ಕೂರ್ಮ..

Share Button

ಆಸ್ಪತ್ರೆಯಿಂದ ಮನೆಗೆ ಬಂದ ಡಾ.ಸುಹಾಸ್ ಫ್ರೆಷ್ ಆಗಿ ಹೆಂಡತಿ ನೀರಜಾ ತಂದಿತ್ತ ಕಾಫಿ ಕುಡಿದು ವಾಕಿಂಗ್ ಹೋಗಲು ಸಿದ್ಧನಾದ.

”ರೀ, ಇವತ್ತು ಮನೆಗೆ ಬಂದಿರುವುದೇ ಲೇಟಾಗಿದೆ. ಮಿಗಿಲಾಗಿ ಮಳೆಬೇರೆ ಬರುವಂತಾಗಿದೆ. ಹೇಗಿದ್ದರೂ ನೀವು ಬೆಳಗ್ಗೆ ವಾಕಿಂಗ್ ಹೋಗುತ್ತೀರಲ್ಲಾ, ಈಗ ಇಲ್ಲೇ ನಮ್ಮ ಪೋರ್ಟಿಕೋದಲ್ಲೇ ಒಂದಿಷ್ಟು ಹೊತ್ತು ಅಡ್ಡಾಡಿದರಾಯ್ತಪ್ಪ. ಮತ್ತೇಕೆ ಹೊರಗೆ ಹೋಗುತ್ತೀರಾ?” ಎಂದಳು ನೀರಜಾ.

”ಹೌದು ಹಾಗೇ ಮಾಡಬಹುದಿತ್ತು. ಆದರೆ ಪಾರ್ಕಿಗೆ ಬರಲು ಯಾರಿಗೋ ಹೇಳಿಬಿಟ್ಟಿದ್ದೇನೆ. ಅವರು ಪಾಪ ಬಂದು ನನಗಾಗಿ ಕಾಯುತ್ತಿರಬಹುದು, ಅವರೊಡನೆ ಹಾಗೇ ಒಂದೆರಡು ಮಾತನಾಡಿಕೊಂಡು ಬಂದುಬಿಡುತ್ತೇನೆ” ಎಂದನು ಸುಹಾಸ್.

”ಆಹಾ ! ಎದ್ದರೆ ಬಿದ್ದರೆ ಪಾರ್ಕು, ಅವರ ಫೋನ್ ನಂಬರ್ ಇದ್ದರೆ ಕಾಲ್ ಮಾಡಿ ಅವರಿಗೆ ನಮ್ಮ ಮನೆಗೇ ಬರಲು ಹೇಳಿಬಿಡಿ. ಅವರಿಗೂ ಒಂದು ಕಪ್ ಕಾಫಿ, ಸ್ನ್ಯಾಕ್ಸ್ ಕೊಡುತ್ತೇನೆ” ಎಂದಳು ನೀರಜಾ. ಪತಿ ಮಳೆಯಲ್ಲಿ ನೆನೆಯುವನಲ್ಲಾ ಎಂಬ ಆತಂಕ ಅವಳದ್ದು.

”ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ. ಲೇಟಾಗೋಲ್ಲ, ಹೀಗೆ ಹೋಗಿ ಹಾಗೆ ಬರುತ್ತೇನೆ. ತುಂಬ ಮಾತನಾಡುವುದಿದ್ದರೆ ನೀನು ಹೇಳಿದಂತೆ ಮನೆಗೇ ಕರೆತರುತ್ತೇನೆ” ಎಂದು ಹೆಂಡತಿಯ ಉತ್ತರಕ್ಕೂ ಕಾಯದೇ ಅಲ್ಲಿಯೇ ಗೂಟದಲ್ಲಿ ನೇತುಹಾಕಿದ್ದ ಛತ್ರಿಯೊಂದನ್ನು ಕೈಯಲ್ಲಿ ಹಿಡಿದು ಹೊರಟೇಬಿಟ್ಟ ಸುಹಾಸ್.

”ಈ ಪುಣ್ಯಾತ್ಮನಿಗೆ ಹೇಳುವುದರಿಂದ ಏನೂ ಪ್ರಯೋಜನವಿಲ್ಲ. ಬರಿಯ ಕಂಠಶೋಷಣೆ ಮಾತ್ರ. ಬಾ..ನೀರಜಾ, ಅಲ್ಲಿ ಯಾವ ಪೇಷೆಂಟೋ ಏನು ಕಥೆಯೋ ಹೋಗಿದ್ದು ಬರಲಿ. ನೀನು ಒಳಕ್ಕೆ ಬಾ” ಎಂದು ಸೊಸೆಯನ್ನು ಕರೆದರು ಡಾ.ಸುಹಾಸನ ತಾಯಿ ಗಿರಿಜಮ್ಮ. ”ಈ ನನ್ನ ಮಗನನ್ನು ಡಾಕ್ಟರ್ ಓದಿಸಿದ್ದೇ ತಪ್ಪಾಯಿತೇನೋ? ಅದೂ ಹೋಗಲಿ ಎಂದರೆ ಅದೇನೋ ಕೌನ್ಸೆಲಿಂಗ್ ಮಾಡಲು ನೆರವಾಗುತ್ತೆಂದು ಆ ಕೋರ್ಸ್ ಕೂಡ ಮಾಡಿಕೊಂಡ. ದೇಹದ ರೋಗದ ಜೊತೆಗೆ ಮನಸಿನ ರೋಗಕ್ಕೂ ಪರಿಹಾರ ಕಂಡುಹಿಡಿಯುತ್ತಾ ಹೊತ್ತುಗೊತ್ತಿನ ಪರಿವೇ ಇಲ್ಲದೆ ಕೆಲಸದಲ್ಲಿ ತೊಡಗಿದ್ದಾನೆ” ಎಂದುಕೊಂಡರು.

”ಛೇ..ಛೇ ಹಾಗ್ಯಾಕೆ ಅನ್ನುತೀರಿ ಅತ್ತೆ, ಅವರನ್ನು ಓದಿಸಿದ್ದು, ಅವರೀಗ ಕೆಲಸ ಮಾಡುತ್ತಿರುವುದು ಎರಡೂ ತಪ್ಪಲ್ಲ. ಆದರೆ ಅದರಲ್ಲೇ ಮೂರುಹೊತ್ತೂ ಮುಳುಗಿಹೋಗಬೇಕೆಂದೇನೂ ಇಲ್ಲ. ಅದು ಯೋಚಿಸಬೇಕಾದ್ದು. ಅದನ್ನೇ ನಾನು ಹೇಳಲು ಪ್ರಯತ್ನಪಟ್ಟಿದ್ದು” ಎಂದು ಕಾಫಿ ಲೋಟಗಳನ್ನೆತ್ತಿಕೊಂಡು ಒಳ ನಡೆದಳು ನೀರಜಾ.

ಇತ್ತ ಪಾರ್ಕಿನೊಳಕ್ಕೆ ಬಂದ ಸುಹಾಸ್ ಸುತ್ತಲೂ ಕಣ್ಣಾಡಿಸಿದ. ಮಳೆ ಬರುವ ಸೂಚನೆಯಿದ್ದುದರಿಂದ ಬಹತೇಕ ಜನ ಖಾಲಿಯಾಗಿದ್ದರು. ಇದ್ದ ಒಂದಿಬ್ಬರು ಹೊರಡುವ ಸನ್ನಾಹದಲ್ಲಿದ್ದರು. ಆದರೆ ಒಬ್ಬ ವ್ಯಕ್ತಿ ಮಾತ್ರ ಯಾವ ಅವಸರವನ್ನು ತೋರದೆ ಆತಂಕವಿಲ್ಲದಂತೆ ಪ್ರತಿದಿನ ಕೂಡುತ್ತಿದ್ದ ಬೆಂಚಿನಮೇಲೆ ಕುಳಿತೇ ಇದ್ದರು. ಅವರು ನಿರ್ವಿಕಾರವಾಗಿದ್ದಂತೆ ತೋರುತ್ತಿತ್ತು. ಆಕಾಶದ ಕಡೆಗೆ ಮುಖಮಾಡುತ್ತಿರಲಿಲ್ಲ. ಅವರಿಗೆ ಸುತ್ತಮುತ್ತಲಿನ ಪರಿಸರದ ಬಗ್ಗೆ, ಜನಗಳ ಓಡಾಟದ ಬಗ್ಗೆ ಯಾವ ಪರಿವೆಯೂ ಇರಲಿಲ್ಲವೆಂಬಂತೆ ನಿಶ್ಚಿಂತೆಯಿಂದ ಕುಳಿತಿದ್ದರು. ಅವರೆಡೆಗೆ ಹೋಗಿ ಸದ್ದಾಗದಂತೆ ಅದೇ ಬೆಂಚಿನ ಮತ್ತೊಂದು ತುದಿಯಲ್ಲಿ ಕುಳಿತುಕೊಂಡರು ಸುಹಾಸ್. ಆತ ಸ್ವಲ್ಪವೂ ವಿಚಲಿತನಾದಂತೆ ತೋರಲಿಲ್ಲ. ಎಚ್ಚರಿಸುವಂತೆ ಹಗುರಾಗಿ ಕೆಮ್ಮಿದರು. ಆಗ ವ್ಯಕ್ತಿ ಸ್ವಲ್ಪ ಅಲುಗಾಡಿದರು. ತಾವಾಗಿಯೇ ಸುಹಾಸ್ ”ಹಲೋ ನಮಸ್ತೆ” ಎಂದು ವಿಷ್ ಮಾಡಿದರು. ಆತನೂ ”ನಮಸ್ತೆ” ಎಂದು ಮಾತ್ರ ನುಡಿದರು. ಮತ್ತೇನೂ ಮಾತನಾಡಲಿಲ್ಲ.

ಐದು ನಿಮಿಷವಾದ ಮೇಲೆ ಸುಹಾಸರೇ ”ಮಳೆ ಬರುವ ಹಾಗಿದೆ” ಎಂದರು. ವ್ಯಕ್ತಿ ಏನೂ ಹೇಳಲಿಲ್ಲ. ಅವರ ಈ ಮೌನ ಅಸಹನೀಯವಾಗಿತ್ತು. ಹಾಗೇ ಅವರನ್ನು ದಿಟ್ಟಿಸಿದರು ಸುಹಾಸ್. ಸುಮಾರು ನಲವತ್ತು-ನಲವತೈದರ ಆಸುಪಾಸು ಪ್ರಾಯವಿರಬಹುದು. ತಲೆತುಂಬ ಕಪ್ಪು ಕೂದಲು ದಟ್ಟವಾಗಿತ್ತು. ಅದನ್ನೂ ಒಪ್ಪವಾಗಿ ಬಾಚಿಕೊಂಡಿರಲಿಲ್ಲ. ಒಳ್ಳೆಯ ಮೈಬಣ್ಣ, ಧೃಢಕಾಯದ ಲಕ್ಷಣ ಹೊಂದಿದ್ದ ವ್ಯಕ್ತಿಯ ಕಣ್ಣುಗಳು ಕಾಂತಿಹೀನವಾಗಿ ನಿಸ್ತೇಜವಾಗಿದ್ದವು. ಉಡುಪು ಸಾಧಾರಣವಾಗಿತ್ತು, ಕಾಲಲ್ಲಿ ಹವಾಯಿ ಚಪ್ಪಲಿ. ತನ್ನ ತಲೆಯಲ್ಲಿ ರೂಪುಕೊಂಡಿದ್ದ ಚೆಹರೆಗೂ ಇದಕ್ಕೂ ಹೊಂದಿಕೆಯೇ ಇಲ್ಲದಂತಿತ್ತು. ಯೋಚಿಸುತ್ತಿರುವಾಗಲೇ ದಪ್ಪದಪ್ಪ ಮಳೆ ಹನಿಗಳು ಬೀಳಲು ಪ್ರಾರಂಭವಾದವು. ತಡಮಾಡದೆ ”ರೀ..ಮಿಸ್ಟರ್, ಮಳೆ ಬಿರುಸಾಗುವಂತಿದೆ. ಏಳಿ ಇಲ್ಲೇ ಸಮೀಪದಲ್ಲಿ ನಮ್ಮ ಮನೆಯಿದೆ. ಹೋಗೋಣ. ಸ್ವಲ್ಪ ನಿಂತಮೇಲೆ ನೀವು ನಿಮ್ಮ ಮನೆಗೆ ಹೋಗುವಿರಂತೆ” ಎಂದು ಕೈಯಲ್ಲಿದ್ದ ಛತ್ರಿಯನ್ನು ಬಿಚ್ಚಿ ಆ ವ್ಯಕ್ತಿಯ ಕೈಯನ್ನು ಬಲವಂತವಾಗಿ ಹಿಡಿದು ಎಬ್ಬಿಸಿದರು. ಆತ ಏನೊಂದೂ ಪ್ರತಿರೋಧ ತೋರದೆ ಕೀಲಿಕೊಟ್ಟ ಬೊಂಬೆಯಂತೆ ಸುಹಾಸನ ಜೊತೆಗೆ ಹೆಜ್ಜೆ ಹಾಕಿದರು. ಅವರಿಬ್ಬರೂ ಬರುವುದನ್ನು ಕಿಟಕಿಯಿಂದ ನೋಡಿದ ನೀರಜಾ ಮತ್ತೊಂದು ಛತ್ರಿಯನ್ನು ತೆಗೆದುಕೊಂಡು ಮುಂಭಾಗಿಲು ತೆರೆದು ಗೇಟಿನ ಬಳಿಗೆ ಹೋದಳು. ಡಾ. ಸುಹಾಸ್ ತಮ್ಮ ಕೈಯಲ್ಲಿದ್ದ ಛತ್ರಿಯನ್ನು ವ್ಯಕ್ತಿಯ ಕೈಗೆ ಕೊಟ್ಟು ಹೆಂಡತಿ ತಂದಿದ್ದ ಛತ್ರಿಯೊಳಕ್ಕೆ ತಲೆ ಸೇರಿಸಿ ಮನೆಯೊಳಕ್ಕೆ ಪ್ರವೇಶಿದರು. ಅವರ ಮತ್ತೊಂದು ಕೈಯಲ್ಲಿ ವ್ಯಕ್ತಿಯ ಕೈಯನ್ನು ಹಿಡಿದೇ ಇದ್ದರು. ಮಗನೊಡನೆ ಒಳಗೆ ಬಂದ ಕಂಡ ಗಿರಿಜಮ್ಮನವರು ಸೋಫಾದ ಮೇಲಿದ್ದ ಪತ್ರಿಕೆಯನ್ನು ತೆಗೆದು ಕುಳಿತುಕೊಳ್ಳಲು ಸ್ಥಳ ಮಾಡಿಕೊಟ್ಟರು. ಬಂದಿದ್ದ ವ್ಯಕ್ತಿ ಪೋರ್ಟಿಕೋದಲ್ಲಿದ್ದ ಕುರ್ಚಿಯೊಂದರಲ್ಲೇ ಕುಳಿತುಕೊಂಡರು. ಕೈ ಒರೆಸಿಕೊಳ್ಳಲು ಚಿಕ್ಕದೊಂದು ಟವೆಲ್ ತಂದಿತ್ತಳು ನೀರಜಾ. ಮರುಮಾತಾಡದೆ ಆ ವ್ಯಕ್ತಿ ಅದರಿಂದ ಮುಖ, ಕೈಕಾಲು, ಭುಜ ಒರೆಸಿಕೊಂಡರು. ಅಷ್ಟರಲ್ಲಿ ಬಿಸಿಬಿಸಿ ಕಾಫಿ, ಒಂದೆರಡು ಬಿಸ್ಕತ್ತುಗಳನ್ನಿಟ್ಟುಕೊಂಡ ಟ್ರೇಯನ್ನು ಅವರ ಮುಂದೆ ಇರಿಸಿದಳು. ”ತೆಗೆದುಕೊಳ್ಳಿ ಛಳಿಯಿದೆ” ಎಂದಳು.

ಅಚ್ಚರಿಯೆಂಬಂತೆ ಒಂದು ಬಿಸ್ಕತ್ ತಿಂದು ಕಾಫಿ ಕುಡಿದು ಕಪ್ಪನ್ನು ತಟ್ಟೆಯಲ್ಲಿಟ್ಟು ”ಥ್ಯಾಂಕ್ಸ್, ನಾನಿನ್ನು ಬರುತ್ತೇನೆ” ಎಂದು ಮೇಲೆದ್ದರು.

ಸುಹಾಸ್ ”ಮಳೆ ಕಡಿಮೆಯಾಗಿಲ್ಲ ತಾಳಿ, ಹೋಗಲೇಬೇಕೆಂದರೆ ಮನೆ ಅಡ್ರೆಸ್ ಹೇಳಿ, ನಾನೇ ಕಾರಿನಲ್ಲಿ ಡ್ರಾಪ್ ಮಾಡುತ್ತೇನೆ” ಎಂದರು.

”ಅಯ್ಯೋ ನಿಮಗ್ಯಾಕೆ ಅಷ್ಟೊಂದು ತೊಂದರೆ. ಛತ್ರಿ ಕೊಡಿ ಸಾಕು, ನಾಳೆ ತಂದುಕೊಡುತ್ತೇನೆ. ತಪ್ಪು ತಿಳಿಯಬೇಡಿ, ಲೇಟಾದರೆ ಮನೆಯಲ್ಲಿ ಗಾಭರಿಯಾಗುತ್ತಾರೆ. ಬರುತ್ತೇನೆ” ಎಂದು ಹೊರಟರು.

ಅವರನ್ನು ಮತ್ತೆ ತಡೆಯದೆ ತಾವೇ ಪೋರ್ಟಿಕೋದಲ್ಲಿಟ್ಟಿದ್ದ ಒಂದು ಛತ್ರಿಯನ್ನು ಅವರ ಕೈಗಿತ್ತು ಬೀಳ್ಕೊಟ್ಟರು. ಆತನು ಗೇಟು ತೆರೆದು ಮತ್ತೆ ಮುಚ್ಚಿ ಮರೆಯಾಗುವವರೆಗೂ ನಿಂತುನೋಡಿ ಒಳಕ್ಕೆ ಬಂದರು ಸುಹಾಸ್.

”ಇದೇನೋ ಮಗು ನೋಡಲು ಸುಮಾರಾಗಿ ನಿನ್ನ ಓರಿಗೆಯವನಂತೆಯೇ ಇದ್ದಾನೆ. ಯಾವುದೋ ರೋಗಬಡಿದವನಂತೆ, ಸೋತುಹೋದಂತೆ ಕಾಣುತ್ತಾನೆ ” ಎಂದರು ಸುಹಾಸರ ತಾಯಿ ಗಿರಿಜಮ್ಮ.

”ಹುಂ.. ಅಮ್ಮಾ, ನನಗೂ ಅದೇ ಸಮಸ್ಯೆ. ನಾನೂ ಕಳೆದ ಒಂದು ತಿಂಗಳಿಂದ ಗಮನಿಸುತ್ತಿದ್ದೇನೆ. ಎಷ್ಟು ಹೊತ್ತಿಗೆ ಪಾರ್ಕಿಗೆ ಬರುತ್ತಾರೋ, ವಾಕಿಂಗ್ ಮಾಡುತ್ತಾರೋ ಕಾಣೆ. ಆದರೆ ಸಂಜೆ ನಾನು ವಾಕಿಂಗ್ ಮುಗಿಸಿ ಸ್ವಲ್ಪ ಕುಳಿತು ಮನೆಗೆ ಹಿಂತಿರುಗುವವರೆಗೂ ಒಬ್ಬನೇ ಒಂದು ಮೂಲೆಯ ಬೆಂಚಿನ ಮೇಲೆ ಕುಳಿತಿರುತ್ತಾರೆ. ಹೊರಗಿನ ಪರಿವೆಯೇ ಇಲ್ಲದಂತೆ ಎಲ್ಲಿಯೋ ಮುಳುಗಿ ಹೋದಂತಿರುತ್ತಾರೆ. ಬೆಳಗ್ಗೆ ಹೊತ್ತು ಕಾಣುವುದಿಲ್ಲ. ಇವತ್ತು ಅವರನ್ನು ನೋಡಲೆಂದೇ ಹೋಗಿದ್ದು. ಸಿಕ್ಕಿದರು, ನೀವೇ ನೋಡಿದಿರಲ್ಲಾ ಅವರ ಅವಸ್ಥೆ. ನಾಳೆ ಛತ್ರಿ ಹಿಂದಿರುಗಿಸಲು ಬಂದಾಗ ನಿಧಾನವಾಗಿ ವಿಚಾರಿಸಬೇಕು. ಪಾಪ ಏನಾಗಿದೆಯೋ ಕೇಳಿ ತಿಳಿದುಕೊಂಡು ಸಾಧ್ಯವಾದರೆ ಸೂಕ್ತ ಪರಿಹಾರ ಸೂಚಿಸಬೇಕು” ಎಂದರು ಸುಹಾಸ್.

”ರೀ..ಮಾಹಾರಾಯರೇ, ಯಾರೋ ಎಂತೋ ನಮಗ್ಯಾಕೆ ಇಲ್ಲದ ಉಸಾಬರಿ? ನಿಮ್ಮ ಬಳಿಗೆ ಸಮಸ್ಯೆ ಹೇಳಿಕೊಂಡು ಬಂದವರನ್ನು ನೋಡಿಕೊಳ್ಳಿ ಸಾಕು. ಗೊತ್ತುಗುರಿ ಇಲ್ಲದ ದಾರಿಹೋಕರ ತಾಪತ್ರಯಗಳಿಗೆಲ್ಲಾ ಹೆಗಲು ಕೊಡಬೇಡಿ” ಎಂದಳು ನೀರಜಾ.

ಹೆಂಡತಿಯ ಎಚ್ಚರಿಕೆಯ ಮಾತುಗಳನ್ನು ಕೇಳಿದ ಡಾ,ಸುಹಾಸ್ ” ಅವರ್‍ಯಾರೋ ಅಲ್ಲ ಮನದನ್ನೆ, ನಾನು ಇವತ್ತಿನ ಈ ಸ್ಥಿತಿಗೆ ಬರಲು ಕಾರಣರಾದವರ ಮನೆಗೆ ಸಂಬಂಧಿಸಿದ ವ್ಯಕ್ತಿಯಿವರು. ಆದರೆ ಆ ಮನೆಯಲ್ಲಿ ಇವರ ಸ್ಥಾನವೇನು? ನನಗೆ ಓದಲು ನೆರವಾದವರಿಗೆ ಈತನು ಏನಾಗಬೇಕು? ಗೊತ್ತಾಗಿಲ್ಲ. ನಾನು ಪಿ.ಯು.ಸಿ, ಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದೆ, ಸಿ.ಇ.ಟಿ.,ಯಲ್ಲೂ ಒಳ್ಳೆಯ ರ್‍ಯಾಂಕಿಂಗ್ ಇತ್ತು. ಸರ್ಕಾರಿ ಕಾಲೇಜಿನಲ್ಲಿ ಸೀಟೂ ಸಿಕ್ಕಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದ ನಮ್ಮಪ್ಪನಿಗೆ ಹೊರೆಯಾಗಬಾರದೆಂದು ಲೋನ್ ಸ್ಕಾಲರ್‍ಷಿಪ್ ಪಡೆದುಕೊಂಡು ಎಂ.ಬಿ.ಬಿ.ಎಸ್., ಪೂರೈಸಿದೆ. ಆಗ ಅಪ್ಪನ ಸಹೋದ್ಯೋಗಿಯೊಬ್ಬರು ಮೈಸೂರಿನಲ್ಲಿರುವ ಪ್ರಸಿದ್ಧ ಬ್ಯುಸಿನೆಸ್‌ಮ್ಯಾನ್ ಅಂನಂತರಾಮು ಅಂತ ಇದ್ದಾರೆ. ಮಕ್ಕಳ ಶಿಕ್ಷಣದ ಬಗ್ಗೆ ಅವರಿಗೆ ವಿಪರೀತ ಕಾಳಜಿ. ಎಷ್ಟೋ ಜನ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಯಾವುದೇ ಕೋರ್ಸಿಗೆ ಸೇರಿದ್ದರೂ ವಿದ್ಯಾರ್ಥಿ ಅದನ್ನು ಪೂರೈಸುವವರೆಗೂ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಜೊತೆಗೆ ಅವರಿಗೆ ದೊಡ್ಡ ದೊಡ್ಡ ಜನರೊಡನೆ ನಿಕಟ ಸಂಪರ್ಕವಿದೆ. ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಲೂ ನೆರವಾಗುತ್ತಾರೆ. ಎಂದು ಹೇಳಿ ಅಡ್ರೆಸ್ ಕೊಟ್ಟು ನಮ್ಮನ್ನು ಅಲ್ಲಿಗೆ ಕಳುಹಿಸಿದ್ದರು. ನಾನು ಅಪ್ಪನ ಜೊತೆಯಲ್ಲಿ ಅವರ ಮನೆಗೆ ಹೋಗಿದ್ದೆ. ಅಪ್ಪನ ಸ್ನೇಹಿತರು ಹೇಳಿದಂತೆ ಅವರು ನನಗೆ ನೆರವಾದರು. ನಾನು ಎಂ.ಎಸ್., ಮಾಡಲು ಪ್ರೋತ್ಸಾಹ ನೀಡಿದ್ದೇ ಅಲ್ಲದೆ ನನಗೆ ಅರ್ಕಾರಿ ಕೆಲಸ ಸಿಗಲೂ ಶಿಫಾರಸ್ಸು ಮಾಡಿದ್ದರು. ಹಲವಾರು ಜನಕ್ಕೆ ಹೀಗೆ ಸಹಾಯ ಮಾಡುತ್ತಿದ್ದರು. ನನ್ನ ಮದುವೆ ಗೊತ್ತಾದಾಗ ಇನವಿಟೇಷನ್ ತೆಗೆದುಕೊಂಡು ಅಪ್ಪನ ಜೊತೆ ಅವರ ಮನೆಗೆ ಹೋಗಿದ್ದೆ. ಆದರೆ ಅವರೆಲ್ಲ ಊರಿಗೆ ಹೋಗಿದ್ದಾರೆಂದು ವಾಚ್‌ಮನ್‌ನಿಂದ ತಿಳಿಯಿತು. ಭೇಟಿಯಾಗಲಿಲ್ಲ. ನಂತರದ ದಿನಗಳಲ್ಲಿ ನನ್ನಪ್ಪನ ಆರೋಗ್ಯದಲ್ಲಿ ಏರುಪೇರಾಗಿ ಅವರ ಆರೈಕೆ, ಜೊತೆಗೆ ಮನೆಯ ಜವಾಬ್ದಾರಿಗಳ ಮಧ್ಯೆ ಅವರನ್ನು ಮತ್ತೆ ನೋಡಲಾಗಲಿಲ್ಲ. ಈ ಮಧ್ಯೆ ಒಂದಿನ ನ್ಯೂಸ್‌ಪೇಪರಿನಲ್ಲಿ ಅವರ ಫೋಟೋಹಾಕಿ ಅವರು ತೀರಿಕೊಂಡ ಸುದ್ಧಿ ಪ್ರಕಟವಾಗಿದ್ದನ್ನು ಕಂಡೆ. ಅದರ ಕಟಿಂಗನ್ನು ನಾನೀಗಲೂ ಜೋಪಾನವಾಗಿ ಅವರ ನೆನಪಿಗಾಗಿ ಇಟ್ಟುಕೊಂಡಿದ್ದೇನೆ. ಇಲ್ಲಿಗೆ ವರ್ಗವಾಗಿ ಬಂದಾಗ ಅವರ ಮನೆಯಿದ್ದ ಆ ಬಡಾವಣೆಯ ಚಿತ್ರವಿನ್ನೂ ನನ್ನ ಕಣ್ಣಿಗೆ ಕಟ್ಟಿದಂತಿತ್ತು. ಬಿಡುವಾದಾಗ ಒಮ್ಮೊಮ್ಮೆ ಆ ಬೀದಿಯಲ್ಲಿ ಅಡ್ಡಾಡಿದ್ದೇನೆ. ಅವರಿದ್ದ ಮನೆಯ ವಾಚ್‌ಮನ್ನನ್ನು ವಿಚಾರಿಸಿದಾಗ ಆತ ಹೊಸಬನಾದ್ದರಿಂದ ತನಗೇನೂ ತಿಳಿದಿಲ್ಲವೆಂದು ಹೇಳಿದ. ಆ ಕುಟುಂದವರು ಇಲ್ಲೇ ಇದ್ದಾರೆ ಬ್ಯುಸಿನೆಸ್ ಮಾಡುತ್ತಿದ್ದಾರೆಂದು ಕೇಳಿದ್ದೇನೆ. ಅಷ್ಟೇ ತನಗೆ ಗೊತ್ತಿರುವುದಾಗಿ ಹೇಳಿದ. ಈಗ ಬಂದಿದ್ದ ವ್ಯಕ್ತಿ ಆ ಮನೆಗೆ ಹೋಗಿಬರುವುದನ್ನು ಒಂದೆರಡು ಸಾರಿ ನಾನು ನೋಡಿದ್ದೇನೆ. ಇತ್ತೀಚೆಗೆ ಆ ವ್ಯಕ್ತಿಯನ್ನು ಪಾರ್ಕಿನಲ್ಲಿ ಕಾಣುತ್ತಲೇ ಇದ್ದೇನೆ. ಆತ ಸಹಜವಾಗಿಲ್ಲ, ಏನೋ ದುಗುಡ ಹೊತ್ತಂತಿರುತ್ತಾನೆ. ನನ್ನ ಮನಸ್ಸು ಕುತೂಹಲ ತಡೆಯಲಾಗದೆ ಅದೇನೆಂದು ತಿಳಿಯ ಬಯಸುತ್ತಿದೆ. ಈಗ ಗೊತ್ತಾಯಿತೇ ನನ್ನ ಆಸಕ್ತಿಯೇಕೆ ಎಂಬುದು” ಎಂದು ತಿಳಿಸಿದ ಸುಹಾಸ್.

”ಓ ! ನಿಮ್ಮಪ್ಪನ ಬಾಯಲ್ಲಿಯೂ ಅನಂತರಾಮುರವರ ಹೆಸರನ್ನು ಅನೇಕ ಸಾರಿ ಕೇಳಿದ್ದೇನೆ. ತಡಿ ನಿಮ್ಮಪ್ಪನ ಹಳೆಯ ಕಡತದಲ್ಲಿ ಕೆಲವು ಹಳೆಯ ಕಾಲದ ಫೋಟೋಗಳಿವೆ. ಅವುಗಳ ಹಿಂದೆ ಹೆಸರುಗಳನ್ನೂ ಬರೆದಿರುವುದುಂಟು. ಅವರು ಕಾಲವಾದಮೇಲೆ ತೆಗೆದುಹಾಕಬೇಕೆಂದುಕೊಂಡರೂ ಮನಸ್ಸು ಬಾರದೆ ಹಾಗೇ ಇಟ್ಟಿದ್ದೇನೆ” ಎಂದು ಗಿರಿಜಮ್ಮನವರು ತಮ್ಮ ರೂಮಿಗೆ ಹೋಗಿ ಫೈಲೊಂದನ್ನು ತಂದುಕೊಟ್ಟರು. ಅದರಲ್ಲಿದ್ದ ಫೋಟೋಗಳನ್ನು ನೋಡಿ ”ಇದೇನು ಅಪ್ಪ ಇವನ್ನೆಲ್ಲ ಒಂದು ಆಲ್ಬಂನಲ್ಲಿ ಹಾಕದೇ ಹಾಗೇ ಬಿಡಿಯಾಗಿಟ್ಟಿದ್ದಾರೆ” ಎಂದು ಒಂದೊಂದನ್ನೇ ತೆಗೆದುನೋಡಿದ. ಅದರಲ್ಲಿ ತಮ್ಮ ಕುಟುಂದವರೊಡನೆ ಅನಂತರಾಮುರವರು ಯಾವುದೋ ಸಮಾರಂಭದಲ್ಲಿರುವ ಫೋಟೋ ಸಿಕ್ಕಿತು. ಅದರ ಹಿಂದೆ ಸುಹಾಸನ ಅಪ್ಪ ‘ಸಮಾಜಸೇವಕ, ಉದ್ದಿಮೆದಾರ ಅನಂತರಾಮುರವರ ಕುಟುಂಬ’ ಎಂದು ಬರೆದಿದ್ದರು. ಅದೊಂದು ಪೇರಿನಲ್ಲಿ ಬಂದಿದ್ದ ಸುದ್ಧಿಯ ಪ್ರತಿಯಾಗಿತ್ತು. ಸೂಕ್ಷ್ಮವಾಗಿ ಅದನ್ನು ಪರಿಶೀಲಿಸಿದಾಗ ತಾವು ಈಗ ಕಂಡ ವ್ಯಕ್ತಿ ಅಂದಾಜು ಅನಂತರಾಮುರವರ ಮೊಮ್ಮಗನಿರಬಹುದೆಂದು ಅನ್ನಿಸಿತು. ಇದನ್ನೆಲ್ಲ ಗಮನಿಸುತ್ತಿದ್ದ ನೀರಜಾ ‘ಸಾರೀ ರೀ, ಅವರ ಬಗ್ಗೆ ಖಂಡಿತ ವಿಚಾರಿಸಿ. ಇದು ಯಾವುದೋ ಜನ್ಮದ ಋಣಾನುಬಂಧವಿರಬಹುದು. ಬೇಕಾದರೆ ನಾನೂ ನಿಮ್ಮ ಕೆಲಸಕ್ಕೆ ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ, ಅವರ ಮನೆಯ ಹೆಣ್ಣುಮಕ್ಕಳ ಬಗ್ಗೆ ತಿಳಿಯುವ ಪ್ರಯತ್ನ ಮಾಡುವೆ’ ಎಂದಳು.

ಅವಳ ಮಾತುಗಳನ್ನು ಅರ್ಧದಲ್ಲೇ ತಡೆಯುತ್ತಾ ”ಅವಸರಬೇಡ, ನಿಧಾನವಾಗಿ ಪ್ರಯತ್ನಿಸೋಣ. ನನ್ನ ಊಹೆಯ ಪ್ರಕಾರ ಆತನಿಗೇನೋ ಮಾನಸಿಕ ತೊಂದರೆಯಿದೆ ಅನ್ನಿಸುತ್ತಿದೆ” ಎಂದು ಹೇಳಿ ಆ ಗ್ರೂಪ್ ಫೋಟೋವನ್ನು ಎತ್ತಿಟ್ಟುಕೊಂಡರು ಸುಹಾಸ್.
ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಯಿತು. ಹಿಂದೆಯೇ ”ಮಾತಾ ಬಾಗಿಲು ತೆರೆಯಿರಿ” ಎಂಬ ಕೂಗು ಕೇಳಿ ಬಂದವನು ನಮ್ಮ ಸುಪುತ್ರ. ”ಅವನು ಹೊರಡುವಾಗಲೇ ಹೇಳಿದ್ದೆ ರೈನ್‌ಕೋಟ್ ತೆಗೆದುಕೊಂಡು ಹೋಗು ಅಂತ. ನನ್ನ ಮಾತೆಲ್ಲಿ ಕೇಳುತ್ತಾನೆ” ಎಂದು ಗೊಣಗುತ್ತಲೇ ಬಾಗಿಲು ತೆರೆದಳು ನೀರಜಾ.

ನೆಂದು ತೊಪ್ಪೆಯಾಗಿ ಒಳಬಂದ ಮಗ ರಾಹುನನ್ನು ನೋಡಿ ಹೊಡೆಯುವಂತೆ ಕೈಯೆತ್ತಿದಳಷ್ಟೇ. ಅದೆ ಕೈಯಿಗವನು ವೆಹಿಕಲ್ ಕೀ ಮತ್ತು ಪರ್ಸನ್ನು ಕೊಟ್ಟು ಛಂಗನೆ ವಾಷ್‌ರೂಮಿನತ್ತ ಓಡಿದ.

”ನೋಡಿ ನೀವು ನಿಮ್ಮ ಮಗನಿಗೆ ಕೊಟ್ಟಿರುವ ಸಲುಗೆಯ ಪರಿಣಾಮ” ಎಂದು ಪತಿ ಸಹಾಸನನ್ನು ದೂರಿದಳು.

ಹೆಂಡತಿಯ ಮಾತಿಗೆ ನಸುನಗುತ್ತಾ ”ಹದಿನಾಲ್ಕು ವರ್ಷ ಕಳೆದನಂತರ ಮಗನನ್ನು ಗೆಳೆಯನಂತೆ ಕಾಣಬೇಕು ಡಿಯರ್. ಎನ್ನುತ್ತಾ ಅಲ್ಲವೇನಮ್ಮಾ?” ಎಂದು ತಾಯಿಯತ್ತ ನೋಡಿದ ಸುಹಾಸ್. ಮಗನ ಮಾತಿಗೆ ಉತ್ತರ ಹೇಳದೆ ತಾವು ತಂದಿದ್ದ ಗಂಡನ ಹಳೆಯ ಫೈಲನ್ನು ಹಿಡಿದು ರೂಮಿಗೆ ತೆರಳಿದರು ಗಿರಿಜಮ್ಮ,

ಮಾರನೆಯ ದಿನ ಸಂಜೆಗೆ ರೂಢಿಯಂತೆ ಪಾರ್ಕಿಗೆ ವಾಕಿಂಗ್ ಹೋದ ಸುಹಾಸ್ ಆ ವ್ಯಕ್ತಿ ಕೂತಿರುತ್ತಿದ್ದ ಬೆಂಚಿನ ಕಡೆಗೆ ಕಣ್ಣು ಹಾಯಿಸಿದನು. ಆತನಾಗಲೇ ಬಂದು ಕುಳಿತಿದ್ದ. ಅವನ ಪಕ್ಕದಲ್ಲಿ ಹಿಂದಿನ ದಿನ ಕೊಟ್ಟಿದ್ದ ಛತ್ರಿಯೂ ಇತ್ತು. ಅವನನ್ನು ನೋಡಿಯೂ ನೋಡದಂತೆ ಎತ್ತಲೋ ನೋಡುತ್ತಾ ಮುಂದಕ್ಕೆ ಹೋಗುತ್ತಿದ್ದಂತೆ ಆ ವ್ಯಕ್ತಿ ‘ಸರ್’ ಎಂದು ಕರೆಮಾಡಿ ನಿಲ್ಲುವಂತೆ ಮಾಡಿತು.

‘ಓ ! ಸಾರೀ, ಗಮನಿಸಲಿಲ್ಲ. ವಾಕಿಂಗ್ ಮುಗಿಯಿತೇ?’ ಎಂದು ಪ್ರಶ್ನಿಸಿದರು ಸುಹಾಸ್.

‘ಇಲ್ಲಾ ಸರ್, ನಿಮ್ಮನ್ನೇ ಕಾಯುತ್ತಿದ್ದೆ’ ಎಂದು ಅವನ ಜೊತೆಯಲ್ಲೇ ಹೆಜ್ಜೆ ಹಾಕಿದರು ಮೌನವಾಗಿ. ವಾಕಿಂಗ್ ಮುಗಿಸಿ ಮತ್ತೆ ಬೆಂಚಿನಮೇಲೆ ಬಂದು ಕುಳಿತರು. ‘ಹಾ..ತಮ್ಮ ಹೆಸರೇನೆಂದಿರಿ? ನೆನ್ನೆ ಹೇಳಿದ್ದರೋ ಏನೋ ಮರೆತುಹೋಗಿದೆ’ ಎಂದು ತಾವೇ ಮಾತು ಪ್ರಾರಂಭಿಸಿದರು ಸುಹಾಸ್.
‘ನನ್ನ ಹೆಸರು ಭರತ್, ನಾವು ದಕ್ಷಿಣ ಕನ್ನಡ ಜಿಲ್ಲೆಯವರು’ ಎಂದರು.

‘ಹೌದೆ ! ಮೈಸೂರಿನಲ್ಲಿ ಬಹಳ ವರ್ಷಗಳಿಂದ ಇದ್ದೀರೋ? ಅಥವಾ ಇತ್ತೀಚೆಗೆ ಬಂದದ್ದೋ?’
‘ಇಲ್ಲಾ ಸರ್, ನಮ್ಮ ಮುತ್ತಾತನ ಕಾಲದಿಂದಲೇ ಇಲ್ಲಿ ಬಂದು ನೆಲೆಸಿದ್ದಂತೆ. ನಮ್ಮೂರಿನಲ್ಲಿ ನಮ್ಮ ಬಂಧುಗಳಿದ್ದಾರೆ. ಅಲ್ಲಿ ಸ್ವಲ್ಪ ಪುರಾತನರ ಆಸ್ತಿಯೂ ಇದೆ. ಅದನ್ನು ಅವರುಗಳೇ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಕಾರುಬಾರೆಲ್ಲ ಇಲ್ಲಿಯೇ’ ಎಂದರು.
‘ಅಂದರೆ ಬ್ಯುಸಿನೆಸ್ ಯಾವ ರೀತಿಯದ್ದು?’
‘ಹೋಟೆಲ್ ಬ್ಯುಸಿನೆಸ್. ಒಂದಿಷ್ಟು ಮಳಿಗೆಗಳೂ ಮತ್ತು ಮನೆಗಳೂ ಇವೆ. ಬಾಡಿಗೆಗೆ ಕೊಟ್ಟಿದ್ದೇವೆ’ ಅಷ್ಟರಲ್ಲಿ ಅವರ ಮೊಬೈಲಿಗೆ ಯಾವುದೋ ಕಾಲ್ ಬಂದದ್ದರಿಂದ ‘ಸರ್ ಕ್ಷಮಿಸಿ ‘ಎಂದಾಗ ‘ಮನೆಯವರ ಕಾಲ್ ಎಂದರೆ ಏನೋ ಅರ್ಜೆಂಟ್ ಇರಬಹುದು. ತೆಗೆದುಕೊಳ್ಳಿ’ ಎಂದರು ಸುಹಾಸ್. ಮಾತನಾಡಿದ ಆ ವ್ಯಕ್ತಿ ‘ನಾನಿನ್ನು ಬರುತ್ತೇನೆ’ ಎನ್ನುತ್ತಾ ಛತ್ರಿಯನ್ನು ಇವರ ಕೈಗೆ ಕೊಟ್ಟು ಥ್ಯಾಂಕ್ಸ್ ಹೇಳಿ ಅಲ್ಲಿಂದ ಮನೆ ಕಡೆಗೆ ನಡೆದರು.

ಹೀಗೇ ಹಲವಾರು ಬಾರಿ ಒಡನಾಟವಾಯಿತು. ಆತನು ತುಂಬ ಕಷ್ಟಜೀವಿ. ತಾತನವರಿಂದ ತಮಗೆ ದೊರಕಿದ್ದ ಆಸ್ತಿಯನ್ನು ತಮ್ಮ ಬುದ್ಧಿಶಕ್ತಿಯಿಂದ ಚೆನ್ನಾಗಿಯೇ ರೂಢಿಸಿಕೊಂಡಿದ್ದರು. ಹಾಗೆಯೇ ತಾತನವರ ಹೆಸರಿನಲ್ಲಿ ಒಂದುಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವರೆಂಬ ವಿಷಯ ತಿಳಿದುಬಂತು. ಭರತ್ ತಮಗೆ ಗೊತ್ತಿದ್ದ ಅನಂತರಾಮುರವರ ಮೊಮ್ಮಗನೇ ಎಂಬುದು ಖಾತ್ರಿಯಾಯಿತು. ಅವರಿಬ್ಬರ ಮಾತುಕತೆಗಳಲ್ಲಿ ಎಲ್ಲಿಯೂ ಭರತ್‌ರವರ ತಂದೆಯ ವಿಷಯ ಬರಲೇ ಇಲ್ಲ. ಸುಹಾಸರಿಗೆ ಕುತೂಹಲ. ಇಷ್ಟು ಹಿನ್ನೆಲೆ ತಿಳಿದಮೇಲೆ ಆರ್ಥಿಕವಾಗಿ ಆ ವ್ಯಕ್ತಿಗೆ ಯಾವ ಕೊರತೆಯೂ ಇಲ್ಲವೆಂಬುದು ಗೊತ್ತಾಯಿತು. ಆದರೂ ಮನಸ್ಸಿನಲ್ಲಿ ಏನೋ ಕೊರಗನ್ನಿಟ್ಟುಕೊಂಡಿದ್ದಾರೆ ಎನ್ನುವುದು ಮುಖಭಾವದಿಂದ ಕಂಡುಬರುತ್ತಿತ್ತು. ದಿನವಹಿ ವಾಕಿಂಗ್ ಮಾತ್ರ ತಪ್ಪಿಸದಂತೆ ಮಾಡುತ್ತಿದ್ದರು. ಬಹಳ ದಿನಗಳಾದದ್ದರಿಂದ ಅವರಿಬ್ಬರ ನಡುವಿನ ಬಿಗುವು ಕಡಿಮೆಯಾಗಿ ಸರ್ ಪದಕ್ಕೆ ಬದಲಾಗಿ ‘ಡಾಕ್ಟರ್’ ಎಂದು ಕರೆಯುತ್ತಿದ್ದರು.

ಭರತ್ ‘ನೀವು ಇದೇ ಊರಿನವರಾ?’ ಎಂದು ಕೇಳಿದರು.
‘ಇಲ್ಲ ನಾವು ಬೆಂಗಳೂರು ಸಮೀಪದ ಒಂದು ಹಳ್ಳಿಯವರು. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದದ್ದು. ಸರ್ಕಾರಿ ಕೆಲಸವಾದ್ದರಿಂದ ವರ್ಗಾವರ್ಗಿ ಸಾಮಾನ್ಯ. ಸದ್ಯಕ್ಕೆ ಮೈಸೂರಿಗೆ ಬಂದಿದ್ದೇನೆ. ನನಗೊಬ್ಬ ಮಗನಿದ್ದಾನೆ. ಸ್ಪೀಚ್ ಅಂಡ್ ಹಿಯರಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಓದುತ್ತಿದ್ದಾನೆ. ಮನೆಯಲ್ಲಿ ನನ್ನಾಕೆ ಮತ್ತು ತಾಯಿ ಇದ್ದಾರೆ. ತಂದೆಯವರು ಇತ್ತೀಚೆಗಷ್ಟೇ ತೀರಿಕೊಂಡರು’ ಎಂದು ಹೇಳಿದರು ಡಾ.ಸುಹಾಸ್.

‘ಇತ್ತೀಚೆಗೆ ಕಾಲವಾದರೇ? ಏನಾಗಿತ್ತು ಡಾಕ್ಟರೇ? ‘ಎಂದು ಕೇಳಿದರು ಭರತ್.
‘ಏನಿಲ್ಲ ವಯಸ್ಸಾಗಿತ್ತು ಭರತ್ ‘ಎಂದರು. ಹಾಗೇ ಮಾತನ್ನು ಮುಂದುವರೆಸುತ್ತಾ ‘ವಯೋಸಹಜವಾದ ಶಕ್ತಿಹೀನತೆಯ ಖಾಯಿಲೆಯಿಂದ ತೀರಿಹೋದರು. ಏಕೆ ಕೇಳುತ್ತಿದ್ದೀರಿ? ನಿಮ್ಮ ತಂದೆಯ ಬಗ್ಗೆ ಏನನ್ನೂ ಹೇಳಲಿಲ್ಲ’ ಎಂದು ವಾಕ್ಯವನ್ನು ಪೂರ್ತಿಯಾಗಿ ಹೇಳುವುದರೊಳಗೆ ಯಾರಾದರೂ ನೋಡುತ್ತಿರಬಹುದೆಂಬ ಅಳುಕೂ ಇಲ್ಲದಂತೆ ತಮ್ಮೆರಡೂ ಕೈಗಳಿಂದ ಮುಖಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದರು ಭರತ್.

ಕಾರಣ ತಿಳಿಯದೆ ಗಾಭರಿಯಿಂದ ”ವೆರಿ ಸಾರಿ, ನಾನು ನಿಮಗೆ ನೋವಾಗುವಂತೆ ಮಾತನಾಡಿದೆನೇ? ದುಃಖಿಸಬೇಡಿ. ಕಣ್ಣೊರೆಸಿಕೊಳ್ಳಿ. ಎಲ್ಲರೂ ನಮ್ಮನ್ನೇ ನೋಡುತ್ತಿದ್ದಾರೆ. ಏಳಿ ನಮ್ಮ ಮನೆಗೆ ಹೋಗೋಣ ”ಎಂದು ಅವರನ್ನು ಕೈಹಿಡಿದೆಬ್ಬಿಸಿದರು ಸುಹಾಸ್. ಕಣ್ಣುಮೂಗು ಒರೆಸಿಕೊಂಡು ಇದ್ದಕ್ಕಿದ್ದಂತೆ ”ನಾನು ಬರುತ್ತೇನೆ ಡಾಕ್ಟರ್ ”ಎನ್ನುತ್ತಾ ಹಿಂತಿರುಗಿ ನೋಡದಂತೆ ದಾಪುಗಾಲಾಕುತ್ತಾ ನಡೆದುಬಿಟ್ಟರು. ಒಳ್ಳೆಯ ವಿಚಿತ್ರವ್ಯಕ್ತಿ ಎಂದುಕೊಳ್ಳುತ್ತಾ ಏನೋ ಅವರ ಮನಸ್ಸಿನಲ್ಲಿ ಕೊರೆಯುವ ಅಂಶವಿದೆ. ಅದು ಹೊರಬರಲಾರದೆ ಒದ್ದಾಡುತ್ತಿದ್ದಾರೆ. ನೊಡೋಣ ಸ್ವಲ್ಪ ಸಮಾಧಾನವಾದ ನಂತರ ತಿಳಿಯಬಹುದು ಎಂದು ಸುಹಾಸರ ಮನೋ ವಿಕಲ್ಪಕಗಳ ಚಿಕಿತ್ಸಕ ಬುದ್ಧಿ ಕೆಲಸ ಮಾಡುತ್ತಿತ್ತು. ಅದನ್ನೇ ಆಲೋಚಿಸುತ್ತಾ ಮನೆಯ ಹಾದಿ ಹಿಡಿದರು.

ಸುಮಾರು ಒಂದುವಾರ ಕಳೆಯಿತು. ಪ್ರತಿದಿನ ತಪ್ಪದೆ ಭೇಟಿಯಾಗುತ್ತಿದ್ದ ವ್ಯಕ್ತಿ ಭರತ್ ಪಾರ್ಕಿನಲ್ಲಿ ಕಾಣಿಸಲೇ ಇಲ್ಲ. ಸುಹಾಸರಿಗೆ ನಾನೇ ಅವಸರಮಾಡಿ ಅವರಿಗೆ ಇಷ್ಟವಿಲ್ಲದ ವಿಷಯ ಪ್ರಸ್ತಾಪಿಸಿದೆನೇನೋ ಎಂದು ಬೇಸರವಾಯಿತು. ಅವರ ತಂದೆಯದೇ ಏನೋ ಪ್ರಸಂಗದಿಂದ ಆತನಿಗೆ ದುಃಖವಾಗಿದೆ. ಅದನ್ನು ಮರೆಯಲಾಗಿಲ್ಲ. ಅದೇನೆಂದು ತಿಳಿದರೆ ಅದಕ್ಕೆ ಸಾಧ್ಯವಾದ ಪರಿಹಾರವನ್ನು ಸೂಚಿಸಬಹುದಾಗಿತ್ತು. ಆದರೆ ಸಮಸ್ಯೆಯ ಹತ್ತಿರಕ್ಕೆ ಬಂದು ದೂರವಾದಂತಾಯಿತೇ ಎಂದು ಚಿಂತೆಯಾಯಿತು. ಕಾದು ನೋಡೋಣವೆಂದು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುತ್ತಾ ವಾಕಿಂಗ್ ಮುಗಿಸಿ ಮನೆಯ ಕಡೆ ನಡೆದವರಿಗೆ ತಮ್ಮ ಮನೆಯ ಗೇಟಿನ ಬಳಿ ಯಾರೋ ಹೆಣ್ಣುಮಗಳು ನಿಂತಿರುವುದು ಕಾಣಿಸಿತು. ಯಾರೋ ಅಮ್ಮನ ಪರಿಚಯದವರಿರಬೇಕು ಎಂದುಕೊಂಡು ಗೇಟನ್ನು ಸಮೀಪಿಸಿದರು ಸುಹಾಸ್. ತಮ್ಮ ತಾಯಿ ಮತ್ತು ಪತ್ನಿ ಶಾಪಿಂಗಿಗೆ ಹೋಗುತ್ತೇವೆಂದು ಹೇಳಿದ್ದು ಜ್ಞಾಪಕಕ್ಕೆ ಬಂದು ಯಾರೋ ಪಾಪ ಒಳಗೆ ಹೋಗದೆ ಇಲ್ಲಿಯೇ ನಿಂತಿದ್ದಾರೆ. ಎಂದುಕೊಳ್ಳುತ್ತಾ ಅವರನ್ನು ಸಮೀಪಿಸಿದಾಗ ಆ ಮಹಿಳೆ ನಮಸ್ಕಾರ ಸರ್ ಎಂದರು. ಅದಕ್ಕೆ ಪ್ರತಿವಂದಿಸುತ್ತಾ ‘ತಾವು ಅಮ್ಮನನ್ನು ನೋಡಲು ಬಂದಿರಾ?’ ಎಂದು ಪ್ರಶ್ನಿಸಿದರು.ಸುಹಾಸ್.

ಅವರು ‘ನಿಮ್ಮನ್ನೇ ನೋಡಲು ಬಂದಿದ್ದೇನೆ’ ಎಂದಾಗ ಆಶ್ಚರ್ಯವಾಯಿತು. ಅವರನ್ನು ಮೊದಲೆಂದೂ ನೋಡಿದ ನೆನಪಾಗಲಿಲ್ಲ.
‘ತಾವು ಯಾರೆಂದು ಗೊತ್ತಾಗಲಿಲ್ಲ’
‘ನಾನು ಭರತನ ತಾಯಿ ಭುವನೇಶ್ವರಿ, ಅವನ ಸಲುವಾಗಿ ನಿಮ್ಮನ್ನೇ ಕಾಣಲು ಬಂದೆ ‘ಎಂದರು.
‘ಹೌದೇ ! ಭರತ್ ಆರಾಮವಾಗಿದ್ದಾರೆಯೇ? ಏಕೋ ಒಂದು ವಾರದಿಂದ ಅವರು ಪಾರ್ಕಿಗೆ ವಾಕಿಂಗಿಗೆ ಬರಲಿಲ್ಲ’.
‘ಅದರ ವಿಷಯವನ್ನೇ ನಿಮ್ಮ ಬಳಿ ಹೇಳಲು ಬಂದೆ’ ಎಂದರು.

ಡಾ. ಸುಹಾಸ್ ‘ಒಳಗೆ ಬನ್ನಿ, ಮಾತನಾಡೋಣ’ ಎಂದು ಬಾಗಿಲು ತೆರೆದರು. ಆಕೆ ಅವರನ್ನು ಹಿಂಬಾಲಿಸಿದರು. ಪೋರ್ಟಿಕೋದಲ್ಲಿದ್ದ ಕುರ್ಚಿಗಳನ್ನು ನೋಡಿ ‘ಡಾಕ್ಟರೇ ಇಲ್ಲಿಯೇ ಕುಳಿತುಕೊಳ್ಳೋಣ’ ಎಂದರು.

ಅವರಿಗೆದುರಾಗಿ ಸುಹಾಸರೂ ಕುರ್ಚಿಯೊಂದರ ಮೇಲೆ ಆಸಿನರಾದರು. ಭರತನ ತಾಯಿಯನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿದರು. ಆತನ ಪಡಿಯಚ್ಚು ಎಂದು ಹೇಳಲಾಗದಿದ್ದರೂ ಅವರ ಮಗ ಎಂದು ಹೇಳಬಹುದಾದಷ್ಟು ಹೋಲಿಕೆಗಳಿದ್ದವು. ಸುಮಾರು ತಮ್ಮ ತಾಯಿಯ ಸಮವಯಸ್ಕರಂತೆ ಇದ್ದರು. ಅವರ ಮುಖದಲ್ಲಿ ಮಗನ ಬಗ್ಗೆ ಕಾಳಜಿಯಿಂದ ದುಗುಡ ಮನೆಮಾಡಿದಂತಿತ್ತು.

”ಡಾಕ್ಟರೇ ನನ್ನ ಮಗ ನಿಮ್ಮ ಬಳಿ ಏನು ಹೇಳಿಕೊಂಡಿದ್ದಾನೋ ತಿಳಿಯದು. ಅದನ್ನು ನನಗೆ ತಿಳಿಸಿದರೆ ಮುಂದಿನದನ್ನು ನಾನು ನಿಮಗೆ ಹೇಳಬಹುದು” ಎಂದರು. ಡಾಕ್ಟರು ಪಾರ್ಕಿನಲ್ಲಿ ತಮ್ಮಿಬ್ಬರ ಭೇಟಿಯಿಂದ ಹಿಡಿದು ಒಮ್ಮೆ ತಮ್ಮ ಮನೆಗೆ ಮಳೆಯ ಕಾರಣ ಬಂದಿದ್ದೂ ನಂತರ ಪರಿಚಯದಲ್ಲಿ ಸ್ವಲ್ಪ ಸಲುಗೆ ಆದಂತಾಗಿದ್ದು, ತಮ್ಮ ಬಗ್ಗೆ ಎಲ್ಲವನ್ನೂ ಕೇಳಿ ತಿಳಿದುಕೊಂಡ ನಂತರ ತಮ್ಮ ತಂದೆಯ ಬಗ್ಗೆ ಕೇಳಿದ ಪ್ರಶ್ನೆಯಿಂದ ಭರತ್ ವಿಚಲಿತರಾಗಿ ಏನನ್ನೂ ಮಾತನಾಡದೇ ದುಃಖಿಸಿದ್ದೂ ಎಲ್ಲವನ್ನೂ ಸಾದ್ಯಂತವಾಗಿ ಆಕೆಗೆ ತಿಳಿಸಿದರು ಡಾ.ಸುಹಾಸ್.

”ಸಮಸ್ಯೆ ಬಂದಿರುವುದೇ ಅಲ್ಲಿ ಡಾಕ್ಟರೇ, ಏಕೆಂದರೆ ನಮ್ಮವರ ಸಾವು ಸಹಜವಾದುದಾಗಿರಲಿಲ್ಲ. ಅದೊಂದು ಆತ್ಮಹತ್ಯೆ”
”ಏನು ಆತ್ಮಹತ್ಯೆಯೇ ! ಏಕೆ ಅವರಿಗೆ ಏನಾದರೂ ವಾಸಿಯಾಗದ ಖಾಯಿಲೆಯಿತ್ತೆ? ಅಥವಾ ಮಾನಸಿಕವಾಗಿ ಏನಾದರೂ ತೊಂದರೆಯಾಗಿತ್ತೆ?” ಪ್ರಶ್ನಿಸಿದರು ಸುಹಾಸ್.
”ಊಹುಂ, ಅದ್ಯಾವುದೂ ಅಲ್ಲ. ವೃತ್ತಿಯಿಂದ ಅವರು ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ವಿದ್ಯಾರ್ಥಿಗಳಲ್ಲಿ ಒಳ್ಳೆಯ ಬೋಧಕರೆಂಬ ಹೆಸರು ಗಳಿಸಿದ್ದರು. ನಿವೃತ್ತರಾದ ಮೇಲೆ ಅವರು ಹೊರಗೆಲ್ಲೂ ಹೋಗುತ್ತಿರಲಿಲ್ಲ. ಓದುವುದೇ ಅವರ ನೆಚ್ಚಿನ ಹವ್ಯಾಸವಾಗಿತ್ತು. ತಮ್ಮ ಕೋಣೆಯೇ ಅವರ ಸಾಮ್ರಾಜ್ಯವಾಗಿತ್ತು. ಬಲವಂತವಾಗಿ ಊಟ ತಿಂಡಿಗೆ ಕರೆದಾಗ ಮಾತ್ರ ಬರುತ್ತಿದ್ದರು. ಹೀಗೆ ಮನುಷ್ಯರ ಸಂಪರ್ಕದಿಂದ ದೂರವಾಗಿ ಒಂಟಿಯಾಗಿರಲು ಇಷ್ಟಪಡುತ್ತಿದ್ದರು. ಅವರ ಗೆಳೆಯರಿಂದಲೂ ದೂರವಾಗಿದ್ದರು. ಅವರೂ ಇವರನ್ನು ಭೇಟಿಯಾಗಲು ಮನೆಗೆ ಬರುತ್ತಿರಲಿಲ್ಲ. ಅವರ್‍ಯಾವಾಗ ನಿದ್ರೆ ಮಾಡುತ್ತಿದ್ದರೋ ದೇವರೇ ಬಲ್ಲ. ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಅವರು ಮಾತನಾಡುವುದೂ ಅಪರೂಪವಾಗಿ ಭಯವಾಗುತ್ತಿತ್ತು. ಕೈಕಾಲು ತಲೆಯನ್ನೆಲ್ಲ ಒಳಕ್ಕೆಳೆದುಕೊಂಡು ಚಿಪ್ಪಿನಡಿಯಲ್ಲಿ ಹುದುಗಿ ಕೂಡುವ ಆಮೆಯಂತಾಗಿಬಿಟ್ಟರು. ಅವರ ಮಗ ಭರತನಿಗೆ ಇದೇ ಚಿಂತೆಯಾಗಿ ಅಪ್ಪನನ್ನು ಬಲವಂತವಾಗಿ ಮನೋವೈದ್ಯರೊಬ್ಬರ ಬಳಿಗೆ ಕರೆದುಕೊಂಡು ಹೋಗಿ ಆಪ್ತಸಲಹೆ ಕೊಡಿಸುತ್ತಿದ್ದ. ಅದಕ್ಕೂ ಅವರು ಧನಾತ್ಮಕವಾಗಿ ಸ್ಪಂದಿಸಲಿಲ್ಲ. ಅವರ ಮನಸ್ಸಿನಲ್ಲೇನಿತ್ತೋ ನಮಗ್ಯಾರಿಗೂ ಅರ್ಥವಾಗಲೇ ಇಲ್ಲ. ಆ ದೇವರಿಗೇ ಗೊತ್ತು. ಒಂದುದಿನ ಬೆಳಗ್ಗೆ ನಾವು ಏಳುವ ಮೊದಲೇ ನಮ್ಮ ಹಿತ್ತಲಿನಲ್ಲಿರುವ ಮಾವಿನ ಮರದ ಕೊಂಬೆಯೊಂದಕ್ಕೆ ನೇತುಬಿದ್ದಿದ್ದರು. ತಮ್ಮ ಇಡೀ ದೇಹವನ್ನು ಕತ್ತನ್ನೂ ಸೇರಿಸಿ ಪಂಚೆಯಿಂದ ಸುತ್ತಿಕೊಂಡು ದೂರದಿಂದ ನೋಡುವವರಿಗೆ ಏನನ್ನೋ ಸುತ್ತಿ ನೇತು ಹಾಕಿದಂತೆ ಕಾಣಿಸುತ್ತಿತ್ತು. ಯಾವಾಗಲೋ ಪ್ರಾಣ ಹೋಗಿಬಿಟ್ಟಿತ್ತು. ಅದನ್ನು ಕಂಡವನೇ ಭರತ ಕುಸಿದು ಹೋದ. ನಮ್ಮ ಪರಿಚಯದ ಕೆಲವು ಪ್ರಭಾವಿ ವ್ಯಕ್ತಿಗಳ ನೆರವಿನಿಂದ ಅದೊಂದು ಹಗರಣವಾಗಿ ಮಾಧ್ಯಮದವರ ಬಾಯಿಗೆ ಬೀಳದಂತೆ ಅಂತ್ಯಕ್ರಿಯೆಗಳನ್ನು ಮುಗಿಸಿದೆವು. ಅಂದಿನಿಂದ ಭರತನಿಗೆ ತಾನು ಅವರನ್ನು ಕೌನ್ಸೆಲಿಂಗಿಗೆ ಬಲವಂತವಾಗಿ ಕರೆದು ಹೋದದ್ದೇ ಇದಕ್ಕೆ ಕಾರಣವಾಯಿತೇನೋ ಎಂಬ ಭ್ರಮೆಯಾವರಿಸಿದೆ. ಅವರ ಸಾವಿಗೆ ತಾನೇ ಪರೋಕ್ಷವಾಗಿ ಕಾರಣನಾದೆ ಎಂದು ಆತ ಭಾವಿಸಿದ್ದಾನೆ. ಜೊತೆಗೆ ಅವರಿವರ ಚುಚ್ಚುಮಾತುಗಳೂ ಅವನನ್ನು ಘಾಸಿಗೊಳಿಸಿವೆ. ಅಂತಹ ದೊಡ್ಡ ಪ್ರೊಫೆಸರ್ ತಾವೇ ಸಾಯಬೇಕೆಂದರೆ ಒಳಗೇನೋ ಇರಬೇಕೆನ್ನುವ ಊಹಾಪೋಹದ ಮಾತುಗಳು ಮೇಲಿಂದಮೇಲೆ ಕೇಳಿ ಬಂದವು. ಅಂದಿನಿಂದ ಇಲ್ಲಿಯವರೆಗೆ ಆ ಕೊರಗಿನಿಂದ ನನ್ನ ಮಗ ಕೂಡ ಮಾನಸಿಕ ರೋಗಿಯಂತಾಗಿ ಮೌನಿಯಾಗಿಬಿಟ್ಟಿದ್ದಾನೆ. ಊಟ ತಿಂಡಿ, ಕೆಲಸದ ಬಗ್ಗೆ ಗಮನವೇ ಇಲ್ಲ. ನಮಗೆ ಇವನೂ ತಂದೆಯಂತಾಗಿಬಿಟ್ಟರೆ ಎನ್ನುವ ಭಯ ಕಾಡುತ್ತಿದೆ. ಹೇಗಾದರೂ ಅವನು ಮೊದಲಿನಂತಾದರೆ ಸಾಕು ಎಂದು ದಿನವೂ ನಾನು ಮತ್ತು ಅವನ ಹೆಂಡತಿ ಭಗವಂತನಲ್ಲಿ ಪ್ರಾರ್ಥಿಸುತ್ತಲೇ ಇದ್ದೇವೆ. ಏನು ಮಾಡಬೇಕೆಂದು ತಿಳಿಯದೆ ಇರುವಾಗ ನಿಮ್ಮ ಹೆಸರು ಅವನ ಬಾಯಿಂದ ಕೇಳಿದೆ. ನೀವು ಮಾನಸಿಕ ತೊಂದರೆಗಳಿಗೂ ಚಿಕಿತ್ಸೆ ನೀಡುತ್ತೀರೆಂದು ನಮ್ಮ ಪರಿಚಯದವರು ಹೇಳಿದರು. ಒಂದು ವಾರದಿಂದ ಅವನು ಹೊರಗೆ ಕೂಡ ಹೋಗದಿದ್ದುದರಿಂದ ನನ್ನ ಸೊಸೆ ಮತ್ತು ಮೊಮ್ಮಕ್ಕಳು ನನ್ನನ್ನೇ ತಮ್ಮ ಬಳಿಗೆ ಹೋಗಿಬರಲು ಒತ್ತಾಯ ಮಾಡಿದರು. ಅದಕ್ಕೆ ನಾನೇ ನಿಮ್ಮ ಹತ್ತಿರ ಬಂದೆ. ದಯವಿಟ್ಟು ನಾವೇನು ಮಾಡಿದರೆ ಒಳ್ಳೆಯದೆಂದು ನೀವೇ ಸಲಹೆ ನೀಡಬೇಕೆಂದು ಪ್ರಾರ್ಥಿಸುತ್ತೇನೆ. ದಯವಿಟ್ಟು ಇಲ್ಲವೆನ್ನಬೇಡಿ” ಎಂದು ಕೈಜೋಡಿಸಿದರು.

”ಛೇ..ಛೇ ತಾವು ಹಿರಿಯರು ನನಗೆ ತಾಯಿ ಸಮಾನರು, ಹಾಗೆಲ್ಲಾ ಕೈ ಮುಗಿದು ಬೇಡಬಾರದು. ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರವಿದ್ದೇ ಇರುತ್ತದೆ. ನಾವಿಬ್ಬರೂ ಸೇರಿಯೇ ಅದನ್ನು ಹುಡುಕೋಣ. ನಿಮ್ಮ ಮಗ ಮೊದಲಿನಂತಾಗುತ್ತಾರೆ. ನನ್ನ ವೃತ್ತಿಯೇ ಚಿಕಿತ್ಸೆ ನೀಡುವುದು. ನನಗೆ ಕೆಲವು ಮಾಹಿತಿಗಳು ಬೇಕಾಗುತ್ತವೆ. ನಿಮ್ಮ ಪತಿಯವರ ಬಗ್ಗೆ ಮತ್ತು ಅವರ ತಂದೆಯವರ ಬಗ್ಗೆ ಸಂಬಂಧಗಳು ಹೇಗಿದ್ದವು. ನೀವು ಮದುವೆಯಾಗಿ ಬಂದನಂತರ ಅವರ ಸ್ವಬಾವ, ನಡವಳಿಕೆಗಳು ಹೇಗಿದ್ದವು. ಎಷ್ಟು ನೆನಪಿದೆಯೋ ಅವನ್ನೆಲ್ಲ ವಿವರವಾಗಿ ಬರೆದು ಕೊಡಿ. ಇದನ್ನು ನಾನು ಚಿಕಿತ್ಸೆಗಾಗಿ ಮಾತ್ರ ಬಳಸಿಕೊಳ್ಳುವೆ ಬೇರೆ ಯಾರ ಕೈಗೂ ಇದನ್ನು ಕೊಡುವುದಿಲ್ಲ. ಇದನ್ನೆಲ್ಲ ನಿಮಗೆ ನನ್ನ ಮುಂದೆ ಹೇಳಿಕೊಳ್ಳಲು ಸಂಕೋಚವಾಗುತ್ತದೆಂದು ಈ ಪ್ರಯತ್ನ. ಆತಂಕಪಡದೆ ಬರೆದು ಕೊಡಿ ಎಂದು ಹೇಳಿದರು” ಡಾ.ಸುಹಾಸ್.

ತಾನು ಅದೇ ಕುಟುಂಬದ ಹಿರಿಯರಿಂದ ಉಪಕೃತನಾಗಿದ್ದೆನೆಂದು ಹೇಳಿಬಿಡಲೇ ಎಂದೊಮ್ಮೆ ಅನ್ನಿಸಿದರೂ ಬೇಡ ಅವರ ಉತ್ತರಾಧಿಕಾರಿ ಭರತ್‌ರನ್ನು ಈ ಸಮಸ್ಯೆಯಿಂದ ಬಿಡುಗಡೆ ಮಾಡಿಸಿದರೆ ಅವರ ಋಣವನ್ನು ತೀರಿಸಿದಂತಾಗುತ್ತದೆ ಎಂದು ಮನಸ್ಫೂರ್ತಿಯಾಗಿ ಅವರ ಸಮಸ್ಯೆಗೆ ಸ್ಪಂದಿಸಿದರು ಸುಹಾಸ್.

ಭರತನ ತಾಯಿ ಎಲ್ಲವನ್ನೂ ಬರೆದು ಮುಗಿಸಿ ಡಾಕ್ಟರರ ಮುಂದಿರಿಸಿದರು. ಅದನ್ನು ಓದುತ್ತಿದ್ದಂತೆ ಸುಹಾಸರ ಮುಖದಲ್ಲಿ ನಗೆಯೊಂದು ಮೂಡಿತು. ಅದರ ಕೆಳಗೆ ಅವರೂ ಏನನ್ನೋ ಬರೆದು ಇದರಂತೆ ನೀವೇ ಪ್ರಯೋಗ ಮಾಡಿ. ಹೆದರಬೇಡಿ. ಇದರಿಂದ ನಿಮ್ಮ ಮಗನಿಗೆ ನನ್ನಿಂದ ಯಾವ ಅಪರಾಧವೂ ಆಗಿಲ್ಲ ಎಂದು ಮನದಟ್ಟಾಗುತ್ತದೆ. ಧೈರ್ಯವಾಗಿ ಇದನ್ನು ಕೈಗೊಳ್ಳಿ. ನಿಮ್ಮ ಕುಟುಂಬದವರೆಲ್ಲ ನಿಮ್ಮನ್ನೇ ಆಯ್ಕೆ ಮಾಡಿ ಇಲ್ಲಿಗೆ ಕಳುಹಿಸಿದ್ದಾರೆ. ನಾನು ಹೇಳುತ್ತೇನೆ. ಇದು ನಿಮ್ಮಿಂದ ಸಾಧ್ಯವಾಗಿ ನಿಮ್ಮ ಮಗ ಸಾಮಾನ್ಯರಂತೆ ಆಗುವುದರಲ್ಲಿ ಸಂಶಯವೇ ಇಲ್ಲ. ನೀವು ನಂಬಿರುವ ಭಗವಂತ ನಿಮ್ಮನ್ನು ಕೈಬಿಡುವುದಿಲ್ಲ. ಒಳ್ಳೆಯದಾಗಲಿ. ಏನಾಯಿತೆಂದು ನನಗೆ ಫೋನ್ ಮಾಡಿರೆಂದು ತಮ್ಮ ವಿಸಿಟಿಂಗ್ ಕಾರ್ಡನ್ನು ಅವರಿಗೆ ಕೊಟ್ಟರು ಸುಹಾಸ್.
ಮನೆಗೆ ಹಿಂತಿರುಗಿ ಬಂದ ಭುವನೇಶ್ವರಿ ಡಾಕ್ಡರರ ಮನೆಯಲ್ಲಿ ನಡೆದ ವಿಷಯಗಳನ್ನು , ಅವರು ಹೇಳಿಕೊಟ್ಟ ಸಲಹೆಯನ್ನೂ ಚುಟುಕಾಗಿ ಮನೆಯವರಿಗೆ ತಿಳಿಸಿ ಮಗನ ರೂಮಿಗೆ ಬಂದರು.

ಅಲ್ಲಿ ಕಂಡದೃಶ್ಯ ಅವರ ಕರುಳಿರಿಯುವಂತಿತ್ತು. ಅವನಷ್ಟಕ್ಕೆ ಅವನೇ ”ಛೇ..ಎಂಥಹ ಕೆಲಸವಾಯಿತು. ನಿಮಗೆ ಮನೆಯಲ್ಲೇನು ಕೊರತೆಯಾಗಿತ್ತು. ನಮಗಾರಿಗೂ ಬಾಯಿಬಿಟ್ಟು ಏನನ್ನೂ ಹೇಳದೆ ಹೀಗೇಕೆ ತೀರ್ಮಾನಿಸಿಬಿಟ್ಟಿರಿ. ನಾನೇನು ಅಪರಾಧ ಮಾಡಿದೆ ಎಂದು ನನ್ನನ್ನು ಜನರ ಬಾಯಿಗೆ ಬಲಿಯಾಗುವಂತೆ ಮಾಡಿ ಹೋದರಲ್ಲಾ?” ಎಂದು ಹಲುಬುತ್ತಾ ತಲೆಮೇಲೆ ಕೈಹೊತ್ತು ಕುಳಿತಿದ್ದ ಭರತ್. ಅವನಿಗರಿವಿಲ್ಲದಂತೆ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ಅವನ ದೇಹದ ಮೇಲೆ ತಾಯಿ ಕೈಯಿಟ್ಟಾಗಲೇ ಅವನು ವಾಸ್ತವಕ್ಕೆ ಬಂದದ್ದು. ನೋಡಿದರೆ ಅವನ ಕಾಲಬುಡದಲ್ಲಿ ತಾಯಿ ಕುಳಿತಿದ್ದಾರೆ. ತಕ್ಷಣ ಎದ್ದು ನಿಂತು ”ಅಮ್ಮಾ ನೀವೇನು ಮಾಡುತ್ತಿದ್ದೀರಿ? ಏಳಿ” ಎಂದೆನ್ನುತ್ತಾ ಅವರನ್ನು ಹಿಡಿದೆತ್ತಿ ಮಂಚದ ಮೇಲೆ ಕೂರಿಸಿದ.

”ಮಗೂ ಭರತಾ, ನಾನು ನಿನ್ನನ್ನು ಗಮನಿಸುತ್ತಲೇ ಇದ್ದೇನೆ. ನೀನು ದಿನೇದಿನೇ ಮೌನಿಯಾಗುತ್ತಿದ್ದಿ. ಅಲ್ಲದೆ ನಿನಗೆ ನೀನೇ ಏನೇನೋ ಬಡನಡಿಸುತ್ತಿರುತ್ತೀಯೆ. ನೀನು ನೀನಾಗಿಲ್ಲ. ನಿಮ್ಮ ತಂದೆಯ ಸಾವಿನಲ್ಲಿ ಯಾರದ್ದೂ ತಪ್ಪಿಲ್ಲ. ಕೇಳು ನಿಮಗ್ಯಾರಿಗೂ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ನಿನ್ನೊಡನೆ ಹಂಚಿಕೊಳ್ಳಲೇ ಬೇಕಾಗಿದೆ. ನನಗೆ ಹುಟ್ಟಿದ ಮತ್ತು ವಿವಾಹಾನಂತರ ಸೇರಿದ ಎರಡು ಮನೆಗಳಲ್ಲಿಯೂ ಭಗವಂತ ಯಾವುದಕ್ಕೂ ಕೊರತೆಯಾಗದಂತೆ ಎಲ್ಲವನ್ನೂ ಹೆಚ್ಚಾಗಿಯೇ ಕರುಣಿಸಿದ. ಅತ್ತೆಮಾವ, ಹೆತ್ತ ಇಬ್ಬರು ಮಕ್ಕಳು ನನಗೆ ಪ್ರೀತಿಯ ಮಹಾಪೂರವನ್ನೇ ಹರಿಸಿದರು. ನಾನು ಸುಖವಾಗಿದ್ದೇನೆ. ನನ್ನ ಮಾವನವರಿಗೆ ಸಾಕಷ್ಟು ವ್ಯಾಪಾರ ವ್ಯವಹಾರಗಳಿದ್ದವು. ಅವರ ಮಗ ಅಂದರೆ ನಿಮ್ಮಪ್ಪನಿಗೆ ಶಿಕ್ಷಣ ಕೊಡಿಸಿದರು. ಅವರು ಚೆನ್ನಾಗಿಯೇ ಓದಿದರು. ಆದರೆ ಅವರು ಹೊರಗೆ ಹೋಗಿ ದುಡಿಯುವುದು ಮಾವನವರಿಗಿಷ್ಟವಿರಲಿಲ್ಲ. ತಮ್ಮದೇ ವ್ಯವಹಾರವನ್ನು ನೋಡಿಕೊಂಡು ಹೋದರೆ ಸಾಕು ಎನ್ನುವ ಆಶಯವಿತ್ತು. ಚಿಕ್ಕಂದಿನಿಂದಲೂ ಹಠಮಾರಿ ಸ್ವಭಾವದ ನಿಮ್ಮ ಅಪ್ಪ ಅವರ ಮಾತಿನಂತೆ ನಡೆಯದೆ ನೌಕರಿ ಹಿಡಿದರು. ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಮನೆಯಿಂದ ದೂರವೇ ಇದ್ದರು. ಅಷ್ಟರಲ್ಲಿ ಅವರಿಗೆ ವಿವಾಹವಾಗಿ ನಾನು ಬಂದಿದ್ದೆ. ನನ್ನ ಪತಿ ಹೊರಗಿನವರಿಗೆ ಸುಸಂಸ್ಕೃತ ವ್ಯಕ್ತಿಯಾಗಿ ಕಾಣುತ್ತಿದ್ದರು ಆದರೆ ಮನೆಯಲ್ಲಿ ಸಂಸಾರಿಯಾಗಿ ಅವರು ಎಲ್ಲರಂತಿರಲಿಲ್ಲ. ಅವರು ಮನೆಗೆ ಸಂಬಂಧವಿಲ್ಲವೇನೋ ಎಂಬಂತೆ ಮೊದಲಿನಿಂದಲೂ ಇದ್ದರು. ಅದೇನೋ ಹೇಳ್ತಾರಲ್ಲ ‘ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ ಅಂತ ಹಾಗೆ ತಾವರೆಯ ಎಲೆಯ ಮೇಲಿನ ನೀರಹನಿಯಂತೆ ಯಾವುದಕ್ಕೂ ಅಂಟಿಕೊಳ್ಳದಂತೆಯೇ ನಡೆದುಕೊಳ್ಳುತ್ತಿದ್ದರು. ನಾವಿಬ್ಬರೇ ಒಟ್ಟಿಗೆ ಎಲ್ಲಿಗೂ ಹೋಗಲೇ ಇಲ್ಲ. ನನ್ನನ್ನು ಒಂದು ಸಲವಾದರೂ ಅವರಿದ್ದ ಕಡೆಗೆ ಕರೆದುಕೊಂಡು ಹೋಗಲೂ ಇಲ್ಲ. ನಿನಗೆ ಹಿರಿಯರನ್ನು ನೋಡಿಕೊಳ್ಳಬೇಕಾದ ಕರ್ತವ್ಯವಿದೆ ಎಂದು ಕುಂಟುನೆಪ ಹೇಳುತ್ತಾ ಮನೆಯ ನಿರ್ವಹಣೆ ಮಾತ್ರ ನನ್ನ ಕೆಲಸವೆಂಬಂತೆ ನಡೆಸಿಕೊಂಡರು. ಇದನ್ನೆಲ್ಲಾ ಗಮನಿಸಿದ್ದರೋ ಎನ್ನುವಂತೆ ನಮ್ಮ ಮಾವನವರು ನಿನ್ನನ್ನು ತಾವೇ ಸಾಕಿ ಓದಿಸಿ ಎಲ್ಲ ಜವಾಬ್ದಾರಿಗಳನ್ನೂ ನಿರ್ವಹಿಸುವಂತೆ ಜವಾಬ್ದಾರಿತನ್ನು ಕಲಿಸಿದರು. ಮಗನಿಂದ ಆಗಲಾರದ್ದನ್ನು ಮೊಮ್ಮಗನಿಂದ ಸಾಧಿಸುವುದು ಆವರ ಆಕಾಂಕ್ಷೆ. ಅದರಂತೆಯೇ ಆಯ್ತು. ಕೊನೆಗೆ ನಿಮ್ಮ ತಂದೆಗೆ ಕೆಲಸದಿಂದ ನಿವೃತ್ತಿಯೂ ಆಯ್ತು. ಆಗಲಾದರೂ ಪತಿ ನನ್ನೊಡನೆ ಸುಖವಾಗಿರಬಹುದೆಂದು ಹೊಂಗನುಸಗಳನ್ನು ಕಂಡೆ. ಅವೆಲ್ಲವೂ ಸುಳ್ಳಾದವು. ನಿಮ್ಮಪ್ಪ ನಿವೃತ್ತಿಯಾದ ಮೇಲೆ ಎಲ್ಲದರಿಂದಲೂ ನಿವೃತ್ತರಂತೆ ನಡೆದುಕೊಂಡರು. ಓದುವುದು ಸರಿಯೇ ಆದರೆ ಮೂರುಹೊತ್ತೂ ಕೋಣೆಯೊಳಗೇ ಬಂದಿಯಾಗುವುದನ್ನು ನಾನು ಎಲ್ಲೂ ಕಂಡಿಲ್ಲ. ಇನ್ನು ಜೊತೆಯಲ್ಲಿ ನನ್ನನ್ನು ಪ್ರವಾಸಕ್ಕೆ ಕರೆದೊಯ್ಯುವುದು ದೂರದ ಮಾತೇ ಆಯ್ತು. ನಮ್ಮಿಬ್ಬರ ನಡುವೆ ಮಾತುಗಳೂ ವಿರಳವಾಗಿದ್ದವು. ಇಷ್ಟು ವರ್ಷ ಇದನ್ನೆಲ್ಲ ಸಹಿಸಿಕೊಂಡು ಬಾಳ್ವೆ ನಡೆಸಿದ್ದೇಕೆ ಗೊತ್ತೇ? ನಿಮ್ಮ ಮನೆತನದ ಗೌರವಕ್ಕೋಸ್ಕರ, ಸರೀಕರಿಂದ ಒಂದು ಮಾತು ಕೇಳಬಾರದೆಂದು. ನಿಜ ಹೇಳಬೇಕೆಂದರೆ ನನ್ನ ಮಕ್ಕಳಿಗೋಸ್ಕರ ಬದುಕಿದ್ದೆ. ಇಲ್ಲವಾದರೆ ನನಗಾಗಿ ಸ್ವಂತವೆನ್ನುವ ಜೀವನವೇ ಇಲ್ಲ. ನನಗೆ ಎಷ್ಟೋಸಾರಿ ಅನ್ನಿಸುತ್ತಿತ್ತು ಈ ಮನುಷ್ಯ ಎಂದೋ ಒಂದು ದಿನ ನಮಗೆಲ್ಲ ತಲೆನೋವಾಗುತ್ತಾರೆ ಎಂದು. ನೀನು ಅಪ್ಪನ ಮೇಲಿನ ಪ್ರೀತಿಯಿಂದ ಅವರಿಗೆ ವೈದ್ಯರಿಂದ ಕೌನ್ಸೆಲಿಂಗ್ ಮಾಡಿಸಿ ಅವರನ್ನು ಸರಿಪಡಿಸಲು ಪ್ರಯತ್ನಮಾಡಿದೆ. ಅದಕ್ಕೂ ಅವರು ಸ್ಫಂದಿಸಲಿಲ್ಲ. ಅವರು ತಮ್ಮ ಜೀವನವನ್ನು ವ್ಯರ್ಥವಾಗಿ ಸ್ವಯಂಕೃತವಾಗಿ ಕೊನೆಗಾಣಿಸಿಕೊಂಡರು ಅದರಲ್ಲಿ ಯಾರದ್ದೂ ಪಾತ್ರವಿಲ್ಲ. ಅವರ ದೀರ್ಘಕಾಲದ ಜೀವನಸಂಗಾತಿಯಾದ ನನಗೇ ಏನೂ ಅನ್ನಿಸಲಿಲ್ಲ. ಜನರೇನು ಒಳ್ಳೆಯದಕ್ಕೂ ಆಡಿಕೊಳ್ಳುತ್ತಾರೆ. ಕೆಟ್ಟದ್ದಕ್ಕೂ ಆಡಿಕೊಳ್ಳುತ್ತಾರೆ. ಅವರ ಮಾತುಗಳಿಗೆ ತಲೆಕೆಡಿಸಿಕೊಂಡರೆ ವೃಥಾ ನಮ್ಮ ಬದುಕನ್ನೂ ನಷ್ಟಮಾಡಿಕೊಳ್ಳುತ್ತೇವೆ. ನೀನು ಮೃದು ಮನಸ್ಸಿನವನು ಅವರ ಸಾವನ್ನೇ ನಿನ್ನ ಅಪರಾಧವೆಂದು ಭ್ರಮೆಪಟ್ಟು ನಿನ್ನ ಬದುಕು ಮತ್ತು ನಿನ್ನನ್ನು ಅವಲಂಬಿಸಿರುವ ಹೆಂಡತಿ ಮಕ್ಕಳ ಜೀವನಕ್ಕೂ ಕಲ್ಲು ಹಾಕುತ್ತಿದ್ದೀಯೆ. ಇದು ಇಲ್ಲಿಗೆ ಸಾಕು. ನೀನು ಆ ಭ್ರಮೆಯಿಂದ ಹೊರಕ್ಕೆ ಬಾ. ಬದುಕಿನಲ್ಲಿ ಮಾಡಬೇಕಾದ್ದು ಬಹಳ ಇದೆ. ಅದರತ್ತ ಗಮನ ಕೊಡು. ಇಷ್ಟನ್ನು ಹೇಳಿದ ಮೇಲೆ ನನಗನ್ನಿಸಿದ್ದು ನನ್ನ ಕರ್ತವ್ಯವನ್ನು ತಾಯಿಯಾಗಿ ನಾನು ಮಾಡಿದ್ದೇನೆ. ಇನ್ನು ಮುಂದಿನ ತೀರ್ಮಾನ ನಿನ್ನದು. ಯಾವುದಕ್ಕೂ ಭರವಸೆಯಿಟ್ಟು ಮುಂದುವರೆಯುತ್ತೀಯೆಂದು ನನ್ನ ಆಸೆ” ಎಂದು ತಮ್ಮ ಸುಧೀರ್ಘ ಮಾತುಗಳನ್ನು ಮಗನಿಗೆ ಹೇಳಿ ಕೋಣೆಯಿಂದ ಹೊರನಡೆದರು ಭುವನೇಶ್ವರಿ.

ಸ್ವಲ್ಪ ಹೊತ್ತಾದ ನಂತರ ಭರತ್ ಅಮ್ಮನಿದ್ದ ಕೊಠಡಿಗೆ ಬಂದ. ”ಅಮ್ಮಾ ನಿಮ್ಮ ಬುದ್ಧಿವಾದ ಇಂದು ನನ್ನ ಕಣ್ಣನ್ನು ತೆರೆಸಿತು. ಇನ್ನು ಮುಂದೆ ನಾನು ಮೊದಲಿನಂತಿರುತ್ತೇನೆ. ನಿಮ್ಮ ಮನಸ್ಸನ್ನು ನೋಯಿಸುವುದಿಲ್ಲ” ಎಂದು ಅವರ ಕಾಲುಗಳಿಗೆ ಶಿರಬಾಗಿ ನಮಸ್ಕರಿಸಿದ. ತಾಯಿ ಹೃದಯ ಪ್ರೀತಿಯಿಂದ ಅವನನ್ನು ಅಪ್ಪಿಕೊಂಡಿತು. ಸಮಸ್ಯೆಗೊಂದು ಪರಿಹಾರ ದೊರಕಿತು. ಅಂದಿನಿಂದ ಭರತನ ನಡವಳಿಕೆ ಉತ್ಸಾಹಭರಿತವಾಯಿತು.

ಇದನ್ನು ಕೇಳಿತಿಳಿದ ಡಾ. ಸುಹಾಸ್‌ಗೆ ತಾನು ತನಗೆ ನೆರವಾಗಿದ್ದ ಕುಟುಂಬಕ್ಕೆ ಕಿಂಚಿತ್ ಉಪಕಾರ ಮಾಡಿದೆನೆಂಬ ತೃಪ್ತಿಯಾಯಿತು. ನಂತರದ ವರ್ಷಗಳಲ್ಲಿ ಡಾ. ಸುಹಾಸ್ ಮತ್ತು ಭರತರ ಕುಟುಂಬಗಳ ಒಡನಾಟ ನಿಕಟವಾಗಿ ಸ್ನೇಹಭಾವದಿಂದ ಕೂಡಿತ್ತು. ಕೊಂಕು ಮಾತುಗಳನ್ನಾಡುತ್ತಿದ್ದ ಸುತ್ತಮುತ್ತಲಿನ ಜನರ ಹುಬ್ಬೇರುವಂತಾಯಿತು.

ಬಿ.ಆರ್.ನಾಗರತ್ನ, ಮೈಸೂರು

8 Responses

  1. ನಯನ ಬಜಕೂಡ್ಲು says:

    ಕುತೂಹಲ ಹುಟ್ಟಿಸುತ್ತ ಸಾಗಿದ ಕಥೆ ಸೊಗಸಾಗಿದೆ.

  2. ಶಂಕರಿ ಶರ್ಮ says:

    ಭರತ್ ನ ಮಾನಸಿಕ ಗೊಂದಲಗಳನ್ನು ದೂರ ಮಾಡಲು ಸಹಕರಿಸಿ ತನ್ನ ಋಣ ಸಂದಾಯ ಮಾಡಿದ ಡಾ. ಸುಹಾಸನ ಪಾತ್ರ ಇಷ್ಟವಾಯಿತು. ಸೊಗಸಾದ ಕಥಾಹಂದರ ಮನಮುಟ್ಟುವಂತಿದೆ, ನಾಗರತ್ನ ಮೇಡಂ.

  3. Hema Mala says:

    ಸೂಕ್ಷ್ಮವಾದ ವಿಷಯವನ್ನೊಳಗೊಡ ಕಥೆಯನ್ನು ನವಿರಾಗಿ ಹೆಣೆದು, ಸಮಸ್ಯೆಗೆ ಸೂಕ್ತ ಪರಿಹಾರವನ್ನು ಸೂಚಿಸಿದ ಕಥೆ ಇಷ್ಟವಾಯಿತು

  4. ಪದ್ಮಾ ಆನಂದ್ says:

    ಮನಸ್ಸು ದೇಹಕ್ಕಿಂತ ಅತೀ ಸೂಕ್ಷ್ಮ. ಅದರ ನಿರವಹಣೆಯಲ್ಲಿ ಏರುಪೇರಾದರೆ ಬದುಕು ದುಸ್ಸರವಾಗಬಹುದು. ಪಲಾಯನಗೈಯದೆ ಸರಳ ಪರಿಹಾರಗಳನ್ನು ಪಡೆದು ಬದುಕನ್ನು ಹಸನಾಗಿಸಿಕೊಂಡ ಕುಟುಂಬವೊಂದರ ಸುಂದರ ಕಥೆ. ಅತ್ಯಂತ ಮುದ ನೀಡಿತು. ಅಭಿನಂದನೆಗಳು.

  5. ಧನ್ಯವಾದಗಳು ಪದ್ಮಾ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: