ಮಕ್ಕಳಿಗಿರಲಿ ಪರಿಸರದ ಪಾಠ

Share Button


ಪರೀಕ್ಷೆಗಳು ಮುಗಿದು ಶಾಲೆಗೆ ರಜೆ ಸಿಕ್ಕ ಖುಷಿಯಲ್ಲಿ ಮಕ್ಕಳು ಮನೆಯಲ್ಲಿರದೆ, ತೋಟ ಹೊಲ ಗದ್ದೆ ಕಾಡುಮೇಡು ಅಲೆಯುತ್ತಾ, ಹೊಸ ಹೊಸ ಅನುಭವಗಳನ್ನು ಕಲೆ ಹಾಕುತ್ತಾ, ಅಲ್ಲಿ ಸಿಗುವ ಹಣ್ಣು ಹಂಪಲು, ಹೂವು ಕಾಯಿ, ಗೊಂಚಲು, ಹರಿವ ನೀರ ತೊರೆ ಕೆರೆಕುಂಟೆಗಳಲ್ಲಿ ಮಿಂದು ರಜೆಯ ಮಜವನ್ನು ಅತ್ಯಂತ ಉಲ್ಲಾಸದಾಯಕವಾಗಿ ಕಳೆಯುತ್ತಿದ್ದ ಕಾಲ ಅಂದಿತ್ತು. ರಜೆ ಬಂತೆಂದರೆ ಸಾಕು ಅಜ್ಜ ಅಜ್ಜಿಯ ಮನೆಗಳು ಮಕ್ಕಳ ಕಲರವದಿಂದ ತುಂಬಿಕೊಳ್ಳುತ್ತಿದ್ದವು. ಮೊಮ್ಮಕ್ಕಳ ಖುಷಿಗೆ ಅಜ್ಜ-ಅಜ್ಜಿಯರು ಮೊದಲೇ ಪೂರ್ವ ತಯಾರಿ ಮಾಡಿಕೊಂಡಿದ್ದು ಅವರು ಬಂದ ಕೂಡಲೇ ದಿನಕ್ಕೊಂದು ತಿನಿಸು ಕ್ಷಣಕೊಂದು ಆಟ ಮನಸ್ಸಿಗೆ ಮುದ ನೀಡುವ ವಾತಾವರಣವನ್ನು ಸೃಷ್ಟಿ ಮಾಡಿಬಿಡುತ್ತಿದ್ದರು.

ಬೇಸಿಗೆ ರಜೆ ಎಂಬುದು ಮಕ್ಕಳ ಮನೋ ದೈಹಿಕ ವಿಕಾಸಕ್ಕೆ ಅಸಂಪ್ರದಾಯಿಕ ಅನೌಪಚಾರಿಕ ಕಲಿಕೆಯ ಚಟುವಟಿಕೆಗಳನ್ನು ಮಾಡಿ ಕಲಿ ನೋಡಿ ತಿಳಿ ತತ್ವದ ಅಡಿಯಲ್ಲಿ ಸಂಘಟಿಸುವ ಮಕ್ಕಳು ಸಕ್ರಿಯವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗುತ್ತಿತ್ತು. ಅತಿಯಾದ ಕಟ್ಟುನಿಟ್ಟಿನ ಚೌಕಟ್ಟಿಲ್ಲದೆ ಅಜ್ಜಿಯರ ಪ್ರೀತಿಯ ಬೇಲಿಯ ನಡುವೆ ಅರಳುವ ಸುಮಗಳಂತೆ ಮಕ್ಕಳ ಮಾನಸಿಕ ಆರೋಗ್ಯ ವಿಕಸಿತರಗೊಳ್ಳುತ್ತಿತ್ತು. ಶಾಲೆಯ ಸಮಯದ ಕಟ್ಟುಪಾಡು ಇಲ್ಲ ಮನೆಯ ತಂದೆ ತಾಯಿಗಳ ಕಟ್ಟುನಿಟ್ಟಿನ ನಿಯಮಗಳಿಲ್ಲ ಆತ್ಮೀಯವಾದ ಪ್ರೀತಿಯ ವಾತಾವರಣದಲ್ಲಿ ಮಕ್ಕಳಿಗೆ ಸರಿ ತಪ್ಪುಗಳ ವ್ಯಾಖ್ಯಾನ ಸ್ವ ಅನುಭವದಿಂದ ಸಿಗುತ್ತಿತ್ತು.

ಕೆಲಸದ ಸಲುವಾಗಿ ತಂದೆ ತಾಯಿಯರು ದೂರದ ನಗರಗಳಿಗೆ ವಲಸೆ ಹೋಗಿ ನಗರ ಕೇಂದ್ರಿತ ಬದುಕಿಗೆ ಒಗ್ಗಿಕೊಂಡಿದ್ದಾಗ ಸದಾ ಕದ ಹಾಕಿ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕಿ ಅವರ ಮಾನಸಿಕ ಬೌದ್ಧಿಕ ದೈಹಿಕ ಚಟುವಟಿಕೆಗಳಿಗೆ ಬಿಗಿಯಾದ ಚೌಕಟ್ಟು ಇರುವುದರಿಂದ ಮಕ್ಕಳು ರಜೆಯನ್ನು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಕಾರಣ ರಜೆ ಬಂದ ಕೂಡಲೇ ಪಂಜರದ ಬಂಧನ ಕಳಚಿ ಸ್ವಚ್ಛಂದವಾಗಿ ಗರಿಬಿಚ್ಚಿ ಹಾರುವ ಪಕ್ಷಿಗಳ ಹಾಗೆ ಮಕ್ಕಳು ಹಳ್ಳಿಗಳತ್ತ ಓಡೋಡಿ ಬಂದು ಹಿರಿಯರ ಗೂಡನ್ನು ಸೇರಿಕೊಳ್ಳುತ್ತಿದ್ದವು. ಅಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವಾತಾವರಣ ಹಾಗೂ ಬಿಗಿಹಿಡಿತದ ಬಂಧನ ಇರದ ಕಾರಣ ಮಕ್ಕಳು ಹಳ್ಳಿಯ ತಾತ ಅಜ್ಜಿಯರ ಮನೆಗಳನ್ನು ಆಶ್ರಯಿಸುತ್ತಿದ್ದರು. ಹಳ್ಳಿಯ ಬದುಕಿನ ಸಹಜತೆ ಪ್ರೀತಿಯ ಆರ್ದ್ರತೆ ಸಂಬಂಧಗಳ ಭದ್ರತೆ ಸ್ನೇಹದ ಅಗಾಧತೆ ಎಲ್ಲವನ್ನು ಆಸ್ವಾದಿಸುವ ಎಳೆ ಮನಸುಗಳು ಬದುಕಿನಲ್ಲಿ ಪರಿಪಕ್ವತೆಯನ್ನು ಹೊಂದಲು ರಜೆ ಅತ್ಯಂತ ಸಹಕಾರಿಯಾಗಿರುತ್ತಿತ್ತು. ಕಾಲಮಾನಕ್ಕೆ ತಕ್ಕಂತೆ ದಸರಾ ರಜೆ, ಬೇಸಿಗೆ ರಜೆ, ಕ್ರಿಸ್ಮಸ್ ರಜೆ ಹೀಗೆ ಮಕ್ಕಳಿಗೆ ಆಗಿದ್ದಾಗೆ ಸ್ವಚ್ಛಂದತೆಯನ್ನು ಕೊಡಲು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ರಜೆಗಳನ್ನು ನಿಗದಿಪಡಿಸಿರುತ್ತಿದ್ದರು.

PC: Internet

ಆಧುನಿಕ ಬದುಕಿಗೆ ಒಗ್ಗಿಗಿಕೊಳ್ಳುತ್ತಾ ನಾವು ನಮ್ಮ ಮಕ್ಕಳನ್ನು ಮೇಲೆ ಹೇಳಿದ ಪ್ರಕ್ರಿಯೆಗಳಿಂದ ದೂರ ಇಡುತ್ತಾ ಬಂದಿದ್ದೇವೆ. ತಂದೆ ತಾಯಿಗಳಿಗೆ ಕೆಲಸದ ಒತ್ತಡ ಹಳ್ಳಿಗಳಲ್ಲಿ ಹಿರಿಯರು ಬಂಧುಗಳಿಲ್ಲದೆ ಹಳ್ಳಿಯ ಒಡನಾಟ ದಿನೇ ದಿನೇ ದೂರವಾಗುತ್ತಾ ಆಧುನಿಕ ತಂತ್ರಜ್ಞಾನ ಕೇಂದ್ರಿತ ವ್ಯವಸ್ಥೆಯೊಳಗೆ ಮಕ್ಕಳನ್ನು ಕಟ್ಟಿ ಹಾಕುತ್ತಿದ್ದೇವೆ. ಟಿವಿ ಮೊಬೈಲ್ ಕಂಪ್ಯೂಟರ್ ಇತ್ಯಾದಿ ವಸ್ತುಗಳ ಮುಂದೆ ಮಕ್ಕಳು ದೈಹಿಕ ಮಾನಸಿಕ ಸ್ವಾಸ್ಥ್ಯ ಕಳೆದುಕೊಳ್ಳುವಂತಹ ಚಟುವಟಿಕೆಗಳಿಗೆ ಹೊಂದಿಸುತ್ತಿದ್ದೇವೆ. ಮಗು ಹಠ ಮಾಡದೆ ತಮ್ಮ ಕೆಲಸಗಳಿಗೆ ಆಡ್ಡಿ ಮಾಡದೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟರೆ ಅದೇ ಪೋಷಕರಿಗೆ ನಿಟ್ಟುಸಿರು ಬಿಡುವಂತಾಗುತ್ತದೆ. ಒಂದು ದಿನ ರಜೆಯನ್ನು ಸಂಭಾಳಿಸುವಲ್ಲಿ ತಂದೆ ತಾಯಿಗಳು ಹೈರಾಣಾಗಿ ಹೋಗುತ್ತಾರೆ . ಅಂತದರಲ್ಲಿ ತಿಂಗಳಗಟ್ಟಲೆ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗದ ಕಾರಣ ಮಕ್ಕಳಿಗೆ ಕೋಚಿಂಗ್ ಕ್ಲಾಸ್ಗಳು ಕಂಪ್ಯೂಟರ್ ಕ್ಲಾಸ್ಗಳು ಸಮ್ಮರ್ ಕ್ಯಾಂಪ್ಗಳು ಹೀಗೆ ಅನೇಕ ಆಧುನಿಕ ಕಲಿಕಾ ಕೇಂದ್ರಗಳಲ್ಲಿ ಮಕ್ಕಳನ್ನು ತೊಡಗಿಸಿ ಸ್ವಚ್ಛಂದವಾಗಿ ಅರಳಬೇಕಾಗಿದ್ದ ಬಾಲ್ಯವನ್ನು ತಾಂತ್ರಿಕ ವಸ್ತುಗಳ ಗುಲಾಮರಾಗುವಂತೆ ಮಾಡಲಾಗುತ್ತಿದೆ. ತಂದೆ ತಾಯಿಗಳಿಗೆ ಹಣ ಖರ್ಚಾಗುವುದು ಮುಖ್ಯವಲ್ಲ ತಮ್ಮ ಮಕ್ಕಳು ಕಿರಿಕಿರಿ ಮಾಡದಂತೆ ಯಾವುದೋ ಒಂದು ಚಟುವಟಿಕೆಯಲ್ಲಿ ತೊಡಗಿಸಿ ಅದರಿಂದ ತಾವು ಮುಕ್ತರಾಗಲು ಬಯಸುತ್ತಾರೆ. ಇದರಿಂದ ಮನುಷ್ಯರ ಬಾಂಧವ್ಯಕ್ಕಿಂತ ವಸ್ತುಗಳ ಸಾಂಗತ್ಯದಿಂದ ಮಕ್ಕಳು ಕ್ರಿಯಾಶೀಲತೆಯನ್ನು ಕಳೆದುಕೊಂಡು ಯಾಂತ್ರಿಕ ಬದುಕಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಹಾಗಾಗಿ ಮಕ್ಕಳು ದೈಹಿಕ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿ ಎಲ್ಲರಿಂದ ದೂರವಾಗಿ ಒಂಟಿಯಾಗಿ ಬದುಕುವುದನ್ನು ರೂಢಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ವ್ಯವಸ್ಥೆಗಳು ಕೂಡ ಮಕ್ಕಳು ಸ್ವಚ್ಛಂದವಾಗಿ ಸ್ವತಂತ್ರವಾಗಿ ವ್ಯವಹರಿಸಲು ಅವಕಾಶ ನೀಡದಂತೆ ಯಾವುದಾದರೂ ಒಂದು ಯೋಚನೆಗಳಿಂದ ಮಕ್ಕಳ ಚಟುವಟಿಕೆಗಳನ್ನು ಕಟ್ಟಿ ಹಾಕುವ ಮೂಲಕ ಅವರಲ್ಲಿನ ಸೃಜನಶೀಲತೆಗೆ ಹೊಡೆತ ನೀಡಲಾಗಿದೆ. ಮಕ್ಕಳು ವರ್ಷಪೂರ್ತಿ ಓದಿ ಪರೀಕ್ಷೆ ಬರದು ಸ್ವಲ್ಪ ಬಿಡುವು ಸಿಗುವುದೆಂದು ನಿರೀಕ್ಷಿಸುತ್ತಿರುವಾಗಲೇ ದುಡ್ಡು ಮಾಡುವ ದಂಧೆಯಾಗಿರುವ ಬೇಸಿಗೆ ಶಿಬಿರದಲ್ಲಿ ಬಲವಂತವಾಗಿ ತೊಡಗಿಸುವುದರಿಂದ ಅವರಲ್ಲಿನ ಕ್ರಿಯಾಶೀಲತೆ ಕುಂಠಿತಗೊಂಡು ವರ್ಷದ ಎಲ್ಲಾ ಕಾಲದಲ್ಲೂ ಶಿಸ್ತು ಎಂಬ ಚೌಕಟ್ಟಿನಲ್ಲಿ ನಿರಂತರ ಕಲಿಕೆಯ ಒತ್ತಡದಲ್ಲಿ ಬಂಧಿಸಿರುವ ಹುನ್ನಾರ ನಡೆದಿದೆ. ಸರ್ಕಾರಗಳು ಸಹ ಮಕ್ಕಳು ತಮಗೆ ಸ್ವಚ್ಛಂದದ ರಜೆಯ ಮಜವನ್ನು ಅನುಭವಿಸಲು ಬಿಡದೆ ಶಾಲೆಗಳಲ್ಲಿ ಬಿಸಿಯೂಟದ ಆಯೋಜನೆ ಮಾಡಿ ಅವರು ಎಲ್ಲಿಯೂ ಹೋಗದಂತೆ ತಡೆಹಿಡಿಯಲಾಗುತ್ತಿದೆ. ಪೌಷ್ಟಿಕ ಆಹಾರ ಶಾಲೆಯಲ್ಲಿ ಕೊಡುವ ಅನ್ನ ಸಾಂಬಾರ್ ನಿಂದ ಸಿಗುವುದಿಲ್ಲ. ಬದಲಾಗಿ ಹಳ್ಳಿಗಳೆಡೆಗೆ ಮಕ್ಕಳು ತೆರಳಿ ಅಲ್ಲಿ ಸಿಗುವ ಕಾಡು ಹಣ್ಣುಗಳನ್ನು ಸವಿಯುವ ಮೂಲಕ ಬಾವಿ ಕೆರೆ ಹಳ್ಳಗಳಲ್ಲಿ ಈಜುವ ಮೂಲಕ ಪ್ರಕೃತಿಯೊಂದಿಗೆ ಬೆರೆಯುವ ಮೂಲಕ ಸಹಜವಾಗಿ ಮಗು ಸದೃಢವಾಗಿ ಬೆಳೆಯುತ್ತದೆ. ಆದರೆ ಈ ಯೋಚನೆಗಳು ಅವರನ್ನು ಮತ್ತೆ ಶಾಲೆಗಳಲ್ಲೇ ಕೂಡಿ ಹಾಕುವ ಅವರ ಸ್ವಚ್ಛಂದತೆಯನ್ನು ಕಿತ್ತುಕೊಳ್ಳುವ ಬಹುದೊಡ್ಡ ಹುನ್ನಾರವಾಗಿದೆ.

ಮಕ್ಕಳಿಗೆ ನೈತಿಕ ಶಿಕ್ಷಣ ಹಳ್ಳಿಗಳ ಪರಿಸರದಲ್ಲಿ ಯಥೇಚ್ಛವಾಗಿ ಸಿಗುತ್ತದೆ ಆದರೂ ಇವತ್ತಿನ ಮಕ್ಕಳು ಹಳ್ಳಿಗಳೆಡೆ ಬಂದರೆ ಹೆತ್ತವರ ಪ್ರತಿಷ್ಠೆಗೆ ದಕ್ಕೆ ಉಂಟು ಮಾಡುವಂತೆ ಭಾಸವಾಗಿ ಅತ್ತ ಕಳುಹಿಸಲು ಪೋಷಕರು ಯೋಚಿಸುವಂತೆ ಮಾಡಿದೆ. ಒಬ್ಬರು ಅಥವಾ ಇಬ್ಬರು ಮಕ್ಕಳನ್ನು ಸುರಕ್ಷತೆ ಇಲ್ಲದ ಹಳ್ಳಿ ಪರಿಸರಕ್ಕೆ ಕಳಿಸಲು ಹಿಂಜರಿಯುವಂತೆ ಮಾಡಿದೆ. ಆದರೆ ನಗರ ಜೀವನದಷ್ಟು ಅಸುರಕ್ಷಿತವಲ್ಲ ಹಳ್ಳಿ ಜೀವನ. ಇಲ್ಲಿ ಬಾಂಧವ್ಯಗಳ ಕೊಂಡಿ ಬೆಸೆದು ಭಾವನಾತ್ಮಕ ರಕ್ಷೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷೆ ಇಲ್ಲದ ಅನುಭವದ ಪಾಠ ಸಿಗುತ್ತದೆ. 

ರಜೆ ಸಿಕ್ಕ ಕಾಲಕ್ಕೆ ಮಕ್ಕಳು ಆದಷ್ಟು ಜೀವಂತ ಪರಿಸರದಲ್ಲಿ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಸಮಯವನ್ನು ಕಳೆಯಬೇಕು. ಇದರಿಂದ ಮಗು ಪರಿಸರದಲ್ಲಿ ಸಿಗುವ ಪ್ರಾಣಿ ಪಕ್ಷಿಗಳ ನಡವಳಿಕೆ ಜೀವ ವೈವಿಧ್ಯತೆಯ ಸಾಕ್ಷಾತ್ಕಾರವನ್ನು ತನ್ನ ಅನುಭವಕ್ಕೆ ತಂದುಕೊಳ್ಳಲು ಸಹಾಯಕವಾಗುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಮಗುವನ್ನು ಕೂಡಿ ಹಾಕುವ ಬದಲು ಸ್ವಚಂದ ಪರಿಸರದಲ್ಲಿ ಸಾವಕಾಶವಾಗಿ ಓಡಾಡುತ್ತಾ ಪ್ರತಿಯೊಂದು ಹೆಜ್ಜೆಗೂ ಏನಾದರೂ ಒಂದು ಹೊಸತನ್ನು ಹುಡುಕುವ ಕಲಿಯುವ ಅದರ ಬಗ್ಗೆ ವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡುವ ಸಾಮರ್ಥ್ಯವನ್ನು ಮಗು ಬೆಳೆಸಿಕೊಳ್ಳುತ್ತದೆ. ಇಲ್ಲಿ ಹಿರಿಯರಾದವರು ಮಗುವನ್ನು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿ ಪರಿಸರದ ಯಾವೊಂದು ವಸ್ತುವಿಗೂ ಧಕ್ಕೆಯಾಗದಂತೆ ಹಾಗೂ ಯಾವುದೇ ವಸ್ತುವಿನಿಂದ ಮಗುವಿಗೆ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಶಾಲೆ ಪ್ರಾರಂಭವಾದಾಗಿನಿಂದ ಮುಕ್ತಾಯದ ದಿನದವರೆಗೆ ಮಗು ಪುಸ್ತಕದ ಕಲಿಕೆಯನ್ನು ತನಗೆ ಬೇಕೊ ಬೇಡವೋ ಇಷ್ಟವೋ ಕಷ್ಟವೋ ಕಲಿಕೆಯಲ್ಲಿ ತೊಡಗಿರುತ್ತದೆ. ಇಲ್ಲಿ ಅದಕ್ಕೆ ಕಡಿವಾಣಗಳು ಜಾಸ್ತಿ. ನಿಯಮ ಮೀರಿದರೆ ಶಿಕ್ಷೆ ನೀಡುವ ಪರಿಪಾಠ ಇರುತ್ತದೆ. ಇಂತಹ ಬಿಗುವಿನ ವಾತಾವರಣದಿಂದ ಮಗು ಬಿಡುಗಡೆ ಹೊಂದಿ ರಜೆ ಅವಧಿಯಲ್ಲಿ ತನಗೆ ಇಷ್ಟ ಬಂದ ರೀತಿಯಲ್ಲಿ ಅನೌಪಚಾರಿಕ ಕಲಿಕೆಯಲ್ಲಿ ಔಪಚಾರಿಕ ಕಲಿಕೆಗೆ ಪೂರಕವಾದ ವಿಷಯಾಂಶಗಳನ್ನು ಕಲಿಯುತ್ತಾ ಹೋಗುವುದರಿಂದ ಮಗುವಿನ ಸ್ಪ್ರತಿಪಟಲದಲ್ಲಿ ಅದು ಅಚ್ಚಳಿಯದೆ ಉಳಿಯುತ್ತದೆ. ಅದರಿಂದ ಮಗುವಿನ ಜೀವನದಲ್ಲಿ ಕಲಿಕೆ ಎಂಬುದು ಶಾಶ್ವತವಾಗಿ ಉಳಿಯುತ್ತದೆ.

 ಕೊನೆಯಲ್ಲಿ ಹೇಳುವುದಾದರೆ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಗು ರಜೆ ಅವಧಿಯಲ್ಲಿ ಯಾವುದೇ ಕಟ್ಟು ನಿಟ್ಟಿನ ನಿಯಮ ಪಾಲನೆ ಇಲ್ಲದೆ ಅಜ್ಜ ಅಜ್ಜಿಯರ ಅಥವಾ ಪೋಷಕರ ಬಂಧುಗಳ ನೆರವಿನೊಂದಿಗೆ ಅವರ ಪ್ರೀತಿಯ ವಾತ್ಸಲ್ಯಗಳ ಆಸ್ವಾದನೆಯ ಜೊತೆಗೆ ಪರಿಸರದ ಆಗು ಹೋಗುಗಳನ್ನು, ಪ್ರತಿಕ್ಷಣದಲ್ಲಿ ನೈಸರ್ಗಿಕವಾಗಿ ನಡೆಯುವ ಬದಲಾವಣೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಹೊಂದಿಕೊಳ್ಳಲು ಮಗುವಿಗೆ ಪೂರಕ ವಾತಾವರಣ ರಜೆಯ ಮೂಲಕ ಸಾಕಾರವಾಗಬೇಕು. ವರ್ಷಪೂರ್ತಿ ಕಲಿತ ಮಗುವನ್ನು ಮತ್ತೆ ರಜಾ ಅವಧಿಯ ಕಲಿಕಾ ಶಿಬಿರಗಳ ಹೆಸರಿನಲ್ಲಿ ದುಬಾರಿ ಹಣ ಖರ್ಚು ಮಾಡಿ ಬಲವಂತದ ಕಲಿಕೆ ಮೂಡಿಸುವುದು ಒಳ್ಳೆಯ ಬೆಳವಣಿಗೆಯಾಗಲಾರದು. ಅರಳಬೇಕಾದ ಮಗುವಿನ ಮನಸ್ಸು ಬಿಗುವಿನ ವಾತಾವರಣದಲ್ಲಿ ಮುದುಡಬಾರದು. ಇಂದು ಮರೆಯಾಗುತ್ತಿರುವ ಅದೆಷ್ಟೋ ಗ್ರಾಮೀಣ ಕ್ರೀಡೆಗಳು ಚಟುವಟಿಕೆಗಳು ಮತ್ತೆ ಮಕ್ಕಳಿಗೆ ಸಿಗುವಂತಾಗಬೇಕು. ಅದಕ್ಕಾಗಿ ಮಗು ರಜೆಯನ್ನು ಶಾಲೆಯಿಂದ ಆಚೆ ಬಯಲ ಆಲಯದಲ್ಲಿ ಕಲಿಸುವ ವ್ಯವಸ್ಥೆಯನ್ನು ಪೋಷಕರು ಮಾಡಿಕೊಡಬೇಕು. ಬೇಸಿಗೆ ಶಿಬಿರಗಳಂತಹ ಹಣ ಮಾಡುವ ದಂಧೆಗೆ ಮಕ್ಕಳು ಬಲಿಪಶುವಾಗದಂತೆ ಎಚ್ಚರ ವಹಿಸಬೇಕು. ಮಗು ಪರಿಸರದಲ್ಲಿ ಉಚಿತವಾಗಿ ಸಿಗುವ ಎಲ್ಲವನ್ನು ಮನಃಸ್ಪೂರ್ತಿಯಾಗಿ ಅನುಭವಿಸಬೇಕು. ಆಗಲೇ ಮಗುವಿನ ಮುಂದಿನ ಶೈಕ್ಷಣಿಕ ಕಲಿಕೆಗೆ ಅದು ಹೊಸ ಆಯಾಮವನ್ನು ತೆರೆದಿಡುತ್ತದೆ. ಆಗ ಮಗು ಪರಿಸರದಲ್ಲಿ ಪಡೆದ ಅನುಭವವನ್ನು ಶಾಲೆಯ ಕಲಿಕಾ ಪರಿಸರದಲ್ಲಿ ಪಠ್ಯ ಪುಸ್ತಕಗಳಿಂದ ಸಿಗುವ ಜ್ಞಾನದ ಜೊತೆಗೆ ಹೋಲಿಕೆ ಮಾಡಿ ತನ್ನ ಜ್ಞಾನವನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹಾಗಾಗಿ ಎಲ್ಲ ಪೋಷಕರು ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗಬೇಕೆಂದಲ್ಲಿ ಮಕ್ಕಳನ್ನು ರಜೆಯ ಮಜದಲ್ಲಿ ಮಿಂದೇಳುವಂತೆ ಮಾಡುವ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು. ಪಂಜರದೊಳಗಿನ ಹಕ್ಕಿಯನ್ನು ಹಾರಿಬಿಟ್ಟು ಅದರ ಸಂತೋಷವನ್ನು ಆಸ್ವಾದಿಸಬೇಕು. ಆಧುನಿಕ ವ್ಯವಸ್ಥೆಗಳು ಏನೇ ಅನುಕೂಲಗಳನ್ನು ಮಾಡಿಕೊಟ್ಟರು ಆನಂದದಿಂದ ಕಲಿಯುವ ಪರಿಸರದ ಪಾಠ ಮಕ್ಕಳಿಗೆ ಸಿಗಬೇಕು. ಅದಕ್ಕೆ ಹಿರಿಯರು ಹೇಳಿರುವುದು ಮಕ್ಕಳಿಸ್ಕೂಲ್ ಮನೆಲ್ಲ್ವೆ ?!!

-ಅಮು ಭಾವಜೀವಿ ಮುಸ್ಟೂರು, ದಾವಣಗೆರೆ

5 Responses

  1. Hema Mala says:

    ಸಕಾಲಿಕ ಬರಹ, ಸೊಗಸಾಗಿದೆ

  2. ಸಕಾಲಿಕ ಬರಹ..ಈಗಿನಪೋಷಕರು ಸ್ವಲ್ಪ..ಈ ಬಗ್ಗೆ ಚಿಂತನೆ ಗೈದರೆ ಒಳಿತು… ಸಾದ್ಯವೇ…ನಮ್ಮ ಬಾಲ್ಯವೇ ಚೆಂದಿತ್ತು..ಈಗಿನ ಹುಡುಗರನ್ನು ನೋಡಿ ದರೆ ಅಯ್ಯೋ ಎನ್ನಿಸುವುದಂತೂ ಸತ್ಯ..ಉತ್ತಮ ಲೇಖನ ಸಾರ್..

  3. ನಯನ ಬಜಕೂಡ್ಲು says:

    ಇಂದಿನ ವಾಸ್ತವವನ್ನು ಬಿಂಬಿಸುವ ಬರಹ

  4. ಶಂಕರಿ ಶರ್ಮ says:

    ಪ್ರಸ್ತುತ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು, ಅವರ ಜೊತೆಗೆ ಅವರ ಪೋಷಕರನ್ನೂ ಎಚ್ಚರಿಸುವ ಸಕಾಲಿಕ ಬರಹ.

  5. Padma Anand says:

    ಒಳ್ಳೆಯ ಲೇಖನ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ್ಯಾರು? ಇಂದಿನ ಪೋಷಕರುಗಳು ಯಾರ ಮಾತಿಗೂ ಕಿವಿಕೊಡದಂತಾಗಿರುವುದು ವಿಷಾದದ ಸಂಗತಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: