ಅರಕ್ಕು ಕಣಿವೆಯಲ್ಲಿ ಒಂದು ಸುತ್ತು

Share Button

2023 ರ ಎಪ್ರಿಲ್ ತಿಂಗಳ ಮೊದಲ ವಾರ, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 114 ಕಿ.ಮೀ ದೂರದಲ್ಲಿರುವ ‘ಅರಕ್ಕು ಕಣಿವೆಗೆ’ ಪ್ರಯಾಣಿಸಿದ್ದೆವು. ವಿಶಾಖಪಟ್ಟಣದಿಂದ ಅರಕ್ಕು ಕಣಿವೆಗೆ ಹೋಗುವ ರೈಲು ಮಾರ್ಗದಲ್ಲಿ ಒಟ್ಟು 52 ಸುರಂಗಗಳಿವೆ. ಪರ್ವತ ಪ್ರದೇಶದ ಮಧ್ಯೆ ಹಾದೂ ಹೋಗುವ ಈ ದಾರಿ ಈ ಬೇಸಗೆಯಲ್ಲಿಯೂ ಸುಮಾರಾಗಿ ಹಸಿರಾಗಿ ಇತ್ತು. ಇಲ್ಲಿಯ ಪರಿಸರ ಹಾಗೂ ಸುರಂಗಮಾರ್ಗವು ಕೊಂಕಣ ರೈಲ್ವೇಯನ್ನು ನೆನಪಿಸುತ್ತದೆ. ಈ ಮಾರ್ಗದಲ್ಲಿ ಪ್ರವಾಸಿ ಆಕರ್ಷಣೆಯಾಗಿ ‘ವಿಸ್ಟಾ ಡೋಮ್’ ರೈಲು ಚಲಿಸುತ್ತದೆ. ‘ವಿಸ್ಟಾ ಡೋಮ್ ಕೋಚ್’ ನಲ್ಲಿ ವಿಶಾಲವಾದ ಗಾಜಿನ ಕಿಟಿಕಿಗಳು ಹಾಗೂ 360 ಡಿಗ್ರಿ ತಿರುಗಿಸಬಹುದಾದ ಕುರ್ಚಿಗಳಿವೆ. ಹೊರಗಿನ ಪರಿಸರವನ್ನು ನೋಡುತ್ತಾ ಪ್ರಯಾಣಿಸಲು ಈ ಅನುಕೂಲತೆಯನ್ನು ಕಲ್ಪಿಸಿದ್ದಾರೆ.

ಪದ್ಮಪುರಂ ಬೊಟಾನಿಕಲ್ ಗಾರ್ಡನ್
‘ಅರಕ್ಕು’ ಕಣಿಯೆಲ್ಲಿ ನಾವು ನೋಡಿದ ಮೊದಲ ಸ್ಥಳ ‘ಪದ್ಮಪುರಂ ಬೊಟಾನಿಕಲ್ ಗಾರ್ಡನ್ ‘ . ಸ್ಥಳೀಯ ಮಾರ್ಗದರ್ಶಿಯವರು ತಿಳಿಸಿದ ಪ್ರಕಾರ 1942 ರಲ್ಲಿ ನಡೆದ ಎರಡನೇ ಮಹಾಯುದ್ಧದ ಸಮಯದಲ್ಲಿ, ಸೈನಿಕರ ಊಟಕ್ಕಾಗಿ ಈ ಸ್ಥಳದಲ್ಲಿ ತರಕಾರಿ ಬೆಳೆಸುತ್ತಿದ್ದರಂತೆ. ಕಾಲಾನಂತರದಲ್ಲಿ, ಇಲ್ಲಿ 26 ಎಕರೆ ವಿಸ್ತೀರ್ಣದಲ್ಲಿ ಸಸ್ಯಶಾಸ್ತ್ರೀಯ ಉದ್ಯಾನವನ್ನು ನಿರ್ಮಿಸಲಾಯಿತು. ಈಗ ಇದರ ಮುಖ್ಯ ಉದ್ದೇಶ ಸ್ಥಳೀಯ ಬುಡಕಟ್ಟು ಜನರಿಗೆ ಕೃಷಿ ಉದ್ಯೋಗ ಕಲ್ಪಿಸಿ, ಅವರು ಬೆಳೆಸಿದ ಫಲ,ಪುಷ್ಪಗಳಿಗೆ ಮಾರುಕಟ್ಟೆ ಒದಗಿಸಿ, ಆ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು.. ಇಲ್ಲಿ ಈಗ ಪ್ರವಾಸೋದ್ಯಮದ ಅಭಿವೃದ್ದಿಗಾಗಿ ಸೃಷ್ಟಿಸಿದ ಹಲವಾರು ಆಕರ್ಷಣೆಗಳು, ಕುಟೀರಗಳು, ಪುಟಾಣಿ ರೈಲು ಇತ್ಯಾದಿ ಇವೆ. ಆಲಂಕಾರಿಕವಾದ ಬೆಳೆಸಲಾದ ಸಸ್ಯಸಂಕುಲವಿದೆ. ಹಲಸಿನಮರ, ಮಾವಿನಮರ, ಬಿಳಿಗೆಣಸು, ಕಾಳುಮೆಣಸು, ಅಡಕೆ, ಲಿಲ್ಲಿ ಹೂ, ಗುಲಾಬಿ, ಚೆಂಡು ಹೂ ಮೊದಲಾದ ನಮಗೆ ಚಿರಪರಿಚಿತವಾದ ಗಿಡಗಳನ್ನು ಕಂಡಾಗ, ಪೂರ್ವ ಕರಾವಳಿಯ ಜೀವವಿವಿಧ್ಯವೂ ಪಶ್ಚಿಮ ಕರಾವಳಿಯಂತೆಯೇ ಇದೆಯಲ್ಲಾ ಅನಿಸಿತು. ವಿಶೇಷವಾಗಿ ಬಹಳಷ್ಟು ಸ್ಟ್ರಾಬೆರಿ ಹಣ್ಣಿನ ಮರಗಳನ್ನು ಕಂಡೆವು. ಒಂದು ಕಡೆ ಕರ್ಪೂರದ ಮರವಿತ್ತು. ಅದರ ತೊಗಟೆಯನ್ನು ಸ್ವಲ್ಪ ಹೆರೆದು, ನಾವು ಕರ್ಪೂರದ ಘಮವನ್ನು ಆಘ್ರಾಣಿಸುವ ಹಾಗೆ ಮಾಡಿ ಇರಿಸಿದ್ದರು.ಒಟ್ಟಿನಲ್ಲಿ ಈ ಉದ್ಯಾನವು ತನ್ನ ಅಂದ ಚೆಂದಕ್ಕಿಂತ ಹೆಚ್ಚಾಗಿ, ಅದನ್ನು ಸೃಷ್ಟಿಸಿದ ಧ್ಯೇಯಕ್ಕಾಗಿ ಮೆಚ್ಚುಗೆ ಪಡೆಯುತ್ತದೆ.

ಕರ್ಪೂರದ ಮರ

‘ಬುಡಕಟ್ಟು ಜನರ ಮ್ಯೂಸಿಯಂ’
ಅರಕ್ಕು ಕಣಿವೆಯ ಇನ್ನೊಂದು ಪ್ರವಾಸಿ ಆಕರ್ಷಣೆ ‘ಬುಡಕಟ್ಟು ಜನರ ಮ್ಯೂಸಿಯಂ’. ಆಕರ್ಷಕವಾದ ಕಟ್ಟಡದ ಒಳಗೆ ಸ್ಥಳೀಯ ಬುಡಕಟ್ಟು ಜನರ ಮನೆ, ವಿವಾಹ, ಕೃಷಿ ಪದ್ಧತಿ, ಸಾಮೂಹಿಕ ಚಟುವಟಿಕೆಗಳು, ದೇವಾರಾಧನೆ ಮೊದಲಾದುವುಗಳನ್ನು ಬಿಂಬಿಸುವ ಪ್ರಾತ್ಯಕ್ಷಿಕೆಗಳಿದ್ದುವು. ಸಾಮಾನ್ಯವಾಗಿ ಎಲ್ಲಾ ಮ್ಯೂಸಿಯಂಗಳಲ್ಲಿ ಇರುವಂತೆ ಇಲ್ಲಿಯೂ, ಮಡಿಕೆ, ಕುಡಿಕೆ, ಸೌದೆ ಒಲೆ, ಬೀಸುವ ಕಲ್ಲು, ಒನಕೆ, ಮೊರ ಮೊದಲಾದ ಅಡುಗೆಯ ಪರಿಕರಗಳು, ಬುಟ್ಟಿ, ಸಾಂಪ್ರದಾಯಿಕ ಕೃಷಿ ಉಪಕರಣಗಳು, ಬೇಟೆಯ ಸಲಕರಣೆಗಳು, ಸೇರು, ಚಟಾಕು ಇತ್ಯಾದಿ ಮಾಪನಗಳು…ಇನ್ನಿತರ ಸರಂಜಾಮುಗಳು ಇದ್ದುವು. ಅಧ್ಯಯನದ ದೃಷ್ಟಿಯಿಂದ ಇವನ್ನೆಲ್ಲಾ ನೋಡಲು ಸಾಕಷ್ಟು ಸಮಯ ಬೇಕು, ನಮ್ಮ ತಂಡದ ಹೆಚ್ಚಿನವರು ಕೃಷಿಮೂಲದ ಹಳ್ಳಿಮನೆಯಲ್ಲಿ ತಮ್ಮ ಬಾಲ್ಯವನ್ನು ಕಳೆದವರಾದ ಕಾರಣ ‘ ಹಾಂ, ನಮ್ಮ ಮೂಲ ಮನೆಯಲ್ಲಿ ಇದೇ ರೀತಿಯ ಕೊಳಗ ಇದೆ….ಈಗಲೂ ನಮ್ಮ ಮನೆಯಲ್ಲಿ ಸೇರು, ಪಾವು ಇದೆ,…..ಬೀಸುವ ಕಲ್ಲಿನಲ್ಲಿ ನಾನೂ ಬೀಸಿದ್ದೇನೆ, ನಮ್ಮ ಅಜ್ಜನ ಮನೆಯಲ್ಲಿ ಒನಕೆಯಲ್ಲಿ ಭತ್ತ ಕುಟ್ಟುತ್ತಿದ್ದರು..’ ಇತ್ಯಾದಿ ನೆನಪುಗಳನ್ನು ಮೆಲುಕುಹಾಕುತ್ತಾ, ಮ್ಯೂಸಿಯಂ ನೋಡುವುದರ ಜೊತೆಗೆ, ತಮ್ಮ ಮನೆಯ ಹಾಗೂ ಮನದ ‘ಅಟ್ಟ’ದಲ್ಲಿಯೂ ತಿರುಗಾಡಿ ಬಂದರು.

ವಿಶಾಖಪಟ್ಟಣದ ಅರಕ್ಕು ಕಣಿವೆಯ ಆಸುಪಾಸಿನಲ್ಲಿ ಒಟ್ಟು 19 ಪಂಗಡಗಳ ಬುಡಕಟ್ಟು ಜನರು ವಾಸಿಸುತ್ತಾರಂತೆ. ಇವರ ಜೀವನಶೈಲಿ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 1996 ರಲ್ಲಿ ಟ್ರೈಬಲ್ ಮ್ಯೂಸಿಯಂ ಅನ್ನು ನಿರ್ಮಿಸಿತು. ಪಕ್ಕದಲ್ಲಿ ಬುಡಕಟ್ಟು ಮತ್ತು ಜಾನಪದ ಕಲೆಗಳ ಪ್ರದರ್ಶನ ಹಾಗೂ ವ್ಯಾಪಾರ ಮಾಡುವ ಮಳಿಗೆಗಳಿದ್ದುವು.

ಆಂಧ್ರಪ್ರದೇಶದಲ್ಲಿ ನಾನು ಗಮನಿಸಿದಂತೆ, ಯಾವುದೇ ತಿಂಡಿ ಇರಲಿ, ಊಟ ಇರಲಿ ತಟ್ಟೆಯಲ್ಲಿ ಕೇಸರಿ-ಬಿಳುಪು-ಹಸಿರು ಬಣ್ಣದ ಕನಿಷ್ಟ ಮೂರು ವಿಧದ ಚಟ್ನಿಗಳು ಇದ್ದೇ ಇರುತ್ತವೆ. ಭಾರತದ ಸಮಗ್ರತೆಯ ಸಂಕೇತವೋ ಎಂಬಂತೆ! ರಸ್ತೆಯ ಇಕ್ಕೆಲಗಳಲ್ಲಿ ಸಮೃದ್ಧವಾಗಿ ಬೆಳೆದಿದ್ದ ಕೆಂಪು-ಹಸಿರು ಮೆಣಸಿಕಾಯಿ ಗಿಡಗಳ ಹೊಲಗಳಿದ್ದುವು. ಸ್ಠಳೀಯ ಬೆಳೆಗೆ ಆದ್ಯತೆ ಕೊಡಬೇಡವೇ? ಅವುಗಳನ್ನೇ ಯಥೇಚ್ಛವಾಗಿ ಬಳಸಿ ಅಡುಗೆ ಮಾಡಿದ್ದರು. ಸಹಜವಾಗಿ, ನಮ್ಮ ತಂಡವು ‘ ಹಾಂ..ಹೋ..ಹೋ..ಖಾರ…ನೀರು’ ಅನ್ನುತ್ತಾ ಕಣ್ಣು-ಮೂಗು ಒರೆಸುತ್ತಾ ಉಂಡರೆ, ಅದು ಮೆಣಸಿನಕಾಯಿಯ ತಪ್ಪೇ? ಮೆಣಸಿನಕಾಯಿಗೆ ‘ಜೈ ಖಾರ’!

ಬೊರ್ರಾ ಗುಹೆಗಳು
ಮಧ್ಯಾಹ್ನ ಊಟದ ನಂತರ, ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅರಕು ಕಣಿವೆಯ ಅನಂತಗಿರಿ ಬೆಟ್ಟಗಳಲ್ಲಿ ಒರಿಸ್ಸಾದ ರಾಜ್ಯದ ಗಡಿಯಲ್ಲಿರುವ ಬೊರ್ರಾ ಗುಹೆಯನ್ನು ನೋಡಲು ಹೋದೆವು. ನಮ್ಮ ಗೈಡ್ ತಿಳಿಸಿದ ಪ್ರಕಾರ, ಒರಿಯಾ ಭಾಷೆಯಲ್ಲಿ ಬೊರ್ರಾ ಅಂದರೆ ‘ರಂಧ್ರ’ ಎಂಬ ಅರ್ಥವಂತೆ. ಈ ಗುಹೆಯ ಒಂದು ಭಾಗದಲ್ಲಿ ಮೇಲಿನ ಆಕಾಶ ಕಾಣಿಸುವ ದೊಡ್ಡದಾದ ರಂಧ್ರವಿರುವುದರಿಂದ ಈ ಹೆಸರು ಬಂತು. ಮೇಯಲು ಹೋಗಿದ್ದ ಹಸುವೊಂದು ಆಕಸ್ಮಿಕವಾಗಿ ಆ ರಂಧ್ರದ ಮೂಲಕ ಭೂಮಿಯಲ್ಲಿದ್ದ ಕಂದಕಕ್ಕೆ ಬಿದ್ದಿತ್ತು. ಒಂದೆರಡು ದಿನಗಳ ನಂತರ ಆ ಹಸು, ಹೇಗೋ ಹೊರಗೆ ಬಂತು. ದನ ಕಾಯುವವರು ಹಸು ಪಾರಾಗಿ ಬಂದ ದಾರಿಯನ್ನು ಅನ್ವೇಷಿಸಿದಾಗ ವಿಶಾಲವಾದ, ಗುಹೆ ಕಾಣಿಸಿತು. ಆಮೇಲೆ ಕೆಲವು ಆಧುನಿಕತೆಯನ್ನೂ ಅಳವಡಿಸಿ ಪ್ರವಾಸಿ ಆಕರ್ಷಣೆಯಾಗಿ ಮಾರ್ಪಡಿಸಿದ ಗುಹೆಯನ್ನು ಈಗ ನಾವು ಕಾಣುತ್ತೇವೆ.

ನೆಲಮಟ್ಟದಿಂದ 260 ಅಡಿ ಆಳದಲ್ಲಿರುವ ಈ ಗುಹೆಯಲ್ಲಿ ಅಂದಾಜು 350 ಮೆಟ್ಟಿಲುಗಳನ್ನು ಇಳಿಯಬೇಕು. ಇಳಿದ ಮೇಲೆ ಹತ್ತಿ ವಾಪಾಸಾಗಬೇಕಷ್ಟೆ. ನಮ್ಮ ತಂಡದ ಕೆಲವರು, ತಮ್ಮಿಂದ ಸಾಧ್ಯವೇ ಎಂದು ಅಳುಕಿ, ಗುಹೆಯ ಮುಖ್ಯ ಭಾಗದ ವರೆಗೆ ಮಾತ್ರ ಬಂದು ಹಿಂತಿರುಗಿದರು. ಒಂದು ಹಂತದಲ್ಲಿ ಗುಹೆಯಲ್ಲಿ ಎರಡು ಕವಲುಗಳು ಕಾಣಿಸುತ್ತದೆ. ಮೇಲ್ಭಾಗದ ಕವಲಿನಲ್ಲಿ ಹೋದರೆ, ಇನ್ನೂ ಕೆಲವು ಮೆಟ್ಟಿಲುಗಳನ್ನು ಏರಿ, ಒಂದು ಏಣಿಯ ಮೂಲಕ ಹತ್ತಿ ಹೋಗಬೇಕಾಯಿತು. ಕೊನೆಯಲ್ಲಿ ಒಂದು ಶಿವಲಿಂಗವಿತ್ತು. ಅಲ್ಲಿ ಕೇವಲ ಇಬ್ಬರಿಗೆ ಜಾಗರೂಕತೆಯಿಂದ ನಿಲ್ಲುವಷ್ಟು ಸ್ಥಳವಿದೆ. ಅಲ್ಲಿದ್ದ ಅರ್ಚಕರು ಪೂಜೆ ಮಾಡಿ ಪ್ರಸಾದ ಕೊಟ್ಟರು. ಪಕ್ಕದಲ್ಲಿ ಶುದ್ಧ ಜಲದ ಒರತೆ ನೀರಿನ ಸೆಲೆಯಿತ್ತು. ಆ ನೀರನ್ನು ಕುಡಿದು, ತೀರ್ಥವಾಗಿ ತಲೆಗೆ ಪ್ರೋಕ್ಷಿಸಿಕೊಂಡೆವು. ಇನ್ನೊಂದು ಕವಲಿನಲ್ಲಿ ಮೊದಲು ಸ್ವಲ್ಪ ತೆವಳಿ ಹೋಗಬೇಕು, ಆಮೇಲೆ ವಿಶಾಲವಾದ ಸಭಾಂಗಣದಂತಹ ಜಾಗ ಕಾಣಿಸಿತು. ಒಟ್ಟಿನಲ್ಲಿ, ಸಣ್ಣಪ್ರಮಾಣದ ಚಾರಣವನ್ನು ಮಾಡಿದ ಖುಷಿ ನಮಗಾಯಿತು.

ಬೊರ್ರಾ ಗುಹೆಗಳು

ಈ ದಾರಿಯಲ್ಲಿ, ನಾವು ಗಮನಿಸಿದ ಇನ್ನೊಂದು ವಿಶೇಷ ಏನೆಂದರೆ ಸ್ಥಳೀಯ ಬುಡಕಟ್ಟು ಜನಾಂಗದವರು ಅಚರಿಸುವ ‘ರೆಡ್ ಬ್ರಿಕ್ ಫೆಸ್ಟಿವಲ್ ‘ . ನಮ್ಮ ಮಾರ್ಗದರ್ಶಿ ಹೇಳಿದ ಪ್ರಕಾರ, ತೆಲುಗರ ಯುಗಾದಿಯ ನಂತರ ಮೂರು ದಿನ ಅಲ್ಲಿ ‘ಬ್ರಿಕ್ ಫೆಸ್ಟಿವಲ್ ‘ ಎಂಬ ಹಬ್ಬ ಅಚರಿಸುತ್ತಾರೆ. ಇದರ ಅಂಗವಾಗಿ ರಸ್ತೆಯಲ್ಲಿ ಬಹುತೇಕ 300 ಮೀಗೆ ಒಮ್ಮೆ ಎಂಬಂತೆ, ಮಹಿಳೆಯರು ಹಾಗೂ ಮಕ್ಕಳನ್ನೊಳಗೊಂಡ ಗುಂಪು ನಮ್ಮ ಬಸ್ಸನ್ನು ತಡೆದು ನಿಲ್ಲಿಸಿ, ದುಡ್ಡು ಕೇಳುತ್ತಿದ್ದರು. ಮಾರ್ಗಕ್ಕೆ ಅಡ್ಡವಾಗಿ ಅಲಂಕರಿಸಿದ ಕೋಲನ್ನು ಇರಿಸಿದ್ದರು. ಅವರು ಕೇವಲ ನಾಣ್ಯವನ್ನು ಅಪೇಕ್ಷಿಸುತ್ತಾರೆಂದೂ, ನೋಟು ಹಾಕಬೇಕಾಗಿಲ್ಲ ಎಂದೂ, ನಿಮ್ಮ ಬಳಿ ನಾಣ್ಯ ಇದ್ದರೆ ಕೊಡಬಹುದೆಂದೂ ಗೈಡ್ ಮೊದಲಾಗಿ ತಿಳಿಸಿದ್ದರು. ಆ ಮಹಿಳೆಯರು ಅಥವಾ ಮಕ್ಕಳು ತಟ್ಟೆಯಲ್ಲಿ ಅಕ್ಕಿ, ಅರಸಿನ ಇತ್ಯಾದಿ ಇರಿಸಿಕೊಂಡು, ಡ್ರೈವರ್ /ನಿರ್ವಾಹಕನ ಬಳಿ ಹಣ ಕೇಳುತ್ತಿದ್ದರು. ನಮಗೆ ಅರ್ಥವಾಗದ ಭಾಷೆಯಲ್ಲಿ ಸಣ್ಣ ಮಟ್ಟಿಗೆ ವಾಗ್ಯುದ್ಧವೂ ನಡೆಯುತ್ತಿತ್ತು. ಹಣ ಸಿಕ್ಕಿದ ಮೇಲೆ ಮಾರ್ಗಕ್ಕೆ ಅಡ್ಡವಾಗಿ ಅಲಂಕರಿಸಿದ ಕೋಲನ್ನು ಇಟ್ಟು, ‘ಸನ್ನೆ’ಯ ತತ್ವದಂತೆ ಒಂದೆಡೆಯಿಂದ ಕೋಲನ್ನು ಜಗ್ಗಿ, ವಾಹನವು ಚಲಿಸಲು ಅನುವು ಮಾಡುತ್ತಿದ್ದರು. ಒಂದು ರೀತಿಯಲ್ಲಿ ‘ಟೋಲ್ ಗೇಟ್’ ನಂತೆ. ಈ ಸಂದರ್ಭದಲ್ಲಿ ನಮ್ಮ ತಂಡದ ಉತ್ಸಾಹಿಯೊಬ್ಬರು ಸೃಷ್ಟಿಸಿದ ‘ ಕೋಲು ಗೇಟ್’ ಎಂಬ ಪದ ಬಹಳ ಸೂಕ್ತವಾಗಿದೆ!

ಕೋಲು ಗೇಟ್

ನಿಜಕ್ಕೂ, ಆ ರಸ್ತೆಯಲ್ಲಿ ವಾಹನ ಚಲಾಯಿಸುವ ಡ್ರೈವರ್ ಗಳ ತಾಳ್ಮೆಗೆ ಸವಾಲೊಡ್ಡುವ ಹಬ್ಬವಿದು. ಅಂದಾಜು ಒಂದು ಗಂಟೆಯ ಈ ಪ್ರಯಾಣದಲ್ಲಿ ನಮ್ಮ ಬಸ್ಸು ಕನಿಷ್ಟ ಇಪ್ಪತ್ತಾದರೂ ‘ಕೋಲು ಗೇಟ್’ ಗಳಲ್ಲಿ ‘ ಟೋಲ್’ ಕಟ್ಟಿಯೇ ಮುಂದುವರಿದಿತ್ತು. ಹೀಗೆ ಅಲ್ಲಲ್ಲಿ ಇದ್ದ ಕೋಲು-ಗೇಟ್ ಗಳಲ್ಲಿ ‘ಟೋಲ್ ‘ ತಟ್ಟಿ, ಅರಕ್ಕು ಕಣಿವೆಯಲ್ಲಿ ನಮ್ಮ ಒಂದು ದಿನದ ಸುತ್ತು ಸಂಪನ್ನವಾಯಿತು.

-ಹೇಮಮಾಲಾ.ಬಿ

7 Responses

  1. ನಮಗೂ ಸಹ ನಿಮ್ಮ ಒಂದು ದಿನದ ಪ್ರವಾಸ ಕಥನ ಸಂಪನ್ನವಾಯಿತು ಗೆಳತಿ ಹೇಮಾ

  2. ನಯನ ಬಜಕೂಡ್ಲು says:

    ಸೊಗಸಾಗಿದೆ ಬರಹ ಹಾಗೂ ಚಿತ್ರಗಳು.

  3. ಪದ್ಮಾ ಆನಂದ್ says:

    ಸುಂದರ ಚಿತ್ರಗಳನ್ನೊಳಗೊಂಡ ಅಪರೂಪದ ತಾಣದ ಪ್ರವಾಸ ಕಥನದ ಸೊಗಸಾದ ನಿರೂಪಣೆ ಸಂತಸ ನೀಡಿತು

  4. ಶಂಕರಿ ಶರ್ಮ says:

    ಕೋಲ್ ಗೇಟ್, ಕರ್ಪೂರದ ಮರ, ಬೊರ್ರಾ ಗುಹೆ, ಹಾ…ಹಾ…ಉರಿ ಮೆಣಸಿನೊಂದಿಗೆ ಪ್ರವಾಸ ಬಹಳ ಮಜಾ ಕೊಟ್ಟಿತು. ಧನ್ಯವಾಗಳು ಹೇಮಾ ಅವರಿಗೆ.

  5. Padmini Hegde says:

    ಅಪರೂಪದ ಪ್ರವಾಸ! ಸುಂದರ ನಿರೂಪಣೆ

  6. ಸಿ ಸುಂದರವಾದ ನಿರೂಪಣೆಯೊಂದಿಗೆ ಅರಕ್ಕೂ ಕಣಿವೆ ಮನಸ್ಸಿಗೆ ಮುದ ನೀಡಿತು

  7. Hema Mala says:

    ಬರಹವನ್ನು ಮೆಚ್ಚಿದ , ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: