ಅವಿಸ್ಮರಣೀಯ ಅಮೆರಿಕ : ಎಳೆ 80

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)
ಮಿನಿ ವಿಮಾನ ಪ್ರಯಾಣ

ಇಲ್ಲಿಯ Talkeetna ಎಂಬಲ್ಲಿರುವ ಮಿನಿ ವಿಮಾನಗಳಲ್ಲಿ (Air Taxi) ಜಗತ್ಪ್ರಸಿದ್ಧವಾದ ಡೆನಾಲಿಯ ಪರ್ವತಗಳ ಮೇಲಿನ ಹಿಮಪ್ರವಾಹಗಳ (glaciers) ರಮಣೀಯ ದೃಶ್ಯಗಳನ್ನು ಆಕಾಶದ ಮೇಲಿನಿಂದ ನೋಡುವ ಅವಕಾಶ! ಬೆಳಗ್ಗೆ ಒಂಭತ್ತು ಗಂಟೆ ಹೊತ್ತಿಗೆ ಮಿನಿ ವಿಮಾನ ನಿಲ್ದಾಣದತ್ತ ನಡೆದೆವು. ಪುಟ್ಟ ಕಟ್ಟಡದ ಹಜಾರದಲ್ಲಿ ಅದಾಗಲೇ ಪ್ರವಾಸಿಗರು ನೆರೆದಿದ್ದರು.  ಸರತಿಯಲ್ಲಿ ನಿಂತು, ಶುಲ್ಕವನ್ನು ಪಾವತಿಸಿ, ಸರದಿಗಾಗಿ ಕಾಯಬೇಕಿತ್ತು. ಅದನ್ನು ಪೂರೈಸಿದ ಬಳಿಕ, ಕಟ್ಟಡದ  ಹಿಂಭಾಗದಲ್ಲಿರುವ  ವಿಶ್ರಾಮಾಸನಗಳಲ್ಲಿ ಕುಳಿತುಕೊಳ್ಳಲು ಏರ್ಪಾಡಾಗಿತ್ತು. ಅಲ್ಲಿರುವ ಸಿಬ್ಬಂದಿಯೊಬ್ಬಳು; ಕಾಲಿಗೆ  ನಮ್ಮ ಅಳತೆಯ ದಪ್ಪನೆಯ ಬೂಟು ಹಾಗೂ ಕೈಗಳಿಗೆ ಕೈಗವಸುಗಳನ್ನು ನೀಡಿ, ಅವುಗಳನ್ನು ಹಾಕಿಕೊಳ್ಳಲು ಸಹಕರಿಸಿದಳು. ಅಲ್ಲೇ ಪಕ್ಕದಲ್ಲಿ, ದೊಡ್ಡದಾದ ಕುಂಡಗಳಲ್ಲಿ ಅಪರೂಪ ಬಣ್ಣಗಳ ಅತ್ಯಂತ ಸುಂದರ ಹೂಗಳು ಅರಳಿ ನಿಂತಿದ್ದವು. ಅವುಗಳ ಮೇಲಿಂದ ಕಣ್ಣು ತೆಗೆಯಲು ಮನಸ್ಸೇ ಬಾರದು!

ಸ್ವಲ್ಪ ಹೊತ್ತಿನಲ್ಲಿ ನಮ್ಮ ಸರದಿ ಬಂದಾಗ; ನಾವಿದ್ದ ಕಟ್ಟಡದ ಹಿಂಭಾಗದಲ್ಲಿ ವಿಶಾಲವಾದ ಮೈದಾನಲ್ಲಿ ಕೆಂಪು ಬಣ್ಣದ ಪುಟ್ಟ ವಿಮಾನವೊಂದು ಇಳಿಯಿತು. ಅಷ್ಟು ಚಿಕ್ಕದಾದ ವಿಮಾನವನ್ನು ನಾನು ನೋಡಿರಲೇ ಇಲ್ಲ! ಈ ವಿಮಾನದಲ್ಲಿ 10 ಜನರಿಗೆ ಅವಕಾಶವಿತ್ತು. ಐದಾರು ಮೆಟ್ಟಲುಗಳಿರುವ ಏಣಿಯ ಮೂಲಕ ನಮ್ಮನ್ನು ಅದರೊಳಗೆ ಹತ್ತಿಸಿಕೊಳ್ಳಲಾಯಿತು. ಆಮೇಲೆ ಆ ಏಣಿಯನ್ನು ಮಡಚಿ ವಿಮಾನದೊಳಗೆ ನಮ್ಮ ಕಾಲಿನ ಕೆಳಗೆ ಇರಿಸಿದರು. ಒಬ್ಬರಿಗೆ ಮುಂಭಾಗದಲ್ಲಿ ಪೈಲಟ್ ಪಕ್ಕ ಕುಳಿತುಕೊಳ್ಳುವ ಅವಕಾಶವೂ ಇತ್ತು! 

ಹಿಮಬೆಟ್ಟದ ಮೇಲೆ….

ಸಾದಾ ಹೆಲಿಕಾಪ್ಟರ್ ಹಾರುವಷ್ಟು ಎತ್ತರದಲ್ಲಿ ಹಾರುವ ಈ ವಿಮಾನದಲ್ಲಿ ನಮ್ಮ ಪಯಣವು ಬಹಳ ವಿಶೇಷವಾಗಿತ್ತು. ಕೆಳಗಡೆಯ ದೃಶ್ಯಗಳು ಅತ್ಯಂತ ನಿಚ್ಚಳವಾಗಿ ಸಮೀಪದಲ್ಲಿ ಗೋಚರಿಸುವುದರಿಂದ, ಭಯ ಮಿಶ್ರಿತ ಖುಷಿಯ ಅನುಭವವಾಗುವುದು.  ದಟ್ಟ ಹಿಮಚ್ಛಾದಿತ ಪರ್ವತ ಶಿಖರಗಳ ಮೇಲೆ ಹಾರಾಡುವಾಗ ಎದೆ ಝಲ್ ಎನ್ನುತ್ತದೆ! ಹೆಚ್ಚಿನ ಪರ್ವತ ಶಿಖರಗಳ ಮೇಲೆ ಹಿಮವು ಕರಗಿ ಬರೇ ಕಪ್ಪು ಬಂಡೆಗಳು ಗೋಚರಿಸುತ್ತಿದ್ದವು. ಕಂದಕಗಳು ಖಾಲಿ…ಖಾಲಿ. ಭೂಮಿಯ ತಾಪಮಾನ ಹೆಚ್ಚಿರುವ ಫಲವಾಗಿ ಹಿಮದ ಇರುವಿಕೆಯು ಅತೀ ಕಡಿಮೆಯಾಗಿರುವ ಅನುಭವ ನಮಗಾಗುವುದು…

ನಮ್ಮ ವಿಮಾನದ ಮಹಿಳಾ ಪೈಲೆಟ್, ಸಾವಕಾಶವಾಗಿ ನಮ್ಮನ್ನು ಪರ್ವತಗಳ ಮೇಲೆ ಸುತ್ತಾಡಿಸಿ, ಸುಮಾರು1000 ಅಡಿಗಳಷ್ಟು ದಪ್ಪದ, ಬೆಳ್ಳಗಿನ ಹತ್ತಿಯಂತಹ ಬಿಳಿಯ  ಹಿಮಹಾಸಿನ ಮೇಲೆ ಇಳಿಸಿದಾಗ ಹಿಮಚ್ಚಾದಿತ ಸ್ವರ್ಗಕ್ಕೆ  ಬಂದಂತಹ ಅನುಭವ! ಎಲ್ಲಿ ನೋಡಿದರೂ ಶ್ವೇತವರ್ಣವು ಕಣ್ಣಿಗೆ ರಾಚುತ್ತಿತ್ತು! ಇಲ್ಲಿ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ಕಪ್ಪು ಕನ್ನಡಕ ಕಡ್ಡಾಯ. ಸುತ್ತಲೂ ಆಗಸದೆತ್ತರ ಚಾಚಿ ನಿಂತ ಪರ್ವತಗಳ ಸಾಲು. ಮೈಲುಗಟ್ಟಲೆ ದೂರದಲ್ಲಿರುವ ಪರ್ವತವು ಕೆಲವೇ ಮೀಟರುಗಳ ದೂರದಲ್ಲಿರುವಂತೆ ಭಾಸವಾಗುವುದು ಮರಳುಗಾಡಿನ ಮರೀಚಿಕೆಯನ್ನು ನೆನಪಿಸಿತು! ಅಲ್ಲೇ ಸ್ವಲ್ಪ ದೂರದಲ್ಲಿ ಮುಂದಕ್ಕೆ ಹೋಗದಂತೆ ಎಚ್ಚರಿಕೆಯ ಫಲಕ ಕಾಣಿಸಿತು. ಅಲ್ಲಿ, ಕೆಲವೇ ಅಡಿಗಳಷ್ಟು ದಪ್ಪನೆಯ ಹಿಮವಿದ್ದು, ಅದರ ಕೆಳಗಡೆಗೆ ತಣ್ಣನೆಯ ನೀರು ಇರುವುದಾಗಿ ತಿಳಿದಾಗ ಆಶ್ಚರ್ಯದೊಂದಿಗೆ ಬಹಳ ಗಾಬರಿಯಾಯಿತು…ಅಲ್ಲಿ ಹೋದರೆ ಪಾತಾಳ ಲೋಕ ದರ್ಶನ ಗ್ಯಾರಂಟಿ ಎಂದು!

ಸುಮಾರು ಒಂದು ತಾಸು ಓಡಾಡಿ, ಹಿಮದಲ್ಲಿ ಆಟವಾಡಿ, ಗುಂಪಿನವರೆಲ್ಲ ಫೋಟೋ ಕ್ಲಿಕ್ಕಿಸಿದ್ದೆ ಕ್ಲಿಕ್ಕಿಸಿದ್ದು! ಮಕ್ಕಳ ಖುಷಿಗಂತೂ ಪಾರವೇ ಇಲ್ಲ. ನನಗಂತೂ, ಮಣಭಾರದ ಕಾಲಿನ ಬೂಟು ಮತ್ತು ಕೆ. ಜಿ. ತೂಕದ ಕೈಯ ಕೈಗವಸನ್ನು ಸುಧಾರಿಸುವುದರಲ್ಲೇ ಸಾಕಾಯಿತೆನ್ನಿ! ಹೊರಡುವ ಮನಸ್ಸಿಲ್ಲದಿದ್ದರೂ ಸಮಯ ಮೀರುತ್ತಾ ಬಂದುದರಿಂದ ಹೊರಡಲೇಬೇಕಿತ್ತು. ನಮ್ಮ ಪುಟ್ಟ ವಿಮಾನವು ಜಾಗರೂಕತೆಯಿಂದ ಹಿಂತಿರುಗಿ ನಿಲ್ದಾಣಕ್ಕೆ ಬಂದಿಳಿಯಿತು. ಈ ದಿನವನ್ನು ಎಂದಿಗೂ  ಮರೆಯಲಾಗದು…ನನ್ನ ಪಾಲಿಗೆ ಇದು ಜೀವನದಲ್ಲಿ ಬಯಸದೇ ಬಂದ ಭಾಗ್ಯವಾಗಿತ್ತು! 

ಇನ್ನು ನಮ್ಮ ಪ್ರಯಾಣವು ಡೆನಾಲಿಯಿಂದ ಆಂಕರೇಜ್ ಗೆ ಹಿಂತಿರುಗುವ ಹಾದಿಯಲ್ಲಿ ಸುಮಾರು 240 ಮೈಲುಗಳಷ್ಟು ದೂರವನ್ನು ಕ್ರಮಿಸಬೇಕಿತ್ತು. ಮಾರ್ಗದಲ್ಲಿ ಸಿಗುವಂತಹ ವಿಶೇಷ ಪ್ರವಾಸ ತಾಣಗಳನ್ನು ವೀಕ್ಷಿಸುತ್ತಲೇ ಸಾಗುವುದೆಂದು ಮೊದಲೇ ನಿರ್ಧರಿಸಲಾಗಿತ್ತು. ಹಾಗೆಯೇ ಮಾರ್ಗ ಮಧ್ಯದಲ್ಲಿ ಅನೇಕ ಹಿಮಪ್ರವಾಹಗಳ ತಾಣಗಳು ಲಭ್ಯವಿದ್ದರೂ, ಸಮಯದ ಅಭಾವದಿಂದ ಕಾಲ್ನಡಿಗೆಯಲ್ಲಿಅತೀ ಕಡಿಮೆ ದೂರ ಕ್ರಮಿಸಲು ಇರುವಂತಹ ಕೆಲವೊಂದು ಹಿಮಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದೆವು.

 ಆಂಕರೇಜ್ ತಲಪಿದ ಕೂಡಲೇ, ಒಂದು ವಾರ ನಮ್ಮ ಮನೆಯಾಗಿದ್ದ RVಯನ್ನು ಹಿಂತಿರುಗಿಸಬೇಕಿತ್ತು.  ಉಳಕೊಳ್ಳಲು ಅಲ್ಲಿಯೇ ಒಂದು ವಸತಿಗೃಹವನ್ನು ಕಾದಿರಿಸಲಾಗಿತ್ತು. ನಮ್ಮ ಜೊತೆಗಿದ್ದ ಕುಟುಂಬ ಸ್ನೇಹಿತ ಸದಸ್ಯರೆಲ್ಲರೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಹಿಂತಿರುಗಿದರು. ಅಲಾಸ್ಕಾದಲ್ಲಿ ನಮ್ಮ ಪ್ರವಾಸದ ಕೊನೆಯ ಘಟ್ಟವಾದ್ದರಿಂದ, ಹಲವು ದಿನಗಳ ಕಾಲ ನೆಮ್ಮದಿಯ ತಾಣವಾಗಿದ್ದ ನಮ್ಮ RVಯನ್ನು ಬಿಟ್ಟು ಕೊಡುವಾಗ ಮನಸ್ಸಿಗೆ ಸ್ವಲ್ಪ ನೋವಾದುದು ಸುಳ್ಳಲ್ಲ! 

ಸಮುದ್ರ ವಿಮಾನ(Sea plane)

  ನಮ್ಮ ಬಳಿ RV ಇಲ್ಲದ ಕಾರಣ, ಚಂದದ ವಸತಿಗೃಹವೊಂದರಲ್ಲಿ ನಮ್ಮ ಸಾಮಾನುಗಳನ್ನಿರಿಸಿ, ಸಾರ್ವಜನಿಕರಿಗೆ ಲಭ್ಯವಿರುವ ಬಾಡಿಗೆ ಕಾರನ್ನು ಪಡೆದುಕೊಂಡೆವು. ಅದರಲ್ಲೇ ಮುಂದೆ ನಮ್ಮ ಸುತ್ತಾಟ…ಇಡೀ ಆಂಕರೇಜ್ ಸುತ್ತ..

  7.7. 2019ನೇ ಭಾನುವಾರ…   ಆಂಕರೇಜ್ ನ ವಿಮಾನ ನಿಲ್ದಾಣದ ಅನತಿ ದೂರದಲ್ಲಿದೆ ಇನ್ನೊಂದು ಅತಿ ವಿಶೇಷವಾದ ವಿಮಾನ ನಿಲ್ದಾಣ! ಅದುವೇ ನೀರಿನಲ್ಲಿರುವ ವಿಮಾನ ನಿಲ್ದಾಣ! ಸಮುದ್ರದ ಹಿನ್ನೀರ ವಿಶಾಲವಾದ ನದಿಗಳ ಮೇಲೆ ಪುಟ್ಟ ವಿಮಾನಗಳು ಹಾರಿ-ಇಳಿಯುವ  ನೋಟ ಬಹಳ ರೋಚಕ. ಈ ವಿಮಾನಗಳು ಭೂಮಿ ಮತ್ತು ನೀರು ಎರಡರಲ್ಲೂ ಚಲಿಸಬಲ್ಲಂತಹುಗಳು. ಒಮ್ಮೆಗೆ ಒಬ್ಬರು ಮಾತ್ರ ಪ್ರಯಾಣಿಸಬಲ್ಲ ಅತೀ ಸಣ್ಣ ವಿಮಾನದಿಂದ ಹಿಡಿದು, ಹೆಚ್ಚೆಂದರೆ, ಒಂದರಲ್ಲಿ ಇಪ್ಪತ್ತು ಜನರು ಸಂಚರಿಸಬಲ್ಲè ಪುಟ್ಟ ವಿಮಾನಗಳು ಇರುವವು. ಇವುಗಳು ಹಾರಲು ಅಥವಾ ಇಳಿಯಲು ರನ್ ವೇಗಳು ಬೇಕಾಗಿಲ್ಲ. ನೀರೇ ಇವುಗಳ ರನ್ ವೇಗಳು!  ಇವುಗಳು ನೀರಿನಲ್ಲಿ ವೇಗವಾಗಿ ಚಲಿಸುತ್ತಾ ಮೇಲೇರುವುದು ಮತ್ತು ಆಗಸದಿಂದ ಇಳಿದು ನೀರಿನಲ್ಲಿ ಸಾಗುವುದು ನೋಡಲು ತುಂಬಾ ಸೊಗಸು. ಇವುಗಳು ಖಾಸಗಿ ವಾಹನಗಳಾಗಿದ್ದು, ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ತಮ್ಮ ವ್ಯವಹಾರ ಹಾಗೂ ಇತರ ಕೆಲಸಗಳ ನಿಮಿತ್ತ ಸಂಚರಿಸಲು ವಿಮಾನವನ್ನು ಖಾಸಗಿಯಾಗಿ ಉಪಯೋಗಿಸುವ ಇಲ್ಲಿಯ ಮಂದಿಯ ಶ್ರೀಮಂತಿಕೆಯು ಇತರೆಡೆಗಳಿಗಿಂತ ಭಿನ್ನವಾಗಿ ಕಾಣುತ್ತದೆ. 

ಈ ಹಿನ್ನೀರಿನ ಪಕ್ಕದಲ್ಲಿರುವ ಹಸಿರು ತುಂಬಿರುವ ಹೆಮ್ಮರಗಳ ನೆರಳಿನಲ್ಲಿ ಸುತ್ತಾಡಿ ಮುಂದಕ್ಕೆ ನಡೆದಾಗ ಹಲವಾರು ವಿವಿಧ ಬಣ್ಣಗಳ ಪುಟ್ಟ ವಿಮಾನಗಳು ದಡದಲ್ಲಿ ತಂಗಿರುವುದನ್ನು ಗಮನಿಸಿದೆವು. ಇವುಗಳು ಭೂಮಿ ಮೇಲೆ ಚಲಿಸಲು, ಕಾರು ಚಲಿಸಲು ಇರುವಂತಹ ಅಂಕುಡೊಂಕಾದ ರಸ್ತೆಯೇ ಇದೆ.  ಈ ವಿಮಾನಗಳು ಆರೇಳು ಅಡಿಗಳಿಗಿಂತ ಹೆಚ್ಚು ಎತ್ತರವಿಲ್ಲ. ಈ ವಿಮಾನಗಳನ್ನು ಕುತೂಹಲದಿಂದ ಮುಟ್ಟಿ ತಟ್ಟಿ ಖುಷಿಪಟ್ಟೆವು.

(ಮುಂದುವರಿಯುವುದು….)

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  https://www.surahonne.com/?p=39366

-ಶಂಕರಿ ಶರ್ಮ, ಪುತ್ತೂರು

11 Responses

  1. ಸುಚೇತಾ says:

    ಭರ್ಜರಿ ಪ್ರವಾಸ ನಿಮ್ಮದು.

  2. ನಯನ ಬಜಕೂಡ್ಲು says:

    Very nice

  3. ಪ್ರವಾಸ ಕಥನ… ಓದಿಸಿಕೊಂಡು ಹೋಯಿತು..ಚಿತ್ರಗಳೂ ಪೂರಕವಾಗಿವೆ…ಮೇಡಂ

  4. Hema Mala says:

    ನಿಮ್ಮ ಪ್ರವಾಸಾನುಭವಗಳು ಅದ್ಭುತ ಹಾಗೂ ಅವುಗಳನ್ನು ಚಿತ್ರಿಸಿದ ರೀತಿ ಅನನ್ಯ.

  5. ಶಂಕರಿ ಶರ್ಮ says:

    ಧನ್ಯವಾದಗಳು… ಸೋದರಿ ನಾಗರತ್ನ ಅವರಿಗೆ

  6. ಶಂಕರಿ ಶರ್ಮ says:

    ಲೇಖನವನ್ನು ಪ್ರೀತಿಯಿಂದ ಪ್ರಕಟಿಸಿ, ಸ್ಪಂದಿಸಿ ಉತ್ತೇಜಿಸುತ್ತಿರುವ ಪತ್ರಿಕೆಯ ಗೌರವಾನ್ವಿತ ಸಂಪಾದಕಿ ಹೇಮಮಾಲಾ ಅವರಿಗೆ ಧನ್ಯವಾದಗಳು.

  7. Padmini Hegde says:

    ಕಥನ ಕುತೂಹಲಕಾರಿಯಾಗಿದೆ

    • ಶಂಕರಿ ಶರ್ಮ says:

      ಧನ್ಯವಾದಗಳು…ಸೋದರಿ ಪದ್ಮಿನಿ ಅವರಿಗೆ

  8. ಪದ್ಮಾ ಆನಂದ್ says:

    ಸೊಗಸಾದ ನಿರೂಪಣೆಯ ಪ್ರವಾಸ ಕಥನ ಎಂದಿನಂತೆ ಆಸಕ್ತಿದಾಯಕವಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: