ಕಾದಂಬರಿ : ಕಾಲಗರ್ಭ – ಚರಣ 1
ಏನೋ ಮಂಪರು, ಯಾರದೋ ಸದ್ದು ಸಪ್ಪಳ,ಕಣ್ಣು ಬಿಡಬೇಕೆಂದರೂ ಆಗದಷ್ಟು ರೆಪ್ಪೆಗಳು ಭಾರವಾಗಿ ಮುಚ್ಚಿವೆ. ಮೇಲೇಳಲು ಮನ ಬಯಸಿದರೂ ದೇಹ ಸಹಕರಿಸುತ್ತಿಲ್ಲ. ಯಾವುದೋ ಕಾಣದ ಲೋಕಕ್ಕೆ ತೇಲಿಕೊಂಡು ಹೋಗುತ್ತಿರುವ ಅನುಭವ.
ವೈದ್ಯರು ”ಗಾಭರಿಯಾಗುವಂತಹದ್ದೇನಿಲ್ಲ, ಷಾಕಿನಿಂದ ಹೀಗಾಗಿದೆ. ಇಂಜೆಕ್ಷನ್ ಕೊಟ್ಟಿದ್ದೇನೆ, ಸ್ವಲ್ಪ ಹೊತ್ತಿಗೆಲ್ಲ ಸರಿಯಾಗುತ್ತಾರೆ. ಗಲಾಟೆ ಮಾಡಬೇಡಿ. ಅವರನ್ನು ಒಂಟಿಯಾಗಿರಲು ಬಿಡಿ. ಎಲ್ಲಿ ಸ್ವಲ್ಪ ಸರಿಯಿರಿ, ಆಕಡೆಯ ಕಿಟಕಿ ತೆರೆಯಿರಿ, ಮಕ್ಕಳನ್ನು ಹತ್ತಿರ ಬಿಡಬೇಡಿ. ನಾನಿಲ್ಲೇ ಇರುತ್ತೇನಲ್ಲಾ ಭಯಬೇಡ” ಎಂದ ಎಚ್ಚರಿಕೆಯ ಮಾತುಗಳು.
”ಓ ಇದು ಡಾಕ್ಟರ್ ಚಂದ್ರಪ್ಪನವರ ಧ್ವನಿ. ಹಾಗೆಂದರೆ ನನಗೇನೋ ಆಗಿದೆ, ಏಕಾಯಿತು?” ಸ್ವಲ್ಪ ಸ್ವಲ್ಪವೇ ನೆನಪಿಗೆ ಬರತೊಡಗಿತು.
”ಹಾ ! ಹೌದು, ಇಂದು ಈ ಮನೆಯ ಯಜಮಾನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದವನು, ಸುಂದರನೂ, ಬುದ್ಧಿಶಾಲಿಯೂ, ಕರುಣಾಮಯಿ, ಮಹೇಶನ ಸಾವು. ಅವನು ಹುಟ್ಟಿದ ಮನೆಗಷ್ಟೇ ಅಲ್ಲದೆ ಊರಲ್ಲೆಲ್ಲ ಕೀರ್ತಿವಂತನಾಗಿ, ಮತ್ತೊಬ್ಬರಿಗೆ ಮಾದರಿಯಾಗಿ ಬಾಳನ್ನು ನಡೆಸಿದವನು. ಅಂತ್ಯಸಂಸ್ಕಾರಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ಕಾಯುತ್ತಿರುವ ಅವನ ಕಳೇಬರ. ಛೀ..ಛೀ ನನ್ನ ಬುದ್ಧಿಗಿಷ್ಟು, ಮೈಸೂರಿನ ಜೆ. ಎಸ್.ಎಸ್. ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಈ ಆದರ್ಶಪುರುಷ ದೇಹದಾನ ಮಾಡಿರುವುದರಿಂದ ಎಲ್ಲರೂ ಆಂಬುಲೆನ್ಸ್ ಆಗಮನಕ್ಕಾಗಿ ಕಾಯ್ದು ಕುಳಿತಿದ್ದಾರೆ. ಸಕಲ ಮರ್ಯಾದೆಗಳನ್ನು ಸಲ್ಲಿಸಿದ ಬಂಧುಬಳಗ, ಆಪ್ತೇಷ್ಟರು, ಅಷ್ಟೇ ಏಕೆ ನನ್ನ ಹೆತ್ತವರು, ಆ ಪುಣ್ಯ ಪುರುಷನನ್ನು ಹೆತ್ತವರು, ಹೂ.ನಾನೇಕೆ ಅಧೀರಳಾದೆ? ಎಂದೋ ಪ್ರಜ್ಞೆ ಕಳೆದುಕೊಂಡವಳು ಮತ್ತೀಗ ಪ್ರಜ್ಞೆ ಕಳೆದುಕೊಳ್ಳುವುದೆಂದರೆ.. ಯಾರೋ ರೂಮಿನ ಕಡೆಗೇ ಬರುವಂತಿದೆ. ಹೆಜ್ಜೆ ಸಪ್ಪಳ ಸಮೀಪವಾಗುತ್ತಿದೆ. ಹುಂ..ಮಿಸುಕಾಡಬಾರದು..ಬೇಡ ಬೇಡ.”
”ಅವಳಿಗಿನ್ನೂ ಎಚ್ಚರವಾದಂತಿಲ್ಲ, ಡಾಕ್ಟರ್ ಕೊಟ್ಟ ಮದ್ದು ಕೆಲಸ ಮಾಡಿತೋ ಇಲ್ಲವೋ, ಮಗಳೇ..ದೇವಿ..ಮಾದೇವಿ”
”ಶ್..ಎಬ್ಬಿಸಬೇಡಿ, ಮಹೇಶನ ಆರೈಕೆ ಮಾಡುವುದರಲ್ಲಿ ಅವಳ ನಿದ್ರೆ, ಆಹಾರವೆಲ್ಲ ಏರುಪೇರಾಗಿ ನಿತ್ರಾಣಳಾಗಿದ್ದಳು. ಅದರ ಮೇಲೆ ಈ ಸುದ್ಧಿ ಅವಳನ್ನು ಕಂಗೆಡಿಸಿದೆ. ಹೇಗೆ ಇಷ್ಟೆಲ್ಲ ತಡೆದುಕೊಂಡಾಳು. ದೇವರಿಗೆ ಕರುಣೆಯೇ ಇಲ್ಲ, ನಮ್ಮಂಥಹ ಮುದುಕರನ್ನು ಬಿಟ್ಟು ಇನ್ನೂ ಬದುಕಿ ಬಾಳಬೇಕಾದವರನ್ನು ಕರೆದೊಯ್ಯುತ್ತಾನೆ. ಇನ್ನೂ ಈ ಪಾಪಿ ಕಣ್ಣುಗಳಿಂದ ಏನೇನು ನೋಡಬೇಕೋ” ಎಂದು ಬಿಕ್ಕುತ್ತಾ ಹೇಳಿದ ಅಮ್ಮನ ಮಾತಿಗೆ ಅಪ್ಪ ”ಶಾರೀ ಸಮಾಧಾನ ಮಾಡಿಕೋ, ಏನೋ ಯಾರ ಕೆಟ್ಟದೃಷ್ಟಿ ತಾಗಿತೋ, ಎಲ್ಲವೂ ಎಡವಟ್ಟು ಆಗಿಹೋಯಿತು. ನನಗೇನೋ ದೇವಿ ಮತ್ತೆ ಮೊದಲಿನಂತೆ ಆಗುತ್ತಾಳೆಂಬ ನಂಬಿಕೆ ಬರುತ್ತಿಲ್ಲ.” ಎಂದು ದೀರ್ಘ ನಿಟ್ಟುಸಿರು ಬಿಟ್ಟರು.
”ನೀವಿಲ್ಲಿದ್ದಿರಾ? ಏನು ಮಾಡುತ್ತಿದ್ದೀರಾ? ಡಾಕ್ಟರ್ ಹೇಳಲಿಲ್ಲವೇ, ದೊಡ್ಡಮ್ಮನಿಗೆ ತೊಂದರೆ ಕೊಡಬಾರದೆಂದು, ಬನ್ನಿ ಇಲ್ಲಿ ” ಎನ್ನುತ್ತಾ ದೇವಿಯ ಹೊದಿಕೆಯನ್ನು ಸರಿಪಡಿಸಿ ಅವರಿಬ್ಬರನ್ನೂ ರೂಮಿನಿಂದ ಕರೆದುಕೊಂಡು ಹೊರಗೆ ಬಂದಳು ನಿವೇದಿತಾ.
ಅವರೆಲ್ಲ ಹೊರಕ್ಕೆ ಹೋದಮೇಲೆ ಉಸಿರು ಬಿಗಿಹಿಡಿಯುತ್ತಾ ಕಷ್ಟಪಡುತ್ತ ಮಲಗಿದ್ದ ಮಾದೇವಿ ಮೈಯನ್ನು ಸಡಿಲಗೊಳಿಸಿಕೊಂಡು ನಿರಾಳವಾದಳು. ”ಹೌದು ಅಪ್ಪ ಹೇಳಿದಂತೆ ನಮ್ಮ ಜೋಡಿ ಅಪರೂಪದ್ದೇ, ಮಹೇಶ, ಮಾದೇವಿ, ಅಬ್ಭಾ ! ಮೋಡಿಮಾಡುವ ಹೊಂದಾಣಿಕೆ. ಸೂಜಿಗಲ್ಲಿನಂತೆ ನೋಡಿದವರನ್ನು ಆಕರ್ಷಿಸುವಂತಿತ್ತು. ಇನ್ನು ರೂಪು, ವಿದ್ಯೆ, ಹಣ, ಮನೆತನ, ಒಂದಕ್ಕಿಂತ ಒಂದು ಒಟ್ಟಿಗೇ ಮೇಳೈಸಿದ್ದವು. ಆದರೇನು ಆ ಪ್ರಕರಣವೊಂದು ಘಟಿಸದೆ ಇದ್ದರೆ ಅಥವಾ ಅದೊಂದು ಕೆಟ್ಟ ಘಳಿಗೆ ಎಂದು ಹುಚ್ಚು ಮನಸ್ಸಿಗೆ ಕಡಿವಾಣ ಹಾಕಿದ್ದರೆ, ಸ್ವಲ್ಪ ಚಿಂತನೆ ನಡೆಸಿ ಸಾಧ್ಯಾನುಸಾಧ್ಯತೆಗಳನ್ನು ಒರೆಹಚ್ಚಿ ನೋಡಿ ಅದನ್ನು ಉದಾರತೆಯಿಂದ ಉಪೇಕ್ಷಿಸಿದ್ದರೆ… ಎಲ್ಲಾ ‘ರೆ’ ಗಳ ರಾಜ್ಯ. ಹಾಗೆ ಆಗಲೇ ಇಲ್ಲ.ಏ॒ನೇ ಆದರೂ ನಾನೇಕೆ ಇದಕ್ಕೆ ಅಂಟಿಕೊಂಡೆ?” ಮಾದೇವಿಯ ಅಂತರಂಗದಲ್ಲಿಯೇ ನಲವತ್ತು ವರ್ಷಗಳಿಂದ ಅಡಗಿ ಕುಳಿತಿದ್ದ ನೆನಪಿನ ಸುರುಳಿ ಬಿಚ್ಚಿಕೊಂಡಿತು.
ಮೈಸೂರು ನಗರದ ಸಮೀಪದ ಬೆಳಗೊಳ ಗ್ರಾಮದಲ್ಲಿ ವಾಸವಾಗಿದ್ದ ನೀಲಕಂಠಪ್ಪ ತಮ್ಮ ಜಮೀನುದಾರಿಕೆಯಿಂದ ಸುತ್ತಮುತ್ತಲ ಹತ್ತೂರಲ್ಲಿ ಉತ್ತಮ ವ್ಯಕ್ತಿಯೆಂದು ಹೆಸರು ಗಳಿಸಿದ್ದರು. ಅವರ ಧರ್ಮಪತ್ನಿ ಬಸಮ್ಮ. ದಂಪತಿಗಳಿಗೆ ಕೇವಲ ಎಂಟೇ ಮಂದಿ ಮಕ್ಕಳು. ಅವರಲ್ಲಿ ಸಪ್ತ ಮಾತೃಕೆಯರಂತೆ ಏಳು ಜನ ಹೆಣ್ಣುಮಕ್ಕಳು. ನಂತರ ಒಬ್ಬನೇ ಗಂಡುಮಗ. ಉಮಾ, ಶಿವಾನಿ, ಗಿರಿಜಾ, ಅಂಬಿಕಾ, ಗೌರಿ, ಶೈಲಾ, ಕಾತ್ಯಾಯಿನಿ ಎಂದು ಹೆಣ್ಣುಮಕ್ಕಳಿಗೆ ಮತ್ತು ಶಂಕರ ಎಂದು ವಂಶೋದ್ಧಾರಕನಿಗೂ ಹೆಸರಿಟ್ಟು ಅ ಮೂಲಕ ತಮ್ಮ ಆರಾಧ್ಯದೈವ ಶಿವ ಪಾರ್ವತಿಯರಿಗೆ ಕೃತಜ್ಞತೆ ಸಲ್ಲಿಸಿದ್ದರು.
ಈ ದಂಪತಿಗಳ ಎದುರು ಮನೆಯಲ್ಲಿ ವಾಸವಾಗಿದ್ದ ಮತ್ತೊಂದು ಕುಟುಂಬ ಗಂಗಾಧರಪ್ಪ ಮತ್ತು ಗೌರಮ್ಮನವರದ್ದು. ಅವರಿಗೆ ಮೂರು ಹೆಣ್ಣುಮಕ್ಕಳು, ಸುಶೀಲ, ಸುಗುಣಾ, ಸುಧಾ, ಮತ್ತು ಕುಲಪುತ್ರನೊಬ್ಬನೇ ಮಹೇಶ ಇದ್ದರು. ಇವರೂ ನೀಲಕಂಠಪ್ಪನವರಂತೆಯೇ ಜಮೀನುದಾರಿಕೆಯನ್ನೇ ಹೊಂದಿದ್ದರು. ಎರಡೂ ಕುಟುಂಬಗಳಿಗೆ ಹಿರಿಯರ ಕಾಲದಿಂದಲೂ ನಿಕಟ ಆತ್ಮೀಯತೆ ನಡೆದುಬಂದಿತ್ತು.
ಎತ್ತರದ ನಿಲುವಿನ, ಕೆಂಪನೆಯ ಮೈಬಣ್ಣ, ಬಲವಾದ ಮೈಕಟ್ಟು, ಕಂಚಿನಕಂಠ ನೀಲಕಂಠಪ್ಪನವರದ್ದು. ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಮಧ್ಯಮ ಎತ್ತರ, ಮೃದುಮಧುರ ದನಿ ಗಂಗಾಧರಪ್ಪನವರದ್ದು. ಇನ್ನು ಇವರಿಬ್ಬರ ಕೈಹಿಡಿದವರು ಬಸಮ್ಮ, ಗೌರಮ್ಮನವರಿಬ್ಬರೂ ಅತ್ಯಂತ ರೂಪವತಿಯರಾಗಿದ್ದರು ಇಬ್ಬರೂ ಯಾವುದೋ ಜನ್ಮದಲ್ಲಿ ಸೋದರಿಯರಾಗಿದ್ದರೇನೋ ಎನ್ನುವಷ್ಟು ಆತ್ಮೀಯತೆ, ಹೊಂದಾಣಿಕೆ. ಪರಸ್ಪರ ಗೌರವಾದರಗಳಿದ್ದವು.
ಅವರ ಹಿರಿಯರು ಬಾಳಿ ಬದುಕಿ ಬಿಟ್ಟುಹೋಗಿದ್ದ ಮನೆಗಳಲ್ಲೇ ತಮ್ಮ ಬದುಕನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದರು. ಇದ್ದುದಕ್ಕೇ ಕೆಲವು ಕೊಠಡಿಗಳನ್ನು ಸೇರ್ಪಡೆ ಮಾಡಿಕೊಂಡಿದ್ದರು. ಮೂಲ ಸ್ವರೂಪವನ್ನೇನೂ ಬದಲಾಯಿಸಲು ಹೋಗಿರಲಿಲ್ಲ. ಸುಭದ್ರ ಕಂಬಗಳನ್ನೊಳಗೊಂಡ ತೊಟ್ಟಿ ಮನೆಗಳು, ಮನೆಯ ಮುಂದೆ ಹೊರಜಗುಲಿಗಳು. ಕಾಲಕಾಲಕ್ಕೆ ಅಗತ್ಯ ದುರಸ್ಥಿ, ಸುಣ್ಣಬಣ್ಣಗಳನ್ನು ಮಾಡಿಕೊಳ್ಳುತ್ತಾ ಸುಸ್ಥಿತಿಯಲ್ಲಿಟ್ಟುಕೊಂಡಿದ್ದರು.
ಇಬ್ಬರಿಗೆ ಸೇರಿದ ಜಮೀನುಗಳೂ ಸಮೀಪದಲ್ಲಿಯೇ ಇದ್ದುದರಿಂದ ಅವುಗಳ ಉಸ್ತುವಾರಿ ಮಾಡುತ್ತಿದ್ದ ಆಳುಕಾಳುಗಳಿಗೆ ತಮ್ಮ ಖರ್ಚಿನಲ್ಲಿಯೇ ನಿವಾಸಗಳನ್ನು ಕಟ್ಟಿಸಿಕೊಟ್ಟು ಮನೆಯ ಸದಸ್ಯರುಗಳಂತೆ ನೋಡಿಕೊಳ್ಳುತ್ತಿದ್ದರು.
ಇದೆಲ್ಲಕ್ಕಿಂತ ಮಿಗಿಲಾಗಿ ಹಿರಿಯ ತಲೆಮಾರಿನವರ ಕಾಲದಲ್ಲಿ ಜಮೀನು ಉಳುಮೆ ಮಾಡುವಾಗ ಸಿಕ್ಕಿತೆಂದು ಹೇಳಲಾಗುತ್ತಿದ್ದ ಶಿವಪಾರ್ವತಿ, ಗಣೇಶನ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪೂಜಿಸಿ ಅವಕ್ಕೆ ಪುಟ್ಟ ಗುಡಿಯೊಂದನ್ನು ಕಟ್ಟಿಸಿದ್ದರು. ಕಾಲಕಾಲಕ್ಕೆ ಅದನ್ನು ಜೀರ್ಣೋದ್ಧಾರ ಮಾಡುತ್ತಾ ಎರಡೂ ಕುಟುಂಬದವರು ಆದರ ಆರಾಧಕರಾಗಿದ್ದರು.
ಪುರಾಣ ಪುಣ್ಯಕಥೆಗಳಲ್ಲಿ ಅಪಾರ ಆಸಕ್ತಿ ಇಬ್ಬರಿಗೂ. ಕುಟುಂಬದ ಹಿರಿಯರು ಆಯಾಯ ಹಬ್ಬಗಳಿಗೆ ಅನುಸಾರವಾಗಿ ವಿಶೇಷ ಪೂಜೆಗಳು, ಸಂಕೀರ್ತನೆಗಳನ್ನು ಏರ್ಪಡಿಸುತ್ತಿದ್ದರು. ಊರಿನ ಜನರೆಲ್ಲರೂ ಹಾಜರಾಗುತ್ತಿದ್ದರು. ಊರಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುವಲ್ಲಿ ಈ ಇಬ್ಬರು ಮುಖಂಡರ ಪಾತ್ರ ಪ್ರಮುಖವಾಗಿತ್ತು. ಊರಿನವರೆಲ್ಲ ಇವರ ಬಗ್ಗೆ ಪ್ರೀತಿ, ವಿಶ್ವಾಸ, ನಂಬಿಕೆಗಳನ್ನಿಟ್ಟುಕೊಂಡಿದ್ದರು. ಹಾಗೇ ಇವರಿಬ್ಬರೂ ಅವನ್ನು ಉಳಿಸಿಕೊಂಡು ಬಂದಿದ್ದರು. ಮಕ್ಕಳ ಕಾಲಕ್ಕೂ ಇದು ಮುಂದುವರೆದಿತ್ತು.
ನೀಲಕಂಠಪ್ಪ ತಮ್ಮ ಅಂತಸ್ಥಿಗೆ ತಕ್ಕಂತೆ ಎಲ್ಲ ಹೆಣ್ಣುಮಕ್ಕಳಿಗೆ ನೆಂಟಸ್ತನ ಕುದುರಿಸಿ ವಿವಾಹ ಮಾಡಿದರು. ಕಾಲ ಸರಿದಂತೆ ಇದ್ದೊಬ್ಬಮಗ ಶಂಕರಪ್ಪ ಎಸ್.ಎಸ್.ಎಲ್.ಸಿ. ಪರೀಕ್ಷೆ ಕಟ್ಟಿದ್ದನು. ಅಷ್ಟೇ ಅಲ್ಲದೆ ಅದರಲ್ಲಿ ಉತ್ತಮದರ್ಜೆಯಲ್ಲಿ ತೇರ್ಗಡೆಯಾಗಿ ಮುಂದೆ ಓದಬೇಕೆಂಬ ಅಭಿಲಾಷೆಯುಳ್ಳವನಾಗಿದ್ದನು. ತಂದೆ ನೀಲಕಂಠಪ್ಪನವರು ಕಲಿಕೆ ಸಾಕು, ಇನ್ನು ಜಮೀನಿನ ಉಸ್ತುವಾರಿಕೆಯ ಬಗ್ಗೆ ಅರಿವು ಮೂಡಿಸಿಕೋ, ನಾನಿರುವಂತೆಯೇ ಅದರ ಆಗುಹೋಗುಗಳ ಬಗ್ಗೆ ತಿಳಿದುಕೋ, ಮುಂದೆ ಅದರಲ್ಲಿ ಹೊಸದೇನಾದರೂ ಅಳವಡಿಸಿಕೊಳ್ಳಬಹುದಾದರೆ ಅದರ ಬಗ್ಗೆ ಸೂಕ್ತ ತರಬೇತಿ ಪಡೆದುಕೋ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹೀಗಾಗಿ ಶಂಕರಪ್ಪನಿಗೆ ಓದಿನಲ್ಲಿ ಆಸಕ್ತಿಯಿದ್ದರೂ ತಂದೆಯ ಇಚ್ಛೆಯಂತೆ ವ್ಯವಸಾಯದ ಹೊಸ ಪದ್ಧತಿಗಳ ಬಗ್ಗೆ ತರಬೇತಿ ಪಡೆದನು. ಅಪ್ಪನ ಜೊತೆಗೇ ಕೈಜೋಡಿಸಿದನು.
ಹೀಗೇ ಹಲವು ವರ್ಷಗಳು ಕಳೆದವು. ವಿವಾಹ ಯೋಗ್ಯನಾದ ಮಗನಿಗೆ ತಮ್ಮ ಹಿರಿಯ ಮಗಳ ಮಗಳು ಅಂದರೆ ಮೊಮ್ಮಗಳನ್ನೇ ಸೊಸೆಯನ್ನಾಗಿ ತಂದುಕೊಂಡರು. ಅವಳೇ ಮನೆಯ ಮುಂದಿನ ಯಜಮಾನಿ ಶಾರದಮ್ಮ. ಶಂಕರಪ್ಪನವರ ಮಗಳೇ ಮಾದೇವಿ. ಅವಳ ನಂತರ ಆ ಮನೆಯಲ್ಲಿ ಮತ್ತೆ ತೊಟ್ಟಿಲು ತೂಗಲಿಲ್ಲ. ಇದು ಮನೆಯ ಹಿರಿಯರಿಗೆ ಅಷ್ಟೇನೂ ಪ್ರಿಯವಾಗಲಿಲ್ಲ. ಆದರೆ ಸೂಕ್ಷ್ಮವಾದ ದೇಹಪ್ರಕೃತಿಯ ಮೊಮ್ಮಗಳ ಮೇಲೆ ಮಗನಿಗೆ ಮತ್ತೊಂದು ಹೆಣ್ಣು ತಂದು ಪೈಪೋಟಿ ನಡೆಸುವ ಮನಸ್ಸು ಬಾರದೇ ಇದ್ದೊಬ್ಬ ಮಗಳು ಮಾದೇವಿಯ ಮೇಲೇ ಪ್ರೀತಿಯ ಮಹಾಪೂರವನ್ನೇ ಹರಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದರು. ಹೀಗೆ ಎಲ್ಲರ ಕಣ್ಮಣಿಯಾಗಿ ಮಾದೇವಿ ಬಂಗಾರದ ಪುತ್ಥಳಿಯಂತೆ ಬೆಳೆಯುತ್ತಿದ್ದಳು.
ಇತ್ತ ಗಂಗಾಧರಪ್ಪನವರ ಕುಟುಂಬದಲ್ಲೂ ಸಾಕಷ್ಟು ಬದಲಾವಣೆಯಾಗಿತ್ತು. ಅವರೂ ತಮ್ಮ ಹೆಣ್ಣುಮಕ್ಕಳಿಗೆ ವಿವಾಹ ಮಾಡಿ ಮುಗಿಸಿದ್ದರು. ವಿಶೇಷವೆಂದರೆ ಮೂರೂ ಜನ ಹೆಣ್ಣುಮಕ್ಕಳನ್ನೂ ಒಂದೇ ಮನೆಯ ಮೂರು ಅಣ್ಣತಮ್ಮಂದಿರಿಗೆ ಕನ್ಯಾದಾನ ಮಾಡಿಕೊಟ್ಟಿದ್ದರು. ಅನಿರೀಕ್ಷಿತವಾಗಿ ಒದಗಿ ಬಂದ ಸಂಬಂಧವದು. ಸಕಲೇಶಪುರದ ಕಾಫಿ ತೋಟದ ಮಾಲೀಕರು ತಮ್ಮ ಮನೆಯ ಮೂರು ಗಂಡು ಮಕ್ಕಳಿಗೆ ಒಂದೇ ಮನೆಯಲ್ಲಿನ ಒಡಹುಟ್ಟಿದವರೇ ಸೊಸೆಯರಾಗಿ ಬೇಕೆಂದು ಬಯಸಿ ತಾವೇ ಇಷ್ಟಪಟ್ಟು ಬಂದಿದ್ದರು. ಹೀಗೆ ಒಂದೇ ಸಾರಿ ಮೂರೂ ಹೆಣ್ಣುಮಕ್ಕಳ ವಿವಾಹ ನೆರವೇರಿತ್ತು. ಇದ್ದೊಬ್ಬ ಮಗ ಮಹೇಶ ಮೈಸೂರಿನಲ್ಲಿ ಮಹಾರಾಜಾ ಕಾಲೇಜಿನಲ್ಲಿ ಪಿ.ಯು.ಸಿ. ಪಾಸಾಗಿ ಹೆಚ್ಚಿನ ಓದಿಗೆಂದು ತನ್ನಿಚ್ಛೆಯಂತೆ ಬಿ.ಎಸ್.ಸಿ.(ಅಗ್ರಿ) ಓದಲು ಬೆಂಗಳೂರಿಗೆ ಹೊರಟನು. ಇದರಿಂದಾಗಿ ಮನೆಯೆಲ್ಲ ಖಾಲಿ ಖಾಲಿಯಾದಂತಾಯಿತು.
ಆ ಸಮಯದಲ್ಲಿ ಗಂಗಾಧರಪ್ಪನವರ ಪತ್ನಿ ಗೌರಮ್ಮನವರು ತಮ್ಮ ಚಿಕ್ಕಮ್ಮನ ಮಗಳು ಮಂಗಳಾ ಮತ್ತು ಅವಳ ಮಗ ಸುಬ್ಬಣ್ಣನನ್ನು ಮನೆಗೆ ಕರೆತಂದರು. ಕಾರಣ ಮಂಗಳಾ ತನ್ನ ಪತಿಯನ್ನು ಕಳೆದುಕೊಂಡು ಹೆತ್ರವರ ಮನೆಗೆ ಹೋಗಲು ಇಷ್ಟವಿಲ್ಲದೆ ತಾನಿದ್ದ ಮನೆಯಲ್ಲಿ ಅತ್ತೆ ಮತ್ತು ಓರಗಿತ್ತಿಯ ಕೈಯಲ್ಲಿ ಹೆಣಗುತ್ತಿದ್ದಳು.ಅದನ್ನು ನೋಡಲಾಗದೆ ಪತಿಯನ್ನೊಪ್ಪಿಸಿ ಅವರಿಗೆ ಆಶ್ರಯ ನೀಡಲೆಂದು ತಮ್ಮ ಮನೆಗೆ ಕರೆತಂದರು ಗೌರಮ್ಮ. ಹತ್ತು ವರ್ಷವಾದರೂ ಹುಡುಗ ಸುಬ್ಬಣ್ಣನಿಗೆ ಶಾಲೆಗೆ ಸೇರಿಸದೆ ಅವರ ಮನೆಯಲ್ಲಿ ದನ ಮೇಯಿಸಲು ಹಾಕಿಕೊಂಡಿದ್ದರು. ಅವನನ್ನು ಕರೆತಂದಮೇಲೆ ಅಲ್ಲಿ ಶಾಲೆಗೆ ಸೇರಿಸಿದರು. ಇದರಿಂದಾಗಿ ಮನೆಯಲ್ಲಿ ಸ್ವಲ್ಪ ಲವಲವಿಕೆ ಮೂಡಿದಂತಾಯಿತು. ಹಾಗೇ ಎರಡೂ ಮನೆಗಳಿಗೂ ಎಡತಾಕುತ್ತಿದ್ದ ಮಾದೇವಿಗೂ ತನಗಿಂತ ಒಂದೆರಡು ವರ್ಷ ಕಿರಿಯವನಾದ ಸುಬ್ಬಣ್ಣ ಸಿಕ್ಕಿದ್ದು ತುಂಬ ಸಂತಸ ತಂದಿತ್ತು. ಅಷ್ಟು ಹೊತ್ತಿಗಾಗಲೇ ನಾಲ್ಕನೆಯ ತರಗತಿಗೆ ಕಾಲಿಟ್ಟಿದ್ದಳು ಮಾದೇವಿ. ಆಗತಾನೇ ಶಾಲೆಗೆ ಕಾಲಿಟ್ಟಿದ್ದ ಸುಬ್ಬಣ್ಣನಿಗೆ ಹೇಗೆ ನಡೆದುಕೊಳ್ಳಬೇಕೆಂಬ ಅರಿವಿಲ್ಲದೆ ಭಯಭೀತನಾಗಿದ್ದ. ಹಿರಿಯಕ್ಕನಂತೆ ಅವನಿಗೆ ಧೈರ್ಯ ತುಂಬಿದಳು. ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದಳು. ಬೇರೆ ಹುಡುಗರೇನಾದರೂ ಅವನ ತಂಟೆಗೆ ಬಂದರೆ ಹೆದರಿಕೊಳ್ಳದೆ ಹೇಗಿರಬೇಕೆಂಬುದನ್ನೂ ಹೇಳಿಕೊಡುತ್ತಿದ್ದಳು. ಅವನು ಪಾಠವನ್ನು ತನ್ನೊಡನೆ ಅಭ್ಯಾಸ ಮಾಡುವಂತೆ ಕರೆದು ಕೂಡಿಸಿಕೊಳ್ಳುತ್ತಿದ್ದಳು. ಇದರಿಂದ ಎರಡೂ ಮನೆಯವರಿಗೆ ಸಂತಸವುಂಟು ಮಾಡಿತ್ತು. ಒಟ್ಟಿನಲ್ಲಿ ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಸಂಕೋಚದಿಂದ ಮುದುಡಿ ಕುಳಿತುಕೊಳ್ಳುತ್ತಿದ್ದ ಸುಬ್ಬಣ್ಣ ಮೈಛಳಿಬಿಟ್ಟು ಮನೆ, ಶಾಲೆಯ ವಾತಾವರಣಕ್ಕೆ ಒಗ್ಗಿಕೊಳ್ಳತೊಡಗಿದ.
ಮಾದೇವಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾದಳು. ಪಿ.ಯು.ಸಿ.ಗಾಗಿ ಮೈಸೂರಿನ ಮಹಾರಾಣಿ ಕಾಲೇಜಿಗೆ ಸೇರಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದಳು. ಮೊಮ್ಮಗಳ ನಿರ್ಧಾರವನ್ನು ಕೇಳಿ ನೀಲಕಂಠಪ್ಪ ”ಏ..ಕೂಸೆ, ಇನ್ಯಾಕೆ ಓದು? ಮನೆಯಲ್ಲಿದ್ದು ಕೆಲಸಬೊಗಸೆ ಕಲಿತುಕೋ. ಒಳ್ಳೆಯ ಮನೆತನದ ಹುಡುಗನನ್ನು ತಂದು ಓಲಗ ಊದಿಸಿಬಿಡೋಣ..ಏನಂತಿ?” ಎಂದರು. ಗಂಡನ ಮಾತಿಗೆ ಬಸಮ್ಮನವನವರೂ ಧ್ವನಿಗೂಡಿಸಿದರು.
ಅಜ್ಜ, ಅಜ್ಜಿಯ ಕಳವಳದ ಮಾತುಗಳನ್ನು ಕೇಳಿದ ಮಾದೇವಿ ಮನಸ್ಸಿನಲ್ಲೆ ನಗುತ್ತಾ ”ನಾನೇನೋ ಕಾಲೇಜಿಗೆ ಸೇರಿ ಓದು ಮುಂದುವರೆಸಬೇಕು ಅಂದುಕೊಂಡರೇನು ಫಲ, ಅಪ್ಪ ಒಪ್ಪಬೇಕಲ್ಲಾ” ಎಂದು ನೆಪ ಒಡ್ಡಿ ಜಾರಿಕೊಂಡಳು. ಮೊಮ್ಮಗಳ ಮಾತನ್ನು ಕೇಳಿದ ಆ ಹಿರಿಯ ದಂಪತಿಗಳು ಮಗನನ್ನು ಒಪ್ಪಿಸಲು ಪ್ರಯತ್ನಿಸಿದರು. ಹೆತ್ತವರು ಹೇಳಿದ್ದಕ್ಕೆ ಪ್ರತಿರೋಧ ತೋರದಂತೆ ಕೇಳಿಸಿಕೊಂಡ ಶಂಕರಪ್ಪ ”ಅಪ್ಪಾ..ಕಾಲಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕಲ್ಲಾ. ವಿದ್ಯೆ ಕಲಿಯಲು ಗಂಡು, ಹೆಣ್ಣು ಅನ್ನೋ ಭೇದ ಈಗಿಲ್ಲ. ಅಲ್ಲದೆ ನನಗಂತೂ ನೀವು ಮುಂದೆ ಓದಲು ಬಿಡಲಿಲ್ಲ. ಹಠಮಾಡಿ ನನ್ನಿಷ್ಟವನ್ನೇ ಸಾಧಿಸಿಕೊಳ್ಳೋಣವೆಂದರೆ ನೀವೊಬ್ಬರೇ ದುಡಿದು ಹಣ್ಣಾಗುತ್ತಿದ್ದುದನ್ನು ಕಣ್ಣಾರೆ ಕಂಡು ಮನಸ್ಸು ಬಾರದೆ ನೇಗಿಲಿಗೆ ನೊಗವಾದೆ. ಈಗ ನನ್ನ ಮಗಳು ಚೆನ್ನಾಗಿ ಓದುತ್ತಿದ್ದಾಳೆ. ಅವಳಿಗೇನು ಮಹಾ ವಯಸ್ಸಾಗಿರೋದು? ಕಾನೂನಿನ ಪ್ರಕಾರ ಇನ್ನೂ ಒಂದೆರಡು ವರ್ಷ ಮದುವೆ ಮಾಡಲು ಕಾಯಬೇಕು. ಓದಲಿ ಬಿಡಿ” ಎಂದು ಸಾರಾ ಸಗಟಾಗಿಅವರ ಬೇಡಿಕೆಯನ್ನು ತಳ್ಳಿಹಾಕಿದ ಶಂಕರಪ್ಪ.
”ಅಲ್ಲಾ ಶಂಕರೂ,ನೀನೇಳಿದಂತೆ ಓದಿಸಿ ಪಟ್ಟಣದ ಹುಡುಗನಿಗೆ ಕೊಟ್ಟುಬಿಟ್ಟರೆ ಈ ಜಮೀನು ನೋಡಿಕೊಳ್ಳೋರು ಯಾರು? ಮೇಲಾಗಿ ವಯಸ್ಸಿಗೆ ಬಂದ ಹುಡುಗಿ ಮೈಸೂರು ಕಾಲೇಜಿಗೆ ಸೇರಬೇಕೆಂದಿದ್ದಾಳೆ. ದಿನಾ ಹೋಗಿಬರುವುದೆಂದರೆ ಕಾ॒ಲ ಒಂದೇ ಸಮಾ ಇರುತ್ತಾ? ನಮಗೇನೋ ಸುತರಾಂ ಇಷ್ಟವಿಲ್ಲಪ್ಪಾ. ಈಗಲೇ ಮದುವೆ ಮಾಡುವುದಿಲ್ಲವೆಂದರೆ ಬೇಡ, ಬಲವಂತವೇನಿಲ್ಲ. ಆದರೆ ಇದೇ ಊರಿನಲ್ಲಿ ಹೊಲಿಗೆ, ಕಸೂತಿ, ಅದೂ ಇದೂ ಬೇಡವೆಂದರೆ ಜಮೀನಿಗೆ ಸಂಬಂಧಪಟ್ಟದ್ದನ್ನು ಕಲಿಸು. ಕೃಷಿ ಇಲಾಖೆಗೆ ಸಂಬಂಧಿಸಿದವರು ಆಗಿಂದಾಗ್ಗೆ ಬರುತ್ತಿರುತ್ತಾರಲ್ಲಾ, ಆ ಮಗೀಗೂ ಅವುಗಳ ಬಗ್ಗೆ ಆಸಕ್ತಿಯಿದೆ. ಇಲ್ಲವೇ ಮಹಿಳಾ ಸಂಘಗಳಿವೆ. ಗ್ರಾಮದ ಅನಕ್ಷರಸ್ಥ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸಲಿ. ಸರ್ಕಾರದ ಹಲವಾರು ಯೋಜನೆಗಳಿವೆ, ಯಾವುದಾದರೊಂದು ಕೈಗೆತ್ತಿಕೊಳ್ಳಲಿ. ನಮಗೆ ಗೊತ್ತಿರುವವರ ಹತ್ತಿರ ಸಂಬಂಧಪಟ್ಟವರೊಡನೆ ಶಿಫಾರಸ್ಸು ಮಾಡಿಸಿ..ಸಿಕ್ಕುವಂತೆ ಮಾಡೋಣ. ಎಂದು ತಮ್ಮ ಹಂಬಲವನ್ನು ವ್ಯಕ್ತಪಡಿಸಿದರು. ಹಿರಿಯರಿಗೆ ಮೊಮ್ಮಗಳು ಪ್ರತಿದಿನ ಮೈಸೂರಿಗೆ ಎಡತಾಕುತ್ತಾ ಓದಲು ಕಷ್ಟಪಡುವುದು ಬೇಡವಾಗಿತ್ತು. ಹಾಗೆ ಮಾಡಲು ಅವರು ಹೇಳಿದಂತೆ ಆಸ್ತಿಯನ್ನು ಸಂಭಾಳಿಸುವುದು, ಮಗನ ನಂತರ ಏನಾಗುವುದೋ.ಮನೆ ಅಳಿಯನಾಗುವವ ಹೆಚ್ಚಿಗೆ ಓದಿದವನಾದರೆ ಇಲ್ಲೆಲ್ಲಿ ಇರುತ್ತಾನೆ? ಎಂಬ ಆತಂಕ, ಎಲ್ಲಕ್ಕಿಂತ ಹೆಚ್ಚಾಗಿ ವಯಸ್ಸಾದ ತಾವು ಇನ್ನೆಷ್ಟು ಕಾಲ ಇದ್ದೇವು.. ನಾವು ಇರುವಾಗಲೇ ತಮ್ಮ ಒಬ್ಬಳೇ ಮೊಮ್ಮಗಳ ಮದುವೆ ಮಾಡಿ ಬಾಳುವೆ ಮಾಡುವುದನ್ನು ಕಣ್ಣಾರೆ ಕಾಣಬೇಕೆನುವ ತವಕ., ಅದೂ ಹೋಗಲಿ ನಮ್ಮ ಕಣ್ಮುಂದೆ ಅವಳು ಓಡಾಡಿಕೊಂಡಿರಲಿ ಎಂಬ ಬಯಕೆ”, ಹೀಗೆ ಅನೇಕ ರೀತಿಯಲ್ಲಿ ತಮ್ಮ ಮನದ ಇಂಗಿತವನ್ನು ಮಗನೊಡನೆ ಹೇಳಿ ತಮ್ಮ ಅಭಿಪ್ರಾಯದಂತೆ ಅವನನ್ನು ಒಪ್ಪಿಸಲು ಪ್ರಯತ್ನಿಸಿ ಆಗಲಾರದೆಂದು ತಿಳಿದ ಮೇಲೆ ಮೌನಕ್ಕೆ ಶರಣಾದರು.
ಮನೆಯಲ್ಲಿ ಹಿರಿಯರ ಆತಂಕ, ಗಂಡ, ಮಗಳ ತೀರ್ಮಾನ ತಿಳಿದು ಅವನ ಪತ್ನಿ ಶಾರದಮ್ಮ ಶಂಕರಪ್ಪನಿಗೆ ”ನೋಡಿ ದೇವಿಯನ್ನು ಕಾಲೇಜಿಗೆ ಕಳಿಸುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಒಂದು ವ್ಯವಸ್ಥೆ ಮಾಡೋಣ. ಏನೆಂದರೆ ಇಲ್ಲಿಂದ ಎಷ್ಟೋ ಹುಡುಗರು ಓದಲು ಮೈಸೂರಿಗೆ ಹೋಗಿ ಬರುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬಸ್ಸುಗಳು ಸಿಗದೆ ಪರದಾಟ ಪಡುವುದನ್ನು ನಾನು ಕಂಡಿದ್ದೇನೆ. ನಮ್ಮ ಜಮೀನಿನ ಕೆಲಸ ಮಾಡುತ್ತಿರುವ ರಾಮಪ್ಪನ ಮಗ ಸೀನಪ್ಪನಿಗೆ ಡ್ರೈವಿಂಗ್ ಬರುತ್ತದೆ. ಲೈಸೆನ್ಸ್ ಪಡೆದಿದ್ದಾನೆ. ಅವನ ಬಳಿ ಚಿಕ್ಕದೊಂದು ವ್ಯಾನೂ ಇದೆ. ಗ್ರಾಮದ ಮಕ್ಕಳ ಪೋಷಕರನ್ನು ಭೇಟಿಮಾಡಿ ಕೇಳೋಣ. ಅವರ ಕೈಲಿ ಎಷ್ಟಾಗಿತ್ತೋ ಅಷ್ಟು ಹಣ ಕೊಡಲಿ. ಮಿಕ್ಕದ್ದನ್ನು ನಾವು ಹಾಕೋಣ. ಆ ವ್ಯಾನಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಕ್ಕಳು ಇಲ್ಲಿಂದಲೇ ಶಾಲೆ, ಕಾಲೇಜುಗಳಿಗೆ ಹೋಗಿಬರಲಿ. ಅದಕ್ಕೆ ಅ ಶೀನನನ್ನು ಒಪ್ಪಿಸೋಣ. ಒಳ್ಳೆಯ ನಂಬಿಕಸ್ಥ ಹುಡುಗ. ಏನಂತೀರಾ?” ಎಂದು ಹೇಳಿದಳು ಶಾರದಮ್ಮ.
”ಓ..!ಒಳ್ಳೆಯ ಆಲೋಚನೆ, ಇದು ನನ್ನ ತಲೆಗೆ ಹೊಳೆಯಲೇ ಇಲ್ಲ”. ಎಂದು ಒಂದೆರಡು ದಿನದಲ್ಲೇ ಎಲ್ಲರ ಹತ್ತಿರ ಮಾತನಾಡಿ ಹೋಗಿ ಬರುವ ಸೌಕರ್ಯ ಒದಗಿಸಿಕೊಟ್ಟರು ಶಂಕರಪ್ಪ. ಈ ಏರ್ಪಾಡು ಶಂಕರಪ್ಪನ ತಂದೆತಾಯಿಯರಿಗೂ ಒಪ್ಪಿಗೆಯಾಯಿತು. ಊರಿನ ಕೆಲವು ಮಕ್ಕಳಿಗೆ ಮತ್ತವರ ಪೋಷಕರಿಗೂ ಸಮಾಧಾನ ತಂದಿತು.
ಶೀನಪ್ಪನೂ ತನ್ನ ಯಜಮಾನರ ನಂಬಿಕೆಯನ್ನು ಹುಸಿಗೊಳಿಸದೆ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದನು. ದೇವಿಯು ತನಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದುವರೆದಿದ್ದಳು. ಓದಿನ ಜೊತೆಯಲ್ಲೇ ಸಮಯ ಹೊಂದಿಸಿಕೊಂಡು ಕಾಲಕ್ಕೆ ತಕ್ಕಂತೆ ಕಂಪ್ಯೂಟರ್ ಕಲಿಕೆ, ದಿಚಕ್ರ ವಾಹನ ನಡೆಸುವುದರ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಳು. ಓದಿನಲ್ಲೂ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿನಿ ಎನ್ನಿಸಿಕೊಂಡು ಬಿ.ಎಸ್.ಸಿ.,ಪದವಿಯನ್ನು ಯಶಸ್ವಿಯಾಗಿ ಪೂರೈಸಿದಳು. ಅದನ್ನು ಕಾಯುತ್ತಿದ್ದರೇನೋ ಎಂಬಂತೆ ಮನೆಯ ಹಿರಿಯರು ಆಕೆಯ ಮದುವೆಗೆ ವರಾತ ಮಾಡತೊಡಗಿದರು. ಶಂಕರಪ್ಪ, ಶಾರದೆಗೂ ಈ ಸಾರಿ ಹಿರಿಯರ ಮಾತನ್ನು ನಡೆಸಲು ಸೂಕ್ತಕಾಲವೆಂದು ಅನ್ನಿಸಿಮಗಳಿಗಾಗಿ ಅನುಕೂಲ ಸಂಬಂಧ ಹುಡುಕುವ ನಿರ್ಧಾರಕ್ಕೆ ಬಂದರು.
ಸಂಗತಿ ಕೇಳಿದ ಶಂಕರಪ್ಪನ ಸೋದರಿಯರು ತಮ್ಮಲ್ಲೇ ಯಾರಾದರೊಬ್ಬರ ಮಗನನ್ನು ನಿನ್ನ ಮಗಳಿಗೆ ತಂದುಕೊಂಡರೆ ತವರಿನ ಸಿರಿಯನ್ನು ಉಳಿಸಿಕೊಳ್ಳಬಹುದೆಂದು ಆತನಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಬಂಧ ಬೆಳೆಸುವ ಇಚ್ಛೆಯನ್ನು ವ್ಯಕ್ತಪಡಿಸಲಾರಂಭಿಸಿದರು.
(ಮುಂದುವರಿಯುವುದು)
–ಬಿ.ಆರ್.ನಾಗರತ್ನ, ಮೈಸೂರು
ನನ್ನ ಮೂರನೇ ಕಾದಂಬರಿ ..ಕಾಲಗರ್ಭ ..ಇದನ್ನು ತಮ್ಮ ಪತ್ರಿಕೆ ಸುರಹೊನ್ನೆಯಲ್ಲಿ ಪ್ರಕಟಿಸಿ..ಪ್ರೋತ್ಸಾಹ ನೀಡಲು…ಮುಂದೆಬಂದಿರುವುದು ನನಗೆ ಸಂತಸ ನೀಡಿದೆ..ಅವರಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು… ಎಂದಿನಂತೆ ಓದುಗರ ಅನುಸಿಕೆ ಅಭಿಪ್ರಾಯ ಕ್ಕೆ ಸ್ವಾಗತ..
ಸೊಗಸಾಗಿದೆ ಮೇಡಂ. ಓದುಗರಾದ ನಮ್ಮ ಸೌಭಾಗ್ಯ ನಿಮ್ಮ ಕಾದಂಬರಿ ಪ್ರಕಟಗೊಳ್ಳುತ್ತಿರುವುದು.
ನಿಮ್ಮ ಸಹೃದಯಕ್ಕೆ.. ನನ್ನ ಧನ್ಯವಾದಗಳು… ನಯನಮೇಡಂ
ಕುತೂಹಲಭರಿತ ಪ್ರಾರಂಭ, ಸುಲಲಿತ ನಿರೂಪಣೆಯೊಂದಿಗೆ “ಕಾಲಗರ್ಭ” ನಮ್ಮಂತಹ ಓದುಗರನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿನ ಹಾದಿಯಲ್ಲಿ ಹೊರಟಿದೆ.
‘ಕಾಲಗರ್ಭ`ವು ಮೊದಲ ಕಂತಿನಲ್ಲಿಯೇ ಕುತೂಹಲ ಮೂಡಿಸಿದೆ. ಸರಳ ಸುಂದರ ನಿರೂಪಣೆ, ಕಥೆಯ ಓಘವನ್ನು ಬಲಪಡಿಸಿದೆ. ಧನ್ಯವಾದಗಳು ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ನಿಮ್ಮ ಪ್ರೀತಿ ಯ ಪ್ರತಿಕ್ರಿಯೆಗೆ…ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಪದ್ಮಾಮೇಡಂ.
ಕಾದಂಬರಿಯ ಆರಂಭ ಬಹಳ ಸೊಗಸಾಗಿದೆ
ಧನ್ಯವಾದಗಳು ಗಾಯತ್ರಿ ಮೇಡಂ
ಕಾದಂಬರಿಯನ್ನು ನಾನು ಓದಿದ್ದೇನೆ. ಪ್ರೀತಿಯಿಂದ ಮುನ್ನುಡಿಸಿಯೂ ಇದ್ದೇನೆ.
ಇದೀಗ ಎಲ್ಲ ಓದುಗರಿಗೆ ಲಭಿಸುತ್ತಿರುವುದು ಸಂತಸದ ವಿಷಯ. ಶುಭವಾಗಲಿ.
ಅಭಿನಂದನೆಗಳು ಮೇಡಂ.
ನಿಮ್ಮ ಸಹೃದಯತೆಗೆ ಅನಂತ ಧನ್ಯವಾದಗಳು ಮಂಜು ಸಾರ್…
ಅಭಿನಂದನೆಗಳು ಮೇಡಂ
ಮೊದಲ ಸಂಚಿಕೆಯೇ ಕುತೂಹಲ ಮೂಡಿಸುತ್ತಿದೆ, ಸುಂದರ ಕೌಟುಂಬಿಕ ಹಂದರದ ನಿರೂಪಣೆ ಸೊಗಸಾಗಿದೆ….
ಧನ್ಯವಾದಗಳು ಗೆಳತಿ ವೀಣಾ
ಒಳ್ಳೆಯ ಆ ರಂಭ . ನಿರೀಕ್ಷೆ ಹುಟ್ಟಿಸಿದೆ