ಜಗದಕ್ಕ ಅಕ್ಕಮಹಾದೇವಿ.
ಮಾನವ ಬದುಕಿನ ರಂಗಭೂಮಿಯೇ ಸಮಾಜ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗುತ್ತವೆ ಎಂಬುದು ಇತಿಹಾಸ ಪುಟಗಳಿಂದ ನಮಗೆಲ್ಲಾ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು ದೂರಮಾಡಿ ಹೊಸದನ್ನು ಅದರ ಸ್ಥಾನದಲ್ಲಿ ನೆಲೆಗೊಳಿಸಬೇಕಾದಾಗ ಸಮಾಜದಲ್ಲಿ ಬದಲಾವಣೆಗಳು ಆಗುತ್ತವೆ. ಇದನ್ನು ಸಾಮಾಜಿಕ ಕ್ರಾಂತಿಯೆನ್ನುವರು. ಜನರು ಇಲ್ಲಿಯವರೆಗೆ ಜೋತುಬಿದ್ದಿದ್ದ ಹಳೆಯ ವ್ಯವಸ್ಥೆಯನ್ನು ಅಷ್ಟು ಸುಲಭವಾಗಿ ದೂರಮಾಡುವುದು, ಹೊಸದಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುವುದಕ್ಕೆ ತಕ್ಷಣ ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಬದಲಾವಣೆಯನ್ನು ತರಬಯಸುವ ವಿಚಾರವಾದಿಗಳು ಹಳೆಯದರಲ್ಲಿ ಒಪ್ಪಬಹುದಾದುದನ್ನು ಬಳಸಿಕೊಂಡು ಹೊಸ ವಿಚಾರಗಳನ್ನು ಮಂಡಿಸುತ್ತಾ ಜನರನ್ನು ತಿದ್ದುತ್ತಾ ಸಮಾಜಕ್ಕೆ ಒಳ್ಳಿತಾಗುವಂತೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇಂತಹ ಕಾರ್ಯಗಳು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿವೆ.
ಕರ್ನಾಟಕದಲ್ಲಿ ಹನ್ನೆರಡನೆಯ ಶತಮಾನದ ಇತಿಹಾಸವನ್ನು ಅವಲೋಕಿಸಿದರೆ ಈ ಕಾಲದಲ್ಲಿ ಬಸವಾದಿ ಶರಣರು ಕೈಕೊಂಡ ತ್ರಿವಿಧ ಕ್ರಾಂತಿಯು ಮೈಲುಗಲ್ಲಾಗಿ ನಿಂತು ಎಲ್ಲರ ಗಮನ ಸೆಳೆಯುತ್ತದೆ. ಇಡೀ ಮಾನವ ಸಮಾಜವನ್ನು ಮೇಲುಕೀಳೆನ್ನದೆ ಒಗ್ಗೂಡಿಸಿ ಏಕದೇವೋಪಾಸನೆಯನ್ನು ಬೋಧಿಸಿ ಸಮಾನ ಹಾಗೂ ಗೌರವಾನ್ವಿತ ನೆಲೆಗಟ್ಟಿನ ಮೇಲೆ ನಿಲ್ಲಿಸುವ ಮಹೋದ್ದೇಶದ ಯೋಜನೆ ಇದಾಗಿತ್ತು. ಇಂತಹ ಪ್ರಯತ್ನ ಮಾಡಿದ ಕ್ರಾಂತಿಪುರುಷ ಭಕ್ತಿ ಭಂಡಾರಿ ಬಸವೇಶ್ವರ. ಇವನಿಗೆ ವಿಶ್ವಮಾನವನೆಂಬ ಅಭಿದಾನವಿದೆ. ಈತ ಅಪ್ರತಿಮ ಶರಣ ಚೈತನ್ಯಮೂರ್ತಿ. ಇವರ ನೇತೃತ್ವದಲ್ಲಿ ಅರಳಿದ ಹೂಗಳು ಅಸಂಖ್ಯಾತ, ಅಪರಿಮಿತ. ಅಂತಹ ಶರಣರು ರಚಿಸಿ ಕೊಟ್ಟಂತಹ ವಚನ ಸಾಹಿತ್ಯ ಅತ್ಯಮೂಲ್ಯ. ಅವರು ಜನವಾಣಿಯನ್ನು ದೈವವಾಣಿಯ ಮಟ್ಟಕ್ಕೇರಿಸಿ ತಮ್ಮ ರಚನೆಗಳನ್ನು ಮಾಡಿದರು. ‘ಹರಿದು ತಿನ್ನುವುದಿಲ್ಲ, ತಿರಿದು ತಿನ್ನುವುದಿಲ್ಲ, ದುಡಿದು ತಿನ್ನುವುದು ಸರಿ’ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಶರಣರು. ತಮ್ಮಲ್ಲಿರುವುದನ್ನು ಹಂಚಿ ತಿನ್ನುವ ತತ್ವವನ್ನು ಸಾರಿದವರು. ಸರ್ವಸಮಾನತೆಯ ಹರಿಕಾರರಿವರು. ಆತ್ಮಶೋಧನೆ, ಆತ್ಮನಿವೇದನೆ, ವ್ಯಕ್ತಿತ್ವ ವಿಕಸನದ ಜೊತೆಗೆ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿದ ಧೀರರು. ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ, ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಯನ್ನಿತ್ತರು ಶರಣರು.
ಅಲ್ಲಯವರೆಗೆ ಪ್ರಾಬಲ್ಯದಲ್ಲಿದ್ದ ವೈದಿಕ ವರ್ಣಾಶ್ರಮ ವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬ ಪದ್ಧತಿಗಳಿಂದ ಸಮಾಜದಲ್ಲಿ ಸ್ತ್ರೀಯರಿಗೆ ಉಂಟಾಗಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ಶರಣರು ಸ್ತ್ರೀಪುರುಷರೆಂಬ ಭೇದವಿಲ್ಲದ ಉಭಯಪ್ರಧಾನ ಕುಟುಂಬ ಪದ್ಧತಿಯನ್ನು ಅಸ್ತಿತ್ವಕ್ಕೆ ತರಲು ಪ್ರಯತ್ನ ಮಾಡಿದರು. ಕೇವಲ ಗೃಹಕೃತ್ಯಕ್ಕೆ ಮಾತ್ರ ಸೀಮಿತವಾಗಿದ್ದ ಸ್ತ್ರೀಯರ ಕಾರ್ಯಕ್ಷೇತ್ರವನ್ನು ಪ್ರಾಪಂಚಿಕ, ಪಾರಮಾರ್ಥಿಕ ವಲಯದ ವರೆಗೂ ವಿಸ್ತರಿಸಿದರು. ಎರಡೂ ವಲಯಗಳಲ್ಲಿ ಸ್ತ್ರೀಗೆ ಸಮಾನ ಅವಕಾಶಗಳನ್ನು ಇತ್ತರು. ಹೀಗೆ ದೊರಕಿದ ಅವಕಾಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಮುಖ್ಯವಾದುದು. ಇದನ್ನು ಸದುಪಯೋಗ ಪಡಿಸಿಕೊಂಡ ಸ್ತ್ರೀಯರು ತಮ್ಮ ಅನುಭವಗಳ ಸಾರವನ್ನು ತಮಗೆ ತಿಳಿದಂತೆ ಯಾವುದೇ ಕಟ್ಟುಕಟ್ಟಳೆಯಿಲ್ಲದಂತೆ ಸರಳವಾದ ಕನ್ನಡ ಭಾಷೆಯಲ್ಲಿ ವಚನ ಮಾಧ್ಯಮದ ಮೂಲಕ ಮನಸ್ಸಿಗೆ ನಾಟುವಂತೆ ರಚನೆಗಳನ್ನು ಮಾಡಿದರು. ಇವು ನಿಜವಾಗಿ ಅನುಭವದ ಆಣಿಮುತ್ತಿಗಳು. ಕನ್ನಡದ ಉಪನಿಷತ್ತುಗಳು, ಅನಭಾವದಿಂದ ಹೊರಹೊಮ್ಮಿದ ಮುಕ್ತಕಗಳು. ಇವರ ಸಾಹಿತ್ಯ ಸೃಷ್ಟಿಗೆ ಆಕರವೆಂದರೆ ಅವರ ಬದುಕೇ. ಹೀಗಾಗಿ ಇವು ಜನಮನ ಮುಟ್ಟುವಲ್ಲಿ ಯಶಸ್ವಿಯಾದವು.
ಇಂತಹವರ ಸಾಲಿನಲ್ಲಿ ಮುಕುಟಮಣಿಯಂತೆ ಕಂಗೊಳಿಸುವ ಸ್ತ್ರೀರತ್ನವೇ ‘ಅಕ್ಕಮಹಾದೇವಿ’. ಈಕೆ ಶಿವಮೊಗ್ಗ ಜಿಲ್ಲೆಯ ಉಡುತಡಿಯೆಂಬ ಗ್ರಾಮದ ನಿರ್ಮಲಶೆಟ್ಟಿ, ಸುಮತಿ ದಂಪತಿಗಳ ಮಗಳಾಗಿ ಜನಿಸಿದಳು. ಲೌಕಿಕ ಸಂಸಾರವನ್ನು ಒಲ್ಲದೆ ವೀರವೈರಾಗ್ಯವನ್ನು ತಳೆದು ಅಧ್ಯಾತ್ಮದ ಮೇರುಶಿಖರವನ್ನೇರಿದಳು. ಪರಮ ವೈರಾಗ್ಯನಿಧಿ ಅಲ್ಲಮಪ್ರಭು, ಭಕ್ತಿಭಂಡಾರಿ ಬಸವೇಶ್ವರ, ಶಿವಯೋಗಿ ಸಿದ್ಧರಾಮಯ್ಯ, ಷಟ್ಸ್ಥಲಜ್ಞಾನಿ ಚೆನ್ನಬಸವಣ್ಣ ಮುಂತಾದ ಮಹಾ ಶರಣರಿಂದ ‘ನಮೋ ನಮೋ’ ಎನ್ನಿಸಿಕೊಂಡು ಕಿರಿಯ ವಯಸ್ಸಿಗೇ ‘ಜಗದಕ್ಕನಾಗಿ’ ನಿಂತದ್ದು ಅವಳ ಹಿರಿಮೆ, ಗರಿಮೆಗಳಿಗೆ ಸಾಕ್ಷಿಯಾಗಿದೆ. ಜ್ಞಾನವೈರಾಗ್ಯಗಳ ಜೊತೆಗೆ ಅಂದಿನ ಕಾಲಕ್ಕೆ ಅಪರೂಪವಾದ ಧೈರ್ಯ, ಮನೋಬಲಗಳು ಆಕೆಯ ವ್ಯಕ್ತಿತ್ವಕ್ಕೊಂದು ವಿಶೇಷತೆಯನ್ನು ನೀಡಿವೆ. ಆಕೆ ಪ್ರಪ್ರಥಮ ಮಹಿಳಾ ಕವಿಯತ್ರಿಯೂ ಹೌದು. ಈಕೆ ರಚಿಸಿದ 365 ವಚನಗಳು ಲಭ್ಯವಾಗಿವೆ. ಇವಲ್ಲದೆ ‘ಯೋಗಾಂಗ ತ್ರಿವಿಧಿ’, ‘ಮಂತ್ರಗೊಪ್ಯ‘ಗಳೆಂಬ ಕೃತಿಗಳನ್ನು ರಚಿಸಿರುವುದು ತಿಳಿದುಬರುತ್ತದೆ. ಶರಣರಿತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾಳೆ ಅಕ್ಕಮಹಾದೇವಿ. ವಚನಗಳ ರಚನೆಗಳು ಆಕೆಯ ಜೀವನ ದರ್ಶನದೊಂದಿಗೆ ಮಿಳಿತವಾಗಿವೆ.
ಅಂದಿನ ಕಾಲದಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು ಯಾವ ರೀತಿಯಲ್ಲಿ ಬೆಳೆಸಲ್ಪಡುತ್ತಿದ್ದರೋ ಅದಕ್ಕೆ ಭಿನ್ನವಾಗಿ ಮಹಾದೇವಿ ಬೆಳೆದುದು ಆಕೆಯ ಬುದ್ಧಿ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ನಾಂದಿಯಾಯಿತೆನ್ನಬಹುದು. ಅಂದಿನ ಲಿಂಗದೀಕ್ಷೆಯು ಎಳೆತನದಲ್ಲೇ ಅವಳ ಮೇಲೆ ಗಾಢವಾದ ಪರಿಣಾಮ ಬೀರಿತು. ಗುರೂಪದೇಶದಂತೆ ಲಿಂಗಪತಿಗೆ ತಾನು ಶರಣಸತಿಯಾಗಿ ಭಕ್ತಿನಿಷ್ಠೆಗಳನ್ನು ಬೆಳೆಸಿಕೊಂಡಳು. ಚೆನ್ನಮಲ್ಲಿಕಾರ್ಜುನನೊಬ್ಬನೇ ತನ್ನ ಪತಿಯೆಂಬ ನಿಲುವನ್ನು ಗಟ್ಟಿಗೊಳಿಸಿಕೊಳ್ಳುತ್ತಾಳೆ. ಕಲ್ಯಾಣದ ಶರಣರ ಬಗ್ಗೆ ಕೇಳಿತಿಳಿದು ಮಹಾದೇವಿ ಜ್ಞಾನಿಯಾಗಿ ಸಂಸ್ಕಾರವಂತೆಯಾಗಿ ಬೆಳೆಯುತ್ತಾಳೆ. ಅವಳ ಪೋಷಕರ ಸಹಕಾರವೂ ಒತ್ತಾಸೆಯಾಗಿರುತ್ತದೆ.
ಮಹಾದೇವಿಯ ಬಾಲ್ಯವು ಭಕ್ತಿ, ಆರಾಧನೆಯ ಒಂದು ರಸಘಟ್ಟವಾದರೆ, ಅವಳ ಯೌವನವು ಸಮಸ್ಯೆ, ಪರೀಕ್ಷೆಗಳ ಅಗ್ನಿಕುಂಡವಾಗುತ್ತದೆ. ಅವಳ ಓರಗೆಯವರೆಲ್ಲಾ ಮದುವೆ, ಮಕ್ಕಳು ಎಂಬ ಲೋಕಾರೂಢಿಯಂತೆ ಆಲೋಚಿಸಿದರೆ ಅವಳು ಮಾತ್ರ ಚೆನ್ನಮಲ್ಲಿಕಾರ್ಜುನನನ್ನು ನಾನಾಗಲೇ ಮನಸಾ ವರಿಸಿದ್ದೇನೆ. ಬೇರೆ ಪುರುಷರು ನನಗೆ ಸಬಂಧವಿಲ್ಲವೆಂಬ ಧೃಢನಿಲುವು ತಾಳಿದ್ದಳು. ಆಗ ಅಂಥಹ ಸಮಯದಲ್ಲಿ ಅವರಿದ್ದ ಊರಿನ ದೊರೆ ಕೌಶಿಕನ ಕಣ್ಣಿಗೆ ಕಾಣಿಸುತ್ತಾಳೆ. ಅಪಾರ ಸೌಂದರ್ಯರಾಶಿಯನ್ನು ಅಡಗಿಸಿಟ್ಟುಕೊಂಡು ಚಲುವಿನ ಖನಿಯಾದ ಮಹಾದೇವಿಯನ್ನು ತನಗೆ ಕೊಟ್ಟು ವಿವಾಹ ಮಾಡಿಕೊಡಬೇಕೆಂಬ ಒತ್ತಾಯದ ಬೇಡಿಕೆಯನ್ನು ಆಕೆಯ ಪೋಷಕರ ಮುಂದಿಡುತ್ತಾನೆ. ಅದು ರಾಜಾಜ್ಞೆ. ಇತ್ತ ಮಗಳ ನಿರ್ಧಾರವೇ ಬೇರೆ. ಇದನ್ನು ಹೇಗೆ ನಿಭಾಯಿಸಬೇಕೆಂದು ಮಾತಾಪಿತೃಗಳು ತೊಳಲಾಡುತ್ತಿದ್ದಾಗ ಮಹಾದೇವಿಯೇ ಅವರನ್ನು ಸಮಾಧಾನ ಪಡಿಸುತ್ತಾಳೆ. ತಾನು ಕಂಗಾಲಾಗದೆ ಧೃಢನಿರ್ದಾರ ತೆಗೆದುಕೊಳ್ಳುತ್ತಾಳೆ. ವಿವಾಹವಾಗಿಯೇ ಅರಮನೆಗೆ ಹೋದಳೆಂದು ಕೆಲವು ಕೃತಿಗಳಲ್ಲಿ ಮಾಹಿತಿ ಸಿಕ್ಕರೆ, ಇನ್ನು ಕೆಲವು ಕಡೆಗಳಲ್ಲಿ ವಿವಾಹವಾಗದೆ ಅರಮನೆಯನ್ನು ಸೇರುವ ಕ್ರಾಂತಿಕಾರಿ ನಿಲುವನ್ನು ತೆಗೆದುಕೊಂಡಳೆಂದು ಉಲ್ಲೇಖಿಸಲಾಗಿದೆ. ಅದೇನೇ ಇರಲಿ ಒಟ್ಟಾರೆ ಅರಮನೆಗೆ ಆಕೆ ಹೋಗಿದ್ದಂತೂ ಸತ್ಯ. ಆದರೆ ಬುದ್ಧಿವಂತೆಯೂ, ಲೋಕಜ್ಞಾನದ ಅರಿವುಳ್ಳ ಆಕೆ ರಾಜನಿಗೆ ಮೂರು ಶರತ್ತುಗಳನ್ನು ಒಡ್ಡುತ್ತಾಳೆ. ಅವುಗಳನ್ನು ಆತ ಮೀರಬಾರದು, ಒಂದುವೇಳೆ ಮೀರಿನಡೆದರೆ ತಾನು ಅರಮನೆಯನ್ನು ತೊರೆದು ಹೋಗುತ್ತೇನೆ ಎಂದು ತಿಳಿಸುತ್ತಾಳೆ. ಆಕೆಯನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸುವಂತಿಲ್ಲವೆಂದು ಹೇಳುತ್ತಾಳೆ.
ಮಹಾದೇವಿಯ ಮಾತುಗಳನ್ನು ಕೇಳಿದ ಕೌಶಿಕನು ತನ್ನ ಮನಸ್ಸಿನಲ್ಲೇ ಹುಚ್ಚು ಹೆಣ್ಣು, ಅರಮನೆಯ ವೈಭೋಗ, ಸುಖಲೋಲುಪ್ತತೆಯನ್ನು ಕಂಡಮೇಲೆ ತಾನಾಗಿಯೇ ನನಗೆ ಒಲಿಯುತ್ತಾಳೆ, ಬಿಟ್ಟುಹೋಗುವ ಮಾತೇ ಬಾರದು ಎಂದುಕೊಂಡು ಅವಳ ಶರತ್ತುಗಳೇನೆಂದು ಕೇಳುತ್ತಾನೆ.
ಮೊದಲನೆಯದು, ಆಕೆಯ ಶಿವಪೂಜಾಕಾರ್ಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಎರಡನೆಯದು ಗುರುಲಿಂಗ ಜಂಗಮರ ಸೇವೆಯಲ್ಲಿ ಅಡ್ಡ ಬರಬಾರದು.
ಮೂರನೆಯದು ಭವಿಯಾದ ರಾಜನು ತಾನೂ ಶಿವಭಕ್ತನಾಗಬೇಕು. ಒತ್ತಾಯದಿಂದ ಆಕೆಯನ್ನು ಯಾವುದಕ್ಕೂ ಅಡ್ಡಿಪಡಿಸಬಾರದು.
ಮಹಾದೇವಿಯ ಬುದ್ಧಿಮತ್ತೆ, ಅಚಲ ನಿಧಾರದ ಅರಿವಿಲ್ಲದ ಕೌಶಿಕ ರಾಜನು ಆಕೆಯ ಎಲ್ಲ ಶರತ್ತುಗಳನ್ನು ಪಾಲಿಸುತ್ತೇನೆಂದು ಆಶ್ವಾಸನೆ ಕೊಡುತ್ತಾನೆ. ಅವನಿಗೆ ಅವುಗಳನ್ನು ಚಾಚೂತಪ್ಪದೆ ನಿಭಾಯಿಸುವ ಸಂಯಮವಿಲ್ಲದೆ ಆಕೆಯ ಮೇಲೆ ಬಲಪ್ರಯೋಗಮಾಡಲು ಹೋಗಿ ಸೋಲುತ್ತಾನೆ. ಆಗ ಮಹಾದೇವಿ ಸ್ವ ವಿಚಾರಕ್ಕೆ ಮಹತ್ವಕೊಟ್ಟು ಲೌಕಿಕ ಸಂಸಾರವನ್ನು ಧಿಕ್ಕರಿಸಿ ಪ್ರಾಪಂಚಿಕ ಬಂಧನಗಳನ್ನೆಲ್ಲ ಕಿತ್ತೊಗೆದು ತನ್ನ ಮುಂದಿನ ಜೀವನದ ಬಗ್ಗೆ ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಕಾಯದ ಲಜ್ಜೆಯನ್ನೂ ತೊರೆದು ಇಡೀ ಸಮಾಜವೇ ಬೆಕ್ಕಸಬೆರಗಾಗುವಂತೆ ದಿಗಂಬರೆಯಾಗಿ ಅರಮನೆಯನ್ನು ತೊರೆದು ಹೊರನಡೆಯುತ್ತಾಳೆ. ತಾನು ಕಂಡುಕೊಂಡ ಸತ್ಯವನ್ನು ಜಗತ್ತಿಗೆ ತೋರಿಸಲು ತನ್ನನ್ನೇ ಉದಾಹರಣೆಯಾಗಿಸಿದ್ದಾಳೆ. ಕೆಲವು ಗ್ರಂಥಗಳಲ್ಲಿ ಆಕೆ ಕೇಶಾಂಬರಧಾರಿಯಾದಳೆಂಬ ಉಲ್ಲೇಖವಿದೆ. ಕೇಶವೆಂದರೆ ಕೂದಲು, ಅದು ಕಪ್ಪಾದ ಕಂಬಳಿಯ ಕೂದಲೆಂಬ ಮಾತನ್ನು ಜನಪದದಲ್ಲಿ ಹೇಳಲಾಗಿದೆ. ಇನ್ನೂ ಕೆಲವರು ಆಕೆಯ ಗುರುಗಳು ಅವಳಿಗೆ ಕಾವಿಯ ವಸ್ತ್ರವನ್ನು ನೀಡಿದರೆಂಬ ಮಾತಿದೆ. ಹೀಗೆ ಹೊರಬಂದ ತುಂಬು ಯೌವನೆ, ಮೋಹಕವಾದ ಚೆಲುವು, ಏಕಾಂಗಿ, ಮೇಲಾಗಿ ಕೇಶಾಂಬರೆ, ಲೋಕಾರೂಢಿಗೆ ವಿರುದ್ಧವಾಗಿ ಹೊರಟವಳನ್ನು ಕಂಡು ಹೆತ್ತವರು ಮತ್ತು ಆತ್ಮೀಯರು ವ್ಯಾಕುಲಗೊಂಡರು. ಹೇಗಾದರೂ ಮಾಡಿ ಆಕೆಯ ನಿರ್ಧಾರವನ್ನು ಬದಲಿಸಬೇಕೆಂದು ”ಅಮ್ಮಾ ಮಗಳೇ, ನಿನಗೆ ಹಸಿವು ಬಾಯಾರಿಕೆಗೆ ಆಸರೆ, ನಿಲ್ಲಲು ಆಶ್ರಯಗಳು ಎಲ್ಲಿ ಸಿಗುತ್ತವೆ. ಅಪರಿಚಿತ ಸ್ಥಳಗಳು, ಅಪರಿಚಿತ ಜನರು, ಮಿಗಿಲಾಗಿ ನಿನ್ನ ರೂಪು ಯೌವನಗಳಿಗೆ ರಕ್ಷಣೆಯೆಲ್ಲಿ? ನಿನಗೆ ನಾವ್ಯಾರೂ ತೊಂದರೆ ಕೊಡುವುದಿಲ್ಲ, ನಿನಗಿಷ್ಟ ಬಂದಹಾಗೆ ಇಲ್ಲಿಯೇ ಇರು” ಎಂದು ಕಳಕಳಿಯಿಂದ ಒಲೈಸುತ್ತಾರೆ. ಅವಳ ನಿರ್ಧಾರವನ್ನು ಕದಲಿಸಲು ಪ್ರಯತ್ನಿಸುತ್ತಾರೆ.
ಆಗ ಮಹಾದೇವಿಯು ಅವರಿಗೆಲ್ಲ ಈ ರೀತಿಯಲ್ಲಿ ಉತ್ತರಿಸುತ್ತಾಳೆ,
ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆಹಳ್ಳ ಬಾವಿಗಳುಂಟು
ಶಯನಕ್ಕೆ ಹಾಳುದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಯ್ಯಾ ಆತ್ಮಸಂಗಾತಕ್ಕೆ ನೀನೆನಗುಂಟು.
ಜೀವನದಲ್ಲಿ ಸಂಗಾತಿಯೆಂದರೆ ಬರಿಯ ಜೊತೆಗಾರನಾದರೆ ಸಾಲದು, ಆತ್ಮಸಂಗಾತಿಯಾಗಬೇಕು. ಆಗ ಮಾತ್ರ ದಾಂಪತ್ಯ ನಿಜವಾದ ಅರ್ಥದಲ್ಲಿ ಸಫಲವಾಗುವುದು, ಇಲ್ಲವಾದರೆ ಅದು ‘ದಂ’ ಇಲ್ಲದ ಪತಿ ಅಥವಾ ಸತಿಯಾಗಿ ನೀರಸವಾಗುತ್ತದೆ. ಅದರಲ್ಲೂ ಭಕ್ತಿ ಸಾಧನೆಯಲ್ಲಿ ಸತಿಪತಿ ಭಾವಕ್ಕೆ ವಿಶಿಷ್ಟ ಮಹತ್ವವಿದೆ. ಭಕ್ತಿಯ ವಿಶಿಷ್ಟಭಾವ, ಅದರಲ್ಲಿ ಹೆಣ್ಣಿನ ಹೃದಯವು ಪರಮಾತ್ಮನನ್ನು ಪತಿಯೆಂದು ಪರಿಭಾವಿಸಿ ಮೊರೆಹೋದಾಗ, ಆತ್ಮ ಸಮರ್ಪಣೆ ಮಾಡಿಕೊಳ್ಳುವ ಮಧುರ ಅನುಭಾವ ಸಹಜವಾಗುತ್ತದೆ. ಆದ್ದರಿಂದಲೇ ಶರಣರು ಇದನ್ನೇ ಭಕ್ತಿಯಲ್ಲಿ ತಂದು ಪರಮಾತ್ಮನನ್ನು ಪತಿಯೆಂದೂ ತಾವು ಸತಿಯ ದೃಷ್ಟಿಯಿಂದ ಆರಾಧಿಸಿ ತಮ್ಮನ್ನು ಅವನಿಗೆ ಅರ್ಪಿಸಿಕೊಂಡು ಸಮರ್ಪಣೆ, ಸಮರಸದಿಂದ ಅವನಲ್ಲೇ ಐಕ್ಯಗೊಂಡ ಐಕ್ಯಸ್ಥಲದ ಅನುಭಾವವನ್ನು ಹೊಂದಿ ಅಮರರಾದರು. ಅಕ್ಕಮಹಾದೇವಿಯಂತೂ ಈ ಲೋಕದ ಗಂಡರನ್ನು ಒಯ್ದು ಒಲೆಯೊಳಗಿಟ್ಟು ಚೆನ್ನಮಲ್ಲಿಕಾರ್ಜುನನ ಪ್ರೇಮಿಯಾಗಿ ನಲಿದವಳು. ತನ್ನನ್ನು ನಾನಾ ರೀತಿಯಲ್ಲಿ ಪರೀಕ್ಷಿಸುತ್ತಿರುವ ಶಿವನನ್ನೇ ಆಕೆ ನಿರ್ಭಯವಾಗಿ ಪ್ರಶ್ನಿಸುವಂತಹ ಒಂದು ವಚನ ಹೀಗಿದೆ.
ಆರೂ ಇಲ್ಲದವಳೆಂದು ಅಳಿಗೊಳಲುಬೇಡ ಕಂಡಯ್ಯ
ಏನು ಮಾಡಿದರೂ ನಾನಂಜುವಳಲ್ಲ
ತರಗೆಲೆಯ ಮೆಲ್ಲಿದು ನಾನಿಹೆನು
ಸುರಗಿಯ ಮೇಲೊರಗಿ ನಾನಿಹೆನು
ಚೆನ್ನಮಲ್ಲಿಕಾರ್ಜುನಯ್ಯ ಕರ ಕೆಡನೊಡ್ಡಿದಡೆ
ಒಡಲನು, ಪ್ರಾಣವನು ನಿಮಗೊಪ್ಪಿಸಿ ಶುದ್ಧಳಹೆನು.
ನನಗೆ ಯಾರೂ ಇಲ್ಲದವಳು, ಇವಳಿಗೆ ಆಶ್ರಯ ನೀಡಲು ಹೆತ್ತವರಾಗಲೀ, ಬಂಧುಗಳಾಗಲೀ, ಯಾರೂ ಇಲ್ಲವೆಂದು ತಿರಸ್ಕಾರದಿಂದ ಹೀನವಾಗಿ ನೋಡಬೇಡ ಪರಮಾತ್ಮ. ನೀನು ಯಾವ ರೀತಿಯ ಪರೀಕ್ಷೆಗೆ ಒಳಪಡಿಸಿದರೂ ನಾನು ಅಂಜುವವಳಲ್ಲ. ಅನ್ನಪಾನಾದಿಗಳು ದೊರಕದಂತೆ ನೀನು ಮಾಡಬಹುದು, ಆಗ ನಾನು ಒಣಗಿದ ಎಲೆಗಳನ್ನೇ ತಿಂದು ಬದುಕುತ್ತೇನೆ. ಮಲಗಿಕೊಳ್ಳಲು ಆಶ್ರಯ ನೀಡದೇ ಹೋದರೂ ಹರಿತವಾಗಿ ಚುಚ್ಚುವ ಆಯುಧದ ಮೊನೆಯ ಮೇಲಾದರೂ ಒರಗಿ ವಿಶ್ರಮಿಸಿಕೊಳ್ಳುತ್ತೇನೆ. ಕಡೆಗೆ ಅತ್ಯಂತ ಕಷ್ಟವಾಗಿ ಬದುಕಲು ಅಸಾಧ್ಯವೆನಿಸಿದರೆ ನನ್ನ ಶರೀರದಲ್ಲಿನ ಪ್ರಾಣವನ್ನು ನಿಮಗೆ ಅರ್ಪಿಸಿ ಶುದ್ಧಾತ್ಮಳಾಗಿಯೇ ಅಂತ್ಯಗೊಳ್ಳುವೆನು. ಹೀಗೆನ್ನುವ ಆತ್ಮಸ್ಥೈರ್ಯ, ಭಕ್ತಿಯ ಕಿಚ್ಚು ಅಕ್ಕನಿಗಲ್ಲದೆ ಮತ್ಯಾರಿಗೆ ಸಾಧ್ಯ. ಅಕ್ಕನ ಈ ಅಧ್ಯಾತ್ಮಿಕ ಹೋರಾಟದಲ್ಲಿ ಅವಳು ಜಗದ ದೃಷ್ಟಿಯಲ್ಲಿ ಏಕಾಂಗಿ, ಆದರೆ ಅಲೌಕಿಕ ಆತ್ಮಸಂಗಾತಿಯ ಜೊತೆ ನಿರ್ಭಯಿ, ಇದವಳಿಗೆ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ.
ಲೋಕಾರೂಢಿಗೆ ವಿರುದ್ಧವಾಗಿ ಹೊರಟ ಮಹಾದೇವಿಗೆ ದಾರಿಯಲ್ಲಿ ಅನೇಕ ತರದ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಾ ತನ್ನ ಕನಸಿನ ಕಲ್ಪನೆಯ ಕಲ್ಯಾಣಕ್ಕೆ ಅಡಿಯಿಡುತ್ತಾಳೆ. ಕಲ್ಯಾಣದ ಹೆಬ್ಬಾಗಿಲಿನಲ್ಲಿಯೇ ಫ್ರಭುದೇವರ ಆಣತಿಯಂತೆ ಮಹಾದೇವಿಯನ್ನು ತಡೆದ ಕಿನ್ನರಿಬೊಮ್ಮಯ್ಯನಿಗೆ ಆಕೆ ಕೊಡುವ ಉತ್ತರ ಎಂಥಹವರನ್ನೂ ಬೆಚ್ಚಿಬೆರಗಾಗಿಸುತ್ತದೆ. ಶಿವನು ಬರೆದ ಕಾಮನ ಹಣೆಯಬರಹವನ್ನೇ ನಾನು ಅಳಿಸಿ ಹಾಕಿದ್ದೇನೆ ಎಂದು ದಿಟ್ಟತನದಿಂದ ಹೇಳಿ ಅನುಭವ ಮಂಟಪದತ್ತ ನಡೆಯುತ್ತಾಳೆ. ಅನುಭವಮಂಟಪದ ಅಧ್ಯಕ್ಷಪೀಠದಲ್ಲಿ ಕುಳಿತಿದ್ದ ಅಲ್ಲಮಪ್ರಭುವು ಮಹಾದೇವಿಯ ಸತ್ವಪರೀಕ್ಷೆಯನ್ನು ಮಾಡುತ್ತಾನೆ. ಅವನ ಆಂತರ್ಯದಲ್ಲಿ ಮಹಾದೇವಿಯ ಅಧ್ಯಾತ್ಮದ ಅರಿವಿನ ಹಿರಿತನ, ಧೃಢತೆ, ವೈರಾಗ್ಯದ ಎಲ್ಲೆ ತಿಳಿದಿದ್ದರೂ ಜಗತ್ತಿಗೂ ಇದನ್ನು ತಿಳಿಯಪಡಿಸುವ ಸಲುವಾಗಿ ಕಠಿಣವಾದ ಪರೀಕ್ಷೆಯನ್ನು ಒಡ್ಡುತ್ತಾನೆ.
ಉದಮದದ ಯೌವನವನೊಳಗೊಂಡ
ಸತಿ ನೀನು, ಇತ್ತಲೇಕೆ ಬಂದೆಯವ್ವಾ?
ಸತಿಯೆಂದರೆ ಮನಿವರು ನಮ್ಮ ಶರಣರು.ನಿನ್ನ ಪತಿಯ ಕುರುಹ ಹೇಳಿದಡೆ ಬಂದು
ಕುಳ್ಳಿರು ಅಲ್ಲದಿದ್ದರೆ ತೊಲಗು ತಾಯೇ ಎನ್ನುತ್ತಾರೆ.
ಮದಿಸಿದ ಯೌವನದ ಹೆಣ್ಣು ನೀನು, ಹೀಗೆ ಏಕಾಂಗಿಯಾಗಿ ಇಲ್ಲಿಗೆ ಬಂದಿರುವುದು ಸರಿಯಲ್ಲ. ಸತಿಗೆ ಪತಿಯೇ ಪರದೈವ. ನಿನ್ನ ಪತಿಯ ಗುರುತನ್ನು ಹೇಳುವುದಾದರೆ ಹೇಳು ನಿನಗಿಲ್ಲಿ ಸ್ಥಾನವಿದೆ. ಇಲ್ಲವಾದರೆ ಇಲ್ಲಿಂದ ತೊಲಗು ಎಂದು ಪ್ರಭುದೇವರು ನಿಷ್ಠುರವಾಗಿಯೇ ನುಡಿಯುತ್ತಾರೆ. ಅಲ್ಲಮರ ಪ್ರಶ್ನೆಗೆ ಮಹಾದೇವಿಯು ಸ್ವಲ್ಪವೂ ಅಂಜದೆ ಎಮ್ಮವರು ಎನ್ನನ್ನು ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮದುವೆ ಮಾಡಿಕೊಟ್ಟಿದ್ದಾರೆಂದು ಉತ್ತರಿಸುತ್ತಾಳೆ. ಅಲ್ಲಮರು ಈ ಪ್ರಶ್ನೆಯನ್ನು ಕೇಳಲು ಕಾರಣ ಆಕೆ ಲೌಕಿಕವಾದ ಗಂಡನನ್ನು ತೊರೆದು ಬಂದಿದ್ದಾಳೆಂದು ಯಾರೂ ಭಾವಿಸಬಾರದೆಂದು. ಈ ರೀತಿಯನ್ನು ಶರಣರ ಧರ್ಮ ಒಪ್ಪದು. ಏಕೆಂದರೆ ಶರಣರು ಸಾಂಸಾರಿಕ ಜೀವನವನ್ನು ಎಂದೂ ತಿರಸ್ಕರಿಸಿರಲಿಲ್ಲ. ಅದರಲ್ಲಿದ್ದುಕೊಂಡೇ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿದ್ದರು.
ಮತ್ತೊಂದು ಪ್ರಶ್ನೆ ಪ್ರಭುದೇವರಿಂದ ಬರುತ್ತದೆ. ಎಂದೋ ಒಂದುದಿನ ಕೆಟ್ಟು ನಾಶವಾಗುವ ಮನೋಹರ ರೂಪವುಳ್ಳ ನೀನು ರೂಪು, ಕೇಡು ಎರಡೂ ಇಲ್ಲದ ನಿರಾಕಾರವನ್ನು ಒಲಿದು ಒಂದಾಗಿರುವೆ ಎಂದರೆ ಅದು ಹೇಗೆ ಸಾಧ್ಯ?
ಮಹಾದೇವಿಯು ಉತ್ತರದಲ್ಲಿ ಗಟ್ಟಿತುಪ್ಪ- ತಿಳಿತುಪ್ಪ, ದೀಪ-ದೀಪ್ತಿ, ಅಂಗ-ಆತ್ಮ ಇವುಗಳಿಗೆ ಭೇದವೆಲ್ಲಿಯದು? ನನ್ನ ಅಂಗವನ್ನು ಶ್ರೀಗುರುವು ಶಿವದೀಕ್ಷೆಯನಿತ್ತು ಮಂತ್ರವನ್ನಾಗಿ ಮಾಡಿ ಆಕಾರ-ನಿರಾಕಾರ ಎಂಬ ಭೇದವಿಲ್ಲದಂತೆ ಮಾಡಿದ್ದಾರೆ. ಆದ್ದರಿಂದ ನಾನು ಚೆನ್ನಮಲ್ಲಿಕಾರ್ಜುನನಲ್ಲಿ ಸಂದು ಭೇದವಿಲ್ಲದಂತೆ ಬೆರೆತು ಒಂದಾಗಿದ್ದೇನೆ ಎಂದು ಅತ್ಯಂತ ಸಹಜವಾಗಿ ಹೇಳುತ್ತಾಳೆ. ಅಲ್ಲಮಪ್ರಭು ಮತ್ತು ಮಹಾದೇವಿಯ ಸಂಭಾಷಣೆಯು ಶೂನ್ಯ ಸಂಪಾದನೆಯಲ್ಲಿ ಶಿಖರಪ್ರಾಯವಾಗಿ ಮೂಡಿದೆ. ಹೀಗೆಯೇ ಹಲವು ರೀತಿಯಲ್ಲಿ ಪರೀಕ್ಷೆ ಒಡ್ಡಿದ ಅಲ್ಲಮ ಮತ್ತು ಇತರ ಶರಣರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ಮಹಾದೇವಿಯನ್ನು ಕೊನೆಗೆ ಒಪ್ಪಿಕೊಂಡು ಅವಳ ಗುಣಗಾನ ಮಾಡುತ್ತಾರೆ. ಅವಳ ನಿಜವಾದ ನಿಲುವನ್ನು ಅಲ್ಲಪ್ರಭುಗಳು ಆದಿ-ಅನಾದಿ, ನಾಮಸೀಮೆಗಳಿಲ್ಲದ ಮನೋಭಾವವುಳ್ಳ ಅಂತರಂಗದ ಪ್ರಭೆ ಬಹಿರಂಗದಲ್ಲಿ ಪಸರಿಸಿದ್ದನ್ನು ಕಂಡು ಮೆಚ್ಚಿ ಆಕೆಯನ್ನು ಅಕ್ಕ ಜಗದಕ್ಕ ನೆಂದು ಕರೆದು ಆಕೆಯ ಶ್ರೀಪಾದಕ್ಕೆ ನಮೋ ಎನ್ನುತ್ತಾರೆ. ಇಲ್ಲಿ ಒಬ್ಬ ಪುರುಷ ಸ್ತ್ರೀಯ ವ್ಯಕ್ತಿತ್ವದ ಔನ್ನತ್ಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡಿ ಮೆಚ್ಚಿಗೆ ಸೂಸಿ ಆಕೆಗೆ ಗೌರವವಾದ ಸ್ಥಾನ ನೀಡಿರುವುದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದಾಗಿದೆ.
ಅಕ್ಕಮಹಾದೇವಿಯು ಕಲ್ಯಾಣದ ಶರಣರ ಅನುಭವಗೋಷ್ಠಿಯಲ್ಲಿ ಕೆಲಕಾಲ ಸಾಧನೆ ಕೈಗೊಂಡಳು. ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಮುಗ್ಧಳಾದಳು. ಶರಣರ ಗೋಷ್ಠಿಯ ಶಿವಸುಖದಲ್ಲಿ ತನ್ನ ತಪಸ್ಸನ್ನು ಸಾರ್ಥಕಗೊಳಿಸಿಕೊಂಡಳು. ಎಂತಲೇ ಚೆನ್ನಮಲ್ಲಿಕಾರ್ಜುನನಿಗೆ ಈ ಶರಣರೆಲ್ಲರೂ ಕೂಡಿ ತನ್ನನ್ನು ಅಲಂಕರಿಸಿ ವಿವಾಹ ಮಾಡಿಕೊಟ್ಟರೆಂದು ಹೇಳುವ ಸನ್ನಿವೇಶದ ಕಲ್ಪನೆಯನ್ನು ಅದ್ಭುತವಾಗಿ ಆಕೆಯೇ ವರ್ಣಿಸಿದ್ದಾಳೆ.
ಮಂಗಳವೇ ಮಜ್ಜನವಾಗಿ ವಿಭೂತಿಯೇ ಒಲಗುಂದದ ಅರಿಶಿನವಾಗಿ
ದಿಗಂಬರವೇ ದಿವ್ಯಾಂಬರವಾಗಿ ಶಿವಪಾದರೇಣುವೇ ಅನುಲೇಪವಾಗಿ
ರುದ್ರಾಕ್ಷಿಯೇ ಮೈದೊಡವೆಯಾಗಿ ಶರಣರ ಪಾದಗಳೇ ಹಣೆಗೆ
ಬಾಸಿಂಗವಾಗಿ ಚೆನ್ನಮಲ್ಲಿಕಾರ್ಜುನನೇ ಗಂಡನಾಗಿ, ತಾನವನ
ಮದುವಳಿಗೆಯಾಗಿ ಶೃಂಗರಿಸಿಕೊಂಡಿದ್ದೆ ಎಂಬ ಶಿವಸತಿಯ ಅಲಂಕಾರದ ವರ್ಣನೆಯಲ್ಲಿ ಅಧ್ಯಾತ್ಮಿಕ ಸಂಸ್ಪರ್ಶ ಮಿಶ್ರಗೊಂಡಿದೆ. ಅಂತಹ ಮದುವೆಯಲ್ಲಿ ‘ಭವಿ’ ಎಂಬುದ ತೊಡೆದಭಕ್ತೆ ಎಂದೆನಿಸಿ ಚೆನ್ನಮಲ್ಲಿಕಾರ್ಜುನನನ್ನು ತನ್ನ ಕೈವಶಕ್ಕೆ ಕೊಟ್ಟು ಶ್ರೀಗುರುವೆ ಕನ್ನೆಯನ್ನು ಧಾರೆಯೆರೆದು ಕೊಡುವವನಾದರೆ ಲಿಂಗವೇ ಮದುವಣಿಗ, ಶರಣರೆಲ್ಲ ದಿಬ್ಬಣಿಗರು ಎಂಬ ಕಲ್ಪನೆಯಿಂದ ಅಲೌಕಿಕವಾದ ಅಧ್ಯಾತ್ಮಿಕ ವಿವಾಹದ ಬಗೆಯನ್ನು ಅಪೂರ್ವವೆಂಬಂತೆ ಸಂತಸದಿಂದ ವರ್ಣಿಸಿದ್ದಾಳೆ ಅಕ್ಕಮಹಾದೇವಿ. ಅಷ್ಠೇ ಅಲ್ಲ ಅಲ್ಲಮಪ್ರಭುವಿನ ಸಲಹೆಯ ಮೇರೆಗೆ ಆಕೆ ಶ್ರೀಶೈಲದ ಕದಳೀವನಕ್ಕೆ ಹೊರಡುವಾಗಲೂ ತನ್ನನ್ನು ಬೀಳ್ಕೊಡಲು ಬಂದ ಅಪಾರ ಶರಣ ಸಮೂಹವನ್ನುದ್ದೇಶಿಸಿ ಹೀಗೆ ಹೇಳುತ್ತಾಳೆ.
ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ
ಚೆನ್ನಮಲ್ಲಿಕಾರ್ಜುನನ ಕೈವಿಡಿದು.
ನಿಮ್ಮ ಮಂಡೆಗೆ ಹೂವ ತರುವೆನಲ್ಲದೆ
ಹುಲ್ಲ ತಾರೆನು ಎಂಬ ಅಶ್ವಾಸನೆ ಇತ್ತು ಅವರೆಲ್ಲರಿಗೂ ವಂದಿಸಿ ತೆರಳುತ್ತಾಳೆ.
ಈ ಪಯಣದಲ್ಲಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನನ್ನು ಕಾಣುವ ತವಕ, ಮಾನಸಿಕ ಕ್ಲೇಶಗಳಿಗೆ ಗುರಿಯಾಗುತ್ತಾಳೆ. ದೈವದ ದರ್ಶನ ಬೇಗನೆ ಸಿಗದೆ ವಿರಹದಿಂದ ಉನ್ಮಾದಿಯಾಗುತ್ತಾಳೆ. ಪ್ರಕೃತಿಯ ಸೃಷ್ಠಿಯ, ಪಶು, ಪಕ್ಷಿ, ಮರಗಿಡ, ಕಲ್ಲು ಹೀಗೆ ಅಣುತೃಣವನ್ನೆಲ್ಲಾ ಪ್ರಶ್ನಿಸುತ್ತಾ ತನ್ನ ದೈವವನ್ನು ತೋರುವಂತೆ ಮೊರೆಯಿಡುತ್ತಾ ಸಾಗುತ್ತಾಳೆ.
ಚಿಲಿಪಿಲಿ ಎಂದು ಓಡುವ ಗಿಳಿಗಳಿರಾ ನೀವು ಕಾಣಿರೇ
ನೀವು ಕಾಣಿರೇ? ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೇ, ನೀವು ಕಾಣಿರೇ?
ಎರಗಿ ಬಂದಾಡುವ ತುಂಬಿಗಳಿರಾ ನೀವು ಕಾಣಿರೇ
ನೀವು ಕಾಣಿರೇ? ಕೊಳನ ತಡಿಯೊಳಾಡುವ ಹಂಸೆಗಳಿರಾ
ನೀವು ಕಾಣಿರೇ, ನೀವು ಕಾಣಿರೇ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ
ನೀವು ಕಾಣಿರೇ, ನೀವು ಕಾಣಿರೇ?
ಚೆನ್ನಮಲ್ಲಿಕಾರ್ಜುನನೆಲ್ಲಿಹನೆಂದು ಹೇಳಿರೇ
ಸೃಷ್ಟಿಯಲ್ಲಿ ಪಕ್ಷಿಕುಲದ ಅಸ್ತಿತ್ವವು ಸೌಂದರ್ಯದ ನೆಲೆ. ಅವುಗಳ ಆನಂದದ ಚಲನಶೀಲತೆಯಲ್ಲಿ ಶಿವತತ್ವವಿದೆ, ಸೌಂದರ್ಯವಿದೆ. ಅವುಗಳು ಸಚ್ಚಿದಾನಂದನನ್ನು ಕುರಿತು ಹಾಡುತ್ತವೆ, ಝೇಂಕರಿಸುತ್ತವೆ, ಗರಿಗೆದರಿ ನರ್ತಿಸುತ್ತವೆ. ಆದ್ದರಿಂದ ಪರಮಾತ್ಮನ ಇರುವಿಕೆಯನ್ನು ಅವುಗಳು ಅರಿತಿವೆ ಎನ್ನುವುದು ಆಕೆಯ ಧೃಢಭಾವನೆ. ಹೀಗೆ ಆಕೆಯ ನುಡಿವಚನಗಳೆಲ್ಲ ಶ್ರೇಷ್ಠವಿರಹ ಗೀತೆಗಳ ಸಾಲಿನಲ್ಲಿ ನಿಲ್ಲುತ್ತವೆಂದು ವಿದ್ವಾಂಸರ ಅಭಿಪ್ರಾಯ.
ಅಧ್ಯಾತ್ಮದ ಗಿರಿಯನ್ನೇರಿ ಐಕ್ಯಗೊಳ್ಳುವ ಸ್ಥಳ ಕದಳಿವನ ಆಕೆಯ ಪಾಲಿಗೆ ಹೇಗೆ ಕಂಡಿತೆಂದರೆ
ಕದಳಿ ಎಂಬುದು ತನು, ಕದಳಿಯೆಂಬುದು ಮನ
ಕದಳಿಯೆಂಬುದು ವಿಷಯಂಗಳು, ಕದಳಿಯೆಂಬುದು ಭವ ಘೋರಾರಣ್ಯ,
ಈ ಕದಳಿಯೆಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವಗೆದ್ದು ಬಂದ ಮಗಳೆ ಎಂದು ಕರುಣದಿಂ
ತೆಗೆದು ಬಿಗಿದಪ್ಪಿದಡೆ ಚೆನ್ನಮಲ್ಲಿಕಾರ್ಜುನನ
ಹೃದಯ ಕಮಲದಲ್ಲಿ ಅಡಗಿದೆನು.
ಸಾಧಾರಣವಾಗಿ ಕದಳಿಯೆಂದರೆ ಬಾಳೆಯೆಂಬ ಅರ್ಥವಿದೆ. ಅದರ ಸರ್ವಾಂಗವೂ ಉಪಯುಕ್ತವಾದುದು, ಆರೋಗ್ಯಕರವಾದುದು. ಆದರೆ ಅಕ್ಕನ ದೃಷ್ಟಿಯಲ್ಲಿ ಕದಳಿಯೆಂಬುದು ಮಾನವನ ಸುಂದರ ಶರೀರಕ್ಕೆ ಅನ್ವಯವಾಗಿದೆ. ಅದರೊಳಗಿರುವ ಮನವೆಂಬ ಫಲವು ಪಕ್ವವಾಗಿ ಬಾಹ್ಯವನ್ನು ತನ್ನ ಮೋಹಕ ಸ್ವಾದ ಗುಣದಿಂದ ಶಿವಾರ್ಪಿತವಾಗಲು ಸಿದ್ಧವಾಗಿದೆ. ಈ ಕದಳಿಯೆಂಬ ದೇಹವು ನೋಡಿದವರಲ್ಲಿ ವಿಷಂiiಂಗಳೆಂಬ ಆಸೆಯನ್ನು ತಳೆದಾಗ ಕಾಮದ ಆಕರ್ಷಣೆಯನ್ನು ಹೆಚ್ಚಿಸಿ ದುಷ್ಕಾರ್ಯಕ್ಕೆ ಪ್ರೇರೇಪಿಸುವ ಪಂಚೇಂದ್ರಿಯಗಳ ವ್ಯಾಮೋಹ ಎಂಬ ಅರ್ಥವನ್ನು ಪಡೆದಿದೆ. ಇಂತಹ ಕಾಯವೆಂಬ ಕದಳಿಯನ್ನು ಹೊತ್ತು ಸಂಸಾರವೆಂಬ ಘೋರಾರಣ್ಯದ ನಡುವೆ ಕಷ್ಟದಿಂದ ಸಾಗಿ ಬಂದಿದ್ದಾಳೆ. ಶಿವಜ್ಞಾನದ ಅರಿವು ಪಡೆದು ಮುಕ್ತಿಮಾರ್ಗದ ಎತ್ತರದೆಡೆಗೆ ಏರಿದ ಅಕ್ಕ ಏಕನಿಷ್ಠೆಯಿಂದ ಬದುಕೆಂಬ ಕದಳಿಯನ್ನು ಗೆದ್ದು ಕದಳಿಯಬನದಲ್ಲಿ ನೆಲೆಸಿದಳು. ಹಚ್ಚಹಸಿರಿನ ಶಿವಸುಂದರ ಪರಿಸರದಲ್ಲಿ ತಪಗೈದು ಭವಹರ ಚೆನ್ನಮಲ್ಲಿಕಾರ್ಜುನನನ್ನು ಸಾಕ್ಷಾತ್ಕರಿಸಿಕೊಂಡಳು. ಪಿತೃವಾತ್ಸಲ್ಯದಿಂದ ಪರಮಾತ್ಮನು ಭವಗೆದ್ದು ಬಂದ ಮಗಳೆಂದು ಕರುಣೆಯಿಂದ ತನ್ನನ್ನು ಅಪ್ಪಿದ ಆನಂದದಲ್ಲಿ ಶಿಶುವಾಗಿ ಮುಗ್ಧತೆಯಲ್ಲಿ ಶಿವವಾತ್ಸಲ್ಯದ ದಿವ್ಯಾನಂದವನ್ನು ಅನುಭವಿಸುತ್ತಾ ಅವನ ಹೃದಯಕಮಲದಲ್ಲಿ ಬೆರೆತು ಅರ್ಪಿತಳಾದಳು. ಹೀಗೆ ಕದಳಿ ಎಂಬ ಪದವನ್ನು ಇತ್ಯಾತ್ಮಕ, ನೇತ್ಯಾತ್ಮಕ ಅರ್ಥಗಳೆರಡರಲ್ಲೂ ಪರಿಭಾವಿಸುವಲ್ಲಿ ಅಕ್ಕನ ಜೀವನ ದರ್ಶನವೇ ಅಡಗಿದೆ.
ಲಿಂಗಾಕಾರದಲ್ಲಿ ಪೂಜಿಸುವ ಕಲ್ಪನೆಗಿಂತ ಇವಳ ಚೆನ್ನಮಲ್ಲಿಕಾರ್ಜುನನ ಕಲ್ಪನೆ ಭಿನ್ನವಾಗಿದೆ. ಆತನು ಪರಮ ಸಾಕಾರ ಸುಂದರ ಮೂರ್ತಿ, ರೂಹಿಲ್ಲದ ಚೆಲುವ ಎಂದಿದ್ದಾಳೆ.
ಅಕ್ಕಮಹಾದೇವಿಯ ವಚನಗಳೆಲ್ಲ ಅವಳ ಬಾಳಿನಲ್ಲಿ ಹಾಸುಹೊಕ್ಕಾಗಿರುವ ಅಧ್ಯಾತ್ಮಿಕ, ಆತ್ಮ ನಿವೇದನೆ ಮಾಡಿಕೊಳ್ಳುವಂತಹವೇ ಹೆಚ್ಚಾಗಿವೆ. ತನ್ನನ್ನೇ ನಿಷ್ಠುರವಾಗಿ ಸ್ವವಿಮರ್ಶೆಗೆ ಒಳಪಡಿಸಿಕೊಳ್ಳುತ್ತಾಳೆ. ಅವಳದ್ದು ಸಿದ್ಧ ವೈರಾಗ್ಯವಲ್ಲ, ಸಿದ್ಧಿಸಿಕೊಂಡ ವೈರಾಗ್ಯ. ಹಾಗೆಂದು ಸಾಮಾಜಿಕ ಕಳಕಳಿ ಹೊಂದಿದ ವಚನಗಳು ಇಲ್ಲವೆಂದಲ್ಲ. ಅವುಗಳ ಸಂಖ್ಯೆ ಕಡಿಮೆಯಿರಬಹುದು. ಉದಾಹರಣೆಗೆ:
ಬೆಟ್ಟದಾ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯಾ
ಸಮುದ್ರದಾ ತಡಿಯಲೊಂದು ಮನೆಯಮಾಡಿ
ನೊರೆತೊರೆಗಳಿಗಂಜಿದಡೆಂತಯ್ಯಾ
ಸಂತೆಯೊಳಗೊಂದು ಮನೆಯಮಾಡಿ’
ಶಬ್ಧಕ್ಕೆ ನಾಚಿದೊಡೆಂತಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿನಿಂದೆಗಳು ಬಂದಡೆ ಮನದಲ್ಲಿ
ಕೋಪವಾ ತಾಳದೆ ಸಮಾಧಾನಿಯಾಗಿರಬೇಕು.
ಜೀವನದ ಅನಿವಾರ್ಯತೆಗಳು, ಅಸೌಕರ್ಯಗಳ ನಡುವೆಯೇ ಸಮಾಧಾನಚಿತ್ತದಿಂದ ನಿರ್ಲಿಪ್ತವಾಗಿ ಬದುಕುವುದೇ ಸಹಜ ರೀತಿ. ಬೆಟ್ಟದಮೇಲೆ ಮನೆಯನ್ನು ಮಾಡಿದವರು ಮೃಗಗಳಿಗೆ ಅಂಜಿ ಅಡಗಿ ಕುಳಿತರೆ ಜೀವನ ನಿರ್ವಹಣೆ ಅಸಾಧ್ಯ. ಸಮುದ್ರದ ದಡದಲ್ಲಿ ಮನೆಯ ಮಾಡಿದರೆ ನೊರೆತೆರೆಗಳ ಆರ್ಭಟ, ಅವು ಹೊತ್ತು ತರುವ ಕೊಳೆ ಕಷ್ಮಲಗಳಿಗೆ ರೋಸಿದರೆ ಬಾಳಲಾದೀತೇ? ಸಂತೆಯೊಳಗೆ ಮನೆಯ ಮಾಡಿದವರು ಸಂತೆನಡೆಯುವ ವೇಳೆಯಲ್ಲಿ ಜನರು, ಪ್ರಾಣಿಗಳ ಗದ್ದಲ ಗೌಜುಗಳಿಂದ ಸಂಕೋಚಗೊಂಡು ದೂರ ಹೊಗಲಾದೀತೇ? ಅಲ್ಲಲ್ಲಿ ಉಂಟಾಗುವ ತೊಂದರೆಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡು ಬಾಳಲೇಬೇಕು. ಹಾಗೆಯೇ ಲೋಕದಲ್ಲಿ ಜನರ ಹೊಗಳಿಕೆ, ತೆಗಳಿಕೆಗಳು ಬಂದೇ ಬರುತ್ತವೆ. ಅವುಗಳಿಗೆ ಹಿಗ್ಗದೆ, ಕುಗ್ಗದೆ ಅದೊಂದು ಸಹಜ ಪ್ರಕ್ರಿಯೆ ಎಂದು ಭಾವಿಸಿಕೊಂಡು ಸಮಾಧಾನಚಿತ್ತದಿಂದ ಇರಬೇಕು. ನಿರ್ಲಿಪ್ತತೆ ಸಾಧಿಸಬೇಕು. ಎಲ್ಲವನ್ನೂ ದೈವನಿರ್ಣಯಕ್ಕೆ ಬಿಟ್ಟು ಅವನ ಸ್ಮರಣೆ ನಾಡುವುದೇ ಸೂಕ್ತ. ಅಕ್ಕನ ಈ ಅನುಭವವಾಣಿ ಸರ್ವಕಾಲಿಕವಾಗಿ ಮಾನವರನ್ನು ಸಂತೈಸುವ ಸಂದೇಶವಾಗಿದೆ.
ಲೌಕಿಕ ಆಸೆ ಆಮಿಷಗಳಿಂದ ಬಿಡುಗಡೆ ಪಡೆಯುವುದು ಅಷ್ಟೊಂದು ಸುಲಭವಲ್ಲ. ಇದನ್ನು ಅಕ್ಕ ರೇಷಿಮೆಯ ಹುಳು ತನ್ನ ನೂಲಿನಿಂದ ತಾನೇ ಕಟ್ಟುವ ಗೂಡಿನಲ್ಲಿ ಬಂದಿಯಾಗುವ ಉಪಮೆಯ ಮೂಲಕ ನಿರೂಪಿಸಿದ್ದಾಳೆ.
ತರಣಿಯ ಹುಳು ತನ್ನ ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನ್ನೇ ಸುತ್ತಿಸುತ್ತಿ ಸಾವ ತೆರನಂತೆ
ಮನ ಬಂದುದ ಬಯಸಿ ಬೇವುತಿದ್ದೆನಯ್ಯಾ
ತನ್ನ ಮೃತ್ಯುವನ್ನು ತಾನೇ ಆಹ್ವಾನಿಸುವಂತೆ
ಎನ್ನ ಮನದ ದುರಾಸೆಯ ಮಾಣಿಸಿ
ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ.
ಸಾಧಕರಿಗೆ ಸಂಸಾರವೆಂಬ ಮಾಯೆ ಬೆಂಬಿಡದೆ ಕಾಡುತ್ತಿರುವುದನ್ನು ದಾಟಿ ಹೋಗಲಾಗದ ಸ್ಥಿತಿಯನ್ನು ತರಣಿಯ ಹುಳುವಿನ ಬದುಕಿಗೆ ದೃಷ್ಟಾಂತವಾಗಿ ತಿಳಿಸಿ ಸಂಸಾರಬಂಧನವನ್ನು ಕತ್ತರಿಸಿಕೊಂಡು ಬರಲಾಗದ ಪರಿಸ್ಥಿತಿಯಿಂದ ಜಾಗೃತಳಾಗಿ ತನ್ನ ಮನಸ್ಥಿತಿಯನ್ನು ಪರಮಾತ್ಮನಲ್ಲಿ ನಿವೇದಿಸಿಕೊಂಡಿದ್ದಾಳೆ ಅಕ್ಕಮಹಾದೇವಿ.
ರೇಷಿಮೆಯ ಹುಳು ಸಿದ್ಧಪಡಿಸುವ ರೇಷಿಮೆ ಮೋಹಕ, ಮೃದು. ಇಂತಹದ್ದನ್ನು ತಾನೇ ನೂಲಾಗಿ ಎಳೆಯುತ್ತಾ ತನ್ನಲ್ಲಿರುವ ದ್ರವ್ಯದ ಮೇಲಿನ ಆಸೆಯಿಂದ ಸುತ್ತುತ್ತಾ ಹೋಗುತ್ತದೆ. ಅದರಿಂದಲೇ ತನ್ನ ಸಾವುಂಟಾಗುತ್ತದೆಂಬ ಪರಿಕಲ್ಪನೆಯೇ ಅದಕ್ಕಿರುವುದಿಲ್ಲ. ಗೂಡು ಕಟ್ಟಿದ ಮೇಲೆ ತನ್ನ ಗೂಡೊಳಗೆ ತಾನೇ ಬಂಧಿತವಾಗುತ್ತದೆ. ಹೀಗೆ ಬಂಧನಕ್ಕೆ ಒಳಗಾದ ಹುಳುವು ತನ್ನ ಸಾವಿಗೆ ತಾನೇ ಕಾರಣವಾಗುತ್ತದೆ. ಮನಸ್ಸಿಗೆ ಬಂದುದನ್ನೆಲ್ಲಾ ಅಪೇಕ್ಷಿಸುತ್ತಾ ಜೀವನ ನಡೆಸಿ ತನ್ನ ಅಧೋಗತಿಗೆ ತಾನೇ ಮುಂದಾಗುವ ದುರಾಸೆಯುಕ್ತ ಮನಸ್ಸಿಗೆ ಹೋಲಿಸಿದ್ದಾಳೆ. ಮನದ ದುರಾಸೆಯನ್ನು ಹೋಗಲಾಡಿಸಿಕೊಂಡು ಶಿವಸ್ಮರಣೆಯಲ್ಲಿ ಮನಸ್ಸನ್ನು ಕೇಂದ್ರಿತಗೊಳಿಸಲು ಮಾರ್ಗತೋರೆಂದು ಭಗವಂತನನ್ನು ಆರ್ತಳಾಗಿ ಪ್ರಾರ್ಥಿಸಿದ್ದಾಳೆ.
ಮೊದಲು ಕಾಯವಿಕಾರಗಳನ್ನು ಗೆಲ್ಲಬೇಕು. ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ. ಅದನ್ನು ಗೆಲ್ಲಬೇಕೆಂದು ಹೇಳಿದ್ದಾಳೆ.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಮನಶುದ್ಧವಿಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯ ಕಮಲವಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ.
ಈ ವಚನದಲ್ಲಿ ತನ್ನ ನಡೆನುಡಿಗಳನ್ನೇ ಪ್ರಶ್ನೆಮಾಡುವಂತೆ ಸ್ವವಿಮರ್ಶೆ ಮಾಡಿಕೊಂಡಿದ್ದಾಳೆ ಅಕ್ಕಮಹಾದೇವಿ. ವಚನವು ಶಿವಪೂಜಾ ವಿಧಾನದ ಬಾಹ್ಯ ಮತ್ತು ಅಂತರಂಗದ ಆವರಣಗಳನ್ನು ಅನಾವರಣಗೊಳಿಸಿದೆ. ಅಂಗೈಮೇಲೆ ಸೃಷ್ಟಿಕರ್ತನ ಚುಳುಕಾದ ಲಿಂಗರೂಪವನ್ನಿರಿಸಿ ಲಿಂಗಮಜ್ಜನವನ್ನು ಮಾಡುವ ದೃಶ್ಯ, ನಂತರ ಹಂತಹಂತವಾಗಿ ನೆರವೇರಿಸುವ ಪೂಜಾ ಪ್ರಕ್ರಿಯೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಅಭಿಷೇಕ, ಪುಷ್ಪ, ಗಂಧಾರ್ಚನೆ, ಆರತಿ, ಧೂಪ, ನೈವೇದ್ಯ, ತಾಂಬೂಲಾದಿಗಳ ಸಮರ್ಪಣೆ. ಪೂಜೆಯನ್ನು ಸಮಗ್ರವಾಗಿಸಲು ಹೊರಗಿನಿಂದ ತಂದ ಪದಾರ್ಥಗಳಿಂದ ಕ್ರಿಯಾವಿಧಿಗಳು ಜರುಗುತ್ತವೆ. ಆದರೆ ಇವೆಲ್ಲ ಕ್ರಿಯೆಗಳು ಅಂತರಂಗ ಶುದ್ಧಿಯಿಂದ ನಡೆಯಬೇಕು. ಆಗ ಮಾತ್ರ ಶಿವನಿಗೆ ಮುಟ್ಟುತ್ತದೆ. ಆತನಿಂದ ಸ್ವೀಕಾರವಾಗುತ್ತದೆ. ಇದು ಹೃದಯಕಮಲದಲ್ಲಿ ಸ್ಥಿತನಾಗಿರುವ ಪರಮಾತ್ಮನನ್ನು ಒಲಿಸುವ ಭಕ್ತಿಮಾರ್ಗ. ಇಂತಹ ಯಾವುದೇ ಗುಣವೀಶೇಷವಿದೆಯೆಂದು ನೀನು ನನಗೆ ಪ್ರಸನ್ನನಾಗಿ ಒಲಿದುಬಂದು ಕರಸ್ಥಳದಲ್ಲಿ ನೆಲೆಯಾಗಿದ್ದೀಯೆ ಎಂಬ ವಿಸ್ಮಯದ ನುಡಿಯು ಅಕ್ಕನ ಶುದ್ಧ ಅಂತರಂಗದ ಔನ್ನತ್ಯವಾಗಿದೆ.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ
ಶಿವನ ನೆನೆಯಿರಿ. ಶಿವನ ನೆನೆಯಿರಿ.
ಈ ಜನ್ಮ ಬಳಿಕಿಲ್ಲ, ಚೆನ್ನಮಲ್ಲಿಕಾಜುನನ ದೇವರದೇವನ
ನೆನೆದು ಪಂಚ ಮಹಾಪಾತಕರೆಲ್ಲರು ಮುಕ್ತಿ ಪಡೆದರಂದು.
ಪರಮಾತ್ಮನು ಈ ಲೋಕದ ಜನರ ಜೀವನವನ್ನು ಉದಯಾಸ್ತಮಾನವೆಂಬ ಎರಡು ಕೊಳಗದಲ್ಲಿ ಅಳೆಯುತ್ತಿರುವ ಪರಿಕಲ್ಪನೆಯೊಡನೆ ವಿವರಿಸಿದ್ದಾಳೆ. ಪ್ರಪಂಚದಲ್ಲಿ ಹಗಲು ರಾತ್ರಿ, ಸುರ್ಯೋದಯ, ಸೂಯಾಸ್ತವೆಂಬುವು ಮಾನವರ ಆಯುಷ್ಯದ ಕಾಲರಾಶಿಯನ್ನು ಅಳೆಯುತ್ತಿವೆ. ಹೀಗೆ ಅಳೆಯುತ್ತಾ ಅಳೆಯುತ್ತಾ ಪ್ರತಿಯೊಬ್ಬರ ಆಯುಷ್ಯರಾಶಿಯೂ ಒಂದುಬಾರಿ ಮುಗಿಯುವ ಸಮಯ ಬರುತ್ತದೆ. ಆಗ ಲೋಕವನ್ನು ಬಿಟ್ಟು ದೇಹ ಮಣ್ಣಲ್ಲಿ ಮಣ್ಣಾಗಿ ಹೋಗುವ ನಶ್ವರ ದೇಹವಿದು. ಆದ್ದರಿಂದ ಈ ಶರೀರ ಆರೋಗ್ಯವಾಗಿರುವಾಗಲೇ ಪರಮಸತ್ಯ ಶಿವನನ್ನು ನೆನೆಯಿರಿ. ಶಿವನನ್ನು ಪೂಜಿಸಿ. ಶಿವನಲ್ಲಿ ಭಕ್ತಿಯಿಟ್ಟರೆ ಮರುಜನ್ಮ ಬರುವುದಿಲ್ಲ. ಕಳ್ಳತನ, ಕೊಲೆ, ಹಾದರ ಮುಂತಾದ ಪಂಚಮಹಾಪಾತಕಗಳನ್ನು ಮಾಡಿದ ದುರ್ಮಾರ್ಗಿಗಳು, ನೀಚರೂ ಸಹ ಶಿವನ ಭಕ್ತರಾಗಿ ಪೂಜಿಸಿ ಮುಕ್ತಿಪಡೆದವರುಂಟು. ಆದ್ದರಿಂದ ಕೆಟ್ಟ ಮಾರ್ಗದಿಂದ ವಿಮುಖರಾಗಿ ಸನ್ಮಾರ್ಗದಲ್ಲಿ ತೊಡಗಿ ಶಿವನನ್ನು ಭಕ್ತಿಯಿಂದ ಆರಾಧಿಸಿ ಮತ್ತೆ ಜನ್ಮವಿಲ್ಲದಂತೆ ವಿಮುಕ್ತರಾಗುವ ಪುಣ್ಯಶಾಲಿಗಳಾಗಿ ಎಂದು ಕರೆ ಕೊಟ್ಟಿದ್ದಾಳೆ.
ಅಕ್ಕನು ಬದುಕನ್ನು ಸಾಮಾಜಿಕ ನೆಲೆಯ ಚಿಂತನೆಯಲ್ಲಿ ಕಂಡುಕೊಂಡರೂ ಕೂಡ ವಿರಕ್ತಿ ಪರವಾದ ಮಾನಸಿಕ ನೆಲೆಯಲ್ಲಿ ಗ್ರಹಿಸಿದ್ದಾಳೆ. ಉದಯ, ಅಸ್ತಮಾನ ಎಂಬ ಕೊಳಗಗಳ ಕಲ್ಪನೆ ಒಂದು ರೂಪಕವಷ್ಟೇ ಅಲ್ಲದೆ ಮಾನವರ ಬದುಕನ್ನೇ ಅಳೆಯುವ ಮಾನದಂಡವಾಗಿದೆ. ಹಗಲು ಇರುಳು ಎಂಬ ಸರ್ವಕಾಲಿಕ ದರ್ಶನವನ್ನು ಹೇಳುತ್ತಲೇ ಮಾನವರಿಗೆ ಬದುಕಿನಲ್ಲಿ ನೈತಿಕ, ಧಾರ್ಮಿಕ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳಿ ಎಂಬ ಸದಾಶಯದ ಸಂದೇಶವನ್ನು ಇತ್ತಿದ್ದಾಳೆ ಅಕ್ಕಮಹಾದೇವಿ.
ಕಾಯದ ಕಳವಳಕ್ಕೆ ಕಾಯಯ್ಯಾ ಎನ್ನದೆ, ಜೀವದ ಜಂಝಡಕ್ಕೆ ಅಂಜಿ ಈಯಯ್ಯಾ ಎನ್ನದೆ ಧೃಢಸಂಕಲ್ಪ ಹೊತ್ತು ತಾನು ಹಿಡಿದ ಕಾರ್ಯಸಾಧನೆ ಮಾಡಿ ಜಗತ್ತಿಗೆ ‘ಹೆಣ್ಣು ಅಬಲೆಯಲ್ಲ’ ಸಬಲೆ ಎಂಬುದನ್ನು ಸಾರಿಹೋಗಿದ್ದಾಳೆ ಜಗದಕ್ಕನಾಗಿ ನಮ್ಮ ಮುಂದೆ ನಿಂತಿದ್ದಾಳೆ.
ಆಧುನಿಕತೆಯ ಬದುಕು ಸಮಸ್ಯೆಗಳ ಆಗರವಾಗುತ್ತಿದೆ. ದಿನೇದಿನೇ ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳನ್ನು ನಾವು ಶರಣರ ಬದುಕು ಮತ್ತು ಬರಹಗಳಿಂದ, ಅವರು ನೀಡಿರುವ ಸಂದೇಶಗಳಿಂದ ಮತ್ತೆಮತ್ತೆ ಎಚ್ಚೆತ್ತುಕೊಂಡು ಆಚರಣೆಗೆ ತರಬೇಕು. ಅಕ್ಕನಂತೆ ಲೌಕಿಕ ಜೀವನವನ್ನು ತ್ಯಜಿಸುವುದು ಎಲ್ಲರಿಗೂ ಸಾಧ್ಯವಾಗಲಾರದು. ಆದರೆ ಹಿಡಿದ ಛಲ, ಮಾಡುವ ಸಂಕಲ್ಪ ಗಳೊಂದಿಗೆ ಗುರಿಮುಟ್ಟುವವರೆಗೂ ಹೋರಾಡಿ ಸಾಧಿಸುವ ಚೈತನ್ಯವನ್ನು ನಮ್ಮಲ್ಲಿ ಬೆಳೆಸಿಕೊಂಡರೆ ಬಾಳು ಸಾರ್ಥಕವಾದೀತು.
–ಬಿ.ಆರ್.ನಾಗರತ್ನ, ಮೈಸೂರು
ವಿಸ್ತೃತ ಲೇಖನ. ನಮ್ಮ ಮಹದೇವಿಯಕ್ಕನನು ಕುರಿತದ್ದು.
ಪಂಡಿತರಿಗೂ ಪಾಮರರಿಗೂ ನೇರ ತಲಪುವಂತೆ ವಿಶ್ಲೇಷಿಸಿದ್ದೀರಿ. ಪೂರ್ತ ಓದಿದೆ. ನಿಮಗೆ ಅಭಿನಂದನೆ ಮತ್ತು ವಂದನೆ.
ಅಕ್ಕನೇ ಇಂದಿಗೂ ಆದರ್ಶ. ಇಹಕೂ ಪರಕೂ. ಅವಳ ಅದಮ್ಯ ಆತ್ಮವಿಶ್ವಾಸ ಮತ್ತು ಆತ್ಮಜ್ಞಾನ ಅಕೆಗೇ ಸಾಟಿ.
ಲೇಖನದ ಕೊನೆಯ ಸಾಲುಗಳು ಅರ್ಥವತ್ತಾದ ಸಮಾರೋಪವಾಗಿದೆ. ನಿಮ್ಮ ಬರೆಹದಲ್ಲಿರುವ ನಿರ್ಲಿಪ್ತತೆ ನನಗೆ ಮೆಚ್ಚುಗೆಯಾಯಿತು.
ಹೀಗೇ ಶಿವಶರಣೆಯರನ್ನು ಕುರಿತ ನಿಮ್ಮ ಬರೆಹಗಳು ಹೆಚ್ಚು ಬರಲಿ ಎಂದು ಹಾರೈಸುವೆ. ಶುಭವಾಗಲಿ ನಾಗರತ್ನ ಮೇಡಂ.
ಅಕ್ಕಮಹಾದೇವಿಯ ವ್ಯಕ್ತಿತ್ವವನ್ನು ಸರಳವಾಗಿ ಪರಿಚಯಿಸಿದ್ದೀರಿ. ತುಂಬಾ ಚೆನ್ನಾಗಿ ಮೂಡಿಬಂದಿದ
ಬಹಳ ಮಾಹಿತಿಯುಕ್ತವಾದ, ಸೊಗಸಾದ ಬರಹ.
ನನ್ನ ಲೇಖನಕ್ಕೆ ಪ್ರೀತಿ ಪೂರ್ವಕವಾಗಿ ಸಹೃದಯತೆಯಿಂದ ಪ್ರತಿಕ್ರಿಯಿಸಿದ…ಮಂಜು ರಾಜ್ ಸರ್…ಮುಕ್ತಾ ಮೇಡಂ ಗೆಳತಿ ಹೇಮ ಮಾಲಾ ಅವರುಗಳಿಗೆ.. ಹೃತ್ಪೂರ್ವಕವಾದ ಧನ್ಯವಾದಗಳು.
ಉತ್ತಮ ವಿಚಾರಧಾರೆಗಳನ್ನು ಒಳಗೊಂಡಿರುವ ವಿಸ್ತೃತ ಲೇಖನ.
ಧನ್ಯವಾದಗಳು ನಯನ ಮೇಡಂ
ಸೂಕ್ತ ವಚನಗಳೊಂದಿಗೆ, ಅಕ್ಕನ ಅದ್ಭುತ ವ್ಯಕ್ತಿ ಚಿತ್ರಣ!
ಧನ್ಯವಾದಗಳು ಪದ್ಮಿನಿ ಮೇಡಂ
ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ದಿನಗಳಲ್ಲಿ ಧಿರೋದಾತ್ತ ಮಹಿಳೆ, ಚಿಂತಕಿ, ಆದರ್ಶನಾರಿ ಅಕ್ಕಮಹಾದೇವಿಯನ್ನು ಕುರಿತಾದ ಸವಿವರವಾದ ಲೇಖನ ಮಾಹಿತಿ ಪೂರ್ಣ ಮತ್ತು ಸಂಗ್ರಹಯೋಗ್ಯವಾಗಿದೆ. ಅಭಿನಂದನೆಗಳು.
ಧನ್ಯವಾದಗಳು ಪದ್ಮಾ ಮೇಡಂ
ಮಲ್ಲಿಕಾರ್ಜುನನನ್ನೇ ತನ್ನವನಾಗಿಸಿಕೊಂಡ ಮಹಾಭಕ್ತೆ ಅಕ್ಕ ಮಹಾದೇವಿಯ ಸ್ಥೂಲ ಪರಿಚಯವು, ಆಯ್ದ ಸೂಕ್ತ ವಚನಗಳೊಂದಿಗೆ ಅದ್ಭುತವಾಗಿ ಮೂಡಿ ಬಂದಿದೆ ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಅಕ್ಕನ ಭವ್ಯವಾದ ವ್ಯಕ್ತಿತ್ವದ ಪರಿಚಯ ಚೆನ್ನಾಗಿ ಮೂಡಿ ಬಂದಿದೆ
ವಂದನೆಗಳು
ಧನ್ಯವಾದಗಳು ಗಾಯತ್ರಿ ಮೇಡಂ