ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 9
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ರಾತ್ರಿ ಊಟವಾದ ನಂತರ ರಮ್ಯಾ ಗಂಡನಿಗೆ ಸಾಯಂಕಾಲ ತಂದೆ-ತಾಯಿ ಜೊತೆ ನಡೆದ ಮಾತು-ಕಥೆ ತಿಳಿಸಿದಳು.
“ನಾನು ಸೈಟು ಕೊಂಡುಕೊಂಡಾಗಲೇ ಹೇಳಿದ್ದೆ. ಈ ವಿಚಾರ ಅಮ್ಮ-ಅಪ್ಪಂಗೆ, ಅತ್ತೆ- ಮಾವಂಗೆ ತಿಳಿಸೋಣಾಂತ. ನೀನು ಒಪ್ಪಲಿಲ್ಲ. ನೀನು ಯಾಕೆ ಈ ವಿಚಾರ ಮುಚ್ಚಿಟ್ಟೆಂತ ನನಗೆ ಈಗಲೂ ಅರ್ಥವಾಗಿಲ್ಲ.’
“ನಿಮಗೆ ಏನೂ ಅರ್ಥವಾಗಲ್ಲ.”
“ಆಯ್ತು, ನಾನು ಬುದ್ಧಿವಂತ ಅಲ್ಲ ಒಪ್ಪಿಕೊಳ್ತಿನಿ. ಇವತ್ತು ಸೈಟ್ ವಿಚಾರ ಯಾಕೆ ಬಂತು ಹೇಳು?”
ರಮ್ಯಾ ಹೇಳಿದಳು.
”ನಿನ್ನದು ವಿಚಿತ್ರ ಸ್ವಭಾವ”
“ಇರಬಹುದು. ನಮ್ಮ ತಂದೆಯ ದೃಷ್ಟಿಯಲ್ಲಿ ನಾವು ಮಾಡ್ತಿರುವುದು ತಪ್ಪು. ನೀವು ಕೊಂಡುಕೊಳ್ಳದೇ ಇರುವ ಮನೆಯನ್ನು ನಿಮ್ಮ ಮಾವನಿಗೆ ಯಾಕೆ ತೋರಿಸಬೇಕು. ಈ ವಯಸ್ಸಿನಲ್ಲಿ ಅವರಿಗ್ಯಾಕೆ ತೊಂದರೆ ಕೊಡ್ತೀರಾ?” ಅಂದರು.
“ಅವರು ಹೇಳಿರುವುದು ಸರಿಯಾಗಿದೆ”.
“ನೋಡಿ ಯಾರು ಏನೇ ಹೇಳಲಿ, ನನಗೆ ನಿಮ್ಮ ತಂದೆ ಬಗ್ಗೆ ಅಸಮಾಧಾನವಿದೆ. ನಾವು ಸುಮ್ಮನಿದ್ದರೆ ಈ ಮನೆ ಮಾರಿ ಹೆಣ್ಣು ಮಕ್ಕಳಿಗೆ ಹಂಚಿಬಿಡ್ತಾರೆ.”
“ಅವರು ಯಾಕೆ ಹಾಗೆ ಮಾಡ್ತಾರೆ?”
‘ನಾವಿಬ್ಬರೂ ಇಂಜಿನಿಯರ್‍ಸ್ , ಕೈ ತುಂಬಾ ಸಂಪಾದಿಸುತ್ತೇವೆ. ನಮಗೆ ಕೊಡದಿದ್ದರೂ ಆಗತ್ತೆ. ಹೆಣ್ಣು ಮಕ್ಕಳು ಯಾವಾಗಲೂ ಹೆಚ್ಚು ಹತ್ತಿರ ಅಲ್ವಾ? ನಾವೇ ದೂರದವರು.”
“ನನಗೆ ಈ ಹತ್ತಿರ ದೂರ ಅರ್ಥವಾಗಲ್ಲ. ಸುಮ್ಮನೆ ನೀನು ಏನೇನೋ ಮಾತನಾಡಿ ನನ್ನ ತಲೆ ತಿನ್ನಬೇಡ”.
”ನೋಡಿ ನಾನು ಡೈರೆಕ್ಟಾಗಿ ಮಾವನ್ನ ಮನೆ ವಿಚಾರ ಕೇಳೋಣಾಂತಿದ್ದೀನಿ. ನೀವು ಸುಮ್ಮನಿರಬೇಕು.”
“ಏನು ಕೇಳ್ತಿಯಾ?”
“ನಿಮ್ಮ ಹೆಣ್ಣು ಮಕ್ಕಳಿಗೆ ಕೊಟ್ಟ ಹಾಗೆ ನಮಗೆ ಯಾವಾಗ ದುಡ್ಡುಕೊಡ್ತೀರಾಂತ ಕೇಳೀನಿ.”
“ನೀನು ಮಕ್ಕಳೆದುರಿಗೆ ಏನೂ ಕೇಳಬೇಡ.”
“ನೀವು ಈ ಭಾನುವಾರ ಮಕ್ಕಳನ್ನು ಮನೆಯಲ್ಲೇ ಇಟ್ಟುಕೊಳ್ಳಿ. ನಾನು ಹೋಗಿ ಮಾವನ ಜೊತೆ ಮಾತಾಡ್ತೀನಿ.”
“ಅಪ್ಪನ ಜೊತೆ ರಾಜರಾಜೇಶ್ವರಿ ನಗರಕ್ಕೆ ಹೋಗ್ತಾ ಇದ್ದೀಯಾ?”
“ಇಲ್ಲ. ಆ ಮನೆ ತುಂಬಾ ಜಾಸ್ತಿ ಹೇಳಿದ್ದಾರೇಂತ ನನ್ನನೇ ಮಾವನಿಗೆ ಫೋನ್ ಮಾಡಿ ಹೇಳಿಬಿಟ್ಟೆ.”
“ಸರಿ. ಏನಾದ್ರೂ ಮಾಡಿಕೋ.”
“ಈ ಶನಿವಾರ ನೀವು ಏನೂ ಪ್ರೋಗ್ರಾಂ ಹಾಕಬೇಡಿ, ಮನೆ ಕ್ಲೀನ್ ಮಾಡಬೇಕು”
“ನೀನು ಕ್ಲೀನ್ ಮಾಡು. ನಾನ್ಯಾಕೆ?”
“ನೀವೂ ಸಹಾಯ ಮಾಡಿ, ನನಗೊಬ್ಬಳಿಗೇ ಮಾಡಕ್ಕಾಗಲ್ಲ”.
”ನಿನ್ನ ಟಿಪ್‌ಟಾಪ್‌ರಾಣಿಗೆ ಹೇಳು.”
“ಅವಳು ಶನಿವಾರ, ಭಾನುವಾರ ಬರಲ್ಲಂತೆ. ಯಾವುದೋ ಫಂಕ್ಷನ್‌ಗೆ ಹೋಗ್ತಿದ್ದಾಳೆ.”
“ಸರಿ, ಕ್ಲೀನ್ ಮಾಡೋಣ ಬಿಡು” ಎಂದ ಆದಿ.
ಶುಕ್ರವಾರ ರಾತ್ರಿಯೇ ಆನಂದರಾಯರು ಮಗನಿಗೆ ಫೋನ್ ಮಾಡಿದರು. “ನಾಳೆ ವಸುಮತಿ, ವಾರಿಣಿ ಬರ್‍ತಿದ್ದಾರೆ. ನೀವೂ ಇಲ್ಲಿಗೇ ಬನ್ನಿ.”
”ಭಾವಂದಿರು ಬರ್‍ತಿದ್ದಾರಾ?”
“ಹುಂ, ಬರ್‍ತಿದ್ದಾರೆ………..”
”ನೀವೆಲ್ಲಾ ನಾಳೆ ನಮ್ಮನೆಗೇ ಬರಬಹುದಲ್ವಾಪ್ಪ?”
“ಇಲ್ಲಪ್ಪ. ನಾಳೆ ನೀವು ಬನ್ನಿ. ನಿಮ್ಮ ಹತ್ತಿರ ಒಂದು ಮುಖ್ಯವಾದ ವಿಚಾರ ಮಾತಾಡಬೇಕಾಗಿದೆ.”
“ಹನ್ನೊಂದು ಗಂಟೆ ಹೊತ್ತಿಗೆ ಬರ್‍ತೀವಿ.”
“ಹಾಗೇ ಮಾಡಿ” ಎಂದು ಹೇಳಿ ರಾಯರು ಕಾಲ್ ಕಟ್ ಮಾಡಿದರು.
ವಿಷಯ ತಿಳಿದ ರಮ್ಯಾ ತುಂಬಾ ತಲೆ ಕೆಡಿಸಿಕೊಂಡಳು.
“ಯಾಕೆ ಬರಲು ಹೇಳಿದ್ದಾರೆ? ನಿಮ್ಮ ಅಕ್ಕಂದಿರು ಯಾಕೆ ಬರ್‍ತಿದ್ದಾರೆ? ನೀವೇನೂ ಕೇಳಲಿಲ್ವಾ?”
“ಇದರಲ್ಲಿ ಕೇಳುವುದೇನಿದೆ? ಅಕ್ಕಂದಿರು ಬಂದಿದ್ದಾರಲ್ಲಾಂತ ಕರೆದಿರಬಹುದು.”
”ಮುಖ್ಯವಾದ ವಿಚಾರಾಂದ್ರೂಂತ ಹೇಳಿದ್ರಲ್ಲಾ………?”
‘ಅವರು ಯಾವ ವಿಚಾರ ಮುಖ್ಯ ಅಂದುಕೊಂಡಿದ್ದಾರೋ ನಮಗೇನು ಗೊತ್ತು?”
“ನಿಮಗೆ ವಿಷಯ ಕಲೆಕ್ಟ್ ಮಾಡಕ್ಕೂ ಬರಲ್ಲ. ಮಾವ ನನಗೆ ಫೋನ್ ಮಾಡಿದ್ದಿದ್ರೆ ನಾನೆಲ್ಲಾ ವಿಚಾರ್‍ತಿಸಿದ್ದೆ.”
“ನಾನು ದಡ್ಡ, ನೀನು ಬುದ್ಧಿವಂತೇಂತ ಗೊತ್ತಿದೆ ತಾನೆ? ನಾಳೆ ನಾನು ಬರಲ್ಲ. ನೀನೊಬ್ಬಳೇ ಹೋಗಿ ಮಾತಾಡಿಕೊಂಡು ಬಾ.”
“ಏನ್ರಿ ಹೀಗಂತೀರಾ? ನಿಮ್ಮ ಅಕ್ಕಂದಿರು ‘ನಮ್ಮ ತಮ್ಮ ಎಲ್ಲಿ?’ ಎಂದು ಕೇಳಿದರೆ ಏನು ಹೇಳಲಿ?”
“ಸುಡುಗಾಡಿಗೆ ಹೋದಾಂತ ಹೇಳು.”
“ಸಾರಿ. ಬೇಜಾರು ಮಾಡ್ಕೊಂಡು ಕೆಟ್ಟ ಮಾತಾಡಬೇಡಿ. ನೀವು ಬರದಿದ್ರೆ ನಾನೂ ಹೋಗಲ್ಲ.”
“ನಾನು ಬರಲೇಬೇಕೂಂತ ನಿನ್ನ ಮನಸ್ಸಿನಲ್ಲಿದ್ರೆ ಒಂದು ಕಂಡಿಷನ್ ಇದೆ.”
“ಏನು ಕಂಡಿಷನ್?”
ಅಪ್ಪ ಏನೇ ಮಾತಾಡಿದ್ರೂ ಕೇಳಿಸಿಕೊಂಡು ತೆಪ್ಪಗಿರಬೇಕು. ನಾನು ಯಾವ ಕಾರಣಕ್ಕೂ ಅಪ್ಪ-ಅಮ್ಮನ್ನ, ಅಕ್ಕಂದಿರನ್ನು ದೂರಮಾಡಿಕೊಳ್ಳಕ್ಕೆ ಸಿದ್ಧನಿಲ್ಲ”.
”ಹಾಗಂತ ಅವರು ನಮಗೆ ಆಸ್ತಿಕೊಡದಿದ್ದರೂ ಸುಮ್ಮನಿರಬೇಕಾ?’
”ಹೌದು. ಸುಮ್ಮನಿರಬೇಕು. ದೇವರು ನಮಗೇನು ಕಡಿಮೆ ಮಾಡಿಲ್ಲ. ನಿನ್ತಂದೆಯಾಗಲಿ, ನಮ್ತಂದೆಯಾಗಲಿ ನಮಗೆ ಮೋಸ ಮಾಡಲ್ಲ ಅನ್ನುವ ನಂಬಿಕೆ ನನಗಿದೆ. ನೀನೇನಾದ್ರೂ ಜಗಳ ತೆಗೆದರೆ ನಾನು ಮನೆ ಬಿಟ್ಟು ಹೋಗ್ತಿನಿ.”
“ನೀವು ಇಷ್ಟೆಲ್ಲಾ ಮಾತಾಡ್ತಿರುವುದು ನೋಡಿದರೆ ನಿಮಗೆ ಎಲ್ಲಾ ವಿಚಾರ ಗೊತ್ತಿದೆ ಅನ್ನಿಸತ್ತೆ……”
“ಪ್ರಾಮಿಸ್ ನನಗೇನೂ ಗೊತ್ತಿಲ್ಲ. ಆದರೆ ನಿನ್ನ ದುಡುಕುಬುದ್ಧಿಯಿಂದ ನಮ್ಮ ಸಂಬಂಧಗಳು ಹಾಳಾಗುತ್ತವೇನೋಂತ ಭಯವಾಗ್ತಿದೆ”.
“ಖಂಡಿತಾ ಹಾಗಾಗಲ್ಲ. ನಾನು ತಾಳ್ಮೆಯಿಂದ ಇದ್ದೀನಿ. ನೀವು ಧೈರ್ಯವಾಗಿರಿ.”
ಮರುದಿನ ಹನ್ನೊಂದು ಗಂಟೆಗೆ ಸರಿಯಾಗಿ ಆದಿ-ರಮ್ಯಾ ರಾಯರ ಮನೆಯಲ್ಲಿದ್ದರು. ಅವರು ವಾರುಣಿ-ವಸುಮತಿ ಜೊತೆ ಮಾತಾಡುತ್ತಿದ್ದಾಗ ಪಂಕಜಮ್ಮ –ಗಣೇಶರಾಯರು ಆಗಮಿಸಿದರು. ವಾರುಣಿ ಎಲ್ಲರಿಗೂ ಬಾದಾಮಿ ಹಾಲು ತಂದುಕೊಟ್ಟಳು. ಪಂಕಜಮ್ಮ ಬಹಳ ದಿನಗಳ ನಂತರ ವಾರುಣಿ, ವಸುಮತಿಯರನ್ನು ಭೇಟಿಯಾಗಿದ್ದರಿಂದ ಅವರ ಯೋಗಕ್ಷೇಮ ವಿಚಾರಿಸುವುದರಲ್ಲಿ ಮಗ್ನರಾದರು.
“ನಿಮ್ಮ ಮಾತು-ಕತೆಗಳು ಮುಗಿದಿದ್ದರೆ ನಾನು ಮಾತಾಡಬಹುದಾ?’
“ಮಾತಾಡಿ ರಾಯರೇ.’
”ನಿಮಗೆ ತಿಳಿದಿರುವಂತೆ ನಾನು ಶ್ರೀಮಂತನಲ್ಲ. ನಮ್ಮ ತಂದೆ ಕಂಟ್ರಾಕ್ಟರ್ ಆಗಿದ್ರು. ಮನೆ ತುಂಬಾ ಜನ ಇದ್ರು. ಅವರ ತಂದೆ-ತಾಯಿ, ಮೆಂಟಲಿರಿಟಾರೈಡ್ ಇಬ್ಬರು ಚಿಕ್ಕಪ್ಪಂದಿರು, ಮದುವೆಗಿದ್ದ ಮೂವರು ತಂಗಿಯರು, ನೆಲೆತಪ್ಪಿ ಇಬ್ಬರು ಮಕ್ಕಳ ಜೊತೆ ತಂದೆಯ ಆಶ್ರಯಕ್ಕೆ ಬಂದಿದ್ದ ಅಕ್ಕ-ಇವರೆಲ್ಲರ ಜೊತೆ ಹೆಂಡತಿ, ಮಕ್ಕಳ ಜವಾಬ್ದಾರಿ ನಮ್ಮ ತಂದೆಯ ಮೇಲಿತ್ತು. ಎಲ್ಲಾ ಜವಾಬ್ದಾರಿ ಕಳೆದ ನಂತರ ಅವರು ಬಹಳ ಕಷ್ಟಪಟ್ಟು ಜಾಗ ತೆಗೆದುಕೊಂಡು ತಾವೇ ನಿಂತು ಮನೆ ಕಟ್ಟಿಸಿದರು. ಅವರು ಆ ಮನೆ ನನಗೆ ಕೊಟ್ಟರು. ಹೆಣ್ಣು ಮಕ್ಕಳು ತಮಗೆ ಪಾಲು ಬೇಡಾಂತ ಬರೆದುಕೊಟ್ಟರು.”
“ಯಾಕೆ?”
“ಅವರಿಗೆ ಅಪ್ಪ ಎಷ್ಟು ಕಷ್ಟದಿಂದ ಮನೆ ಕಟ್ಟಿದ್ದಾರೆಂದು ಗೊತ್ತಿತ್ತು. ತಮ್ಮ ಮದುವೆಗೆ ತಂದೆ ಸಾಲ ಮಾಡಿದ್ದು ಗೊತ್ತಿತ್ತು. ಅವರು ಒಳ್ಳೆಯ ಕಡೆ ಸೇರಿದ್ದರು.”
“ಒಳ್ಳೆಯ ಹೆಣ್ಣು ಮಕ್ಕಳು” ಎಂದರು ದಾಕ್ಷಾಯಿಣಿ.
ನನಗೆ “ನಮ್ಮ ತಂದೆಗೆ ನನ್ನನ್ನು ಕಂಟ್ರಾಕ್ಟರ್ ಮಾಡುವ ಆಸೆಯಿತ್ತು. ಆದರೆ ನನಗೆ ಆಸಕ್ತಿಯಿರಲಿಲ್ಲ. ನನಗೆ ಪೆನ್ಷನ್ ಸಿಗುವ ಕೆಲಸ ಬೇಕಿತ್ತು. ನಾನು ಬಿ.ಎಸ್.ಸಿ., ಬಿ.ಇಡಿ ಮಾಡಿದೆ. ಗೌರ್ನಮೆಂಟ್ ಕೆಲಸವೂ ಸಿಕ್ಕಿತು. ಜೊತೆಗೆ ನಾನು ಮನೆಯಲ್ಲಿ ಮ್ಯಾಥ್ಸ್ , ಸೈನ್ಸ್ ಪಾಠ ಮಾಡ್ತಿದ್ದೆ.”
ಅಪ್ಪ ನಾನು ಕೆಲಸಕ್ಕೆ ಸೇರಿದ ನಾಲ್ಕು ವರ್ಷಗಳ ನಂತರ ಹೋಗಿಬಿಟ್ರು. ಅವರು ಸಾಯುವ ಮೊದಲು ತಮ್ಮ ಪ್ರಭಾವ ಬಳಸಿ, ನನಗೆ ಬೆಂಗಳೂರಿಗೆ ವರ್ಗ ಮಾಡಿಸಿದ್ದರು.ಆ ವೇಳೆಗೆ ಮನೆಯೂ ಸಿದ್ಧವಾಗಿತ್ತು. ನಾನು, ಹೆಂಡತಿ-ಮಕ್ಕಳ ಜೊತೆ ಬಂದು ಸಂಸಾರ ಆರಂಭಿಸಿದೆ. ಅಪ್ಪ ಬೆಂಗಳೂರಿಗೆ ಬಂದ ಮೇಲೆ 3 ತಿಂಗಳಿದ್ದರು.
“ನೀನು ಏನೇ ಆಗಲಿ ಮೇಲೆ ಮನೆ ಕಟ್ಟಬೇಡ. ಬೇಕಾದರೆ ನಿನ್ನ ಮಕ್ಕಳಿಗೋಸ್ಕರ ರೂಂ ಹಾಕಿಸು. ಸಂಸಾರಸ್ಥರು ಇರುವಂತೆ ಮನೆ ಕಟ್ಟಿಸಿದರೆ ನಿನ್ನ ಮಗ ಮೇಲೆ ಇದ್ದುಕೊಂಡು ನಿನ್ನನ್ನು ದೂರ ಮಾಡ್ತಾನೆ ಅಂತಿದ್ರು.”
ಯಾರೂ ಮಾತಾಡಲಿಲ್ಲ.
ಅಪ್ಪ ಹೋದಮೇಲೆ ಅಮ್ಮ ನಮ್ಮ ಜೊತೆಯಲ್ಲೇ ಇದ್ದರು. ಅಮ್ಮ ದಾಕ್ಷಾಯಿಣಿ ತಾಯಿ-ಮಗಳ ತರಹ ಇದ್ದರು. ಅಮ್ಮನದು ಒಂದೇ ಹಠ. “ನೀನು ಮಗನನ್ನೂ ಓದಿಸು, ಹೆಣ್ಣು ಮಕ್ಕಳನ್ನೂ ಓದಿಸು. ಆದರೆ ಮೊದಲು ಹೆಣ್ಣು ಮಕ್ಕಳಿಗೆ ಓದು ಮುಗಿಯುತ್ತಿರುವ ಹಾಗೆ ಮದುವೆ ಮಾಡಿಬಿಡು.”
“ವಸು, ವಾರಿಣಿ ಕೆಲಸಕ್ಕೆ ಸೇರಬೇಕೂಂತಿದ್ದಾರೆ” ನಾನು ರಾಗವೆಳೆದಿದ್ದೆ.
“ಓದಿನ ಪಾಡಿಗೆ ಓದು ಆಗತ್ತೆ. ಮದುವೆಯಾದ ಮೇಲೆ ಅವರು ಕೆಲಸಕ್ಕೆ ಸೇರಲಿ. ಯಾರು ಬೇಡ ಅಂತಾರೆ. ನಮ್ಮ ವಾರುಣಿಗೂ ಆದಿತ್ಯಂಗೂ 10 ವರ್ಷಗಳ ಅಂತರವಿತ್ತು. ಆದಿತ್ಯ ಇಂಜಿನಿಯರ್ ಆಗುವ ಹೊತ್ತಿಗೆ ನಾನು ಹೆಣ್ಣು ಮಕ್ಕಳ ಮದುವೆ ಮಾಡಿದ್ದೆ. ಅವರಿಗೆ ಮಕ್ಕಳೂ ಆಗಿದ್ದೆವು. ಆಮೇಲೆ ಆದಿತ್ಯ ಸೆಟ್ಲ್ ಆದ.”
“ರಾಯರೇ ಸಂತೃಪ್ತ ಜೀವನ ನಿಮ್ಮದು” ರಮ್ಯಳ ತಂದೆ ಹೇಳಿದರು.
ನಾನು ರಿಟೈರ್ ಆದಮೇಲೂ ಟ್ಯುಟೋರಿಯಲ್ಸ್‌ಗಳಲ್ಲಿ ಪಾಠ ಮಾಡ್ತಿದ್ದೆ. ಪೆನ್ಷನ್ ಹಣ ಬರ್‍ತಿತ್ತು. ಜೀವನ ನಿರ್ವಹಣೆ ಕಷ್ಟವಾಗಲಿಲ್ಲ. ನಾನು ಜಿ.ಪಿ.ಎಫ್‌ಗೆ ತಿಂಗಳಿಗೆ 20,000ರೂ. ಕಟ್ತಿದ್ದೆ, ರಿಟೈರ್ ಆದ ನಂತರ ಕೆಂಗೇರಿ ಹತ್ತಿರ 40×50 ರ ಸೈಟು ತೆಗೆದುಕೊಂಡಿದ್ದೆ. ಮನೆ ಕಟ್ಟಿಸುವ ಉದ್ದೇಶವಿರಲಿಲ್ಲ. ಇತ್ತೀಚೆಗೆ ಯಾರೋ ಸ್ಕೂಲು ಆರಂಭಿಸ್ತೇವೆ. ನಿಮ್ಮ ಸೈಟು ಮಾರ್‍ತೀರಾ? ಪಕ್ಕದಲ್ಲೇ ನಮ್ಮ ಸೈಟ್ ಇದೆ. ನಮಗೆ ಅನುಕೂಲವಾಗತ್ತೆ’ ಎಂದರು.
ನಾನು 80 ಲಕ್ಷಕ್ಕೆ ಮಾರಿದೆ. 25 ಲಕ್ಷ ವಸೂಗೆ, 25 ಲಕ್ಷ ವಾರಿಣಿಗೆ ಕೊಟ್ಟೆ, ಹತ್ತು ಲಕ್ಷ ದಾಕ್ಷಾಯಿಣಿಯ ಹೆಸರಲ್ಲಿ ಎಫ್.ಡಿ. ಮಾಡಿದೆ. ಇನ್ನು 20 ಲಕ್ಷವನ್ನು ಸಾನ್ವಿ, ಸುಧೀ ಹೆಸರಲ್ಲಿ ಪಿಕ್ಸೆಡ್‌ಗೆ ಹಾಕಿದೆ. ಆದಿ, ಅವರ ಪಾಸ್‌ಬುಕ್, ಬಾಂಡ್‌ಗಳನ್ನು ಜೋಪಾನವಾಗಿಟ್ಟುಕೋ.
“ಅಪ್ಪ …ನೀವು……..”
“ನನ್ನ ಮಾತು ಮುಗಿದಿಲ್ಲ. ನನಗೆ ನನ್ನ ಮನೆ ಪಾಲಾಗುವುದು ಇಷ್ಟವಿರಲಿಲ್ಲ. ಅದಕ್ಕೆ ವಸು, ವಾರಿಣಿ ‘ಖಂಡಿತಾ ನಮಗೆ ಅದರಲ್ಲಿ ಪಾಲು ಬೇಡ. ನೀವು ಈಗ ಕೊಟ್ಟಿರುವುದೇ ಬೇಕಾದಷ್ಟಾಯ್ತಂತ ಹೇಳಿ ಆಸ್ತಿಯಲ್ಲಿ ಪಾಲು ಬೇಡಾಂತ ಬರೆದುಕೊಟ್ಟರು. ಮನೆ ನಿನ್ನ ಹೆಸರಿಗೆ ವಿಲ್ ಮಾಡಿದ್ದೇನೆ. ವಿಲ್ ಕಾಪಿ ನೀನಿಟ್ಟುಕೋ. ಒಂದು ರಿಕ್ವೆಸ್ಟ್ ದಯವಿಟ್ಟು ನಾನಿರುವವರೆಗೂ ಆ ಮನೆ ಮಾರಬೇಡ.”
”ಅಪ್ಪ ನಮ್ಮಿಂದ ತಪ್ಪಾಗಿದೆ. ದಯವಿಟ್ಟು ನಮ್ಮ ಜೊತೆ ಬಂದಿರಿ. ನಿಮ್ಮೆಲ್ಲರ ಮುಂದೆ ನಾವು ಸಣ್ಣವರಾಗಿಬಿಟ್ಟೆವು”.
“ಹೌದು ಮಾವ. ನೀವು ಮನೆ ಮಾರಿ ಹೆಣ್ಣು ಮಕ್ಕಳಿಗೂ ಪಾಲು ಕೊಟ್ಟಿದ್ದೀರಾಂತ ಭಾವಿಸಿದ್ದೆ. ಆದರೆ….”
“ನೀನು ನನ್ನನ್ನು ಕೇಳಿದ್ದಿದ್ರೆ ನಾನೇ ಹೇಳ್ತಿದ್ದೆ. ನನಗೆ ನೀವೆಲ್ಲರೂ ಒಂದೇ. ನಾನು ಮಕ್ಕಳಲ್ಲಿ ಬೇಧ-ಭಾವ ಮಾಡಿ ಯಾವ ನರಕಕ್ಕೆ ಹೋಗಲಿ? ವಸು, ವಾರುಣಿ, ನಿಮ್ಮ ಭಾವಂದಿರು ನಿಜವಾಗಿ ದೊಡ್ಡ ಮನುಷ್ಯರು. ಅವರು ಹಠ ಮಾಡಿದ್ದಿದ್ರೆ ನಾನು ಮನೆ ಮಾರಲೇಬೇಕಾಗಿತ್ತು”.
“ಮಾವ…..ನಾವು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತುಂಬಾ ನೋಯಿಸಿದೆವು. ಆದರೆ ನೀವು ನಿಮಗಾದ ಬೇಸರ ತೋರಿಸಿಕೊಳ್ಳದೆ ನಮ್ಮ ಮೇಲೆ ಪ್ರೀತಿ, ವಿಶ್ವಾಸ ತೋರಿಸ್ತಿದ್ರಿ. ನಿಮ್ಮ ತಾಳ್ಮೆ ಹೆಚ್ಚಿನದು. ಎಷ್ಟೋ ಸಲ ನನಗೆ ನಿಮ್ಮ ಜೊತೆ ಜಗಳವಾಡಬೇಕು ಅನ್ನಿಸ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.”
“ನೋಡು ರಮ್ಯಾ, ನಿಮ್ಮ ತಂದೆ-ತಾಯಿಗೆ ನಾವು ಎಂತಹ ಜನಾಂತ ಗೊತ್ತಿದ್ದರಿಂದ ಅವರು ನಿಮ್ಮನ್ನು ಸಪೋರ್ಟ್ ಮಾಡಲಿಲ್ಲ. ಆದ್ದರಿಂದ ನಮ್ಮ ನಡುವೆ ಜಗಳ ಆಗಲಿಲ್ಲ” ದಾಕ್ಷಾಯಿಣಿ ಹೇಳಿದರು.
“ಅಪ್ಪಾ, ನೀವು ಯಾವಾಗ ಬರ್‍ತೀರ ಹೇಳಿ.”
“ನೋಡು ಆದಿ. ನಾವು ಇಲ್ಲಿ ಆರಾಮವಾಗಿದ್ದೇವೆ. ಖುಷಿಯಾಗಿದ್ದೇವೆ. ಇಲ್ಲಿಗೆ ಬಂದ ಮೇಲೆ ವಾಕಿಂಗ್ ಮಾಡ್ತಿರೋದ್ರಿಂದ ನಿಮ್ಮಮ್ಮನ ಆರೋಗ್ಯ ಸುಧಾರಿಸಿದೆ. ನಿಮಗೂ ಜವಾಬ್ದಾರಿ ಬಂದಿದೆ. ಈ ಮನೆ ನಿಮಗೆ ಹತ್ತಿರವಿರೋದ್ರಿಂದ ನೀವು ಬರ್‍ತೀರಿ. ನಾವೂ ಬಂದು ಹೋಗಿ ಮಾಡ್ತೀವಿ. ನಮಗೆ ತೀರಾ ಕೈಲಾಗದಿದ್ದಾಗ ನೀವೇ ತಾನೇ ನೋಡಿಕೊಳ್ಳಬೇಕು.”
“ಅಪ್ಪಾ ನೀವು ಬಹಳ ಜಾಣತನದಿಂದ ಉತ್ತರ ಕೊಡ್ತಿದ್ದೀರ………”
“ಇದರಲ್ಲಿ ಜಾಣತನ ಏನು ಬಂತು? ವಯಸ್ಸಾದ ಮೇಲೆ ಬೇರೆಯವರಿಗೆ ಹೊರೆ ಆಗಬಾರದು. ಅದು ಈಗಿನ ಕಾಲದ ತತ್ವ, ನಿನ್ನ ಮಕ್ಕಳು ದೊಡ್ಡವರಾಗುವ ಕಾಲಕ್ಕೆ ಇನ್ನು ಯಾವ ಹೊಸ ಹೊಸ ರೀತಿಯ ಸಿದ್ಧಾಂತಗಳು ಹುಟ್ಟಿಕೊಳ್ಳುತ್ತವೋ ಗೊತ್ತಿಲ್ಲ. ಇರುವಷ್ಟು ಸ್ವತಂತ್ರವಾಗಿದ್ದು ನಗ್ತಾನಗ್ತಾ ಸಂಬಂಧ ಉಳಿಸಿಕೊಳ್ಳೋಣ. ಈ ವಿಚಾರದಲ್ಲಿ ಇನ್ನು ಚರ್ಚೆ ಬೇಡ” ರಾಯರು ನಯವಾಗಿ ಹೇಳಿದರೂ ಮನದಲ್ಲಿ ದೃಢತೆ ಇತ್ತು. ಎಲ್ಲರ ಮುಖದಲ್ಲೂ ನಗೆ ಇತ್ತು. ತನ್ನ ಮಾತಿಗೆ ಬೆಲೆಕೊಟ್ಟು ಈ ಮನೆಯಲ್ಲೇ ಇರುವ ನಿರ್ಧಾರ ತೆಗೆದುಕೊಂಡ ಗಂಡನ ಬಗ್ಗೆ ಹೆಮ್ಮೆ ಎನಿಸಿ, ದಾಕ್ಷಾಯಿಣಿಯ ಕಣ್ಣುಗಳು ಹನಿಗೂಡಿದವು.
ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=40119
(ಮುಗಿಯಿತು)
–ಸಿ.ಎನ್. ಮುಕ್ತಾ, ಮೈಸೂರು.
ತುಂಬಾ ಕೈ ಕಾಲು ಆಗದಿದ್ದರೆ ಮಗನ ಮನೆಗೆ ಹೋಗ್ತಾರೆನೋ? ಹಾಗೇ ಆಗಲಿ.
ಬಹಳ ಸುಂದರವಾಗಿ ಮೂಡಿ ಬಂತು ಕಿರುಕಾದಂಬರಿ. ಇವತ್ತಿನ ಪರಿಸ್ಥಿತಿಯೂ ಹೀಗೆಯೇ ಇದೆ.
ಸೂಪರ್
ವಾಸ್ತವ ಬದುಕಿನ ಚಿತ್ರಣ ಕಟ್ಟಿಕೊಟ್ಟ ಕಾದಂಬರಿ.. ಸಂಜೆಯ ಹೆಜ್ಜೆಗಳು… ಬಹಳ ಆಪ್ತವಾಗಿ ಮೂಡಿಬಂತು… ಹಾಗೇ ಆ ಹಂತದಲ್ಲಿ ಇರುವವರಿಗೂ..ಈಗ ತಾನೇ ಬದುಕನ್ನು ಕಟ್ಟಿಕೊಳ್ಳಲು.. ನಿಂತ ಜೋಡಿಗಳೂ ಒಮ್ಮೆ ನಿಂತು ಯೋಚಿಸಬೇಕಾದ ಸಂದೇಶ.. ಕೊಟ್ಟಿದೆ…ಧನ್ಯವಾದಗಳು ಮುಕ್ತಾ ಮೇಡಂ..
ಈಗಿನ ವಾಸ್ತವಕ್ಕೆ ಕನ್ನಡಿ ಹಿಡಿಯುವ ಕಥಾಹೂರಣವುಳ್ಳ ಕಾದಂಬರಿ ಸೊಗಸಾಗಿ ಮೂಡಿ ಬಂತು. ಸಾಂದರ್ಭಿಕ ಪರಿಹಾರ ಹಾಗೂ ಸೂಕ್ತ ಸಂದೇಶವನ್ನೂ ರವಾನಿಸಿ ಕಥೆ ಸುಖಾಂತ್ಯಗೊಂಡ ಪರಿ ಇಷ್ಟವಾಯಿತು ಮೇಡಂ. ತಮಗೆ ಧನ್ಯವಾದಗಳು.
ಆದರಣೀಯ ಹಾಗೂ ಆತ್ಮೀಯ ಕಾದಂಬರಿಗಾರ್ತಿ ಸಿ.ಎನ್. ಮುಕ್ತಾ ಇವರಿಗೆ ಗೌರಪೂರ್ವಕ ವಂದನೆಗಳು.
ಕಿರು ಕಾದಂಬರಿ “ಸಂಜೆಯ ಹೆಜ್ಜೆಗಳು…” ಪ್ರಸ್ತುತ ಸಮಾಜದಲ್ಲಿ ನಿಧಾನವಾಗಿ ರೂಢಿಗತವಾಗುತ್ತಿರುವ ವಿಚಾರವಾಗಿದೆ. ಅತ್ಯಂತ ನಾಜೂಕಾಗಿ ಅಂತ್ಯವನ್ನು ನೀಡಿದ ರಾಯರ ಸ್ವಾಭಿಮಾನವನ್ನು ಮೆಚ್ಚಲೇಬೇಕು. ನುರಿತ ಕಾದಂಬರಿಗಾರ್ತಿ ಮುಕ್ತಾ ಮೇಡಂ ಅವರಿಗೆ ವಂದನೆಗಳು.
ಕುತೂಹಲದಿಂದ ಓದಿಸಿಕೊಂಡು ಚಂದದ ಮುಕ್ತಾಯದೊಂದಿಗೆ ಮುದ ನೀಡಿದ ಕಾದಂಬರಿ. ಇಳಿವಯಸ್ಸಿನ ದಾಕ್ಷಯಣಿಗೆ ಗಂಡನ ನಿರ್ಧಾರದಿಂದ ಮೂಡಿದ ನೆಮ್ಮದಿ, ರಾಯರು ತೋರಿದ ಕಾಳಜಿ ಇಷ್ಟವಾಯಿತು. ಹೊಂದಾಣಿಕೆ ಎಂಬ ಪದ ಅರ್ಥ ಕಳೆದುಕೊಳ್ಳುವುತ್ತಿರುವ, ವಿಭಕ್ತ ಕುಟುಂಬಗಳ ಜಮಾನವಾದ ಈ ದಿನಗಳಲ್ಲಿ ಇದೇ ಸರಿಯಾದ ನಿರ್ದಾರ.
ಇಂದಿನ ಬದುಕಿನ ನೈಜ ಚಿತ್ರಣ
ಜೊತೆಗೆ ಸೂಕ್ತವಾದ ಹಿರಿಯರ ನಿರ್ಧಾರ
ಇಂದಿನ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ