ಅವಿಸ್ಮರಣೀಯ ಅಮೆರಿಕ : ಎಳೆ 83

Share Button

ಒರೆಗಾನ್ ಜ್ವಾಲಾಮುಖಿಗಳತ್ತ…

ನಾವಿದ್ದ ಸಾಂತಾಕ್ಲಾರದಿಂದ ಸುಮಾರು ಐನ್ನೂರು ಮೈಲು ದೂರದಲ್ಲಿರುವ ಒರೆಗಾನ್ ನ ಜೀವಂತ ಹಾಗೂ ನಿರ್ಜೀವವಾಗಿ, ಪ್ರಸ್ತುತ ಪಳೆಯುಳಿಕೆಯಾಗಿ ಇರುವ ಜ್ವಾಲಾಮುಖಿಗಳನ್ನು ನೋಡಲು  ಹೋಗುವ ಕುರಿತು ಯೋಜನೆ ರೂಪುಗೊಳ್ಳುತ್ತಿತ್ತು. ಈ ಜ್ವಾಲಾಮುಖಿಗಳ ಪ್ರದೇಶವು, ರಾಷ್ಟ್ರೀಯ ರಕ್ಷಿತ ಪ್ರದೇಶವಾಗಿದ್ದು; 1990ರಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆಯಲ್ಪಟ್ಟಿತು. ಇದು ಸುಮಾರು 54,822 ಎಕರೆಗಳಷ್ಟು  ಪ್ರದೇಶವನ್ನು ವ್ಯಾಪಿಸಿದ್ದು; ಮಿಲಿಯಗಟ್ಟಲೆ ವರ್ಷಗಳ ಹಿಂದೆ ಸಂಭವಿಸಿರಬಹುದಾದ ಜ್ವಾಲಾಮುಖಿಯಿಂದ ಹೊರಹೊಮ್ಮಿದ ಲಾವಾರಸವು ನೂರಾರು ಎಕರೆ ಪ್ರದೇಶದಲ್ಲಿ ಹರಡಿ ವಿಚಿತ್ರ ರೀತಿಗಳಲ್ಲಿ ಹೆಪ್ಪುಗಟ್ಟಿದೆ. ಇದು ಮಾತ್ರವಲ್ಲದೆ, ಈ ಪ್ರದೇಶದಲ್ಲಿ ಅಲ್ಲಲ್ಲಿ ಜೀವಂತ ಜ್ವಾಲಾಮುಖಿಗಳನ್ನು ಇಂದಿಗೂ ಕಾಣಬಹುದು.

31.9.2019ರ ಬೆಳ್ಳಂಬೆಳಗ್ಗೆ ಮನೆಯಿಂದ ಹೊರಟಾಗ ನಮ್ಮ ಜೊತೆಗೆ ಇನ್ನೆರಡು ಕುಟುಂಬ ಸ್ನೇಹಿತರ ತಂಡಗಳೂ ಸೇರಿಕೊಂಡವು. ಸಮವಯಸ್ಕರಾದ ಪುಟ್ಟ ಮಕ್ಕಳು ಜೊತೆಗೆ ಒಂದೇ ವಾಹನದಲ್ಲಿ ಪಯಣಿಸಿ ಮಜಾ ಮಾಡಿದರು. ನಾವು ಅಲ್ಲಿಗೆ ತಲಪಿದಾಗ ಬೆಳಗ್ಗೆ ಸುಮಾರು ಹನ್ನೊಂದು ಗಂಟೆ. ಜನವಸತಿ ಇಲ್ಲದ ಪ್ರದೇಶವಾದರೂ, ಸುವ್ಯವಸ್ಥಿತ ವಾಹನ ನಿಲುಗಡೆ ವ್ಯವಸ್ಥೆ ಖುಶಿಕೊಟ್ಟಿತು. ಅಲ್ಲಿದ್ದ ಮಾಹಿತಿ ನೀಡುವ ಪುಟ್ಟ ಕಟ್ಟಡದಲ್ಲಿ ಎಲ್ಲಾ ಮೂಲ ಸೌಕರ್ಯಗಳ ಜೊತೆಗೆ; ಆ ಪ್ರದೇಶದಲ್ಲಿರುವ ಎಲ್ಲಾ ಜ್ವಾಲಾಮುಖಿಗಳ ಮಾಹಿತಿ, ಅಲ್ಲಿಗೆ ಹೋಗುವ ಮಾರ್ಗಸೂಚಿಗಳು ಲಭ್ಯವಿವೆ. ಯಾತ್ರಿಕರಿಗೆ ಅತ್ಯಗತ್ಯವಿರುವ ಹಾಗೂ ನೆನಪಿನ ಕೊಡುಗೆಯಾಗಿ ನೀಡಬಹುದಾದ ಹಲವಾರು ವಸ್ತುಗಳನ್ನು ಖರೀದಿಗಾಗಿ ಇರಿಸಿದ್ದರು. ಸ್ವಲ್ಪ ಸಮಯವನ್ನು ಅಲ್ಲಿ ಕಳೆದು; ಅಲ್ಲಿಂದ ಜ್ವಾಲಾಮುಖಿಗಳತ್ತ ನಮ್ಮ ಪಯಣ ಸಾಗಿತು…

ಕಡಿದಾದ ಏರು ರಸ್ತೆಯಲ್ಲಿ ಸಾಗುತ್ತಿದ್ದಂತೆ ನಮಗೆ ಉರಿಯುವ ಗಂಧಕದ ವಾಸನೆ ಮೂಗಿಗೆ ಅಡರಿತು! ರಸ್ತೆಯ ಅಕ್ಕಪಕ್ಕಗಳಲ್ಲಿಯೇ  ಕೊತಕೊತ ಕುದಿಯುತ್ತಾ ತನ್ನ ಸುತ್ತಲೂ ಹಳದಿ ಮಿಶ್ರಿತ ಮಣ್ಣನ್ನು ಹರಡಿ ಕೂತಿರುವ ಮರಿ ಜ್ವಾಲಾಮುಖಿಗಳು ನಮ್ಮನ್ನು ಸ್ವಾಗತಿಸಿದವು! ಬಲಭಾಗದಲ್ಲಿ ಆಳವಾದ ಕಣಿವೆಯು ನಮ್ಮನ್ನು ಹೆದರಿಸುವಂತೆ ಬಾಯಗಲಿಸಿ ನಿಂತಿತ್ತು. ಸಪೂರವಾದ ರಸ್ತೆಯಲ್ಲಿ, ಎತ್ತರವಾದ ಬೆಟ್ಟದ ಮಧ್ಯಭಾಗದಲ್ಲಿ ವಾಹನವನ್ನು ಬಹಳ ಜಾಗರೂಕತೆಯಿಂದ ಚಲಾಯಿಸಬೇಕಿತ್ತು. ಸುಮಾರು ಒಂದು ಕಿ.ಮೀ. ದೂರದಲ್ಲಿ ಎತ್ತರವಾದ ಒಂದು ಜಾಗದಲ್ಲಿ ವಾಹನವನ್ನು ನಿಲ್ಲಿಸಲಾಯಿತು. ಆಹಾ… ಕೆಳಗಡೆಗೆ ಅದ್ಭುತವಾದ ನೋಟ! ಪ್ರಕೃತಿ ಮಾತೆಯು ಅತ್ಯಂತ ವಿಶಾಲವಾದ ತನ್ನ ಮಡಿಲಲ್ಲಿ, ನೂರಾರು ಗುಡ್ಡ ಬೆಟ್ಟಗಳು, ಚೂಪು ಮೊನೆಯ ಎಲೆಯ ಮರಗಳ ದಟ್ಟ ಕಾಡನ್ನು ಹರಡಿ ಸಿಂಗರಿಸಿ ನಿಂತ ನಯನಮನೋಹರ ದೃಶ್ಯವು ಕಣ್ಣೆವೆ ಮುಚ್ಚದಂತೆ ಮಾಡಿತು.

ಮುಂದಕ್ಕೆ ಸ್ವಲ್ಪ ದೂರದಲ್ಲಿ, ವಾಹನ ದಟ್ಟಣೆಯಿಂದಾಗಿ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಉದ್ದುದ್ದ ಸಾಲಿನಲ್ಲಿ ನಿಧಾನವಾಗಿ ನಮ್ಮ ವಾಹನವು ತಂಗುದಾಣದತ್ತ ಚಲಿಸಿತು. ಇಲ್ಲಿ ಮೂಲಭೂತ ಸೌಕರ್ಯಗಳೆಲ್ಲ ಇದ್ದರೂ, ಸ್ವಚ್ಛತೆಗೆ ಅಷ್ಟು ಗಮನಕೊಟ್ಟಂತೆ ಕಾಣಲಿಲ್ಲ. ಈ ತಂಗುದಾಣವು, ಕಾಲ್ನಡಿಗೆಯ ಮೂಲಕ ಹಲವಾರು ಜೀವಂತ ಜ್ವಾಲಾಮುಖಿಗಳನ್ನು ವೀಕ್ಷಿಸಲು ಅನುಕೂಲವಾಗುವಂತಹ ಕೇಂದ್ರಸ್ಥಾನವಾಗಿದೆ.

ಅದಾಗಲೇ ಮಧ್ಯಾಹ್ನ ಹೊತ್ತು…ಬಿಸಿಲ ಝಳ ಚೆನ್ನಾಗಿಯೇ ಹೊಡೆಯುತ್ತಿತ್ತು. ಆದರೂ, ನಮಗೆ ಅನುಕೂಲಕರವಾಗಿರುವ, ಅಲ್ಲಿಂದ ಸುಮಾರು ಎರಡು ಮೈಲು ಕಾಲ್ನಡಿಗೆ ದೂರದಲ್ಲಿರುವ, ಜೀವಂತ ಜ್ವಾಲಾಮುಖಿಯನ್ನು ವೀಕ್ಷಿಸಲು ಹೊರಟು ನಿಂತೆವು. ಯಾಕೆಂದರೆ, ಇದು ಅತ್ಯಂತ ಕ್ಲಿಷ್ಟಕರವಾದ ಏರು ದಾರಿಯಾಗಿದ್ದು, ಐದೂವರೆ ಗಂಟೆಯ ಮೊದಲೆ ನಾವು ಹಿಂತಿರುಗಿ ನಮ್ಮ ವಾಹನದೆಡೆಗೆ ತಲಪಬೇಕಾಗಿತ್ತು.

ಸುಮಾರು ಮುನ್ನೂರು ಮೀಟರುಗಳಷ್ಟು ದೂರ ಸಮತಟ್ಟಾದ ಪ್ರದೇಶವಾಗಿದ್ದು ನಡಿಗೆ ಸುಲಭವಾಯಿತು. ಇಲ್ಲಿ ಒಂದು ವಿಶಾಲವಾದ ಸರೋವರವು ಸ್ವಚ್ಛ ನೀಲಿ ನೀರು ತುಂಬಿ ಕಂಗೊಳಿಸುತ್ತಿತ್ತು. ಅದರ ಪಕ್ಕದಲ್ಲಿ ಮುರಿದು ಬಿದ್ದಿದ್ದ ಹಳೆ ಮರದ ದಿಮ್ಮಿಯ ಮೇಲೆ ಕುಳಿತು ಸ್ವಲ್ಪ ವಿಶ್ರಾಂತಿ ಪಡೆದು ನಮ್ಮ ದಂಡು ಮುಂದಕ್ಕೆ ಚಲಿಸಿತು…ಏರು ದಾರಿಯಲ್ಲಿ. ಕಡಿದಾದ ಕಾಲುದಾರಿಯು ಅದಾಗಲೇ ಪ್ರವಾಸಿಗರಿಂದ ತುಂಬಿ, ನಡೆದಾಡಲು ಜಾಗವೇ ಇಲ್ಲದಂತಹ ಪರಿಸ್ಥಿತಿ! ಹತ್ತು ನಿಮಿಷಗಳಲ್ಲಿ ನಮ್ಮವರು ಮಂಡಿನೋವಿನ ದೆಸೆಯಿಂದ ಮುಂದಕ್ಕೆ ಚಲಿಸಲಾರದೆ ಹಿಂದಕ್ಕೆ ನಡೆದರು. ಉಳಿದವ ನಾವೆಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಮುಂದಕ್ಕೆ ಹೋಗಬೇಕಾಯಿತು. ಮತ್ತೆ ಹತ್ತು ನಿಮಿಷಗಳ ನಡಿಗೆ ಬಳಿಕ, ಮರಗಳ ನೆರಳಿನಡಿ ಕುಳಿತು, ನಾವು ತಂದಿದ್ದ ಪುಳಿಯೊಗರೆ, ಮೊಸರನ್ನಗಳಿಂದ ನಮ್ಮ ಹಸಿದ ಹೊಟ್ಟೆ ತುಂಬಿಸಿ ಮುನ್ನಡೆದೆವು. ಬೃಹದಾಕಾರದ ಬೆಟ್ಟದ ಮಧ್ಯಭಾಗದಲ್ಲಿ ಸುತ್ತಿ ಸುಳಿದು ಹೋಗುತ್ತಿರುವ ಅಗಲ ಕಿರಿದಾದ ಕಾಲುದಾರಿಯಲ್ಲಿ ನಡೆಯುವಾಗ ಎಡಭಾಗದಲ್ಲಿ ಆಳ ಪ್ರಪಾತದಲ್ಲಿ ನಾವು ಬರುವಾಗ ನೋಡಿದ್ದ ಸುಂದರ ಸರೋವರ, ಹಚ್ಚಹಸುರಿನ ಕಾಡು ಕಾಣಿಸುತ್ತಿತ್ತು. ಆದರೆ ಇವುಗಳನ್ನೆಲ್ಲಾ ನೋಡಿ ಸಂತಸಪಡಲು ಸಾಧ್ಯವಾಗದ ಪರಿಸ್ಥಿತಿ! ನಮ್ಮ ಗಮನ ಪೂತಿಯಾಗಿ ನಮ್ಮ ಹೆಜ್ಜೆಯ ಕಡೆಗೆ ಇರಲೇಬೇಕಾಗಿತ್ತು. ಮುಂಭಾಗದಿಂದ ಯಾರಾದರೂ ಬಂದಾಗ ಅವರಿಗೆ ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ಕೊಡಬೇಕಿತ್ತು. ಸ್ವಲ್ಪ ತಪ್ಪಿದರೂ ಕಾಲ ಕೆಳಗಿನ ಸಡಿಲವಾದ ಮಣ್ಣು  ಜಾರಿ ಕೆಳಗೆ ಕಂದಕದತ್ತ ಉರುಳುವಾಗ ಅತೀವ ಭಯದಿಂದ ಎದೆ ಹೊಡೆದುಕೊಳ್ಳುತ್ತಿತ್ತು! ನಮ್ಮ ಜೊತೆಗಿದ್ದ ಮಕ್ಕಳು ಮಾತ್ರ ಯಾವ ಆಯಾಸವೂ ಭಯವೂ ಇಲ್ಲದೆ ಮುಂದೆ ನಡೆದಾಗ ನಾವೂ ಹುರುಪು ತುಂಬಿಕೊಂಡೆವೆನ್ನಿ. ದಾರಿಯಲ್ಲಿ ಅಲ್ಲಲ್ಲಿ ಒರತೆ ನೀರು ಜಿನುಗುತ್ತಾ ಹರಿಯುತ್ತಿತ್ತು….ಕಲ್ಲು ಬಂಡೆಗಳು ಜಾರುತ್ತಿದ್ದವು….

(ಮುಂದುವರಿಯುವುದು…)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ: https://www.surahonne.com/?p=39974

ಶಂಕರಿ ಶರ್ಮ, ಪುತ್ತೂರು.                    

6 Responses

  1. ನಿಮ್ಮ ಜೊತೆಗೆ ಜ್ವಾಲಾಮುಖಿಗಳನ್ನು ನೋಡಲು ಮುಂದಿನ ಕಂತಿಗಾಗಿ ಕಾಯುತ್ತಿದ್ದೇವೆ

  2. ಪ್ರವಾಸ ಕಥನ ಓದಿಸಿಕೊಂಡು ಹೋಯಿತು…ಚಂದದ ಅನಭವದ ಅಭಿವ್ಯಕ್ತಿ… ಅದನ್ನು ಕಥನ ದ ಮೂಲಕ ಉಣಬಡಿಸುವ ನಿಮಗೆ ಧನ್ಯವಾದಗಳು…

  3. Padma Anand says:

    ಜೀವಂತ ಜ್ವಾಲಾಮುಖಿಗಳೆಡೆಗೆ ವಿಹಾರ! ಎಂಥಹ ರೋಚಕ ಸನ್ನಿವೇಶ! ಮುಂದಿನ ಕಂತಿಗಾಗಿ ಕಾಯಬೇಕಲ್ಲ ಎನ್ನುವುದೇ ಬೇಸರ.
    ಎಂದಿನಂತೆ ಸುಲಲಿತವಾಗಿ ಓದಿಸಿಕೊಂಡಿತು.

  4. Padmini Hegde says:

    ಅತೀವ ಭಯದಿಂದ ಎದೆ ಹೊಡೆದುಕೊಳ್ಳುತ್ತಿದ್ದರೂ ಹುರುಪು ತುಂಬಿಸಿದ ಅನುಭವ ಕಥನ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: