ಭಗವದ್ಗೀತಾ ಸಂದೇಶ
ಮನುಷ್ಯ ತನ್ನ ಜೀವನ ಪಥದಲ್ಲಿ ಬಂದುದನ್ನು ಬಂದಂತೆಯೇ ಸ್ವೀಕರಿಸಬೇಕು. ಅದರ ಸಾಧಕ- ಬಾಧಕಗಳ ಬಗ್ಗೆ ಚಿಂತಿಸಬಾರದು.
ಮುಂದಾಗುವ ಪರಿಣಾಮದ ಬಗೆಗೆ ಯೋಚಿಸಿ ಭಯ ಭೀತರಾಗಿ ಕರ್ತವ್ಯದಿಂದ, ಜವಾಬ್ದಾರಿಯಿಂದ ಹಿನ್ನಡೆಯಬಾರದು ;ಎಂಬುದೇ ಶ್ರೀಮದ್ ಭಗವದ್ಗೀತೆಯ ಪರಮ ಸಂದೇಶವಾಗಿದೆ;
ಸ್ಥಿತಪ್ರಜ್ಞನು ತನ್ನ ಕರ್ತವ್ಯವನ್ನು ಅರಿತು ಮುಂದುವರೆಯುತ್ತಾನೆ. ಉದಾಹರಣೆಗೆ ಶ್ರೀರಾಮಚಂದ್ರನು ಸುಖ – ದುಃಖಗಳ ಬಗ್ಗೆ ಚಿಂತಿಸದೆ, ತನ್ನ ಕರ್ತವ್ಯವೇನೆಂದು ಅರಿತು ದುಷ್ಟರ ನಾಶ; ಶಿಷ್ಟರ ರಕ್ಷಣೆಗಾಗಿ ವನವಾಸ ಕೈಗೊಳ್ಳುತ್ತಾನೆ.
ರಣರಂಗದಲ್ಲಿ ಯುದ್ಧ ಮಾಡುವ ಬದಲು ವಿಷಾದದಿಂದ ಕಂಗಾಲಾದ ಪಾರ್ಥನಿಗೆ ಭಗವಂತನು ಸಾಂಖ್ಯ ಯೋಗದ ಸಿದ್ಧಾಂತದ ಮತ್ತು ಶಾಸ್ತ್ರ ಧರ್ಮದ ದೃಷ್ಟಿಯಿಂದ ಯುದ್ಧದ ಔಚಿತ್ಯವನ್ನು ತಿಳಿಸುತ್ತಾ ಹೀಗೆ ಹೇಳುತ್ತಾನೆ…
” ಸುಖದುಃಖೇ ಸಮೇ ಕೃತ್ವಾ
ಲಾಭಾ ಲಾಭೌ ಜಯಾಜಯೌ I
ತತೋ ಯುದ್ಧಾಯ ಯುಜ್ಯಸ್ವ
ನೈವಂ ಪಾಪಮವಾಪ್ಸ್ಯಸಿ II”
“ಜಯ- ಪರಾಜಯ , ಲಾಭ – ಹಾನಿ ಮತ್ತು ಸುಖ- ದುಃಖಗಳನ್ನು ಸಮಾನವಾಗಿ ಸ್ವೀಕರಿಸಿಕೊಂಡು ನಂತರ ಯುದ್ಧಕ್ಕೆ ಸಿದ್ದನಾಗು. ಈ ಪ್ರಕಾರ ಯುದ್ಧ ಮಾಡುವುದರಿಂದ ನೀನು ಪಾಪವನ್ನು ಹೊಂದುವುದಿಲ್ಲ.”
ಮೇಲೆ ಹೇಳಿರುವ ಜೋಡಿ ಪದಗಳನ್ನು ದ್ವಂದ್ವಗಳು ಎನ್ನುತ್ತಾರೆ. ಈ ದ್ವಂದ್ವಗಳನ್ನು ಸಮಾನವಾಗಿ ನೋಡುವವನು ಸಮದರ್ಶಿ ಅಥವಾ ಅವನು ದ್ವಂದ್ವಾತೀತನಾಗಿರುತ್ತಾನೆ. ಇವೆಲ್ಲ ಸ್ಥಿತಪ್ರಜ್ಞನ ಲಕ್ಷಣಗಳಾಗಿರುತ್ತವೆ.
ನಾರಾಯಣನು ಇಲ್ಲಿ ನರನಿಗೆ ಯುದ್ಧದ ಫಲಿತಾಂಶದ ಬಗ್ಗೆ ಯೋಚಿಸದೆ ನೀನು ನಿನ್ನ ಶಾಸ್ತ್ರ- ಧರ್ಮದ ಪ್ರಕಾರ ಯುದ್ಧ ಮಾಡು. ಅಧರ್ಮವನ್ನು ನಾಶ ಮಾಡುವುದು ಮತ್ತು ಧರ್ಮದ ರಕ್ಷಣೆ ಮಾಡುವುದು ಕ್ಷತ್ರಿಯನಾದ ನಿನ್ನ ಕರ್ತವ್ಯ; ಮುಂದಿನ ಪರಿಣಾಮದ ಬಗೆಗೆ ಚಿಂತಿಸಿ ಶೋಕ ಅಥವಾ ಹರ್ಷಗೊಳ್ಳದೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳುತ್ತಾನೆ.
ಇಲ್ಲಿ ಭಗವಂತನು ಅರ್ಜುನನನ್ನು ಉದ್ದೇಶಿಸಿ ಹೇಳಿದ ಎಲ್ಲಾ ಮಾತುಗಳು ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ಜೀವನದಲ್ಲಿ ಬರುವ ಕಷ್ಟ -ನಷ್ಟ , ಸುಖ – ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ನಾವು ಸ್ಥಿತಪ್ರಜ್ಞರಾಗಿ ನಮ್ಮ ಕರ್ತವ್ಯ, ಜವಾಬ್ದಾರಿಯನ್ನು ನಿರ್ವಹಿಸಬೇಕು.
ಹರಿ:ಓಂ
-ವನಿತಾ ಪ್ರಸಾದ್ ಪಟ್ಟಾಜೆ
Very nice. ಭಗವದ್ಗೀತೆಯಲ್ಲಿ ಬದುಕಿನ ಸಾರ ಅಡಗಿದೆ. ಬದುಕಿನ ಅರ್ಥವನ್ನು ಅರ್ಥ ಮಾಡಿಸುವ ಗ್ರಂಥ ಭಗವದ್ಗೀತೆ. ಓದಿ ಅರ್ಥೈಸಿಕೊಳ್ಳುವ ತಾಳ್ಮೆ ಇರಬೇಕಷ್ಟೆ ನಮಗೆ
ಉತ್ತಮ ಮಾಹಿತಿ ಯ ತುಣುಕು..
ಧನ್ಯವಾದಗಳು ಮೇಡಂ
ನಿಜ …ನಿಮ್ಮ ಮಾತು ಸತ್ಯ ಬಂದುದನ್ನು ಬಂದಂತೆ ಸ್ವೀಕಾರ ಮಾಡಬೇಕು
ಯಾವುದೇ ಫಲಾಪೇಕ್ಷೆ ಇಲ್ಲದೆ, ಕರ್ತವ್ಯ ಚ್ಯುತರಾಗದೆ ಜೀವನವನ್ನು ನಡೆಸಲು ಪ್ರೇರೇಪಿಸುವ ದಿವ್ಯ ಗ್ರಂಥ ಭಗವದ್ಗೀತೆಯ ಸಾರವನ್ನು ಉಣಬಡಿಸಿದ ವನಿತಕ್ಕನಿಗೆ ವಂದನೆಗಳು.