ಮಂಥರೆಯ ತಿರುಮಂತ್ರ[ಚಿಂತನ]
“ಓಂ ಶ್ರೀ ಗುರುಭ್ಯೋ ನಮಃ”
ಪರರಾಜ್ಯ ದಿಂದ ಬಂದ ಒಬ್ಬಾಕೆ ಅಯೋಧ್ಯೆಯ ಸುಖ- ಸಂತೋಷವನ್ನು ಧ್ವಂಸ ಮಾಡಿದ ಮಾಟಗಾತಿ, ಅಲ್ಲದೆ ಅಲ್ಲಿಯ ಪ್ರಜೆಗಳ ಪಾಲಿಗೆ ಖಳನಾಯಕಿಯಾದವಳು ಆ ಧೂರ್ತ ಹೆಂಗಸು ; ಒಬ್ಬಾಕೆ ದಾಸಿಯ ನಿಮಿತ್ತದಿಂದ ಅಯೋಧ್ಯೆಯ ರಾಜಕಾರಣವೇ ಬದಲಾಯಿತು ಎಂದರೆ ತಪ್ಪಾಗಲಾರದು. ಮೇಲ್ನೋಟಕ್ಕೆ ಮಂಥರೆಯ ಕಾರಣದಿಂದ ಶ್ರೀ ರಾಮ-ಸೀತೆ-ಲಕ್ಷ್ಮಣರು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತಾಯಿತು. ರಾಜ ದಶರಥನ ಮರಣವಾಯಿತು; ಎಂಬುದು ನಿಜ. ಆದರೆ ಇನ್ನೊಂದು ದೃಷ್ಟಿಕೋನದಿಂದ ಯೋಚಿಸಿದರೆ ಶ್ರೀರಾಮಚಂದ್ರನ ಅವತಾರದ ಉದ್ದೇಶ ದುಷ್ಟರ ಸಂಹಾರಕ್ಕಲ್ಲವೇ? ಶ್ರೀರಾಮನ ಉದ್ದೇಶ ಈಡೇರಿಕೆಗೆ ವನಗಮನಕ್ಕೆ ಮಂಥರೆ ಮತ್ತು ಕೈಕೆಯಿಯು ಕಾರಣರಾದರು ಅಷ್ಟೇ .
ಯಾರು ಈ ಮಂಥರೆ?
ಕೇಕೆಯ ರಾಜ ಅಶ್ವಪತಿಯ ಸಾಕು ಮಗಳು ಮತ್ತು ಕೈಕೆಯ ಆಪ್ತ ಸೇವಕಿ, ದಾಸಿ ಮತ್ತು ಸಾಕುತಾಯಿ ಎಂದರೂ ತಪ್ಪಲ್ಲ. ಈಕೆ ಗೂನು ಬೆನ್ನಿನ ಕುಬ್ಜೆ ಅತ್ಯಂತ ಕುರೂಪಿ. ರಾಜ ದಶರಥನೊಂದಿಗೆ ಕೈಕೆಯಿಯ ಮದುವೆ ಮಾಡಿದ ರಾಜ ಅಶ್ವಪತಿಯು ಮಂಥರೆಯನ್ನು ಮಗಳ ಜೊತೆಗೆ ಅಯೋಧ್ಯೆಗೆ ಕಳಿಸಿಕೊಡುತ್ತಾನೆ. ಎಲ್ಲರಿಂದಲೂ ತಿರಸ್ಕೃತಳಾದ ಮಂಥರೆಗೆ ಆಪ್ತಳಾದವಳು ಅವಳ ಪ್ರಿಯ ಸ್ವಾಮಿನಿ ಕೈಕೆಯಿ ಮಾತ್ರ.
“ಪುಷ್ಯ” ನಕ್ಷತ್ರದ ಶುಭಯೋಗದಲ್ಲಿ ಶ್ರೀರಾಮನಿಗೆ ಯುವರಾಜ ಪಟ್ಟಾಭಿಷೇಕ ಎಂದು ನಿರ್ಣಯಿಸಲಾಗಿತ್ತು. ಇದನ್ನು ತಿಳಿದ ಮಂಥರೆಯ ಮನದಲ್ಲಿ ಮಂಥನ ಶುರುವಾಗುತ್ತದೆ. ಇದರಿಂದ ಕೈಕೆಯಿಗೆ ಅನಿಷ್ಟವಾಗುವುದು ಎಂದು ಭಾವಿಸಿದಳು.
ತಕ್ಷಣ ದಾಸಿ ಮಂಥರೆ “ಯಾಗಾಗ್ನಿಯ ಹುತಗಂಧವನ್ನು ಸಹಿಸಲಾರದ ನೀಚರಾಕ್ಷಸಿಯಂತೆ” ತನ್ನರಸಿಯ ಬಳಿಗೆ ಬಂದವಳೇ ಶ್ರೀರಾಮನ ಯುವರಾಜ ಪಟ್ಟಾಭಿಷೇಕದ ವಿಷಯವನ್ನು ತಿಳಿಸುತ್ತಾಳೆ. ಕೈಕೆಯಿ ಬಹಳ ಸಂತೋಷದಿಂದ ಕೊಟ್ಟ ಉಡುಗೊರೆಯನ್ನು ತಿರಸ್ಕರಿಸಿದ ಮಂಥರೆ ರಾಣಿಯನ್ನು ಹೀಯಾಳಿಸುತ್ತಾಳೆ; ಮತ್ತು ಶ್ರೀರಾಮನ ಪಟ್ಟಾಭಿಷೇಕವನ್ನು ತಡೆಯುವ ಉಪಾಯವನ್ನು ಯೋಚಿಸುತ್ತಾಳೆ.
ಎಷ್ಟೋ ವರುಷಗಳ ಬಳಿಕ ಮಕ್ಕಳನ್ನು ಪಡೆದ ರಾಜ ದಶರಥ ತನ್ನ ಜೇಷ್ಠ ಪುತ್ರ ಶ್ರೀರಾಮನಿಗೆ ಯುವರಾಜ ಪಟ್ಟವನ್ನು ಕೊಡುವ ಸಂದರ್ಭ; ಇದು ಬಹಳ ಅದ್ದೂರಿಯಾಗಿ ನಡೆಯಬೇಕಾದ ಸಮಾರಂಭವಲ್ಲವೇ? ಇದನ್ನು ಹೀಗೆ ಒಂದೇ ದಿನದಲ್ಲಿ ಬಹಳ ಗುಪ್ತವಾಗಿ ನಿರ್ಣಯಿಸುವ ಉದ್ದೇಶವೇನು? ರಾಜ್ಯದಲ್ಲಿ ವರ್ಷಂಪ್ರತಿ ಜರುಗುವ ದೇವರ ಉತ್ಸವದ ತಯಾರಿಯೇ ಎರಡು- ಮೂರು ತಿಂಗಳ ಮುಂಚಿತವಾಗಿ ಶುರುವಾಗುತ್ತದೆ . ಆದರೆ ಇಂದೇಕೆ ಹೀಗೆ? ಇಲ್ಲಿ ಯಾರ ಭಯವಿದೆ? ಇದುವರೆಗೆ ಕೈಕೆಯಿಯ ಅಂತ:ಪುರದಲ್ಲಿ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಇಂದು ಇವಳನ್ನು ಬಿಟ್ಟು ಇಂತಹ ಮುಖ್ಯ ವಿಚಾರವನ್ನು ನಿರ್ಣಯಿಸಲಾಗಿದೆ. ಅಲ್ಲದೆ ಈ ವಿಚಾರ ಈ ರಾಣಿಯನ್ನು ಬಿಟ್ಟು ಉಳಿದವರಿಗೆಲ್ಲಾ ತಿಳಿದಿದೆ . ಏನಿದರ ಮರ್ಮ? ರಾಮನ ತಮ್ಮಂದಿರಾದ ಭರತ- ಶತ್ರುಘ್ನರ ಅನುಪಸ್ಥಿತಿಯಲ್ಲಿ ಕೈಕೆಯಿಯ ತಂದೆ ಅಶ್ವಪತಿಗೂ ಆಹ್ವಾನ ನೀಡದೆ, ಸಂಭ್ರಮ-ಸಡಗರಗಳಿಂದ ನೆರವೇರಿಸಬೇಕಾದ ಈ ಸಮಾರಂಭವನ್ನು ಹೀಗೆ ರಹಸ್ಯವಾಗಿ ಏಕೆ ನಿರ್ಧರಿಸಬೇಕು? ಎಂದೆಲ್ಲಾ ಯೋಚಿಸಿದ ಕುಬ್ಜೆ ಮಂಥರೆ ತನ್ನ ಸ್ವಾಮಿನಿಯ ಒಳಿತನ್ನು ಬಯಸುವ ಉದ್ದೇಶ ಹೊಂದಿದವಳಾಗಿ ಅವಳ ಮನ: ಪರಿವರ್ತನೆಗೊಳಿಸಲು ಉದ್ಯುಕ್ತವಾಗುತ್ತಾಳೆ.
ಇಲ್ಲಿ ನಾವು ಯ:ಕಶ್ಚಿತ್ ದಾಸಿ ಮಂಥರೆಯ ರಾಜಕಾರಣವನ್ನು ಕಾಣಬಹುದು. “ಒಬ್ಬಾಕೆ ಸ್ತ್ರೀ ಮನಸ್ಸು ಮಾಡಿದರೆ ಒಂದು ಸಾಮ್ರಾಜ್ಯವನ್ನೇ ಕಟ್ಟಬಹುದು ; ಅಥವಾ ಕೆಡವಬಹುದು.” ಇದಕ್ಕೆ ಉದಾಹರಣೆ ರಾಮಾಯಣದಲ್ಲಿ ಮಂಥರೆ ಮತ್ತು ಶೂರ್ಪನಖಿಯರು. ಶ್ರೀರಾಮನ ವನಗಮನದ ಹಿಂದಿನ ಸೂತ್ರಧಾರಿ ಮಂಥರೆ . ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಒಬ್ಬ ದಾಸಿ ಅಯೋಧ್ಯೆಯ ರಾಜಕೀಯದಲ್ಲಿ ಮೂಗು ತೂರಿಸುತ್ತಿದ್ದಾಳೆ ಎಂದರೆ ಆ ಪ್ರೇರಕ ಶಕ್ತಿ ಮಾಯೆಯೇ ಇರಬೇಕು.
ಶ್ರೀರಾಮನ ಯುವರಾಜ ಪಟ್ಟದ ವಿಷಯ ತಿಳಿದು ಸಂಭ್ರಮಿಸುತ್ತಿರುವ ಕೈಕೆಯನ್ನು ಕುಬ್ಜೆ ವಿಧ-ವಿಧವಾಗಿ ಜರೆಯುತ್ತಾಳೆ . ಇಲ್ಲಿಂದ ಆರಂಭವಾಗುತ್ತದೆ ಮಂಥರೆಯ ದುರ್ಮಂತ್ರದ ಪ್ರಯೋಗ.
ಮಗಳೇ ! ಕೈಕೆಯೀ….”ಗ್ರೀಷ್ಮ ಋತುವಿನಲ್ಲಿ ನದಿಯ ಪ್ರವಾಹ ಒಣಗಿ ಹೋಗುವಂತೆ” ನಿನ್ನ ಈ ಸೌಭಾಗ್ಯ ಅಸ್ಥಿರವಾಗಿದೆ. ಬಲಿಷ್ಠನಾದ ಭರತನ ಭಯದಿಂದ ಅವನ ಅನುಪಸ್ಥಿತಿಯಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಲಾಗಿದೆ. ನಾಳೆ ನೀನೂ, ನಿನ್ನ ಮಗನೂ ನನ್ನಂತೆ ಕೌಸಲ್ಯೆಯ- ಶ್ರೀರಾಮನ ಗುಲಾಮರಾಗಬೇಕಾಗುತ್ತದೆ .
ಮೊದ-ಮೊದಲು ಕೈಕೆಯಿಯು ದಾಸಿಯನ್ನು ತಡೆಯುತ್ತಾ, ನನ್ನ ರಾಮನು ಅವನ ತಾಯಿ ಕೌಸಲ್ಯೆಗಿಂತ ಅಧಿಕ ಪ್ರೀತಿ ನನ್ನಲ್ಲಿಟ್ಟಿದ್ದಾನೆ. ಪಟ್ಟವೇರಲು ಭರತನಿಗಿಂತ ರಾಮನೇ ಅಧಿಕ ಅರ್ಹನು . ಸಕಲ ಗುಣ ಸಂಪನ್ನನಾದ ಶ್ರೀರಾಮನು ರಾಜನಾದರೆ ಎಲ್ಲರನ್ನೂ ತಂದೆಯಂತೆ ಪಾಲಿಸುವನು.
ಎಲೈ! ಕುಬ್ಜೆ, ಈ ಸಂತಸದ ವಿಷಯಕ್ಕೆ ನೀನೇಕೆ ಹೊಟ್ಟೆ ಉರಿದುಕೊಳ್ಳುವೆ ; ಎಂದು ಅವಳನ್ನು ಸಮಾಧಾನಿಸಲು ಉಪಕ್ರಮಿಸುತ್ತಾಳೆ. ಆಗ ಮಂಥರೆ ರಾಣಿಯೇ …..ಮುಂದೆ ಅಖಂಡ ಭೂ ಮಂಡಲದ ಅಧಿಪತಿ ಶ್ರೀರಾಮನಾದಾಗ ನೀನು ಭರತನೊಂದಿಗೆ ದೀನ- ಹೀನಳಾಗಿ ಅಶುಭ ಪರಾಭವಕ್ಕೆ ಪಾತ್ರಳಾಗುವೆ. ನಿನ್ನ – ನಿನ್ನೆಗಳಂತೆಯೇ ನಿನ್ನ – ನಾಳೆಗಳು ಇರಬೇಕಲ್ಲವೇ? ಎಂದೆಲ್ಲಾ ತಿರುಮಂತ್ರ ಹಾಕುತ್ತಾಳೆ.
ಅಲ್ಲದೆ ಅವಳನ್ನು ಅವಸರಿಸುತ್ತಾ …. “ನದಿ ನೀರೆಲ್ಲ ಆರಿದ ಮೇಲೆ ಅಣೆಕಟ್ಟು ಕಟ್ಟಲು ಹೊರಡುವುದು ಅಲ್ಲ;” ಈಗಿಂದೀಗಲೇ ಯುವರಾಜ ಪಟ್ಟವನ್ನು ನಿಲ್ಲಿಸು.
ಮಾಟಗಾತಿ ಮಂಥರೆ ಕೈಕೆಯಿಗೆ ತಾಯಿಯ ಜವಾಬ್ದಾರಿಯ ಬಗ್ಗೆ ತಿಳಿಸುತ್ತಾ ಭರತನಿಗೆ ನ್ಯಾಯ ಒದಗಿಸುವುದು ತಾಯಿಯಾದ ನಿನ್ನ ಕರ್ತವ್ಯ ಎಂದು ಜ್ಞಾಪಿಸುವ ಮೂಲಕ ತಾಯಿಯ ಕರುಳನ್ನು ಕುಟುಕುತ್ತಾಳೆ. ಶ್ರೀರಾಮ ಯುವರಾಜನಾದರೆ ಅದು ನಿನಗೆ , ಭರತನಿಗೆ ಹಾಗೂ ನನಗೂ ಒಳಿತಲ್ಲ. ಇಲ್ಲಿ ನಾವು ಮಂಥರೆಯ ಸ್ವಾರ್ಥವನ್ನು , ಸ್ವಾಮಿ ನಿಷ್ಠೆಯನ್ನು ಕಾಣಬಹುದು. ತನ್ನ ಮಾತಿನ ಮೋಡಿಗೆ ಒಳಗಾಗುತ್ತಿದ್ದ ರಾಣಿಯನ್ನು ಮಂಥರೆ ಇನ್ನಷ್ಟು ಹೀಯಾಳಿಸುತ್ತಾಳೆ .ದಶರಥನ ಪ್ರಿಯ ಪತ್ನಿಗೆ ನಾಳೆಯೇ ನಡೆಯಲಿರುವ ಪಟ್ಟಾಭಿಷೇಕದ ವಿಷಯ ಈವರೆಗೂ ತಿಳಿದಿಲ್ಲ.ಇದೆಂತಹ ವಿಪರ್ಯಾಸ ! ಭರತನಿಗೆ ಎಲ್ಲಾ ಇದ್ದರೂ ಅವನು ಮಾತ್ರ ಪರದೇಶಿ”ಯಾದನು ಎಂದಳು . ಈ ಎಲ್ಲಾ ದುರ್ಮಂತ್ರಗಳನ್ನು ಕೇಳಿದ ಕೈಕೆಯಿ ಮಾಯೆಯ ಮೋಡಿಗೆ ಸಿಲುಕಿ ಈಗ ನಾನು ಏನು ಮಾಡಲಿ? ಎನ್ನುತ್ತಾಳೆ.
ಇದೇ ಸಂದರ್ಭಕ್ಕಾಗಿ ಕಾದಿದ್ದ ಕುಬ್ಜೆ, ಹಿಂದೆ ದೇವಾಸುರರ ಯುದ್ಧದಲ್ಲಿ ನೀನು ರಾಜ ದಶರಥನ ಪ್ರಾಣರಕ್ಷಣೆ ಮಾಡಿದ್ದೆ ಅಲ್ಲವೇ? ಆ ಸಮಯದಲ್ಲಿ ರಾಜ ನಿನಗೆ ನೀಡಿದ ಎರಡು ವರಗಳನ್ನು ಈಗ ಉಹಪಯೋಗಿಸಿಕೋ. ಸೂರ್ಯವಂಶದ ಅರಸರು ಎಂದಿಗೂ ಮಾತಿಗೆ ತಪ್ಪುವವರಲ್ಲ. ಮೊದಲನೆಯ ವರವಾಗಿ ಯುವರಾಜ ಪಟ್ಟಾಭಿಷೇಕ ನಿನ್ನ ಮಗ ಭರತನಿಗೆ ಆಗಬೇಕು ಎಂದೂ, ಎರಡನೇ ವರವಾಗಿ ಶ್ರೀರಾಮನು ಹದಿನಾಲ್ಕು ವರುಷ ವನವಾಸಕ್ಕೆ ಹೋಗಬೇಕು ಎಂದೂ ಕೇಳಿ ನಿನ್ನಆಸೆಯನ್ನುಈಡೇರಿಸಿಕೋ. ಹೀಗೆ ಕೈಕೆಯಿಯ ಅಂತ:ಕರಣವನ್ನು ಕಲಕುವಲ್ಲಿ ಮಂಥರೆಯ ತಿರುಮಂತ್ರ ಫಲಕಾರಿಯಾಯಿತು.
ಇಲ್ಲಿ ಕೈಕೆಯಿಯ ಮೇಲಿರುವ ಕುಬ್ಜೆಯ ಅನನ್ಯ ಪ್ರೀತಿ – ಭಕ್ತಿಯನ್ನು, ಸ್ವಾಮಿ ನಿಷ್ಠೆಯನ್ನು ಕಾಣಬಹುದು. ಇಲ್ಲಿ ನಮ್ಮ ಮುಂದೆ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ ಭರತನಿಗೆ ಪಟ್ಟಾಭಿಷೇಕವಾದರೆ ಕೈಕೆಯಿಗೆ ರಾಜಮಾತೆಯ ಮರ್ಯಾದೆ ಸಿಗುವುದಲ್ಲವೇ? ಇನ್ನು ರಾಮನನ್ನು ಕಾಡಿಗೆ ಕಳಿಸುವ ಉದ್ದೇಶವೇನು?
ಏಕೆಂದರೆ ಅಯೋಧ್ಯೆಯ ಪ್ರಜೆಗಳೆಲ್ಲ ರಾಮನ ಆಡಳಿತ ಬಯಸಿ ಭರತನ ವಿರುದ್ಧ ದಂಗೆ ಏಳಬಹುದು. ಹದಿನಾಲ್ಕು ವರ್ಷಗಳ ದೀರ್ಘ ಅವಧಿಯಲ್ಲಿ ಅವರು ಶ್ರೀರಾಮನನ್ನು ಮರೆತು ಭರತನನ್ನು ಒಪ್ಪಬಹುದು; ಎಂಬುದಾಗಿರಬಹುದು. ಅಂತೆಯೇ ಧೂರ್ತರ ದುರ್ಬೋಧನೆಯಿಂದ ಪರಿಶುದ್ಧ ಮನಸ್ಸು ಕೂಡಾ ಕೆಡುವುದು, ಮತ್ತು ಅದು ವ್ಯಕ್ತಿಯನ್ನು ದಾರಿ ತಪ್ಪಿಸುವುದು. ಆದ್ದರಿಂದ “ದುಷ್ಟರಿಂದ ದೂರವಿರಬೇಕು.”
ಹೀಗೆ ಮಂಥರೆಯ ತಿರುಮಂತ್ರದ ಫಲವೇ ಅಯೋಧ್ಯೆಯ ಸುಖ- ಸಂತೋಷ, ನೆಮ್ಮದಿಯ ಸರ್ವನಾಶ. ಅಂತಿದ್ದರೂ ಶ್ರೀ ರಾಮನು ಅವರಿಬ್ಬರನ್ನು ಕ್ಷಮಿಸುತ್ತಾ ವನವಾಸಕ್ಕೆ ತೆರಳುತ್ತಾನೆ. ಹದಿನಾಲ್ಕು ವರ್ಷಗಳ ಬಳಿಕ ಹಿಂದಿರುಗಿ ಬಂದವನೇ ತಾಯಿ ಕೈಕೆಯಿಗೆ ನಮಸ್ಕರಿಸುತ್ತಾನೆ. ಮಂಥರೆಯನ್ನು ಕ್ಷಮಿಸಿ, ಪ್ರೀತಿಯಿಂದ ಮಾತನಾಡಿಸುತ್ತಾನೆ. ಆ ಮೂಲಕ ತನ್ನ ಉನ್ನತ ವ್ಯಕ್ತಿತ್ವವನ್ನು ಪ್ರಪಂಚಕ್ಕೆ ತೋರಿಸುತ್ತಾನೆ.
– ವನಿತಾ ಪ್ರಸಾದ್ ಪಟ್ಟಾಜೆ, ತುಮಕೂರು.
ಚೆನ್ನಾಗಿದೆ
ಮಾಹಿತಿಯುಳ್ಳ..ಲೇಖನ ಚೆನ್ನಾಗಿದೆ..ಮೇಡಂ
ಧನ್ಯವಾದಗಳು ನಯನ ಮೇಡಂ, ಧನ್ಯವಾದಗಳು ನಾಗರತ್ನ ಮೇಡಂ ,ನಮಸ್ತೆ
ಸೊಗಸಾದ ನಿರೂಪಣೆ. ಮಂಥರೆಯ ಬಗ್ಗೆ ಮೊದಲು ಓದಿದ್ದರೂ ಪುನ: ಓದಿಸಿಕೊಂಡು ಹೋಯಿತು.
ಚೆಂದದ ನಿರೂಪಣೆ
Good narration.
ಮಂಥರೆಯ ಮನದ ಮಂಥನವನ್ನು ಸೊಗಸಾಗಿ ಚಿತ್ರಿಸಿದ ಪ್ರಬುದ್ಧ ಲೇಖನವು ಆಸಕ್ತಿದಾಯಕವಾಗಿದೆ… ಧನ್ಯವಾದಗಳು ವನಿತಕ್ಕ.
ನನ್ನ ಚಿಂತನ ವನ್ನು ಮೆಚ್ಚಿದ ಸಂಪಾದಕಿ ಹೇಮಮಾಲಾ ಮೇಡಂ ಆವರಿಗೆ, ಜಿ.ಕೆ.ಭಟ್ ಅವರಿಗೆ, ಗಾಯತ್ರಿ ಮೇಡಂ ಅವರಿಗೆ, ಮತ್ತು ಮೇಡಂ ಶಂಕರಿ ಅಕ್ಕ ಅವರಿಗೆ ತುಂಬು ಹೃದಯದ ಧನ್ಯವಾದ ಗಳು.
ಮಂಥರೆಯ ಕುಟಿಲತೆಯನ್ನು ಅಚ್ಚುಕಟ್ಟಾದ ನಿರ
ಮಂಥರೆಯ ಕುಟಿಲತೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದೀರಿ. ಮಹಾಕಾವ್ಯಗಳ ಕಥೆಗಳನ್ನು ಎಷ್ಟಷ್ಟು ತಿಳಿದರೂ ಮತ್ತೆ ಮತ್ತೆ ತಿಳಿಯ ಬೇಕೆನಿಸುತ್ತದೆ. ಚಂದದ ಲೇಖನ.