ಭಗವದ್ಗೀತಾ ಸಂದೇಶ
ಸತ್ತ್ವ,ರಜಸ್ಸು, ತಮಸ್ಸು ಇವು ಮೂರು ಒಂದನ್ನು ಬಿಟ್ಟು ಇನ್ನೊಂದಿರುವುದಿಲ್ಲ. ಸಾತ್ವಿಕ ಅಲ್ಲದ್ದು ಎಂದರೆ ರಜಸ್ಸು ಮತ್ತು ತಮಸ್ಸು. ಜಗತ್ತಿನ ಆಗು-ಹೋಗುಗಳಿಗೆ ಅಥವಾ ಜಗತ್ತಿನ ಜಗಳಕ್ಕೆ, ಇಬ್ಬರಲ್ಲಿ ಭೇದ ಮೂಡಿಸುವುದಕ್ಕೆ ಮೂರನೆಯವನ ಅವಶ್ಯಕತೆ ಇದೆಯಲ್ಲ. ಹೀಗೆ ಜಗತ್ತಿನ ನಿರಂತರತೆಗೆ, ಚಲನವಲನ ರೂಪದ ವ್ಯಾಪಾರ ನಡೆಯುವುದಕ್ಕೆ ಮೂಲಭೂತವಾದದ್ದು ಈ ತ್ರಿಗುಣಗಳು.
ಈ ರೀತಿಯಾಗಿ ತ್ರಿಗುಣಗಳನ್ನು ಸೃಷ್ಟಿಸಿ ಅನ್ಯೋನ್ಯ ಘರ್ಷಣೆಗೆ ಕಾರಣಳು “ಪ್ರಕೃತಿ”. ಈ ಪ್ರಕಾರ ವಿಷಮ ಸ್ಥಿತಿಯನ್ನು ಸೃಷ್ಟಿಸಿ, “ನಾನು ಈ ಜಗಳವನ್ನು ಸೃಷ್ಠಿಸಿದ್ದೇನೆ ; ಅದನ್ನು ಮೀರುವ ಶಕ್ತಿ ನಿನಗಿದ್ದರೆ ಮೀರು” ನೋಡೋಣ ಎಂಬುದು ಪ್ರಕೃತಿ ನಮಗೆ ಕೊಡುತ್ತಿರುವ ಪಂಥಾಹ್ವಾನ.
“ತ್ರಿಭಿರ್ಗುಣಮಯೈರ್ಭಾವೈಃ
ಏಭಿಃ ಸರ್ವಮಿದಂ ಜಗತ್ I
ಮೋಹಿತಂ ನಾಭಿ ಜಾನಾತಿ
ಮಾಮೇಭ್ಯಃ ಪರಮವ್ಯಯಮ್II”
“ದೈವೀ ಹ್ಯೇಷಾ ಗುಣಮಯೀ
ಮಮ ಮಾಯಾ ದುರತ್ಯಯಾI
ಮಾ ಮೇವ ಯೇ ಪ್ರಪದ್ಯಂತೇ
ಮಾಯಾ ಮೇತಾಂ ತರಂತಿತೇII “
ಶ್ಲೋಕಾರ್ಥ: ತ್ರಿಗುಣಗಳಾದ ಸತ್ವ ,ರಜಸ್ಸು ಮತ್ತು ತಮಸ್ಸು ಎಂಬ ಮೂರು ವಿಕಾರಗಳಿಗೆ ಗುರಿಯಾಗಿ ಭ್ರಮೆಗೊಳಗಾಗಿರುವ ಜನರು ಪ್ರಕೃತಿಗಿಂತ ವಿಲಕ್ಷಣ ವಾದ ನನ್ನ ಅವ್ಯಯ ಸ್ವರೂಪವನ್ನು ಅರಿಯಲಾರರು; ಮತ್ತು
ತ್ರಿಗುಣ ರೂಪಿಯಾದ ನನ್ನ ಈ ದೈವೀ ಮಾಯೆಯನ್ನು ದಾಟುವುದು ಬಹಳ ಕಷ್ಟ. ನನಗೆ ಶರಣಾಗತರಾದವರು ಮಾತ್ರ ಈ ಮಾಯೆಯನ್ನು ದಾಟಬಲ್ಲರು.
“ಮಾಯೆ” ಎಂಬುದು ಪ್ರಕೃತಿಯ ಒಂದು ವಿಶೇಷ ಅಂಶ . ಅರೆ ಬೆಳಕಿನಲ್ಲಿ ದಾರಿಯಲ್ಲಿದ್ದ ಹಗ್ಗವು ಹಾವಿನಂತೆ ಕಾಣಿಸುವುದು. ಅದು ನಮ್ಮ ಮನಸ್ಸಿನ ಭ್ರಮೆ ಅಥವಾ ಮಾಯೆ. ಮಾಯೆ ಸುಳ್ಳು ಅಲ್ಲ; ನಿಜವೂ ಅಲ್ಲ; ಆದರೂ ಒಂದು ಸುಳ್ಳನ್ನು ಸತ್ಯವೆಂದು ನಾವು ಭಾವಿಸಿ ಭಯಗೊಳ್ಳುವಂತೆ ಮಾಡುವುದೇ ಮಾಯೆ.
“ಪ್ರಕೃತಿ”ಯ ಶಕ್ತಿಗಳಲ್ಲೊಂದಾದ “ಜೀವ”ನಿಗೂ “ಪರಮಾತ್ಮ”ನಿಗೂ ಇರುವ ತಾತ್ವಿಕ ಸಂಬಂಧ ಕಾಣದಂತಾಗುತ್ತದೆ. ಮಾಯೆಯು ಬುದ್ಧಿಗೆ ಮಂಕುಬಡಿಸುತ್ತದೆ. ಈ ಮಾಯೆಯ ಪೊರೆಯ ಕಾರಣದಿಂದಾಗಿ ನಾವು ನಮ್ಮಲ್ಲೇ ನೆಲೆಸಿರುವ ಪರಮಾತ್ಮನನ್ನು ಕಾಣಲಾರೆವು. ಅಷ್ಟು ಪ್ರಬಲ ವಾದ ಮಾಯೆಯನ್ನು ಮೀರಿ ನಡೆದರೆ “ಜೀವ” ಮತ್ತು “ಆತ್ಮ”ದ ಸಂಬಂಧದ ಅರಿವು ನಮಗಾಗುವುದು. ಹೀಗೆ ಮಾಯೆಯು ತತ್ತ್ವಜ್ಞಾನವನ್ನು ಅರಿಯುವಲ್ಲಿ ಇರುವ ಮಹಾ ಪ್ರತಿಬಂಧಕವಾಗಿದೆ.
-ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು
ಪುಟ್ಟ ಲೇಖನ.. ಚಿಂತನೆ ಗೆ ಒಳಗೊಂಡಿದೆ… ಮೇಡಂ..
ಚಂದದ ವಿಶ್ಲೇಷಣೆ
Nice
ಭಗವದ್ಗೀತೆಯ ಸಾರವನ್ನು ಉಣಬಡಿಸುವ ಸತ್ವಪೂರ್ಣ ಲೇಖನ
ಮಾಯೆಯ ಮಹತ್ವವನ್ನು ಅರಿತು ಮುನ್ನಡೆಯುವ ಅಗತ್ಯತೆಯನ್ನು ಸಾರುವ ವಿವರಣೆ ಸೊಗಸಾಗಿದೆ.
Thank you Nagaratna madam
Thank you Gayathri madam
ನನ್ನ ಬರಹವನ್ನು ಮೆಚ್ಚಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು