ವಾಟ್ಸಾಪ್ ಕಥೆ 50 :ಸಂಪತ್ತು.
ಭಗವಾನ್ ಬುದ್ಧನ ಬಳಿಗೆ ಒಮ್ಮೆ ಮನುಷ್ಯನೊಬ್ಬ ತನ್ನ ಸಂದೇಹವನ್ನು ಪರಿಹರಿಸಿಕೊಳ್ಳಲು ಬಂದ. ಅವನು ”ಸ್ವಾಮಿ, ದಾನವು ಬಹಳ ಶ್ರೇಷ್ಠವಾದದ್ದು ಎಂದು ನೀವು ಬೋಧಿಸಿದ್ದೀರಿ. ನನಗೆ ಇದು ಸರಿಯಾಗಿ ಅರ್ಥವಾಗುತ್ತಿಲ್ಲ. ದಾನ ಕೊಡಬೇಕಾದರೆ ನಮ್ಮ ಬಳಿ ಏನಾದರೂ ಇರಬೇಕಲ್ಲವೇ? ಬಡವನಾದವನು ಏನನ್ನು ತಾನೇ ದಾನಮಾಡಬಲ್ಲ?” ಎಂದು ಪ್ರಶ್ನಿಸಿದನು.
ಅದನ್ನು ಕೇಳಿದ ಬುದ್ಧದೇವನು ನಸುನಗುತ್ತಾ ”ಅಯ್ಯೋ ಮರುಳೇ, ನಿನ್ನಲ್ಲಿಯೇ ಐದು ರೀತಿಯ ಸಂಪತ್ತುಗಳನ್ನಿಟ್ಟುಕೊಂಡು ಏಕೆ ಬಡವನೆಂದು ಕರೆದುಕೊಳ್ಳುತ್ತೀಯೆ ” ಎಂದನು.
ವ್ಯಕ್ತಿಯು ಅಚ್ಚರಿಯಿಂದ ”ಐದುರೀತಿಯ ಸಂಪತ್ತೇ! ಅದ್ಯಾವುದು ಗುರುಗಳೇ ನನಗೆ ಗೊತ್ತಿಲ್ಲದ್ದು?” ಎಂದ.
ಬುದ್ಧದೇವನು ”ಮೊದಲನೆಯದು ನಿನ್ನ ವದನ. ಅದು ಯಾವಾಗಲೂ ಪ್ರಸನ್ನತೆಯಿಂದ ಕೂಡಿರಲಿ. ಮುಖದಲ್ಲಿ ಮುಗುಳುನಗೆಯಿರಲಿ. ಅದನ್ನು ಕಂಡ ಜನರು ನಿನ್ನ ಸಮೀಪಕ್ಕೆ ಬರುತ್ತಾರೆ. ಅವರ ಬಳಿ ನಗುನಗುತ್ತಾ ಮಾತನಾಡು. ಇದರಿಂದ ಅವರ ದುಗುಡ ಕೊಂಚವಾದರೂ ಕಡಿಮೆಯಾಗುತ್ತದೆ. ಸೌಹಾರ್ದತೆ ಮೂಡುತ್ತದೆ.
ಎರಡನೆಯದು ನಿನ್ನ ಕಣ್ಣುಗಳು. ಅವು ಸದಾ ಚೈತನ್ಯ ಪೂರ್ಣವಾಗಿರುವಂತೆ ಕಾಪಾಡಿಕೋ. ಒಳ್ಳೆಯದನ್ನು ನೋಡು, ಮತ್ತು ಒಳ್ಳೆಯದನ್ನೇ ನೋಡುವಂತೆ ಇತರರನ್ನೂ ಪ್ರಚೋದಿಸು.
ಮೂರನೆಯದು ನಿನ್ನ ನಾಲಿಗೆ. ಹಿತವಾಗಿ, ಮಿತವಾಗಿ ಮಾತನಾಡು. ಇದರಿಂದ ಕೇಳುವವರಿಗೂ ಹಿತವೆನ್ನಿಸುತ್ತದೆ.
ನಾಲ್ಕನೆಯದು ನಿನ್ನ ಹೃದಯ. ಅಂತಃಕರಣ ತುಂಬಿದ ಹೃದಯ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತದೆ. ಅವರಿಗೆ ಸಾಂತ್ವನ ನೀಡುವಂತೆ ನಿನ್ನನ್ನು ಪ್ರೇರೇಪಿಸುತ್ತದೆ.
ಐದನೆಯದು ನಿನ್ನ ದೇಹ. ಇನ್ನೊಬ್ಬರಿಗೆ ಕಿಂಚಿತ್ತಾದರೂ ಸೇವೆಗಾಗಿ ಅದು ಉಪಯೋಗವಾಗಲಿ. ಈ ಐದೂ ಸಂಪತ್ತುಗಳನ್ನು ಸಮಯೋಚಿತವಾಗಿ ಯಥಾಶಕ್ತಿ ಬಳಸಿಕೋ. ‘ಪರೋಪಕಾರಾರ್ಥಮಿದಂ ಶರೀರಂ’ ನೆನಪಿಟ್ಟುಕೋ. ಇವಕ್ಕಿಂತಲೂ ಹೆಚ್ಚಿನ ಸಂಪತ್ತು ನಿನಗೆ ಬೇಕಾ?” ಎಂದು ಮಾತು ಮುಗಿಸಿದರು ಬುದ್ಧದೇವ. ಪ್ರಶ್ನೆ ಕೇಳಿದ ವ್ಯಕ್ತಿ ಮೌನವಾಗಿ ಕೈಮುಗಿದು ತೆರಳಿದ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಗೆಳತಿ ಹೇಮಾರವರಿಗೆ ಧನ್ಯವಾದಗಳು
ಸಂಪತ್ತಿನ ಪರಿಕಲ್ಪನೆ ಎಷ್ಟು ಚಂದವಿದೆ. ಒಂದೊಳ್ಳೆಯ ಸಂದೇಶ ಹೊತ್ತ ಸುಂದರ ಕಥೆ.
ಧನ್ಯವಾದಗಳು ಪದ್ಮಾ ಮೇಡಂ
ಸುಂದರವಾದ, ಹಿತಕರ ಸಂಪತ್ತಿನ ಕಲ್ಪನೆ ಚೆನ್ನಾಗಿದೆ!
ಧನ್ಯವಾದಗಳು ಪದ್ಮಿನಿ ಮೇಡಂ
ನಮ್ಮಲ್ಲಿರುವ ಐದು ಅನರ್ಘ್ಯ ಸಂಪತ್ತುಗಳನ್ನು ತಿಳಿಸಿದ ಸಂದೇಶಯುಕ್ತ ಕಥೆ ಎಂದಿನಂತೆ ಚಂದ…ನಾಗರತ್ನ ಮೇಡಂ.
ಬಹಳ ಸುಂದರವಾಗಿದೆ ಕಥೆ
ಧನ್ಯವಾದಗಳು ನಯನ ಮೇಡಂ
ಧನ್ಯವಾದಗಳು ಶಂಕರಿ ಮೇಡಂ
ನಮ್ಮ ಲ್ಲಡಗಿರುವ ಐದು ಮುತ್ತುಗಳನ್ನು ಉತ್ತಮ ಕಥೆಯ ಮೂಲಕ ಜ್ಞಾಪಿಸಿದ್ದೀರಿ.ತುಂಬಾ ಧನ್ಯವಾದ .
ಧನ್ಯವಾದಗಳು ವನಿತಾ ಮೇಡಂ