ಮಂಗಳದ್ರವ್ಯಗಳ ಮಹತ್ವ
ಯಾವುದೇ ಒಂದು ಸಂಪ್ರದಾಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಜೊತೆಗೆ ತನ್ನದೇ ಆದ ಆಚರಣೆಯನ್ನು ನಮ್ಮ ಸಂಸ್ಕೃತಿಯಲ್ಲಿ ಎಲ್ಲಾ ಧರ್ಮೀಯರು ಕೂಡ ಉಪಯೋಗಿಸುತ್ತಾ ಬಂದಿದ್ದಾರೆ. ಸ್ತ್ರೀಯರು ಹಾಗೂ ವಿವಾಹಿತ ಸ್ತ್ರೀಯರು ದಿನ ನಿತ್ಯ ಪೂಜಿಸುವ ಮಂಗಳ ದ್ರವ್ಯಗಳು ಹಲವು ಇವೆ. ಅಲ್ಲದೆ ಮಂಗಳಕರವಾದ ಕೆಲಸ ಕಾರ್ಯ ಮಾಡಲು ಕೂಡ ಹಲವು ಮಂಗಳದ್ರವ್ಯಗಳನ್ನು ಮುಂದೆ ಇಟ್ಟುಕೊಂಡು ತಮ್ಮ ಕಾರ್ಯ ನೆರವೇರಿಸುತ್ತಾರೆ. ಜೊತೆಗೆ ಈ ಸಂಪ್ರದಾಯ ಇವತ್ತಿನದಲ್ಲ ಪುರಾತನ ಕಾಲದಿಂದಲೂ ಕೂಡ ನಮ್ಮ ಪೂರ್ವಿಕರು ಒಂದಲ್ಲ ಒಂದು ರೀತಿಯಲ್ಲಿ ಮಂಗಳಕರವಾದ ಮಂಗಳದ್ರವ್ಯ ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ ಆಧುನಿಕ ಸಂಸ್ಕೃತಿ ಸಂಪ್ರದಾಯ ಬದಲಾಗುತ್ತಾ ಬಂದಂತೆ ಇದರ ಬಳಕೆಯಲ್ಲೂ ಕೂಡ ಕಡಿಮೆಯಾಗಿದೆ ಎಂದು ಹೇಳಲೇಬೇಕು!. ಆಧುನಿಕತೆಯ ಭರಾಟೆಯಲ್ಲಿ ಸಂಪ್ರದಾಯ ಎನ್ನುವುದು ಎಲ್ಲೋ ಕಳೆದು ಹೋಗುತ್ತಿದೆ ಎನ್ನುವ ಭಾವನೆ ನಮ್ಮಲ್ಲಿ ಮೂಡದೆ ಇರದು.
ನಮ್ಮ ಪೂರ್ವಿಕರು, ಹಿರಿಯರು, ಸಂಬಂಧಿಕರು ಅದರ ಅನೇಕ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಅವರು ತಮ್ಮ ಮುಂದಿನ ಪೀಳಿಗೆಗೂ ಕೂಡ ಈ ಒಂದು ಸಂಪ್ರದಾಯ ಮುಂದುವರೆಯಲಿ ಎಂದು ಗಮನದಲ್ಲಿಟ್ಟುಕೊಂಡು ತಮ್ಮ ಮಕ್ಕಳಿಗೆ ಅಂದರೆ ತಮ್ಮ ಕುಟುಂಬದ ಇನ್ನಿತರ ಸದಸ್ಯರಿಗೂ ಕೂಡ ಮಂಗಳ ದ್ರವ್ಯದ ಉಪಯೋಗ, ಅದರ ಮಹತ್ವ, ಹಿನ್ನೆಲೆ ಎಲ್ಲವನ್ನು ಕೂಡ ತಿಳಿಸುತ್ತಾ ಬಂದರು. ಅವನ್ನು ಈಗಲೂ ಕೂಡ ಅಳವಡಿಸಿಕೊಂಡಿರುವವರ ಸಂಖ್ಯೆಯೂ ಕೂಡ ಇದೆ. ಅದೇ ರೀತಿ ಅವನ್ನೆಲ್ಲಾ ಬಳಸದೆ ಇರುವ ಮಂದಿಯೂ ಕೂಡ ನಮ್ಮೆದುರು ಇದ್ದಾರೆ. ಈ ರೀತಿಯಾಗಿ ಈ ಮಂಗಳ ದ್ರವ್ಯ ಬಳಕೆ ಬಗ್ಗೆ ವಿಶಿಷ್ಟವಾದ ಮಾಹಿತಿಗಳು ಲಭ್ಯವಾಗಿವೆ.
ಮಂಗಳದ್ರವ್ಯ ಎಂದರೆ ಒಳ್ಳೆಯದಾಗಲಿ ಎಂಬ ನಂಬಿಕೆ. ಅಂದರೆ ಅದನ್ನು ಬಳಸಿದರೆ ನಮ್ಮಲ್ಲಿ ಒಂದು ರೀತಿಯ ಶುಭ ಕಂಡುಬರುತ್ತದೆ. ಅಲ್ಲದೆ ಇದನ್ನು ಪೂರಕವಾಗಿ ಜನಪದರು ಬಳಸುವ ಪರಿಕರವೂ ಕೂಡ ಆಗಿದೆ. ಇವನ್ನು ಬಳಸುವ ಸಂದರ್ಭಗಳಿಗನುಗುಣವಾಗಿ ಸ್ಥೂಲವಾಗಿ ದ್ಯೆನಂದಿನ ಜೀವನದ, ಹಬ್ಬ-ಹರಿದಿನಗಳ, ಮದುವೆ ಮುಂಜಿಗಳ ಮಂಗಳದ್ರವ್ಯಗಳೆಂದು ವಿಂಗಡಿಸಬಹುದು. ಈ ಮೇಲ್ಕಂಡಂತೆ ಹಲವು ಸಂದರ್ಭಗಳಲ್ಲಿ ಬಳಸುತ್ತಾ ಬರಲಾಗಿದೆ. ಅರಿಶಿನ, ಕುಂಕುಮ, ಹೂವು, ಗಂಧ, ಅಕ್ಷತೆ, ಬಳೆ, ರಂಗೋಲಿ, ಧೂಪ, ದೀಪ, ತೋರಣ ಇತ್ಯಾದಿಗಳನ್ನು ನಿತ್ಯಜೀವನದಲ್ಲಿಯೂ ಹಬ್ಬಹರಿದಿನಗಳಲ್ಲಿಯೂ ಮದುವೆ ಮುಂಜಿಗಳಲ್ಲಿಯೂ ಬಳಸುತ್ತಾರೆ. ಇದರ ಬಳಕೆಯಲ್ಲಿ ನಮ್ಮ ಕೆಲಸ ಕಾರ್ಯಗಳು ನೆರವೇರುತ್ತವೆ. ಜೊತೆಗೆ ಒಂದು ರೀತಿಯಲ್ಲಿ ಶುಭ ಸೂಚನೆ ಇಲ್ಲಿ ಅಡಗಿದೆ.
ಇವುಗಳೊಂದಿಗೆ ಆಯಾ ಹಬ್ಬಗಳ ಆಚರಣೆಗೆ ಅನುಗುಣವಾಗಿ ಕೆಲವು ವಿಶೇಷ ವಸ್ತುಗಳನ್ನೂ ಬಳಸುವುದುಂಟು. ಮೇಲೆ ತಿಳಿಸಿದಂತೆ ಹಬ್ಬ ಹರಿ ದಿನಗಳಲ್ಲೂ ಕೂಡ ಇದರ ಮಹತ್ವ ಅಡಗಿದೆ. ಮುಂದುವರೆದು…….. ಉದಾಹರಣೆಗೆ, ಸ್ವರ್ಣಗೌರೀವ್ರತದಲ್ಲಿ ಸಾಮಾನ್ಯವಾಗಿ ಬಳಸುವ ಪೂಜಾ ವಸ್ತುಗಳೊಂದಿಗೆ ಪದಾರ್ಥಗಳು ನಮ್ಮನ್ನೆಲ್ಲ ಎದುರುಗೊಳ್ಳುತ್ತವೆ. ಜೊತೆಗೆ ಇದನ್ನು ಒಂದು ರೀತಿಯಲ್ಲಿ ಸಂಪ್ರದಾಯದಂತೆ ಹಿರಿಯರು ಆಚರಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಅದನ್ನು ಕಿರಿಯರು ನೋಡಿಕೊಂಡು ತಾವು ಕೂಡ ಅದೇ ಸಂಪ್ರದಾಯವನ್ನು ತಮ್ಮ ಮನೆ- ಮನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಅಳವಡಿಸಿಕೊಳ್ಳುವುದರ ಜೊತೆಗೆ ಅದನ್ನು ಕಾರ್ಯರೂಪಕ್ಕೆ ಹಲವು ಹಬ್ಬಗಳಲ್ಲಿ ತರುತ್ತಲೇ ಬರುತ್ತಿದ್ದಾರೆ. ಈ ಒಂದು ಕೊಡುಕೊಳ್ಳುವಿಕೆ ಹಲವು ಹಬ್ಬಗಳಲ್ಲಿ ಸಾಂಗವಾಗಿ ನೆರವೇರುತ್ತಾ ಬರುತ್ತಿದೆ. ಈ ಹಬ್ಬಗಳಲ್ಲಿ ಕಳಸ-ಕನ್ನಡಿ, ಬಳೆ-ಬಿಚ್ಚೋಲೆ, ಹದಿನಾರು ಸೊಡರು, ಧಾನ್ಯಗಳು, ಕುಪ್ಪುಸದ ಕಣ, ಬೆಲ್ಲದ ಅಚ್ಚು ಇತ್ಯಾದಿಗಳಿಂದ ಅಣಿ ಮಾಡಿದ ಮರದ ಬಾಗಿನ-ಇವನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಇದರ ಜೊತೆಗೆ ನೀರು, ತೆಂಗಿನಕಾಯಿ, ಮಾವಿನಕೂನೆ ಇವುಗಳಿಂದ ಕಳಸ ನಿರ್ಮಿಸಿ ದೇವರನ್ನು ಪೂಜಿಸುವುದು ಕೂಡ ಉಂಟು.
ನೋಡಿ ಈ ಸಂಪ್ರದಾಯ ಎಷ್ಟೊಂದು ಅರ್ಥಪೂರ್ಣವಾಗಿದೆ. ಸಾಮಾನ್ಯವಾಗಿ ವ್ರತಗಳಆಚರಣೆಯಲ್ಲಿ ಕೂಡ ನಾವು ಇವನ್ನೆಲ್ಲ ಗಮನಿಸುತ್ತಾ ಬರಬಹುದು ಅಲ್ಲಿಯೂ ಕೂಡ ಇಂತಹ ಮಂಗಳ ದ್ರವ್ಯಗಳ ಬಳಕೆ ಇದೆ. ಅಲ್ಲದೆ ಅನೇಕ ಹಬ್ಬಗಳಲ್ಲೂ ಕೂಡ ಪ್ರಾತಿನಿಧಿಕವಾಗಿ ಇದರ ಬಳಕೆ ಕಂಡುಬರುತ್ತದೆ. ಉದಾಹರಣೆಗೆ ಗಣಪತಿ ಹಬ್ಬದಲ್ಲಿ ಗರಿಕೆಹುಲ್ಲು, ಶಿವರಾತ್ರಿಯಲ್ಲಿ ಬಿಲ್ವಪತ್ರೆ, ನಾಗಲಿಂಗ ಪುಷ್ಪಗಳು, ಮಾರಿಹಬ್ಬದಲ್ಲಿ ಕೆಂಪು ದಾಸವಾಳ ಮತ್ತು ಕಣಿಗಲೆ ಹೂವುಗಳು ಮಂಗಳ ವಸ್ತುಗಳಾಗುತ್ತವೆ. ಕಳಸ-ಕನ್ನಡಿಗೆ ಕೆಲವರು ಹೊಂಬಾಳೆಯನ್ನೂ ಇನ್ನು ಕೆಲವರು ವೀಳ್ಯದೆಲೆಯನ್ನೂ ಬಳಸುತ್ತಾರೆ. ಬಾಸಿಂಗ, ಕಂಕಣ, ಮಾಂಗಲ್ಯ, ಅರಿಶಿನದ ಬಟ್ಟೆ ಇತ್ಯಾದಿಗಳು ಮದುವೆ ಮುಂಜಿಗಳ ಸಂದರ್ಭದಲ್ಲಿ ಮಂಗಳದ್ರವ್ಯಗಳೆನಿಸಿಕೊಳ್ಳುತ್ತವೆ.
ಮುಖ್ಯವಾಗಿ ಮೇಲ್ಕಂಡಂತೆ ನಾವು ಈ ಮಂಗಳದ್ರವ್ಯ ಪರಿಕರಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಹಸಿರು ಚಪ್ಪರವನ್ನು ವಿಶೇಷವಾಗಿ ಅಂದು ಬಗಿನಿತಾರು, ಬಾಳೆಕಂಬ, ಮಾವಿನಸೊಪ್ಪು, ತೆಂಗಿನಗರಿಗಳನ್ನು ಬಳಸಿ ನಿರ್ಮಿಸುತ್ತಾರೆ. ಇಲ್ಲಿ ಹೊಸತನದ ಸ್ಪರ್ಶ ಯಾವುದೇ ಕಾರ್ಯಕ್ರಮಕ್ಕೆ ಮುನ್ನುಡಿಯಂತಿರುತ್ತದೆ. ತಮ್ಮ ಸುತ್ತಮುತ್ತ ಸಿಗುವ ಅನೇಕ ಬಗೆ ಬಗೆಯ ಫಲಪುಷ್ಪಗಳ ಗೊಂಚಲುಗಳಿಂದ ಅವನ್ನು ಅಲಂಕರಿಸುವುದೂ ಉಂಟು. ಇದೇ ಸಂದರ್ಭದಲ್ಲಿ ಹೊಸಸೀರೆ, ಬಟ್ಟೆಗಳನ್ನು ಅರಿಶಿನದ ನೀರಿನಲ್ಲಿ ಅದ್ದಿ ಉಡಿಸುವುದು, ಐದು ಇಕ್ಕೆಲುಗಳುಳ್ಳ ಅರಿಶಿನದ ಕೊನೆಯನ್ನು ಹಸಿದಾರ ಮತ್ತು ಕಂಬಳಿದಾರಗಳಲ್ಲಿ ಬಂದಿಸಿ ವಧೂವರರ ಕೈಗೆ ಕಂಕಣವೆಂದು ಕಟ್ಟುವುದು ಶುಭವೆಂಬ ನಂಬಿಕೆಯಿದೆ. ಮದುವೆಯಲ್ಲಿ ಧಾರೆ ಎರೆಯುವುದಕ್ಕೆ ಬಳಸುವ ನೀರು ಅಕ್ಕಿಗಳೂ ಇಲ್ಲಿ ಮಂಗಳದ್ರವ್ಯಗಳೆಂದು ಪರಿಗಣಿತವಾಗುತ್ತದೆ. ನಾವು ಮುಖ್ಯವಾಗಿ ಮದುವೆಯ ಸಂದರ್ಭವೇ ಇದಕ್ಕೆ ಸ್ಪಷ್ಟ ಉದಾಹರಣೆ.
ಒಂದು ಗಂಡು ಹೆಣ್ಣಿಗೆ ಮದುವೆ ನಿರ್ಧಾರವಾದಂತೆ ಈ ಮಂಗಳ ದ್ರವ್ಯಗಳ ಬಳಕೆಯ ಭವ್ಯತೆ ಕಂಡುಬರುತ್ತದೆ. ರೀತಿಯಲ್ಲಿ ಅದರ ಕಾರುಬಾರು ಶುರುವಾಗುತ್ತದೆ!. ಅಂದರೆ ಅದರ ಬಳಕೆ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಏಕೆಂದರೆ ಒಂದು ಗಂಡಿಗೆ ಹೆಣ್ಣು ನೋಡಲು ಹೋದಾಗ ಹೆಣ್ಣಿನ ಮನೆಯವರು ಕೂಡ ಮಂಗಳ ದ್ರುವಗಳನ್ನು ಬಳಸುತ್ತಾರೆ. ಅದೇ ರೀತಿ ಗಂಡಿನ ಮನೆಯವರು ಹೆಣ್ಣಿನ ಮನೆಗೆ ಹೋಗುವಾಗಲೂ ಕೂಡ ಮಂಗಳ ದ್ರವ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ.ಅಲ್ಲಿಂದ ಒಂದು ಮುನ್ನುಡಿ ಎನ್ನುವಂತೆ ಪ್ರಾರಂಭವಾಗಿ ನಂತರ ಹೂ ಮುಡಿಸುವ ಶಾಸ್ತ್ರ ಅಥವಾ ಮನಶಾಸ್ತ್ರ ಅಥವಾ ಆಧುನಿಕವಾಗಿ ಹೇಳಬೇಕಾದರೆ ಪ್ರಾರಂಭವಾಗಿ ಎಂಗೇಜ್ಮೆಂಟ್ ಅಲ್ಲದೇ ಇನ್ನು ಮದುವೆಗೆ ಏಳು ಎಂಟು ದಿನ ಬಾಕಿ ಇರುವಾಗಲೇ ಅನೇಕ ಶುಭ ಮಂಗಳಕರ ದ್ರವ್ಯಗಳನ್ನು ಬಳಸುವುದರಿಂದ ಇದರ ಮಹತ್ವವನ್ನು ನಾವು ಕಾಣಬಹುದು.
ಇನ್ನು ಮುಖ್ಯವಾಗಿ ಹೇಳಬೇಕೆಂದರೆ ಮದುವೆಯ ಹೆಣ್ಣು ಮಕ್ಕಳು ದಿನಬಳಕೆಯ ಪರಿಕರಗಳೊಂದಿಗೆ ಮಾಂಗಲ್ಯ, ಮೂಗುತಿ, ಓಲೆ, ಕಾಲುಂಗುರ ಇತ್ಯಾದಿ ಆಭರಣಗಳನ್ನು ಧರಿಸುತ್ತಾರೆ. ನಂತರದಲ್ಲಿ ಚೊಚ್ಚಲ ಗರ್ಭಿಣಿ ಸ್ತ್ರಿಯರಿಗೆ ನಡೆಸುವ ಸೀಮಂತದ ಬಳೆ ತೊಡಿಸುವ ಸಂದರ್ಭದಲ್ಲಿ, ಹಿರಿ ಮಗನ ಮದುವೆಯ ಸಂದರ್ಭದಲ್ಲಿ, ತಾಯಿಗೆ ನೇಮ ಬಿಡಿಸುವ ಸಮಯದಲ್ಲಿ ಹಸಿರು ಸೀರೆ, ಬಳೆಗಳಿಗೆ ವಿಶೇಷ ಮಾನ್ಯತೆ ಉಂಟು. ವೀಳ್ಯೆದೆಲೆ, ಅಡಿಕೆಗಳಿಗೆ ಮಾತ್ರ ಎಲ್ಲ ಸಂದರ್ಭಗಳಲ್ಲೂ ಪ್ರಾಶಸ್ತ್ಯವಿರುವುದು ಕಂಡುಬರುತ್ತದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇದೊಂದು ಶುಭ ಸೂಚನೆ, ಒಂದು ಸಂಪ್ರದಾಯ, ಇಲ್ಲಿ ಮನೆ ಮಾಡಿದೆ. 100 ಕ್ಕೇ 80 ರಷ್ಟು ಈ ರೀತಿಯ ಸಂಪ್ರದಾಯಗಳ ಬಳಕೆಯಲ್ಲಿ ತೊಡಗಿರುತ್ತಾರೆ. ಏಕೆಂದರೆ ನಮ್ಮದು ಭಾರತೀಯ ಸಂಸ್ಕೃತಿ. ಈ ಒಂದು
ಸಂಸ್ಕೃತಿಯಲ್ಲಿ ಈ ಮಂಗಳದ್ರವ್ಯಗಳಿಗೆ ತಮ್ಮದೇ ಆದ ಮಹತ್ವದ ಸ್ಥಾನವಿದೆ. ಜೊತೆಗೆ ಅನೇಕ ನಂಬಿಕೆ ಇದೆ. ಈ ಒಂದು ಸಾಂಸ್ಕೃತಿಕ ಚೌಕಟ್ಟಿನಲ್ಲಿ ನಾವು ಬದುಕುತ್ತಿರುವುದೇ ನಮ್ಮೆಲ್ಲರ ಸೌಭಾಗ್ಯ ಎಂದು ನಾವು ಭಾವಿಸಲೇಬೇಕು. ಈಗ ನಾವು ಜರೂರಾಗಿ ಸಂಪ್ರದಾಯಗಳನ್ನು ನಮ್ಮ ಮುಂದಿನ ಪೀಳಿಗೆಗೂ ಕೂಡ ಮುಂದುವರೆಯುವಂತೆ ನೋಡಿಕೊಳ್ಳಬೇಕು.
ನಮ್ಮ ಯುವಜನತೆ ಈ ನಿಟ್ಟಿನಲ್ಲಿ ತಿಳಿದುಕೊಳ್ಳಲೇಬೇಕು. ಒಟ್ಟಿನಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಈ ಮಂಗಳ ದ್ರವ್ಯಗಳ ಬಳಕೆ ಇದ್ದೇ ಇದೆ. ಒಮ್ಮೊಮ್ಮೆ ನಾವು ಆಚರಿಸದೆ ಇದ್ದರೂ, ಕೂಡ ನಮ್ಮ ಅಕ್ಕಪಕ್ಕದವರು ಇದರ ಬಗ್ಗೆ ತಿಳಿದುಕೊಂಡು ತಮ್ಮ ತಮ್ಮ ಶುಭ ಕಾರ್ಯಗಳಲ್ಲಿ ಕೂಡ ಇದನ್ನು ಬಳಸುತ್ತಾರೆ.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಬರಹ ಸೊಗಸಾಗಿದೆ.
ಚೆನ್ನಾದ ಬರೆಹ..ಅದಕ್ಕೆ ಪೂರಕ ಚಿತ್ರ.. ಎರಡೂ ಸೊಗಸಾಗಿದ್ದು ಓದಿಗೆ..ನೋಟಕ್ಕೆ.. ಮುದತಂದಿತು.. ಸಾರ್..
ಪ್ರತಿಯೊಂದು ಸಂಪ್ರದಾಯ, ಆಚರಣೆಯ ಹಿಂದೆಯೂ ಒಂದು ಕಾರಣ ಇದ್ದೇ ಇರುತ್ತದೆ. ಸೊಗಸಾಗಿದೆ ಬರಹ.
ನಮ್ಮ ಹಿರಿಯರು ರೂಢಿಸಿಕೊಂಡು ಬಂದ ಪ್ರತಿಯೊಂದು ಸಂಪ್ರದಾಯವೂ ವೈಜ್ಞಾನಿಕ ತಳಹದಿಯ ಮೇಲೆ ರೂಪಿಸಲ್ಪಟ್ಟಿದೆ ಎಂಬುದು ಈಗೀಗ ಜನರ ಅರಿವಿಗೆ ಬರುತ್ತಿದೆ. ಸಾಕಷ್ಟು ಮಾಹಿತಿಗಳನ್ನು ಹೊತ್ತ ಲೇಖನವು ಚೆನ್ನಾಗಿದೆ.
ಮಂಗಳದ್ರವ್ಯಗಳ ಕುರಿತಾದ ಮಂಗಳಕರ ಲೇಖನ ಸಂಪ್ರದಾಯದ ರೀತಿ ರಿವಾಜುಗಳನ್ನು ಎತ್ತಿ ಹಿಡಿಯುವಂತಿದೆ.
ಸುಸಂಸ್ಕೃತ ಸಂಸ್ಕೃತಿಯ ದ್ಯೋತಕವಾದ ಮಂಗಳದ್ರವ್ಯ ಕುರಿತ ಬರೆಹ ಸೊಗಸಾಗಿದೆ. ಧನ್ಯವಾದ ಸರ್