ದೋಸೆಗಳ ಕಾರುಬಾರು!.
“ದೋಸೆ” ಎಂದೊಡನೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ!. ಏಕೆಂದರೆ ಈಗ ಎಲ್ಲಾ ಹೋಟೆಲ್ಗಳಲ್ಲೂ ದೋಸೆಗಳದ್ದೇ ಕಾರುಬಾರು. ದೋಸಾ ಪಾಯಿಂಟ್ ವಿಶೇಷ ಹೋಟೆಲ್ಗಳು ಇವೆ. ಆಬಾಲವೃದ್ಧರಾಗಿ ದೋಸೆ ಎಲ್ಲರಿಗೂ ರುಚಿಸುತ್ತದೆ. ಬಗೆ ಬಗೆಯ ದೋಸೆಗಳು ಈಗ ಹೋಟೆಲ್ ಗಳಲ್ಲಿ ಸಿಗುತ್ತವೆ. ಆದರೂ ಕೂಡ ಮನೆಯಲ್ಲಿ ಮಾಡುವ ದೋಸೆಗಿಂತ ಹೋಟೆಲ್ನಲ್ಲಿ ಮಾಡುವ ದೋಸೆಗಳೇ ಹೆಚ್ಚು ಪ್ರಿಯವಾಗುತ್ತವೆ!. ಈಗ ಏಕೆ ಈ ದೋಸೆ ವಿಷಯ ಎಂದು ಕೇಳುತ್ತಿದ್ದೀರಾ? ಸ್ನೇಹಿತರೆ, ಮಾರ್ಚ್ 3 ರಂದು “ವಿಶ್ವದೋಸೆ ದಿನ” ಅದಕ್ಕೆ ನಾನು ಈ ಬಗೆ ಬಗೆಯ ದೋಸೆಗಳ ಪ್ರಸ್ತಾಪ ಮಾಡುತ್ತಿದ್ದೇನೆ!. ಬನ್ನಿ ದೋಸೆ ಕುಟುಂಬದ ಬಗ್ಗೆ ತಿಳಿದುಕೊಳ್ಳೋಣ.
ಅಕ್ಕಿ ದೋಸೆ, ರಾಗಿ ದೋಸೆ, ರವೆ ದೋಸೆ, ಗೋಧಿ ದೋಸೆ ಇದ್ದ ಕಾಲ ಒಂದಿತ್ತು. ಈಗ ದೋಸೆಗಳ ಹೆಸರು ಹೇಳಬೇಕೆಂದರೆ ಉದ್ದನೆಯ ಪಟ್ಟಿ ಇದೆ. ಮಸಾಲೆ ದೋಸೆ, ಸಟ್ ಮಸಾಲೆ ದೋಸೆ, ನೀರ್ ದೋಸೆ, ಸಾದಾ ದೋಸೆ, ಹಲವು ತರಕಾರಿಗಳಿಂದ ಮಾಡಿರುವ ದೋಸೆ, ಸೊಪ್ಪಿನ ದೋಸೆ ಹೀಗೆ ದೋಸೆ ಕುಟುಂಬ ದೊಡ್ಡದಾಗಿದೆ!. ನಾನು ಮೊದಲೇ ಹೇಳಿದಂತೆ ಮೂರ್ನಾಲ್ಕು ರೀತಿಯ ದೋಸೆಗಳು ಇದ್ದ ಕಾಲ ಇತ್ತು. ಈಗ 100 ರಿಂದ 150 ಕ್ಕೂ ಹೆಚ್ಚು ದೋಸೆಗಳು ಬಾಯಲ್ಲಿ ನೀರೂರಿಸುತ್ತವೆ!.
ಜೊತೆಗೆ ದೋಸೆ ಮತ್ತಷ್ಟು ರುಚಿಸಲು ಅದರ ಜೊತೆ ಸಾಗು, ಚಟ್ನಿ, ಆಲೂಗೆಡ್ಡೆ ಪಲ್ಯ, ಸಾಂಬಾರ್ ಮುಂತಾದ ಹೆಸರಿನ ಇವುಗಳ ಪಟ್ಟಿಯೂ ಕೂಡ ಹೆಚ್ಚಿದೆ.
ಕೆಲವರಿಗೆ ಈರುಳ್ಳಿ ದೋಸೆ ಎಂದರೆ ತುಂಬಾ ಅಚ್ಚುಮೆಚ್ಚು. ಅದರಲ್ಲೂ ಆಲೂಗಡ್ಡೆ, ಮಸಾಲೆ ಜೊತೆಯಲ್ಲಿ ದೋಸೆ ಸವಿಯುವುದು… ದಕ್ಷಿಣ ಭಾರತೀಯರ ಪ್ರಮುಖ ಉಪಹಾರವಾಗಿ ದೋಸೆ ಪ್ರಮುಖ ಪಾತ್ರ ವಹಿಸುತ್ತದೆ. ದೋಸೆ ಬಣ್ಣ, ಗಾತ್ರ, ರುಚಿಗಳಲ್ಲೂ ಕೂಡ ವೈವಿಧ್ಯತೆಯನ್ನು ಹೊಂದಿದೆ. ಒಂದೊಂದು ಹೋಟೆಲ್ನಲ್ಲಿ ಒಂದೊಂದು ರೀತಿಯ ವೈವಿಧ್ಯಮಯ ದೋಸೆಗಳ ಮಹಾಪೂರವೇ ನಮಗೆ ಕಾಣಸಿಗುತ್ತದೆ. ಅದರಿಂದಾಗಿ ನಾವು ಒಮ್ಮೆ ತಿಂದ ದೋಸೆ ಚೆನ್ನಾಗಿತ್ತು ಎಂದರೆ ಮತ್ತೆ ಅದೇ ಹೋಟೆಲಿಗೆ ಕುಟುಂಬ ಸಮೇತ ಹೋಗುತ್ತೇವೆ. ಅದರಿಂದಾಗಿ ಹಲವು ಹೋಟೆಲ್ ಗಳು ಸದಾ ಗ್ರಾಹಕರಿಂದ ತುಂಬಿರುತ್ತದೆ. ಕುಳಿತು ತಿನ್ನುವ ದೋಸೆ ಹೋಟೆಲ್ಗಳು ಇವೆ. ನಿಂತು ತಿನ್ನುವ ದೋಸೆ ಹೋಟೆಲ್ ಗಳು ಕೂಡ ನಮಗೆ ಕಾಣಿಸುತ್ತವೆ.
ಒಮ್ಮೊಮ್ಮೆ ದೋಸೆ ಆರ್ಡರ್ ಮಾಡಿದರೆ ಅರ್ಧ ಗಂಟೆ ನಂತರ ನಮಗೆ ದೋಸೆ ಬರುವುದು. ಹಲವು ಹೋಟೆಲ್ಗಳಲ್ಲಿ ದೋಸೆ ದುಬಾರಿಯಾದರೂ ಅದಕ್ಕೆ ತಕ್ಕಂತಹ ದೋಸೆ ಇರುತ್ತವೆ. ಕೆಲವು ಕಡೆ ದೋಸೆ ಸ್ವಲ್ಪವೂ ಕೂಡ ಇಷ್ಟವಾಗುವುದಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದೆಡೆ ಸಾಮಾನ್ಯ ರಸ್ತೆ ಬದಿಯ ಚಿಕ್ಕ ಹೋಟೆಲ್ಗಳಲ್ಲಿ ಮಾಡಿಕೊಡುವ ದೋಸೆ ಕಡಿಮೆ ಮೊತ್ತವಾದರೂ, ರುಚಿಯಲ್ಲಿ ಮಾತ್ರ ದೊಡ್ಡ ಹೋಟೆಲ್ಗಳನ್ನೇ ಮೀರಿಸುತ್ತವೆ. ಕೆಲವರಿಗೆ ಯಾವುದೇ ಹೋಟೆಲ್ ನಲ್ಲೂ ಕೂಡ ತಿಂದರೂ ದೋಸೆ ಇಷ್ಟವೇ ಆಗುವುದಿಲ್ಲ. “ಅವರವರ ಭಾವಕ್ಕೆ ಅವರವರ ಭಕುತಿಗೆ”- ಎನ್ನುವಂತೆ ದೋಸೆ ಎಲ್ಲರ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಸೆಳೆದುಬಿಟ್ಟಿದೆ.
ಸಾಮಾನ್ಯವಾಗಿ ರಾತ್ರಿಯಲ್ಲೀ ದೋಸೆ ಹಿಟ್ಟು ತಯಾರು ಮಾಡಿ, ಬೆಳಿಗ್ಗೆ ತಿಂದರೆ ರುಚಿ ಹೆಚ್ಚುತ್ತಿತ್ತು. ಆದರೆ ಈಗ ಆ ರೀತಿಯ ತಾಪತ್ರಯ ಇಲ್ಲ. ದಿಡೀರನೆ ವಿವಿಧ ಬಗೆಯ ಹಿಟ್ಟುಗಳನ್ನು ಕಲಸಿ, ಅಲ್ಲೇ ದೋಸೆ ಸಂಪಣ ರೆಡಿಯಾಗುತ್ತದೆ. ಇದರಿಂದಾಗಿ ದೋಸೆಗಳು ಹುಳಿ ಬರುವುದಿಲ್ಲ. ಒಂದು ರೀತಿಯಲ್ಲಿ ರುಚಿ ಹೆಚ್ಚಿಸುತ್ತದೆ.
ಆದರೂ ಕೂಡ ನಮ್ಮ ಬಾಲ್ಯದ ದಿನಗಳು ಈ ಕ್ಷಣದಲ್ಲಿ ನನಗೆ ತುಂಬಾ ತುಂಬಾ ನೆನಪಾಗುತ್ತವೆ!. ಏಕೆಂದರೆ ಗ್ರಾಮೀಣ ಪ್ರದೇಶದಲ್ಲಿ ದೋಸೆ, ಇಡ್ಲಿ ಮಾಡಬೇಕು ಎಂದರೆ ಹಬ್ಬಗಳಲ್ಲಿ ಮಾತ್ರ ಎಂಬಂತಾಗಿತ್ತು. ಏಕೆಂದರೆ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸೇರುತ್ತಿದ್ದರಿಂದ ದೋಸೆ, ಇಡ್ಲಿ ಮಾಡುವುದೂ ಎಂದರೆ ಕಷ್ಟದ ಕೆಲಸ. ತಿಂಡಿಯನ್ನು ಎಲ್ಲರೂ ಒಟ್ಟಾಗಿ ಸೇರಿ ಮಾಡುತ್ತಿದ್ದರು. ಅದರಲ್ಲೂ ಮಾಡುವ ವಿಧಾನ ಉದ್ದಿನ ಬೇಳೆ, ಅಕ್ಕಿ ಎಲ್ಲವನ್ನು ನೀರಿನಲ್ಲಿ ನೆನೆಸಿ, ಅದನ್ನು ರಾತ್ರಿ ಕಲ್ಲಿನಲ್ಲಿ ರುಬ್ಬಿ ನಂತರ ಬೆಳಿಗ್ಗೆ ದೋಸೆಗೆ ಬೇಕಾಗಿದ್ದ ಸಾಗು, ಪಲ್ಯ, ಚಟ್ನಿ ಮಾಡುತ್ತಿದ್ದರು. ಅದು ಕಲ್ಲಿನಲ್ಲಿ ರುಬ್ಬಿ ಮಾಡಿದ್ದರಿಂದ ರುಚಿ ಹೆಚ್ಚುತ್ತಿತ್ತು. ಸ್ಥಳೀಯವಾಗಿ ಸಿಗುತ್ತಿದ್ದ ತರಕಾರಿಗಳ ಜೊತೆಗೆ ಸಾಗು ಮಾಡಿ ತಿನ್ನುವುದೇ ಒಂದು ರೀತಿಯಲ್ಲಿ ಮಜಾ ನಮಗೆ ಸಿಗುತ್ತಿತ್ತು!. ಜೊತೆಗೆ ಕಾಯಿ ಚಟ್ನಿ ಕೂಡ ಇರುತ್ತಿತ್ತು. ಅದರಲ್ಲೂ ನಮ್ಮದು ಒಟ್ಟು ಕುಟುಂಬ ಕನಿಷ್ಠ 40 ರಿಂದ 50 ಜನರು ಇರುತ್ತಿದ್ದೆವು. ಇಂತಹ ಸಮಯದಲ್ಲಿ ಎಲ್ಲರಿಗೂ ದೋಸೆ ಮಾಡಿ ಕೊಡುವುದು ಎಂದರೆ ಒಂದು ಸಾಹಸವೇ ಸರಿ. ಆಗಲು ಕೂಡ ಹಿರಿಯರು ಮೊದಲು ಮಕ್ಕಳಿಗೆ ದೋಸೆಯನ್ನು ಕೊಟ್ಟು ನಂತರ ದೊಡ್ಡವರಿಗೆ ಕೊಡುತ್ತಿದ್ದರು. ಆಗಲು ಕೂಡ ಒಂದು ವಿಧಾನ ಅನುಸರಿಸುತ್ತಿದ್ದರು. ಕೆಲವರು ಬಿಸಿ ಬಿಸಿ ದೋಸೆ ಇಷ್ಟ ಪಡುವವರಿಗೆ ಮೊದಲು ದೋಸೆ ಕೊಡುತ್ತಿದ್ದರು. ನಂತರ ಕನಿಷ್ಠ 20 ರಿಂದ 30 ದೋಸೆ ಮಾಡಿದ ನಂತರ ಎಲ್ಲರನ್ನು ಕರೆದು ಒಬ್ಬೊಬ್ಬರಿಗೆ ಒಂದೊಂದು ದೋಸೆ ಹಾಕಿ, ಆ ಒಂದು ಸಂದರ್ಭವನ್ನು ನಿಭಾಯಿಸುತ್ತಿದ್ದರು.
ಸೌದೆ ಒಲೆಯಲ್ಲಿ ಮಾಡಿದ ದೋಸೆ ತಿಂದರೆ ಸಿಗುವ ರುಚಿಯೇ ಬೇರೆ. ಕಬ್ಬಿಣದ ಕಾವಲಿ ಮೇಲೆ ದೋಸೆ ಮಾಡುವುದರಿಂದ ಹಿಡಿದು ಈಗ ಇಂಡಕ್ಷನ್ ಸ್ಟವ್ ಮೇಲೆ ನಾನ್ ಸ್ಟಿಕ್ ತವಾದಲ್ಲಿ ದೋಸೆ ಮಾಡುವ ಕಾಲ ಬಂದಿದೆ.
ದೋಸೆ ಜೊತೆಯಲ್ಲಿ ಏನೆಲ್ಲ ಪದಾರ್ಥಗಳು ಇರುತ್ತವೆ, ಅದರ ಮೇಲೆ ನಾವು ತಿನ್ನುವ ದೋಸೆ ಸಂಖ್ಯೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಹೋಟೆಲ್ ನಲ್ಲಿ ದೋಸೆ ಒಂದು ಎರಡು ಹೆಚ್ಚೆಂದರೆ ಮೂರು ತಿನ್ನುತ್ತೇವೆ. ಆದರೆ ಮನೆಯಲ್ಲಿ ಮಾಡಿದ ದೋಸೆಯನ್ನು ಒಬ್ಬೊಬ್ಬರು ಕೂಡ ಕನಿಷ್ಠ ಏಳೆಂಟು ದೋಸೆ ತಿನ್ನುವವರು ಕೂಡ ಇದ್ದಾರೆ. ಕೆಲವರು ದೋಸೆ ಜೊತೆಯಲ್ಲಿ ಜಾಮೂನ್ ಕೂಡ ತಿನ್ನುತ್ತಾರೆ ಅಂದರೆ ಸಿಹಿ ಪದಾರ್ಥಗಳ ಜೊತೆಯಲ್ಲಿ ದೋಸೆ ಸವಿಯುತ್ತಿದ್ದರೆ ಅದರ ಟೇಸ್ಟೇ ಬೇರೆ.
ದೊಡ್ಡವರಿಗಿಂತ ಮಕ್ಕಳಿಗೆ ದೋಸೆ ಎಂದರೆ ತುಂಬಾ ಇಷ್ಟ. ಆಧುನಿಕ ಶೈಲಿ ಗೆ ಸಂಬಂಧಿಸಿದಂತೆ ದೋಸೆ ಈಗ ಮನೆಯಲ್ಲಿ ತಯಾರಾಗುತ್ತವೆ. ಆಕಾರದಲ್ಲೂ ಕೂಡ ದೋಸೆ ಬದಲಾಗಿವೆ. ತಾಯಂದಿರು ದೋಸೆಗೆ ವಿವಿಧ ರೀತಿಯ ಪದಾರ್ಥಗಳನ್ನು ಹಾಕಿ ದೋಸೆಯ ಮೂಲಕ ಪೌಷ್ಟಿಕ ಅಂಶ ಮಕ್ಕಳಿಗೆ ಸೇರುವಲ್ಲೂ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದೋಸೆ ತಿನ್ನುವ ನೆಪದಲ್ಲಿ ಸೊಪ್ಪು, ತರಕಾರಿ ಇನ್ನಿತರ ಪ್ರೋಟೀನ್ ಕೂಡ ಸಿಗುತ್ತಿದೆ. ಅದರಲ್ಲೂ ಮೊಟ್ಟೆ ದೋಸೆ ಕೂಡ ಈಗ ಬಹಳ ಪ್ರಸಿದ್ಧಿ ಪಡೆಯುತ್ತಿದೆ. ನಾನ್ ವೆಜ್ ದೋಸೆಗಳು ಕೂಡ ಈಗ ಹೆಚ್ಚಿವೆ. ಹೀಗೇನೂ ನಾವು ಮಿಕ್ಸಿಯಲ್ಲಿ ರುಬ್ಬಬೇಕಾಗಿಲ್ಲ ಕಲ್ಲಿನಲ್ಲೂ ರುಬ್ಬುವ ಕಾಲ ಮುಗಿದಿದೆ. ಅಂಗಡಿಗಳಲ್ಲಿ ವಿವಿಧ ಬಗೆಯ ಕಾಳುಗಳ ಸಂಪಣ (ಹಿಟ್) ಸಿಗುತ್ತದೆ. ಇದರಿಂದಾಗಿ ದೋಸೆ ಮಾಡುವುದು ಕೂಡ ಈಗ ಸುಲಭ ಸಾಧನವಾಗಿದೆ.
ಕಾಲ ಬದಲಾದಂತೆ ಮನೆಯಲ್ಲಿ ದೋಸೆ ಮಾಡಿಕೊಂಡು ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ. ಏನಿದ್ದರೂ ಈಗ ಹೋಟೆಲ್ ಗಳಲ್ಲಿ ದೋಸೆ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ರಜಾ ದಿನಗಳು ಬಂತೆಂದರೆ ಸಾಕು ಒಟ್ಟಾಗಿ ಕುಟುಂಬದೊಂದಿಗೆ ದೋಸೆಯ ಸವಿಯನ್ನು ಸವಿಯುತ್ತಾರೆ. ಅದರಲ್ಲೂ ವೀಕೆಂಡ್ಗಳಲ್ಲಿ ಸ್ನೇಹಿತರು ದೋಸೆ ತಿಂದು, ಚಹಾ ಕುಡಿದು ನಂತರ ತಮ್ಮ ದಿನಚರಿ ಆರಂಭಿಸುವ ಕಾಲವೂ ಕೂಡ ಈಗ ಬಂದಿದೆ.
ದೋಸೆ ಈಗ ಬೃಹತ್ ಉದ್ಯಮವಾಗಿದೆ. ಮದುವೆ ಇನ್ನಿತರ ಸಮಾರಂಭಗಳಲ್ಲೂ ಕೂಡ ದೋಸೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಸಿರಿಧಾನ್ಯಗಳಿಂದ ಮಾಡಿದ ದೋಸೆಗಳು ಕೂಡ ಹೆಚ್ಚು ಜನಪ್ರಿಯ ವಾಗುತ್ತಿವೆ. ಯಾವುದೇ ಹೋಟೆಲ್ಗಳಿಗೆ ಹೋದರು ಕೂಡ ದೋಸೆಯ ವೈವಿಧ್ಯತೆ ರುಚಿಗೆ ತಕ್ಕಂತೆ ಆಕರ್ಷಕ ಗಾತ್ರ, ಬಣ್ಣ, ಇವುಗಳೆಲ್ಲದರ ಜೊತೆಗೆ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಸಫಲವಾಗಿವೆ. ಫ್ಯಾಮಿಲಿ ದೋಸೆಗಳು ಕೂಡ ಬಂದು ವಿಶ್ವದಾಖಲೆ ಪಡೆದಿವೆ. ಜೊತೆಗೆ ನಮ್ಮ ನಾಡು ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಕಡೆ ಈ ದೋಸೆಗಳು ಕೂಡ ತನ್ನ ಅವಿನಾಭಾವ ಸಂಬಂಧವನ್ನು ಹೊಂದಿವೆ. ಮುಂದುವರೆದು ಹಲವು ಕಡೆ ದೋಸೆ ತಿನ್ನುವ ಸ್ಪರ್ಧೆಯನ್ನು ಕೂಡ ಏರ್ಪಡಿಸುತ್ತಾರೆ. ಹಲವು ಹೋಟೆಲ್ಗಳಲ್ಲಿ ಈ ದಿನದ ಸ್ಪೆಷಲ್ ದೋಸೆಯ ಹೆಸರು ನಮೂದಿಸಿರುತ್ತಾರೆ.
ಮೈಸೂರಿನ ಮಸಾಲ ದೋಸೆ, ದಾವಣಗೆರೆಯ ಬೆಣ್ಣೆ ದೋಸೆ, ಬೆಂಗಳೂರಿನ ವಿದ್ಯಾರ್ಥಿ ಭವನದ ಮಸಾಲೆ ದೋಸೆ ಹೀಗೆ ದೋಸೆ ಹಲವು ಸ್ಥಳಗಳಲ್ಲೂ ಕೂಡ ಪ್ರಸಿದ್ಧಿ ಪಡೆದಿದೆ.
ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ದೋಸೆ ತಿನ್ನಲು ಏಳೆಂಟು ಕಿಲೋಮೀಟರ್ ಬರುವವರು ಇದ್ದಾರೆ. ಜೊತೆಗೆ ಪ್ರವಾಸಕ್ಕೆ ಹೋದಾಗ ಆಯಾ ಸ್ಥಳಗಳಲ್ಲಿ ಯಾವ ಯಾವ ಹೋಟೆಲ್ ಗಳು ಇವೆ. ಅಲ್ಲಿ ಸಿಗುವ ಆಹಾರ ಪದಾರ್ಥಗಳ ಪಟ್ಟಿಯನ್ನು ಕೂಡ ಮೊದಲೇ ತಮ್ಮ ಪ್ರವಾಸದ ಯೋಜನೆಯಲ್ಲಿ ಸೇರಿಸಿರುತ್ತಾರೆ. ಇದರಿಂದಾಗಿ ದೋಸೆ ಒಂದು ಸ್ಥಳದಿಂದ ಮತ್ತೊಂದು ಸ್ಥಳದಲ್ಲಿ ತನ್ನ ಜನಪ್ರಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದರಿಂದಾಗಿ ತಾಲೂಕು, ಜಿಲ್ಲೆಗಳಲ್ಲೂ ಕೂಡ ಪ್ರಸಿದ್ಧ ಹೋಟೆಲಗಳಲ್ಲಿ ದೋಸೆ ತನ್ನ ಕಾರುಬಾರು ಆರಂಭಿಸಿ ಬಿಟ್ಟಿದೆ.
ಮೊದಲೇ ಒಂದು ಗಾದೆ ಮಾತೇ ಇದೆ ‘ಎಲ್ಲಾ ಮನೆಯ ದೋಸೆ ತೂತು’ ಎನ್ನುವುದು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಇನ್ನು ನುಡಿ ಇದೆ. “ನಿನ್ನ ಯಾಸಕ್ಕೇ ಮೂರು ದೋಸೆ ಹುಯ್ಯ” ಎನ್ನುವ ಮಾತನ್ನು ಕೂಡ ಹೇಳುತ್ತಿರುತ್ತಾರೆ. ಈ ದೋಸೆಯ ಬಗ್ಗೆ ಅನೇಕರು ಚುಟುಕು, ಕವನ, ಲೇಖನ ಬರೆದಿದ್ದಾರೆ. ದೋಸೆಯ ಬಗ್ಗೆ ಮಾಹಿತಿ ಸಂಗ್ರಹಿಸಿರುವವರು ಕೂಡ ಇದ್ದಾರೆ. ದೋಸೆ ಮಾಡುವುದು ಒಂದು ಕಲೆ, ಸ್ವಲ್ಪ ಹೆಚ್ಚು ಕಡಿಮೆಯಾದರೆ ಎಡವಟ್ಟಾಗಿ ಬಿಡುತ್ತದೆ. ದೋಸೆ ಮಾಡಲೆಂದೆ ಸಿದ್ದಪಡಿಸಿದ್ದ ಹಿಟ್ಟು ಕೂಡ ಒಮ್ಮೊಮ್ಮೆ ಸರಿ ಇಲ್ಲದಾಗ ಪೇಚಿಗೆ ಸಿಲುಕಿದ ಅನೇಕ ಉದಾಹರಣೆಗಳು ಇವೆ.
ರೂಪಾಂತರ ದೋಸೆಯನ್ನು ಮಾಡುವಲ್ಲೂ ಮಹಿಳೆಯರು ಯಾವಾಗಲೂ ಸಜ್ಜಾಗಿರುತ್ತಾರೆ. ಜೊತೆಗೆ ತಾವು ವಾಕ್ ಮಾಡುವಾಗ ಅಥವಾ ಗೆಳತಿಯ ಮನೆಗೆ ಹೋದಾಗ ದೋಸೆಯನ್ನು ಇನ್ಯಾವ ಹೊಸ ರೀತಿಯಲ್ಲಿ ಮಾಡುತ್ತೀರಿ ಎಂಬ ಬಗ್ಗೆ ಚರ್ಚಿಯು ಕೂಡ ನಡೆಯುತ್ತವೆ. ಅಲ್ಲಿ ಕೇಳಿದ, ನೋಡಿದ, ಬಗೆ ಬಗೆಯ ದೋಸೆಗಳು ತಮ್ಮ ಮನೆಯಲ್ಲೂ ಕೂಡ ತಿನ್ನುವುದನ್ನು ಮರೆಯುವುದಿಲ್ಲ. ದೋಸೆ ಒಂದು ರೀತಿಯಲ್ಲಿ ಪುರಾಣದಂತಾಗಿದೆ. ದೋಸೆಯ ಬಗೆಗಿನ ವೈವಿಧ್ಯತೆಯ ಬಗ್ಗೆ ಹೇಳುತ್ತಾ ಹೋದರೆ ಹನುಮಂತನ ಬಲದಂತೆ ಬೆಳೆಯುತ್ತದೆ!.
ದೋಸೆಯ ಜೊತೆಜೊತೆಗೆ ಅನೇಕ ಸ್ವಾರಸ್ಯಕರ ಘಟನೆಗಳು ಕೂಡ ನಡೆದಿರುತ್ತವೆ. ಬಾಯಿ ರುಚಿಗೆ ತಯಾರಿಸುತ್ತಿದ್ದ ದೋಸೆ ಈಗ ಅಮೂಲಾಗ್ರವಾಗಿ ಎಲ್ಲರ ನಾಲಿಗೆಯ ಮೇಲೆ ತನ್ನ ಹೊಸ ರೂಪಾಂತರದೊಂದಿಗೆ ರುಚಿಯೊಂದಿಗೆ ಸಂತೃಪ್ತಗೊಳಿಸುತ್ತಿದೆ!. ಆರೋಗ್ಯದ ದೃಷ್ಟಿಯಿಂದ ಹೋಟೆಲ್ಗಳಲ್ಲಿ ದೋಸೆ ತಿನ್ನುವವರು ಕೂಡ ಕಡಿಮೆಯಾಗಿದ್ದಾರೆ. ಏನೋ ಬಾಯಿ ಚಪಲಕ್ಕೆ ಒಂದು ಎರಡು ತಿಂದು ಮನೆಗೆ ಬಂದು ಊಟ ಮಾಡುತ್ತಾರೆ. ಆದರೆ ಮಕ್ಕಳಿಗೆ ಹೋಟೆಲ್ನಲ್ಲಿ ದೋಸೆ ಕೊಡಿಸಲೇಬೇಕು. ಇಲ್ಲದಿದ್ದರೆ ಜಗಳವಾಡುತ್ತಾರೆ. ದಿನದಿಂದ ದಿನಕ್ಕೆ ದೋಸೆ ಮಾಡುವ ವಿಧಾನ ಬದಲಾಗುತ್ತಿದೆ. ಸಂಪರ್ಕ ಮಾಧ್ಯಮಗಳಲ್ಲೂ ಕೂಡ ದೋಸೆ ವಿಶಿಷ್ಟ ಸ್ಥಾನ ಪಡೆದಿದೆ. ಟಿವಿಗಳಲ್ಲಿ ದೋಸೆ ಮಾಡುವ ಸ್ಪರ್ಧೆಯನ್ನು ಕೂಡ ಆಯೋಜನೆ ಮಾಡುತ್ತಾರೆ. ಜೊತೆಗೆ ಪತ್ರಿಕೆಗಳಲ್ಲಿ ದೋಸೆ ಸ್ಪೆಷಲ್ ಸಂಚಿಕೆಗಳೆ ಬಂದಿವೆ.
ಈಗ ಕಾಲಕ್ಕೆ ತಕ್ಕಂತೆ ದೋಸೆ ಕೂಡ ಬದಲಾಗಿದೆ ಜೊತೆಗೆ ತಿನ್ನುವವರು ಕೂಡ!. ಹಬ್ಬ ಹರಿದಿನಗಳಲ್ಲಿ ಮಾತ್ರ ತಿನ್ನುತ್ತಿದ್ದ ಜನರು ಈಗ ದಿನಂಪ್ರತಿ ತಮಗೆ ಸಮಯ ಸಿಕ್ಕಾಗಲೆಲ್ಲಾ ದೋಸೆ ತಿಂದು ಸಂಭ್ರಮಿಸುತ್ತಾರೆ. ಎಲ್ಲರಿಗೂ “ವಿಶ್ವ ದೋಸೆ ದಿನದ” ಹಾರ್ದಿಕ ಶುಭಾಶಯಗಳು.
–ಕಾಳಿಹುಂಡಿ ಶಿವಕುಮಾರ್, ಮೈಸೂರು.
ಸೂಪರ್ ಓದುವಾಗಲೇ ಬಾಯಲ್ಲಿ ನೀರೂರಿಸುವ ದೋಸೆ
ಸೊಗಸಾಗಿದೆ ಬರಹ
ವಾವ್..ದೋಸೆ ಲೇಖನ ಸೂಪರ್ ಆಗಿ ಬಂದಿದೆ ಸಾರ್…
ದೋಸೆಯನು ಕುರಿತ ಬರೆಹ. ಚೆನ್ನಾಗಿದೆ. ಲೇಖನದ ಕೊನೆಯಿಂದ ಮೂರನೇ ಪ್ಯಾರಾದಲಿ
ಹನುಮಂತನ ಬಲದಂತೆ ಎಂದು ಬಂದಿದೆ. ಬಾಲ ಎಂಬುದು ಟೈಪಿಸುವಾಗ ಬಲ ಆಗಿರಬಹುದು.
ಆದರೆ ಇದೇನೂ ದೋಷವಲ್ಲ; ಬದಲಿಗೆ ಅರ್ಥಪೂರಣವೇ ಆಗಿದೆ! ಹನುಮಂತನ ಬಲ
ಗೊತ್ತಿರುವವರಿಗೆ ಇದೇನೂ ಹೊಸದಲ್ಲ!!
ಹಾಗೆಯೇ ದೋಸೆಯೂ………….ನಮ್ಮ ದೋಸೆಯು ಇಂಗ್ಲಿಷಿಗೆ ಹೋಗಿ ದೋಸಾ ಆಗಿದೆ
ದುರಂತವೆಂದರೆ ದೋಸಾ ಎಂಬುದೇ ಕನ್ನಡಕೆ ಬಂದು ದೋಸೆ ಆಯಿತೆಂದು
ಒಬ್ಬರು ಹೇಳಿದಾಗ ಸುಮ್ಮನೆ ಇದ್ದೆ. ಏಕೆಂದರೆ ದೋಸೆಯ ಬಗ್ಗೆ ಮಾತಾಡಬಾರದು
(ಬೇಕಾದರೆ ಬರೆಯಬಹುದು) ತಿಂದು ತೇಗಬೇಕು. ರುಚಿಯನಾಸ್ವಾದಿಸಿ ಸಂತಸಗೊಳಬೇಕು.
ಎಲ್ಲರಿಗೂ ದೋಸೆ ದಿನದ ಶುಭಾಶಯ. ಶಿವಕುಮಾರರಿಗೆ ಅಭಿನಂದನೆ. ಸುರಹೊನ್ನೆಗೆ ಧನ್ಯವಾದ
ಓಹ್… ನಾವು ಗಮನಿಸಿಲ್ಲದ ಕಾಗುಣಿತ ತಪ್ಪನ್ನು ತಾವು ಗಮನಿಸಿ ಜಾಣ್ಮೆಯಿಂದ, ಸೊಗಸಾಗಿ ವಾಕ್ಯಕ್ಕೆ ಅರ್ಥೈಸಿದ ಪರಿ ಇಷ್ಟವಾಯಿತು. ಹಾಗಾಗಿ ‘ನೋ ಎಡಿಟಿಂಗ್’…ತಪ್ಪು, ಒಪ್ಪಾಗಿ ಇರಲಿ ಅಲ್ಲವೇ?
ಎಲ್ಲರಿಗೂ ದೋಸೆ ತಿನ್ನುವಾಸೆ .ಇದಂತೂ ‘ಬಲು ರುಚಿಯಾದ’ ಬರಹ.
Super article
ದೋಸೆ ಯಷ್ಟೇ ರುಚಿ ರುಚಿಯಾದ ಲೇಖನ
ವಂದನೆಗಳು
ವಿಶ್ವ ದೋಸೆ್ದಿನಕ್ಕಾಗಿ ರುಚಿ ರುಚಿಯಾದ ದೋಸೆಗಳನ್ನು ಸಾಗು, ಚಟ್ನಿಗಳೊಂದಿಗೆ ಲೇಖನ ಮೂಲಕ ಉಣಬಡಿಸಿದ ಶಿವಕುಮಾರ್ ಅವರಿಗೆ ಧನ್ಯವಾದಗಳು…
ಬಾಯಲ್ಲಿ ನೀರೂರಿಸುವ ದೋಸೆಯ ಸವಿಯನ್ನು ಲೇಖನಕ್ಕೆ ಇಳಿಸಿಬಿಟ್ಟ ನಿಮಗೆ ಅಭಿನಂದನೆಗಳು. ರುಚಕಟ್ಟಾದ ಲೇಖನ.