ಅಪ್ಪನ ಹೆಗಲ ಮೇಲಿಂದ ನೋಡಿದ ಜಾತ್ರೆ
ಊರಲಿ ಆರಾಧ್ಯದೈವದ ರಥೋತ್ಸವ ನಡೆದಿತ್ತು
ಜನಜಂಗುಳಿಯ ನಡುವೆ ಆಕರ್ಷಕ ಜಾತ್ರೆ ನೆರೆದಿತ್ತು
ಅಪ್ಪನ ಹೆಗಲ ಮೇಲೆ ನನ್ನ ಸವಾರಿ ಸಾಗಿತ್ತು
ಕೊಬ್ಬರಿ ಎಣ್ಣೆ ಹಚ್ಚಿ ಅಮ್ಮ ಕ್ರಾಪು ತೆಗೆದ ತಲೆ ಬಿಸಿಲಿಗೆ ಕಾದಿತ್ತು
ನೆಟ್ ಬನೀನು ತೊಟ್ಟು ಲುಂಗಿ ಮೇಲೆ ಎತ್ತಿ ಕಟ್ಟಿ
ಬಾಯಿ ಅವಡುಗಚ್ಚಿ ತೊಟ್ಟಿಲುಗಳ ನೆಗೆದು ಹಿಡಿದು
ಕೆಳಕ್ಕೆ ತಳ್ಳುವ ವ್ಯಕ್ತಿ ಪೈಲ್ವಾನ್ ನ ಹೋಲುತ್ತಿತ್ತು
ತೊಟ್ಟಿಲಲಿ ಕೂತ ಮಕ್ಕಳ ಕೇಕೆ ಮುಗಿಲ ಮುಟ್ಟಿತ್ತು
ಬಣ್ಣ ಬಣ್ಣದ ದೀಪ ಬೆಳಗುತ್ತಾ ಸ್ಟ್ಯಾಂಡ್ ಮೇಲೆ ನಿಂತ
ರೋಬೋಟ್ ನ ಸಹಾಯದಿಂದ ಭವಿಷ್ಯ ಹೇಳುವವ ಸ್ಥಳೀಯ ವಿಜ್ಞಾನಿಯಾಗಿದ್ದ
ಗುಲಾಬಿ ಕೆಂಪು ಹಳದಿ ಷರಬತ್ತು ಗೋಲಿ ಸೋಡಾಗಳಿಗೆ
ನಿಂಬೆಹಣ್ಣಿನ ಹುಳಿ ಹಿಂಡುವ ಕೆಲಸ ಒಬ್ಬ ಮಾಡುತ್ತಿದ್ದ
ಚಿತ್ರ ವಿಚಿತ್ರ ಪ್ರಾಣಿಗಳನ್ನು ಒಂದು ಕಣ್ಣಿನ ಮಗುವನ್ನು
ತೋರಿಸುವ ಟೆಂಟ್ ನ ಮಾಲೀಕ ಗಂಭೀರವಾಗಿದ್ದ
ಗಿರಿಜಾಮೀಸೆಯ ಹೊತ್ತು ಗೌಡನ ಗತ್ತಿನ ಪಾತ್ರವ
ಕಂಪನಿಯ ನಾಟಕದಲ್ಲಿ ಕಲಾವಿದ ನಿರ್ವಹಿಸುತ್ತಿದ್ದ
ರಾಜಕುಮಾರ ವಿಷ್ಣುವರ್ಧನರ ಜೊತೆಗೆ ತೆಗೆಸಿದ ಪೋಟೋ ಮುಂದಿಟ್ಟುಕೊಂಡು
ಹಿಮಾಲಯದ ಗಿಡ ಮೂಲಿಕೆಗಳ ಮುಂದೆ ಹರಡಿಕೊಂಡು
ವಿವಿಧ ರೋಗಲಕ್ಷಣಗಳ ಹೇಳುತ್ತಾ ಅದಕೆ ಔಷಧಿ ಮಾರುವವ ಸ್ವತಃ ರೋಗಿಯಾಗಿದ್ದ
ತಲೆಗೆ ಕೆಂಪುವಸ್ತ್ರ ಸುತ್ತಿಕೊಂಡು ಹಣೆಯಲ್ಲಿ ವಿಭೂತಿ ಪಟ್ಟಿ ಧರಿಸಿ
ಅಲುಗಾಡುವ ರುದ್ರಾಕ್ಷಿ ಮಾಲೆಯೊಂದಿಗೆ ಛತ್ರಿ ಹಿಡಿದು ಕಾಲಜ್ಞಾನ ಹೇಳುವ ಸ್ವಾಮಿ ಹಾಗೇ ನಡೆದಿದ್ದ
ತೂಗು ಬಿಟ್ಟ ವಿದ್ಯುದೀಪದ ಬೆಳಕಲ್ಲಿ ಸಾದಾ ಬಳೆ ಪಟ್ಟಿ ಬಳೆ ಚುಕ್ಕಿ ಬಳೆ ಶಾಣೆ ಬಳೆ ರೇಷ್ಮೆ ಬಳೆ ಗಿಲಿಟ್ ಬಳೆ ಬಾಕ್ಸ್ ಬಳೆ
ಹಂಪನ ಕಟ್ಟೆ ಬಳೆ ಹೀಗೆ ವಿವಿಧ ಬಗೆಯ ಬಳೆಯ ಮಲ್ಹಾರ ತೋಡುಗಳ ಜೋಡಿಸಿಕೊಂಡು ಬಳೆ ತೊಡಿಸುವ ಹೆಂಗಸಿನಲ್ಲಿ ಸಮಾಧಾನ ಮನೆ ಮಾಡಿತ್ತು ಚೂರೂ ಬೇಸರ ಇಣಕದೆ ಮರೆಯಾಗಿತ್ತು
ಉದ್ದನೆಯ ಕೋಲಿಗೆ ಕೊಳಲುಗಳ ಹೂಗುಚ್ಛದಂತೆ ಸಿಕ್ಕಿಸಿಕೊಂಡು
“ಒಂದಾನೊಂದು ಕಾಲದಲ್ಲಿ ಆರಂಭ” ಎನ್ನುವ ಗೀತೆಯನ್ನು ಸ್ವತಃ ತಾನೇ ರಾಗವಾಗಿ ನುಡಿಸುತ್ತಾ ವೇಣುವಾದಕ ಮುನ್ನಡೆದಿದ್ದ
ಸುತ್ತುವರೆದ ಜನಗಳಿಂದ ಹತ್ತು ರೂಪಾಯಿಗಳ ಪಡೆದು ಐದು ರಿಂಗ್ ಗಳ ನೀಡಿ
ಎದುರಿಗಿರುವ ವಸ್ತುಗಳ ಮೇಲೆ ಎಸೆಯಲು ಹುಡುಗಿ ಹೇಳುತ್ತಿದ್ದಳು
ರಿಂಗ್ ಮಧ್ಯೆ ಸಿಲುಕಿದ್ದ ಸೋಪು ಶಾಂಪೂಗಳ ಗೆದ್ದವರಿಗೆ ನೀಡುತ್ತಿದ್ದಳು
ಮಂಗಳ ಗೌರಿಯ ವೃತ ಶುಕ್ರಗೌರಿ ಪೂಜೆ ದೇವಿ ಪುರಾಣ ಸದ್ಧರ್ಮ ಸಿಂಹಾಸನ ಮಂಕುತಿಮ್ಮನ ಕಗ್ಗ ಹೀಗೆ ತರೇವಾರಿ ಪುಸ್ತಕಗಳ ಮೇಲಿನ ಧೂಳು ಕೊಡುವುತ್ತಾ ಜಾರಿದ ಕನ್ನಡಕವ ಹಿಂದೆ ಸರಿಸುತ್ತಾ
ಪುಸ್ತಕ ವ್ಯಾಪಾರದಲ್ಲಿ ಒಬ್ಬ ವೃದ್ಧ ನಿರತರಾಗಿದ್ದರು
ತಿರುಗುವ ಗಾಲಿಗೆ ಗೆಜ್ಜೆ ಕಟ್ಟಿ ಕಬ್ಬಿನ ಜಲ್ಲೆಯ ಕತ್ತಿಯಿಂದ ಸವರಿ
ಅರೆಯುವ ಯಂತ್ರಕ್ಕೆ ಕಬ್ಬನ್ನಿಟ್ಟು ಹಾಲು ತೆಗೆಯುವ ಅಜಾನುಬಾಹು ರೈತನಾಗಿದ್ದರು
ಬಗೆಬಗೆಯ ಹೂ ಮಾಲೆ ನೇತಾಕಿಕೊಂಡು ಜತನದೀ ಹೂಗಳ ಪೋಣಿಸಿ
ಕುಸುಮ ಕೋಮಲ ಮನಸ್ಸಿನ ಹೂವಾಡಿಗಿತ್ತಿ ಆ ಯುವತಿಯೇ
ತನ್ನ ಇನಿಯನ ಕಳ್ಳ ನೋಟಕ್ಕೆ ಅರಳಿ ನಾಚಿ ನೀರಾಗಿದ್ದು ಅವರ ಮುಖಾನೇ
ಉರಿಯುವ ಒಲೆಯ ಮೇಲೆ ಅಗಲವಾದ ಬಾಣಲೆ
ಬಿಸಿಯಾದ ಎಣ್ಣೆಯಲ್ಲಿ ಮುಳುಗೇಳುವ ಹೊನ್ನ ಬಣ್ಣದ ಮಿರ್ಚಿ ಭಜಿ
ಸುರಿವ ಬೆವರ ಲೆಕ್ಕಿಸದೆ ಭಜಿ ಬಿಡುತ್ತಿರುವ ಬಾಣಸಿಗ
ಕೀಲಿ ಕೊಟ್ಟರೆ ಚಪ್ಪಾಳೆ ತಟ್ಟುವ ಕರಡಿ ಲಾಗ ಹಾಕುವ ಕೋತಿ
ಹಳಿಗಳ ಮೇಲೆ ಓಡುವ ರೈಲು ರೇಸಿನ ಕಾರು ಸರಕು ಸಾಗಿಸುವ ಲಾರಿ
ಹೀಗೆ ವಿವಿಧ ಆಟಿಕೆಗಳ ಸಮೂಹ ಚಿಣ್ಣರ ಕೂಗಿ ಕರೆದಿತ್ತು
ಅಂಗಡಿ ಒಡತಿಯ ಗಲ್ಲಾಪೆಟ್ಟಿಗೆ ತುಂಬಿ ತುಳುಕಿತ್ತು
ಬೆಳಗಿನಿಂದ ಕೊಂಡುಕೊಳ್ಳುವವರ ಕಾದು ಕಾದು ಅಂಗಡಿಯವನ ಮೊಗ ಮುಂದಿರುವ ಪಿಂಗಾಣೆ ಬಟ್ಟಲಿಗಿಂತ ಚಿಕ್ಕದಾಗಿತ್ತು
ಸಂಜೆ ಹೊತ್ತಿಗೆ ಖರೀದಿಸಲು ಬರುವ ಜನರ ಕಂಡು ಬೇಸರ ದೂರವಾಗಿತ್ತು
ಉಪ್ಪಿನಕಾಯಿ ಹಾಕಲು ದೊಡ್ಡ ಜಾರು ಆಕರ್ಷದ ವರ್ಣದ ಸಣ್ಣ ಸಣ್ಣ ಭರಣಿಗಳು ಜನರ ಉತ್ಸಾಹ ಹೆಚ್ಚಿಸಿತ್ತು
ಶುಭ್ರ ಸಮವಸ್ತ್ರ ಧರಿಸಿ ಕಂದು ಬಣ್ಣದ ಬೆಲ್ಟನ್ನು ಹೊಟ್ಟೆಗೆ ಬಿಗಿದು
ಕಪ್ಪು ಕನ್ನಡಕದ ಒಳಗಿನಿಂದ ಇಡೀ ಬರುವ ಹೋಗುವವರ ಮುಖ ಭಾವ ಪರಿಶೀಲಿಸುತ್ತಾ
ಮೀಸೆ ನೇವರಿಸಿಕೊಳ್ಳುವ ಆರಕ್ಷಕ ನೀರೀಕ್ಷಕರ ಗತ್ತು ಗಾಂಭೀರ್ಯ ಸಾಂಗ್ಲಿಯಾನ ಅವರ ನೆನಪಿಸಿತ್ತು
ಅಕ್ಕಿ ಕಾಳ ಮೇಲೆ ನಿಮ್ಮ ಹೆಸರ ಬರೆಯಬೇಕೇ
ಕೈಯಲ್ಲಿ ನಿಮ್ಮ ಪ್ರೀತಿ ಪಾತ್ರರ ನೆನಪ ಹಚ್ಚೆ ಹೊಯ್ಯಬೇಕೇ
ಎನ್ನುವ ಕೂಗು ಅಲ್ಲೆಲ್ಲಾ ಮಾರ್ದನಿಸಿತ್ತು ಕಲಾಕಾರನ ಮುದ್ದಾದ ಅಕ್ಷರಗಳಿಗೆ ಜನತೆಯ ಮನಸೋತಿತ್ತು
ವರದಕ್ಷಿಣೆ ಬಾಲ್ಯವಿವಾಹ ಮೂಢನಂಬಿಕೆ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಎಚ್ಚರಿಸಲು
ಹೆಣ್ಣು ಮಕ್ಕಳ ಶಿಕ್ಷಣದ ಪ್ರಾಮುಖ್ಯತೆ ವಿವರಿಸಲು ಬೀದಿ ನಾಟಕದ ತಂಡ ಸಿದ್ದತೆಯಲ್ಲಿತ್ತು
ಕೈಯಲ್ಲಿದ್ದ ಮಚ್ಚು ಕಾಣದ ಹಾಗೇ ಚಕಚಕನೆ ಎಳನೀರ ಕಾಯಿ ಕೊಚ್ಚುತ್ತಾ
ಪ್ಲಾಸ್ಟಿಕ್ ಕೊಳವೆ ಸಿಕ್ಕಿಸಿ ಕೊಡುವ ಶ್ರಮಜೀವಿಯ ವ್ಯಾಪಾರ ಜೋರಾಗಿತ್ತು
ಮೇಲೆ ಧರಿಸಿದ ನಿಲುವಂಗಿ ಸಿಪ್ಪೆಯ ರಸಕ್ಕೆ ಕಲೆಯಾಗಿತ್ತು
ಮಾರಿದ ಕಾಯಿಗಳಿಗೆ ಸಾಕ್ಷಿಯಾಗಿ ಕಡು ಬಣ್ಣಕ್ಕೆ ತಿರುಗಿತ್ತು
ಜಾತ್ರೆಯಲಿ ಹೊತ್ತು ತಿರುಗಿದ ಅಪ್ಪನ ಕಾಲು ನೋಯುತ್ತಿದ್ದವು
ಕೆಂಪು ಹಾಳೆಯ ಕನ್ನಡಕದ ಮೂಲಕ ನೋಡಿದರೆ ಸಂಜೆಗತ್ತಲು ಇನ್ನೂ ಗಾಢವಾಗಿತ್ತು
ಊದುವ ಪೀಪಿಯ ಶಬ್ದ ಸುತ್ತ ಹಬ್ಬಿತ್ತು
ಮನೆಗೆ ಹೋಗಲು ಮನಸ್ಸಿಲ್ಲ
ಗೌಜು ಗದ್ದಲದಲ್ಲೂ ಖುಷಿ ತುಂಬಿದೆಯೆಲ್ಲಾ
ಆದರೂ ಜಾತ್ರೆ ಮುಗಿಸಿಕೊಂಡು ಹೋಗಲೇ ಬೇಕಲ್ಲ….
–ಕೆ.ಎಂ ಶರಣಬಸವೇಶ
ಥೀಮ್ ಬರೆಹ. ಬಾಲ್ಯದ ನೆನಪು ಕೈ ಹಿಡಿದು ನಡೆಸಿದೆ.
ಬರೆಹಕೂ ಬಾಳಿಗೂ ಇದುವೇ ತಾನೇ ನಂದಾದೀಪ. ನಿಮ್ಮ ಸಾಲುಗಳು
ಓದುವ ಉಳಿದವರಲೂ ಇಂಥ ಸಮಾನ ನೆನಪನ್ನು ಬಗೆದು ಬದುಕನು ಸಹನೀಯಗೊಳಿಸುವುದು.
ನಿಮ್ಮ ಬರೆಹವು ಇನ್ನಷ್ಟು ಆಳಕೂ ಅಗಲಕೂ ಹರಡಿಕೊಳ್ಳಲಿ. ಶುಭ ಹಾರಯಿಕೆಗಳು.
ಧನ್ಯವಾದಗಳು ಮಂಜುರಾಜ್ ಸರ್.
ಬಾಲ್ಯದ ನೆನಪನ್ನು ನೆನಪಿಸುವ ಸುಂದರ ಬರಹ.ನೆನಪೇ ಬಾಳಿನ ಬುತ್ತಿ. ಈ ಲೇಖನ ಓದಿದವರಿಗೆಲ್ಲರಿಗೂ ಆನೆಯನ್ನು ಕಾಡಬಹುದು.
ಬಾಲ್ಯದ ನೆನಪು ಮರುಕಳಿಸುವಂತೆ ಮಾಡಿದ ನಿಮಗೆ ಧನ್ಯವಾದಗಳು ಸಾರ್
ಜಾತ್ರೆ ಕುರಿತಾದ ಸುಂದರ ವಿವರಗಳನ್ನು ನೀಡುತ್ತಾ ಜಾತ್ರೆಯೊಳಗೇ ಕೊಂಡೊಯ್ದುಬಿಟ್ಟಿತು.
ಜಾತ್ರೆಯೊಳಗೊಂದು ಸುತ್ತ ಹಾಕಿ ಬಂದ ಹಾಗಾಯಿತು.
ಧನ್ಯವಾದಗಳು ನಯನ ಬಜಕೂಡ್ಲು ಮೇಡಂ ಅವರಿಗೆ
ಎಲ್ಲರ ಅನುಭವಕ್ಕೆ ಸುಂದರ ಕೈಗನ್ನಡಿ
ಧನ್ಯವಾದಗಳು ಪದ್ಮಿನಿ ಮೇಡಂ ಅವರಿಗೆ
ನಾವುಗಳು ಸುಧಾ,ತರಂಗಗಳಲ್ಲಿ ಮುಕ್ತಾ ಮೇಡಂ ಅವರ ಕಾದಂಬರಿ ಓದುತ್ತಾ ಬೆಳದವರು ಈಗ ನಮ್ಮ ಸುರಹೊನ್ನೆಯಲ್ಲಿ ಅವರ ಪುಟ್ಟ ಕಾದಂಬರಿ ಓದಲು ಖುಷಿಯೆನಿಸುತ್ತದೆ ಅಂತಹ ಪ್ರತಿಭಾವಂತರು ನಮ್ಮ ಬರಹ ಓದಿ ಪ್ರತಿಕ್ರಿಯೆ ನೀಡಿದ್ದಾರೆ ಅಂದರೆ ನಮಗೆ ದೊಡ್ಡ ಭಾಗ್ಯ. ಧನ್ಯವಾದಗಳು ಮುಕ್ತ ಮೇಡಂ
ನಮ್ಮ ಸುರಹೊನ್ನೆಯ ನಿಯಮಿತ ಬರಹಗಾರರಾದ ನಾಗರತ್ನ, ಪದ್ಮ ಆನಂದ್ ಇವರ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ ನಮ್ಮಂತಹ ಚಿಕ್ಕವರ ಬರಹ ಓದಿ ವಸ್ತು ನಿಷ್ಠವಾಗಿ ಸಲಹೆ ಮೆಚ್ಚುಗೆ ನೀಡುತ್ತಾರೆ. ಸುರಹೊನ್ನೆಯ ಜೊತೆ ಅರಳಿದ ಸುಂದರ ಹೂಗಳು ಇವರು. ಧನ್ಯವಾದಗಳು ಎಲ್ಲರಿಗೂ
ನಾವು ಚಿಕ್ಕಂದಿನಲ್ಲಿ, ಆಸೆಗಣ್ಣಿನಿಂದ ಸುತ್ತಿ ಆನಂದಿಸುತ್ತಿದ್ದ ಜಾತ್ರೆಯ ದೃಶ್ಯಗಳು ಕಣ್ಮುಂದೆ ನಲಿದಾಡಿದವು… ಸೊಗಸಾದ ದೃಶ್ಯಕಾವ್ಯ!
ಮೇಡಂ, ನಿಮ್ಮ ಬರಹಗಳು ಬಹಳ ಆಪ್ತವೆನಿಸುತ್ತವೆ. ಸುರಹೊನ್ನೆಯ ಬಳಗಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಮ್ಮನ್ನೆಲ್ಕಾ ಒಂದು ಕಡೆ ಸೇರಿಸಿ ಸಾಹಿತ್ಯದ ರಸದೌತಣ ಬಡಿಸಿದ್ದಕ್ಕಾಗಿ…..ಇದೇ ಮೊದಲ ಬಾರಿ ಥೀಮ್ ಗೆ ಸರಿ ಹೊಂದುವಂತೆ ಬರೆದೆ….ಪ್ರಕಟಿಸಿದ ಹೇಮಾಮಾಲ ಮೇಡಂ ಗೆ ಓದಿ ಪ್ರತಿಕ್ರಿಯೆ ನೀಡಿದ ಎಲ್ಲಾ ಸಹೃದಯರಿಗೆ ಧನ್ಯವಾದಗಳು
ಸುಂದರವಾದ ಕವಿತೆ
ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು