ಗೋಪುರಗಳ ನಾಡಿನಲ್ಲಿ…ಹೆಜ್ಜೆ 13
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ತಂಜಾವೂರು
ಧನುಷ್ಕೋಟಿಯಿಂದ ಪ್ರಯಾಣ ಮುಂದುವರಿದು, ಅಂದಾಜು 270 ಕಿ.ಮೀ ದೂರದಲ್ಲಿರುವ ತಂಜಾವೂರಿಗೆ ತಲಪಿದೆವು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಕ್ಕಪಕ್ಕ ಕಂಗೊಳಿಸುತ್ತಿದ್ದ ಹಸಿರು ಹೊಲಗಳು, ಕಬ್ಬಿನ ಗದ್ದೆಗಳು ನೀರಾವರಿ ಆಶ್ರಯಿತ ವ್ಯವಸಾಯ ಇರುವುದನ್ನು ಸೂಚಿಸಿದುವು. ತಂಜಾವೂರಿಗೆ ತಮಿಳುನಾಡಿನ ‘ಅಕ್ಕಿಯ ಬಟ್ಟಲು’ ಎಂಬ ಹೆಸರಿದೆ. ತಂಜಾವೂರಿಗೆ ದೇವಾಲಯಗಳ ನಗರ ಅಂತಲೂ ಹೆಸರಿದೆ. ತಂಜಾವೂರಿನ ಚಿತ್ರಕಲೆ, ಕರಕುಶಲ ವಸ್ತಿಗಳು ಹಾಗೂ ಅಲ್ಲಿಯ ಶಾಸ್ತ್ರೀಯ ಸಂಗೀತ ಹೆಸರುವಾಸಿಯಾಗಿವೆ.
ಚೋಳರು, ಪಾಂಡ್ಯರು,ವಿಜಯನಗರ ಸಾಮ್ರಾಜ್ಯ, ನಾಯಕರು ಮತ್ತು ಮರಾಠ ರಿಂದ ಆಳಲ್ಪಟ್ಟ ನಗರ ತಂಜಾವೂರು. ಇಲ್ಲಿರುವ ಬೃಹದೀಶ್ವರ ದೇವಾಲಯ ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕ್ರಿ.ಶ. 1010-1015 ರ ಅವಧಿಯಲ್ಲಿ ಒಂದನೇ ರಾಜರಾಜ ಚೋಳನು ನಿರ್ಮಿಸಿದ ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿದ ದೇವಾಲಯವಿದು. ಅನಂತರ ಆಳಿದ ರಾಜರುಗಳು ಪ್ರಾಕಾರ, ಆವರಣ ಗೋಡೆ ಇತ್ಯಾದಿ ನಿರ್ಮಿಸಿ ದೇಗುಲವನ್ನು ಅಭಿವೃದ್ದಿಪಡಿಸಿದರು. ‘ಶಿಲೆಗಳು ಸಂಗೀತವ ಹಾಡುತ್ತಿರುವ’ ಈ ಸಂಪೂರ್ಣ ಶಿಲಾಮಯ ದ್ರಾವಿಡ ಶೈಲಿಯ ದೇಗುಲದ ವಾಸ್ತುಶಿಲ್ಪಿ ಕುಂಜರ ಮಲ್ಲನ್ ರಾಜ ಪೆರುಂತಚನ್.
ಸಾಮಾಸ್ಯವಾಗಿ ದೇಗುಲದ ಮುಖ್ಯದ್ವಾರದಲ್ಲಿ ದೊಡ್ಡದಾದ ಗೋಪುರವಿದ್ದು, ಇತರ ಗೋಪುರಗಳಿದ್ದರೆ ಸಮಾನ ಎತ್ತರ ಅಥವಾ ಸ್ವಲ್ಪ ಕಡಿಮೆ ಎತ್ತರವಿರುವುದನ್ನು ಗಮನಿಸಿದ್ದೇವೆ, ಆದರೆ ತಂಜಾವೂರಿನ ಬೃಹದೀಶ್ವರ ದೇಗುಲದ ಗರ್ಭಗುಡಿಯ ಮೇಲೆ 216 ಅಡಿ ಎತ್ತರದ ಗೋಪುರವಿರುವುದು ಇಲ್ಲಿನ ವಿಶೇಷ . ನೆಲದ ಮೇಲೆ 16 ಅಡಿಗಳಷ್ಟು ಎತ್ತರದಲ್ಲಿರುವ ಪಂಚಾಂಗದಲ್ಲಿ ಹಲವಾರು ದೇವತೆಗಳ ವಿಗ್ರಹಗಳಿವೆ. ಗರ್ಭಗುಡಿಯಲ್ಲಿ ಬೃಹದೀಶ್ವರ ಲಿಂಗವಿದೆ. ಗೋಪುರದ ಶಿಖರದಲ್ಲಿರುವ ಕಲಶವು 80 ಟನ್‌ಗಳಷ್ಟು ತೂಕವಿದೆಯಂತೆ!
ಅಷ್ಟು ಎತ್ತರದ ಗೋಪುರವನ್ನು ಕತ್ತೆತ್ತಿ ನೋಡಲೂ ನಮಗೆ ಕಷ್ಟವಾಗುತ್ತದೆ. ಈಗಿನಂತೆ, ಭಾರ ಎತ್ತುವ ಕ್ರೇನ್ ಗಳು ಇಲ್ಲದ ಆ ಕಾಲದಲ್ಲಿ ಅಷ್ಟು ತೂಕದ ಶಿಲಾಕಲಶವನ್ನು ಗೋಪುರದ ತುದಿಗೆ ಹೇಗೆ ಸಾಗಿಸಿದರು, ಅಲ್ಲಿ ಅದು ಸಾವಿರಾರು ವರ್ಷಗಳಿಂದಲೂ ದೃಢವಾಗಿ ನಿಂತಿರುವುದು ಹೇಗೆ ಎಂದು ಅಚ್ಚರಿಯಾಗುತ್ತದೆ. ಲಭ್ಯ ಮಾಹಿತಿ ಪ್ರಕಾರ, ತಂಜಾವೂರಿನಿಂದ, 7 ಕಿಮೀ ದೂರದ ಸಾರಂಪಳ್ಳಿ ಎಂಬ ಗ್ರಾಮದಿಂದಲೇ ನಿಧಾನ ಏರುಗತಿಯ ಮಣ್ಣಿನ ರಸ್ತೆಯನ್ನು ನಿರ್ಮಾಣ ಮಾಡಿ ಅದರಲ್ಲಿ, ಆನೆಗಳ ಮೂಲಕ 80 ಟನ್ ತೂಕದ ಶಿಲಾ ಕಲಶವನ್ನು ತರಿಸಿಕೊಂಡರಂತೆ.
ಪ್ರಾಂಗಣದಲ್ಲಿ ಹಲವಾರು ಸೊಗಸಾದ ಪ್ರತಿಮೆಗಳಿವೆ. ಅವುಗಳಲ್ಲಿ ಒಂದು ಕುದುರೆಯ ಕೆತ್ತನೆಯು ಶಿಲ್ಪಿಯ ಕಲಾನೈಪುಣ್ಯತೆಗೆ ನಿಬ್ಬೆರಗಾದೆವು. ಆ ಕುದುರೆಯ ಕತ್ತಿನಲ್ಲಿರುವ ಅಲಂಕಾರ, ಬೆನ್ನಿನಲ್ಲಿರುವ ಜೀನು, ಕಡಿವಾಣ, ಕಾಲಿನ ಗೊರಸು ಹೀಗೆ ಪ್ರತಿಯೊಂದರಲ್ಲು ಶಿಲ್ಪಕಲಾಕುಸುರಿಯಿದೆ. ಕುದುರೆಯ ಬಾಯಿಯೊಳಗೆ ನಮಗೆ ಕೈಹಾಕಲು ಸಾಧ್ಯವಾಗುತ್ತದೆ. ಶಿಲ್ಪದ ಬಾಯಿಯಯ ಒಳಭಾಗ ನುಣುಪಾಗಿದೆ. ಹೊಯಿಗೆ ಕಾಗದ (Sand paper) ಇಲ್ಲದ ಕಾಲದಲ್ಲಿ, ಕಲ್ಲಿನ ಕೆತ್ತನೆಗಳು ನುಣುಪಾಗಲು, ಹೊಳಪು ಬರಲು ಅದೇನು ಬಳಸುತ್ತಿದ್ದರೋ. ನನ್ನ ಮಂದಮತಿಗಂತೂ ಗೊತ್ತಾಗಲಿಲ್ಲ.
ಬೃಹದೇಶ್ವರನ ಮುಂದೆ ಏಕಶಿಲೆಯಲ್ಲಿ ನಿರ್ಮಿಸಲಾದ ಕಪ್ಪು ಬೃಹತ್ ನಂದಿಯೂ ಇದೆ. ಎರಡು ಮೀ. ಎತ್ತರ, ಆರು ಮೀ. ಉದ್ದ, ಎರಡೂವರೆ ಮೀಟರ್ ಅಗಲ ಹಾಗೂ 20 ಟನ್ ಭಾರ ಉಳ್ಳ ಈ ನಂದಿಯು ಏಕಶಿಲಾ ನಂದಿಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡಿದಿದೆ. ಮೊದಲನೆಯ ಸ್ಥಾನ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿದೆ ಹಾಗೂ ಎರಡನೆಯ ಸ್ಥಾನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಸಲ್ಲುತ್ತದೆ.
ಬೃಹದೀಶ್ವರ ಲಿಂಗದ ಇನ್ನೊಂದು ಪಾರ್ಶದಲ್ಲಿ ಬೃಹನ್ನಾಯಕಿಯ ಗುಡಿಯಿದೆ. ಪ್ರಾಂಗಣದಲ್ಲಿ ಹಲವಾರು ಪರಿವಾರ ದೇವತೆಯರ ಗುಡಿಗಳಿವೆ. ಅಷ್ಟದಿಕ್ಪಾಲಕರ ಗುಡಿಗಳಿವೆ. ಭರತನಾಟ್ಯದ ವಿವಿಧ ಪ್ರಾತ್ಯಕ್ಷಿಕೆಗಳಿವೆ. ಒಂದೆರಡು ಗಂಟೆಗಳಲ್ಲಿ ನಮ್ಮ ಗಮನಕ್ಕೆ ಬಂದಿರುವುದು ತಂಜಾವೂರಿನ ಸಮೃದ್ಧ ಕಲಾವಂತಿಕೆಯ ‘ಸಿಂಧುವಿನೊಳಗಿನ ಬಿಂದು’ ಅಷ್ಟೆ. ಆ ಎಲ್ಲಾ ಅಜ್ಞಾತ ಶಿಲ್ಪಿಗಳಿಗೆ, ಕಲಾಕಾರರಿಗೆ ನಮನಗಳು.
ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ: https://www.surahonne.com/?p=39724
(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು
ನೀವಂದಂತೆ, ಸಮೃದ್ಧ ಕಲಾವಂತಿಕೆಯ ಆಗರ, ತಂಜಾವೂರಿನ ಸೊಗಸಾದ ವರ್ಣನೆಯನ್ನೊಳಗೊಂಡ ಸುಂದರ ಲೇಖನಕ್ಕಾಗಿ ಅಭಿನಂದನೆಗಳು.
ಪ್ರವಾಸ ಕಥನದ ಅನಾವರಣ ಸುಂದರವಾದ ವರ್ಣನೆಯೊಂದಿಗೆ…ಮೂಡಿಬಂದಿದೆ… ಚಿತ್ರ ಗಳು ಅದಕ್ಕೆ ಪೂರಕವಾಗಿವೆ…ಧನ್ಯವಾದಗಳು ಗೆಳತಿ ಹೇಮಾ..
ಬೃಹದೀಶ್ವರ ದೇವಾಲಯವನ್ನು ಕಣ್ಣ ಮುಂದೆ ಇರಿಸಿದ ಪ್ರವಾಸ ಕಥನ!
ಬಹಳ ಸುಂದರ
ಹಲವು ವರ್ಷಗಳ ಹಿಂದೆ ತಂಜಾವೂರಿನ ಬೃಹದೇಶ್ವರ ದೇಗುಲವನ್ನು ಪ್ರದಕ್ಷಿಣೆಗೈದ ನೆನಪು ಮರುಕಳಿಸಿತು. ಬಹಳ ಸೊಗಸಾದ ಮಾಹಿತಿಗಳಿಂದ ಕೂಡಿದ ಪ್ರವಾಸ ಲೇಖನವು ಖುಶಿಕೊಟ್ಟಿತು.