ಜಂಗಮಜ್ಯೋತಿ ಅಲ್ಲಮಪ್ರಭು.
ಸಮಾಜವು ಮಾನವನ ಬದುಕಿಗಾಗಿಯೇ ಇರುವ ರಂಗಭೂಮಿ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗಿರುವುದು ಇತಿಹಾಸದ ಪುಟಗಳಿಂದ ನಮಗೆಲ್ಲ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು ದೂರತಳ್ಳಿ ಹೊಸದನ್ನು ನೆಲೆಗೊಳಿಸಬೇಕಾದರೆ ಸಮಾಜದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಕ್ರಾಂತಿ ಎನ್ನಬಹುದು. ಸಮಾಜದ ಜನರು ಇಲ್ಲಿನವರೆಗೆ ಜೋತುಬಿದ್ದ ಹಳೆಯದನ್ನು ಅಷ್ಟು ಸುಲಭವಾಗಿ ಬಿಡುವುದಾಗಲೀ, ಹೊಸದಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಆದರೆ ಅಂತಹ ಸಂದರ್ಭದಲ್ಲಿ ಸಾಮಾಜಿಕ ಬದಲಾವಣೆಯನ್ನು ತರಬಯಸುವ ವಿಚಾರವಾದಿಗಳು ಹಳೆಯದರಲ್ಲಿ ಒಪ್ಪವಾಗಿರುವುದನ್ನು ಬಳಸಿಕೊಂಡು ಹೊಸ ವಿಚಾರಗಳನ್ನು ಮಂಡಿಸುತ್ತಾ ಜನರನ್ನು ತಿದ್ದುತ್ತಾ ಒಟ್ಟಾರೆ ಸಮಾಜಕ್ಕೆ ಒಳ್ಳಿತಾಗುವಂತೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇಂತಹ ಕಾರ್ಯಗಳು ಕಾಲಕಾಲಕ್ಕೆ ನಡೆಯುತ್ತಾ ಬಂದಿವೆ.
ಹನ್ನೆರಡನೆಯ ಶತಮಾನದ ಇತಿಹಾಸವನ್ನು ಪರಿಶೀಲಿಸಿದಾಗ ಬಸವಾದಿ ಶರಣರು ಮಾಡಿದ ತ್ರಿವಿಧ ಕ್ರಾಂತಿ (ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ) ಮೈಲುಗಲ್ಲಾಗಿ ನಿಂತು ಎಲ್ಲರ ಗಮನ ಸೆಳೆಯುತ್ತದೆ. ಇಡೀ ಮಾನವ ಸಮಾಜವನ್ನು ಮೇಲು ಕೀಳೆನ್ನದೆ ಒಂದುಗೂಡಿಸಿ ಏಕದೇವೋಪಾಸನೆಯನ್ನು ಬೋಧಿಸಿ ಸಮಾನತೆ ಹಾಗೂ ಗೌರವಾನ್ವಿತ ನೆಲೆಗಟ್ಟಿನ ಮೇಲೆ ನಿಲ್ಲಿಸುವ ಮಹೋದ್ದೇಶದ ಯೋಜನೆ ಇದು. ಇಂತಹ ಪ್ರಯತ್ನ ಮಾಡಿದ ಕ್ರಾಂತಿಕಾರಿ, ವಿಶ್ವಮಾನವ, ಭಕ್ತಿಭಂಡಾರಿ ಎಂಬೆಲ್ಲ ಅಭಿದಾನವನ್ನು ಹೊತ್ತ ಅಪ್ರತಿಮ ಶರಣ ಚೈತನ್ಯಮೂರ್ತಿ ಬಸವಣ್ಣನವರು. ಬಸವನ ಬಾಗೇವಾಡಿಯಲ್ಲಿ ಜನಿಸಿ ಕೂಡಲ ಸಂಗಮದಲ್ಲಿ ಬೆಳೆದು ಕಲ್ಯಾಣವನ್ನು ತನ್ನ ಕಾರ್ಯಕ್ಷೇತ್ರವಾಗಿಸಿಕೊಂಡು ಕ್ರಾಂತಿಯ ನೇತೃತ್ವವನ್ನು ವಹಿಸಿದ ಇವರ ಪ್ರೇರಣೆಯಲ್ಲಿ ಅರಳಿದ ಹೂಗಳು ಅಸಂಖ್ಯಾತ, ಅಪರಿಮಿತ. ಅವರುಗಳು ಕೊಟ್ಟಂತಹ ವಚನ ಸಾಹಿತ್ಯವಂತೂ ಅಮೂಲ್ಯ. ವಚನವೆಂದರೆ ಗದ್ಯವೂ ಅಲ್ಲದ, ಪದ್ಯವೂ ಅಲ್ಲದ ಎರಡರ ಮಿಶ್ರಿತವಾದ ಅನುಭಾವದ, ಅನುಭವದ ಮೂಸೆಯಿಂದ ಹೊರಬಂದ ಮಾತುಗಳು. ಇದರಿಂದ ಶರಣರು ಜನವಾಣಿಯನ್ನು ದೇವವಾಣಿಯ ಮಟ್ಟಕ್ಕೇರಿಸಿದರು. ಹರಿದು ತಿನ್ನುವುದಲ್ಲ, ತಿರಿದು ತಿನ್ನುವುದಲ್ಲ, ದುಡಿದು ತಿನ್ನುವುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಸರ್ವಸಮಾನತೆಯ ಹರಿಕಾರರು. ಆತ್ಮಾವಲೋಕನ, ಆತ್ಮಶೋಧನೆ, ಆತ್ಮನಿವೇದನೆ, ವ್ಯಕ್ತಿತ್ವ ವಿಕಸನದ ಜೊತೆಗೆ ಸಮುದಾಯದ ಜಾಗೃತಿ ಮೂಡಿಸಿದ ಧೀರರು. ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಶರಣರು. ಅಂತಹ ರತ್ನಸದೃಶರಲ್ಲಿ ಅಲ್ಲಮಪ್ರಭುಗಳು ಅಗ್ರಪಂಕ್ತಿಗೆ ಸೇರುತ್ತಾರೆ. ಬಸವಣ್ಣನವರು ಕಟ್ಟಿದ ಮಹಾಮನೆಯ ಅನುಭವ ಮಂಟಪದಲ್ಲಿ ಅಧ್ಯಕ್ಷರಾಗಿ ತಮ್ಮ ಅನುಭಾವದ ನಿಲುವು ಸಾಧನೆಗಳಿಂದ ಆಗಸದ ಎತ್ತರಕ್ಕೇರಿದ ಜಂಗಮಜ್ಯೋತಿ ಅಲ್ಲಮಪ್ರಭುಗಳು.
ಅಲ್ಲಮರು ಯಾರು? ಎಲ್ಲಿಂದ ಬಂದರು? ಇವರ ಸಾಧನೆಗಳೇನು? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತವೆ. ಉತ್ತರರೂಪದಲ್ಲಿ ಎಲ್ಲ ಮಾಹಿತಿಗಳು ಒಂದೇಕಡೆ ಲಭ್ಯವಾಗುವ ದಾಖಲೆಗಳು ಸಿಕ್ಕಿಲ್ಲ. ಆದ್ದರಿಂದ ಅಂದಿನ ಸಮಕಾಲೀನ ಅಥವ ನಂತರದ ಕಾಲದಲ್ಲಿ ರಚನೆಯಾಗಿರುವ ಸಾಹಿತ್ಯಕೃತಿಗಳ ಮಾಹಿತಿಗಳಿಗೇ ನಾವು ಮೊರೆಹೋಗಬೇಕಾಗುತ್ತದೆ. ಹರಿಹರಕವಿಯ ‘ಪ್ರಭುದೇವರರಗಳೆ’, ‘ಬಸವರಾಜದೇವರರಗಳೆ’, ಚಾಮರಸಕವಿಯ ‘ಪ್ರಭುಲಿಂಗಲೀಲೆ’, ಪರ್ವತೇಶನ ‘ಪ್ರಭುದೇವರಸಾಂಗತ್ಯ,’ ಮಹಾದೇವಯ್ಯ ಶರಣನ ‘ಶೂನ್ಯಸಂಪಾದನೆ’ ಗಳು ಅಲ್ಲಮ ಪ್ರಭುವಿನ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತವೆ. ಅಲ್ಲಮಯ್ಯ, ಪ್ರಭುದೇವ, ಅಲ್ಲಮಪ್ರಭು, ಪ್ರಭುವರ ಇತ್ಯಾದಿ ಹೆಸರುಳ್ಳ ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಒಂದು ಪುಟ್ಟ ಹಳ್ಳಿ ಬಳ್ಳಿಗಾವೆಯಲ್ಲಿ ಜನಿಸಿದರು. ಆ ದಿನಗಳಲ್ಲಿ ಇದೊಂದು ದೊಡ್ಡ ಪಟ್ಟಣವಾಗಿತ್ತು. ಧಾರ್ಮಿಕ, ಹಾಗೂ ಶೈಕ್ಷಣಿಕ ಕೇಂದ್ರವೆಂದು ಪ್ರಸಿದ್ಧಿ ಪಡೆದಿತ್ತು. ಚಾಮರಸನ ಉಲ್ಲೇಖದಂತೆ ಅಲ್ಲಮನ ತಂದೆ ‘ನಿರಹಂಕಾರ’ ತಾಯಿ ‘ಸುಜ್ಞಾನಿ’. ಇವರು ದೈವಭಕ್ತರಾಗಿದ್ದು ಹರಿಹರನ ಹೇಳಿಕೆಯಂತೆ ಅಲ್ಲಿನ ಗೊಗ್ಗೇಶ್ವರನ ದೇವಾಲಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರು. ನಿರಹಂಕಾರನು ಅದ್ಭುತವಾಗಿ ಮದ್ದಲೆ ನುಡಿಸುತ್ತಿದ್ದನು. ಇವನ ಮದ್ದಲೆಸೇವೆಯಿಂದ ಸಾಕ್ಷಾತ್ ಪರಶಿವನೇ ಸಂತೃಪ್ತನಾಗಿದ್ದನೆಂದು ಪ್ರತೀತಿಯಿತ್ತು. ಈ ದಂಪತಿಗಳಿಗೆ ಶಿವಕಾರುಣ್ಯದಿಂದಲೇ ಮಗನೊಬ್ಬ ಜನಿಸಿ ಅವನನ್ನು ಅಲ್ಲಮಪ್ರಭು ಎಂದು ಹೆಸರಿಸಿದರು. ಇದನ್ನು ವರ್ಣನೆಮಾಡುವಾಗ ಕಾವ್ಯಕರ್ತೃಗಳು ತಮ್ಮ ಕಲ್ಪನೆಯ ಓಘದಲ್ಲಿ ದೈವತ್ವಕ್ಕೆ ಹೆಚ್ಚು ಒತ್ತುಕೊಟ್ಟಂತೆ ಕಾಣುತ್ತದೆ. ಅಲ್ಲಮನನ್ನು ದೈವಾಂಶ ಸಂಭೂತನೆಂಬಂತೆ ಚಿತ್ರಿಸಿದ್ದಾರೆ. ಹರಿಹರನು ಇವನು ಶಿವಗಣದಲ್ಲಿ ಒಬ್ಬನಾದ ‘ನಿರ್ಮಾಯ’ನೆಂಬುವನು ಶಾಪಗ್ರಸ್ಥನಾಗಿ ಭೂಲೋಕದಲ್ಲಿ ಅಲ್ಲಮನಾಗಿ ಜನಿಸಿದನೆಂದರೆ, ಚಾಮರಸನು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಅಲ್ಲಮನು ಪರಶಿವನ ನೇರವಾದ ಅವತಾರವೆಂದೇ ಹೇಳಿದ್ದಾನೆ. ಇವನು ಕೃತ, ತ್ರೇತ, ದ್ವಾಪರ ಯುಗಗಳಲ್ಲಿ ಕ್ರಮವಾಗಿ ‘ಸ್ಥೂಲಕಾಯ’, ‘ಶೂನ್ಯಕಾಯ’, ‘ಅನಿಮಿಷ’ ಎಂಬ ಹೆಸರಿನ ಅವತಾರಗಳನ್ನು ಎತ್ತಿದ್ದು ಕಲಿಯುಗದಲ್ಲಿ ‘ಅಲ್ಲಮ’ನೆಂಬ ಹೆಸರಿನ ಜಂಗಮನಾಗಿ ಅವತರಿಸಿದ ಎಂದಿದ್ದಾನೆ.
ಹೀಗೆ ಜನ್ಮತಾಳಿದ ಅಲ್ಲಮನು ಬೆಳೆಯುತ್ತಾ ತಂದೆಯ ಜೊತೆಯಲ್ಲಿ ಗೊಗ್ಗೇಶ್ವರ ದೇವಾಲಯದಲ್ಲಿ ಮದ್ದಲೆ ನುಡಿಸುತ್ತಿದ್ದನು. ಅದರಲ್ಲೇ ಪ್ರಾವೀಣ್ಯತೆಯನ್ನು ಗಳಿಸಿದನು. ಅವನ ಮೋಹಕ ರೂಪ, ಯಾವನ, ಕಲಾನೈಪುಣ್ಯತೆಗೆ ‘ಕಾಮಲತೆ’ಯೆಂಬ ನಾಟ್ಯಸುಂದರಿ ಮನಸೋತಳು. ಸಮಾಜದವರ ಅಭಿಪ್ರಾಯವನ್ನು ಧಿಕ್ಕರಿಸಿ ದಂಪತಿಗಳಾಗಿ ಕೆಲವುಕಾಲ ಸಂಸಾರಸುಖವನ್ನು ಸವಿದರು ಎಂಬುದಾಗಿ ಹರಿಹರಕವಿಯು ಉಲ್ಲೇಖಿಸಿದ್ದಾನೆ. ಕಾಮಲತೆಯು ವಿಷಮಶೀತ ಜ್ವರದಿಂದ ಅಕಾಲ ಮರಣಕ್ಕೆ ತುತ್ತಾದಳು. ಇದರಿಂದಾಗಿ ನಿರಾಶನಾದ ಅಲ್ಲಮನು ವೈರಾಗ್ಯ ತಾಳಿ ಬೈರಾಗಿಯಂತೆ ಗೊತ್ತು ಗುರಿಯಿಲ್ಲದೆ ಅಲೆಯತೊಡಗಿದನು. ಹೀಗೆ ದೇಶಪರ್ಯಟನೆಯ ಆರಂಭದಲ್ಲಿ ಅಲ್ಲಮನು ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಒಮ್ಮೆ ಹೋದನು. ಅಲ್ಲೊಂದು ವಿಲಕ್ಷಣ ಘಟನೆ ನಡೆಯಿತು. ಆ ಊರಿನ ರಾಜ ‘ಮಮಕಾರ’, ಅವನ ಪಟ್ಟದರಸಿ ‘ಮೋಹಿನಿ’. ಇವರ ಸುಪುತ್ರಿ ‘ಮಾಯಾದೇವಿ’. ಸುಂದರಿ ಮಾಯಾದೇವಿಯು ವಿವಾಹವಾಗಲು ಯಾವ ವರನನ್ನೂ ಇಷ್ಟಪಡದೆ ತನಗೆ ಅನುರೂಪನಾದ ವರ ‘ಮಧುಕೇಶ್ವರನೇ’ ಎಂದು ಭಾವಿಸಿದ್ದಳು. ಅವನನ್ನು ಒಲಿಸಿಕೊಳ್ಳಲು ನಿತ್ಯ ಅರ್ಚನೆಯಲ್ಲಿ ತೊಡಗಿದ್ದಳು. ಅರ್ಚನೆಯ ನಂತರ ದೇವರಿಗೆ ನಾಟ್ಯಸೇವೆ ಸಲ್ಲಿಸುತ್ತಿದ್ದಳು. ಇಂಪಾದವೀಣೆ, ಮೃದಂಗ ವಾದ್ಯವೃಂದದ ಜೊತೆಗೆ ಮಾಯಾದೇವಿಯ ಕಾಲ್ಗೆಜ್ಜೆಗಳ ಮಂಜುಳ ನಿನಾದವೂ ಸೇರಿ ನರ್ತಿಸುತ್ತಿದ್ದಾಗ ಮನಮೋಹಕವಾದ ಅನುಭವವನ್ನು ನೀಡುತ್ತಿತ್ತು. ಇದನ್ನು ನೋಡುತ್ತ ಉತ್ತೇಜಿತನಾದ ಅಲ್ಲಮನಿಗೆ ಮದ್ದಲೆ ನುಡಿಸುವ ಬಯಕೆಯುಂಟಾಯಿತು. ಲಯಬದ್ಧವಾಗಿ ತಾನೂ ಮದ್ದಲೆ ನುಡಿಸುತ್ತಾ ಆವೇಶದಿಂದ ನೃತ್ಯ ಮಾಡತೊಡಗಿದನು. ಭಕ್ತಿಯ ಈ ಭಾವಾವೇಶವನ್ನು ಕಂಡು ಅಲ್ಲಿ ನೆರೆದಿದ್ದ ಜನರು ಚಕಿತರಾದರು.
ಮಾಯಾದೇವಿಯು ಮದ್ದಲೆಯ ಶಬ್ಧವನ್ನು ಆಲಿಸಿ ಮಂತ್ರಮುಗ್ಧಳಾದಳು. ಅವನನ್ನು ಒಳಕ್ಕೆ ಕರೆಸಿದಳು. ಮೊದಲ ನೋಟಕ್ಕೆ ಮನಸೋತಳು. ತನ್ನ ತಂದೆಯ ಮೂಲಕ ಅವನನ್ನು ಅರಮನೆಗೆ ಆಹ್ವಾನಿಸಿ ತನಗೆ ನಾಟ್ಯಾಚಾರ್ಯನನ್ನಾಗಿ ನೇಮಿಸಿಕೊಂಡಳು. ಅವನಲ್ಲಿ ಅನುರಕ್ತೆಯಾದ ಅವಳು ಅಲ್ಲಮನಲ್ಲಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡು ತನ್ನನ್ನು ಪರಿಗ್ರಹಿಸುವಂತೆ ಬೇಡಿಕೊಂಡಳು. ಆದರೆ ಅಲ್ಲಮನು ಅವಳ ಬಯಕೆ ಅನುಚಿತವಾದುದೆಂದು ತಿರಸ್ಕರಿಸಿ ಅರಮನೆಯನ್ನು ತೊರೆದು ಅರಣ್ಯಮಾರ್ಗದಲ್ಲಿ ಗೊತ್ತುಗುರಿಯಿಲ್ಲದೆ ನಡೆದುಬಿಟ್ಟನು. ಅವನನ್ನು ಹುಡುಕಿ ಕಾಡಿಬೇಡಿ ಹಿಂದಕ್ಕೆ ಕರೆತರಲು ತನ್ನ ಸಖಿಯರೊಂದಿಗೆ ಮಾಯಾದೇವಿ ತಾನೂ ಅರಣ್ಯಕ್ಕೆ ಹೊರಟಳು. ಅವಳ ಈ ಹುಚ್ಚಾಟವನ್ನು ತಡೆಯುತ್ತಾ ಅಲ್ಲಮನು ತಾನು ಭವಬಂಧನದಿಂದ ಮುಕ್ತನಾಗಿರುವುದಾಗಿ ತಿಳಿಸಿ ಅವಳನ್ನು ಸಂತೈಸಿದನು. ಅವಳು ಆಕೆಯ ಆರಾಧ್ಯದೈವದಲ್ಲೇ ಮನಸ್ಸಿಟ್ಟು ಆರಾಧನೆಯಲ್ಲಿ ತೊಡಗಿದರೆ ಅದರಿಂದಲೇ ಮುಕ್ತಿ ಲಭ್ಯವಾಗುತ್ತದೆಂದು ಬುದ್ಧಿಹೇಳಿ ತಾನು ಮುಂದಕ್ಕೆ ನಡೆಯುದನು. ದಟ್ಟವಾದ ಅರಣ್ಯವನ್ನು ಹೊಕ್ಕು ಅದೆಷ್ಟೋ ಕಾಲ ತಪಗೈದು ಎಷ್ಟೋಜನ ಯೋಗಿಗಳನ್ನು ಸಂದರ್ಶನಗೈದನು. ಯಾರಿಂದ ಯಾವ್ಯಾವ ಸಾಧನೆಗಳನ್ನು ಸಿದ್ಧಿಸಿಕೊಂಡನೆಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಆದರೂ ರಾಜಯೋಗ, ಹಠಯೋಗ, ಕಲಿತರೂ ಅದರಿಂದ ಸಮಾಧಾನ ಹೊಂದದೇ ಸಾಧಕನಾಗಿ ಮನುಷ್ಯತ್ವಕ್ಕಿಂತ ಎತ್ತರಕ್ಕೆ ಏರಿ ದೈವತ್ವಕ್ಕೆ ತಲುಪಬೇಕು ಎಂದು ಬಯಸುತ್ತಿದ್ದನು. ಇಂತಹ ಕೊನೆಯ ಹಂತವನ್ನು ಮುಟ್ಟುವವರೆಗೆ ಸಾಧಕನು ಬೆಳಕಿನ ನಿಜ ಸ್ವರೂಪವನ್ನು ಕಾಣಲಾರನೆಂಬುದು ಆತನ ನಂಬಿಕೆಯಾಗಿತ್ತು. ಆ ಬೆಳಕನ್ನು ತೋರುವಂತಹ ಗುರುಗಳಿಗಾಗಿ ಹುಡುಕಾಡುತ್ತಿದ್ದನು.
ಈ ಹುಡುಕಾಟದಲ್ಲಿ ಇದ್ದಾಗಲೇ ಅಲ್ಲಮನಿಗೆ ಭಾಗ್ಯವೇ ಕಾಲಿಗೆ ತೊಡರಿಕೊಂಡಂತೆ ಭೂಗರ್ಭದಲ್ಲಿ ಹುದುಗಿದ್ದ ಗುಹಾ ಶಿವಾಲಯವೊಂದರ ದರ್ಶನವಾಯಿತು. ಕುತೂಹಲದಿಂದ ಅದರೊಳಕ್ಕೆ ನಡೆದನು. ಅಲ್ಲೊಬ್ಬ ಯೋಗಿ ತನ್ನ ಕೈಯಲ್ಲಿದ್ದ ಲಿಂಗದಲ್ಲಿ ದೃಷ್ಟಿ ಬೆರೆಸಿ ಸಮಾಧಿ ಸ್ಥಿತಿಯಲ್ಲಿದ್ದುದನ್ನು ಕಂಡನು. ಆ ಯೋಗಿಯು ನಿಧಾನವಾಗಿ ಕಣ್ತೆರೆದು ಅಲ್ಲಮನನ್ನು ನೋಡಿ ಬಾ ಎಂದು ಸಂಜ್ಞೆ ಮಾಡಿದನು. ಅವನ ಬಳಿಗೆ ಹೋದ ಅಲ್ಲಮನಿಗೆ ತೆಗೆದುಕೋ ಜ್ಯೋತಿರ್ಲಿಂಗವನ್ನು, ನೀನು ಬರುತ್ತೀಯೆಂದು ಬಹಳ ಕಾಲದಿಂದ ನಾನು ಕಾಯುತ್ತಿದ್ದೆ. ಎಂದು ಕೈಲಿದ್ದ ಲಿಂಗವನ್ನು ಅವನಿಗೆ ಹಸ್ತಾಂತರಿಸಿದನು. ಆ ಲಿಂಗವು ಕೈಗೆ ಸೋಕಿದ ತಕ್ಷಣ ಅವನ ಮೈಯಲ್ಲಿ ಮಿಂಚೊಂದು ಸುಳಿದಂತೆ ಆಯಿತು. ಅವನೆದೆಯಲ್ಲಿ ಅಧ್ಯಾತ್ಮ ಜ್ಯೋತಿಯೊಂದು ಪ್ರಜ್ವಲಿಸಿತು. ಅಲ್ಲಯವರೆಗೆ ಅವನನ್ನು ಆವರಿಸಿದ್ದ ಮೋಹ, ವಿರಹಾನಲ, ಒಮ್ಮೆಗೆ ಕಳಚಿತು. ಪರಮ ವಿರಹಿಯಾಗಿದ್ದ ಅಲ್ಲಮನು ಪರಮ ವಿರಾಗಿಯಾಗಿ ಮಾರ್ಪಟ್ಟನು. ಜ್ಯೋತಿರ್ಲಿಂಗವನ್ನಿತ್ತ ಗುರು ಅನಿಮಿಷರು ದೈವದಲ್ಲಿ ಲೀನವಾದರು. ಗುಹೆಯಿಂದ ಲಿಂಗದೊಡನೆ ಹೊರಬಂದ ಅಲ್ಲಮನು ಅದನ್ನು ಎದೆಯಮೇಲೆ ಧರಿಸಿ ಕೊರಳಲ್ಲಿ ಕಟ್ಟಿಕೊಂಡನು. ಅನಿಮಿಷರು ತಪಸ್ಸು ಮಾಡಿದ್ದ ಗವಿಗೆ ನಮಸ್ಕರಿಸಿ ತನ್ನ ಅಂತರಂಗದ ವಾಣಿಯಂತೆ ನಡೆಯತೊಡಗಿದ. ಪರಿವ್ರಾಜಕ ವೃತ್ತಿ ಅವನ ನಿತ್ಯ ಜೀವನವಾಯಿತು. ದಾರಿಯುದ್ದಕ್ಕೂ ಸಿಕ್ಕ ಜನರಿಗೆ ತನ್ನ ಅನುಭವದ, ಅನುಭಾವದ ನುಡಿಗಳನ್ನು ಹೇಳುತ್ತಾ ಮುಂದುವರಿಯುತ್ತಿದ್ದನು. ತನಗೆ ಪ್ರೇರಣೆ ನೀಡಿದ ಗುರುಗಳು ಗುಹಾಲಯದಲ್ಲಿ ಸ್ಥಿತರಾಗಿದ್ದರಿಂದ ಅಲ್ಲಮನು ತನ್ನ ವಚನಗಳಲ್ಲಿ ಅಂಕಿತವಾಗಿ ಗುಹೇಶ್ವರಾ ಎಂಬುದನ್ನೇ ಬಳಸಿದನು. ಇಲ್ಲಿಗೆ ಅಲ್ಲಮನ ಜೀವನದ ಪರಮಗುರಿ ಸಾಧನೆಯಾಯಿತು. ಹಲವಾರು ಪೆಟ್ಟಗಳನ್ನು ತಿಂದು ಸುಂದರವಾಗಿ ಸಿದ್ಧವಾದ ಶಿಲಾಮೂರ್ತಿಗೆ ಗುರು ಅನಿಮಿಷರಿಂದ ಪ್ರಾಣ ಪ್ರತಿಷ್ಠೆಯಾಗಿ ಅವನ ಅಂಗವೆಲ್ಲ ಲಿಂಗಸ್ವರೂಪಿಯಾಯಿತು. ಬಿಂದು ಈಗ ಸಿಂಧುವಾಯಿತು. ತಾನು ಕಂಡ ಬೆಳಕನ್ನು ಜಗತ್ತಿಗೆ ಹರಡಲು ಜಂಗಮನಾಗಿ ಪರ್ಯಟನೆ ಪಾರ್ರಂಭಿಸಿದನು. (ಜಂಗಮ-ಜನನ ಮರಣಗಳಿಂದ ದೂರನಾದವನು). ತಾನು ಸಂಶಯರಹಿತನಾಗಿ, ನಿರ್ಭೀತನಾಗಿ, ನಿರಾಭಾರಿಯಾಗಿ ಮೆರೆದರು. ಇವರಿಂದ ಚೈತನ್ಯ ಪಡೆದು ಕೃತಾರ್ಥರಾದವರು ಅದೆಷ್ಟೋ ಮಂದಿ. ಅವರುಗಳಲ್ಲಿ ಮುಖ್ಯವಾಗಿ ಸಿದ್ಧರಾಮ, ಗೊಗ್ಗಯ್ಯ, ಮುಕ್ತಾಯಿ, ಗೋರಕ್ಷ ಮುಂತಾದವರು. ಇವರೆಲ್ಲರ ಅಂತಃಚಕ್ಷುವಿಗೆ ಮುಸುಕಿದ್ದ ಮಾಯೆಯ ಪರದೆಯನ್ನು ಹೋಗಲಾಡಿಸಿ ಕೈವಲ್ಯಜ್ಞಾನ ಗಳಿಸಿಕೊಳ್ಳಲು ಸಹಕರಿಸಿದ ಸೂತ್ರಧಾರಿ ಅಲ್ಲಮ ಪ್ರಭು.
ಸಿದ್ಧರಾಮರು ತಮ್ಮೂರಾದ ಸೊನ್ನಲಿಗೆಯಲ್ಲಿ ಸಾಮಾಜಿಕ ಸೇವೆಯ ಕಾರ್ಯಗಳಾದ ಕೆರೆಗಳನ್ನು ಕಟ್ಟಿಸುವುದು, ಬಾವಿಗಳನ್ನು ತೋಡಿಸುವುದು, ದೇವಾಲಯಗಳನ್ನು ಕಟ್ಟಿಸುವುದು, ಅವುಗಳಲ್ಲಿ ಪೂಜಾಕೈಂಕರ್ಯ ನಡೆಸಲು ನೆರವಾಗುವುದು, ಗಣಪರ್ವಗಳನ್ನು ನಡೆಸುವುದು ಮುಂತಾದವುಗಳಲ್ಲಿ ತೊಡಗಿಸಿಕೊಂಡು ಸಾಧಕರೆಂದು ಜನಪ್ರಿಯತೆ ಗಳಿಸಿಕೊಂಡಿದ್ದರು. ಅಲ್ಲಮಪ್ರಭುಗಳು ಅಲ್ಲಿಗೆ ಹೋಗಿ ಅವರನ್ನು ಎಚ್ಚರಿಸಿ ಇದಕ್ಕಿಂತ ಉತ್ತಮವಾದ ಕಾರ್ಯಗಳಿಗಾಗಿ ಅವರು ಈ ಜಗತ್ತಿಗೆ ಬಂದಿದ್ದಾರೆಂಬ ಅರಿವನ್ನು ಮೂಡಿಸಿದರು.
ತನುವೆಂಬ ಏರಿಗೆ ಮನವೆಂಬ ಕಟ್ಟೆ
ಒಲಿದ ಷಡ್ವಿಧ ಭಕ್ತಿಯೆಂಬ ಸೋಪಾನದಿಂದ
ಪರಮಾನಂದ ಜಲವ ತುಂಬಿ
ಕೆರೆಯ ಕಟ್ಟಬಲ್ಲವರನ್ನು ಯಾರನೂ ಕಾಣೆ
ನಾ ಕಟ್ಟಿಸಿದ ಕೆರೆ ಸ್ಥಿರವಾಯ್ತು ನೋಡಾ ಗುಹೇಶ್ವರಾ
ಎಂದು ಹೇಳಿ ಶಿವಯೋಗಿ ಕಟ್ಟಬೇಕಾದಂತಹ ಕೆರೆ ಎಂಥದೆಂಬುದನ್ನು ತಿಳಿಸಿಕೊಡುತ್ತಾರೆ. ಅಲ್ಲದೆ ‘ದೇಹದೊಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯವೇಕೆ? ಎರಡಕ್ಕೆ ತಾವಿಲ್ಲವಯ್ಯಾ’ ಎಂದು ಮಾರ್ಗ ತೋರುತ್ತಾರೆ. ಸಿದ್ಧಪುರುಷನಾದ ಗೋರಕ್ಷಕನಿಗೂ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ಹಠಯೋಗ ಸಾಧನೆಯಿಂದ ವಜ್ರದೇಹಿಯಾದ ಗೋರಕ್ಷ ಅಹಂಕಾರದಿಂದ ಮೆರೆಯುತ್ತಿರುತ್ತಾನೆ. ಅಲ್ಲಮಪ್ರಭು ದೇಹವನ್ನು ವಜ್ರಕಾಯವಾಗಿಸಿಕೊಳ್ಳುವುದೇ ಯೋಗದ ಗುರಿಯಲ್ಲ ಎಂದು ತಿಳಿಸಿ ಶಿವಯೋಗದ ಸಾಧನೆಯ ರೀತಿಯನ್ನು ತಿಳಿಯಪಡಿಸುತ್ತಾರೆ. ತೋಟಗಾರ ಗೊಗ್ಗಯ್ಯನನ್ನು ಸಂಧಿಸಿದಾಗ ಅವನು ಬೆಳೆಸಿದ್ದ ಸುಂದರ ತೋಟವನ್ನು ನೋಡಿ ಅದರ ಸೊಬಗನ್ನು ಪ್ರಶಂಸಿಸುತ್ತಾರೆ. ಅದಕ್ಕಾಗಿ ಅವನು ಪಟ್ಟಿರುವ ಪರಿಶ್ರಮವನ್ನು ಕೊಂಡಾಡುತ್ತಾರೆ. ಆದರೆ ಇಂತಹ ತೋಟದಲ್ಲಿ ಒಂದು ಕೊರತೆಯಿದೆಯೆಂದು ತಿಳಿಸುತ್ತ ಅದನ್ನು ‘ನಿನಗೆ ನಾನು ತಿಳಿಯಪಡಿಸಬೇಕಾಗಿದೆ’ ಎಂದು ಹೀಗೆ ನುಡಿದಿದ್ದಾರೆ.
ತನುವ ತೋಟವಮಾಡಿ ಮನವ ಗುದ್ದಲಿಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿಯ ಬೇರ,
ಒಡೆದು ಸಂಸಾರದ ಹೆಂಟೆಯ
ಬಿಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡ ಮಂಡಲವೆಂಬ ಭಾವಿ
ಪವನವೆ ಕಾಟಾಳ, ಸುಷಮ್ನನಾಳದಿಂದ
ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ
ಆವಾಗಳೂ ಈ ತೋಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ
ಇದನ್ನು ಕೇಳಿದ ಗೊಗ್ಗಯ್ಯ ”ತಮ್ಮ ಕೃಪೆಯಾಗಲಿ ಗುರುವೇ, ತಮಗೆ ಸರಿಕಂಡಂತೆ ಆ ಅಮೃತದ ಬೀಜವನ್ನು ನೆಡಿಸಿ” ಎಂದು ವಿನಂತಿಸಿದನು. ಅಲ್ಲಮರು ಗೊಗ್ಗಯ್ಯನ ಶಿರದಮೇಲೆ ತಮ್ಮ ಹಸ್ತವನ್ನಿಟ್ಟು ಉಪದೇಶ ಮಾಡಿದರು. ಅಂದಿನಿಂದ ಅವನಿಗೆ ತೋಟದಲ್ಲಿ ಹೊಸ ದರ್ಶನವಾಗತೊಡಗಿತು. ಕಾಯಿಗಳು ಶಿವಲಿಂಗದಂತೆ, ಪತ್ರಗಳು ಬಿಲ್ವಪತ್ರೆಯಂತೆ, ನೀರುಹರಿವ ಕಾಲುವೆಗಳು ಗಂಗೆಯಂತೆ, ಮಣ್ಣಿನ ದಿಬ್ಬವು ಕೈಲಾಸ ಪರ್ವತದಂತೆ, ಸುಳಿವ ತಂಗಾಳಿ ಶಿವಸಂಕೀರ್ತನದ ದನಿಯಂತೆ, ಭೃಂಗಗಳ ಝೇಂಕಾರ ಓಂಕಾರದಂತೆ ಎಲ್ಲವೂ ಶಿವಮಯವಾಗಿ ಅನುಭವವಾಯಿತು. ಇದರಿಂದ ಸಂತೃಪ್ತನಾದ ಅವನು ”ದೀನ ಮನದವನಂತೆ ಕಂಡ ನಿಧಾನವನು ತಾನೊಬ್ಬನುಂಬನೇ? ದಾನಿ ನೀನೈ ನಿನ್ನ ಪರಿ ಕಂಡ ಶಿವಪಥವ ಮಾನವರಿಗರುಹಲು ನಡೆದ ನೀನೇ ಜಗದ ಗುರು” ಎಂದು ನಮಿಸಿ ಅವನನ್ನು ಬೀಳ್ಕೊಡುತ್ತಾನೆ.
ಅಲ್ಲಿಂದ ಮುಂದಿನೂರಿಗೆ ತೆರಳುತ್ತಿದ್ದಾಗ ಕೆಲವು ಅಭಿಮಾನಿಗಳು ಅವನ ಜೊತೆಗೂಡುತ್ತಾರೆ. ಒಟ್ಟಿಗೆ ‘ಮಸಳಿಕಲ್ಲು’ ಎಂಬ ಊರನ್ನು ತಲುಪುತ್ತಾರೆ. ಅಲ್ಲಿ ಹಿಂದೊಮ್ಮೆ ಅಲ್ಲಮರು ಅಜಗಣ್ಣನೆಂಬ ಗುಪ್ತಭಕ್ತ ಮತ್ತವನ ತಂಗಿ ಮುಕ್ತಾಯಿಯನ್ನು ಭೇಟಿಯಾಗಿರುತ್ತಾರೆ. ಈಗ ಆಕೆಯು ತನ್ನ ಸೋದರ ಮತ್ತು ಅಧ್ಯಾತ್ಮ ಗುರು ಅಜಗಣ್ಣ ಕಾಲವಾಗಿ ಆ ಸಾವಿನಿಂದ ಕಂಗೆಟ್ಟು ನನಗಿನ್ನಾರು ಗತಿಯೆಂದು ಗೋಳಾಡುತ್ತಿದ್ದ ಮುಕ್ತಾಯಿಯನ್ನು ಕಾಣುತ್ತಾರೆ. ಅವರಿಬ್ಬರ ನಡುವೆ ಸುದೀರ್ಘವಾದ ಸಂಭಾಷಣೆ ನಡೆಯುತ್ತದೆ. ಅನೇಕ ಪ್ರಶ್ನೋತ್ತರಗಳು ನಡೆಯುತ್ತವೆ. ಆಕೆಯ ಮನಸ್ಸಿನ ತಾಕಲಾಟವನ್ನು ಪರಿಹರಿಸುವ ಅಲ್ಲಮ ”ತನ್ನಲ್ಲಿ ತಾನು ತದ್ಗತವಾಗಿರುವ ಶಿವಯೋಗಿಗೆ ಭಿನ್ನತೆಯಿಲ್ಲ, ಸಂದೇಹವೆಂಬ ಅಡವಿಯನ್ನು ದಾಟಿ ನೀನು ಜ್ಞಾನಗಿರಿಯನ್ನು ಏರಿ ನಿಲ್ಲಬೇಕು ”ಎಂದು ಹೇಳಿ ಅವಳನ್ನು ಸಮಾಧಾನಪಡಿಸಿ ಮುಂದೆ ಸಾಗುತ್ತಾನೆ. ಮುಂದುವರಿಯುತ್ತಾ ಅಲ್ಲಮಪ್ರಭು ಸಿದ್ಧರಾಮನೊಡಗೂಡಿ ಕಲ್ಯಾಣಕ್ಕೆ ಬಸವಣ್ಣನನ್ನು ಕಾಣಲು ಬರುತ್ತಾರೆ. ಈ ಸಂದರ್ಭ ಕೂಡ ಕುತೂಹಲದಿಂದ ಕೂಡಿದೆ. ಮಹಾಮನೆಯ ಬಾಗಿಲಿಗೆ ಬಂದಾಗ ಬಸವಣ್ಣನವರು ಶಿವಪೂಜೆಯಲ್ಲಿ ನಿರತರಾಗಿದ್ದುದರಿಂದ ಸ್ವತಃ ತಾನೇ ಇವರನ್ನು ಸ್ವಾಗತಿಸಲು ಸಾಧ್ಯವಾಗಲಿಲ್ಲ. ಶರಣ ಅಪ್ಪಣ್ಣನನ್ನು ಕಳುಹಿಸುತ್ತಾನೆ. ಆಗ ”ಎನ್ನಕಾಯವೇ ಭಕ್ತ, ಪ್ರಾಣವೇ ಜಂಗಮವಾದ ಬಳಿಕ ಅಲ್ಲಿ ಇಲ್ಲಿ ಭೇದವಿಲ್ಲೆಂದು ಈ ಜಂಗಮನೊಡಗೊಂಡು ಬನ್ನಿರಿ” ಎಂದು ಸಂದೇಶ ಕಳುಹಿಸಿರುತ್ತಾನೆ ಬಸವಣ್ಣ. ಅಲ್ಲಮಪ್ರಭು ಬಸವಣ್ಣನ ನಡವಳಿಕೆಯನ್ನು ಠೀಕಿಸಿ ”ಜಂಗಮನೆ ಹೊರಗಿರಲು ಒಳಗೆ ಲಿಂಗಾರ್ಚನೆ ಯಾವುದಯ್ಯಾ? ಪ್ರಾಣನ ಹೊರಗಿರಿಸಿ ಎಡೆಯಾಡುವ ದೇಹವುಂಟೇ? ಶರಣರು ಬಂದು ಬಾಗಿಲಲ್ಲಿ ನಿಂದಿರಲು ತನ್ನ ತಾ ಮರೆದವರ ಕಂಡಡೆ” ಎಂದು ಹೇಳಿ ಸ್ಥಾವರ ಲಿಂಗಕ್ಕಿಂತ ಜಂಗಮದ ಮಹತ್ವ ಹೆಚ್ಚೆಂದು ಅರುಹಿ ಬಸವಣ್ಣನನ್ನು ಎಚ್ಚರಿಸುತ್ತಾನೆ.
ನಂತರ ಅನುಭವ ಮಂಟಪದ ಅಧ್ಯಕ್ಷ ಪೀಠ ಅಲಂಕರಿಸಿದ ಅಲ್ಲಮ ಪ್ರಭು ಮಹಾಮನೆಯಲ್ಲೇ ಹನ್ನೆರಡು ವರ್ಷಗಳ ಕಾಲ ಗುಪ್ತ ಶರಣನಾಗಿದ್ದ ಮರುಳ ಶಂಕರದೇವನನ್ನು ಕಂಡು ಗುರುತಿಸಿ ಅವನೆಂತಹ ಭಕ್ತನೆಂಬುದನ್ನು ಪ್ರಕಟಪಡಿಸುತ್ತಾನೆ. s ಚಿಕ್ಕವಯಸ್ಸಿನವನಾದರೂ ಅಪಾರ ಜ್ಞಾನ ಸಂಪತ್ತನ್ನು ಗಳಿಸಿಕೊಂಡಿದ್ದ ಚೆನ್ನಬಸವಣ್ಣನಿಗೆ ಉನ್ನತ ಸಾಧನೆಯ ಮಾರ್ಗದರ್ಶನ ನೀಡಿ ಅಲ್ಲಮಪ್ರಭು ಅವನನ್ನು ಷಟ್ಸ್ಥಲಸುಜ್ಞಾನಿ ಆಗಲು ಕಾರಣನಾಗುತ್ತಾನೆ.
ಮಹಾಮನೆಯನ್ನು ಪ್ರವೇಶಿಸಲು ಆಶಿಸಿ ಬಂದ ಮಹಾದೇವಿಯನ್ನು ಕಲ್ಯಾಣದ ಹೆಬ್ಬಾಲಿನಲ್ಲೇ ತಡೆಯುವಂತೆ ಕಿನ್ನರಿ ಬೊಮ್ಮಯ್ಯನನ್ನು ಅಲ್ಲಮರು ಕಳುಹಿಸುತ್ತಾರೆ. ಅವರ ಪ್ರಶ್ನೆಗಳಿಗೆಲ್ಲ ದಿಟ್ಟತನದಿಂದ ಸೂಕ್ತ ಉತ್ತರಗಳನ್ನು ನೀಡಿ ಮಹಾಮನೆಯನ್ನು ಪ್ರವೇಶಿಸುತ್ತಾಳೆ ಮಹಾದೇವಿ. ಅಲ್ಲಮರ ಆಂತರ್ಯದಲ್ಲಿ ಮಹಾದೇವಿಯ ಅಧ್ಯಾತ್ಮದ ಹಿರಿತನ, ಧೃಢತೆ, ವೈರಾಗ್ಯದ ಎಲ್ಲೆಗಳು ತಿಳಿದಿದ್ದರೂ ಜಗತ್ತಿಗೆ ಅವೆಲ್ಲವನ್ನು ತಿಳಿಯಪಡಿಸುವ ಸಲುವಾಗಿ ಅವಳಿಗೆ ಕಠಿಣ ಪರೀಕ್ಷೆಗಳನ್ನೊಡ್ಡಿ ಒರೆಗೆ ಹಚ್ಚುತ್ತಾರೆ.
”ಯೌವನ ತುಂಬಿದ ಸತಿ ನೀನು ಇತ್ತಲೇಕೆ ಬಂದೆಯವ್ವಾ? ಸತಿಯೆಂದರೆ ಮುನಿವರು ನಮ್ಮ ಶರಣರು. ನಿನ್ನ ಪತಿಯ ಕುರುಹ ಹೇಳುವುದಾದರೆ ಕುಳ್ಳಿರು ಇಲ್ಲವಾದರೆ ತೊಲಗು ತಾಯಿ” ಎಂದು ಪ್ರಶ್ನಿಸುತ್ತಾನೆ. ಆಗ ಮಹಾದೇವಿಯು ”ನಾನು ಮಹಾದೇವಿ, ಅನಂತ ಕಾಲದಿಂದ ಹರನನ್ನೇ ನನ್ನ ಪತಿಯಾಗಿ ಪಡೆಯಬೇಕೆಂದು ಬಯಸಿದ್ದೆನು. ಗುರುಕೃಪೆಯಿಂದ ಈ ಜನ್ಮದಲ್ಲಿ ನನ್ನಾಸೆ ಸಿದ್ಧಿಸಿತು. ತಮ್ಮೆಲ್ಲರ ಆಶೀರ್ವಾದ ಪಡೆಯಲು ಇತ್ತ ಬಂದೆ ” ಎನ್ನುತ್ತಾಳೆ.
‘ಶರಣರು ನುಡಿಯಲ್ಲಿನ ಮೋಡಿ ಮೆಚ್ಚುತ್ತಾರೆ. ಆದರೆ ಲೋಕದ ಜನ ನೀನು ನಿನ್ನ ಪತಿಯ ಮೇಲೆ ದೋಷ ಆರೋಪಿಸಿ ಉಟ್ಟ ಪೀತಾಂಬರ ತೊರೆದು ಅರಮನೆಯಿಂದ ದಿಗಂಬರಳಾಗಿ ಹೊರಟು ಬಂದವಳೆಂದು ನಂಬಿದ್ದಾರೆ. ನಿಜವಾದ ವಿಷಯವೇನು? ಕೇವಲ ಒಂದು ತಪ್ಪಿಗಾಗಿ ಪತಿಯನ್ನು ತೊರೆದು ಬರುವ ಧರ್ಮವನ್ನು ಯಾರೂ ಒಪ್ಪುವುದಿಲ್ಲ. ಉಗುರಿಗೆ ಪೆಟ್ಟಾಯಿತೆಂದು ಕೈಯನ್ನೇ ಕತ್ತರಿಸಿದಂತೆ ನಿನ್ನ ರೀತಿ’
”ಪೂಜ್ಯರೇ, ನಿಜವಿಷಯಗಳು ಹೀಗಿವೆ. ಉಡುತಡಿಯ ನಿರ್ಮಲಸೆಟ್ಟಿ, ಸುಮತಿ ದಂಪತಿಗಳ ಮಗಳಾದ ನಾನು ಹರನನ್ನೇ ಪತಿಯನ್ನಾಗಿ ಸ್ವೀಕರಿಸಿದ್ದೆ. ಆದರೆ ನಾನು ಒಲ್ಲೆನೆಂದರೂ ಬಿಡದೆ ಬಲವಂತವಾಗಿ ಕೌಶಿಕರಾಜನು ನನ್ನನ್ನು ವಿವಾಹ ಮಾಡಿಕೊಂಡನು. ವಿವಾಹಕ್ಕೆ ಮೊದಲೇ ನಾನು ಹಾಕಿದ್ದ ಶರತ್ತು ಶಿವಪೂಜೆಗೆ, ಜಂಗಮಸೇವೆಗೆ, ಶಿವಕಾರ್ಯಗಳಿಗೆ ಅಡ್ಡಿಪಡಿಸಬಾರದೆಂಬುದನ್ನು ಮೂರು ಬಾರಿ ಆತ ಮುರಿದನು. ಅದರಿಂದಾಗಿ ನಾನು ಅರಮನೆಯನ್ನು ತೊರೆದು ಬಂದೆ. ನನ್ನ ಆರಾಧ್ಯದೈವ, ಅಧ್ಯಾತ್ಮ ಜೀವನದ ಪತಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕುತ್ತಾ ನಿಮ್ಮೆಲ್ಲರ ಆಶೀರ್ವಾದವನ್ನು ಪಡೆಯಲು ಇಲ್ಲಿಗೆ ಬಂದೆ” ಎಂದು ಹೇಳುತ್ತಾಳೆ.
ದೇಹಾಭಿಮಾನದ ಬಗ್ಗೆ, ಅರಿಷಡ್ವರ್ಗಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಅಲ್ಲಮರು ಕೇಳಿದಾಗ ಅವುಗಳೆಲ್ಲವಕ್ಕೂ ನಿಖರವಾದ, ದಿಟ್ಟ ಉತ್ತರ ಕೊಟ್ಟು ”ಕಾಮ ನನ್ನಲ್ಲಿ ಹುಟ್ಟಿಯೇ ಇಲ್ಲ ಎಂದಮೇಲೆ ಗೆಲ್ಲುವ ಪ್ರಶ್ನೆಯೇ ಇಲ್ಲ. ಅವನ ತಲೆಯ ಬರಹವ ತೊಡೆದೆನು” ಎಂದು ಮಹಾದೇವಿಯು ಉತ್ತರಿಸುತ್ತಾಳೆ. ಈ ಅಲ್ಲಮಪ್ರಭು ಅಕ್ಕಮಹದೇವಿಯರ ಸಂಭಾಷಣೆ ‘ಶೂನ್ಯ ಸಂಪಾದನೆ’ಯಲ್ಲಿ ಶಿಖರಪ್ರಾಯವಾಗಿ ದಾಖಲಾಗಿದೆ. ಅವಳ ನಿಜದ ನಿಲುವನ್ನು ಅಲ್ಲಮರು ಆದಿ-ಅನಾದಿ ನಾಮಸೀಮೆಗಳಿಲ್ಲದ ಮನೋಬಲವುಳ್ಳ ಅಂತರಂಗದ ಪ್ರಭೆ ಬಹಿರಂಗದಲ್ಲಿ ಪಸರಿಸಿದ್ದನ್ನು ಕಂಡು ಮೆಚ್ಚಿ ಆಕೆಯನ್ನು ‘ಅಕ್ಕ ಜಗದಕ್ಕನೆಂದು’ ಕರೆದು ಆಕೆಯ ಶ್ರೀಪಾದಕ್ಕೆ ನಮೋ ಎನ್ನುತ್ತಾರೆ. ಇಲ್ಲಿ ಒಬ್ಬ ಪುರುಷ ಸ್ತ್ರೀಯ ವ್ಯಕ್ತಿತ್ವದ ಉನ್ನತಿಯನ್ನು ಎಲ್ಲರಿಗೂ ತಿಳಿಯುವಂತೆ ಮಾಡಿ ಮೆಚ್ಚಿಗೆ ಸೂಸಿ ಗೌರವದ ಸ್ಥಾನ ನೀಡಿರುವುದನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದಾಗಿದೆ.
ನಂತರ ಅಲ್ಲಮ ಅಕ್ಕಮಹಾದೇವಿಗೆ ತಾನು ಯೋಗಮಾರ್ಗದಲ್ಲಿ ಮಾಡಿದ ಸಾಧನೆಯ ರಹಸ್ಯಗಳನ್ನು ತಿಳಿಸುತ್ತಾನೆ. ರಾಜಯೋಗದ ಮಾರ್ಗ, ಕುಂಡಲಿನೀ ಶಕ್ತಿ ಸಾಧನಾ ಕ್ರಮಗಳನ್ನು ಅವಳ ಚಿತ್ತದಲ್ಲಿ ಮೂಡುವಂತೆ ತಿಳಿಸಿಕೊಟ್ಟನು. ಶ್ರೀಶೈಲದ ಕದಳಿಯ ರಹಸ್ಯವನ್ನು ತಿಳಿಸಿ ಅಲ್ಲಿಗೆ ತೆರಳಿ ಅವಳ ಅಂತರಂಗದ ಆರಾಧ್ಯದೈವವನ್ನು ಬೆರೆತು ಬಯಲಾಗುವಂತೆ ನಿರೂಪಿಸಿ ಆಕೆಯನ್ನು ಕಲ್ಯಾಣದಿಂದ ಬೀಳ್ಕೊಂಡನು.
ಬಸವಣ್ಣನವರ ಮಹಾಮನೆಯಲ್ಲಿ ಒಂದೆಡೆ ಧಾರ್ಮಿಕ ಕ್ರಾಂತಿ, ಇನ್ನೊಂದು ಕಡೆ ಸಮಾಜ ಸುಧಾರಣೆ, ಮತ್ತೊಂದೆಡೆ ನಿತ್ಯ ದಾಸೋಹ, ಬಂದು ಸೇರುವ ಶರಣರಿಗೆ ಭಕ್ತಿ,ಜ್ಞಾನದ ಮಾರ್ಗದರ್ಶನ, ಅನುಭವ ಮಂಟಪದಲ್ಲಿ ಚರ್ಚೆಗಳಿಂದ ಶರಣ ತತ್ವದ ಅನಾವರಣ, ಅನುಭಾವ ಸಾಹಿತ್ಯವನ್ನು ವಚನಗಳ ರೂಪದಲ್ಲಿ ದಾಖಲಿಸುವುದು ಹೀಗೆ ಹತ್ತು ಹಲವು ಚಟುವಟಿಕೆಗಳು ನಡೆಯುತ್ತಿದ್ದವು. ಅಲ್ಲಮರ ಆಗಮನದ ನಂತರ ಚರ್ಚೆಗಳು ಮಹತ್ವ ಪೂರ್ಣವಾದವು. ಒಂದು ವೃಕ್ಷವು ಸಧೃಢವಾಗಿ ಬೆಳೆದಾಗ ಅದನ್ನು ಆಶ್ರಯಿಸುವ ಪರಾವಲಂಬಿ ಸಸ್ಯಗಳೂ ಹೆಚ್ಚಾಗುವಂತೆ ಶರಣರ ಸಂಖ್ಯೆಯೂ ಬೆಳೆಯುತ್ತಿತ್ತು. ಸಂಖ್ಯೆ ಹೆಚ್ಚಾದಂತೆ ಹಲವಾರು ಸಮಸ್ಯೆಗಳು ಬಸವಣ್ಣನವರಿಗೆ ಎದುರಾಗುತ್ತಿದ್ದವು. ಕೆಲವರು ಕಪಟ ವೇಷಧಾರಿಗಳು, ಪ್ರತಿಷ್ಠಿತ ವ್ಯಕ್ತಿಗಳೂ, ಬೂಟಾಟಿಕೆಯ ಭಕ್ತರೂ ಇವಕ್ಕೆ ಕಾರಣರಾದರು. ಅವರ ಬಾಹ್ಯ ಲಾಂಛನಗಳಿಗೆ ಬಸವಣ್ಣನವರು ಮಾರುಹೋಗುತ್ತಿದ್ದರು. ಇಂತಹವರಿಂದ ಆಗುತ್ತಿರುವ ಉಪಟಳಗಳು ಅರಿವಾದಾಗ ಅಲ್ಲಮಪ್ರಭು ನಿಷ್ಪಕ್ಷಪಾತವಾಗಿ ಪರಿಶೀಲಿಸಿ ಅವರನ್ನು ಖಂಡಿಸಿ ತಿದ್ದುತ್ತಿದ್ದರು. ಒಮ್ಮೆ ಶರಣನೊಬ್ಬ ತನ್ನ ಪೂಜೆಗೆ ಹಾಲಿನಕೆನೆ ದೊರೆಯಲಿಲ್ಲವೆಂದು ಜಗಳ ತೆಗೆದನು. ಅವನಿಗೆ ತಿಳಿಯ ಹೇಳುವಷ್ಟರಲ್ಲಿ ಅಲ್ಲಮ ಪ್ರಭು ಅಲ್ಲಿಗೆ ಬಂದರು. ಆ ಜಂಗಮ ವೇಷಧಾರಿಯನ್ನು ಹೀಗೆ ಛೇಡಿಸಿದರು.
”ಹಾಲನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ
ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ
ಅಗ್ಘವಣೆಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ
ಪುಷ್ಪದ ನೇಮವ ಹಿಡಿದವ ದುಂಬಿಯಾಗಿ ಹುಟ್ಟುವ
ಇವು ಷಟ್ಸ್ಥಲಕ್ಕೆ ಹೊರಗು, ಭಕ್ತಿ ನಿಷ್ಠೆಯಲ್ಲಿಲ್ಲದವರ
ಮೆಚ್ಚ ನಮ್ಮ ಗಹೇಶ್ವರಾ’‘ ಎಂದುಹೇಳಿ ಬಸವಣ್ಣನಿಗೆ ”ಬಸವಣ್ಣಾ ಶಿವಶರಣರಿಗೆ ರಾಗದ್ವೇಷಗಳು ಸಲ್ಲವು. ಉಡುಪಿಗೆ ತಕ್ಕ ನಿಲುವು, ವೇಷಕ್ಕೆ ತಕ್ಕ ನಡತೆ ಇರಬೇಕು. ಆನೆಯ ವೇಷತೊಟ್ಟು ನಾಯಿಯಂತೆ ಬೊಗಳುವ ಮನುಷ್ಯರ ಬಗ್ಗೆ ಎಚ್ಚರವಿರಬೇಕು. ನೀನು ಮಾವಿನ ಮರದಂತೆ ಕಲ್ಲಿನಿಂದ ಹೊಡೆದವರಿಗೂ ಹಣ್ಣು ಕೊಡುತ್ತೀಯೆ. ಆದರೂ ಲೌಕಿಕದ ಬಗ್ಗೆ ಎಚ್ಚರವಿರಬೇಕು. ಕಂಡಕಂಡವರಿಗೆ ದೀಕ್ಷೆಕೊಟ್ಟರೆ ಸಂಪಿಗೆಯಿಂದ ಸಗಣಿಯ ಬೆನಕನನ್ನು ಪೂಜಿಸಿದಂತಾಗುತ್ತದೆ” ಎಂದು ಮಾರ್ಗದರ್ಶನ ಮಾಡಿದರು.
ಅವರವರ ಕಾಯಕಗಳ ಪರಭಾಷೆಯ ಮೂಲಕವೇ ಜನರಿಗೆ ಅಲ್ಲಮರು ಮಾರ್ಗದರ್ಶನ ನೀಡುತ್ತಿದ್ದರೆಂದು ವೇದ್ಯವಾಗುತ್ತದೆ. ಶಿವಶರಣರ ವಚನಗಳ ಸಂಗ್ರಹದಲ್ಲಿ ಅಲ್ಲಮರು ಹೆಚ್ಚು ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಅಧ್ಯಾತ್ಮದ ತತ್ವಗಳನ್ನು ವಿನೂತನ ಶೈಲಿಯಲ್ಲಿ ಅಭಿವ್ಯಕ್ತಿಸಲು ಬೆಡಗಿನ ವಚನಗಳನ್ನು ಬಳಸಿದ್ದಾರೆ. ಭಗವಂತಹ ಸಾಕ್ಷಾತ್ಕಾರವನ್ನು ಬಯಸುವ ಸಾಧಕರು ಆ ಪರತತ್ವದ ನೆಲೆಯನ್ನು ತಮ್ಮಲ್ಲಿಯೇ ಕಾಣಲರಿಯದೇ ಕಂಡಕಂಡಲ್ಲಿ ಭಕ್ತಿನಿವೇದಿಸಿ ಬಳಲುವ ಪರಿಯನ್ನು ನೋಡಿ:
”ಭವದಲೊಬ್ಬ ದೇವರು ಮಾಡಿ
ಮನದಲ್ಲೊಂದು ಭಕ್ತಿಯ ಮಾಡಿದರೆ
ಕಾಯದ ಕೈಯಲ್ಲಿ ಕಾರ್ಯವುಂಟೇ?
ವಾಯಕ್ಕೆ ಬಳಲುವರು ನೋಡಾ
ಎತ್ತನೇರಿ ಎತ್ತನರಸುವರು
ಎತ್ತ ಹೋದರೈ ಗುಹೇಶ್ವರಾ”
ಎತ್ತಿನ ಮೇಲೆ ಕುಳಿತು ಸವಾರಿ ಮಾಡುತ್ತಿರುವ ಬಾಲಕನೊಬ್ಬನು ತಾನು ಏರಿ ಕುಳಿತ ಆ ಎತ್ತನ್ನೇ ಎಲ್ಲೆಲ್ಲಿಯೋ ಹುಡಕಾಡುತ್ತಿರುವಂತೆ, ಬಹುಜನ ಸಾಧಕರು ದೇಹವೇ ದೇಗುಲವೆಂಬುದನ್ನು ಮರೆತು, ಆತ್ಮವೇ ಪರಶಿವನೆಂಬುದನ್ನರಿಯದೇ ಸಿಕ್ಕಸಿಕ್ಕಲ್ಲೆಲ್ಲಾ ದೇವರನ್ನು ಹುಡುಕುತ್ತಾ ವೃಥಾ ಬಳಲುತ್ತಾರೆ. ಪ್ರಾಪಂಚಿಕ ಸುಖಗಳತ್ತ ಮನಮಾಡಿದವರಿಗೆ ಎಚ್ಚರಿಕೆಯನ್ನಿತ್ತು ಅಲ್ಲಮರು ಬೆಳಕು ತೋರುತ್ತಾರೆ. ‘‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖವು ನೋಡಾ’‘ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಹೆಣ್ಣು, ಹೊನು, ಮಣ್ಣು ಇವು ಮೂರು ಮಾಯೆಯೆಂದು ಹಲುಬುತ್ತಿರುವ ಜನರಿಗೆ ಅವುಗಳು ಮಾಯೆಯಲ್ಲ, ನಿಮ್ಮ ಮನಸ್ಸಿನ ಮುಂದೆ ಇರುವ ಆಸೆಯೇ ಮಾಯೆ ಎಂದು ವಿವರಿಸುತ್ತಾರೆ. ಇಂತಹ ಆಸೆ ಆಮಿಷಗಳಿಗೆ ಒಳಗಾಗದೇ ದೈವ ಸಾರ್ಥಕತೆಯನ್ನು ಪಡೆದುಕೊಳ್ಳಿ, ಜ್ಞಾನವೆಂಬ ರತ್ನವನ್ನು ದಕ್ಕಿಸಿಕೊಳ್ಳಿ ಎನ್ನುತ್ತಾರೆ.
ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ ಅವು ಜಗಕ್ಕಿಕ್ಕಿದ ವಿಧಿ.
ನಿನ್ನೊಡನೆ ಏನಿದ್ದರೂ ಜ್ಞಾನವೆಂಬ ರತ್ನ
ಅಂತಪ್ಪ ದಿವ್ಯರತ್ನವ ಕೆಡಗೊಡದೆ
ಅಲಂಕರಿಸಿದೆಯಾದರೆ ಗುಹೇಶ್ವರ ಲಿಂಗದಲ್ಲಿ
ನಿನಗಿಂತ ಸಿರಿವಂತರಿಲ್ಲ
ಎಂದು ನಿಜವಾದ ಒಡವೆಯೇನೆಂದು ಹೇಳಿದ್ದಾರೆ. ಬಸವಾದಿ ಶರಣರ ಧಾರ್ಮಿಕ ಆಂದೋಲನ ಅನುಭಾವದ, ಅಧ್ಯಾತ್ಮದ ನೆಲೆಗಟ್ಟಿನ ಮೇಲೆ ಮುನ್ನಡೆಯಲು ಅಲ್ಲಮರು ಜ್ಯೋತಿಯಾದರು. ಇವರು ಹೇಳುವ ಮಾತುಗಳಲ್ಲಿ ಒಡಪಿನಂತೆ ಶಬ್ದಾರ್ಥಕ್ಕಿಂತ ಗೂಢಾರ್ಥವೇ ಹೆಚ್ಚಿಗೆ. ಸಾಮಾನ್ಯ ಓದಿಗೆ ಸುಲಭವಾಗಿ ಅರಿವಾಗುವುದಿಲ್ಲ. ಆದರೆ ಅವು ಅನುಭಾವ ಪೂರ್ಣವಾಗಿದ್ದು ಒಳಹೊಕ್ಕು ನೋಡಿದಾಗಲೇ ನಿಜದ ಅರಿವಾಗುವುದು.
ಪರಮಾತ್ಮನನ್ನು ಪೂಜೆಮಾಡುತ್ತಾ ಹಲವು ಪ್ರತಿಫಲಗಳನ್ನು ಭಕ್ತರು ಬೇಡುವವರನ್ನು ಹೀಗೆ ಎಚ್ಚರಿಸಿದ್ದಾರೆ.
”ಮಜ್ಜನಕ್ಕೆರೆದು ಫಲ ಬೇಡುವರಯ್ಯಾ
ತಮಗೆಲ್ಲಿಯದೋ ಫಲವು ಆ ಫಲವು ಪಾತಾಳಕ್ಕಲ್ಲದೆ
ಪತ್ರೆ ಪುಷ್ಪದಲ್ಲಿ ಅರ್ಚಿಸಿ ಫಲವ ಬೇಡುವರಯ್ಯಾ
ತಮಗೆಲ್ಲಿಯದೋ ಆ ಫಲವು ಗಿಡಗಳಿಗಲ್ಲದೆ
ಸುಯಿಧಾನವರ್ಪಿಸಿ ಪ್ರಸಾದದ ಫಲವ ಬೇಡುವರಯ್ಯಾ
ತಮಗೆಲ್ಲಿಯದೋ ಆ ಫಲವು ಹದಿನೆಂಟು ಧಾನ್ಯಗಳಿಗಲ್ಲದೆ
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು ಫಲವ ಬೇಡುವ
ಸರ್ವಾನ್ಯಾಯಿಗಳನೇನೆಂಬೆ ಗುಹೇಶ್ವರಾ”
ವೈಜ್ಞಾನಿಕ ಅಂಶಗಳನ್ನೊಳಗೊಂಡ ವಚನಗಳೂ ಇವೆ. (ಒಟ್ಟು 1645 ವಚನಗಳು ಲಭ್ಯ) ಇವುಗಳಲ್ಲಿ ಪ್ರತಿಮೆ, ಉಪಮೆ, ವಿಡಂಬನೆ ಹೇರಳವಾಗಿವೆ.
”ಆಕಾಶವನಡರುವಂಗೆ ಅಟ್ಟಗೋಲದ ಹಂಗೇಕೆ?
ಅಮೃತಸಾಗರದೊಳಿದ್ದು ಆಕಳ ಚಿಂತೆಯೇಕೆ?
ಬೆಟ್ಟಕ್ಕೆ ಚಳಿಯಾದರೆ ಏನ ಹೊದಿಸುವರಯ್ಯಾ”.
ಮಹಾವೈರಾಗ್ಯ ಮೂರ್ತಿಯಾಗಿದ್ದ ಅಲ್ಲಮನಲ್ಲಿ ಪ್ರಪಂಚ ಜ್ಞಾನವು ವಿಶೇಷವಾಗಿತ್ತು. ಆತ ಮಹಾಮನೆಯಿಂದ ದೇಶಸಂಚಾರಾರ್ಥವಾಗಿ ಹೊರಡುತ್ತಾನೆ. ಮತ್ತೆ ಬರುತ್ತೇನೆಂದು ಹೇಳುತ್ತಾನೆ. ಹೋಗುವ ಮುನ್ನ ಬಸವಣ್ಣನನ್ನು ಕರೆದು ಪ್ರತ್ಯೇಕವಾಗಿ ಕೆಲವು ಎಚ್ಚರಿಕೆಯ ನುಡಿಗಳನ್ನು ಹೇಳುತ್ತಾನೆ. ”ಬಸವಣ್ಣಾ, ಸಮಾಜ ಸುಧಾರಣೆಯೆಂದರೆ ಎಣ್ಣೆಚೆಲ್ಲಿದ ಹಾದಿಯಲ್ಲಿ ನಡೆದಂತೆ. ಹುಲಿಯ ಬೆನ್ನ ಸವಾರಿಯಂತೆ. ರಕ್ಕಸಿಯ ಹೆಗಲೇರಿದಂತೆ. ಜವನ ಮನೆಗೆ ಹೋಗಿ ಬಂದಂತೆ. ಅಲ್ಲಿಂದ ಮರಳುವುದು ಸುಲಭ ಸಾಧ್ಯವಲ್ಲ. ಹೀಗಿರುವಾಗ ನೀನು ಸಮಚಿತ್ತವನ್ನು, ನಿರ್ಲಿಪ್ತ ನೋಟವನ್ನು ಪಡೆದು ಇದರಿಂದ ಪಾರಾಗು” ಎಂದು ಹಿತವಚನ ನುಡಿದು ತೆರಳುತ್ತಾನೆ. ಅದನ್ನು ಬಸವಣ್ಣ ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತಾನೆಯೇ ಹೊರತು ಅನುಷ್ಠಾನಗೈಯಲಾಗಲಿಲ್ಲ.
ಅಲ್ಲಮಪ್ರಭು ಪರ್ಯಟನದಿಂದ ಹಿಂದಿರುಗಿ ಮತ್ತೊಮ್ಮೆ ಕಲ್ಯಾಣಕ್ಕೆ ಬರುವ ವೇಳೆಗೆ ಮಹಾಮನೆ ಮತ್ತು ಅನುಭವ ಮಂಟಪದ ಕಲಾಪಗಳು ಇಮ್ಮಡಿಸಿರುತ್ತವೆ. ಶರಣರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಹಲವಾರು ಪ್ರಮುಖ ಘಟನೆಗಳು ಆಗಿಹೋಗಿರುತ್ತವೆ. ಪಟ್ಟಭದ್ರರು ದೊರೆ ಬಿಜ್ಜಳ ಮತ್ತು ಬಸವಣ್ಣನವರ ಮಧ್ಯೆ ವಿಷಮತೆ ಮೂಡಿಸುವಲ್ಲಿ ಸಫಲರಾಗಿರುತ್ತಾರೆ. ಇದರಿಂದ ನೊಂದು ಬಸವಣ್ಣನವರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಇತ್ತು ರಾಜ್ಯ ತೊರೆದು ಹೋಗುವಂತೆ ಮಾಡಿರುತ್ತಾರೆ. ನಂತರ ಬಿಜ್ಜಳನು ತನ್ನ ತಪ್ಪನ್ನು ಅರಿತು ತಡಮಾಡದೇ ಬಸವಣ್ಣನನ್ನು ಹುಡುಕಿಹೋಗಿ ಅವರಿಗೆ ದುಂಬಾಲು ಬಿದ್ದು ಹಿಂದಕ್ಕೆ ಕರೆತಂದು ಮೊದಲಿನಂತೆ ಮಂತ್ರಿಪದವಿ ಅಲಂಕರಿಸುವಂತೆ ಬೇಡಿಕೊಳ್ಳುತ್ತಾನೆ. ಅದೇ ಸಂದರ್ಭದಲ್ಲಿ ಧುತ್ತೆಂದು ಎಲ್ಲಿಂದಲೋ ಅಲ್ಲಮಪ್ರಭು ಕಲ್ಯಾಣಕ್ಕೆ ಹಿಂದಿರುಗುತ್ತಾರೆ. ಅವನು ಮಾರವೇಷದಲ್ಲಿದ್ದರೂ ಅವನನ್ನು ಗುರುತಿಸಿ ಅವನಿಗಾಗಿ ವಿಶೇಷವಾದ ಶೂನ್ಯಪೀಠವನ್ನು ತಯಾರಿಸಿರುತ್ತಾನೆ ಬಸವಣ್ಣ. ಆ ಸಂದರ್ಭದಲ್ಲಿ ಬಸವಣ್ಣನನ್ನು ಅಲ್ಲಮನು ಒಂದು ಪರೀಕ್ಷೆಗೆ ಒಳಪಡಿಸುತ್ತಾನೆ. ಬಸವಣ್ಣನು ಕ್ಷಣಕಾಲ ಹೆಚ್ಚಾದ ಆತ್ಮವಿಶ್ವಾಸದಿಂದ ಬೀಗಿರುತ್ತಾರೆ. ಅಲ್ಲಮನು ತನ್ನ ಹಸಿವೆಯನ್ನು ಹಿಂಗಿಸು ಎಂದಾಗ ಆಗಬಹುದೆಂದು ಉತ್ತರಿಸಿ ಮಹಾಮನೆಯಲ್ಲಿ ತಯಾರಾದ ಭಕ್ಷ್ಯಗಳನ್ನು ಹೇರಳವಾಗಿ ಉಣಬಡಿಸಲು ಹೇಳುತ್ತಾನೆ. ಅಲ್ಲಮನು ಬಡಿಸಿದ್ದೆಲ್ಲವನ್ನೂ ಉಂಡರೂ ಅವನ ಹಸಿವೆ ಹಿಂಗುವುದಿಲ್ಲ. ಇನ್ನೂ ಬೇಕೆನ್ನುತ್ತಾನೆ. ಆಗ ತನ್ನ ತಪ್ಪಿನ ಅರಿವಾಗಿ ಬಸವಣ್ಣ ತನ್ನನ್ನೇ ಸಮರ್ಪಿಸಿಕೊಳ್ಳುತ್ತಾನೆ. ಅಲ್ಲಮನು ನಿನ್ನ ಸಹಸ್ರಾರು ಶರಣರನ್ನು ದಾಸೋಹದಿಂದ ತೃಪ್ತಿಪಡಿಸುವೆನೆಂಬ ಅಹಮ್ಮಿನ ಕಣ್ಣನ್ನು ತೆರೆಸಲೆಂದೇ ಈ ನಾಟಕವಾಡಿದುದಾಗಿ ಹೇಳುತ್ತಾನೆ.
”ದಾಸೋಹದಲ್ಲಿ ವಿನಯ ಮೆರೆಸಬೇಕು
ಕಾಯದಲ್ಲಿ ಕಾಯ ಸವೆದು ಪ್ರಾಣದಲ್ಲಿ ಪ್ರಾಣ ಸವೆದು
ನಿಶ್ಚಿಂತನಾದ ಬಳಿಕ ಹಸಿವು ತೃಷೆಗಳೆಂಬುದು
ಅಳಿದು ಹೋದವು ಕೇಳಾ. ಉಂಡೇವೆಂಬ ಬಯಕೆಯೂ ಇಲ್ಲ.
ಒಲ್ಲೆನೆಂಬ ವೈರಾಗ್ಯವೂ ಇಲ್ಲ. ಇದು ಸ್ವಭಾವ ತೃಪ್ತಿಯೊಳಗಿತ್ತು
ಇದು ಕಾರಣ ನಮ್ಮ ಗುಹೇಶ್ವರ ಲಿಂಗಕ್ಕೆ
ಆರೋಗಣೆಯಿಲ್ಲ ಕಾಣಾ ಸಂಗನ ಬಸವಣ್ಣ”
ಎಂದು ತಿಳಿಸಿದನು. ಅಲ್ಲಮನನ್ನು ಶೂನ್ಯಪೀಠಾಧಿಪತಿಯೆಂದು ಎಂದು ಕರೆದು ಕೂಡಿಸಿ ಗೌರವಿಸಿದರು. ಈ ಶೂನ್ಯಸಂಪಾದನೆ ಎಂದರೇನು? ಎಂಬ ಪ್ರಶ್ನೆಗೆ ‘ಶೂನ್ಯ’ ಮತ್ತು ‘ಸಂಪಾದನೆ’ ಎಂಬುವು ವಿರುದ್ಧಾರ್ಥಕ ಪದಗಳಾದರೂ ವಿಶಾಲಾರ್ಥದಲ್ಲಿ ಹಾಗಿಲ್ಲ. ಶೂನ್ಯವೆಂದರೆ ಎಲ್ಲವನ್ನೂ ಒಳಗೊಂಡದ್ದು, ಶಿವವಾದದ್ದು, ಮಂಗಳಕರವಾದದ್ದು ಎಂಬುದನ್ನು ಕವಿ ಶಿವಗಣ ಪ್ರಸಾದಿ ಮಹಾದೇವಯ್ಯ ವಿವರಿಸಿದ್ದಾನೆ. ಶರಣರ ನುಡಿಗಳಲ್ಲಿ ”ಅಂಗವೇ ಲಿಂಗವಾಗುವುದು ಅಥವಾ ಲಿಂಗಾಂಗ ಸಾಮರಸ್ಯದ ಸ್ಥಿತಿ ತಲುಪುವುದು ” ಅದಕ್ಕೇ ಸರ್ವ ವಿಧದಲ್ಲೂ ಅಲ್ಲಮನೇ ಶ್ರೇಷ್ಠನೆಂದು ಬಸವಣ್ಣನವರ ಧೃಢನಂಬುಗೆ.
ಅನಂತರ ಅನುಭವ ಮಂಟಪದಲ್ಲಿ ಶರಣರ ಗುಂಪಿಗೆ ಸೇರ್ಪಡೆಯಾಗಿದ್ದ ಮಂತ್ರಿ ಮಧುವರಸರ ಪುತ್ರಿ ಕಲಾವತಿಯು ಚಮ್ಮಾರ ಹರಳಯ್ಯನ ಪುತ್ರ ಶೀಲವಂತನನ್ನು ಪ್ರೀತಿಸಿದಳು. ಇಬ್ಬರ ಮನೆಯಲ್ಲಿ ಪೋಷಕರು ಇದಕ್ಕೆ ಸಮ್ಮತಿಸಿದರು. ಈ ವಿವಾಹದಿಂದ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಆಗಬಹುದೆಂಬ ಸಂಶಯ ಎಲ್ಲರ ಮನಸ್ಸಿನಲ್ಲಿ ಮೂಡಿತ್ತು. ಆ ಕಾರಣಕ್ಕಾಗಿ ಇದನ್ನು ಅನುಭವ ಮಂಟಪದಲ್ಲಿ ಚರ್ಚಿಸಿ ಶರಣರ ಅಭಿಪ್ರಾಯ ಪಡೆಯಲು ಸಭೆಯ ಮುಂದಿಟ್ಟರು. ಅಧ್ಯಕ್ಷರಾದ ಅಲ್ಲಮರು ”ಇದು ಕೇವಲ ಬೌದ್ಧಿಕ ಚರ್ಚೆಯಲ್ಲ. ಇಬ್ಬರ ನಡುವಿನ ವಿವಾಹದ ಪ್ರಶ್ನೆಯೂ ಅಲ್ಲ. ಬದಲಿಗೆ ಇದು ಸಾಮಾಜಿಕ ಪ್ರವಾಹದ ವಿರುದ್ಧ ಈಜುವ ಸಾಹಸವಾಗಿದೆ. ಆದ್ದರಿಂದ ಇನ್ನಷ್ಟು ವಿಚಾರ ಮಂಥನ ಅವಶ್ಯವಾಗಿದೆ”. ಎಂದು ಚರ್ಚೆಗೆ ಚಾಲನೆ ಕೊಡುತ್ತಾರೆ. ಬಹಳಷ್ಟು ಚರ್ಚೆ ನಡೆದು ಬಹುಪಾಲು ಶರಣರು ”ಗುರುವೇ, ಇದರಲ್ಲಿ ಚರ್ಚಿಸಲು ಏನಿದೆ? ನಿಜಭಕ್ತರು ಆಗಲೇ ತಮ್ಮ ಜಾತಿಯ ವೇಷವನ್ನು ಕಳಚಿ ಶರಣರಾಗಿದ್ದಾರೆ. ಅಂದಮೇಲೆ ಇಲ್ಲಿ ವರ್ಣಸಂಕರದ ಮಾತು ಎಲ್ಲಿಂದ ಬರುತ್ತದೆ?” ಎಂದು ಅಭಿಪ್ರಾಯ ಪಡುತ್ತಾರೆ. ಆಗ ಅಲ್ಲಮರು ”ಇದನ್ನು ತಾತ್ವಿಕವಾಗಿ ನಾನೂ ಒಪ್ಪುವೆ. ಆದಸರೆ ಅದಿನ್ನೂ ಆಚರಣೆಗೆ ಬರಬೇಕಾಗಿದೆ. ಸಾಮಾಜಿಕ ಸಂಪ್ರದಾಯದ ಕಡಿದಾದ ಬಂಡೆಯನ್ನೇರಿ ನಿಲ್ಲುವುದು ಬಹುಕಷ್ಟ. ಈ ಜಾತ್ಯಾತೀತ ವಿವಾಹ ಜನರನ್ನು ಕೆರಳಿಸಬಹುದು. ಈಗಲೇ ಹೊಗೆಯಾಡುತ್ತಿರುವ ಅತೃಪ್ತಿಯ ಕಿಡಿಯನ್ನು ನಿರ್ಲಕ್ಷಿಸಲಾಗದು. ಈಗ ಕಿಡಿಗಳೆಲ್ಲ ಮುಂದುವರೆದ ಬೆಳವಣಿಗೆಗಳಿಂದ ಸಿಡಿಮದ್ದುಗಳಾಗಿ ಅಡಗಿವೆ. ಇವು ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ನೀವು ಅದರ ಬಗ್ಗೆ ಎಚ್ಚರದಿಂದಿರಬೇಕು” ಎನ್ನುತ್ತಾರೆ. ಆದರೆ ಬಹುಮತ ತೀರ್ಮಾನದಂತೆ ಬಸವಣ್ಣನು ಒತ್ತಾಯಕ್ಕೆ ಬಾಗುತ್ತಾನೆ. ಅದನ್ನು ಕಂಡ ಅಲ್ಲಮ ಯಾವ ಪ್ರತಿಕ್ರಿಯೆಯನ್ನೂ ತೋರದೇ ಬಹಳ ಹೊತ್ತು ಏಕಾಂತದಲ್ಲಿ ಧ್ಯಾನಾಸಕ್ತನಾಗಿ ಮೌನಕ್ಕೆ ಶರಣಾಗುತ್ತಾನೆ. ರಾತ್ರಿ ಮಲಗುವ ಮುನ್ನ ದರ್ಶನಕ್ಕೆ ಬಂದಿದ್ದ ಬಸವಣ್ಣ, ಚೆನ್ನಬಸವಣ್ಣ, ಅಪ್ಪಣ್ಣ, ಮಾಚಯ್ಯನವರಿಗೆ ”ನನಗೆ ಭಕ್ತಿಯ ಪಾರಮ್ಯವನ್ನು ಕಾಣುವಾಸೆಯಿತ್ತು. ಇಲ್ಲಿಗೆ ಬಂದು ನನ್ನ ಬಯಕೆ ಈಡೇರಿದೆ. ನನ್ನ ಕಾರ್ಯ ಮುಗಿಯಿತು. ಸಮಯದ ಕರೆ ಬಂದಿದೆ. ನಾನು ಇಲ್ಲಿಂದ ತೆರಳಬೇಕು. ಅಪ್ಪಣೆ ಕೊಡಿ. ಮುಂದೆ ನಡೆಯುವ ಘಟನೆಗಳ ಮುನ್ಸೂಚನೆ ನನಗಾಗಿದೆ. ಜಾತ್ರೆಯ ಮಧ್ಯೆ ಸಿಡಿಮದ್ದು ಸ್ಫೋಟಿಸಿದಂತೆ, ರಥದ ಚಕ್ರವು ಉತ್ಸವದ ದಾರಿಯಲ್ಲಿ ಕಳಚಿದ ಹಾಗೆ, ಕಡಲ ಮಧ್ಯದಲ್ಲಿ ಹಡಗು ಒಡೆದಂತೆ ವಿಚಿತ್ರ ಅನುಭವಗಳಾಗುತ್ತಿವೆ. ಬಸವಣ್ಣ ನಿನ್ನ ಸುತ್ತ ಭಕ್ತಿದುರ್ಗ ಆವರಿಸಿದೆ. ಈಗ ನೀನು ಬಂಧನವನ್ನು ಒಡೆದು ಲೌಕಿಕದಾಚೆಗೆ ಹೊರಡಬೇಕು. ಆ ಶಕ್ತಿ ನಿನಗಿದೆ. ಬಲು ಎಚ್ಚರಿಕೆಯಿಂದಿರಬೇಕು” ಎಂದು ಸಲಹೆ ನೀಡಿದರು.
ಕಲ್ಯಾಣದಿಂದ ಹೊರಟ ಅಲ್ಲಮನು ತನ್ನ ಆರಾಧ್ಯದೈವದ ಕರೆಗೆ ಓಗೊಟ್ಟು ಶ್ರೀಶೈಲದತ್ತ ನಡೆದನು. ಅಲ್ಲಿಗೆ ತಲುಪಿ ಶ್ರೀಗಿರಿಯನ್ನು ಏರತೊಡಗಿದನು. ಅದನ್ನು ಎಂದೋ ಏರಿ ನಿಂತಿದ್ದ ಅವರಿಗೆ ಆ ಎತ್ತರದಲ್ಲಿ ಅವ್ಯಕ್ತ ಪೂರ್ಣತೆಯ, ಅನಿರ್ವಚನೀಯ ಸೌಂದರ್ಯವನ್ನು ಪ್ರತ್ಯಕ್ಷವಾಗಿ ದರ್ಶಿಸಿ ಅದರ ಅಮರ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಈಗ ಅವರು ವಿಶ್ವಶಕ್ತಿಯ ಅದೃಶ್ಯ ರೂಪದಲ್ಲಿ ಬಯಲಾಗಲು ಸಿದ್ಧರಾದರು. ಅವರ ಮಾತಿನಲ್ಲೇ ಇದನ್ನು ವಿವರಿಸುವುದಾದರೆ,
”ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ
ಕಾಣೆನೆಂಬ ನುಡಿಗೆಡೆಯ ಕಾಣೆ,
ಕುರುಹುಗೆಟ್ಟ ಅರಿವ ನೆರೆಯರಿದು
ಬೆರಸಿದೆನೆಂಬ ಬಿರುನುಡಿಯ ನುಡಿಗೆ
ನಾಚಿದೆನಯ್ಯಾ ಗುಹೇಶ್ವರಾ ಹಾಗೇ
ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತಯ್ಯ
ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ”
ಎನ್ನುತ್ತಾರೆ. ಲಿಂಗೈಕ್ಯ ಸ್ಥಿತಿ ಶಿವಯೋಗದ ಕೊನೆಯ ಹಂತ. ಇದು ಮಾನವನ ಸಹಜ ಸಮಾಧಿ. ಅವರದೇಹವು ಗಾಳಿಯಂತೆ ಹಗುರಾಗತೊಡಗಿತು. ಆ ಪ್ರದೇಶದ ಕದಳಿಯ ವನದ ಬಳಿ ಗುಹೆಯೊಂದನ್ನು ಪ್ರವೇಶಿಸಿ ಧ್ಯಾನಾಸಕ್ತರಾದರು. ಅವರ ದೇಹದಿಂದ ಹೊರಟ ಬೆಳಕು ಸುತ್ತ ವ್ಯಾಪಿಸಿದ್ದ ಬೆಳಕಿನೊಳಗೆ ಲೀನವಾಗಿ ವಿಸ್ತಾರವಾದ ಬೆಳಕಿನ ಸಾಗರವಾಗಿ ವಿಶ್ವವನ್ನು ಸೇರಿತು. ಪೂರ್ಣದಿಂದ ಪೂರ್ಣದ ಕಡೆಗೆ ನಡೆದಿದ್ದ ಅವರ ಪಯಣ ಪರಿಪೂರ್ಣಗೊಂಡಿತು. ಶುದ್ಧ ನಿರಂಜನ ಪ್ರಭೆಯಾಗಿ ಸಚ್ಚರಿತ್ರರ ನಿರ್ಮಲ ಹೃದಯಗಳಲ್ಲಿ ಜಾಗೃತವಾಗಿದ್ದು ಅಲ್ಲಮಪ್ರಭುವಿನ ದಿವ್ಯಾತ್ಮ ಇಂದಿಗೂ ಬೆಳಕನ್ನು ನೀಡುತ್ತಲೇ ಇದೆ.
ಕನ್ನಡನಾಡು ಕಂಡ ಒಂದು ಅದ್ಭುತ ಪ್ರತಿಭೆಯಾಗಿ ಕಂಗೊಳಿಸಿ ಅಲ್ಲಮಪ್ರಭು ಇತಿಹಾಸದ ಪುಟಗಳಲ್ಲಿ ಶಾಶ್ವತವಾದ ಸ್ಥಾನ ಗಳಿಸಿಕೊಂಡರು.
ಆಧುನಿಕತೆಯ ಬದುಕು ಸಮಸ್ಯೆಗಳ ಆಗರವಾಗುತ್ತಿದೆ, ದಿನೇದಿನೇ ಕಣ್ಮ,ರೆಯಾಗುತ್ತಿರುವ ಮಾನವೀಯ ಮೌಲ್ಯಗಳನ್ನು ನಾವು ಈ ಶರಣರ ಸಂದೇಶಗಳಿಂದ ಮತ್ತೆಮತ್ತೆ ಎಚ್ಚೆತ್ತುಕೊಂಡು ಆಚರಿಸಬೇಕು.
ಅಲ್ಲಮಪ್ರಭುವಿನಂತೆ ವೈರಾಗ್ಯದ ತುತ್ತತುದಿಗೇರಲಾಗದಿದ್ದರೂ , ಹಿಡಿದ ಛಲ, ಮಾಡುವ ಸಂಕಲ್ಪಗಳಿಂದ ಗುರಿ ಮುಟ್ಟುವವರೆಗೂ ಹೋರಾಡುವ ಚೈತನ್ಯವನ್ನು ನಾವು ಗಳಿಸಿಕೊಂಡರೆ ನಮ್ಮ ಬಾಳೂ ಸಾರ್ಥಕವಾದೀತು.
-ಬಿ.ಆರ್.ನಾಗರತ್ನ, ಮೈಸೂರು
ಸವಿಸ್ತಾರವಾದ, ಮಾಹಿತಿಪೂರ್ಣ ಸುಂದರ ಲೇಖನ.
ಧನ್ಯವಾದಗಳು ನಯನಮೇಡಂ
ಅಲ್ಲಮ ಪ್ರಭು ಅವರ ಕೆಲವು ವಚನಗಳನ್ನು ಮಾತ್ರ ಪಾಠದಲ್ಲಿ ಓದಿದ್ದೆವು. ಇನ್ನೇನೂ ಗೊತ್ತಿರಲಿಲ್ಲ. ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಟ್ಟ ಈ ಬರಹ ಬಹಳ ಇಷ್ಟವಾಯಿತು.
ಮೊದಲೆಯದಾಗಿ..ನನ್ನ ಬರಹ ತಮ್ಮ ಪತ್ರಿಕೆಯ ಲ್ಲಿ ಪ್ರಕಟಿಸಿ ಪ್ರೋತ್ಸಾಹ ನೀಡಿರುವುದಕ್ಕಾಗಿ ಧನ್ಯವಾದಗಳು ಹಾಗೂ ಆಲೇಖನಕ್ಕೆ ಪ್ರತಿಕ್ರಿಯೆ ನೀಡಿರುವುದಕ್ಕಾಗಿ ಮತ್ತೊಂದು ಧನ್ಯವಾದಗಳು.. ಗೆಳತಿ ಹೇಮಾ
ಅಲ್ಲಮಪ್ರಭುಗಳ ಕುರಿತು ಸಮಗ್ರ ಮಾಹಿತಿಗಳನ್ನು ಹೊತ್ತ ವಿವರಣಾತ್ಮಕ ಲೇಖನವು ಬಹಳ ಚೆನ್ನಾಗಿದೆ ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ನಿಜಕ್ಕೂ ಅಲ್ಲಮ ಪ್ರಭುವಿನ ಕುರಿತಾದ ಪ್ವೌಢ ಪ್ರಬಂಧ ಇದಾಗಿದೆ. ಅನೇಕ ಮಾಹಿತಿಗಳೊಂದಿಗೆ, ಅರ್ಥಪೂರ್ಣ ವಚನಗಳ ಉಲ್ಲೇಖವೂ ಸೇರಿ ಸೊಗಸಾಗಿ ಮೂಡಿ ಬಂದಿದೆ.
ಧನ್ಯವಾದಗಳು ಪದ್ಮಾ ಮೇಡಂ
ತುಂಬಾ ಚೆನ್ನಾಗಿ ಬಂದಿದೆ ಮೇಡಂ. ಅರಿವಿನ ವಿಸ್ತಾರ ಮತ್ತು ನಮ್ಮ ಅಲ್ಲಮಪ್ರಭುದೇವರು ಗೌರೀಶಂಕರದೆತ್ತರ !
ಎಲ್ಲ ವಚನಕಾರರ ಮಾರ್ಗದರ್ಶೀ ಶೂನ್ಯ ಸಿಂಹಾಸನಾಧಿಪತಿ ಅಲ್ಲಮರು. ಅವರ ವಚನಗಳು ನಿತ್ಯನೂತನ.
ಎಷ್ಟು ಓದಿಕೊಂಡರೂ ಇನ್ನೂ ಏನೋ ಲಭಿಸುವ ಗಣಿಯ ಗೆಣೆಕಾರರು ಅವರು, ನಮಗೆ.
ವಚನಗಳ ಉಲ್ಲೇಖ ಮತ್ತು ವ್ಯಾಖ್ಯಾನ ಸಮಯೋಚಿತವಾಗಿದೆ. ಅಭಿನಂದನೆಗಳು.
ಧನ್ಯವಾದಗಳು..ಸಾರ್