ಬೊಗಸೆಬಿಂಬ

ಪಪ್ಪೀ ಬೇಡ. ಅಮ್ಮಾ ಬೈತಾರೆ!

Share Button
Vinaya Kumar V
ವಿನಯ್ ಕುಮಾರ್ ವಿ

 

ಕೆಲ ತಿಂಗಳುಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ದೆ. ನಾನು ಹೋದ ಕೂಡಲೇ ನನ್ನ ಅಕ್ಕನ ಮಕ್ಕಳಾದ ಪುಟ್ಟಿ(ವಿವೇಕ್) ಹಾಗು ಪಿಣ್ಣಾ(ಅರುಣ ರಶ್ಮಿ) ಅಕ್ಕರೆಯಿಂದ ಬರ ಮಾಡಿಕೊಂಡರು.ಪಕ್ಕದಲ್ಲಿ ಬಂದು ಕೂತ ಪಿಣ್ಣಾ, ನನ್ನ ಭುಜಕ್ಕೆ ಒರಗಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಳು. ನಾನೂ ಪ್ರೀತಿಯಿಂದ ಅವಳ ತಲೆಯನ್ನು ಮುಟ್ಟಿ ಮಾತನಾಡಿಸಿದೆ.

baby-girls2

ನನ್ನನ್ನು ನೋಡಿದ ಕೂಡಲೇ ಬಂದು ತೊಡೆಯ ಮೇಲೆ ಕೂತು, ನಾನು ಆಲಂಗಿಸಿಕೊಂಡು ಮುದ್ದಿಸುತ್ತಿದ್ದರೆ ಪ್ರಪಂಚವನ್ನೇ ಮರೆಯುತ್ತಿದ್ದ ಮಗು, ವಿನಯ್ ಮಾವನ ಹೆಗಲಿರುವುದೇ ತನಗಾಗಿ ಎಂದು ಭಾವಿಸಿ ಕೂಸು ಮರಿ ಮಾಡಿಸಿಕೊಳ್ಳುತ್ತಾ, ಮಲಗಿದ್ದಾಗ ಬಂದು ಎದೆಯ ಮೇಲೆ ತಲೆಯಿಟ್ಟು ಮಲಗಿ ಖುಷಿ ಪಡುತ್ತಿದ್ದ ಮಗು ಇವಳೇನಾ? ಎನ್ನಿಸಿತ್ತಿತ್ತು. ಅರುಣಾಳಿಗೆ ಈಗ  ವರ್ಷ ಹತ್ತು ತುಂಬಿದೆ. ಹಿಂದೆ ಮುದ್ದಿಸಿದ ಹಾಗೆ ಮುದ್ದಿಸಲು ನನಗೂ, ಮುದ್ದಿಸಿಕೊಳ್ಳಲು ಅವಳಿಗೂ ಏನೋ ಕಟ್ಟು, ಹಿಂಜರಿಕೆ. ಈ ಅನುಭವ ನನಗಾದದ್ದು ಮೊದಲೇನಲ್ಲ. ಹಿಂದೆ ನನ್ನ ಚಿಕ್ಕಮ್ಮನ ಮಕ್ಕಳ ವಿಷಯದಲ್ಲೇ ಈ ಸತ್ಯವನ್ನರಿತಿದ್ದೆ. ’ಈ ಮಕ್ಕಳು ಚಿಕ್ಕವರಾಗೇ ಉಳಿದಿದ್ದರೇ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ’ ಎಂದು ಎಷ್ಟೋ ಬಾರಿ ಅನ್ನಿಸಿದ್ದುಂಟು.

;

ಮೊನ್ನೆ ಹೀಗೇ ಸ್ನೇಹಿತ ರಾಮಮೋಹನನನ್ನು ಭೇಟಿಯಾಗಲು ಅವನ ಮನೆಗೆ ಹೋಗಿದ್ದೆ. ನಾನು ಹೋದ ಕೆಲ ನಿಮಿಷಗಳಲ್ಲೇ ಅವನ ಅಣ್ಣನ ಮಗಳು ‘ಗ್ರೀಷ್ಮಾ’ ಶಾಲೆಯಿಂದ ವ್ಯಾನ್’ನಲ್ಲಿ ಬಂದು ಮನೆ ಸೇರಿತು. ಯು.ಕೆ.ಜಿ ಓದುತ್ತಿದ್ದ ಮಗು ನನ್ನನ್ನು ನೋಡಿದೊಡನೆಯೇ  ಹರ್ಷದಿಂದ ’ವಿನಯ್ ಮಾವಾ’ ಎಂದು ನನ್ನ ತೊಡೆಯ ಮೇಲೆ ಬಂದು ಕುಳಿತಳು. ನಾನೂ ಪ್ರೀತಿಯಿಂದ ಅದರ ಕೆನ್ನೆಗೆ ಮುತ್ತಿಟ್ಟು, ಅಪ್ಪಿಕೊಂಡು ಮುದ್ದಿಸಿದೆ. ಮಗು ನನ್ನ ಜೇಬನ್ನು ಹುಡುಕಲಾರಂಭಿಸಿತು. ಅದನ್ನರಿತ ನಾನು, “ಸಾರಿ ಬಂಗಾರಾ, ನಿಂಗೆ ಏನೂ ತಂದಿಲ್ಲ. ಹೋಗು ಮುಖ ತೊಳೆದುಕೊಂಡು ಬಾ. ಅಂಗಡೀಗೆ ಹೋಗೋಣಾ” ಎಂದೆ.

ಮಗು ತನ್ನ ಬಾಯಲ್ಲಿದ್ದ ಚಾಕ್ಲೇಟ್ ತುಂಡನ್ನು ತೋರಿಸಿ ಅಣುಕಿಸುತ್ತಿತ್ತು. ಅದನ್ನು ಗಮನಿಸಿದ ತಾಯಿ,

“ಚಾಕ್ಲೇಟ್ ಯಾರೇ ಕೊಟ್ರು?” ಎಂದು ಕೇಳಿದಳು.

“ವ್ಯಾನ್ ಅಂಕಲ್” ಎಂದಿತು ಮಗು.

“ಯಾಕೆ ಕೊಟ್ರು? ನೀನ್ಯಾಕೇ ಈಸ್ಕೊಂಡೆ? ” ಕೇಳಿದಳು ಅಮ್ಮ.

“ನಾನೂ ಪ್ರತೀಕ್ಷಾ ,ಅಂಕಲ್’ಗೆ ಪಪ್ಪಿ ಕೊಟ್ರೆ ಚಾಕ್ಲೇಟ್ ಕೊಡ್ತಾರೆ” ಉತ್ತರಿಸಿತು ಮಗು.

baby-girls3

ಗಾಬರಿಯಾದ ತಾಯಿ, ಮಗುವನ್ನು ಗದರಿಸುತ್ತಾ “ಹಾಗೆಲ್ಲಾ ಯಾರ ಹತ್ರಾನೂ ಚಾಕ್ಲೇಟ್ ಈಸ್ಕೋ ಬಾರ್ದು. ಪಪ್ಪೀನೂ ಕೊಡ ಬಾರದು. ನಮ್ಮಮ್ಮ ಬಯ್ತಾರೆ ಅನ್ಬೇಕು ಗೊತ್ತಾಯ್ತಾ” ಎಂದಳು.

ಮಗು ಅಳಲಾರಂಭಿಸಿತು. ನಾನು ಅವಳನ್ನು ಸಮಾಧಾನಿಸುತ್ತಾ, “ಮಗೂ, ಅಮ್ಮಾ ಹೇಳಿದ್ದು ಕೇಳಬೇಕು. ಅಪ್ಪ ಅಮ್ಮನ್ನ ಬಿಟ್ಟು ಬೇರೆ ಯಾರೆ ಏನೇ ಕೊಟ್ರೂ ಬೇಡ ಅನ್ಬೇಕು. ಪಪ್ಪಿ ಕೇಳಿದ್ರೆ ಕೊಡಬಾರ್ದು. ಅಮ್ಮಾ ಹೇಳಿದ ಹಾಗೆ ಕೇಳಬೇಕು ಆಯ್ತಾ” ಎಂದೆ.

“ವಿನಯ್ ಮಾವಾ, ನಿನ್ ಹತ್ರಾನೂ ತಗೋ ಬಾರ್ದಾ? ಪಪ್ಪಿ ಕೊಡಬಾರ್ದಾ?”  ಇನ್ನೂ ಜೋರಾಗಿ ಅಳುತ್ತಾ ಕೇಳಿತು ಮಗು. ಒಂದು ಕ್ಷಣ ನಾನು ನಿರುತ್ತರನಾದೆ.

ಇದನ್ನು ಗಮನಿಸಿದ ತಾಯಿ ತಕ್ಷಣವೇ “ಹಾಗಲ್ಲಾ ಮಗೂ, ನಾನೂ, ಅಪ್ಪ, ಅಜ್ಜಿ, ತಾತಾ, ಚಿಕ್ಕಪ್ಪಾ, ಮಾವ, ಇವರ ಹತ್ರ ತಗೋಬಹುದು. ಬೇರೆಯವರು ಬೇಡ” ಎಂದಳು.

“ಬೇರೆಯವರು ಅಂದ್ರೆ?” ಕೇಳಿತು ಮಗು. ಒಂದು ಕ್ಷಣಕ್ಕೆ ಜನರನ್ನು ವಿಂಗಡಿಸಲು ತಾಯಿಗೂ ಕಷ್ಟವಾಯಿತು. ಮೌನವಾದಳು.

ಪ್ರಪಂಚ ಎಷ್ಟು ಕ್ರೂರವಾಯಿತೆನಿಸಿತು ನನಗೆ. ನಾವು ಸಣ್ಣವರಿದ್ದಾಗ ಹಬ್ಬಕ್ಕೆ ಕರೆಯಲು ಮಾವನೋ ತಾತನೋ ಬಂದರೆ, ಮೂರು ದಿನ ಮೊದಲೇ ಮಕ್ಕಳನ್ನು ಅವರ ಜೊತೆ ಕಳುಹಿಸಿ ನಂತರ ಹಬ್ಬದ ಸಮಯಕ್ಕೆ ತಂದೆ ತಾಯಿಗಳು ಹೋಗುತ್ತಿದ್ದುದನ್ನು ಸಾಕಷ್ಟು ಕಂಡಿದ್ದೇನೆ. ಇಂದು ಅಂತಹ ಪರಿಸ್ಥಿತಿ ಉಳಿದಿದೆಯೇ? ಬಸ್ಸು ರೈಲುಗಳಲ್ಲಿ ಪ್ರಯಾಣಿಸುವಾಗ ಪುಟ್ಟ ಮಕ್ಕಳನ್ನು ಕಂಡರೆ ಕರೆದು ಮುದ್ದಿಸುತ್ತಿದ್ದ ದಿನಗಳು ಇನ್ನು ಮುಂದೆ ಇರಲಾರವೇ?.

ವಿಕೃತ ಲೋಕದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬ ಚಿಂತೆ ಬಹುತೇಕ ಎಲ್ಲಾ ಪೋಷಕರಿಗೂ ಇದ್ದೀತು. ಹೀಗೇ ಮಗು ಎಲ್ಲರೊಂದಿಗೆ ಬೆರೆಯುವುದನ್ನು ತಪ್ಪಿಸುವುದು ಮಾನಸಿಕವಾಗಿ ಮಗುವಿನ ಬೆಳವಣಿಗೆಗೆ ಅಪಾಯಕಾರಿ ಎಂಬುದು ಅಷ್ಟೇ ಸತ್ಯ. ದಿನ ನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ದೌರ್ಜನ್ಯಗಳ ಸುದ್ದಿಗಳನ್ನು ಓದುತ್ತಿರುವ ಪೋಷಕರಲ್ಲಿ ಇಷ್ಟು ಆತಂಕವಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇಲ್ಲಿ ಇವರೇ ನಿಜವಾಗಿ ಅಸಹಾಯಕರು.

baby-girlsಯಾರಿದಕ್ಕೆಲ್ಲಾ ಕಾರಣ? ನಾಲ್ಕು ವಿಷಜಂತುಗಳು ಸಮಾಜದಲ್ಲಿ ಕಂಡಾಗ ಇಡೀ ಸಮಾಜವನ್ನು ಅನುಮಾನಿಸಿವುದು ಎಷ್ಟು ಸರಿ?  ಮನೆಗೆ ನಾಲ್ಕು ಸೊಳ್ಳೆ ಬಂದರೆ ಸಾಕು, ಮಕ್ಕಳ ಆರೋಗ್ಯದ ಮೇಲಿನ ಕಾಳಜಿಯಿಂದ ಅವನ್ನು ಕೊಲ್ಲದೇ ಬಿಡುವುದಿಲ್ಲ. ಹಾಗೆಯೇ ಒಂದು ದೇಶದ  ವ್ಯವಸ್ಥೆಯಲ್ಲಿ ಪ್ರಜೆಗಳೆಲ್ಲಾ ಮಕ್ಕಳೆಂದು ಪರಿಗಣಿಸಿದರೆ, ಆ ವ್ಯವಸ್ಥೆಯ ಆರೋಗ್ಯದ ದೃಷ್ಠಿಯಿಂದ ಇಂತಹ ವಿಷಜಂತುಗಳನ್ನು ಬೇರುಸಮೇತ ನಾಶಪಡಿಸುವುದರಲ್ಲಿ ತಪ್ಪೇನಿದೆ? ಯಾವುದೇ ತಪ್ಪು ಮಾಡದ ಕಂದಮ್ಮಗಳನ್ನು ಅಮಾನುಷವಾಗಿ ಹಿಂಸಿಸುವ ಇವರನ್ನು ಮನುಷ್ಯರೆಂದು ಪರಿಗಣಿಸದೇ, ಮಾನವ ಹಕ್ಕುಗಳೆಂಬ ರಕ್ಷೆ ನೀಡದೇ ಅಷ್ಟೇ ಅಮಾನುಷವಾಗಿ ಶಿಕ್ಷಿಸಿದ್ದೇ ಆದಲ್ಲಿ, ಇಂತಹ ಅಪರಾಧಗಳನ್ನು ತಡೆಯುವುದು ಕಷ್ಟವೇನಲ್ಲ. ಸಮಾಜ ಖಂಡಿತಾ ಸುಧಾರಿಸುತ್ತದೆ.

ಇಲ್ಲದಿದ್ದರೆ ಮುಂದೆ ಇತರ ಮಕ್ಕಳನ್ನು ಬಿಡಿ, ಸ್ವತಃ ನಮ್ಮ ಮಕ್ಕಳನ್ನೂ ಪ್ರೀತಿಸಲು, ಮುದ್ದಿಸಲು, ಹಿಂಜರಿಯುವಂತಹ ದಿನ ಬಂದೀತು. ಎಂದೂ ಅಂತಹ ಪರಿಸ್ಥಿತಿ ಬಾರದಿರಲಿ.

 

– ವಿನಯ್ ಕುಮಾರ್ ವಿ,  ಮೈಸೂರು ವಿಶ್ವವಿದ್ಯಾಲಯ

 

21 Comments on “ಪಪ್ಪೀ ಬೇಡ. ಅಮ್ಮಾ ಬೈತಾರೆ!

  1. ಅಪ್ಪಟ ಸತ್ಯವನ್ನು ಬಿಡಿಸಿ ಹೇಳಿದ್ದು ನೀವು .ಚೆನ್ನಾಗಿದೆ ಅಂದರೆ ತಪ್ಪಾಗುತ್ತದೆ ; ಹಸುಳೆ ಮಕ್ಕಳಿಗೂ ಈ ಸ್ತಿತಿ ಬರಬಾರದು.ಕಟು ಸತ್ಯದ ಅನಾವರಣವಾಗಿದೆ ಇಲ್ಲಿ ಅನ್ನಬಹುದು.

  2. Tuba Chennagide. . . Tumba tande taayiyara manadaalada maatannu chennagi bichchi ittidiya. Aadare, kela vaakyagalu nannanu yochaneyalli todagisidavu. Avu ivugalu.. . .
    ಯಾವುದೇ ತಪ್ಪು ಮಾಡದ ಕಂದಮ್ಮಗಳನ್ನು ಅಮಾನುಷವಾಗಿ ಹಿಂಸಿಸುವ ಇವರನ್ನು ಮನುಷ್ಯರೆಂದು ಪರಿಗಣಿಸದೇ, ಮಾನವ ಹಕ್ಕುಗಳೆಂಬ ರಕ್ಷೆ ನೀಡದೇ ಅಷ್ಟೇ ಅಮಾನುಷವಾಗಿ ಶಿಕ್ಷಿಸಿದ್ದೇ ಆದಲ್ಲಿ, ಇಂತಹ ಅಪರಾಧಗಳನ್ನು ತಡೆಯುವುದು ಕಷ್ಟವೇನಲ್ಲ. ಸಮಾಜ ಖಂಡಿತಾ ಸುಧಾರಿಸುತ್ತದೆ.
    Makkala mele athyachara maaduvavanu vikruta manushyane sari, aadare avarige amanushavaada shikshe nedidare avaru sudharisuvare?

    1. ಮಧ್ಯಮ-ಪೂರ್ವ ದೇಶಗಳಲ್ಲಿ ಅಷ್ಟೇ ಯಾಕೆ ನೆರೆಯ ನೇಪಾಳದಲ್ಲಿ ಕೂಡಾ ಇಂತಹ ಪಾಪಿಗಳಿಗೆ ಅಮಾನುಷ ಶಿಕ್ಷೆಗಳನ್ನು ಕೊಟ್ಟು ಭಯ ಮೂಡಿಸಲಾಗುತ್ತ ದೆ. ಇದರಿಂದ ಖಂಡಿತಾ ಸಮಾಜ ಸುಧಾರಿಸುತ್ತದೆ.

  3. ಅತ್ತ್ಯಂಥ ಸೂಕ್ಷ್ಮ ಹಾಗು ವಿಪಿರ್ಯಾಸದ ಸಂಗತಿಗೆ ಹಿಡಿದ ಕನ್ನಡಿ ನಿಮ್ಮ ಲೇಖನ. ಮನ ಕಲಕುವಂತಿದೆ.

  4. ..ಈಗಿನ ದಿನಗಳಲ್ಲಿ ಸಮಾಜದಲ್ಲಿ ಕಂಡು ಬರುತ್ತಿರುವ ಅಮಾನುಷ ಘಟನೆಗಳಿಗೆ ಕನ್ನಡಿ ಹಿಡಿದಂತಿದೆ ಲೇಖನ…!! ತುಂಬಾ ಖೇದವೆನಿಸುತ್ತದೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *