ಪುನರಾವರ್ತನೆ
ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲ
ಆಕೆ ನನ್ನೊಡನೆ ಮಾತನಾಡದೆ
ನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗ
ಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ.
ಏನು ಕಾರಣವಿರಬಹುದೆಂದು
ಅರಿಯಲು ಪ್ರಯತ್ನಿಸಿದೆ
ಆದರೆ ಪ್ರತಿ ಬಾರಿಯೂ ಸೋತೆ.
ಮೌನಕ್ಕೆ ಶರಣಾದೆ.
ಇಂಥ ಮೌನ ಹಿಗ್ಗಿತು ನಿಮಿಷಗಳಿಂದ
ಗಂಟೆಗಳಿಗೆ, ಗಂಟೆಗಳಿಂದ ದಿನಗಳು
ದಿನಗಳು ವಾರಗಳಲ್ಲಿಗೆ.
ನಂತರ ಎಲ್ಲವೂ ಸಾಮಾನ್ಯ,
ನಾನು ಪರಿಸ್ಥಿತಿಗೆ ಶರಣಾದೆ.
ನನ್ನ ನೆಚ್ಚಿನ ಗೆಳತಿ, ನನ್ನ ಆದರ್ಶ
ನನ್ನಾಪ್ತಳು, ನನ್ನ ಶ್ರೇಯೋಭಿಲಾಷಿ ನನ್ನಮ್ಮ
ಎಂಬ ನಂಬಿಕೆ ಹುಸಿಯಾಗಿ ಗಾಳಿಪಾಲಾಯ್ತು
ಕಾರಣವರಿಯದೆ ಸೋಲುಂಡು ಶರಣಾದೆ.
ವರುಷಗಳ ನಂತರ ನಾನೀಗ
ಯುವ ಮಕ್ಕಳ ತಾಯಿಯಾಗಿದ್ದೇನೆ
ಈಗ ಅರಿವಾಗಿದೆ ನನಗೆ ನೈಜಕಾರಣ
ನನ್ನಮ್ಮನೇಕೆ ಮೌನಿಯಾಗಿದ್ದಳೆಂದು.
ಆಕೆ ತನ್ನ ಬದುಕಿನ ಏರಿಳಿತಕ್ಕೊಳಗಾಗಿ ಜೀವಿಸಿದ್ದಳು.
ಹಿಂದೆ ನನಗೊದಗಿದ್ದ ಸಂದಿಗ್ಧಗಳಿಂದ
ನಾ ಕಲಿತೆ ಪಾಠ, ಮುಂದೆ ನನ್ನ ಮಕ್ಕಳು ನನ್ನಂತೆ
ಗೊಂದಲಕ್ಕೆ ಸಿಗಬಾರದು
ನನಗಿರಲಿ ಏನೇ ದೈಹಿಕ, ಮಾನಸಿಕ ಏರುಪೇರುಗಳು
ನನ್ನ ಆಯ್ಕೆ ಅವರ ಶಂಕೆಗಳನ್ನು ದೂರಮಾಡುವುದು
ಅವು ನನ್ನ ಮೌನಕ್ಕೆ ಕಾರಣಗಳಾಗದಿರಲಿ
ನಾನೇ ತಾಳ್ಮೆಯಿಂದ ಪುನರಾವಲೋಕಿಸುವೆ.
ಏಕೆಂದರೆ ನನ್ನ ಮಕ್ಕಳ ಅಂತರಂಗದಲ್ಲಿ
ನನ್ನ ವ್ಯಕ್ತಿತ್ವ ಅಚ್ಚಳಿಯದೆ ಮೂಡಲೆಂದು
ನಾನಳಿದ ನಂತರವೂ ಅದು ನೆನಪಾಗುವಂತೆ.
ಇಂಗ್ಲಿಷ್ ಮೂಲ : ರಾಜಶ್ರೀ ಭಾಗ್ವತ್, ಒಡಿಶಾ
ಭಾವಾನುವಾದ : ಬಿ.ಆರ್.ನಾಗರತ್ನ, ಮೈಸೂರು
ಅರ್ಥಗರ್ಭಿತ
ಧನ್ಯವಾದಗಳು ನಯನಮೇಡಂ
ತಾಯಿಯೊಬ್ಬಳ ಮನದಾಳದ ಭಾವನೆಗಳನ್ನು ಯಥಾವತ್ತಾಗಿ ಪಡಿಮೂಡಿಸಿದ ಮೂಲ ಕವನದ ಜೊತೆಗೆ ಅನುವಾದವೂ ಅರ್ಥಪೂರ್ಣವಾಗಿದೆ… ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ.. ಆ ಕವನ ಮನಸ್ಸಿಗೆ ಬಹಳ ಹಿಡಿಸಿತ್ತು ಹೀಗಾಗಿ ಒಂದು ಪ್ರಯತ್ನ ಮಾಡಿದೆ ಅಷ್ಟೇ..