ಥೀಮ್ 5: ರೇಡಿಯೋ ಎಂಬ ಸೋಜಿಗ
ಇದು ಆಕಾಶವಾಣಿ….!!
ಆರು ದಶಕಗಳ ಹಿಂದಿನ ದಿನಗಳು.. ಮನೆಗಳಲ್ಲಿ ಸರಿಯಾಗಿ ಗಡಿಯಾರವೇ ಇಲ್ಲದಂತಹ ಕಾಲ, ಇನ್ನು ರೇಡಿಯೋ ಎಲ್ಲಿಂದ ಬರಬೇಕು ಹೇಳಿ?
ಇನ್ನೂ ಏಳೆಂಟು ವರುಷದ ಬಾಲೆ ತನ್ನ ಬಂಧುಗಳ ಮನೆಗೆ ಹೋಗಿದ್ದಾಗ, ಅಲ್ಲಿ ಎತ್ತರದಲ್ಲಿ ಇರಿಸಿದ್ದ ರೇಡಿಯೋದಿಂದ ಸಂಗೀತದ ಹಾಡು ಕೇಳಿ ಬಂತು. ಮೊತ್ತ ಮೊದಲ ಬಾರಿಗೆ ರೇಡಿಯೋವನ್ನು ನೋಡಿ, ಅದರಲ್ಲಿ ಬರುವ ಹಾಡುಗಳನ್ನು ಕೇಳಿದಾಗ ಸಖೇದ ಆಶ್ಚರ್ಯದಿಂದ ಅದರ ಮುಂದೆಯೇ ಕುಳಿತುಬಿಟ್ಟಳು… ಕಣ್ಣು ಬಾಯಿ ಬಿಟ್ಟು ನೋಡುತ್ತಾ. ಮನೆಯವರ ಬಳಿ, “ಅದು ಹೌದೂ… ಹಾಡುವವರು, ಬಾರಿಸುವವರು ಎಲ್ಲಾ ಅದರೊಳಗೆ ಹೇಗೆ ಹೋದರು? ಅವರಿಗೆಲ್ಲಾ ಕುಳಿತುಕೊಳ್ಳಲು ಅದರೊಳಗೆ ಜಾಗ ಸಾಕಾ!??” ಎಂದು ಕೇಳಿ ಅವರ ತಲೆ ತಿಂದಳು!
ಹೌದು, ಇದು ನನ್ನೊಳಗೆ ಉದ್ಭವಿಸಿದ ಅತ್ಯಂತ ದೊಡ್ಡ ಸಂಶಯವಾಗಿತ್ತು! ರೇಡಿಯೋವನ್ನು ಮೊದಲ ಬಾರಿಗೆ ಕೇಳಿದ ಮಕ್ಕಳಿಗೆ ಇಂತಹದೇ ಮಹಾ ಕುತೂಹಲ ಹುಟ್ಟಿರುತ್ತದೆ ಎಂಬುದು ನಿರ್ವಿವಾದ. ರೇಡಿಯೋ ತರಂಗಗಳನ್ನು ಕಂಡು ಹಿಡಿದ ಮಾರ್ಕೋನಿ ವಿಷಯವನ್ನು ಪಠ್ಯದಲ್ಲಿ ಓದಿದಾಗ ಮಂಡೆಗೆ ಸ್ವಲ್ಪ ಹತ್ತಿತು ನೋಡಿ!
ಆಕಾಶವಾಣಿಯ ನಂಟು ಬೆಸೆದ ಪರಿಯೂ ಅನನ್ಯ. ನೌಕರಿಗೆ ಹೋಗುವ ಸಂದರ್ಭದಲ್ಲಿ, ಟಿ.ವಿ.ಇದ್ದರೂ ಅದನ್ನು ಕೂತು ನೋಡಲು ಸಮಯವೆಲ್ಲಿ? ಬೆಳಗ್ಗಿನ ತುರಾತುರಿಯ ನಡುವೆ ರೇಡಿಯೋದಲ್ಲಿ ವಂದೇ ಮಾತರಂ, ಸುಪ್ರಭಾತದ ಹಾಡು,ಇದು ಆಕಾಶವಾಣಿ ಮಂಗಳೂರು…ವಾರ್ತೆಗಳು…, ಇತ್ಯಾದಿಗಳನ್ನು ಕೇಳದಿದ್ದರೆ ನಮಗಿಬ್ಬರಿಗೂ ಏನೋ ಕಳಕೊಂಡ ಭಾವನೆ. ಇಂದಿಗೂ ಬೆಳಗ್ಗೆ ಎದ್ದ ತಕ್ಷಣ ರೇಡಿಯೋದ ಕಿವಿ ಹಿಂಡಿ ಸ್ಟೇಶನ್ ಹುಡುಕುವುದು ತಪ್ಪಿಲ್ಲ… ಅದರಲ್ಲಿ ಏನೂ ಕೇಳದೆ ಬರೇ ಬರ್ರ್ ಶಬ್ದವಿದ್ದರೂ!
ನಾನಿರುವ ಸಂಘವೊಂದರಲ್ಲಿ ನಾವೆಲ್ಲರೂ ಸೇರಿ ಆಗಾಗ ನಾಟಕ ಆಡುವ ಹವ್ಯಾಸವಿದೆ… ಅದರ ಸಂಘಟನೆಯ ಜವಾಬ್ದಾರಿ ನನ್ನದೇ. ಒಮ್ಮೆ ಮಂಗಳೂರು ಆಕಾಶವಾಣಿಯಿಂದ ನಮ್ಮ ನಾಟಕದ ಧ್ವನಿ ಮುದ್ರಣಕ್ಕೆ ಆಹ್ವಾನ ಬಂದಾಗ ಖುಷಿಯೋ ಖುಷಿ! ಅಂತೆಯೇ, ನಮ್ಮ ಮಹಿಳಾ ತಂಡವು ಅದಕ್ಕಾಗಿ ಬೇರೆಯೇ ತಯಾರಿಗೆ ಸಿದ್ಧತೆ ನಡೆಸಿತು. ಇಲ್ಲಿ ಧ್ವನಿಯ ಏರಿಳಿತವೇ ಮುಖ್ಯವಾಗಿರುತ್ತದೆ.. ಅಭಿನಯವಲ್ಲ. ಇದೇ ನಮಗಾದ ತೊಡಕು. ಹೆಚ್ಚಿನವರು ಮಧ್ಯ ವಯಸ್ಸು ದಾಟಿದವರು.. ತಾಲೀಮು ಸಮಯದಲ್ಲಿ ಏನು ಮಾಡಿದರೂ ಸರಿಯಾಗಿ ಮಾತುಗಳೇ ಬರುತ್ತಿರಲಿಲ್ಲ. ನನ್ನ ತಲೆ ಹನ್ನೆರಡಾಣೆ ಮಾರಾಯ್ರೆ!
ನಾವು ಆಕಾಶವಾಣಿಗೆ ಹೋಗುವ ದಿನ ಹತ್ತಿರವಾದರೂ ಹೆಚ್ಚು ಏನೂ ಸುಧಾರಣೆ ಕಾಣಲಿಲ್ಲ. ನಾವು ಅಷ್ಟಲಕ್ಷ್ಮಿಯರು (ನಾವು ಎಂಟು ಮಂದಿ ನಾವೇ ಇರಿಸಿಕೊಂಡ ಹೆಸರು!) ಒಂದೇ ಬಣ್ಣದ ಸೀರೆಯ ನಾರಿಯರಾಗಿ ಶೋಭಿಸುತ್ತಾ ಬಸ್ಸಲ್ಲಿ ಸಾಗಿದಾಗ ಎಲ್ಲರೂ ನಮ್ಮನ್ನೇ ನೋಡುವವರು..! ” ಏನು ನೀವು ಭಜನಾ ತಂಡದವರಾ?” ಎಂದು ಪ್ರಶ್ನೆ ಬೇರೆ !
ನನಗೆ ಪ್ರಾರಂಭವಾದ ವಿಪರೀತ ಕೆಮ್ಮಿನ ನಡುವೆಯೂ “ಧೈರ್ಯವೇ ಸರ್ವತ್ರ ಸಾಧನಂ” ನ್ನು ಗಟ್ಟಿಯಾಗಿ ನಂಬಿ, ಬೇಗನೆ ಮಂಗಳೂರು ತಲಪಿ, ಕದ್ರಿ ಪಾರ್ಕಿನಲ್ಲಿ ಎರಡು ಸರ್ತಿ ಪುನಃ ತಾಲೀಮು ನಡೆಸಿ ಉತ್ಸಾಹದಿಂದ ಆಕಾಶವಾಣಿ ಕೇಂದ್ರಕ್ಕೆ ತಲಪಿದಾಗ ನಮ್ಮನ್ನು ನೋಡಿ ಅಲ್ಲಿಯೂ ನಮಗೆ ಎದುರಾದ ಪ್ರಶ್ನೆ… ” ಭಜನಾ ತಂಡವಾ..!??” ನನಗೋ ನಗು ಜೊತೆ ಸ್ವಲ್ಪ ಇರುಸು ಮುರುಸು! ಆದರೆ ನಮ್ಮ ಧ್ವನಿ ಮುದ್ರಣ ಮಾತ್ರ ನನ್ನ ಒಂದು ಕೆಮ್ಮೂ ಇಲ್ಲದೆ ಸುಸೂತ್ರವಾಗಿ ನಡೆದು ಶಾಭಾಸ್ ಗಿಟ್ಟಿಸಿಕೊಂಡುದು ಹಳೆಯ ಕಥೆಯಾದರೂ ಸಿಹಿ ನೆನಪು ಮುದನೀಡುತ್ತಿದೆ… ಇಂದಿಗೂ.
ಮುಂದಕ್ಕೆ, ನಮ್ಮೂರಿನ ಸಮುದಾಯ ಬಾನಲಿ ಕೇಂದ್ರವು ನನ್ನ ನಿವೃತ್ತಿಯ ನಂತರದ ಪ್ರವೃತ್ತಿಗೆ ದಾರಿ ಮಾಡಿಕೊಟ್ಟಿದೆ. ನಮ್ಮ ಮನೆ ಮಾತಿನಲ್ಲಿ (ಹವ್ಯಕ), ಗೆಳತಿಯರೊಡನೆ ರೇಡಿಯೋಕ್ಕಾಗಿ ನಡೆಸಿಕೊಟ್ಟ ಹತ್ತಾರು ಕಾರ್ಯಕ್ರಮಗಳು ನನಗೆ ಅದರೊಂದಿಗಿನ ಒಲವನ್ನು ಇನ್ನಷ್ಟು ಹೆಚ್ಚಿಸಿದೆ. ಜೊತೆಗೆ ನಿವೃತ್ತ ಸೈನಿಕರ ಸಂದರ್ಶನಗಳನ್ನು ಇಂದಿಗೂ ನಿರಂತರವಾಗಿ ಸಂಯೋಜಿಸುತ್ತಾ, ಅದು ಪ್ರತಿ ಗುರುವಾರದಂದು ರೇಡಿಯೋ ಪಾಂಚಜನ್ಯ, ಪುತ್ತೂರು ಇದರಲ್ಲಿ ಬಿತ್ತರವಾಗುವಾಗ ಧನ್ಯತಾಭಾವದಿಂದ ನಮಿಸುವೆ…. ಸಹೃದಯರಿಗೆ. ನೀವೂ ಕೇಳ್ತೀರಾ…??
ಹಾಗಾದರೆ ರೇಡಿಯೋ ಕಿವಿ ಹಿಂಡಿ ಈಗಲೇ…!!
-ಶಂಕರಿ ಶರ್ಮ, ಪುತ್ತೂರು.
ರೇಡಿಯೋ ಬಗ್ಗೆ ನಿಮ್ಮ ಅನುಭವದ ಹಂಚಿಕೆ..ಹಾಗೂ ಅದರೊಳಗೆ ತಮ್ಮದೊಂದು ನಂಟು.. ಪಡಿಮೂಡಿಸಿರುವ ರೀತಿ ಚೆನ್ನಾಗಿದೆ…ಶಂಕರಿ ಮೇಡಂ
ಧನ್ಯವಾದಗಳು… ಸೋದರಿ ನಾಗರತ್ನ ಅವರಿಗೆ.
ಚೆನ್ನಾಗಿದೆ ಬರಹ
ಧನ್ಯವಾದಗಳು..ಸೋದರಿ ನಯನಾ ಅವರಿಗೆ.
ರೇಡಿಯೋ ಬಗ್ಗೆ ತುಂಬಾ ಸೊಗಸಾದ ನೆನಪುಗಳ ಮೆರವಣಿಗೆ ವಂದನೆಗಳು
ಗಾಯತ್ರಿ ಮೇಡಂ.. ಧನ್ಯವಾದಗಳು
ನಿಮ್ಮ ಬಾಲ್ಯಕಾಲದ ರೇಡಿಯೋ ಎಂಬ ಸೋಜಿಗದ ಬೆರಗುಗಣ್ಣಿನ ನೆನಪಿನೊಂದಿಗೆ, ಈಗಿನ ರೇಡಿಯೋದ ಜೊತೆಗಿನ ಒಡನಾಟವನ್ನು ವಿವರಿಸಿದ ಪರಿ ಸೊಗಸಾಗಿದೆ.
ನಿಮ್ಮ ರೇಡಿಯೋದೊಂದಿಗಿನ ನೆಂಟಿನ ಕಥೆ ರೇಡಿಯೋದಷ್ಟೇ ಸೋಜಿಗ ನೀಡಿತು. ಅದು ಹೇಗೆ ರೇಡಿಯೋದ ಧ್ವನಿಮುದ್ರಣಕ್ಕೆ ಹೆದರಿ ಕೆಮ್ಮು ಓಡಿ ಹೋಯಿತು? ಸೋಜಿಗವೇ ಸರಿ. ಮುದ ನೀಡಿದ ರೇಡಿಯೋ ಕಥನಕ್ಕಾಗಿ ಅಭಿನಂದನೆಗಳು.