ವಿಜ್ಞಾನ

ತರಗತಿಗೂ ಕಾಲಿಟ್ಟ ಯಂತ್ರ ಮಾನವನೆಂಬ ಭೂಪ

Share Button


ಇಂತಹ ಒಂದು ದಿನ ಬರುತ್ತದೆ ಎಂದು ನಾವ್ಯಾರೂ  ಸಹ ಉಹಿಸಿರಲಿಕ್ಕಿಲ್ಲ. ಕಚ್ಚೆ ಪಂಚೆ, ತಲೆ ಮೇಲೊಂದು ಗಾಂಧೀ ಟೋಪಿ ಹಾಕಿ ಪಾಠ ಮಾಡಿದ ಶಿಕ್ಷಕರ ಜಾಗದಲ್ಲಿ ಇಂದು  ಕೃತಕ ಬುದ್ದಿಮತ್ತೆಯ ವರದಾನದ  ಫಲವಾಗಿರುವ “ಹುಮನಾಯ್ಡ್ ಶಿಕ್ಷಕ” ಬಂದು ನಮ್ಮ‌ ಮಕ್ಕಳಿಗೆ ಪಾಠ ಮಾಡುತ್ತಾನೆಂದರೆ ಒಮ್ಮೆ ಆಶ್ಚರ್ಯ‌ ಎನಿಸುತ್ತದೆ. ಇದು ಸತ್ಯ ಏಕೆಂದರೆ ಇದು ತಂತ್ರಜ್ಞಾನ ಯುಗ. ಎಲ್ಲರಿಗೂ ವೇಗವಾಗಿ ಬೆಳೆಯಬೇಕೆಂಬ ಹಂಬಲ. ಇದರ ಪರಿಣಾಮವಾಗಿ ದಿನೇ ದಿನೇ ಹೊಸ ಹೊಸ ಆವಿಷ್ಕಾರಗಳು
ನಡೆಯುತ್ತಿವೆ. ಜೀವನದಲ್ಲಿ ಶಿಕ್ಷಣ ವ್ಯಕ್ತಿಯ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದು ಜಾಗತಿಕವಾಗಿ ಕ್ರೀಯಾಶೀಲ ಶಿಕ್ಷಕರ ಕೊರತೆ ಇರುವುದರಿಂದ ಕಳೆದ ವರ್ಷ  ಈ ಸಮಸ್ಯೆಯನ್ನು ಪರಿಹರಿಸಲು, ಲಂಡನ್‌ನಲ್ಲಿರುವ ಓಟರ್‌ಮ್ಯಾನ್ಸ್ ಇನ್‌ಸ್ಟಿಟ್ಯೂಟ್ ನ ದೇವ್ ಆದಿತ್ಯ ಮತ್ತು ಡಾ ಪೌಲ್ಡಿ ಓಟರ್‌ಮ್ಯಾನ್ ಅವರು  ಮಾನವ-ರೀತಿಯ ಗುಣಗಳನ್ನು ‘ಎಐ’ (ಕೃತಕ ಬುದ್ಧಿಮತ್ತೆ ) ಯೊಂದಿಗೆ ವಿಲೀನಗೊಳಿಸುವ ಮೂಲಕ ಶಿಕ್ಷಣವನ್ನು ಕ್ರಾಂತಿಗೊಳಿಸುವ ನವೀನ ಕಲ್ಪನೆಯೊಂದಿಗೆ ಪ್ರಪಂಚದ ಮೊದಲ ಎಐ ಶಿಕ್ಷಕಿ ‘ಬೀಟ್ರಿಸ್‌’ನ ಸೃಷ್ಟಿಸಿದ್ದು ಬಹುಶಃ ನೆನಪಿರಬಹುದು.

ಹಾಗೆಯೇ ಭಾರತದ ಒಡಿಶಾದಲ್ಲಿ ಮೊದಲ ಬಾರಿಗೆ ಒಡಿಶಾ ಟೆಲಿವಿಷನ್ ನೆಟ್ವರ್ಕ್ ನಲ್ಲಿ ವಾರ್ತಾ ನಿರೂಪಕಿಯಾಗಿ ಮೊದಲ ಎಐ ನ್ಯೂಸ್ ಆ್ಯಂಕರ್ , ಮೊದಲ ಸಲ ವಾರ್ತೆಯನ್ನು ಪ್ರಸ್ತುತಪಡಿಸಿದ ವಿಡಿಯೋವನ್ನು ಎಲ್ಲರೂ ವೀಕ್ಷಣೆ ಮಾಡಿರಬಹುದು. ಈಗ ಮತ್ತೆ ಭಾರತದಲ್ಲಿ ಮೊದಲ ಬಾರಿಗೆ ಕೇರಳದ ತಿರುವನಂತಪುರಂನಲ್ಲಿರುವ  ಹೈಯರ್ ಸೆಕೆಂಡರಿ ಶಾಲೆಯಲ್ಲೊಂದರಲ್ಲಿ  ಕೃತಕ ಬುದ್ಧಿಮತ್ತೆಯಿಂದ ಸಕ್ರಿಯಗೊಳಿಸಿದ ಹುಮನಾಯ್ಡ್ ಶಿಕ್ಷಕಿಯನ್ನು ಕಳೆದ ಒಂದು ವಾರದ ಹಿಂದೆ ಪರಿಚಯಿಸಿ ಯಶಸ್ವಿಯಾಗಿದ್ದಾರೆ. ಅದಕ್ಕೆ “ಐರಿಸ್” ಎಂಬ ನಾಮಕರಣವನ್ನು ಸಹ ಮಾಡಿದ್ದಾರೆ.‌ ಇದು ಮೂರು ಭಾಷೆಗಳನ್ನು ಮಾತನಾಡುತ್ತಾ,  ಜೀವಶಾಸ್ತ್ರ ಮತ್ತು ಅಂಕಗಣಿತ ಅಥವಾ ಇತಿಹಾಸದ ಪ್ರಶ್ನೆಗಳಿಗೆ ಉತ್ತರಿಸಿ ಎಲ್ಲರನ್ನೂ ಬೆರಗುಗೊಳ್ಳುವಂತೆ ಮಾಡಿದೆ.


ಇಂತಹ ಪರಿಕಲ್ಪನೆಗಳು  ಭವಿಷ್ಯದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಆದರೆ ಇಂದು ಇಂತಹ ತಂತ್ರಜ್ಞಾನ ಬರಲು ಕಾರಣ  ಮನುಷ್ಯರಲ್ಲಿ ತಾನು ಆರಿಸಿಕೊಂಡ ವೃತ್ತಿಯಲ್ಲಿ ಕ್ರೀಯಾಶೀಲತೆ ಇಲ್ಲದಿರುವಿಕೆ. ಮನುಷ್ಯ ಒಬ್ಬ ಭಾವ ಜೀವಿ, ಇನ್ನೊಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ, ಅದಕ್ಕೆ ಸ್ಪಂದಿಸುವ ವಿಶೇಷ ಬುದ್ಧಿಶಕ್ತಿ ಮನುಷ್ಯನಿಗಿರುವ ವರದಾನ. ಆದರೆ ಇಂದಿನ ಶಿಕ್ಷಕರಲ್ಲಿ ಹೊಸ ಯುಗದ ಅಪೇಕ್ಷೆಗೆ ತಕ್ಕಂತೆ ನಾವೀನ್ಯತೆಯಿಂದ ವಿಷಯದ ಬಗ್ಗೆ ಆಳವಾದ ಜ್ಞಾನವನ್ಮು ಹೊಂದಿ  ಪಾಠ ಮಾಡುವ, ಪ್ರಾಯೋಗಿಕವಾಗಿ ಅನ್ವೇಷಿಸುವ ಕುತೂಹಲ ಇಲ್ಲದೇ, ಒಬ್ಬ ಪರಿಣಾಮಕಾರಿ ಶಿಕ್ಷಕನಾಗುವಲ್ಲಿ ಸೋಲುತ್ತಿದ್ದಾನೆ. ಪ್ರತೀ ವರ್ಷ ಸಾವಿರಾರು ತರಬೇತಿ ಹೊಂದಿದ ಪ್ರಶಿಕ್ಷಣಾರ್ಥಿಗಳು ಹೊರ ಬರುತ್ತಿದ್ದಾರೆಯೇ ವಿನಃ ಅವರಲ್ಲಿ ಎಷ್ಟರ ಮಟ್ಟಿಗೆ ಕೌಶಲ್ಯಾಧಾರಿತ ಬೋಧನೆ ಮಾಡುವ ಸಾಮರ್ಥ್ಯ ಇದೆ ಎಂಬುದೇ ಪ್ರಶ್ನೆ. ಇದರ ಜೊತೆ ನಮ್ಮಲ್ಲಿ ಕೌಶಲ್ಯವಿದಿದ್ದರೆ ಯಾರಿಗೂ ಸಹ ಇಂತಹ ತಂತ್ರಜ್ಞಾನವನ್ನು ಕಂಡು ಹಿಡಿಯಬೇಕೆಂದು ಬಹುಶಃ ಅನ್ನಿಸುತ್ತಿರಲಿಲ್ಲ. ಅದರೆ ಇಂದು ‘ಎಐ’ ತಂತ್ರಜ್ಞಾನದ ಸಹಾಯದಿಂದ ವಿವಿಧ ಉಪಯಕರಣಗಳನ್ನು ಒಟ್ಟಿಗೆ ಜೋಡಿಸಿ ಇಂತಹ ‘ತಂತ್ರ‌ಮಾನವ ಶಿಕ್ಷಕ’ ನನ್ನು ಸೃಷ್ಟಿಸಿ ನಮ್ಮ ಮಕ್ಕಳಿಗೆ ಪಾಠ ಮಾಡಿಸುವ ಸ್ಥಿತಿಗೆ ಬಂದಿದ್ದೇವೆ. ತರಗತಿಯಲ್ಲಿ ಶಿಕ್ಷಕರನ್ನೇ ಯಾಮಾರಿಸುವ ತುಂಟ ಮಕ್ಕಳು, ಇಂತಹ ಯಂತ್ರ-ಮಾನವ ಶಿಕ್ಷಕನನ್ನು ಸುಮ್ಮನೆ ಬಿಡುತ್ತಾರಾ ಹೇಳಿ. ತಂತ್ರಜ್ಞಾನದ ಬಳಕೆ ಕೆಲವೊಂದು ಕ್ಷೇತ್ರಕ್ಕೆ ಅತ್ಯಗತ್ಯ ನಿಜ. ಆದರೆ ಮುಗ್ಧ ಮಕ್ಕಳ ಭಾವನೆಗಳನ್ನು ಅರಿತು, ಅವರಿಗೆ ಪರಿಣಾಮಕಾರಿ ಕಲಿಕಾ ಸನ್ನಿವೇಶಗಳನ್ನು ಒದಗಿಸಿ  ಅವರ ಭವಿಷ್ಯ ರೂಪಿಸುವಂತಹ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಇಂತಹ ‘ಯಂತ್ರ-ಮಾನವ ಶಿಕ್ಷಕ’ ನ ಬಳಕೆ ಎಷ್ಟು ಪರಿಣಾಮಕಾರಿ ಆಗಬಲ್ಲದು ಎಂಬುದನ್ನು ಕಾದು ನೋಡಬೇಕಿದೆ.

-ಸುರೇಂದ್ರ ಪೈ, ಹೊಸದುರ್ಗ

15 Comments on “ತರಗತಿಗೂ ಕಾಲಿಟ್ಟ ಯಂತ್ರ ಮಾನವನೆಂಬ ಭೂಪ

  1. ಹೊಸ ವಿಷಯ..ಇದು ಶಿಕ್ಷಣ ವ್ಯವಸ್ಥೆಗೆ ಒಳಿತಿಗಿಂತ ಕೆಡುಕನ್ನುಂಟುಮಾಡುವ ಸಾಧ್ಯತೆಯೇ ಹೆಚ್ಚಾಗಿ. ಚೆಂದದ ಬಗ್ಗೆ ಹ.

  2. ಕೃತಕ ಬುದ್ಧಿಮತ್ತೆಯ ಒಳಿತು ಕೆಡಕುಗಳನ್ನು ಪರಿಣಾಮಕಾರಿಯಾಗಿ ಹೇಳುವಂತಹ ಲೇಖನ

  3. ಉತ್ತಮ ಮಾಹಿತಿಯಿಂದ ಕೂಡಿದ ಸೊಗಸಾದ ಬರಹ

  4. ಕೃತಕ ಬುದ್ಧಿಮತ್ತೆಯಿಂದ ಮಾನವನ ಸ್ವಂತಿಕೆ, ಸೃಜಶೀಲತೆ ನಶಿಸಿ ಹೋಗಬಹುದೇನೋ ಎನ್ನುವ ಭಯ ಕಾಡದಿರಲು ಸಾಧ್ಯವೇ? ಉತ್ತಮ ಮಾಹಿತಿಪೂರ್ಣ ಲೇಖನ.

  5. ವಿಜ್ಞಾನ ಇರುವುದು ಜೀವನವನ್ನು ಸುಧಾರಿಸಿಕೊಂಡು ಮುನ್ನಡೆಯಲು. ಆದರೆ ಕ್ರಿಯಾಶೀಲತೆಯನ್ನು ನಾಶ ಮಾಡುವ ಈ ಅವಿಷ್ಕಾರಗಳ ಮುಂದಿನ ಪರಿಣಾಮ ಭಯ ಹುಟ್ಟಿಸುವಂತಿದೆ.

  6. ಇಂಥ ಪ್ರಯೋಗಗಳು ಬೇಕಾ ಎನ್ನುವ ವಿವೇಚನೆಗೆ ಆಹ್ವಾನ ಕೊಡುವ ಲೇಖನ!

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *