ಧರ್ಮ – ವೀರ

Share Button

ನಮ್ಮ ಭರತಖಂಡವು ಪುಣ್ಯಭೂಮಿ; ಭಾರತೀಯರಾದ ನಾವು ಅದೃಷ್ಟವಂತರು. ಕಾರಣ, ಈ ನೆಲವು ಅಸಂಖ್ಯಾತ ಸಂತರು, ಅವಧೂತರು ಮತ್ತು ಋಷಿಸದೃಶ ಗುರು ಪರಂಪರೆಯ ತವರು. ಇಂಥ ಮಹಾಮಹಿಮರಲ್ಲಿ ಭಗವಾನ್ ವರ್ಧಮಾನ ಮಹಾವೀರರೂ ಒಬ್ಬರು. ಇವರ ಕಾಲಾವಧಿ: ಕ್ರಿ ಪೂ 599 ರಿಂದ 527. ಬಿಹಾರದ ವೈಶಾಲಿ ನಗರದಲ್ಲಿ ಜನನ, ಅಲ್ಲಿನ ನಳಂದದಲ್ಲಿ ನಿರ್ವಾಣ. ಜೈನಧರ್ಮದ ಇಪ್ಪತ್ತನಾಲ್ಕನೆಯ ತೀರ್ಥಂಕರರಾಗಿ ಇವರು ನೀಡಿದ ಧರ್ಮ ಸಂದೇಶ ಅಮೂಲ್ಯವಾದುದಾಗಿದೆ. ಗೌತಮ ಬುದ್ಧರ ಸಮಕಾಲೀನರಾದ ಇವರು ಸಂಬುದ್ಧರನ್ನು ಒಮ್ಮೆ ಭೇಟಿಯಾಗಿದ್ದರೆಂದು ಐತಿಹ್ಯ ಹೇಳುತ್ತದೆ.

ಮಹಾರಾಜರಾಗಿ ಸಿಂಹಾಸನದಲ್ಲಿ ಕುಳಿತು ಆಮೋದ ಪ್ರಮೋದಗಳಿಂದಾವೃತ ಭೋಗದಲ್ಲಿ ತೊಡಗಬೇಕಾಗಿದ್ದ ಮಹಾವೀರರು ಅವನ್ನೆಲ್ಲ ಯಃಕಶ್ಚಿತ್ ಎಂದು ಪರಿಗಣಿಸಿ, ಸರ್ವಸ್ವವನ್ನೂ ತೊರೆದು ತಪಸ್ಸಿಗೆ ಹೊರಟರು. ಹನ್ನೆರಡು ವರುಷಗಳ ಸುದೀರ್ಘ ತಪಶ್ಚರ್ಯೆಯ ತರುವಾಯ ಜ್ಞಾನೋದಯಗೊಂಡರು. ತಮ್ಮ ಜೀವಿತದ ಕೊನೆಯ ಮೂವತ್ತು ವರುಷಗಳ ಅವಧಿಯಲ್ಲಿ ಧರ್ಮಪ್ರಸಾರ ಹಾಗೂ ಸತ್ಸಂಗ ಬೋಧನೆಯಲ್ಲಿ ಮಗ್ನರಾದ ಈ ಮಹಾನ್ ವೀರರು ತಮ್ಮ ಎಪ್ಪತ್ತೆರಡನೆಯ ವಯೋಮಾನದಲ್ಲಿ ಶರೀರ ತ್ಯಾಗ ಮಾಡಿದರು.

ಕೇವಲ ಧರ್ಮವನ್ನು ಅನುಸರಿಸಿದರೆ ಸಾಲದು; ಧಾರ್ಮಿಕನಾಗಿ ಜ್ಞಾನಮಾರ್ಗದಲ್ಲಿ ತೊಡಗಿ, ಸತ್ಯ ಮತ್ತು ಅಹಿಂಸೆಗಳಿಂದ ಬದುಕಬೇಕು. ಏಕೆಂದರೆ ಧರ್ಮವೆಂಬುದು ವಸ್ತ್ರವೂ ಅಲ್ಲ; ಚರ್ಮವೂ ಅಲ್ಲ; ಅದು ನಮ್ಮೊಳಗಿನ ಉಸಿರು, ಜೀವಾತ್ಮದ ಹೆಸರು ಎಂದವರೀತ. ಸತ್ಯವೆಂದೂ ಭಿಕ್ಷೆಯಾಗಿ ದೊರಕದು; ಇನ್ನೊಬ್ಬರಿಂದ ಎರವಲು ಪಡೆಯಲಾಗದು, ಅದಕಾಗಿ ಆಕ್ರಮಣ ಮಾಡಬೇಕು; ಕ್ಷತ್ರಿಯನಾಗಬೇಕು ಎಂದರು! ಹಾಗೆಂದರೆ ಸತ್ಯಕಾಗಿ ಹೋರಾಡಬೇಕು; ಕಾದು ಶತ್ರುಗಳನು ಜಯಿಸಬೇಕು ಎಂಬ ಶಬ್ದಾರ್ಥವಲ್ಲ!! ನಮ್ಮೊಳಗೇ ಅವಿರತ ಅವಿತು ನಮ್ಮನು ದಾರಿ ತಪ್ಪಿಸುತಿರುವ ಇನ್ನೋರ್ವ ಇರುತ್ತಾನಲ್ಲ, ಅವನೊಂದಿಗೆ ಅಂದರೆ ನಮ್ಮ ಆಂತರ್ಯದೊಂದಿಗೇ ಸಂಘರ್ಷಕಿಳಿಯಬೇಕು, ಸತತ ಆತ್ಮಾವಲೋಕನದಿಂದ ನನ್ನೊಳಗನ್ನು ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಮೊದಲು ನನ್ನೊಳಗೇ ಹೊಂಚು ಹಾಕಿ ಕುಳಿತ ದುಷ್ಟನನು ಇಲ್ಲವಾಗಿಸಬೇಕು ಎಂದರ್ಥ. ಇದನ್ನು ನಾನು ಒಂದು ಯುದ್ಧ; ತನ್ನ ವಿರುದ್ಧ ಎಂದು ಬಣ್ಣಿಸಲು ಇಚ್ಛಿಸುವೆ.

‘ತನ್ನ ತಾನರಿದೊಡೆ ನುಡಿಯೆಲ್ಲ ತತ್ತ್ವ ನೋಡಾ’ ಎಂದು ಅಲ್ಲಮಪ್ರಭುಗಳು ಹೇಳಿದ್ದು ಇಲ್ಲಿ ನೆನಪಾಗುತ್ತದೆ. ಪ್ರತಿಯೊಂದಕ್ಕೂ ನಾವು ನಮ್ಮಾಚೆಗಿರುವ ಜಗತ್ತನ್ನು ಮತ್ತು ಜನರನ್ನು ದೂರುತ್ತೇವೆ; ನಾವು ಸತ್ಯಸಂಧರು ಮತ್ತು ಒಳ್ಳೆಯವರು ಎಂದು ಘೋಷಿಸಿಕೊಳ್ಳುತ್ತೇವೆ. ನಾನೆಂಬುದು ನೀನೇ ಎಂಬುದನ್ನು ಮರೆಯುತ್ತೇವೆ. ಈ ಜಗತ್ತಿನ ಎಲ್ಲ ಒಳಿತಿಗೆ ನಾನು ಹೇಗೆ ಕಾರಣನೋ ಹಾಗೆಯೇ ಇದರ ಎಲ್ಲ ಕೆಡುಕಿಗೂ ನಾನೂ ಹೊಣೆ ಎಂಬುದೇ ಈ ಜ್ಞಾನೋದಯದ ಸಾರ. ಇಂದಿನ ದಿನಮಾನಗಳಲ್ಲಂತೂ ಮಾಧ್ಯಮಗಳಲ್ಲಿ ಸದಾ ಇನ್ನೊಂದನ್ನು ದೂರುತ್ತಾ, ಇನ್ನೊಬ್ಬರನ್ನು ಹೊಣೆ ಮಾಡುತ್ತಾ ಮಾತಾಡುತ್ತಿರುತ್ತೇವೆ. ಮನೆಯ ಮುಂಭಾಗದಲ್ಲೊಂದು ಗಿಡ ನೆಟ್ಟು ಭೂಮಿಯ ತಾಪಮಾನದ ಏರಿಕೆಯನ್ನಿಳಿಸಲು ಕಿಂಚಿತ್ ಕೈ ಜೋಡಿಸಿದ್ದು ಎಷ್ಟು ಸತ್ಯವೋ ಅಷ್ಟೇ ನಿಜ: ಈ ಹಿಂದೆ ಆಗಿ ಹೋದ ಚೆರ್ನೊಬಿಲ್, ಭೂಪಾಲ್ ಅನಿಲ ದುರಂತಗಳಿಗೂ ನಾನೇ ಜವಾಬ್ದಾರಿ ಎಂಬುದು!

ಹೀಗೆ ಹೇಳಿದರೆ ನಮಗೆ ತಬ್ಬಿಬ್ಬಾಗಬಹುದು! ಎಂದೋ ಯಾರೋ ಮಾಡಿದ ಅನಾಹುತಕ್ಕೆ ನಾವು ಹೇಗೆ ಕಾರಣ? ಎಂದು. ಇಲ್ಲೇ ನಾವು ಎಡವಿ ಮುಗ್ಗರಿಸುವುದು. ನಾನು ಎಂದರೆ ಮನುಕುಲ ಎಂದರ್ಥ. ಏಕೆಂದರೆ ಈ ಅಖಂಡ ವಿಶ್ವದಲ್ಲಿ ನಾನು ಎಂಬುದು ಇಲ್ಲ! ಇರುವುದು ಎಲ್ಲವನ್ನೂ ಮಾಯಾಜಾಲದಲ್ಲಿ ಬೆಸೆದ ಪರಸ್ಪರ ಸಂಬಂಧ ಮತ್ತು ಸಂಪರ್ಕ ಇರುವ ತಂತು ಮಾತ್ರ!! ಒಬ್ಬರ ದುಷ್ಟತನವನ್ನು ನಾವು ಕನಿಕರಿಸಿ ನೋಡದಿದ್ದರೆ, ಅದೂ ನಮ್ಮ ಸ್ವಭಾವದ ಒಂದು ಭಾಗವೇ ಎಂಬುದನ್ನು ಮರೆತರೆ ಪೂರ್ಣಜ್ಞಾನ ನಮಗಿನ್ನೂ ಲಭಿಸಿಲ್ಲ ಎಂದೇ ಅರ್ಥ. ನಾನು ಗುರುತಿಸುವ ಅವರೊಳಗಿನ ಕೆಟ್ಟತನವೂ ನನ್ನದೇ; ನನ್ನ ಒಳ್ಳೆಯತನ ಅವರಲೂ ಇರುವುದೇ ಎಂಬುದೇ ಪೂರ್ಣದೃಷ್ಟಿ. ವೃತ್ತದಾಚೆಗೆ ನಿಂತು ಬೆರಳು ಮಾಡುವುದು ಸುಲಭ. ಆದರೆ ವೃತ್ತದೊಳಗೆ ನಾನೂ ಇದ್ದೇನೆ; ನಾನೂ ಎಲ್ಲದರ ಸಮಭಾಗಿ, ಸಮಾನ ಹೊಣೆಗಾರ ಎಂಬುದೇ ನಿಜ ಧಾರ್ಮಿಕತೆ. ಸುಮ್ಮನೆ ಮೂಲೆಯಲಿ ಕುಳಿತು ಮೂಗು ಹಿಡಿದು ಜಪ ತಪ ಮಾಡುವುದಲ್ಲ; ದೇವರ ಪೂಜೆ ಮಾಡುತ್ತಾ, ‘ಇವತ್ತೂ ನಿನ್ನೆ ಥರದ ದರಿದ್ರ ತಿಂಡಿ ಮಾಡಬೇಡ’ ಎಂದು ಮಡದಿಯನ್ನು ದೂರುವುದು ಪೂಜೆಯೇ ಅಲ್ಲ! ಎಲ್ಲ ಡಂಭಾಚಾರಗಳೂ ಅಂತಿಮವಾಗಿ ಆತ್ಮವಂಚನೆಯೇ! ನಾನು ತಪ್ಪಿತಸ್ಥನೇ ಅಲ್ಲ; ತಪ್ಪು ಮಾಡಿಯೇ ಇಲ್ಲ, ನನ್ನ ನೋವು ಮತ್ತು ದುಃಖಗಳಿಗೆ ಪರರು ಕಾರಣ, ಪರರಿಂದ ನಾನು ದುರವಸ್ಥೆಯಲ್ಲಿರುವೆ ಎಂದು ದೂರುವವರು ಒಮ್ಮೆಯಾದರೂ ಆತ್ಮಾವಲೋಕನ ಮಾಡಿಕೊಳ್ಳಬೇಕು; ಒಳಗಿಳಿದು ನೋಡಬೇಕು. ಇದು ನಿಜವಾದ ಧೈರ್ಯ ಮತ್ತು ಸ್ಥೈರ್ಯ. ಭಂಡತನ ಮತ್ತು ಬೂಟಾಟಿಕೆಯಿಂದ ಬದುಕುವವರಿಗೆ ಆತ್ಮವಿಮರ್ಶೆ ಎಂದರೇನೆಂದೇ ಗೊತ್ತಿಲ್ಲ; ಗೊತ್ತಿದ್ದರೆ ಅವರು ಭಂಡರಾಗುತ್ತಿರಲಿಲ್ಲ. ರಸ್ತೆ ರಿಪೇರಿ ಇಲ್ಲದಿದ್ದರೂ ರಾಂಗ್‌ ಸೈಡಿನಲಿ ವಾಹನ ಚಲಾಯಿಸುತ್ತಾ, ‘ಲೈಟು ಹಾಕಿಕೊಂಡು ಬರುತ್ತಿದ್ದೇನೆ, ಅಷ್ಟೂ ಗೊತ್ತಾಗುವುದಿಲ್ಲವೇ, ದಾರಿ ಬಿಡಬೇಕೆಂದು!’ ಎಂದು ಕೂಗುವ ಕಿರಾತಕರಿಗೆ ಸಂಯಮ ಎಂದರೇನು? ರಸ್ತೆಯ ನಿಯಮ ಏಕಾದರೂ ಇದೆ? ನಾಗರಿಕ ಪ್ರಜ್ಞೆಯೂ ಶಿಕ್ಷಣದ ಒಂದಂಗ, ನಾವು ಹೀಗೆ ಬಲಪ್ರಯೋಗದಿಂದ ಹೆದರಿಸಿ, ಬೆದರಿಸಿ ಬಾಳುವೆ ಮಾಡುವುದು ನಿಜವಾದ ಹೇಡಿತನ ಎಂಬ ಜ್ಞಾನೋದಯ ಆಗುವುದೇ ಇಲ್ಲ. ಇಂಥ ವಿವೇಕಹೀನರಿಗೆ ಹೃದಯವೂ ಇರುವುದಿಲ್ಲ; ತಲೆಯೊಳಗೆ ಮಿದುಳೂ ಇರುವುದಿಲ್ಲ. ಅವರು ಬದುಕುವುದು ಕೇವಲ ದುಷ್ಟ ಚಟಗಳಿಗೆ; ಕೆಟ್ಟ ಹಟಗಳಿಗೆ! ಇನ್ನೊಬ್ಬ ರೌಡಿಯನ್ನು ಮೆಚ್ಚಿಸಲೆಂದೇ ಅಥವಾ ತನ್ನ ಶಕ್ತಿ ಪ್ರದರ್ಶನದ ಮೂಲಕ ಆತನನ್ನು ಅಧೀರನನ್ನಾಗಿಸಲೆಂದೇ! ಅದಕಾಗಿಯೇ ವರ್ಧಮಾನರು ಹೇಳುತ್ತಾರೆ: ಹೊರಗಿನ ಶತ್ರುಗಳೊಂದಿಗೆ ಹೋರಾಡುವವರು ವೀರರಲ್ಲ; ಒಳಗಿನ ದುಷ್ಟನನ್ನು ಹುಡುಕಿ ತನ್ನನ್ನು ಗೆಲ್ಲುವುದು ನಿಜವಾದ ವಿಜಯ. ಇಂಥವರೇ ಮಹಾನ್‌ ವೀರರು. ಈ ಅರ್ಥದಲ್ಲಿ ಭಗವಾನ್‌ ವರ್ಧಮಾನರು ಮಹಾವೀರರಾಗಿರುವುದು. ಸ್ವಂತ ತಮ್ಮಂದಿರೊಂದಿಗೆ ಯುದ್ಧ ಮಾಡಿ, ಜಗದ ಚಕ್ರವರ್ತಿಯಾದೆನೆಂದು ಬೀಗುತ್ತಾ ವೃಷಭಾಚಲದಲ್ಲಿ ಹೆಸರ ಬರೆಸಲು ಹೊರಟ ಹುಂಬ ಭರತನೆಲ್ಲಿ? ಅಣ್ಣನೊಂದಿಗೇ ಹೋರಾಡಿ ಯುದ್ಧದಲ್ಲಿ ಗೆದ್ದರೂ ಆತನ ರಾಜ್ಯದಾಹಕ್ಕೆ ಹೇಸಿ, ಜುಗುಪ್ಸೆಗೊಂಡು ಎಲ್ಲವನ್ನೂ ತ್ಯಜಿಸಿ, ಕೊನೆಗೆ ಮೈಯ ಬಟ್ಟೆಯೂ ಭಾರವೆನಿಸಿ, ಕಳಚಿ ಎಸೆದು ಧ್ಯಾನಸ್ಥನಾದ ಬಾಹುಬಲಿಯೆಲ್ಲಿ? ಇದೆಲ್ಲವೂ ಮಹಾವೀರರನ್ನು ನೆನೆಯುವಾಗ ಖಂಡಿತ ಜ್ಞಾಪಕಕ್ಕೆ ಬರಬೇಕು; ನಾವು ಮೊದಲು ಮಿದುವಾಗಬೇಕು. ಹದವಾಗಬೇಕು, ಕಾಯಬೇಕು, ಕಾಯ ಮಾಗಬೇಕು. ನೀರು ಎಷ್ಟೇ ಬಿಸಿಯಿದ್ದರೂ ಬೆಂಕಿಯನ್ನು ಶಮನಗೊಳಿಸುವುದೆಂಬ ಸತ್ಯವನ್ನು ಅರಿತಿರಬೇಕು. ಹೀಗಾಗಿ,         ನಾನು ಎಂಬುದು ವಿಶ್ವವೃತ್ತದೊಳಗಿನ ಒಂದು ಪುಟ್ಟ ಬಿಂದು ಎಂಬುದು ನಿಜವಾದ ಧಾರ್ಮಿಕತೆ. ನಾನೆಂಬುದು ನೀನು; ನೀನೆಂಬುದು ನಾನು ಎಂಬುದೇ ಆಧ್ಯಾತ್ಮಿಕ ಸತ್ಯ. ಈ ವಿಶ್ವದ ಎಲ್ಲವೂ ಸಹಸಂಬಂಧಿ ಎಂದ ಮೇಲೆ ನಾನು ಎಂಬ ಪ್ರತ್ಯೇಕತೆ ಎಲ್ಲಿದೆ? ನೀನು ಎಂಬ ದೂರುವ ದುಗುಡ ಯಾಕಿದೆ?

ಧರ್ಮ ಎಂದರೆ ಧರಿಸಿರುವುದು ಎಂದರ್ಥ. ಲೋಕ ವಿವೇಕವನ್ನು ಧರಿಸಬೇಕು; ಕೇವಲ ಉಪದೇಶಿಸಬಾರದು. ಯಾವುದೇ ಹಮ್ಮು ಬಿಮ್ಮುಗಳಿಲ್ಲದೇ ಬದುಕಬೇಕು, ಅಹಂ ನಿರಸನಗೊಳ್ಳಬೇಕು. ಖಾಲಿತನವನ್ನರಿತು ವಿನಯದಿಂದ ಜೀವಿಸಬೇಕು. ಇದೇ ಶುದ್ಧ ಧಾರ್ಮಿಕತೆ. ಎಡಪಂಥೀಯರು ಹೇಳುವಂತೆ ಧರ್ಮವು ಅಫೀಮಲ್ಲ; ಅದು ನಶೆಯೇರಿಸುವುದೂ ಇಲ್ಲ. ಸರಿಯಾಗಿ ಓದಿಕೊಳ್ಳದೇ, ತಿಳಿದುಕೊಳ್ಳದೇ, ಒಳಗಿಳಿದು ಹುಡುಕದೇ, ಸಂಕುಚಿತ ದೃಷ್ಟಿಯಿಂದ ದೂರುವ ದನಿಯಲ್ಲಿ ಅರಚಿದರೆ ಸತ್ಯ ಸಿಗುವುದಿಲ್ಲ. ಮಾತು ತ್ಯಜಿಸಿ, ಮೌನಿಯಾಗಬೇಕು; ಅಧ್ಯಯನಶೀಲರಾಗಬೇಕು. ಜಗದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇನ್ನೊಬ್ಬರನ್ನು ದೂರುವುದು ಸುಲಭ; ನನ್ನೊಳಗಿಳಿದು ಹುಡುಕುವುದು ಕರಕಷ್ಟ. ಹಾಗಾಗಿಯೇ ಜಗತ್ತು ಯಾವತ್ತೂ ಅಸಹನೆ ಮತ್ತು ಅಸಮಾಧಾನಗಳಿಂದ ದುಃಖಿಸುತ್ತಲೇ ಇರುತ್ತದೆ; ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡು ದೂರುತ್ತಲೇ ಇರುತ್ತದೆ. ಈ ಸತ್ಯವನ್ನೇ ಮಹಾವೀರರು ತಮ್ಮ ಶಿಷ್ಯರಿಗೆ ಅರ್ಧಮಾಗಧೀ (ಪ್ರಾಕೃತ) ಭಾಷೆಯಲ್ಲಿ ಉಪದೇಶಿಸಿದರು.

ಮಹಾವೀರರ ವೈಶಿಷ್ಟ್ಯ ಇರುವುದು ಸಂಕಲ್ಪ ಹಿಂಸೆಯನ್ನು ಕುರಿತ ಬೋಧನೆಯಲ್ಲಿ. ಅಹಿಂಸೆಯೇ ಪರಮಧರ್ಮ, ನಿಜ. ಆದರೆ ನಾವು ಕೆಲವೊಮ್ಮೆ ಹಿಂಸೆ ಮಾಡದಿದ್ದರೂ ಮನದಲ್ಲಿ ಹಿಂಸೆಯ ಕಲ್ಪನೆಯನ್ನು ಮೂಡಿಸಿಕೊಳ್ಳುತ್ತೇವೆ. ಹಿಂಸೆ ಮಾಡುವುದಕಿಂತಲೂ ಮನಸ್ಸಿನಲ್ಲಿ ಅಂದುಕೊಳ್ಳುವುದು ಕೂಡ ಮಹಾಪರಾಧ ಎಂಬುದೇ ಸಂಕಲ್ಪ ಹಿಂಸೆಯ ಅರ್ಥ. ಕೆಟ್ಟದ್ದನ್ನು ಮಾಡುವುದಕಿಂತ ಕೆಟ್ಟದ್ದನ್ನು ಆಲೋಚಿಸುವುದು ಕೂಡ ಹಿಂಸೆಯ ಒಂದು ಭಾಗವೇ.

PC: Internet

ಹೀಗೆ ಆಲೋಚಿಸದೇ ಇರುವುದು ಎಷ್ಟು ಕಷ್ಟವೆಂದು ನಮಗೆಲ್ಲರಿಗೂ ಗೊತ್ತು. ನಾವು ಹುಲು ಮಾನವರು ಮತ್ತು ಉಪ್ಪು ಹುಳಿ ಖಾರ ತಿನ್ನುವ ಶರೀರ ಲಾಲಸೆಯವರು. ಸಾತ್ತ್ವಿಕ ರೋಷ ಮೂಡುವುದು ಸಹಜ. ವ್ಯಗ್ರಗೊಳ್ಳುವುದು ನಿಜ. ಇದು ಸಹ ತಪ್ಪು ಎಂದು ಹೇಳಿದವರು ಈ ಮಹಾವೀರರು! ಕೆಲವೊಮ್ಮೆ ಅನ್ಯ ಕಾರಣಗಳಿಗಾಗಿ ನಾವು ಕೆಟ್ಟದ್ದಕ್ಕೆ ಕೈ ಹಾಕುವುದಿಲ್ಲ. ಅದು ಕಾನೂನಿನ ಭಯವಿರಬಹುದು, ಮೇಲಿನ ಅಧಿಕಾರಿಗಳ ನೀತಿ ನಿಯಮಗಳ ಚೌಕಟ್ಟಿರಬಹುದು. ದುರ್ಬಲರಾದ ನಾವು ಬಲವಂತರ ಅಧೀನಕ್ಕೆ ಒಳಪಟ್ಟಿರಬಹುದು. ಹಿರಿಯರ, ತಿಳಿದವರ, ಗುರುತರ ಸ್ಥಾನಮಾನಗಳಲ್ಲಿರುವವರ ನಿಯಂತ್ರಣಕ್ಕೆ ಒಳಪಟ್ಟಿರಬಹುದು. ಅಷ್ಟೇ ಏಕೆ, ಮಿತ್ರರ-ಸಂಬಂಧಿಕರ-ಸಹೋದ್ಯೋಗಿಗಳ ಮೇಲಿನ ಪ್ರೀತಿ-ಸ್ನೇಹಗಳಿಂದ ಬಂಧಿತರಾಗಿಬಹುದು. ಅಭಿಪ್ರಾಯ ಭೇದಗಳಿಂದಾಗಿ ಒಂದು ಸದೂರವನ್ನು ಕಾಯ್ದುಕೊಂಡು ಮಾತಾಡದೇ ಮೌನವಾಗಿರಬಹುದು. ಸಂಬಂಧಗಳಿಗೆ ಬೆಲೆಗೊಟ್ಟು ಕುರುಡರಂತೆ, ಕಿವುಡರಂತೆ ಇದ್ದು ಬಿಟ್ಟಿರಬಹುದು.

ಇಂಥ ಸಂದರ್ಭದಲ್ಲಿ ನಮಗಾಗದ, ನಮಗೆ ಇಷ್ಟವಾಗದ ಮಂದಿ, ಅವರ ಬದುಕು ಮತ್ತು ಅವರ ಮಾತುಕತೆಗಳು ನಮ್ಮ ನೆಮ್ಮದಿಗೆ ಭಂಗ ತರುತ್ತಿರಬಹುದು. ಆಗ ನಮ್ಮ ಮನದಾಳದಲ್ಲಿ ಮೂಡುವ ಅಸಹನೆ, ಅಸಹಿಷ್ಣುತೆ, ಅನಾದರ, ಅಗೌರವಗಳಿಂದಾಗಿ ಆಲೋಚನೆಯಲ್ಲೋ, ಹೊರ ಹಾಕುವ ಮಾತುಕತೆಯಲ್ಲೋ ಕೇಡು ಧುತ್ತನೇ ಅವತರಿಸಿ ಬಿಡುವುದು. ಇದು ಕೂಡ ಹಿಂಸೆಯೇ! ಎಂದರು ಮಹಾವೀರನೆಂಬ ಸಂತರು; ಕ್ರಿಯಾತ್ಮಕಗೊಂಡು ಹಿಂಸಿಸುವುದಕ್ಕೆ ಇದು ಸಮಾನ ಎಂದರು. ಇದೇ ಸಂಕಲ್ಪ ಹಿಂಸೆಯ ಸ್ವರೂಪ!! ಅಂದ ಮೇಲೆ ನಾವೆಲ್ಲ ಮಹಾವೀರರ ಪ್ರಕಾರ ಹಿಂಸಾನಂದಿಗಳೇ! ಸಮಾಜದ ಹಲವು ಬಗೆಯ ತರತಮಗಳಿಂದಾಗಿ ತತ್ತ್ವ ಸಿದ್ಧಾಂತಗಳ ಏರಾಟ ಮೇಲಾಟಗಳಿಂದಾಗಿ ನಾವೇ ಸರಿ, ನಮ್ಮದೇ ಶ್ರೇಷ್ಠ, ನಮ್ಮ ವಾದವೇ ಹೆಚ್ಚು ಮಾನವೀಯವಾದುದು, ನಮ್ಮ ತರ್ಕದ ಮುಂದೆ ನಿಮ್ಮದೇನಿದೆ? ನಾವು ಗೆದ್ದವರು; ನೀವು ಸೋತವರು! ನೀವು ಶೋಷಕರು; ನಾವು ಶೋಷಿತರು, ನಿಮ್ಮದು ಬಲಪಂಥ-ಸನಾತನಿಗಳು, ನಮ್ಮದು ಎಡಪಂಥ-ನಾವು ಪ್ರಗತಿಪರರು! ಎಂದೆಲ್ಲಾ ಕೂಗಾಡುವ ನಮ್ಮಂಥ ವಿದ್ಯಾವಂತ ಪ್ರಜ್ಞಾವಂತ ಅವಿವೇಕಿಗಳು ಒಂದಲ್ಲ ಒಂದು ಬಗೆಯಲ್ಲಿ ಇಂಥ ಸಂಕಲ್ಪ ಹಿಂಸೆಯನ್ನು ಆಚರಿಸಿದವರೇ! ನೇರವಾಗಿ ಕೇಡು ಮಾಡಲು ಅಥವಾ ಕೇಡು ಬಗೆಯಲು ಅವಕಾಶಗಳು ಏರ್ಪಡದಿದ್ದಾಗ, ಹಿಂಸೆಯನ್ನು ನೀಡಲು ಸಾಧ್ಯವಾಗದಿದ್ದಾಗ ಸಮಾನ ಮನಸ್ಕ ಸ್ನೇಹಿಗಳು ಸಿಕ್ಕಾಗ ಕೇವಲ ಮಾತಿನ ಚಪಲಕ್ಕೆ ಇಂಥ ಹಿಂಸೆಯನ್ನು ಸಂಕಲ್ಪಿಸುತ್ತೇವೆ. ನಮ್ಮ ವಿರೋಧಿಗಳು ಯಾರೆಂದು ಗುರುತಿಸಿ, ಅವರನ್ನು ಟಾರ್ಗೆಟ್ ಮಾಡಿ ಅವರಿಗೆ ತಲಪಲೆಂಬ ದುರುದ್ದೇಶದಿಂದ ಮಾತಿನಲ್ಲಾದರೂ ಹಿಂಸೆಯನ್ನು ಆಚರಿಸುತ್ತೇವೆ. ಇದೊಂದು ಕ್ಷುಲ್ಲಕ ಮನೋವ್ಯಾಧೀ ಮತ್ತು ಜಾಣರೆನಿಸಿಕೊಂಡವರಾಡುವ ಪೆದ್ದು ಆಟಗಳು. ಹಾಗಾಗಿ, ಇದನ್ನು ದುಃಖವೆಂದೂ ನೋವೆಂದೂ ಪರಿಗಣಿಸದಿರು; ಅಂಥವರ ಅವಿವೇಕಗಳನ್ನು ಕ್ಷಮಿಸಿಬಿಡು ಎಂದರು ಭಗವಾನರು. ‘ನೋವು, ದುಗುಡ; ತಿಳಿನೀರ ತಳದ ಬಗ್ಗಡ! ಸ್ವೀಕರಿಸಿದರೇ ತಾನೇ? ಸಫರಿಸುವ ಬೇನೆ! ಮತ್ತೊಬ್ಬರಿಗೆ ಹಿಂಸೆಯಾಗದಿರು, ಮನದಲ್ಲಿ ಹಿಂಸೆಯನ್ನು ಆಚರಿಸದಿರು’ ಎಂದು ಉಪದೇಶಿಸಿದರು. ಇದೆಷ್ಟು ಕಷ್ಟ; ಘೋರವ್ರತ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ!

ನನ್ನ ಪರಿಚಿತರೋರ್ವರಿದ್ದರು. ಸ್ನೇಹಜೀವಿಯೂ ಉದಾರಚರಿತರೂ ಆಗಿದ್ದರು. ಆದರೆ ಸಮಾನ ಮನಸ್ಕರು ಸಿಕ್ಕಾಗ, ತನ್ನವರು ದೊರೆತಾಗ ಅವರ ವಿನೀತ ಮುಖವಾಡ ಕಳಚುತ್ತಿತ್ತು. ಅವರ ಮಾತಿನ ವರಸೆ ಮತ್ತು ಆಲೋಚನೆಗಳೇ ಬದಲಾಗುತ್ತಿತ್ತು. ಅತ್ಯಂತ ವ್ಯಗ್ರಗೊಂಡು ಕೇಡನ್ನೆಣಿಸುವ ಮಾತಾಡುತ್ತಿದ್ದರು. ವೇದಿಕೆಯಲ್ಲಿ ವಿಜೃಂಭಿಸುತ್ತಿದ್ದರು. ಹಿಂಸೆ, ಕ್ರಾಂತಿ ಎಂದು ಕೂಗಾಡುತ್ತಿದ್ದರು. ನೇರವಾಗಿ ಹೇಳಲು ಆಗದೇ ಹೋದಾಗ ಅವಕಾಶವನ್ನೇ ಆಕಾಶ ಮಾಡಿಕೊಂಡು ಜಾಗರವಾಡುತ್ತಿದ್ದರು. ಮನೋವಿಜ್ಞಾನದ ಪ್ರಕಾರ ಹೀಗೆ ಕೂಗಾಡಿ ಅವರು ತಣ್ಣಗಾಗುತ್ತಿದ್ದರು. ಎಲ್ಲ ವ್ಯಗ್ರತೆಗಳನ್ನು ಹೊರ ಹಾಕಿ ಶಾಂತರಾಗುತ್ತಿದ್ದರು. ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತಿದ್ದರು ಎಂದು ಈಗ ಅಂಥವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಯಾರು ಅಹಂಕಾರವನ್ನು ತೊರೆಯುವರೋ ಅವರು ‘ತನ್ನನ್ನೇ’ ತೊರೆಯುವರು ಎಂದರು ಮಹಾವೀರರು. ಹೀಗೆ ತನ್ನನ್ನು ತೊರೆಯಲು ಅಹಿಂಸಕನಾಗಬೇಕು. ದುಃಖದ ಮೂಲವನ್ನು ಹುಡುಕಿ, ಚೇತನವು ಶರೀರದಿಂದ ಮುಕ್ತವಾಗಬೇಕು. ಮಹಾವೀರರು ನೀಡಿದ ಧರ್ಮದ ಮೂಲ ಶಿಕ್ಷಣವೇ ವ್ಯಕ್ತಿಗೆ ತಾನು ಶರೀರವಲ್ಲ ಎಂಬ ಅರಿವನ್ನು ಮೂಡಿಸುವುದು. ವಸ್ತು ಮತ್ತು ವ್ಯಕ್ತಿಗಳಿಗೆ ಅಂಟಿಕೊಂಡರೆ ಅದೇ ಪರಿಗ್ರಹ; ಅಂಟಿಕೊಳ್ಳದಿದ್ದರೆ ಅದೇ ಅಪರಿಗ್ರಹ. ಹೀಗೆ ಈ ಮಹಾನ್ ವೀರ ಅರ್ಥಾತ್ ಧರ್ಮವೀರರು ಸತ್ಯ, ಅಹಿಂಸೆ, ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂಬ ಪಂಚಶೀಲತತ್ತ್ವವನ್ನು ಬೋಧಿಸಿ, ಜೈನಧರ್ಮದ ಪುನರುಜ್ಜೀವನಕ್ಕೆ ಶ್ರಮಿಸಿ, ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದರು. ಆ ಮೂಲಕ ಇಡೀ ಜಗತ್ತಿಗೆ ‘ಹಿಂಸೆ ಕೂಡದು; ಅದು ಅನಿವಾರ್ಯವಲ್ಲ’ ಎಂದು ಸಾರಿದರು. ಮನಸ್ಸಿನಲ್ಲಿ ಮೂಡುವ ಸಂಕಲ್ಪ ಹಿಂಸೆಯೂ ಪಾಪವೇ ಎಂದವರೀತ. ಆದರೆ ನಾವೇನು ಮಾಡುತ್ತಿದ್ದೇವೆ? ಹಣ, ಅಧಿಕಾರ ಮತ್ತು ಭೋಗಜೀವನಕ್ಕಾಗಿ ಯುದ್ಧಗಳನ್ನು ನಡೆಸಿ, ಲಕ್ಷಾಂತರ ಜನಸಾಮಾನ್ಯರ ಪ್ರಾಣ ತೆಗೆದು ಆ ಹೆಣದ ರಾಶಿಯ ಮೇಲೆ ಲೋಲುಪದರಮನೆ ನಿರ್ಮಿಸಿ ಗೆದ್ದೆವೆಂದು ಭ್ರಮಿಸಿ ಬೂಟಾಟಿಕೆ ಮೆರೆಯುತ್ತೇವೆ.

ಒಂದು ಧರ್ಮದ ಸತ್ಯವು ಇನ್ನೊಂದು ಧರ್ಮದಲ್ಲಿದೆ ಎಂಬ ಮಾತನ್ನು ಅರಿಯದೇ, ಜೀವಮಾನ ಪೂರ್ತ ಮತಧರ್ಮಗಳ ಮೇಲಾಟ-ಕೀಳಾಟಗಳಲಿ ಬಿದ್ದೆದ್ದು ರೋಷ ದ್ವೇಷಗಳಲ್ಲಿ ಈಜಾಡುತ್ತಾ ‘ನೂರಾರು ದಾರಿಗಳಿವೆ ಬೆಳಕಿನರಮನೆಗೆ’ ಎಂಬುದನ್ನು ಮರೆಯುತ್ತಾ, ಹಿಂಸಾನಂದಿಗಳಾಗುತ್ತೇವೆ. ದೀಪದ ಬುಡವೇ ಕತ್ತಲು ಎಂಬಂತೆ, ಎಷ್ಟು ಮಹಾಪುರುಷರು ಬಂದು ಏನೇ ಉಪದೇಶ ನೀಡಿದರೂ ನಾವು ಮಾತ್ರ ಶತಶತಮಾನಗಳಿಂದಲೂ ಹೀಗೆಯೇ ನರಕಾಸುರ ಚಕ್ರವರ್ತಿಗಳಾಗಿದ್ದೇವೆ. ಇದೇ ಆತ್ಮಾವಲೋಕನ; ಇದಕ್ಕೆ ನಾನು ಕಾರಣ ಅಲ್ಲವೇ ಅಲ್ಲ ಎಂದುಕೊಳ್ಳುವುದು ಮೂರ್ಖತನ ಜೊತೆಗೆ ಬಂಡತನ.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ                                       

11 Responses

  1. ನಯನ ಬಜಕೂಡ್ಲು says:

    ಬದುಕಿಗೆ ದಾರಿ ದೀಪ ಮಹಾವೀರರ ಸಂದೇಶ, ತತ್ವಗಳು.

  2. ಮಹಾವೀರನ.. ಸ್ಪಷ್ಟ ಚಿತ್ರಣ ವನ್ನು ಅವರ ತತ್ವಗಳನ್ನು ಕಣ್ಣಮುಂದೆ ತಂದಿರಿಸಿರುವ ಲೇಖನ ಕ್ಕೆ ನನ್ನ ದೊಂದು ನಮಸ್ಕಾರ.. ಮಂಜುರಾಜ್ ಸರ್..

  3. MANJURAJ says:

    ಸುರಹೊನ್ನೆಗೆ ಧನ್ಯವಾದಗಳು

  4. Hema Mala says:

    ಮಾಹಿತಿಪೂರ್ಣ ಬರಹ..

  5. Dr.sartaj P.H says:

    ನಿಮ್ಮ ಲೇಖನದ ಒಂದು ಪದವನು ಬಿಡದೆ ಓದುವ ಹವ್ಯಾಸ ನನ್ನದಗಿದೆ , ಇಂತಹ ಚಿಂತನೆಗಳಿಂದ ನಮ್ಮನ್ನು ಜ್ಞಾನಿಗಳನ್ನಗಿಸುವ ನಿಮಗೂಂದು ಸಲಾಂ.

  6. Padmini Hegde says:

    ಬರೆವಣಿಗೆ ಆಕರ್ಷಕವಾಗಿದೆ

  7. ಶಂಕರಿ ಶರ್ಮ says:

    ಮಹಾಜ್ಞಾನಿ ಮಹಾವೀರರ ಬಗೆಗಿನ ಸಂಪೂರ್ಣ ಮಾಹಿತಿಗಳನ್ನು ಒಳಗೊಂಡ ಲೇಖನವು ಸಂಗ್ರಹಯೋಗ್ಯವಾಗಿದೆ.

  8. ಪದ್ಮಾ ಆನಂದ್ says:

    ನಿಜಕ್ಕೂ ಮನವನ್ನು ಚಿಂತನೆಗೆ ಹಚ್ಚುವ, ಆತ್ಮಾವಲೋಕನಕ್ಕೆ ಒತ್ತು ಕೊಡುವ ಲೇಖನ. ಆಗಾಗ್ಗೆ ಈ ರೀತಿಯ ಲೇಖನಗಳನ್ನು ಓದುತ್ತಿದ್ದರೆ ಅಲಿಲ್ಲಿ ಅಂಡಲೆಯುವ ಮನ ಸ್ಥಿರತೆ, ನೆಮ್ಮದಿಯೆಡೆಗೆ ಹೆಜ್ಜೆಯಿಡುವುದರಲ್ಲಿ ಸಂಶಯವಿಲ್ಲ.

  9. ಜೈನ ಧರ್ಮದ ಬಗ್ಗೆ ಮಾಹಿತಿ ಪೂರ್ಣ ಸುಂದರವಾದ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: