ಗೋಪುರಗಳ ನಾಡಿನಲ್ಲಿ…ಹೆಜ್ಜೆ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ರಾಮೇಶ್ವರಂ 22 ತೀರ್ಥ ಸ್ನಾನ

ರಾಮೇಶ್ವರಂನ ದೇವಾಲಯದ ಪಕ್ಕದಲ್ಲಿಯೇ ಇರುವ ಸಮುದ್ರದ ದಂಡೆಗೆ ಬಂದೆವು. ನಮಗೆ ಟ್ರಾವೆಲ್4ಯು ನವರು ತಾವು ಕೊಟ್ಟ ‘ಸ್ನಾನದ ಟವೆಲ್ ಅನ್ನು ಹೆಗಲಿಗೆ ಹಾಕಿಕೊಳ್ಳಿ , ಜನಜಂಗುಳಿ ಮಧ್ಯೆ ಮಧ್ಯೆ ನಮ್ಮ ತಂಡ ಯಾವುದೆಂದು ನಮಗೆ ಗೊತ್ತಾಗಬೇಕು’ ಅಂದರು. ಸಮುದ್ರ ದಡದಲ್ಲಿ, ನಮ್ಮ ತಂಡದವರು ಸಂಪರ್ಕಿಸಿದ ಅರ್ಚಕರು ನಮಗೆ ಸಮುದ್ರ ಸ್ನಾನ ಸಂಕಲ್ಪ ವಿಧಿಯನ್ನು ಬೋಧಿಸಿದರು. ಸಮುದ್ರವನ್ನು ‘ಅಗ್ನಿ ತೀರ್ಥ’ವೆಂದೂ ಕರೆಯುತ್ತಾರೆ. ರಾಮೇಶ್ವರಂ ಕಡಲ ಕಿನಾರೆಯಲ್ಲಿ ಅಲೆಗಳ ಸುಳಿವೇ ಇಲ್ಲ. ಕತೆಯ ಪ್ರಕಾರ ರಾಮನು ಸಮುದ್ರ ದೇವತೆಯನ್ನು ಶಾಂತವಾಗಿರಲು ವಿನಂತಿಸಿದ ಕಾರಣ ಇಲ್ಲಿ ಸಮುದ್ರವು ಅಲೆಗಳ ಅಬ್ಬರವಿಲ್ಲದೆ ಶಾಂತವಾಗಿದೆ. ಸಮುದ್ರದ ಆಳವೂ ನಿಧಾನವಾಗಿ ಹೆಚ್ಚುತ್ತದೆ. ಹಾಗಾಗಿ ನಾವು ಅಂಜಿಕೆಯಿಲ್ಲದೆ ಸಮುದ್ರದಲ್ಲಿ 100 ಅಡಿಗೂ ದೂರ ನಡೆಯಲು ಸಾಧ್ಯವಾಗುತ್ತದೆ. ನಾವು ಸಮುದ್ರದಲ್ಲಿ ಮುಳುಗು ಹಾಕಿದೆವು. ಕೆಲವರು ಕಾಶಿಯಾತ್ರೆಯಾಗಿ ಮರಳನ್ನು ಕಟ್ಟಿಕೊಂಡರು. ಇನ್ನು ಕೆಲವರು ಪಿತೃತರ್ಪಣ ಕೊಟ್ಟರು.

ರಾಮೇಶ್ವರಂನ ಪರಿಸರದಲ್ಲಿ ಒಟ್ಟು 64 ತೀರ್ಥಗಳಿವೆಯಂತೆ. ಅವುಗಳಲ್ಲಿ 22 ತೀರ್ಥಗಳು ದೇವಾಲಯದ ಆವರಣದಲ್ಲಿ ಇವೆ. ಇಲ್ಲಿ ನಮಗೆ ತೀರ್ಥ ಸ್ನಾನ ಮಾಡಲು ಅವಕಾಶವಿದೆ. ಬಾವಿಯಿಂದ ಬಕೆಟ್ ನಲ್ಲಿ ನೀರನ್ನು ಮೊಗೆದು ನಮ್ಮ ತಲೆಗೆ ಸುರಿಯುವ ಉದ್ಯೋಗ ಮಾಡುವ ಸ್ಠಳೀಯರಿರುತ್ತಾರೆ. ನಮ್ಮ ತಂಡದ ಲೀಡರ್ ಇಬ್ಬರನ್ನು ಗೊತ್ತು ಮಾಡಿದರು. ಅಷ್ಟರಲ್ಲಿ ಬಾಲಕೃಷ್ಣ ಅವರ ದನಿ ಕೇಳಿತು ” ಎಲ್ಲರೂ ಟ್ರಾವೆಲ್4ಯು ಗುರುತಿನ ಟವೆಲ್ ಅನ್ನು ಹೆಗಲ ಮೇಲೆ ಹೊದ್ದು ಕೊಳ್ಳಿ. ನಾವು ಗೊತ್ತು ಮಾಡಿದ ಜನರು ತೀರ್ಥಗಳಿಂದ ನೀರನ್ನು ಮೊಗೆದು, ನಮ್ಮ ಟವೆಲ್ ಹಾಕಿಕೊಂಡವರ ಮೇಲೆ ಸುರಿಯುತ್ತಾರೆ. ಟವೆಲ್ ಹಾಕಿಕೊಂಡರೆ ಒಳ್ಳೆಯದು, ಇಲ್ಲವಾದರೆ ಒಂದು ಸಣ್ಣ ಬಕೆಟ್ ನೀರನ್ನು ಸರದಿ ಸಾಲಿನ ಉದ್ದಕ್ಕೂ ಪ್ರೋಕ್ಷಿಸಿ ಬಿಡುತ್ತಾರೆ, ನಿಮ್ಮ ಮೇಲೆ ನೀರು ಬೀಳಲ್ಲ’ ಅಂದರು. ಶಾಲಾ ಕಾಲೇಜು, ಆಫೀಸ್ ಗಳಲ್ಲಿ ನಮ್ಮ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ಹೆಮ್ಮೆಯಿಂದ ಐಡೆಂಟಿಟಿ ಕಾರ್ಡ್ ದಾರ ತಗಲಿಸಿ ಕತ್ತಿಗೆ ತಗಲಿಸಿಕೊಂಡಿದ್ದೆವು . ಆದರೆ, ಸ್ನಾನದ ಟವೆಲ್ ಕೂಡಾ ಐಡೆಂಟಿಟಿ ಕಾರ್ಡ್ ಆಗುತ್ತದೆ, ತಂಡದ ನಾಯಕ ಹೇಳುವ ವಿಚಾರಗಳು ಕೆಲವೊಮ್ಮೆ ಕ್ಷುಲ್ಲಕ ಎನಿಸಬಹುದಾದರೂ ಅದರ ಹಿಂದೆ ಸಕಾರಣ ಹಾಗೂ ಅವರ ಅನುಭವದಿಂದ ಬಂದ ನೈಪುಣ್ಯತೆ ಇರುತ್ತದೆ ಎಂಬ ಜ್ಞಾನೋದಯವಾಯಿತು.

ಮೈ ಒರೆಸಲು ಯಾವುದೋ ಟವೆಲ್ ತೆಗೆದುಕೊಂಡರಾಯಿತು ಎಂಬ ಮನೋಭಾವದಲ್ಲಿದ್ದ ಕೆಲವರು ‘ ಓಹ್ ಆ ಟವೆಲ್ ಅನ್ನು ಮನೆಯಲ್ಲಿಯೇ ಬಿಟ್ಟೆವು, ಹೋಟೇಲ್ ನಲ್ಲಿ ಬಾಕಿ ಆಯ್ತು….ನಾನು ತಂದಿಲ್ಲ…ಬೇರೆ ಟವೆಲ್ ತಂದೆ..’ ಹೀಗೆ ಹುಳ್ಳಹುಳ್ಳಗೆ ಮಾತನಾಡಿಕೊಂಡರು. ಆದರೆ, ಗ್ರೂಪ್ ನಲ್ಲಿ ಇದ್ದುದರಿಂದ, ಟ್ರಾವೆಲ್ 4ಯು ಟವೆಲ್ ತರದಿದ್ದುದರಿಂದಾಗಿ ತೊಂದರೆಯಾಗಲಿಲ್ಲ.

ದೇವಾಲಯದ ಆವರಣದಲ್ಲಿರುವ 22 ತೀರ್ಥಗಳು: ಮಹಾಲಕ್ಷ್ಮಿ ತೀರ್ಥ, ಸಾವಿತ್ರಿ ತೀರ್ಥ, ಗಾಯತ್ರಿ ತೀರ್ಥ, ಸರಸ್ವತಿ ತೀರ್ಥ, ಶಿವತೀರ್ಥ, ಶಂಕು ತೀರ್ಥ, ಸೇತು ಮಾಧವ ತೀರ್ಥ, ಕವಚ ತೀರ್ಥ, ಗಂಧಮಾದನ ತೀರ್ಥ, ಗವಯ ತೀರ್ಥ, ನಳ ತೀರ್ಥ, ನೀಲ ತೀರ್ಥ, ಚಕ್ರತೀರ್ಥ, ಚಕ್ಕರಾಹತೀರ್ಥ, ಸೂರ್ಯ ತೀರ್ಥ , ಚಂದ್ರ ತೀರ್ಥ, ಗಂಗಾ ತೀರ್ಥ, ಯಮುನಾ ತೀರ್ಥ, ಗಯಾ ತೀರ್ಥ, ಸದ್ಯಾಮಿರ್ತ ತೀರ್ಥ, ಸರ್ವ ತೀರ್ಥ ಮತ್ತು ಕೋಟಿ ತೀರ್ಥ.


ಸರದಿ ಸಾಲಿನಲ್ಲಿ ಸಾಲಾಗಿ ತೀರ್ಥಗಳ ಕಡೆಗೆ ನಡೆದೆವು. ಕೈಯಲ್ಲಿ ಹಗ್ಗ ಕಟ್ಟಿದ ಪುಟ್ಟ ಬಕೆಟ್ ( ಅಂದಾಜು 2 ಲೀ ನೀರು ಹಿಡಿಯುವಷ್ಟು) ಒಂದನ್ನು ಹಿಡಿದುಕೊಂಡು ನಮ್ಮ ತಂಡದ ಜೊತೆಗೆ ಬಂದ ಇಬ್ಬರು ಸ್ಥಳೀಯರು, ಪ್ರತಿ ಬಾವಿಯಿಂದ ನೀರನ್ನು ಎತ್ತಿ ‘ಟವೆಲ್ ‘ ಧರಿಸಿದವರ ಕಡೆಗೆ ಎರಚುತ್ತಿದರು .ಅಲ್ಲಲ್ಲಿ ಜನಸಂದಣಿಯಲ್ಲಿ ಇತರರೂ ಸೇರುತ್ತಿದ್ದರು. ಒಟ್ಟಿನಲ್ಲಿ ತಂಡ ಮುಂದುವರಿಯುತು. 22 ತೀರ್ಥಗಳ ಸ್ನಾನ ಮಾಡಲು ಅಂದಾಜು ಒಂದು ಗಂಟೆ ಬೇಕಾಯಿತು.

ಹಿಂದೊಮ್ಮೆ, ಯಾವುದೋ ಮಾಧ್ಯಮದಲ್ಲಿ ಸಮುದ್ರದ ಪಕ್ಕದಲ್ಲಿಯೇ ಇದ್ದರೂ, ರಾಮೇಶ್ವರಂನಲ್ಲಿರುವ ತೀರ್ಥಗಳ ನೀರು ಸಿಹಿಯಾಗಿರುತ್ತದೆಯೆಂದೂ ಬಾವಿಗಳು ಕಿಲೋ ಮೀಟರ್ ಗಳಷ್ಟು ಆಳವಿರುತ್ತದೆ, ತಳ ಕಾಣಿಸುವುದಿಲ್ಲ, ಇದು ವಿಜ್ಞಾನಿಗಳಿಗೆ ಸವಾಲೊಡ್ಡುವ ವಿಷಯ ಇತ್ಯಾದಿ ಓದಿದ್ದೆ. ನಾನು ಗಮನಿಸಿದ ಹಾಗೆ ಹೆಚ್ಚಿನ ಬಾವಿಗಳು ಅಕ್ಕ-ಪಕ್ಕ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಸಿಮೆಂಟ್ ನ ಕಟ್ಟೆ ಕಟ್ಟಿದ್ದಾರೆ. ಹೆಚ್ಚಿನ ಬಾವಿಗಳಿಗೆ ಬಗ್ಗಿ ನೋಡಿದರೆ, ತಳ ಕಾಣಿಸುತ್ತಿತ್ತು ಹಾಗೂ ಕೆಲವೇ ಕೊಡಪಾನ ನೀರು ಇದ್ದ ಹಾಗೆ ಕಾಣಿಸಿತು. ಇನ್ನು ನನ್ನ ಬೊಗಸೆಗೆ ಬಿದ್ದ ನೀರಿನ ರುಚಿ ಉಪ್ಪಾಗಿಯೇ ಇತ್ತು. ಅಂತೂ ಮಾಧ್ಯಮಗಳಲ್ಲಿ ಬಂದಿದ್ದು ಎಲ್ಲವೂ ನಿಜವಲ್ಲ ಅಂತ ಖಾತ್ರಿಯಾಯಿತು. ಇಷ್ಟೊಂದು ಜನರು ಸೇರುವ ಕಾರಣ ನೀರನ್ನು ಮೊಗೆಮೊಗೆದು ಬಾವಿ ಬರಿದಾಗುತ್ತಿದೆಯೋ ಅಥವಾ ನನ್ನ ಕುತೂಹಲದ ದೃಷ್ಟಿಯೇ ತಪ್ಪೇ ಅರ್ಥವಾಗಲಿಲ್ಲ.

ಆಸಕ್ತರು ದೇವಾಲಯದ ಆವರಣದಲ್ಲಿರುವ ಅಂಗಡಿಯಿಂದ ಶಂಖಗಳನ್ನು ಖರೀದಿಸಿದರು. ಸಮುದ್ರ ಸ್ನಾನಕ್ಕೆ ಹೋಗುವಾಗ ಪರ್ಸ್ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ನಮ್ಮ ಮೊಬೈಲ್ ಕ್ಯಾಮೆರಾಗಳು ಹೋಟೆಲ್ ನಲ್ಲಿ ಇದ್ದುವು. ಬಾಲಕೃಷ್ಣ ಅವರು ನಮ್ಮ ಸಮುದ್ರ ಸ್ನಾನ, ತೀರ್ಥಸ್ನಾನದ ಫೋಟೊ ಹಾಗೂ ವೀಡಿಯೋಗಳನ್ನು ಕ್ಲಿಕ್ಕಿಸಿ ಸವಿನೆನಪನ್ನು ದಾಖಲಿಸಿದರು. ಸಮುದ್ರ ತೀರದಲ್ಲಿ ಸ್ಥಳೀಯ ಛಾಯಾಗ್ರಾಹಕರು ಫೋಟೋ ಕ್ಲಿಕ್ಕಿಸಿ, ಪ್ರಿಂಟ್ ಮಾಡಿ ನಾವು ಉಳಕೊಂದಿದ್ದ ಹೋಟೆಲ್ ಗೆ ತಂದು ಕೊಡುತ್ತೇವೆ ಎಂದರು, ಒಂದು ಫೊಟೊ ಕ್ಕೆ ರೂ.100/- ಶುಲ್ಕ. . ಅದೇ ರೀತಿ, ರಾಮೇಶ್ವರದ ತೀರ್ಥ, ಭಸ್ಮ, ಕುಂಕುಮ ಇತ್ಯಾದಿ ಇದ್ದ ಪ್ರಸಾದದ ಪೊಟ್ಟಣವನ್ನೂ ಹೋಟೆಲ್ ನ ರಿಸೆಪ್ಷನ್ ಜಾಗದಲ್ಲಿ ಮಾರಾಟಕ್ಕೆ ಇರಿಸಿದ್ದರು. ನಾವು ಕೆಲವರು ಈ ಅವಕಾಶವನ್ನು ಬಳಸಿಕೊಂಡೆವು.

ಆಮೇಲೆ ನಾವು ಉಳಕೊಂಡಿದ್ದ ಹೋಟೆಲ್ ಗೆ ಬಂದು ಬಟ್ಟೆ ಬದಲಾಯಿಸಿ, ಉಪಾಹಾರ ಸೇವಿಸಿ, ರಾಮೇಶ್ವರಂನಲ್ಲಿರುವ ಇತರ ಪ್ರವಾಸಿ ಆಕರ್ಷಣೆಗಳನ್ನು ನೋಡಲು ಹೊರಟೆವು.

ಈ ಪ್ರವಾಸಕಥನದ ಹಿಂದಿನ ಬರಹ ಇಲ್ಲಿದೆ:  https://www.surahonne.com/?p=39561

(ಮುಂದುವರಿಯುವುದು)
-ಹೇಮಮಾಲಾ.ಬಿ, ಮೈಸೂರು

8 Responses

  1. ನಯನ ಬಜಕೂಡ್ಲು says:

    ಸೊಗಸಾದ ವಿವರಣೆ.

  2. ಪ್ರವಾಸ ಕಥನದಲ್ಲಿ ತೀರ್ಥಸ್ನಾನದ …ನಿರೂಪಣೆ ಸೊಗಸಾಗಿ ಮೂಡಿಬಂದಿದೆ ಗೆಳತಿ..

  3. Anonymous says:

    ಉತ್ತಮ ಪ್ರವಾಸ ಕಥನ

  4. ಶಂಕರಿ ಶರ್ಮ says:

    ರಾಮೇಶ್ವರಂನ ತೀರ್ಥಸ್ನಾನದ ಅನುಭವ, ಟ್ರಾವೆಲ್ 4u ಟವೆಲ್ ಐಡೆಂಟಿಟಿ ವಿವರಣೆಗಳು ಚೆನ್ನಾಗಿವೆ. ಅವರು ಕೊಡುವ ಟೋಪಿಯನ್ನು ಜನರ ಗುಂಪು ಇರುವ ಕಡೆಗಳಲ್ಲಿ ಧರಿಸಲು ನಮಗೂ ಹೇಳುತ್ತಿದ್ದುದು ನೆನಪಾಯಿತು.

  5. ಪದ್ಮಾ ಆನಂದ್ says:

    ರಾಮೇಶ್ವರ ತೀರ್ಥಸ್ನಾನದ ಅನುಭವ ನಿಜಕ್ಕೂ ವಿಶಿಷ್ಟ. ನಿರೂಪಣೆ ಮತ್ತೊಮ್ಮೆ ಹೋಗಿ ಬಂದಂತೆ ಮಾಡಿ ಮುದ ನೀಡಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: