ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’ – ಭಾಗ 2
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಆದಿತ್ಯ ಏನೂ ಹೇಳಿರಲಿಲ್ಲ.
ವಾರದಲ್ಲಿ ತಮ್ಮ ಬಟ್ಟೆ ಬರೆ ತೆಗೆದುಕೊಂಡು ದಂಪತಿಗಳು ಮನೆ ಬಿಟ್ಟಿದ್ದರು. ರಮ್ಯ-ಆದಿತ್ಯ ‘ಮನೆ ಎಲ್ಲಿದೆ?’ ಎಂದೂ ಕೇಳಿರಲಿಲ್ಲ, ಹೋಗಿ ಮನೆ ನೋಡಿರಲಿಲ್ಲ, ಮಕ್ಕಳು ಶಾಲೆಗೆ ಹೋಗಿ ಬಂದವರು “ಪಪ್ಪ ಅಜ್ಜಿ-ತಾತ ಇರುವ ಮನೆ ನಮ್ಮ ಶಾಲೆಗೆ ತುಂಬಾ ಹತ್ತಿರ. ಸಾಯಂಕಾಲ ಅವರ ಮನೆಗೇ ಹೋಗಿ ಹೋಂ ವರ್ಕ್ ಮಾಡ್ಕೊತೀವಿ.”
“ಏನೂ ಬೇಡ. ಸ್ಕೂಲು ಬಿಟ್ಟ ತಕ್ಷಣ ಅಮ್ಮಮ್ಮನ ಮನೆಗೆ ಹೋಗಿರಿ” ರಮ್ಯ ಹೇಳಿದಳು.
“ಅಲ್ಲಿ ನಮಗೆ ಯಾರು ಹೋಂ ವರ್ಕ್ ಮಾಡಿಸ್ತಾರೆ?” ಸಾನ್ವಿ ಕೇಳಿದ್ದಳು.
“ಅಲ್ಲಿ ನೀವು ಹೋಂವರ್ಕ್ ಮಾಡಬೇಡಿ, ಮನೆಗೆ ಬಂದ ಮೇಲೆ ಮಾಡಿ”
“ಯಾರು ಹೋಂ ವರ್ಕ್ ಮಾಡಿಸ್ತಾರೆ? ನೀನಾ, ಪಪ್ಪಾನಾ? ನಿಮ್ಮಿಬ್ಬರಿಗೂ ಅಷ್ಟು ಬಿಡುವೆಲ್ಲಿರತ್ತೆ?”
“ನಾನು ರಾತ್ರಿಗೆ ಬೇಕಾದ ಚಪಾತಿ, ಪಲ್ಯ ಏನಾದರೂ ಮಾಡ್ತಿರ್ತೀನಿ, ನಿಮ್ಮ ಪಪ್ಪ ಹೋಂವರ್ಕ್ ಮಾಡಿಸ್ತಾರೆ.”
“ಖಂಡಿತಾ ಪಪ್ಪ ಮಾಡಿಸಲ್ಲ, ನಾವು ತಾತನ ಹತ್ತಿರ ಹೋಗಿ ಹೋಂವರ್ಕ್ ಮಾಡಿಕೊಂಡು ಬರ್‍ತೀವಿ” ಎಂದಿದ್ದಳು ಸಾನ್ವಿ.
***
ಅತ್ತೆ-ಮಾವ ಮನೆ ಬಿಟ್ಟು ಬೇರೆ ಮನೆಗೆ ಹೋಗಿ ಒಂದು ತಿಂಗಳಾಗಿತ್ತು. ರಮ್ಯ ದೇವಿಯ ಬದಲು ಸಾವಿತ್ರಿ ಎನ್ನುವ ಕೆಲಸದವಳನ್ನು ಗೊತ್ತು ಮಾಡಿಕೊಂಡಿದ್ದಳು. ಅವಳು ಕೆಲಸಕ್ಕೆ ಬಂದ ದಿನವೇ ಹೇಳಿದ್ದಳು. ”ನಾನು ತರಕಾರಿ ಹೆಚ್ಚಿಕೊಡಲ್ಲ. ನೀವು ನೀರು ಕುಡಿದ ಲೋಟ, ಊಟದ ಡಬ್ಬಿಗಳು ಹಾಕಿದ್ರೆ ನಾನು ತೊಳೆಯುವುದಿಲ್ಲ. ಕಾಯಿ ತುರಿದುಕೊಡ್ತೀನಿ. ನಾನು ಬೆಳಿಗ್ಗೆ 7 ಗಂಟೆಗೆ ಬಂದು ಪಾತ್ರೆ ತೊಳೆದು, ಮನೆ ಗುಡಿಸಿ, ಸಾರಿಸಿ, ವಾಷಿಂಗ್‌ಮಿಷನ್‌ಗೆ ಬಟ್ಟೆ ಹಾಕಿ ಹೋಗ್ತೀನಿ, ಸಾಯಂಕಾಲ ಒಂದು ರೌಂಡ್ ಪಾತ್ರೆ ತೊಳೆದುಕೊಟ್ಟು ಬಟ್ಟೆ ಒಣಗಿ ಹಾಕ್ತೀನಿ, ನೀವು ಬೆಳಿಗ್ಗೆ ಕಾಫಿ, ತಿಂಡಿ ಕೊಡಬೇಕು. ಸಾಯಂಕಾಲಾನೂ ಕಾಫಿ ಕೊಡಬೇಕು.”
“ಸಂಬಳ ಎಷ್ಟು?”
“5,000ರೂ. ಕೊಡಿ. 4 ಜನದ ಬಟ್ಟೆ ಅಂದ್ರೆ ಸುಮಾರು 20 ಬಟ್ಟೆ, ನಿಮ್ಮನೆಗೆ ನೆಂಟರು ಬಂದು ಪಾತ್ರೆ, ಬಟ್ಟೆ ಜಾಸ್ತಿ ಬಿದ್ದರೆ ಹೆಚ್ಚು ಹಣ ಕೊಡಬೇಕು. ತಿಂಗಳಿಗೆ ಒಂದು ದಿನ ರಜ ಕೊಡಬೇಕು. ಭಾನುವಾರ ಲೇಟಾಗಿ ಬರ್‍ತೀನಿ. ಒಂದೇ ಹೊತ್ತು ಬರೋದು.”
“ಆಗಲಿ ಬೆಳಿಗ್ಗೆ ನೀನೇ ಹಾಲು ತೊಗೊಂಡು ಬಾ.”
“ಹಾಲು, ಮೊಸರು ತರಕ್ಕೆ ಸಂಬಳದ ಜೊತೆ 100ರೂ. ಜಾಸ್ತಿ ಕೊಡಬೇಕು. ಸಾಮಾನು, ತರಕಾರಿ, ಹಣ್ಣು, ಹೂವು ನಾನು ತರಲ್ಲ.”
ರಮ್ಯಾ ಒಪ್ಪಿದ್ದಳು. ಒಂದು ತಿಂಗಳು ಸಾವಿತ್ರಿ ಕೆಲಸ ಮಾಡಿ ಸಂಬಳ ತೆಗೆದುಕೊಂಡಳು. ಪಾದರಸದಂತೆ ಕೆಲಸ ಮಾಡುವ ಸಾವಿತ್ರಿ ರಮ್ಯಾಳಿಗೂ ಇಷ್ಟವಾಗಿದ್ದಳು. ಒಂದು ತಿಂಗಳಾಗುತ್ತಿದ್ದಂತೆ ಹೇಳಿದ್ದಳು. ”ಅಕ್ಕಾ ನನಗೆ ಒಬ್ಬರು ಲಾಯರ್ ಮನೆಯಲ್ಲಿ ಕೆಲಸ ಸಿಗುವ ಹಾಗಿದೆ. ಗಂಡ ಹೆಂಡತಿ ಇಬ್ಬರೂ ಲಾಯರ್ ಗಳು. ಇಬ್ಬರು ಮಕ್ಕಳಿದ್ದಾರೆ. ಅಡಿಗೆಯವರಿದ್ದಾರೆ. ನಾನು ಬೆಳಿಗ್ಗೆ ಆರೂವರೆ ಗಂಟೆಗೆ ಹೋಗಿ ಬಾಗಿಲಿಗೆ ನೀರು ಹಾಕಿ, ಕಸಗುಡಿಸಿ, ಒರೆಸಿ, ಪಾತ್ರೆ ತೊಳೆಯಬೇಕು. ಆಮೇಲೆ ಮಕ್ಕಳನ್ನು ಸ್ಕೂಲಿಗೆ ರೆಡಿ ಮಾಡಿ, ಬಾಕ್ಸ್‌ಗೆ ತಿಂಡಿ ಅಥವಾ ಊಟ ಹಾಕಿ ಶಾಲೆಗೆ ಬಿಡಬೇಕು. ಸಾಯಂಕಾಲ ಸ್ಕೂಲಿಂದ ಕರೆದುಕೊಂಡುಬರಬೇಕು. ರಾತ್ರಿ ಚಪಾತಿ, ಪಲ್ಯ ಮಾಡಬೇಕು. 15,000 ಕೊಡ್ತಾರಂತೆ.”
‘ನಮ್ಮನೆ ಕೆಲಸ ?”
“ಯಾರ ಮನೆಯದೂ ಒಪ್ಪಿಕೊಳ್ಳಲ್ಲ. 20,000 ಕೊಡಿ. ಬೇರೆ ಕೆಲಸಗಳನ್ನು ಮಾಡ್ತೀನಿ” ಅಂತ ಹೇಳಿದ್ದೀನಿ.
”ಬೇರೆ ಏನು ಕೆಲಸ ಮಾಡಕ್ಕಾಗತ್ತೆ?”
“ನಾನೇ ಹಾಲು, ಮೊಸರು ತರ್‍ತೀನಿ. ತರಕಾರಿ ತರ್‍ತೀನಿ. ಸಾಮಾನುಗಳನ್ನು ಡಬ್ಬಕ್ಕೆ ಹಾಕ್ತೀನಿ. ಬೇಕಾದ್ರೆ ಅಡಿಗೆಯವರಿಗೆ ತರಕಾರಿ ಹೆಚ್ಚಿಕೊಟ್ಟು, ಕಾಯಿ ತುರಿದುಕೊಡ್ತೀನಿ” ಅಂತ ಹೇಳಿದ್ದೀನಿ. ಅವರು ಒಪ್ತಾರೇಂತ ಕಾಣತ್ತೆ.”
“ನಮ್ಮನೆಗೆ ಯಾರನ್ನಾದರೂ ಗೊತ್ತು ಮಾಡಿಕೊಡು.”
“ನಾನೂ ನಾಲೈದು ಜನರಿಗೆ ಹೇಳಿದ್ದೀನಿ ಅಕ್ಕ ನೋಡೋಣ” ಎಂದಿದ್ದಳು ಸಾವಿತ್ರಿ,
ಒಂದು ವಾರದ ನಂತರ ಸಾವಿತ್ರಿ ಕೆಲಸಬಿಟ್ಟಿದ್ದಳು. ರಮ್ಯಾಗೆ ತುಂಬಾ ಕಷ್ಟವಾಗಿತ್ತು. ಪಂಕಜಮ್ಮ ನಾಲ್ಕು ದಿನ ತಮ್ಮ ಮನೆ ಕೆಲಸದ ಸುನಂದಾಳನ್ನು ಕಳಿಸಿದರು. ಐದನೆಯ ದಿನ ಹೇಳಿದರು.
“ಸುನಂದಾ ನಿಮ್ಮನೆ ಮಾಡಲ್ಲಂತೆ. ತುಂಬಾ ಪಾತ್ರೆ ಹಾಕ್ತಾರೆ. ತರಕಾರಿ ಹೆಚ್ಚಿಕೊಡು ಅಂತಾರೆ. ನಾಲ್ಕು ಮನೆ ಕೆಲಸ ಮಾಡುವ ನನಗೆ ಒಂದೇ ಮನೆಯಲ್ಲಿ ಅಷ್ಟು ಹೊತ್ತು ಕೆಲಸ ಮಾಡಕ್ಕಾಗಲ್ಲ.”
”ಏನಮ್ಮಾ ಮಾಡೋದು?”
“ನಿಮ್ಮತ್ತೆ-ಮಾವ ಬೇರೆ ಮನೆಗೆ ಹೋಗ್ತಿನಿ ಅಂದಾಗ ನೀವು ತಡೆಯಬೇಕಿತ್ತು. ಅವರು ಹೋಗಿ 2 ತಿಂಗಳಾಗ್ತಾ ಬಂತು. ನೀವಿಬ್ಬರೂ ಅವರ ಮನೆಗೆ ಹೋಗಿಲ್ಲಾಂದ್ರೆ ಏನರ್ಥ? ಮಗ ಸೊಸೆಯಾಗಿ ನಿಮ್ಮಿಬ್ಬರಿಗೂ ಜವಾಬ್ದಾರಿ ಬೇಡವಾ?”
”ಅವರಿಗೆ ಬೇರೆ ಮನೆಗೆ ಹೋಗುವ ಅವಶ್ಯಕತೆ ಏನಿತ್ತಮ್ಮ?”
“ನಾನೇ ಅವರ ಜಾಗದಲ್ಲಿದ್ದಿದ್ದರೆ ಇನ್ನೂ ಬೇಗ ಬೇರೆ ಮನೆ ಮಾಡಿಕೊಂಡು ಹೋಗ್ತಿದ್ದೆ”.
“ಏನಮ್ಮ ಹೀಗಂತಿದ್ದೀಯ?”
“ಇವತ್ತು ಭಾನುವಾರ ಅಲ್ವಾ? ಮಧ್ಯಾಹ್ನ ಇಲ್ಲಿಗೇ ಊಟಕ್ಕೆ ಬನ್ನಿ, ಮಾತಾಡೋಣ.”
“ನಾನು, ಮಕ್ಕಳು ಬರೀವಿ, ನಿನ್ನ ಅಳಿಯ ಯಾವುದೋ ಮದುವೆಗೆ ಹೋಗಿದ್ದಾರೆ.”
ರಮ್ಯ ಮನೆ ಕೆಲಸ ಮುಗಿಸಿ ಸ್ನಾನ ಮಾಡಿ ಆನ್‌ಲೈನ್‌ನಲ್ಲಿ ತಿಂಡಿ ತರಿಸಿದಳು. ನಂತರ ವಾಷಿಂಗ್‌ಮಿಷನ್‌ಗೆ ಬಟ್ಟೆ ಹಾಕಿ, ತನ್ನ ಹಾಗೂ ಗಂಡ-ಮಕ್ಕಳ ಬಟ್ಟೆಗಳನ್ನು ಐರನ್‌ಗೆ ಕೊಟ್ಟು, ತರಕಾರಿ, ಹಾಲು, ಮೊಸರು, ಹಣ್ಣು ತಂದಳು.
‘ಅಮ್ಮ – ಅಮ್ಮಮ್ಮ ಫೋನ್ ಮಾಡಿದ್ರು. ಗಂಟೆ ಒಂದಾಯ್ತು, ನೀವು ಯಾವಾಗ ಊಟಕ್ಕೆ ಬರುವುದೂಂತ ಕೇಳಿದರು”.
“ಆಯ್ತು ಹೋಗೋಣ. ನಾನು ಬಟ್ಟೆ ಒಣಗಿ ಹಾಕಿ ಬರ್‍ತೀನಿ.”
ಮೂವರೂ ನಡದೇ ಹೊರಟರು. ಪಂಕಜ ಆಲೂಗಡ್ಡೆ, ಈರುಳ್ಳಿ ಹುಳಿ ಮಾಡಿ ಹಪ್ಪಳ, ಸಂಡಿಗೆ ಕರೆದಿದ್ದರು. ಮಕ್ಕಳು ಖುಷಿಯಿಂದ ಊಟ ಮಾಡಿದರು. ಊಟದ ನಂತರ ಮಕ್ಕಳು ಪಕ್ಕದಲ್ಲೇ ಇದ್ದ ಫ್ರೆಂಡ್ಸ್ ಮನೆಗೆ ಹೊರಟರು.
“ಇಷ್ಟು ಹೊತ್ತಿನಲ್ಲಿ ಯಾಕೆ ಹೋಗ್ತಿದ್ದೀರಾ?”
“ಪಕ್ಕದಲ್ಲೇ ರಶ್ಮಿ ಇದ್ದಾಳೆ. ನಾನು, ಅವಳು ಒಂದು ಡ್ಯಾನ್ಸ್‌ಗೆ ಸೇರಿದ್ದೀವಿ. ಪ್ರಾಕ್ಟಿಸ್‌ಗೆ ಹೋಗ್ತೀವಿ. ರಶ್ಮಿ ತಮ್ಮ ರಾಜು ಜೊತೆ ಕ್ರಿಕೆಟ್ ಆಡಕ್ಕೆ ಸುಧೀ ನನ್ನ ಜೊತೆ ಬರ್‍ತಾನೆ.”
ರಮ್ಯ ತಂದೆ ಗಣೇಶ್‌ರಾವ್ ಮಲಗಲು ಹೋದರು. ತಾಯಿ ಮಗಳು ಮಾತನಾಡುತ್ತಾ ಕುಳಿತರು.
“ಅಮ್ಮಾ ಯಾರಾದರೂ ಕೆಲಸದವರಿಗೆ ಹೇಳು. ಇತ್ತೀಚೆಗೆ ಅಡಿಗೆ, ತಿಂಡಿ ಮಾಡಕ್ಕೂ ಆಗ್ತಿಲ್ಲ. ಒಬ್ಬ ಅಡಿಗೆಯವರು ಬೇಕು.”
‘ನಿಮ್ಮತ್ತೆ ಇದ್ದಾಗ ಈ ಸಮಸ್ಯೆಗಳು ಇರಲಿಲ್ಲ ಅಲ್ವಾ?”
”ಅವರೇನು ಕೆಲಸಕ್ಕೆ ಹೋಗಬೇಕಾಗಿತ್ತಾ? ನಿಧಾನವಾಗಿ ಎಲ್ಲಾ ಮಾಡ್ತಿದ್ರು”.
ಕೆಲಸಕ್ಕೆ ಹೋಗುವವರೆಲ್ಲಾ ಅಡಿಗೆಯವರನ್ನು ಇಟ್ಟುಕೊಳ್ತಾರಾ? ನಾನೇ ಅಡಿಗೆ, ತಿಂಡಿ ಮಾಡಿಕೊಂಡು ಕೆಲಸಕ್ಕೆ ಹೋಗಿರಲಿಲ್ವಾ? ನಿನಗೆ ಕೆಲಸ ಮಾಡಿ ಅಭ್ಯಾಸವಿಲ್ಲ. ಅದಕ್ಕೆ ಕಷ್ಟ ಆಗ್ತಿದೆ”.
“ಏನಮ್ಮಾ ಹೀಗಂತಿದ್ದೀಯಾ?”
“ದಾಕ್ಷಾಯಿಣಿ ಇದ್ದಾಗ ನೀನು ಏನು ಕೆಲಸ ಮಾಡ್ತಿದ್ದೆ ಹೇಳು.”
ರಮ್ಯ ಉತ್ತರಿಸಲಿಲ್ಲ.
“ಆಕೆ ಕತ್ತೆ ಚಾಕರಿ ಮಾಡ್ತಿದ್ರು. ಬೆಳಿಗ್ಗೆ ಬೇಗ ಎದ್ದು ಡಿಕಾಕ್ಷನ್ ಹಾಕಿ, ಹಾಲು, ನೀರು ಕಾಯಿಸಿ, ನಿಮ್ಮ ಬಾಟಲ್‌ಗಳಿಗೆ ನೀರು ತುಂಬಿಡ್ತಿದ್ರು. ತಿಂಡಿ ಮಾಡಿ, ಬಾಕ್ಸ್‌ಗೆ ಬೇರೆ ಏನಾದರೂ ಮಾಡಿ ನಾಲ್ಕು ಡಬ್ಬಿಗಳಿಗೆ ಹಾಕಿದ್ರು, ತರಕಾರಿ ಅವರೇ ಹೆಚ್ಚಿಕೊಳ್ತಿದ್ರು, ನೀವು ತಿಂದಿದ್ದ ತಟ್ಟೆ-ಲೋಟಗಳನ್ನು ಕೂಡ ಸಿಂಕ್‌ಗೆ ಹಾಕಿರಲಿಲ್ಲ. ಸಾಯಂಕಾಲ ತಿನ್ನಕ್ಕೆ ಏನಾದರೂ ಮಾಡಿದ್ದು, ರಾತ್ರಿಗೆ ಚಪಾತಿ ಹಿಟ್ಟು ಕಲಿಸಿಟ್ಟು, ಪಲ್ಯ ಮಾಡಿದ್ರು. ನೀನು ಚಪಾತಿ ಮಾಡ್ತಿದ್ದೆ ಅಷ್ಟೆ ತಾನೆ?”
“ಅಮ್ಮ ಅವರು ಹೇಳಿದ್ದಿದ್ರೆ ನಾನು ಕೆಲಸ ಮಾಡಿಕೊಡ್ತಿರಲಿಲ್ವಾ?”
“ಅದು ನಿನ್ನ ಮನೆ, ನೀನೇನು ಚಿಕ್ಕ ಹುಡುಗೀನಾ? ಹೇಳಿಸಿಕೊಂಡು ಕೆಲಸ ಮಾಡಕ್ಕೆ? ನಿಮ್ಮತ್ತೆ 18 ವರ್ಷದ ಹುಡುಗೀನಾ ಪಟಪಟ ಕೆಲಸ ಮಾಡಕ್ಕೆ? ನಿನಗೆ ನಿನ್ನ ಗಂಡಂಗೆ ಬೆಳಿಗ್ಗೆ ಎದ್ದು ರೆಡಿಯಾಗುವುದೇ ಒಂದು ಕಷ್ಟದ ಕೆಲಸ. ನೀವಿಬ್ಬರೂ ಒಂದೊಂದು ವಾಷ್‌ರೂಂ ಉಪಯೋಗಿಸಿದ್ರೆ ಮಕ್ಕಳು ಏನ್ಮಾಡ್ತಿದ್ರು?”
“ಅವರ ತಾತನ ರೂಮು ಉಪಯೋಗಿಸ್ತಿದ್ರು.
“ನಿಮ್ಮತ್ತೆ ಬೇಗ ಸ್ನಾನ ಮಾಡಿಬಿಡ್ತಿದ್ರು, ನಿಮ್ಮಾವ ವಾಕಿಂಗ್ ಹೋಗಿ ಹಾಲು, ಮೊಸರು, ತರಕಾರಿ ಹಿಡಿದು ಬರುವ ಹೊತ್ತಿಗೆ ಮಕ್ಕಳು ಒಬ್ಬರಾಗುತ್ತಲು ಒಬ್ಬರು ಸ್ನಾನಕ್ಕೆ ಹೋಗ್ತಿದ್ರು, ಅವರನ್ನು ಸ್ಕೂಲಿಗೆ ಬಿಡಲು ಹೋಗಬೇಕಿತ್ತು. ಈ ಮಧ್ಯೆ ನಿನ್ನ ಮಗ ‘ತಾತ ಯೂನಿಫಾರಂ ಹಾಕು, ಶೂ ಹಾಕೂಂತ, ಅವರಿಗೆ ಕಾಟ ಕೊಡ್ತಿದ್ದ. ಗಂಡ-ಹೆಂಡತಿ ತಿಂಡಿ ತಿನ್ನುತ್ತಿದ್ದುದ್ದೇ 10-30ಗೆ…..”
“ಅಮ್ಮ…….”
ನನ್ನ ಮಾತಿನ್ನೂ ಮುಗಿದಿಲ್ಲ. ನಿಮ್ಮ ತಂದೆ ನಿಮ್ಮ ಮಾವ ಒಂದೇ ವಯಸ್ಸಿನವರು.ನಿಮ್ಮಾವ ಮಾಡುವಷ್ಟು ಕೆಲಸ ನಿಮ್ತಂದೆ ಮಾಡ್ತಾರಾ? ನಿಮ್ಮಾವ ಎಲ್ಲರ ಬಟ್ಟೆ ತೆಗೆದುಕೊಂಡು ಹೋಗಿ ಐರನ್‌ಗೆ ಕೊಡೋರು. ಅವರೇ ವಾಪಸ್ಸು ತರ್‍ತಿದ್ರು. ನೀನು ನಿನ್ನ ಗಂಡ ಯಾವ ಜವಾಬ್ದಾರಿ ತೆಗೆದುಕೊಂಡಿದ್ರಿ?”
“ಸಾಮಾನು ನಾವೇ ತರಿಸ್ತಿದ್ದಿದ್ದು….”
“ಆನ್‌ಲೈನ್‌ನಲ್ಲಿ ಸಾಮಾನು ತರಿಸ್ತಿದ್ದೆ. ಯಾವತ್ತಾದರೂ ಅವುಗಳನ್ನು ಡಬ್ಬಿಗಳಿಗೆ ಹಾಕಿದ್ದೀಯಾ? ನೀವು ಏನು ಕೆಲಸ ಮಾಡ್ತಿದ್ರಿ? ಹೋಂ ವರ್ಕ್ ಕೂಡ ನಿಮ್ಮ ಮಾವಾನೇ ಮಾಡಿಸ್ತಿದ್ರು.
“ಇರಬಹುದು…..”
“ನಿನಗೆ ಮನೆಗೆ ಬಂದ ಮೇಲೂ ಅತ್ತೆ-ಮಾವನ ಜೊತೆ ಮಾತನಾಡುವುದಕ್ಕೆ ಬಿಡುವು ಇರಲಿಲ್ಲ. ಫೋನ್ ಕೈಯ್ಯಲ್ಲಿತ್ತು. ನಿಮ್ಮತ್ತೆ-ಮಾವ ಇಬ್ಬರೂ ಬಿ.ಪಿ. ಪೇಷೆಂಟ್ಸ್, ಇಷ್ಟು ವರ್ಷಗಳಲ್ಲಿ ನೀವೇ ಕರೆದುಕೊಂಡು ಹೋಗಿ ಅವರಿಗೆ ಕಂಪ್ಲೀಟ್ ಚೆಕಪ್ ಮಾಡಿಸಿದ್ದೀರಾ? ಅವರು ತಮ್ಮ ಆದಾಯದಲ್ಲೇ ಹಾಲು, ಕಾಫಿ ಪುಡಿ, ಮೊಸರು ತರ್‍ತಿದ್ರು, ತಮ್ಮ ಔಷಧಿ ತಾವೇ ತೆಗೆದುಕೊಳ್ತಿದ್ರು, ಐರನ್ ಬಟ್ಟೆಗಳಿಗೆ ಅವರೇ ದುಡ್ಡು ಕೊಡ್ತಿದ್ರು, ನಿಮ್ಮ ಜೊತೆ ಅವರು ಇದ್ದಿದ್ದರಿಂದ ಅವರಿಗೆ ಏನು ಅನುಕೂಲವಾಗಿತ್ತು ಹೇಳು.”
‘ಅಮ್ಮ ಎಲ್ಲಾ ವಿಚಾರಕ್ಕೂ ನನ್ನಲ್ಲೇ ತಪ್ಪು ಹುಡುಕಬೇಡ.”
ತಪ್ಪು ಎದ್ದು ಕಾಣಿರುವಾಗ ಹುಡುಕುವುದೇನು ಬಂತು?”
”ಈಗ ನಾವೇನು ಮಾಡಬೇಕು ಅದನ್ನಾದರೂ ಹೇಳು.”
“ಅವರು ಮನೆ ಬಿಡಲು ನೀವೇ ಕಾರಣ. ಅವರು ನೀವು ಕರೆದರೂ ವಾಪಸ್ಸು ಬರಲ್ಲ. ಆದರೆ ನೀವಿಬ್ಬರೂ ಹೋಗಿ ‘ಸಾರಿ’ ಕೇಳಿ.”
”ನಾವೇನು ತಪ್ಪು ಮಾಡಿದ್ದೀನೀಂತ ಸಾರಿ ಕೇಳಬೇಕು?”
“ಸಾನ್ವಿ- ಸುಧೀ ಎಲ್ಲಾ ಹೇಳಿದ್ದಾರೆ. ನಿಮ್ಮ ದೃಷ್ಟಿಯಲ್ಲಿ ನಿಮ್ಮ ಮಾವ ನಿಮಗೆ ಹೇಳದೆ ಮೈಸೂರಿಗೆ ಹೋಗಿದ್ದು ಮೊದಲನೇ ತಪ್ಪು. ನಿಮ್ಮತ್ತೆ ತಲೆನೋವಿದ್ದರೂ ನಿಮಗೆ ಬಡಿಸದೇ ಇದ್ದಿದ್ದು ಎರಡನೇ ತಪ್ಪು. ತಲೆನೋವಿದ್ದರೂ ಡಬ್ಬಿಗಳನ್ನು ತಂದು ಡೈನಿಂಗ್ ಟೇಬಲ್ ಮೇಲಿಡದೇ ಇದ್ದಿದ್ದು ಮೂರನೇ ತಪ್ಪು. ಅದಕ್ಕೆ ನೂರೆಂಟು ಮಾತಾಡಿದ್ರಿ, ನಿಮ್ಮತ್ತೆ ತಲೆನೋವಿಗೆ ಏನಾದರೂ ಟ್ಯಾಬ್ಲೆಟ್ ಕೊಟ್ರಾ? ಹೇಗಿದ್ದೀರಾಂತ ಕೇಳಿದ್ರಾ?”
”ಹೌದು ನಾವೇ ಕೆಟ್ಟವರು. “
‘ನಿಮ್ಮಾವ-ಅತ್ತೆಗೆ ನಿಮ್ಮ ಮನೆ ಬಿಡುವ ಯೋಚನೆ ಇರಲಿಲ್ಲ……….”
“ದಯವಿಟ್ಟು ನಮ್ಮತ್ತೆ-ಮಾವನ ವಿಚಾರ ಮಾತಾಡುವುದನ್ನು ನಿಲ್ಲಿಸಿ, ನನ್ನ ಸಮಸ್ಯೆಗೆ ಪರಿಹಾರ ಹೇಳು.”
“ನಿಮ್ಮಿಬ್ಬರಿಂದ 2 ಲಕ್ಷ ಸಂಬಳ ಬರಲ್ವಾ?”
“ಬರತ್ತೆ.”
“ಹೇಗೋ ಮನೆ ಬಾಡಿಗೆಯಿಲ್ಲ. 10,000 ಕೊಟ್ಟು ಅಡಿಗೆಯವರನ್ನು ಇಟ್ಟುಕೋ. ಹದಿನೈದು ಸಾವಿರಕೊಟ್ಟು ಕೆಲಸದವರನ್ನು ಇಟ್ಟುಕೋ, ಆಗ ನಿನ್ನ ಸಮಸ್ಯೆ ಪರಿಹಾರವಾಗತ್ತೆ.’
”ತಮಾಷೆ ಮಾಡ್ತಿದ್ದೀಯಾಮ್ಮಾ?”
ತಮಾಷೆಯಲ್ಲ ರಮ್ಯ ನಿಜ ಹೇಳಿದ್ದೀನಿ. ಮಗಳಿಗೆ ಕಷ್ಟವಾಗತ್ತೇಂತ ನಾನು ನಿನಗೆ ಸಹಾಯ ಮಾಡಬಹುದು. ಆದರೆ ಅದೆಲ್ಲಾ ಎಷ್ಟು ದಿನ ಸಾಧ್ಯ? ನನಗೂ ವಯಸ್ಸಾಗಿದೆ.ಮೊದಲಿನ ಹಾಗೆ ಕೆಲಸ ಮಾಡಕ್ಕಾಗ್ತಿಲ್ಲ. ನಿಮ್ಮ ತಂದೆ ‘ಯಾವುದಾದರೂ ಒಳ್ಳೆಯ ವೃದ್ಧಾಶ್ರಮಕ್ಕೆ ಸೇರೋಣ’ ಅಂತಿದ್ದಾರೆ. ‘ನಾನೇ ಬೇಡ, ಎಷ್ಟು ದಿನಗಳು ಸಾಧ್ಯವೋ ಅಷ್ಟುದಿನ ಸ್ವತಂತ್ರವಾಗಿರೋಣ’ ಅಂತಿದ್ದೇನೆ.”
“ಅಣ್ಣ ಕೆ.ಪಿ.ಸಿ.ಯಲ್ಲಿ ಇಂಜಿನಿಯರ್ ತಾನೆ? ಅವನು ಬೆಂಗಳೂರಿಗೆ ವರ್ಗಮಾಡಿಸಿಕೊಳ್ಳಕ್ಕಾಗಲ್ವಾ?”
“ಅವನು ಬಂದರೂ ನಾವು ಒಟ್ಟಿಗೆ ಇರಕ್ಕಾಗುತ್ತದಾ ರಮ್ಯ? ಅವನು ಕೆಲಸಕ್ಕೆ ಹೋಗ್ತಾನೆ. ಅವನ ಹೆಂಡತಿ ಮನೆಯಲ್ಲೇ ಯೋಗ ಹೇಳಿಕೊಡ್ತಾಳೆ. ಮಕ್ಕಳು ಸ್ಕೂಲಿಗೆ ಹೋಗ್ತಾರೆ.ನಾವು ಮನೆಯಲ್ಲಿರುವಾಗ ಜವಾಬ್ದಾರಿ ತೆಗೆದುಕೊಳ್ಳದೆ ಇರಕ್ಕಾಗಲ್ಲ. ನಮಗೂ ವಯಸ್ಸಾಯಿತು. ಮೊದಲಿನ ಹಾಗೆ ಕೆಲಸ ಮಾಡಕ್ಕಾಗಲ್ಲ. ಮನಸ್ತಾಪ, ಜಗಳ ಪುನಃ ಬೇರೆಯಾಗುವುದು ಯಾಕೆ ಬೇಕು ಹೇಳು.” ರಮ್ಯಾ ಮಾತಾಡಲಿಲ್ಲ. ತನ್ನ ತಾಯಿ ಯೋಚಿಸುತ್ತಿರುವಂತೆ ಅತ್ತೆಯೂ ಯೋಚಿಸಿರಬಹುದಲ್ಲವೆ? ನಾನು -ಆದಿತ್ಯ ಇಬ್ಬರೂ ಅತ್ತೆ – ಮಾವಂದಿರನ್ನು ಉದಾಸೀನ ಮಾಡಿದೆವಾ?” ಅವಳು ತನ್ನನ್ನೇ ಪ್ರಶ್ನಿಸಿಕೊಂಡಳು.
ಈ ಕಿರುಕಾದಂಬರಿಯ ಹಿಂದಿನ ಭಾಗ ಇಲ್ಲಿದೆ: https://www.surahonne.com/?p=39659
(ಮುಂದುವರಿಯುವುದು)
–ಸಿ.ಎನ್. ಮುಕ್ತಾ, ಮೈಸೂರು.
ಬಹಳ ನೈಜವಾಗಿ ಮೂಡಿಬಂದಿದೆ. ಇದು ಬಹಳ ಮನೆಗಳ ಕಥೆ ಆಗಿದೆ. ರಮ್ಯಾ ಈಗಲೇ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.
ಸಂಜೆಯ ಹೆಜ್ಜೆಗಳು ಕಾದಂಬರಿ..ಸಹಜ ಸುಂದರವಾಗಿ ಮುಂದುವರಿಯುತ್ತಿದೆ…ಪ್ರತಿಯೊಬ್ಬರು ತಮ್ಮ ತಮ್ಮ ಬದುಕಿನ ಕಡೆಗೆ ತಿರುಗಿ…ಚಿಂತನೆ ಗೆ ಹಂಚುವಂತೆ..ಮುಂದೆ ಏನು ಎಂಬಂತೆ ಸಾಗುತ್ತಿದೆ…
ಸುಂದರ ಕಾದಂಬರಿ. ಇಂದಿನ ವಾಸ್ತವವನ್ನು ಎತ್ತಿ ಹಿಡಿಯುತ್ತಿದೆ.
ನನ್ನ ಕಾದಂಬರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ
ಸುಚೇತಾ ಹಾಗೂ ನಾಗರತ್ನ ಸೋದರಿಯರಿಗ
ಧನ್ಯವಾದಗಳು.
ಕಥೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಮುಂದಿನ ಸಂಚಿಕೆಯನ್ನು ಕಾತುರದಿಂದ ಕಾಯುವಂತೆ ಮಾಡಿದೆ ವಂದನೆಗಳು ಮುಕ್ತ ಮೇಡಂ
ಸಹಜ, ಸುಂದರ ಕಥಾವಸ್ತುವನ್ನು ಒಳಗೊಂಡ ‘ಸಂಜೆಯ ಹೆಜ್ಜೆಗಳು`, ಸುರಹೊನ್ನೆಯಲ್ಲಿ ತನ್ನ ಸ್ಪಷ್ಟ ಹೆಜ್ಜೆಯನ್ನು ಮೂಡಿಸುತ್ತಿದೆ…ಧನ್ಯವಾದಗಳು ಮೇಡಂ.
ತುಂಬಾ ಚೆನ್ನಾಗಿಮುಂದುವರೆದಿದೆ. ರಮ್ಯಳ ತಾಯಿ ನ್ಯಾಯಯುತವಾಗಿ ಮಾತಾಡಿದ್ದಾರೆ.
ಸುಜಾತಾ ರವೀಶ್
ಹೆಣ್ಣುಮಕ್ಕಳ ತಾಯಂದಿರು ಇಷ್ಟರಮಟ್ಟಿಗೆ ಬುದ್ಧಿ ಮಾತುಗಳನ್ನು ಹೇಳಿದರೆ ಎಷ್ಟೋ ಮನೆಗಳ ಹಲವಾರು ಸಮಸ್ಯೆಗಳು ಬಗೆಹರಿದು ಸುಖೀ ಕುಟುಂಬದ ಸ್ಥಾಪನೆಯಾಗುವುದು ಖಂಡಿತಾ.