಳೀಯ ಸಂಗತಿಯಲ್ಲವೇ? ನಮ್ಮ ಪೂರ್ವಜರೂ ಯಜ್ಞ ಯಾಗಾದಿಗಳನ್ನು ಮಾಡುವಾಗ ದೇವತೆಗಳಿಗೆ ಅರ್ಪಿಸುವ ಹವಿಸ್ಸಿನಂತೆ. ಅವರ ನಂಬಿಕೆಗಳೇನೇ ಇರಲಿ, ಹಣವನ್ನು ಸುಡುವುದರ ಮೂಲಕ ಪ್ರಾಪಂಚಿಕ ವ್ಯಾಮೋಹವನ್ನು ತ್ಯಜಿಸಲು ನೀಡಿದ ಕರೆಯಲ್ಲವೇ ಈ ಸಂಕೇತ, ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ದಮನ ಮಾಡುವ ಸಂಕೇತವಿರಬಹುದಲ್ಲವೇ?
ಮುಂದೆ ನಾವು ಕಂಡದ್ದು ಒಂದು ಮರದಡಿಯಲ್ಲಿ ಒಂದೊಂದು ಕಟ್ಟು ಊದಿನಕಡ್ಡಿಗಳನ್ನು ಹಚ್ಚಿಡುತ್ತಿದ್ದ ಭಕ್ತರನ್ನು – ಈ ಊದಿನಕಡ್ಡಿಗಳಿಂದ ಹೊಮ್ಮುವ ಧೂಪ, ಪರಿಮಳ ಮೇಲ್ಮುಖವಾಗಿ ಪಸರಿಸುತ್ತಾ ಭೂಮಿ ಹಾಗು ಪರಲೋಕಕ್ಕೂ ಕೊಂಡಿಯಂತೆ ಬೆಸೆಯುವುದಂತೆ. ಅಬ್ಬಾ ಇವರ ಕಲ್ಪನಾ ಶಕ್ತಿಯನ್ನು ಮೆಚ್ಚಲೇ ಬೇಕು – ಎಲ್ಲಾ ಜೀವಿಗಳೂ ತಮ್ಮ ಆಯುಷ್ಯ ತೀರಿದ ಬಳಿಕ ಹೀಗೆಯೇ ಹಗುರವಾಗಿ ತೇಲುತ್ತಾ ಎಲ್ಲೆಡೆ ಸುಗಂಧವನ್ನು ಹರಡುತ್ತಾ ಸಾಗಲಿ ಎಂಬ ಸಂದೇಶವಿರಬಹುದೇ? ದೇಗುಲದ ಪೌರಾಣಿಕ ಹಿನ್ನೆಲೆಯನ್ನು ಕೇಳುತ್ತಾ ಸಾಗಿದವಳಿಗೆ ಒಂದು ಆಘಾತ ಕಾದಿತ್ತು, ಎಲ್ಲಿಯೂ ನಮ್ಮ ಪ್ರವಾಸಿ ತಂಡದವರು ಕಾಣಲಿಲ್ಲ, ಗಾಬರಿಯಿಂದ ಸುತ್ತಲೂ ಹುಡುಕಾಡಿದೆ, ಕೊನೆಗೆ ಬಸ್ಸಿನ ಬಳಿ ಇರಬಹುದೇನೋ ಎಂದು ಊಹಿಸಿ ಅಲ್ಲಿಗೆ ಹೋದಾಗ ನಮ್ಮ ತಂಡದವರನ್ನು ಕಂಡು ಹೋದ ಜೀವ ಬಂದಂತಾಗಿತ್ತು, ನಮ್ಮ ಗೈಡ್ ಗುಂಪಿನ ಜೊತೆಯೇ ಇರಬೇಕೆಂದು ಎಚ್ಚರಿಕೆ ನೀಡಿದ. ಕಾರಣ ಅದು ನಮ್ಮ ಪ್ರವಾಸದ ಮೊದಲ ದಿನವಾಗಿತ್ತು, ಸ್ಥಳೀಯರಿಗೆ ಇಂಗ್ಲಿಷ್ ಪರಿಚಯವಿಲ್ಲ, ನನಗೆ ಅವರ ಭಾಷೆ ತಿಳಿಯುತ್ತಿರಲಿಲ್ಲ. ಅಲ್ಲಿದ್ದ ಬೋರ್ಡ್‌ಗಳ ಮೇಲೆ ಇಂಗ್ಲಿಷ್ ವರ್ಣಮಾಲೆ ಇದ್ದರೂ ಯಾವ ಪದವನ್ನೂ ಓದಲು ಬರುತ್ತಿರಲಿಲ್ಲ, ಕಾರಣ ಅದು ವಿಯಟ್ನಾಂ ಭಾಷೆಯಾಗಿತ್ತು.
(ಮುಂದುವರೆಯುವುದು)
-ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ
Very nice. ಪ್ರವಾಸ ಕಥನದ ಶೀರ್ಷಿಕೆಯೇ ಆಕರ್ಷಕವಾಗಿದೆ.
Nice narration of Vietnam tour. I felt the Vietnam tour ones again
ಪ್ರವಾಸ ಹೋಗಿಬರುವುದಷ್ಟೇ ಅಲ್ಲ ಅದರ ಕಂಡುಂಡ ಅನುಭವವನ್ನು.. ನಿರೂಪಿಸುವ ಬಗೆಯೂ..ಅಷ್ಟೇ ಸೊಗಸಾಗಿ ಇರುತ್ತದೆ..ಗಾಯತ್ರಿ ಮೇಡಂ.. ಇನ್ನೂ ಹೆಚ್ಚಿನ ಸ್ಥಳಗಳಿಗೆ ಹೋಗಿ ಬರುತ್ತಿರಿ..ಅದರ ಸೊಬಗನ್ನು ನಮಗೂ ಉಣಬಡಿಸುತ್ತಿರಿ..
ಧನ್ಯವಾದಗಳು ಮೇಡಂ..ಮುಂದಿನ ಕಂತಿಗಾಗಿ..ಕಾಯುವಂತಿದೆ..
ವಂದನೆಗಳು ನಯನ ಹಾಗೂ ನಾಗರತ್ನ ಮೇಡಂ
Naave nodi bandante feel agtide
Nice article
ಹೊಸ ಪ್ರವಾಸಕಥನದ ಆರಂಭ ಕುತೂಹಲಕಾರಿಯಾಗಿದೆ..ಓದಲು ಕಾಯುತ್ತೇವೆ..
ಕಥನ ಆಕರ್ಷಕವಾಗಿದೆ
ಇತ್ತೀಚೆಗೆ ವಿಯೆಟ್ನಾಮಿಗೆ ಹೋಗಿ ಬಂದ ಮಗಳು ಅಲ್ಲಿಯ ಪ್ರಕೃತಿ ಸೌಂದರ್ಯ, ಜನರ ಸರಳತೆ, ಸಜ್ಜನಿಕೆ ಬಗ್ಗೆ ಹೇಳುತ್ತಿದ್ದಳು. ಸುಂದರ ಪ್ರವಾಸ ಕಥನ ಕುತೂಹಲದಾಯಕವಾಗಿದೆ ಮೇಡಂ.
ವಿಯಟ್ನಾಂ ಪ್ರವಾಸ ನಾವೂ ಕುಳಿತಲ್ಲಿಂದಲೇ ಹೊರಟಾಯಿತು, ನಿಮ್ಮ ಕಣ್ಣಿಗೆ ಕಟ್ಟುವಂತಹ ಚಂದದ ನಿರೂಪಣೆಯಿಂದ.
ಸಹೃದಯ ಓದುಗರಿಗೆ ವಂದನೆಗಳು