ನೆನೆಯೋಣ ಒಮ್ಮೆ ಈ ಕಲಾಭೀಷ್ಮನ….

Share Button
ಸೋರಟ್ ಅಶ್ವಥ್

ಡಾ. ರಾಜಕುಮಾರ್ ಅಭಿನಯದ ‘ಭಲೇರಾಜ’ ಚಿತ್ರದಲ್ಲಿ ಬರುವ ಒಂದು ಹಾಡು:

ನಾನೇ ಬಾಳಿನ ಜೋಕರ್
ನಾನೇ ಬಡವರ ಮೆಂಬರ್
ಕರೆಯೋ ಹೆಸರು ಭಲೇರಾಜ
ನಾಳೆ ಊಟಕೆ ಚಕ್ಕರ್


‘ಕಠಾರಿ ವೀರ’ ಚಿತ್ರದಲ್ಲಿ ಬರುವ ನೃತ್ಯ ಗೀತೆ
ತೋರೆಲೆ ನೀ ಪ್ರಿಯನಾ ಓ ಲಲನಾ
ಕಾಣಲು ಆ ಸಖನ ಗಿರಿಧರನ
ಕಾದಿದೆ ಈ ನಯನ


ಹಾಗೆಯೇ ಈ ಚಿತ್ರದ ಇನ್ನೊಂದು ಚಿತ್ರಗೀತೆ
ಚೆಂಗು ಚೆಂಗೆಂದು ಹಾರುವಾ
ರಂಗು ರಂಗಿನ ಈ ಜಿಂಕೆ


ನಂದಾದೀಪ ಚಿತ್ರದ ಅಮರಗೀತೆ
ಗಾಳಿಗೋಪುರ ನಿನ್ನಾಶಾತೀರ ನಾಳೆ ಕಾಣುವ
ಸುಖದಾ ವಿಚಾರ – ಗಾಳಿಗೋಪುರ


ನವಜೀವನ ಚಿತ್ರದ ಗೀತೆ
ಲೀಲಾಮಯ ಹೇ ದೇವ
ನೀ ತೋರೆ ದಯಾ ಭಾವ
ಗುರಿ ಕಾಣದಿದೆ ಜೀವ ನೆರವಾಗೆಲೇ ದೇವ


ಕಪ್ಪು-ಬಿಳುಪು ಕಾಲದ ಚಲನಚಿತ್ರಗಳ ಈ ಅವಿಸ್ಮರಣೀಯ ಸುಶ್ರಾವ್ಯ ಹಾಡುಗಳನ್ನ ಮಧುರ ಧ್ವನಿಗಳಲ್ಲಿ ರೇಡಿಯೋದಲ್ಲಿ ಕೇಳುವಾಗ, ಇವುಗಳನ್ನು ಬರೆದ ಗೀತಕಾರ ಯಾರೆಂಬ ಪ್ರಶ್ನೆ ಏಳುತ್ತದೆ. 100 ಚಿತ್ರಗಳಿಗೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿರುವ ಈ ವ್ಯಕ್ತಿ 300 ಕ್ಕೆ ಹೆಚ್ಚು ಚಿತ್ರಗೀತೆ ರಚಿಸಿದ್ದರು.

ಹಾಗೆಯೇ ಡಾ. ರಾಜ್ ಅಭಿನಯದ ‘ಭಕ್ತ ಕನಕದಾಸ‘ ಚಲನಚಿತ್ರದಲ್ಲಿ ಉಗ್ಗುವ ಶಿಕ್ಷಕನ ಪಾತ್ರ ‘ ಆನಂದಭೈರವಿ’ ಚಿತ್ರದ ಮರೆಯಲಾಗದ ನೃತ್ಯ ಗೀತೆಗಳು ಇವುಗಳಲ್ಲೆಲ್ಲಾ ಎದ್ದು ಕಾಣುವ ವ್ಯಕ್ತಿ 1929 ರಿಂದ 1953 ರವರೆಗೆ ರಂಗಭೂಮಿ ನಟನಾಗಿ, ಸಾಹಿತಿಯಾಗಿ, ನಾಯಕನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಾಟಕ ಕಂಪನಿ ಮಾಲೀಕನಾಗಿ, ಅಪಾರ ಕೆಲಸ ಮಾಡಿದರೂ ಜನರ ನೆನಪಿನ ಪರದೆಯ ಹಿಂದೆ ದೂರ ಸರಿದವರು ಮೈಸೂರಿನ ಸೋರಟ್ ಅಶ್ವಥ್.

ಹುಟ್ಟಿದ್ದು ನಂಜನಗೂಡು – 20-2-1915 ರಂದು, 14 ನೇ ವರ್ಷದಲ್ಲಿ ಸ್ಥಳೀಯ ಓಡಿಬಂದು ನಾಟಕ ಕಂಪನಿಗೆ ಸೇರಿಕೊಂಡರು ಈ ಅಶ್ವತ್ಥ ನಾರಾಯಣ ಶಾಸ್ತ್ರಿ. ವರದಾಚಾರ್ಯರ ಕಂಪನಿ ನಂತರ, ಗಂಗಾಧರರಾಯರ ಕಂಪನಿಯಲ್ಲಿ ಸಂಗೀತ-ನಾಟಕಗಳ ತರಬೇತಿ ಸಿಕ್ಕಿತು. ಸಂಸ್ಕೃತ ಕಾಲೇಜು 24 ರೂ. ಶಿಷ್ಯ ವೇತನಕ್ಕಾಗಿ ಅಭ್ಯಾಸ ಮಾಡುತ್ತಿದ್ದವರು, ತಂದೆ ಕಳೆದುಕೊಂಡು ಭಿಕ್ಷಾನ್ನ ಮಾಡುವ ಸ್ಥಿತಿ ಚಿಲ್ಲರೆ ಅಂಗಡಿ ಸುಬ್ಬರಾಯರು ತಮ್ಮ ಚಿಕ್ಕ ಕಂಪನೀಲಿ ಕೃಷ್ಣಲೀಲಾ ನಾಟಕದ ದೇವರ ಪಾತ್ರಕ್ಕೆ ಸೆಳೆದು ತಂದರು. ಗಂಗಾಧರರಾಯರ ಕಂಪನಿಯಲ್ಲಿ ಸಂಗೀತ, ನಾಟಕದ ತರಬೇತಿ. ಮುಂದೆ ಷಹಜಹಾನ್ ನಾಟಕದಲ್ಲಿ ಮಹಮ್ಮದ್ ಪೀರ್ ಸಾಹೇಬರ ದಾರಾ ಪಾತ್ರವನ್ನು ಎಳೆದೊಯ್ಯುವ ಕಟುಕನ ಪಾತ್ರ.


1933-34 ರ ಅವಧಿ ಸಂಸಾರನೌಕೆ ನಾಟಕ, ಬರೆದ ಹೆಚ್.ಎಲ್.ಎನ್. ಸಿಂಹ ಮಾಧು ಪಾತ್ರ ಪೀರಾ ಸಾಹೇಬರದು ಸೋದರನ ಪಾತ್ರ. ಸಿಂಹ ಇರದಿದ್ದಾಗ ದಿಢೀರನೇ ಅವರ ಪಾತ್ರ ಮಾಧು ಮಾಡುವ ಅವಕಾಶ ಈ ಅಶ್ವತ್ಥರಿಗೆ. ಒಂದು ಡಜನ್ ಬಾಳೆಹಣ್ಣು, ೬ ಕಿತ್ತಳೆ ಹಣ್ಣು ಉಂಡೆಯಾಗಿ ನುಂಗಿ ಜನರ ಚಪ್ಪಾಳೆ ಗಿಟ್ಟಿಸಿದರು.

ಮದರಾಸಿಗೆ ನಾಟಕವಾಡಲು ಸಿಂಹ ಪೀರ್ ಅವರನ್ನು ಆಹ್ವಾನಿಸಿದರು. ನಾಟಕ ಗೌತಮ ಬುದ್ಧ. ಪೀರ್ ಅವರು ಬುದ್ಧನ ಪಾತ್ರ. ಅಶ್ವಥ್ ಚೆನ್ನ. 1936 ನಂಜನಗೂಡು ಕ್ಯಾಂಪ್‌ನಲ್ಲಿ ನಾಟಕದ ವೇಳೆ ಪೀರ್ ಹೃದಯ ಸ್ತಂಭನದಿಂದ ಅಸುನೀಗಿದರು. ಕೆಲದಿನಗಳು ಈ ಕಂಪನಿ ನಡೆಸಿದರು ಈ ಭೂಪ.

1940 ರಲ್ಲಿ ಎಂ.ವಿ. ರಾಜಮ್ಮ ಅವರಿಗಾಗಿ ರಾಧರಮಣ ಚಿತ್ರದ ಕಥೆ ರಚಿಸಿ, ಹಾಸ್ಯಪಾತ್ರ ಮಾಡಿದರು. 1942 ರಲ್ಲಿ ಪ್ರಹ್ಲಾದ, ಬಾಲನಾಗಮ್ಮ ಚಿತ್ರಗಳಲ್ಲಿ ಅಭಿನಯ.

ಸಿಂಹರಿಂದ ಮೈಸೂರಿಗೆ 1944 ರಲ್ಲಿ ಆಹ್ವಾನ. ಮುಂದೆ ಮಾಧವ ಕಲಾ ಮಂಡಳಿ ಸೇವೆ. 1949 ರಲ್ಲಿ ಜ್ಯೋತಿ ಕಲಾ ಸಂಘ ಆರಂಭಿಸಿದರು. ಕಂಪೆನಿ ಮುಚ್ಚಿದಾಗ 1950 ರಲ್ಲಿ ಜಾನಕೀರಾಮ್ ನಿರ್ದೇಶನದ ಶಿವಪಾರ್ವತಿಯಲ್ಲಿ ಅಭಿನಯ. 1957 ರಲ್ಲಿ ಹಾಸನದಲ್ಲಿ ಧರ್ಮರತ್ನಾಕರ ಚಿತ್ರದ ಬಸಪ್ಪನ ಪಾತ್ರ.. ಕೃಷ್ಣರಾಜಪುರದಲ್ಲಿ ಸಂಸಾರನೌಕೆ, ಪ್ರೇಮಲೀಲಾ ನಾಟಕಗಳಲ್ಲಿ ಅಭಿನಯ.

ಒಮ್ಮೆ ಮಗಳಿಗೆ ಜ್ವರ. ಜೇಬಿನಲ್ಲಿದ್ದದು ಎರಡೇ ರೂಪಾಯಿ. ಡಾಕ್ಟರ್ ಬಳಿ ಹೋಗಿ, ಎಷ್ಟು ಫೀಸ್ ಎಂದುಕೊಂಡರು. ಆ ವೈದ್ಯರು ಉಚಿತವಾಗಿ ಔಷಧ ಕೊಟ್ಟು, ಸಿಹಿ-ಖಾರ ತಿನ್ನಿಸಿ, ಕಾಫಿ ಕುಡಿಸಿ 100 ರೂ. ಕೊಟ್ಟು, ತಾನು ಅವರ ಅಭಿಮಾನಿ ಎಂದಾಗ ಕಲಾವಿದನಾಗಿದ್ದು ಸಾರ್ಥಕ ಅನಿಸಿತಂತೆ.

ಮಹಮ್ಮದ್ ಪೀರ್ ಸಾಹೇಬರ ಕಂಪನಿ ಸೇರಿದರು. ಗೌತಮ ಬುದ್ಧ ನಾಟಕದಲ್ಲಿ ಪೀರ್ ಅವರದು ಬುದ್ಧನ ಪಾತ್ರ, ಇವರು ಚೆನ್ನ. ಹೆಚ್.ಎಲ್.ಎನ್. ಸಿಂಹ ಅವರು ಬರೆದ ‘ಸಂಸಾರ ನೌಕೆ’ ನಾಟಕದಲ್ಲಿ ಪೀರ್ ಸುಂದರ – ಇವರು ಮಾಧು.
ಹೆಚ್.ಎಲ್.ಎನ್. ಸಿಂಹ ಅವರು ಕರೆದಾಗ ಅಭಿನಯಿಸಲು ಮದ್ರಾಸ್‌ಕ್ಕೆ ಹೋದರು. ನಂತರ ಪೀರ್ ನಿಧನದ ನಂತರ ಆ ಚಂದ್ರಕಲಾ ಕಂಪನಿಯನ್ನು ಸ್ವಲ್ಪ ದಿನ ಇವರೇ ನಡೆಸಿದರು.

1940 ರಲ್ಲಿ ಎಂ.ವಿ. ರಾಜಮ್ಮನವರೊಂದಿಗೆ ತೆಲುಗು ಬಾಲನಾಗಮ್ಮ, 1942 ರಲ್ಲಿ ಭಕ್ತಪ್ರಹ್ಲಾದ ಚಲನಚಿತ್ರಗಳಲ್ಲಿ ಅಭಿನಯಿಸಿದರು. ವಾದಿರಾಜಮ್ಮ ಅವರ ಬೆಂಬಲದಿಂದ ಹಾಗೂ ಜಿ.ವಿ. ಅಯ್ಯರ್ ಅವರ ಪೌರೋಹಿತ್ಯದಲ್ಲಿ ನಾಗರತ್ನಮ್ಮ ಅವರನ್ನು ಮದ್ರಾಸಿನಲ್ಲಿ ವಿವಾಹವಾದರು.

ಹೆಚ್.ಎಲ್.ಎನ್. ಸಿಂಹ ಅವರ ಆಹ್ವಾನದ ಮೇರೆಗೆ ಪ್ರೇಮಲೀಲಾ ನಾಟಕದಲ್ಲಿ ಸೋರಟ್ ಪಾತ್ರ ವಹಿಸಿದರು. 100 ಪ್ರದರ್ಶನ ಕಂಡ ಈ ನಾಟಕದಲ್ಲಿ ಹಾಸ್ಯನಟನಾಗಿ ಕೀರ್ತಿಶಿಖರ ಏರಿದರು. ಒಬ್ಬ ಅಭಿಮಾನಿ ಅಪೇಕ್ಷೆಯಂತೆ ಪ್ರತಿದಿನ ಪ್ರತಿ ಪ್ರದರ್ಶನದಲ್ಲಿ ಒಂದು ನೂತನ ಸಂಭಾಷಣೆ ಹೇಳುತ್ತಿದ್ದರಂತೆ – 1944 ರಿಂದ 13 ವರ್ಷದ ರತ್ನಾಕರ್ ಇವರೊಂದಿಗೆ ಸೇರಿ ಉಪವಾಸ – ವನವಾಸಗಳಲ್ಲೇ ಕಲಾಸೇವೆ ಮಾಡಿದರು.

`ಹಣವಿಲ್ಲದಿದ್ದರೂ 1949 ರಲ್ಲಿ ಜ್ಯೋತಿ ಕಲಾ ಸಂಘ ಸ್ಥಾಪಿಸಿ ತಾವೇ ರಂಗಮಂದಿರ ನಿರ್ಮಿಸಿ, ಭಿಕ್ಷೆ ಬೇಡಿ ತಂದು ಕಲಾವಿದರಿಗೆ ಅನ್ನ ಹಾಕಿ ಸಂಸಾರ ನೌಕೆ, ಧರ್ಮರತ್ನಾಕರ, ಪ್ರೇಮಲೀಲ, ಕೃಷ್ಣಲೀಲಾ ನಾಟಕಗಳನ್ನು ಅಭಿನಯಿಸಿದರು.

ಇವರು ಅಭಿನಯಿಸಿದ ಸಾಹಿತ್ಯ-ಗೀತೆಗಳನ್ನು ರಚಿಸಿದ ಚಲನಚಿತ್ರಗಳು – ಸಂಸಾರ ನೌಕೆ, ರಾಧಾರಮಣ, ಓಹಿಲೇಶ್ವರ, ಮನೆ ತುಂಬಿದ ಹೆಣ್ಣು, ಸ್ವರ್ಣಗೌರಿ, ಭಾಗ್ಯ ದೇವತೆ, ಶನಿ ಪ್ರಭಾವ, ಮಹಾನಂದ, ವಿಚಿತ್ರ ಪ್ರಪಂಚ, ರೇಣುಕಾ ಮಹಾತ್ಮೆ, ಧರ್ಮವಿಜಯ, ರಣಧೀರ ಕಂಠೀರವ, ರಾಜಾ ಸತ್ಯವ್ರತ, ಶಿವಗಂಗೆ ಮಹಾತ್ಮೆ, ನಾಂದಿ, ನವ ಜೀವನ, ಪಡುವಾರಹಳ್ಳಿ ಪಾಂಡವರು, ಧರ್ಮಸೆರೆ, ರಂಗನಾಯಕಿ, ನಂದಾದೀಪ ಇವರನ್ನು ಅತ್ಯುತ್ತಮ ಸಾಹಿತಿ ಎಂದು ಗುರುತಿಸಲಾದ ಚಿತ್ರ.

ವೀರಕೇಸರಿ, ಜೇನುಗೂಡು, ಕಠಾರಿ ವೀರ, ವಾತ್ಸಲ್ಯ, ಶ್ರೀಶೈಲ, ಮಲ್ಲಿಕಾರ್ಜುನ, ಭಲೇರಾಜ, ಅದೇ ಹೃದಯ ಅದೇ ಪ್ರೇಮವಂತೆ, ಮಮತೆಯ ಬಂಧನ, ಸತೀ ಸುಕನ್ಯ, ಮಿಸ್ ಜೋಗಮ್ಮ, ಮುದ್ದು ಮೀನಾ, ಜಾಣರ ಜಾಣ ಚಿತ್ರಗಳಿಂದ ಹೆಸರು ಬಂದಿತು.



೧೯೫೩ – ವಿಚಿತ್ರ ಪ್ರಪಂಚ ಚಿತ್ರದಲ್ಲಿ ನಟನಾಗಿ, ಸಹಾಯಕ ನಿರ್ದೇಶಕನಾಗಿ ಅವಕಾಶ. ದ.ರಾ. ಬೇಂದ್ರೆ ಅವರ ಕಥೆಗೆ ಚಿತ್ರಸಾಹಿತಿ ಇವರಾದರು. ಆಗ ಇವರ ಹೆಸರು ಎನ್.ಎ.ಎನ್. ಶಾಸ್ತ್ರೀ. ಚಿತ್ರದ ನಿರ್ದೇಶಕರು ಬಾಲಗಜಬರ್, ಹರಿಣಿ ನಾಯಕಿ. ವಾಸುದೇವಾಚಾರ್ ಗಿರಿಯಾಜಿ ಖಳನಾಯಕ.
೧೯೫೪ – ರೇಣುಕಾ ಮಹಾತ್ಮೆ ಚಿತ್ರದ ಸಹಾಯಕ ನಿರ್ದೇಶಕರು. ನಿರ್ದೇಶಕರು ವೈ.ಆರ್. ಸ್ವಾಮಿ. ಬಿ. ವಿಠ್ಠಲಾಚಾರ್ಯ ಸರ್ವಮಂಗ ಚಿತ್ರಕ್ಕೆ ಇವರು ಬರೆದ ಹಾಡುಗಳು, ಆ ಚಿತ್ರಗಳ ಬಾರದ್ದರಿಂದ ಮನೆ ತುಂಬಿದ ಹೆಣ್ಣು ಚಿತ್ರಕ್ಕೆ ಬಳಕೆಯಾಯಿತು. ಝಣ ಝಣ ತಕತ, ಏಕೆ ಉಳಿಸಿ ಹೋದೆಯಮ್ಮ.
೧೯೫೬ರಲ್ಲಿ ಟಿ.ವಿ. ಸಿಂಗ್ ಠಾಕೂರ್ ಅವರ ಓಹಿಲೇಶ್ವರ ಚಿತ್ರದ ಅಭಿನಯ. ಹೆಚ್.ಎಂ. ಬಾಬ ಧರ್ಮವಿಜಯಕ್ಕೆ ಸಾಹಿತಿಯಾದರು.
೧೯೬೨ರಲ್ಲಿ ರತ್ನಮಂಜರಿ, ಸ್ವರ್ಣಗೌರಿ, ಲವಕುಶ(ತೆಲುಗು) ಚಿತ್ರಗಳಿಗೆ ಕನ್ನಡ ಸಂಭಾಷಣೆ ಹಾಡು ಬರೆದರು. ಸಿಕ್ಕ ೮೦೦೦ ರೂ.ಗಳಿಗೆ ಮೈಸೂರಿನಲ್ಲಿ ಸ್ವಂತ ಮನೆ ಮಾಡಿದರು.
೧೯೬೩ – ರಾಷ್ಟ್ರಪ್ರಶಸ್ತಿ ವಿಜೇತ ನಂದಾದೀಪ, ವೀರಕೇಸರಿ ಹಾಗೂ ಜೇನುಗೂಡು ಚಿತ್ರಗಳಿಗೆ ಗೀತರಚನೆ.
ನಂದಾದೀಪ ಚಿತ್ರದಲ್ಲಿ ನಾಡಿನಂದಾ ಈ ದೀಪಾವಳಿ
ನಲಿವ ಮನ ಒಂದು ದಿನ ಕನಸೊಂದ ಕಂಡೆ ಕನ್ನಡ ಮಾತೆ
ಈ ಹಾಡನ್ನು ರಾಷ್ಟ್ರಪತಿ ರಾಧಾಕೃಷ್ಣನ್ ಹೊಗಳಿದರು. ಜೇನುಗೂಡು ಚಿತ್ರದ ಬಾಳೊಂದು ನಂದನ ಗೀತೆ ಜನಪ್ರಿಯ.
ಸರ್ವಧರ್ಮ ಸಮಾನತೆ ತತ್ವ ಎತ್ತಿ ತೋರಿಸಿದ್ದು ೧೯೬೪ರ ನವಜೀವನ ಚಿತ್ರದ ಕಥೆಗೆ ರಾಷ್ಟ್ರಪತಿ ಪ್ರಶಸ್ತಿ.
೧೯೬೫ರಲ್ಲಿ ವೈ.ಆರ್. ಸ್ವಾಮಿಯವರ ವಾತ್ಸಲ್ಯ ಚಿತ್ರ. ಮಮತೆ ಬಾಳಸಾಗರದ ನೌಕೆ ಗೀತ ರಚನೆ ಮರೆಯಲಾಗದ ಹಿಂದಿನಾ ನನ್ನ ಕಥೆಯ ಕೇಳು ನೀ ಚಿನ್ನ – ಇನ್ನೊಂದು ಗೀತೆ.
೧೯೬೭ರಲ್ಲಿ ಮುದ್ದು ಮೀನು ಚಿತ್ರ. ಇದುವೇ ಬಾಳಿನ ಗುಣ, ಅದಾವ ತಾಣ ನೀರಿನ ಋಣ.
೧೯೬೮ರಲ್ಲಿ ಎನ್.ಎಸ್. ರಾಜು ಜೊತೆ ಭಾಗ್ಯದೇವತೆ ಚಿತ್ರ ನಿರ್ಮಿಸಿದರು.
ರಂಗಮಹಲ್ ರಹಸ್ಯ ಕೌತುಕಮಯ ಚಿತ್ರಕ್ಕೆ ಬರೆದರೆ. ೧೯೭೨ರಲ್ಲಿಗ ಬಾಂಧವ್ಯ ಚಿತ್ರ ನಿರ್ಮಿಸಿದರು. ಮೈಸೂರು ನ್ಯೂ ಅಪೇರಾ ಚಿತ್ರದಲ್ಲಿ ಬಿಡುಗಡೆಯಾಗಬೇಕಿತ್ತು. ಪ್ರಿಂಟ್ ಪಡೆಯಲು ರೂ.೮೦,೦೦೦ ಕೊಡಬೇಕಿತ್ತು. ಮಿಶ್ರಣದ ನೀಲತಾಕಾಧ್ಯ ಕೊಟ್ಟಿದ್ದರಿಂದ ಚಿತ್ರ ಬಿಡುಗಡೆ. ಪಾರ್ಕ್‌ನಲ್ಲಿ ಕಡಲೇಕಾಯಿ ತಿನ್ನುತ್ತಾ ಪ್ರೇಕ್ಷಕರನ್ನು ನಿರೀಕ್ಷಿಸಿದರು.
ಪುಟ್ಟಣ್ಣ ಕಣಗಾಲ್ ಅಶ್ವಥ್‌ರ ಕಂಪನಿಯಲ್ಲೇ ಬೆಳೆದ ಹುಡುಗ. ಮುಂದೆ ೧೯೭೮ರಲ್ಲಿ ಪಡುವಾರಹಳ್ಳಿ ಪಾಂಡವರು ಚಿತ್ರಕ್ಕೆ ಚಿತ್ರಕಥೆ-ಸಂಭಾಷಣೆ-ಹಾಡುಗಳನ್ನು ಬರೆಯುವ ಅವಕಾಶವನ್ನು ಪುಟ್ಟಣ್ಣ ಕೊಟ್ಟರು.
ರಂಗನಾಯಕಿ ಹಾಗೂ ಧರ್ಮಸೆರೆ ಚಿತ್ರಕ್ಕೆ ಬರೆದರು. ಆದರೆ ಇವರ ಹೆಸರು ಚಿತ್ರದಲ್ಲಿ ಕಾಣಲಿಲ್ಲ.
೧೯೯೮ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೂಮಳೆ ಚಿತ್ರ ಇವರ ಅಭಿನಯದ ಕೊನೆ ಚಿತ್ರ.
೫-೨-೧೯೯೮ರಂದು ಇವರು ಅಸ್ತಂಗತರಾಗಿ ಕಾಲು ಶತಮಾನ ದಾಟಿದೆ. ಇವರ ಜನಪ್ರಿಯ ಚಿತ್ರಗೀತೆಗಳು ಇಲ್ಲಿವೆ. ಸಾಧ್ಯವಾದರೆ ಕೇಳಿ ಅನಂದಪಡಿ. ಇವರನ್ನು ೧೯೮೫ರಲ್ಲಿ ನಾನು ಮೈಸೂರು ಆಕಾಶವಾಣಿಗಾಗಿ ಸಂದರ್ಶಿಸಿ ಪ್ರಸಾರ ಮಾಡಿದ್ದೆ.

ಇವರ ರಚನೆಯ ಖ್ಯಾತ ಚಿತ್ರಗೀತೆಗಳು
ಚಿತ್ರ ಗೀತೆ
೧) ಮುದ್ದು ಮನ ಇದುವೆ ಬಾಳಿನ ಗುಣ
೨) ಮಿಸ್ ಬೆಂಗಳೂರು ಹಾಲಂತ ಈ ಮನಕೆ ನೋವೇ ಕಾಣಿಕೆ
೩) ಅದೇ ಹೃದಯ ಅದೇ ಮಮತೆ ಶಾಂತಿಯ ವನದಲ್ಲಿ
೪) ವಾತ್ಸಲ್ಯ ಮುದು ತುಂಬ ಮೆರೆವ ಮಧುಮಗಳೇ
೫) — ನೀ ನಾಚಲೋಕೇ?
೬) ಭಲೇ ರಾಜ ಓ ಹನಿಯಾ
೭) ಶನಿ ಪ್ರಭಾವ ಆನಂದ ಗಂಡನ ಅನುರಾಗ ಬಂಧನ
೮) ಅನುಗ್ರಹ ನಿರಾಶೆ ಸುಳಿಯಲಿ ಸಿಲುಕಿದ ಜೀವ
೯) ಭಾಗ್ಯದೇವತೆ ಕರುಣಾಮಯ ಶಂಕರ
೧೦) ನವಜೀವನ ಕರೆಯೇ ಕೋಗಿಲೆ ಮಾಧವನ
೧೧) ನಂದಾದೀಪ ನಾಡಿನಂದಾ ಈ ದೀಪಾವಳಿ ಬಂತು
೧೨) ಜೇನುಗೂಡು ಜಿಗಿ ಜಿಗಿಯುತ ನಲಿ
೧೩) ಶ್ರೀಶೈಲ ಮಹಾತ್ಮೆ ಮಲ್ಲಿಕಾರ್ಜುನನು ನೆಲೆಸಿಹ
೧೪) ವಾತ್ಸಲ್ಯ ಮರೆಯಲಾರದ ಹಿಂದಿನಾ ನನ್ನ ಕಥೆಯ
೧೫) ಕಾಣಿಕೆ ಕೇಳೇ ನೀ ಚಿನ್ನ ಮಾನವರನ್ನೇ ಪ್ರೇಮಿಸಬೇಡ
೧೬) ಪ್ರೇಮಪಾಶ ಹೋಗು ಹೋಗಲೇ ಹುಚ್ಚಿ
೧೭) ಪಡುವಾರಹಳ್ಳಿ ಪಾಂಡವರು ತೂಕಡಿಸಿ ತೂಕಡಿಸಿ ಬಿದ್ದರೇ
ನಮ್ಮಜ್ಜ ನಿಮ್ಮಜ್ಜ ಮುತ್ತಜ್ಜ
೧೮) ಆನಂದ ಭೈರವಿ ಚೈತ್ರದ ಕುಸುಮಾಂಜಲಿ
೧೯) ಸ್ವಯಂವರ ಈ ಜಗವೊಂದು ನ್ಯಾಯಾಲಯ

ಒಂದು ಕಾಲದಲ್ಲಿ ಕನ್ನಡ ವೃತ್ತಿ ರಂಗಭೂಮಿಗೆ ಚಲನಚಿತ್ರ ಕ್ಷೇತ್ರವನ್ನ ತಾವು ಉಪವಾಸ-ವನವಾಸ ಮಾಡಿದ್ದರೂ ಹುಚ್ಚರಂತೆ ಪ್ರೀತಿಸಿ ಅನ್ನ ಸಿಗದೇ ತಿನ್ನದೇ, ಕೃಶ ದೇಹದ ನಡುಗುವ ಕೈಗಳಿಂದ ಲೇಖನಿಯ ಮೂಲಕ ಆ ಕಲಾ ಸರಸ್ವತಿಯ ಆರಾಧನೆ ಮಾಡಿ, ಹೊಟ್ಟೆ ತುಂಬ ತಿನ್ನುವ ಮೈತುಂಬಾ ಬಟ್ಟೆ ತೊಡುವ ಕನಸು ಕಾಣುತ್ತಲೇ ಈ ಪ್ರಪಂಚದಿಂದ ನಿರ್ಗಮಿಸಿರುವ ಇಂಥ ಎಷ್ಟೋ ಸಾಧಕರನ್ನು ಒಮ್ಮೆಯಾದರೂ ಸ್ಮರಿಸಿ, ಕನ್ನಡ ಕಲಾರಂಗಕ್ಕೆ ಅಪಾರ ಸೇವೆ ಸಲ್ಲಿಸಿರುವ ಇಂಥವರ ಹೆಸರಿನಲ್ಲಿ ರಾಜ್ಯ-ಜಿಲ್ಲಾ ಪ್ರಶಸ್ತಿಗಳನ್ನು ಕೊಡುವಂತಾದರೆ…. ಮೈಸೂರಿನ ಒಂದು ರಸ್ತೆಗೆ ಇವರ ಹೆಸರು ಇಡುವಂತಾದರೆ….. ನಾವು ಧನ್ಯ ಕನ್ನಡಿಗರು!

-ಎನ್.ವ್ಹಿ.ರಮೇಶ್ , ಮೈಸೂರು

4 Responses

  1. ಸೋರಟ್ ಅಶ್ವಥ್… ಅವರ ಪರಿಚಯಾತ್ಮ ಲೇಖನ ಚೆನ್ನಾಗಿ ಮೂಡಿಬಂದಿದೆ…ಸಾರ್ ಧನ್ಯವಾದಗಳು

  2. ನಯನ ಬಜಕೂಡ್ಲು says:

    Nice one

  3. ಶಂಕರಿ ಶರ್ಮ says:

    ಮೈಸೂರಿನ ಸೋರಟ್ ಅಶ್ವಥ್ ಅವರ ಸಾಧನೆಗಳ ವಿಸ್ತೃತ ಮಾತಿಗಳ ಜೊತೆಗಿನ ಕಿರುಪರಿಚಯ ಸೊಗಸಾಗಿ ಮೂಡಿಬಂದಿದೆ. ಜೊತೆಗೇ ಮನದ ಮೂಲೆಯಲ್ಲಿ ನೋವಿನ ಎಳೆಯೊಂದು ಮೂಡುವಂತೆ ಮಾಡಿದೆ,…ಧನ್ಯವಾದಗಳು.

  4. ಪದ್ಮಾ ಆನಂದ್ says:

    ಅಬ್ಬಾ, ಎಷ್ಟೊಂದು ಮಾಹಿತಿಗಳ ಸಂಗ್ರಹ. ನಿಜಕ್ಕೂ ಸೋರಟ್‌ ಅಶ್ವತ್ಥ ಅವರಿಗೆ ನೀಡಿದ ನುಡಿನಮನವೇ ಇದು ಹೌದು. ಹಾಗೆಯೇ, ಅವರ ಅಭಿಮಾನಿಗಳಿಗೆ ಮಾಹಿತಿಗಳ ಕಣಜವೂ ಹೌದು. ಅಭಿನಂದನೆಗಳು .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: