ವಾಟ್ಸಾಪ್ ಕಥೆ 46 : ಗಾಜು ಮತ್ತು ವಜ್ರ
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನು ದಕ್ಷನಾಗಿದ್ದ. ಪ್ರಜಾಪಾಲನೆಯನ್ನು ಸಮರ್ಪಕವಾಗಿ ಮಾಡುತ್ತಿದ್ದ. ಜನಪ್ರಿಯನಾಗಿದ್ದ. ಒಂದು ಛಳಿಗಾಲದ ಅಧಿವೇಶನವನ್ನು ಅರಮನೆಯ ಮುಂದಿನ ತೆರೆದ ಸಬಾಂಗಣದಲ್ಲಿ ನಡೆಸಲು ತೀರ್ಮಾನಿಸಿದ. ರಾಜಸಭೆಯನ್ನು ನೋಡಲು ಹಲವರು ಸಾಮಾನ್ಯ ಪ್ರಜೆಗಳೂ ಅಲ್ಲಿ ನೆರೆದಿದ್ದರು. ರಾಜನು ಮೊದಲಿಗೆ ಸಕಲರ ಯೋಗಕ್ಷೇಮಗಳನ್ನು ವಿಚಾರಿಸಿದ, ಮುಂದಿನ ಕಲಾಪಗಳನ್ನು ಪ್ರಾರಂಭಿಸುವವನಿದ್ದ.
ಅಷ್ಟರಲ್ಲಿ ಆಗಂತುಕನೊಬ್ಬ ಸಬೆಯಲ್ಲಿ ನಿಂತುಕೊಂಡು ರಾಜನಿಗೆ ಕೈಮುಗಿದು ”ಮಹಾಪ್ರಭೂ ನಾನೊಬ್ಬ ಪ್ರವಾಸಿ. ಅನೇಕ ಪ್ರದೇಶಗಳ ರಾಜಾಸ್ಥಾನಗಳಿಗೆ ಭೇಟಿಕೊಟ್ಟು ಇಲ್ಲಿಗೆ ಬಂದಿದ್ದೇನೆ. ನಿಮ್ಮಲ್ಲಿ ಜನರು ಬಹಳ ಬುದ್ಧಿಶಾಲಿಗಳೆಂದು ಕೇಳಿದ್ದೇನೆ. ಅದಕ್ಕಾಗಿ ನನ್ನದೊಂದು ಪ್ರಶ್ನೆಗೆ ಉತ್ತರ ಬಯಸಿದ್ದೇನೆ” ಎಂದನು.
ರಾಜನು ಶಾಂತವಾಗಿ ಅವನ ಮಾತನ್ನು ಪುರಸ್ಕರಿಸಿ ”ನಿನ್ನ ಪ್ರಶ್ನೆಯನ್ನು ಕೇಳಬಹುದು’ ಎಂದು ಅನುಮತಿ ನೀಡಿದನು.
ಪ್ರವಾಸಿಯು ”ಪ್ರಭೂ ನನ್ನ ಬಳಿ ಎರಡು ಹೊಳೆಯುವ ವಸ್ತುಗಳಿವೆ. ಅವುಗಳಲ್ಲಿ ಒಂದು ಮಾತ್ರ ಬೆಲೆಬಾಳುವ ವಜ್ರವಾಗಿದೆ. ಬುದ್ಧಿವಂತರು ಅವನ್ನು ಪರೀಕ್ಷಿಸಿ ಸರಿಯಾಗಿ ಆಯ್ಕೆ ಮಾಡಿ ಹೇಳಬೇಕು. ಒಂದು ವೇಳೆ ತಪ್ಪಾಗಿ ಹೇಳಿದರೆ ನನಗೆ ಆ ವಜ್ರವು ಬೆಲೆಬಾಳುವಷ್ಟು ಧನವನ್ನು ಕೊಡಿಸಬೇಕು” ಎಂದು ಶರತ್ತನ್ನೂ ಹೇಳಿದನು.
ರಾಜನಿಗೆ ತನ್ನ ಜನರ ಬುದ್ಧಿಶಕ್ತಿಯ ಬಗ್ಗೆ ಹೆಮ್ಮೆಯಿತ್ತು. ಆಗಲೆಂದು ಒಪ್ಪಿಕೊಂಡನು. ಪ್ರವಾಸಿಯು ತನ್ನ ಚೀಲದಿಂದ ಥಳಥಳ ಹೊಳೆಯುತ್ತಿದ್ದ ಎರಡು ವಸ್ತುಗಳನ್ನು ತೆಗೆದು ಪೀಠದಮೇಲಿಟ್ಟ. ಅದು ತೆರೆದ ಸಭಾಂಗಣವಾಗಿತ್ತು ಬಿಸಿಲು ಜೋರಾಗಿ ಬಿದ್ದಿತ್ತು. ಅದರಿಂದ ಎರಡೂ ವಸ್ತುಗಳು ಕಣ್ಣುಕೋರೈಸುವಂತೆ ಕಾಣುತ್ತಿದ್ದವು. ಅನೇಕರು ವಸ್ತುಗಳನ್ನು ಪರಿಶೀಲಿಸಿದರು. ಆದರೆ ಯಾರಿಗೂ ಖಚಿತವಾದ ಉತ್ತರ ಗೊತ್ತಾಗಲಿಲ್ಲ. ರಾಜನಿಗೆ ಬೇಸರವಾಗುತ್ತಿತ್ತು. ಅದು ರಾಜ್ಯದ ಅಭಿಮಾನದ ಪ್ರಶ್ನೆಯಾಗಿತ್ತು.
ಅಷ್ಟರಲ್ಲಿ ಸಾರ್ವಜನಿಕರ ಗುಂಪಿನಿಂದ ಒಬ್ಬ ವೃದ್ಧನು ತನ್ನ ಮೊಮ್ಮಗನ ನೆರವಿನಿಂದ ಪೀಠದ ಬಳಿಗೆ ಬಂದನು ಅವನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ರಾಜನು ”ನಿಮಗೆ ಕಣ್ಣಿನ ಶಕ್ತಿಯು ಕ್ಷೀಣಿಸಿದೆ. ಹೇಗೆ ವಜ್ರವನ್ನು ಗುರುತಿಸಬಲ್ಲಿರಿ?” ಎಂದು ಪ್ರಶ್ನಿಸಿದನು. ಮುದುಕನು ”ಕಣ್ಣಿನ ಶಕ್ತಿ ಮಂದವಾಗಿದ್ದರೆ ಏನಂತೆ, ಸ್ಪರ್ಶಶಕ್ತಿ ಚುರುಕಾಗಿದೆ ಪ್ರಭು. ಅದರಿಂದಲೇ ಗುರುತಿಸಬಲ್ಲೆ” ಎಂದು ಎರಡೂ ವಸ್ತುಗಳನ್ನು ತನ್ನ ಅಂಗೈಯಲ್ಲಿ ಇಟ್ಟುಕೊಂಡನು. ಕ್ಷಣಗಳ ನಂತರ ಪ್ರವಾಸಿಗೆ ಒಂದನ್ನು ಕೊಟ್ಟು ”ಇದು ಗಾಜಿನ ಚೂರು, ಇನ್ನೊಂದನ್ನು ಕೊಡುತ್ತಾ ಇದು ನಿಜವಾದ ವಜ್ರ’ ಎಂದ.
ಪ್ರವಾಸಿಯು ತಲೆದೂಗಿ ”ಪ್ರಭುಗಳೇ, ಇವರ ಆಯ್ಕೆ ಸರಿಯಾಗಿದೆ” ಎಂದು ಒಪ್ಪಿಕೊಂಡನು. ಸಭೆಗೆ ವಂದಿಸಿ ಹೊರಟುಹೋದನು.
ರಾಜನಿಗೆ ಕುತೂಹಲ. ಅವನು ವೃದ್ಧನನ್ನು ‘ನೀವು ಹೇಗೆ ಸ್ಪರ್ಶದಿಂದ ನಿಜವಾದ ವಜ್ರವನ್ನು ಕಂಡುಹಿಡಿದಿರಿ?’ ಎಂದು ಕೇಳಿದನು. ವೃದ್ಧನು ”ಅದು ತುಂಬ ಸುಲಭ ಪ್ರಭು. ಗಾಜು ಸೂರ್ಯನ ಶಾಖಕ್ಕೆ ಬಿಸಿಯಾಗುತ್ತದೆ. ಆದರೆ ವಜ್ರವು ಬಿಸಿಯಾಗದು. ನನ್ನ ಅಂಗೈಯಲ್ಲಿ ಇಟ್ಟುಕೊಂಡಾಗ ನನಗೆ ತಿಳಿಯಿತು” ಎಂದನು ರಾಜನಿಗೆ ಸಂತೋಷವಾಯಿತು. ವೃದ್ಧನಿಗೆ ಸಾಕಷ್ಟು ಬಹುಮಾನಗಳನ್ನು ಕೊಟ್ಟು ಗೌರವಿಸಿದನು.
‘ಮನುಷ್ಯ ಕೂಡ ಗಾಜಿನಂತಹ ಮನಸ್ಸನ್ನು ಹೊಂದಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ತಲೆ ಬಿಸಿಮಾಡಿಕೊಂಡು ಒತ್ತಡಕ್ಕೊಳಗಾಗುತ್ತಾನೆ. ಮನಸ್ಸು ಬಿರುಕು ಬಿಡಲಾರಂಭಿಸುತ್ತದೆ. ಅದೇ ಮನಸ್ಸು ಸಮಚಿತ್ತವಾಗಿ ವಜ್ರದಂತಿದ್ದರೆ ಒತ್ತಡಗಳಿಗೆ ಒಳಗಾಗುವುದಿಲ್ಲ. ”ವಜ್ರಾದಪಿ ಕಠೋರಾಣಿ, ದರ್ಪಣಾದಪಿ ಭಂಗುರಃ” ಎಂಬಂತೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ಸಂದೇಶ ನೀಡುವ ಕಥೆ.
ಧನ್ಯವಾದಗಳು ನಯನ ಮೇಡಂ
ಸೂಕ್ಷ್ಮ ಗ್ರಹಿಕೆಯ ರೀತಿ ಗಮನಾರ್ಹ ವಾಗಿದೆ.
ಧನ್ಯವಾದಗಳು ಪದ್ಮಿನಿ ಮೇಡಂ
ನಾಗರತ್ನ ಭಗಿನಿಯವರ ಉತ್ತಮ ಸಂದೇಶ ಹೊತ್ತ ಸರಳ ಕಥೆಯು, ಸೂಕ್ತ ರೇಖಾಚಿತ್ರದೊಂದಿಗೆ ಸುಂದರವಾಗಿ ಮೂಡಿಬಂದಿದೆ.
ಧನ್ಯವಾದಗಳು ಶಂಕರಿ ಮೇಡಂ
ಕಥೆ ಬಹಳ ಇಷ್ಟವಾಯಿತು. ನಿರೂಪಣೆ, ಸಂದೇಶ ತುಂಬಾ ಚೆನ್ನಾಗಿದೆ.
ಧನ್ಯವಾದಗಳು ಸಾವಿತ್ರಿ ಮೇಡಂ
ಕಥೆಯು ಮನದ ಕುತೂಹಲವನ್ನು ಬೇರೊಂದು ದಿಕ್ಕಿ ಕೊಂಡೊಯ್ಯುತ್ತಿದುದು, ದುತ್ತೆಂದು, ಬೇರೆಯೇ ಒಂದು ಆಯಾಮದಲ್ಲಿ ಎಷ್ಟು ಒಳ್ಳೆಯ ಸಂದೇಶವನ್ನು ನೀಡಿ ಬಿಟ್ಟಿತಲ್ಲಾ!
ನಾನು ನಾಲೆಡ್ಜ್ ಈಜ಼್ ಪವರ್ ಸಂದೇಶವನ್ನು ನೀಡ ಹೊರಟಿದೆ ಎಂದು ಕೊಳ್ಳುತ್ತಿದ್ದೆ, ಅದೂ ಹೌದಾದರೂ ……….. ಚಂದ ಕಥೆ.