ಪ್ರಕೃತಿಪ್ರಿಯ ಷಡಕ್ಷರದೇವ

Share Button

ಕಾವ್ಯಗುಣ:

“ಜೇಂಗೊಡದಂತೆ | ಝೇಂಕರಿಪ ತುಂಬಿಗಳಿಂಚರದಂತೆ | ಪೆಂಪನಾಳ್ದಿಂಗಡಲಂತೆ | ಪಣ್ತೆಸೆವ ಮಾಮರದಂತೆ | ಬೆಳ್ದಿಂಗಳ ಸೊಂಪಿನಂತೆ | ಸುಸಿಲಾಸೆಯ ನಲ್ಲಳ ನೋಟದಂತೆ | ರಸಜ್ಞರ ಆ ಚಿತ್ತಂಗೊಳಲಾರ್ಪುದು | ಈ ಕೃತಿ ಷಡಕ್ಷರಿದೇವಕೃತಂ” ||

ಎನ್ನುವ ಈ ಪದ್ಯ ಹೀಗೆ ರಸಜ್ಞನೊಬ್ಬ ಷಡಕ್ಷರಿಯ ಶಬರಶಂಕರ ವಿಲಾಸದ ಕಾವ್ಯಗುಣವನ್ನು ಗುರುತಿಸಿರಬಹುದು ಅಥವಾ ತನ್ನ ಕಾವ್ಯಸ್ವರೂಪವನ್ನು ಕುರಿತು ಕವಿಯೇ ಈ ಅಭಿಪ್ರಾಯವನ್ನು ಹೊಂದಿದ್ದಿರಬಹುದು ಎಂದು ಹೇಳುತ್ತಿದೆ. ಅದೇನೇ ಆಗಿದ್ದರೂ ಈ ಸಾಲುಗಳಲ್ಲಿ ಎದ್ದು ಕಾಣುವ ಒಂದು ಸಂಗತಿ ಕವಿಗೆ ಸಹಜವಾಗಿ ಇರುವ ಪ್ರಕೃತಿಪ್ರಿಯತೆ ಆಗಿದ್ದರೆ ಷಡಕ್ಷರಿಯ ಕಾವ್ಯವು ಪ್ರಕೃತಿ ಸಹಜವಾದ ಮಾಧುರ್ಯ, ಗೇಯತೆ, ಘನತೆ, ಪೂರ್ಣತೆ, ಸೊಗಸು, ಸೊಂಪುಗಳಿಂದ ಹೆಣ್ಣ ಕಣ್ಣಿನ ಕಮನೀಯತೆಯಂತೆ ರಸಜ್ಞರ ಚಿತ್ತವನ್ನು ವಶಪಡಿಸಿಕೊಳ್ಳುವಂತಹುದು ಎನ್ನುವುದು ಇನ್ನೊಂದು ಸಂಗತಿ.

ಸೌಂದರ್ಯವನ್ನು ಪ್ರಕೃತಿ ಎಲ್ಲೆಲ್ಲೂ ಸೂರೆಗರೆದಿದೆಯಾದರೂ ಅದನ್ನು ನೋಡುವ ರಸಜ್ಞತೆ ಇಲ್ಲದಿದ್ದರೆ ಮರ ಬರಿಯ ಮರವಾಗಿ, ಕಲ್ಲು ಕಗ್ಗಲ್ಲಾಗಿ, ಸಮುದ್ರ ಉಪ್ಪುನೀರಾಗಿ, ಉದಯಾಸ್ತಗಳು ಕಾಲಮಾಪನದ ಪ್ರಮಾಣವಾಗಿ ಕಂಡೀತು. ಪಾಂಡಿತ್ಯವೊಂದೆ ಆಯುಧವಾದವರ ಸ್ಥಿತಿ ಇದು. ಷಡಕ್ಷರಿಯ ಬುದ್ಧಿ ಪಂಡಿತನದು, ದೃಷ್ಟಿ ಕವಿಯದು. ಅದರಿಂದ ಪ್ರಕೃತಿಯಲ್ಲಿ ಮನುಷ್ಯಸ್ವಭಾವಗಳನ್ನು ಪರಿಭಾವಿಸುವ ರಸಪ್ರೌಢಿಮೆ ಅವನದು.

ತುಂಬಿಗಳ ಝೇಂಕಾರ ಕೇಳಲು ಹಿತ. ಅವು ಹೂ-ವನದಲ್ಲೆಲ್ಲ ಗುಂ ಎಂದು ಹಾರಾಡಿ ಮಧು ಸಂಗ್ರಹಿಸುತ್ತವೆ. ಅವುಗಳ ನಾದವು ಮಾಧುರ್ಯಕ್ಕಷ್ಟೇ ಸೀಮಿತವಾದದ್ದು ಅಲ್ಲ. ಅದು ಮಧು ಸಂಗ್ರಹಣೆಯ ಅನಿವಾರ್ಯ ಅಂಗ. ಅಂತೆಯೇ ಕಾವ್ಯದ ಗೇಯತೆಯು ಕಾವ್ಯೋದ್ದೇಶದ ಅತ್ಯಾವಶ್ಯಕ ಸಾಧನ. ತುಂಬಿಗಳ ಹಿಂಡು ವಿವಿಧ ರೀತಿಯಿಂದ ದುಡಿಯುತ್ತದೆ, “ಜೇಂಗೊಡದ” ಹುಟ್ಟು ಸಿದ್ಧಿಸುತ್ತದೆ. ಜೇಂಗೊಡವೆಂದರೆ ಒಂದು ಅರ್ಥ ಮಧುಪಾತ್ರೆ, ಇನ್ನೊಂದು ಅರ್ಥ ಜೇನುಹುಟ್ಟು. ಷಡಕ್ಷರಿಯ ಕಾವ್ಯದ ರೀತಿ ಎರಡನೆಯ ಅರ್ಥವಿಸ್ತಾರ ಉಳ್ಳದ್ದು. ಜೇಂಗೊಡವನ್ನು ಪಡೆಯಲು ಅಭಿಲಾಶೆಯೊಂದೆ ಸಾಲದು; ಸಿದ್ಧತೆಯೂ ಪ್ರಯತ್ನವೂ ಬೇಕು. ಸುಂದರವಾಗಿ ಕಾಣುವ ಹುಟ್ಟಿನಲ್ಲಿ ಸಿದ್ಧತೆಯಿಲ್ಲದೆ ಕೈಯಿಟ್ಟರೆ ಜೇನು ಕಡಿದು ನೋವಿಗೆ ಗುರಿಮಾಡೀತು. ಪಡೆವ ಶಕ್ತಿ ಇದ್ದರೆ ಅದು ಮಧುಪಾತ್ರೆಯೇ ಹೌದು.

ಇಂಥ “ಜೇಂಗೊಡದಂತೆ” ಷಡಕ್ಷರಿಯ ಕೃತಿ ಇದೆ ಎಂದಾಗ ಪಾಂಡಿತ್ಯವೊಂದೆ ಷಡಕ್ಷರಿಯ ದೃಷ್ಟಿಯಲ್ಲ, ಅಲ್ಲಿ ರಸ ತುಂಬಿದ ಜೇನಿನಂತೆ ಕಾವ್ಯಾನಂದವನ್ನುಂಟು ಮಾಡುವ ಗುಣಗಳೆಲ್ಲವೂ ಇವೆ; ಅವನ ಕಾವ್ಯದಲ್ಲಿ ಕೇವಲ ಮಾಧುರ್ಯವೊಂದೆ ಪ್ರಮುಖವಾದದ್ದು ಅಲ್ಲ. ಕಾವ್ಯವನ್ನು ಸುಂದರಗೊಳಿಸತಕ್ಕ ಇತರ ಗುಣಗಳೂ ಇವೆ ಎನ್ನುವುದು ಸುವ್ಯಕ್ತ. ಆ ಗುಣಗಳು ವ್ಯಕ್ತವಾಗುವ ಬಗೆಯೂ ಕಮನೀಯವಾದದ್ದೇ ಎನ್ನುವುದನ್ನು ಮೇಲಿನ ಪದ್ಯದಲ್ಲಿ ಇರುವ ಉಪಮೆಗಳು ಹೇಳುತ್ತವೆ. ಅಲ್ಲಿ ಹೇಳಿರುವ ಘನತೆ ಗಾಂಭೀರ್ಯಗಳಿಂದ ಆಕರ್ಷಿಸುವ ಸಮುದ್ರ, ಹಣ್ಣುಗಳಿಂದ ಇಡಕಿರಿದ ಮಾಮರ, ಸರಸ್ಸಿನಲ್ಲಿ ಚೆಲುವಿನ ಕೇಂದ್ರವಾಗಿ ಮನ ಸೆಳೆವ ಕಮಲ, ಜಗತ್ತನ್ನೆಲ್ಲ ಉನ್ಮೀಲನಗೊಳಿಸುವ ಬೆಳದಿಂಗಳು ಇವು ತನ್ನ ಪ್ರಿಯನೊಂದಿಗೆ ಬೇಟವನ್ನು ಬಯಸುವ ನಲ್ಲಳ ಸದುದ್ದೇಶಿತ ನೋಟದಂತೆ ಷಡಕ್ಷರಿಯ ಕಾವ್ಯಸೌಂದರ್ಯ ಇದೆ ಎಂಬುದರ ಸೂಚಕ.

ಕವಿ ಮೇಲಿನ ವೃತ್ತ-ಪದ್ಯದಲ್ಲಿ ಬಳಸಿದ ಉಪಮಾನಗಳು ಆತನ ಪ್ರಕೃತಿಪ್ರಿಯತೆಯನ್ನೂ ಎತ್ತಿ ತೋರಿಸುತ್ತವೆ, ಅವನ ಕಾವ್ಯಸ್ವರೂಪವನ್ನೂ ಗುರುತಿಸುತ್ತವೆ. ರಸ, ಧ್ವನಿ, ಅಲಂಕಾರ, ಕಾವ್ಯೋದ್ದೇಶ, ಪ್ರಸಾದಗುಣ, ಶೃಂಗಾರ ರಮಣೀಯತೆ ಈ ಮೊದಲಾದ ಕಾವ್ಯಮೀಮಾಂಸೆಯ ಶಬ್ದಗಳನ್ನು ಬಳಸುವುದರ ಬದಲಿಗೆ ಜೇಂಗೊಡ, ತುಂಬಿಯ ನಾದ, ಇಂಗಡಲು, ಹಣ್ಣು ತುಂಬಿದ ಮಾವಿನ ಮರ, ಬೆಳದಿಂಗಳ ಸೊಂಪು, ನಲ್ಲಳ ನೋಟ ಈ ಮೊದಲಾದ ಸಂಗತಿಗಳ ಮೂಲಕ ಪದ್ಯ ಕಾವ್ಯದ ವ್ಯಾಪ್ತಿಯನ್ನು ಸೂಚಿಸಿದೆ.

ವೃಷಭೇಂದ್ರ ವಿಜಯಂ, ರಾಜಶೇಖರ ವಿಳಾಸಂ, ಶಬರಶಂಕರ ವಿಳಾಸಂ – ಇವು ಷಡಕ್ಷರಿಯ ಮೂರು ಮುಖ್ಯ ಕಾವ್ಯಗಳು:. ಈ ಕಾವ್ಯಗಳು ಉದಯಾಸ್ತಗಳು, ಬೆಳ್ದಿಂಗಳು, ವನ, ಸಮುದ್ರ, ಬೇಟೆ, ಮಳೆಗಾಲವೇ ಮೊದಲಾದ ಹದಿನೆಂಟು ವರ್ಣನೆಗಳಿಂದ ತುಂಬಿವೆ. ಕವಿಯ ಪ್ರಜ್ಞೆ ಎಲ್ಲ ಸಂದರ್ಭಗಳಲ್ಲೂ ಎಚ್ಚೆತ್ತಿದೆ, ಕಾವ್ಯಾರ್ಥವನ್ನು ಪುಷ್ಟಿಗೊಳಿಸಲು ಈ ವರ್ಣನೆಗಳನ್ನು ಬಳಸುತ್ತದೆ ಎಂದು ಹೇಳಲು ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಷಡಕ್ಷರಿ ತನ್ನ ಕಾವ್ಯಗಳ ಹಲವಾರು ಸಂದರ್ಭಗಳಲ್ಲಿ ಇಂಥ ವರ್ಣನೆಗಳಲ್ಲಿ ಮಹಾಕವಿಯ ಪ್ರಜ್ಞಾಗೌರವವನ್ನು ಮೆರೆಯುತ್ತಾನೆ ಎಂದಂತೂ ಹೇಳಬಹುದು..

ವೃಷಭೇಂದ್ರ ವಿಜಯಂ: ವೃಷಭೇಂದ್ರ ವಿಜಯಂ ಕಾವ್ಯದ ಕಥಾಸೌಧ ಬಹು ವಿಸ್ತಾರವಾದದ್ದು. ಇದರಲ್ಲಿ ಹಲವಾರು ಶರಣಶ್ರೇಷ್ಠರ ಜೀವನ ಚಿತ್ರಿತವಾಗಿದೆ. ಶರಣರ ಭಕ್ತಿ, ಹಠ, ಮಹಿಮೆ, ಔದಾರ್ಯ, ಸಾಹಸ ಈ ಮೊದಲಾದ ಗುಣಗಳ ಉಜ್ವಲ ಚಿತ್ರ ಇಲ್ಲಿ ದೊರಕುತ್ತದೆ. ಭಕ್ತ ಸಿರಿಯಾಳನ ತ್ಯಾಗದ ಕಥೆ ಅಂಥವುಗಳಲ್ಲೊಂದು. ಸಿರಿಯಾಳ ಹಾಗೂ ಆತನ ಹೆಂಡತಿ ಚೆಂಗಳೆ ಶಾಂಭವ ಗೇಹವ್ರಜ ಶೋಭಿ ಆದ ಕಾಂಚೀ ಪಟ್ಟಣದ ಸಿರಿವಂತ ಶಿವಭಕ್ತರು. ಅವರ ಏಕಮಾತ್ರ ಪುತ್ರ ಚೀಲಾಳ. ಈ ಭಕ್ತ ದಂಪತಿಗಳು ಜಂಗಮರನ್ನು ಅನ್ನದಾಸೋಹ ಮೊದಲಾದವುಗಳಿಂದ ಪ್ರತಿದಿನವೂ ತೃಪ್ತಿಗೊಳಿಸುತ್ತಿದ್ದರು. ಒಮ್ಮೆ ಹಿಡಿದ ಮಳೆ ಬಿಡದೆ ಇಪ್ಪತ್ತೊಂದು ದಿನ ಸುರಿಯುತ್ತದೆ. ಶಿವನಿಗೆ ಇದೇ ಸಮಯದಲ್ಲಿ ತನ್ನ ಭಕ್ತನನ್ನು ಪರೀಕ್ಷಿಸುವ ಅಭಿಲಾಶೆಯಾಗಿ ತನ್ನ ಗಣವನ್ನು ಮೊದಲು ಅವರಲ್ಲಿಗೆ ಕಳುಹಿಸುತ್ತಾನೆ. ಅವರಿಗೆ ಅನ್ನ ದಾಸೋಹ ನಡೆಸಬೇಕು. ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮನೆಯಲ್ಲಿ ಅಡಿಗೆ ಮಾಡಲು ಇಂಧನವಿಲ್ಲ. ಇದಕ್ಕೆ ಚೆಂಗಳೆ ಹೆದರುವ ಶರಣೆಯಲ್ಲ. “ಕೆಲಬಲದ ಆಲಯಂಗಳ ಮರಂಗಳ ಜಂತಿಗೆಯಂ ಪೊದಳ್ದ ಪೆರ್ದೊಲೆಗಳನೆಲ್ಲಮಂ ಮುರಿಗೆ ಗೆಯ್ದು ಉಳುರ್ವ ಎಣ್ಣೆಯೊಳ್‌ ಆಜ್ಯದೊಳ್‌ ತಡಂಗಲಿಸಿದ ಪಟ್ಟೆ ಚಿತ್ರ ವಸನಂ ಮೊದಲಾದ ನವೀನ ವಸ್ತ್ರ ಸಂಕುಲಮಂ ಉರಿಪುತ್ತೆ ಸುಪಾಕಮಂ ಒಲ್ದು ಸುಧೀರೆ” ಮಾಡುತ್ತಾಳೆ.

ಶರಣ ಗಣ ಉಂಡು ತಣಿಯಿತು. ಅದರಿಂದಾಗಿ ಶಿವ ತಾನೇ ಬಂದ ಜಂಗಮ ವೇಷಧಾರಿಯಾಗಿ. ಈತನಿಗೆ ಬೇಕಾದದ್ದು ಅಂತಿಂಥ ಊಟ ಅಲ್ಲ. ರೂಢಿಯಲ್ಲಿ ಉತ್ತಮನಾದ ಚೀಲಾಳ ಬಾಲಕನ ಮಾಂಸದ ಅಡಿಗೆ. ಸಿರಿಯಾಳನಾಗಲಿ, ಚೆಂಗಳೆಯಾಗಲಿ ಚೀಲಾಳನನ್ನು ನೀಡಲು ಹೆದರುವುದಿಲ್ಲ. ಮಗ ಚೀಲಾಳನೂ ಆತಂಕ ಪಡುವುದಿಲ್ಲ. ಶಿವ ಬೇಕು ಎಂದದ್ದನ್ನು ಭಕ್ತ ಕೊಡುತ್ತಾನೆ. ಎಲ್ಲೆಲ್ಲಿಯೂ ಕೃಪಣತ್ವ ಇರಲಿ, ಕೊಟ್ಟರೆ ಆದೀತೇ ಎಂಬ ಸಂದೇಹವೂ ಸುಳಿಯುವುದಿಲ್ಲ. ಮಗನ ಮಾಂಸದ ಅಡಿಗೆಯನ್ನು ಬೇಡಿದ ಶಿವ ಭಕ್ತ ಸಿರಿಯಾಳನಿಂದ ಪಡೆಯುವಲ್ಲಿ, ಜಂಗಮನಿಗೆ ಮಾಡಿ ಬಡಿಸುವ ಧಾರಾಳಿಯಾದ ಭಕ್ತ ಕೊಡುವಲ್ಲಿ ತೋರುವ ಧಾರಾಳತನವೇ ಕಾವ್ಯದಲ್ಲಿ ಮಳೆಯಾಗಿ ಸುರಿದಿದೆ., ಮಿಂಚು, ಸಿಡಿಲುಗಳ ಅಬ್ಬರಗಳೊಂದಿಗೆ ಧಾರಾಕಾರವಾಗಿ ಸುರಿಯುವ ಭಯಂಕರ ಮಳೆ ಮತ್ತು ಭೀಕರ ಬೇಡಿಕೆ, ಇವುಗಳ ನಡುವೆ ಕರುಣಾಸಮುದ್ರನಾಗಿ ಮೈದೋರುವ ಗಂಗಾಧರ ಕಥೆಯ ಅರ್ಥಪೂರ್ಣತೆಯಲ್ಲಿ ಪರಸ್ಪರ ಪೂರಕ ಎನ್ನುವುದು ಮಳೆಯ ವರ್ಣನೆಯ ವಿಶೇಷತೆ ಆಗಿದೆ.

ಇಪ್ಪತ್ತೊಂದು ದಿನ ಧಾರಾಕಾರವಾಗಿ ಸುರಿದ ಮಳೆಯ ಸಂದರ್ಭದಲ್ಲಿ ಪಶ್ಚಿಮ ಸಮೀರ ಅಸದಳವಾಗಿ ಸುಳಿಯತೊಡಗುತ್ತದೆ, ಕಡಲು ಉಬ್ಬಿ ಗರ್ಜಿಸುತ್ತದೆ, ನವಿಲು ಕೇಕೆ ಹಾಕಿ ನರ್ತಿಸುತ್ತದೆ, ಹಂಸಗಳು ಉತ್ಸಾಹ ಕಳೆದು ದೂರ ದೂರ ಹಾರಿಹೋಗುತ್ತವೆ, ಬೇಸಿಗೆಯ ಬಿಸಿಯುಸಿರಿಗೆ ಮಲ್ಲಿಗೆಯ ಸುಗ್ಗಿ ಒಣಗಿ ಬಡವಾಗುತ್ತದೆ, ದಿಕ್ಕು ದಿಕ್ಕುಗಳಲ್ಲಿ ಮಿಂಚು ಎದ್ದೆದ್ದು ಅಪ್ಪಳಿಸುತ್ತದೆ, ಹೆಪ್ಪುಗಟ್ಟಿದ ಕಪ್ಪು ಮೋಡಗಳು ದೆಶೆ ದೆಶೆಗಳನ್ನೆಲ್ಲ ಅಮುಕುತ್ತವೆ; ಹೀಗೆ ಮುಂದರಿವ ಮೋಡಗಳ ಮುಖದಲ್ಲಿ “ಎಳೆಮಿಂಚು ಬಳ್ಳಿಮಿಂಚ | ಚ್ಚಳಿಸುವ ಸೆಳೆಮಿಂಚು ತೋರಮಿಂಚಸಿಮಿಂಚ | ವ್ವಳಿಸುವ ಗೊಂಚಲ್ಮಿಂಚ | ಗ್ಗಳಿಸಿದ ಕುಡಿಮಿಂಚು ಮಿಂಚಿದುವು…”|| ಎಂದು ಕವಿ ಮಳೆಯ ಆರಂಭವನ್ನು ಕುರಿತ ತನ್ನ ಕವಿಸಮಯದ ಮಾತುಗಳಿಗೆ ಮಿಂಚಿನ ಅಂಚನ್ನು ಕಟ್ಟುತ್ತಾನೆ.

ಗಾಳಿಯ ಸೆಳೆತಕ್ಕೆ ಒಳಗಾದ ಮೋಡಗಳ ಅಂಚಿನಲ್ಲಿ ಸ್ವಲ್ಪ ಸ್ವಲ್ಪ ಮೊಳಕೆಯೊಡೆದು ಕಾಣಿಸಿಕೊಳ್ಳುವ ಎಳೆಮಿಂಚು ಬಲಿತು ಬಳ್ಳಿಯಾಗುತ್ತದೆ. ಅತ್ತಿತ್ತ ಹಬ್ಬುತ್ತ ಮಿಂಚು ಬೆಳೆದು ತೋರವಾಗುತ್ತದೆ. ಅದಕ್ಕೆ ಟಿಸಿಲುಗಳೊಡೆದಂತೆ ನವುರಾದ ಮಿಂಚಿನ ರೇಖೆಗಳು ಎಲ್ಲೆಲ್ಲೂ ಆವರಿಸುತ್ತವೆ. ಗೊಂಚಲು ಗೊಂಚಲಾಗಿ ದಾಂಗುಡಿಯಿಟ್ಟು ಮಿಂಚು ಕುಡಿ ಚಾಚುತ್ತದೆ. ಹೀಗೆ ಬಳ್ಳಿಯೊಂದರ ಹಬ್ಬುಗೆಯಲ್ಲಿ ಮಿಂಚಿನ ಹೆಚ್ಚಳವನ್ನು ನಿರೂಪಿಸುವ ಕವಿ ವಿಶೇಷಣ ವಿಶೇಷ್ಯಗಳೊಂದಿಗೆ ಆಟವಾಡುತ್ತಾನೆ.

ಮಿಂಚಿನ ಹೆಚ್ಚಳದ ಸೊಂಡಿಲನ್ನೆತ್ತಿ “ಜಳದಗಜಂ ಜಳಮದಜಳಂ ಇಳಿತರೆ ಮೇಲ್ವಾಯ್ದು” ಬರುತ್ತವೆ. ಆಗ “ಜಳದಂ “ವನಧಿಯ ನೀರನುಂಡು ಜಳದಳ್ಕಮೆಯಾಗೆ ಖರಾಂಶುವೆಂಬ ಮರ್ದಿನಕಬಳಂಗೊಡುತ್ತೆಸೆಳೆಮಿಂಚೆನಿಸಿರ್ದ ಕಾದಕಾಂಚನದ ಶಲಾಕೆಯಿಂ ಸುಡಿಸಿಕೊಂಡು ಎಲರ ಒಳ್‌ ಮುರಿತಕ್ಕೆ ಮೈಗುಡುತ್ತೆ ಅನುಗತಿಯಂ ಮುಗುಳ್ಚಿದವೊಲ್‌ ಅಂಬುವಂ…”|| ಸುರಿಸತೊಡಗುತ್ತದೆ. ಇದನ್ನು ಕವಿ ಅರ್ಥೈಸುವುದು ಹೀಗೆ: ಸಾಗರದ ನೀರುಂಡ ಜಲದ (ಮೋಡ) ಅಜೀರ್ಣ-ರೋಗಿಯಾಗಿದೆ. ಯಾಕೆಂದರೆ ಅದು ನೀರನ್ನು ಕುಡಿದಿಲ್ಲ, ಉಂಡಿದೆ! ಅದರ ರೋಗಕ್ಕೆ ಸೂರ್ಯತಾಪದ ತುತ್ತೇ ಔಷಧಿಯಾಗಿದೆ. ಜೊತೆಗೆ, ಕಾಯ್ದ ಚಿನ್ನದ ಶಲಾಖೆಯೆಂಬ ಸೆಳೆಮಿಂಚಿನಿಂದ ಅದಕ್ಕೆ ಬರೆಯ ಎಳೆತ ಬಿದ್ದಿದೆ. ಅದರಿಂದ ಗಾಳಿಯ ಒಳ ಮುರಿತಕ್ಕೆ ಅತ್ತಿತ್ತ ಬಾಗಿ ಮೈಯನ್ನು ಸಡಿಲಾಗಿಸುತ್ತ ನೀರನ್ನು ವಾಂತಿ ಮಾಡಿಕೊಂಡಿದೆ. ಒಂದು ನಾಡಿನ ಔಷಧ ಪ್ರಯೋಗಗಳನ್ನು ಅರ್ಥವತ್ತಾಗಿ ಕಾವ್ಯಕ್ರಿಯೆಯಲ್ಲಿ ತೊಡಗಿಸುವುದರಿಂದ ಅಲ್ಲಿಯ ಜೀವನಚಿತ್ರ ಸಂದರ್ಭೋಚಿತವಾಗಿ ಉದ್ದೀಪಿತವಾಗಿದೆ, ಜಲದ ದೇಶೀಯತೆ ಸಾಧಿತವಾಗಿದೆ.

ಷಡಕ್ಷರಿ ಇಲ್ಲಿ ಸಕ್ಕದದ ಚೆಲ್ವಿಕೆಯನ್ನೂ ಕನ್ನಡದ ಸೊಗಡನ್ನೂ ಸೂರೆ ಮಾಡಿದ್ದಾನೆ. ಗಾಳಿಯ ಹೊಡೆತ, ಮಿಂಚಿನ ಸೆಳೆತ, ಬಿಸಿಲಿನ ಉತ್ಕಟತೆಯನ್ನು ನಾಡವೈದ್ಯದ ಭಯಂಕರ ಉಪಚಾರವಾಗಿಸಿ ಜಲದಗಜದ ಅಜೀರ್ಣರೋಗಕ್ಕೆ ಮದ್ದನ್ನು ಒಳ ಮುರಿತ, ಬರೆಯೆಳೆತ ಮತ್ತು ಬಿಸಿ ತುತ್ತಾಗಿ ನೀಡುತ್ತಾನೆ. ರಕ್ತ ಹೊಟ್ಟೆ ಬೇನೆಗೆ ಇಂದೂ ಒದೆದು ಉಪಚರಿಸಿಕೊಳ್ಳವವರು ಇದ್ದಾರೆ ಎನ್ನುವುದು ಹೌದಾದರೂ ಅಜೀರ್ಣವಾದರೆ ಅದಕ್ಕೆ ಪರಿಹಾರ ಸುಡಿಸಿಕೊಳ್ಳುವುದಾಗಲಿ, ಬಿಸಿಲಲ್ಲಿ ಬಾಡುವುದಾಗಲಿ, ಒದೆತಕ್ಕೆ ಮೈ ಬಾಗುತ್ತ ಹೊರಳಾಡುವುದಾಗಲಿ ಆದೀತು ಎಂದು ತಿಳಿಐವುದು ಕಷ್ಟ. ಆದರೆ ಆನೆಗೆ ಮಾಡುವ ವೈದ್ಯಕ್ಕೆ ಮನುಷ್ಯ ವೈದ್ಯ ಕಲ್ಪನೆ ಅರ್ಥಹೀನ! ಅದರಿಂದ ಗುಲಗಂಜಿಯಾಕಾರದ ಮಾತ್ರೆ ಕೊಡುವುದರ ಬದಲು ಬಿಸಿ ತುತ್ತು ಅದಕ್ಕೆ ಮದ್ದು ಆಗುತ್ತದೆ ಎನ್ನುವುದು ಅರ್ಥಪೂರ್ಣ ಆಗುವಂತೆ ಮೋಡ ಕಕ್ಕಿದ ನೀರೇ ಮಳೆಯಾಗಿ ಜಗತ್ತು ತೊಯ್ಯು ಹೋಗಿದೆ ಎಂದು ಕವಿ ಹೇಳುವುದೂ ಸಹ ಅರ್ಥಪೂರ್ಣವೇ!

ಕವಿ ಭಾವಿಸಿದ ಮಳೆಗೆ ಒಂದು ಮುಖವಲ್ಲ. ಅದು ಭೂಮಿಗಿಳಿಯುವುದು ವಿವಿಧ ರೀತಿಯಿಂದ: “ಜಡಿಮಳೆ ಜಿನುಂಗು ಬಲ ರಿ |ಯಿಡು ಕುಂಬನಿ ನಟ್ಟವ್ಸನಿಗಳರವಳೆ ತುಂತುರ್‌ ಬಡ ಸರಿ ಸೂಳ್ಸರಿ ಕಾಲ್ಸರಿ |ಯೆದೆಗೊಡದೊತ್ತರಿಸಿ ಕರೆದುಂ ವಿರುಳುಂ ಪಗಲುಂ” ||. ಹಗಲು ರಾತ್ರಿಗಳ ಭೇದವಿಲ್ಲದೆ – ಜಡಿದು ಸುರಿವ ಮಳೆ, ಜಿನುಗಿ ಸುರಿವ ಮಳೆ, ಹೊಳೆಯನ್ನು ಉಬ್ಬಿಸುವ ಮಳೆ, ಒಂದು ಹನಿಗೆ ಮತ್ತೊಂದು ಹನಿ ತಾಗಿ ಬೀಳುವ ಮಳೆ, ದೊಡ್ಡ ದೊಡ್ಡ ಹನಿಗಳ ಬಿರುಮಳೆ, ತುಂತುರು ತುಂತುರಾಗಿ ತೊಯ್ಯುವ ಮಳೆ, ಬಿಟ್ಟು ಬಿಟ್ಟು ಬರುವ ಹಳ್ಳದಂತೆ ಸುರಿವ ಬಿಡದೆ ಹಿಡಿದ ಮಳೆಯಿಂದ “ಪಳ್ಳ ತೊರೆ ಕೆರೆ| ಪೊಳೆಯೆಂಬ ವಿಭೇದ…” ಇಲ್ಲವಾಗಿದೆ. ಆಗ “ಜಲದ ಮಯವೀ ಇಳೆಯೆಲ್ಲಂ ಪ್ರ |ಜ್ವಲಿತ ತಟಿನ್ಮಾಲಿಕಾಮಯಂ ದೆಸೆಯೆಲ್ಲಂ | ಜಲದ ಮಯಮಭ್ರಮೆಲ್ಲಂ ||ಆಯಿತು ಎನ್ನುತ್ತಾನೆ ಕವಿ.

ಎಲ್ಲೆಲ್ಲು ನೀರೇ ನೀರಾಗಿ ಭೂ ಪ್ರದೇಶವೆಲ್ಲ ಸಾಗರೋಪಮವಾಗಿದೆ. ದಶದಿಕ್ಕುಗಳು ಮಿಂಚಿನ ಗೊಂಚಲಾಗಿವೆ. ಇನ್ನೂ ಸುರಿಯಲು ಸಿದ್ಧವಾಗಿ ನಿಂತ ಮೋಡ ಆಕಾಶವನ್ನೆಲ್ಲ ವ್ಯಾಪಿಸಿದೆ. “ನೆಲವೆತ್ತಿರೆ ಕಟ್ಟಿಕರೆವ” ಈ ಮಳೆ ಇದು ಭೂಮಿ, ಇದು ದಿಕ್ಕು, ಇದು ಆಕಾಶ ಎನ್ನುವ ಭೇದವಿಲ್ಲದೆ ತಾನೊಂದೆ ಸತ್ಯವಾಗಿ ವಿಜೃಂಭಿಸುತ್ತಿದೆ! ಗಗನಕ್ಕೆ ಗಗನವೇ ಹೋಲಿಕೆಯಾಗಿರುವಂತೆ ಮಳೆಗೆ ಮಳೆಯೇ ಉಪಮೆಯಾಗಿ ಕವಿ ಮೂಕನಂತಾಗಿದ್ದಾನೆ!

ಮಳೆಯ ಗುಣ ಪ್ರಳಯವೊಂದೆ ಅಲ್ಲ, ಸೃಷ್ಟಿಯೂ ಹೌದು. ಶಿವನ ತಲೆಯೇರಿ ಅಲಂಕೃತಳಾದ ಗಂಗಾಮಾತೆ ಅವನ ಅಭಿಲಾಶಾರೂಪಿಣಿ. ಮುಂದೆ ಶಿವನಿಂದ ನಡೆಯುವ ಭಕ್ತ-ಪರೀಕ್ಷೆಯ ಮುನ್ಸೂಚನೆಯಾಗಿ ಈ ಮಳೆಯ ಆಗಮನವಷ್ಟೆ. ಮಹಾಪೂರವಾಗಿ ಹರಿದು ಎಲ್ಲವೂ ತೊಳೆದು ಸ್ಫಟಿಕೋದಕವಾಗಿ ಹೊಳೆವ ಇಳೆಯಂತೆ ಶಿವನು ನಿಕಷವಾಗಿ ಸಿರಿಯಾಳನನ್ನು ಉಜ್ಜಿ ಮೆಚ್ಚಾದ ಮೇಲೆಯೆ ಅನುಗ್ರಹಿಸಿದ್ದು. ಸುರಿದ ಮಳೆ ಸಿರಿಯಾಳನಿಗೆ ಭವನಿಮಜ್ಜನ ಮಾಡಿಸಿತು, ಶಿವಸಂಕೇತವಾಯಿತು.

ಶಬರಶಂಕರವಿಲಾಸ: ಷಡಕ್ಷರಿಯ ಕಾವ್ಯಾಕಾಶವನ್ನು ಇಡಿಯಾಗಿ ಅವಲೋಕಿಸುವುದು ಒಂದು ಸೊಗಸಾದರೆ ಅಲ್ಲಲ್ಲಿ ಗುರು ಶುಕ್ರಗಳಂತೆ ಮನಸ್ಸನ್ನೆಲ್ಲ ಸೆರೆ ಹಿಡಿದು ನಿಲ್ಲಿಸುವ, ಬೆಳಕಿನ ಆನಂದವನ್ನೂ, ಸೌಂದರ್ಯವನ್ನೂ ವೃದ್ಧಿಸುವ, ಕಾವ್ಯ ಕುತೂಹಲವನ್ನು ಹೆಚ್ಚಿಸುತ್ತಾ ಹೋಗುವ ಸನ್ನಿವೇಶಗಳನ್ನು ಪರಿಶೀಲಿಸುವುದು ಇನ್ನೊಂದು ಸೊಗಸು. ಶಬರಶಂಕರ ವಿಲಾಸದ ಶಿವ ಕಿರಾತ ವೇಷಧಾರಿಯಾದರೆ ಶಿವೆ ಕಿರಾತೆಯಾಗುತ್ತಾಳೆ. ಅರ್ಜುನನಿಗೆ ವರ ಕೊಡುವ, ಮೂಕ ದಾನವನನ್ನು ಮರ್ದಿಸುವ ಕಾರ್ಯಭಾರವನ್ನು ನಿರ್ವಹಿಸಲು ಇಬ್ಬರೂ ಶಬರಲೀಲೆಯಲ್ಲಿ ತೊಡಗುತ್ತಾರೆ, ಬೇಟೆಗೆ ಹೊರಡುತ್ತಾರೆ. ಪರಮೇಶ್ವರನ ಅಗಣಿತ ಅನುಯಾಯಿಗಳು ಆತನೊಂದಿಗೆ ಭಾಗಿಗಳಾಗುತ್ತಾರೆ. ವಿವಿಧ ವಾದ್ಯ ರಭಸದೊಂದಿಗೆ ಬೇಟೆ ಆರಂಭವಾಗುತ್ತದೆ.

ಮದಾಂಧ ಸಿಂಧುರವೊಂದು ತನ್ನ ಇನಿಯಳೆಡೆಗೆಂದು ಹೊರಟು ಮಧ್ಯದಲ್ಲಿ ಒಬ್ಬ ಧೀವರನೊಂದಿಗೆ ಹೋರಾಡಿ ಮೃತವಾಗುವುದು ಈ ಬೇಟೆಯ ಒಂದು ಮನ ಕಲಕುವ ಚಿತ್ರ. ಮದವೇರಿದ ಗಂಡಾನೆ ಮದೋದಕವನ್ನು ಸುರಿಸುತ್ತ ಕಾಲಿಟ್ಟಲ್ಲಿ ನೆಲ ತಗ್ಗು ಬೀಳುತ್ತಿದೆ, ಅದರ ಸುಂದರವಾದ ದಂತಗಳು ಚಂದ್ರಕಾಂತ ಶಿಲೆಯಂತೆ ಹೊಳೆಯುತ್ತಿವೆ, ಅದನ್ನು ಕಮಲದ ಕಾಂಡವೆಂದು ಅವಲೋಕಿಸುತ್ತ ತನ್ನ ಮಹಾಕಾಯವನ್ನು ತೊನೆ ತೊನೆದು ತೂಗುತ್ತ ಮದಗಜ ಮೆಲ್ಲ ಮೆಲ್ಲನೆ ಬರುತ್ತಿದೆ. “ಕೊಳದೊಳೆ ಕಿಳ್ತು ಪಂಕರುಹಮಂ |  ಪ್ರತಿಮಾನದೊಳೊಟ್ಟಿಕೊಂಡು ಪಾಯ್ವಳಿಗಳನಗ್ರಪಲ್ಲವದೆ ಸೋವುತೆ | ಪಂಕಜರೇಣು ತಳ್ತ ಮಂಜುಳರದನಂ ತೆರಂಬೊಳೆಯೆ | ಶೈವವಲ್ಲರಿ ಪತ್ತಿ ವೃಕ್ಷದೊಳ್‌ ಮಿಳಿರೆ ಕರೇಣುಮಿರ್ದೆಡೆಗದೇಂ ತಳರ್ದತ್ತೊ ಮದಾಂಧ ಸಿಂಧುರಂ” ||ಎಂದು ಗಜದ ಗಮನವನ್ನು ವರ್ಣಿಸುವ ಕವಿಯ ಉದ್ದೇಶ ಅದರ ಹಿಂದಿದ್ದ ಶೃಂಗಾರವನ್ನು ಭಾವಿಸುವುದೇ ಆಗಿದೆ:

ಮತ್ತಗಜ ಕೊಳದಿಂದ ತಾವರೆಯನ್ನು ಕಿತ್ತಿದೆ, ಅದನ್ನು ತನ್ನ ಕೋರೆದಾಡೆಗಳ ಮಧ್ಯ ಶೃಂಗರಿಸಿಕೊಂಡಿದೆ. ಮದವೇರಿದುದರಿಂದ ಮದೋದಕ ಸುರಿಯುತ್ತಿದೆ. ಅದನ್ನು ಪಂಕೇರುಹ ಎಂದು ಭಾವಿಸಿ ಮುತ್ತುವ ತುಂಬಿಗಳನ್ನು ಪಲ್ಲವಾಗ್ರದಿಂದ ಓಡಿಸುತ್ತ ಮಹಾಗಜ ಮುಂದೆ ಸಾಗಿದೆ. ಅದರ ಬೆಳ್ಳಗಿನ ಕೋರೆದಾಡೆಗಳಿಗೆ ಸರೋವರದಲ್ಲಿ ಅರಳಿದ್ದ ಹೂಗಳ ರಜವು ಲೇಪಿತವಾಗಿ ಕೋರೆದಾಡೆಗಳು ಮತ್ತೂ ಸುಂದರವಾಗಿವೆ, ಅವುಗಳ ಹೊಳಪು ಇಮ್ಮಡಿಸಿದೆ. ಕೊಳದಲ್ಲಿ ಆಡುವಾಗ ಅದರ ಮೈಗೆ ಅಂಟಿದ ಹಾವಸೆ ಅದು ವನದಲ್ಲಿ ವೃಕ್ಷಗಳಿಗೆ ಮೈಯನ್ನು ಉಜ್ಜಿದ್ದರಿಂದ ಆ ವೃಕ್ಷಗಳಿಗೆ ಅಂಟಿದೆ, ಗಜದ ಮೈ ಶುಭ್ರವಾಗಿದೆ. ಕೋರೆದಾಡೆಗಳ ನಡುವಿನ ತಾವರೆಯೂ ಅದರ ಪುಷ್ಪರೇಣುವೂ ಗಜದ ಸೌಂದರ್ಯವನ್ನು ಹೆಚ್ಚಿಸಿವೆ ಮತ್ತು ಗಜದ ಶೃಂಗಾರದ ಮನೋಭಿಲಾಶೆಯನ್ನು ಮತ್ತಷ್ಟು ವ್ಯಕ್ತಪಡಿಸಿವೆ. ವೃಕ್ಷಗಳಷ್ಟು ಎತ್ತರಕ್ಕೆ ಬೆಳೆದ ಆ ಮದದಾನೆಯು ತೊನೆ ತೊನೆದು ಇಡುವ ಒಂದೊಂದು ಹೆಜ್ಜೆಯೂ ಪ್ರಿಯಕರಿಣಿಯ ಬಳಿಗೆ ಒಯ್ಯಬೇಕಿತ್ತು. ಆದರೆ ಅದರ ದೈವವೇ ಬೇರೆ!

ಬೇಡ ಪಡೆಯೊಂದು ವನಚರಗಳ ಸುಳಿವನ್ನು ಪರೀಕ್ಷಿಸುತ್ತ ಬೊಬ್ಬಿರಿದು ಬರುತ್ತದೆ: “ಮದಂಸ ಮೊಕ್ಕಿದುದು | ಇಲ್ಲಿ ಕರಿ ಪೋದುದು | ಸಿಂಗದ ಬಟ್ಟೆ ನೋಳ್ಪೊಡೆ ಇಂತಿದು | ಗಜಮೌಕ್ತಿಕಂ ಸಿಡಿದುದಿಲ್ಲಿ” || ಎಂದು ಗಜದ ಮದೋದಕವನ್ನು ಗುರುತಿಸುತ್ತ ಅದರ ಮೌಕ್ತಿಕ ಬಿದ್ದ ದಾರಿಯಲ್ಲಿಯೆ ಮುಂದೆ ಸಾಗುತ್ತದೆ ಬೇಡಪಡೆ. ಅಲ್ಲಿ “ನಡೆಗಲ್ತಂಜನ ಶೈಲದಂತೆ | ಪದೆದೇಳ್ತರ್ಪಾನೆಯಂ ಕಂಡು ಬಲ್‌ ಸಿಡಿಲ್‌… ಅಂತಿರೆ ಗರ್ಜಿಸುತ್ತ | ಆಡರ್ದು ತತ್‌ ಕುಂಭಮಂ ಸೀಳ್ದು ಜವಂಗೆಡದೆ ಅರ್ಧೇಂದು ಮುಖಾಸ್ತದಿಂ | ರುಧಿರಮೆತ್ತಂ ಪಾಯ್ಪಿನಂ | ಧೀವರಂ ಎಚ್ಚಂ” || ಎಂದು ಕವಿ ಧೀವರನ ಅರ್ಧಚಂದ್ರ ಬಾಣಕ್ಕೆ ಗಜೇಂದ್ರನನ್ನು ಆಹಾರವಾಗಿಸಿ ಅದರ ಕಥೆಯನ್ನು ಮುಗಿಸುತ್ತಾನೆ.

ಈ ಶಬರ ಬೇಟೆಯಲ್ಲಿ ಶಿವನ ಸೈನ್ಯದ ಚಾಕಚಕ್ಯತೆಯ ವರ್ಣನೆಯು ಮುಖ್ಯಸಂಗತಿಯಾದರೂ ಅವರ ಪರಾಕ್ರಮ ಪ್ರಕಾಶಕ್ಕೆ ಕಾರಣವಾದ ಮತ್ತು ಅವರ ಪಟುತ್ವಕ್ಕೆ ಗುರಿಯಾದ ಆನೆ, ಹಂದಿ, ಕಾಡುಕೋಣ, ಹುಲಿ, ಸಿಂಹ ಮೊದಲಾದ ಹಿಂಸ್ರ ಪ್ರಾಣಿ ಪ್ರಪಂಚವನ್ನು ಅಲಕ್ಷಿಸದ ಷಡಕ್ಷರಿ ಈ ಪ್ರಾಣಿಗಳ ಚಲನವಲನವನ್ನೂ ಮನೋಭಾವವನ್ಬೂ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾನೆ. ಶಬರಶಂಕರವಿಲಾಸದಲ್ಲಿ ಮದಾಂಧ ಸಿಂಧುರದ ಅಂತ್ಯವು ನಮ್ಮ ಗಮನ ಸೆಳೆದರೆ ರಾಜಶೇಖರವಿಳಾಸದಲ್ಲಿ ಅದರ ಯುದ್ಧ ಕೌಶಲ ವರ್ಣಿತವಾಗಿದೆ: “ಪೊಡೆದುದು ಪೊಯ್ದುದು ಅಟ್ಟಿದುದು ಮೆಟ್ಟಿದುದು | ಇಟ್ಟುದು ಪೊಟ್ಟೆಯಿಂ ಕರುಳ್‌ ಗಡಣಿಸಿ ಪಾಯ್ವಿನಂ |  ತುಳಿದುದು ಎತ್ತಿದುದು ಒತ್ತಿದುದು ಅತ್ತಮಿತ್ತಲುಂ | ಕೆಡಪಿದುದು ಸೀಳ್ದುದು ಅರೆತೊಳ್ದದು ಪೋಳ್ದುದು | ನೀಳ್ದ ಹಸ್ತದಿಂ ಪಡಿಬಲಮಂ | ಮಹಾರಣ ವಿಚಾರಣ ದಾರುಣ ಮತ್ತವಾರಣಂ” || ಎನ್ನುವ ಕ್ರಿಯಾಪದಗಳೇ ಮದ ದಂತಿಯ ಯುದ್ಧದ ವಿವಿಧ ಪಟ್ಟುಗಳನ್ನು ವರ್ಣಿಸುತ್ತವೆ.

ಸುಂದರವಾದ ತರು, ಉನ್ನತವಾದ ಶಿಖರ, ಹರಿಯುವ ಹೊಳೆ, ಚೆಲ್ವಾದ ಸರೋವರ ಮೊದಲಾದ ಸೌಂದರ್ಯ-ಆಕರಗಳೊಂದಿಗೆ ಗರ್ಜಿಸುವ ಕ್ರೂರ ಮೃಗಗಳ ಪ್ರಪಂಚವನ್ನು ಗಮನಿಸುವ ಷಡಕ್ಷರಿಗೆ ಅನುರಾಗ ಭಾವಕ್ಕಿಂತ ಯುದ್ಧ ಭಯಂಕರತೆ ಎದ್ದು ಕಾಣುತ್ತದೆ. ಆತನ ಮೃಗ ಪ್ರಪಂಚದಲ್ಲಿ ಆನೆ ಮಾತ್ರವಲ್ಲ ಕಾಡುಕೋಣ, ಹಂದಿ, ಸಿಂಹ, ಹುಲಿ ಮೊದಲಾದವುಗಳೂ ಸಹ ಭೀಕರ ಅಟಾಟೋಪದೊಂದಿಗೆ ಹೋರಾಡುತ್ತವೆ. ಅವು ಹೆದರಿ ಓಡುವುದಿಲ್ಲ, ಇದಿರಿಸಿ ಸಾಯುತ್ತವೆ. ಹಾಗೆಯೇ ಬೇಟೆಗಾರರೂ ಕಾದಾಡದೆ ಬಿಡುವುದಿಲ್ಲ. ಹೀಗೆ ತಡೆ ತಡೆದು ಹೋರಾಡಿ ಮುಂದರಿವ ಶಬರನ ಬೇಟೆ ಅರ್ಜುನನನ್ನು ಮೂಕ ದಾನವನ ಮೂಲಕ ತನ್ನ ಬಲೆಯಲ್ಲಿ ಹಿಡಿಯುವ ದೃಶ್ಯದಲ್ಲಿ ಪರ್ಯಾವಸಾನವಾಗುತ್ತದೆ. ಅರ್ಜುನನ ತಪಃ ಪ್ರಭಾವದಿಂದ ದೂರ ನಿಂತ ಋಷಿ ಮುನಿಗಳು ಮತ್ತು ತನ್ನೆಲ್ಲ ಕ್ರೂರ ಮೃಗಗಳೊಂದಿಗೆ ಇಂದ್ರಕೀಲ ಪರ್ವತವೂ ಎಚ್ಚೆತ್ತ ಈ ಸನ್ನಿವೇಶ ಶಿವಾರ್ಜುನರ ಯುದ್ಧದ ಹಿನ್ನೆಲೆಯಲ್ಲಿ ಕಾವ್ಯಾತ್ಮಕ ಆಗುತ್ತದೆ.

ಪರಮಪುರುಷನಾದ ಶಿವನು ಪ್ರಕೃತಿ ಗುಣಗಳಿಗೆ ಬದ್ಧನಾದ ನರನಿಗೆ ಒಲಿದು ಆಶೀರ್ವದಿಸುವ ಮುನ್ನ ಶಿವನ ಆಗಮನವನ್ನು ಅರ್ಥ ಮಾಡಿಕೊಳ್ಳದೆ ಹೋರಾಡುವ ನರನ ಮಾನವೀಯತೆ ಮೃಗಪ್ರಪಂಚದ ಹೋರಾಟಕ್ಕಿಂತ ತೀರಾ ಭಿನ್ನವಾದದ್ದಲ್ಲ; ಆದರೆ ಗೊತ್ತು ಗುರಿಯನ್ನು ಸ್ಪಷ್ಟವಾಗಿ ಮನನ ಮಾಡಿಕೊಳ್ಳದೆ ಹೋರಾಡುವ ತನ್ನ ಭಕ್ತನನ್ನು ಅಂಥ ಸ್ಥಿತಿಯಿಂದ ಶಿವ ಉದ್ಧರಿಸುತ್ತಾನೆ ಎನ್ನುವುದರ ಅರ್ಥ ಭಕ್ತಿ ಮೃಗೀಯತ್ವವನ್ನೂ ಮಹಾ ಮಾನವನನ್ನಾಗಿ ಮಾಡಬಲ್ಲದ್ದು ಎಂದು; ಮತ್ತು ಭಕ್ತಿಯಿಲ್ಲದ ಮೂಕ ದಾನವ ದಾನವನಾಗಿಯೇ ಸಾಯುವನು ಎಂದು. ಹೀಗೆ ಸಾಂದರ್ಭಿಕವಾಗಿ ಬರುವ ವಿಸ್ತಾರವಾದ ಬೇಟೆಯ ವರ್ಣನೆ ಮೇಲು ನೋಟಕ್ಕೆ ಅತಿಯಾಗಿ ಕಂಡರೂ ಅರ್ಥ ಪುಷ್ಟಿಯನ್ನು ಪಡೆದಿದೆ, ಸಾರ್ಥಕವಾಗಿದೆ.

ಪ್ರಾಕೃತಿಕ ಸಾಧನಸಂಪತ್ತು: ಷಡಕ್ಷರಿಗೆ ದೇವ ದೇವಿಯರು ಶೃಂಗರಿಸಿಕೊಂಡರೆ ಅವರ ಪ್ರಸಾಧನಕ್ಕೆ ಪ್ರಕೃತಿ ಸಹಜ ವಸ್ತುಗಳೇ ಸಾಧನ ಪರಿಕರವಾಗುತ್ತವೆ. ಶಿವೆ “ಕಾಳರಾತ್ರಿ”ಯಾಗಿ ಶೋಭಿಸುವುದನ್ನು ವರ್ಣಿಸುವ ಈ ವೃತ್ತ: “ತಳಿರುಡೆ ಸಂಜೆಗೆಂಪು |  ಪೊಸಮುತ್ತಿನ ಹಾರಮೆ ತಾರಕಾಳಿ | ತಳ್ತಳಿರುಚಿ ಕಾಯಕಾಂತಿ ಕಡುಗಳ್ತಲೆ ಮೂಕುತಿ ಮುತ್ತು ಶುಕ್ರಮಂಡಳವ ಅಮರ್ದೊಪ್ಪೆ | ಭಿಲ್ಲಿಯ ವಿಳಾಸಮನಾಳ್ದೆಸೆದಂದು ಸರ್ವಮಂಗಳೆ ನಿಜಕಾಳರಾತ್ರಿವೆಸರಂ ಮಿಗೆ ಸಾರ್ಥಕಂ ನೆಗಳ್ಚಿದಳ್‌” ||ಎನ್ನುತ್ತಿದೆ. ದೇವಿಗೆ ಸಂಜೆಗೆಂಪಿನ ಚಿಗುರು ಉಡುಗೆ, ನಕ್ಷತ್ರಗಳು ಮುತ್ತಿನ ಹಾರ, ತುಂಬಿಗಳ ಹೊಳಪು ಆಕೆಯ ದೇಹದ ಕಾಂತಿ. ಕತ್ತಲರಾತ್ರಿಯಲ್ಲಿ ಹೊಳೆವ ಶುಕ್ರತಾರೆ ಆಕೆಯ ಮೂಕುತಿ ಎಂದು ಕವಿ ವರ್ಣಿಸುವಾಗ ಸರ್ವಮಂಗಳೆಯ ಕಪ್ಪುದೇಹದಲ್ಲಿ ಒಪ್ಪುವ ಉಡುಗೆ ತೊಡಿಗೆಗಳ ರಮಣೀಯತೆಯೆಲ್ಲ ಕಣ್ಣ ಮುಂದೆ ನಿಲ್ಲುತ್ತದೆ.

ಬೆಳ್ಳಿಯ ಪರ್ವತದಲ್ಲಿಯ ಕೈಲಾಸವು ಐಶ್ವರ್ಯದ ನಿಧಿ, ಸೌಂದರ್ಯದ ನೆಲೆ. ಅಲ್ಲಿಯೇ ಶಿವನ. ವಾಸ್ತವ್ಯ. ಜಗತ್ತಿನ ತಂದೆತಾಯಾದ ಪರಮೇಶ್ವರನು “ಕಂಬಿಡದೊಪ್ಪುದ್ರಿಜೆ ವಿರಾಜಿಸೆ” ರಂಜಿಸು”ತ್ತಿದ್ದಾನೆ. ಶಿವನ ಅದ್ವಿತೀಯ ಪ್ರೇಮದ ಮಹಿಮೆ ಸುತ್ತೆಲ್ಲ ವ್ಯಾಪಿಸಿದೆ. ಇದನ್ನು ವರ್ಣಿಸುವುದಕ್ಕೂ ಷಡಕ್ಷರಿಗೆ ಪ್ರಾಕೃತಿಕ ಪರಿಸರವೇ ಸಾಧನ ಸಂಪತ್ತು. ಅಲ್ಲಿ ಗಿಳಿಬಳಗವೊಂದಿದೆ. ಅದು “ತನಿವಣ್ಣಂ ಮನವಾರೆ ನೋಡಿ | ಬಳೆವಂದೊಲ್ವಪ್ಪಿ ಪಕ್ಕಂಗಳಿಂ | ದನಿದೋರುತ್ತೊಲವೆತ್ತು ಚಂಚುಪುಟದಿಂ ಮೆಲ್ಪಿನಿಂ ಸೀಳ್ದು ಸೀಯನೆ ಸೋರ್ವ ಆ ರಸಧಾರೆಯಂ ಸವಿದು | ಚೀತ್ಕಾರಸ್ವರಂ ಪೊಣ್ಮೆ ತನ್ನಿನಿಯಳ್ಗಂ ಕರೆದಿತ್ತದಂ ತಣಿಪುಗುಂ | ಕೀರಾಳಿ ಮಾಕಂದದೊಳ್‌” ||

ಪಕ್ವಫಲವೊಂದನ್ನು ನೋಡಿದ ಗಿಳಿ ಅದರ ರಸಧಾರೆಯುಂಡು ತನ್ನ ಇನಿಯಳಿಗೆ ಕೊಡುವ ಈ ಶಬ್ದಚಿತ್ರ ಪ್ರಿಯನೊಬ್ಬ ತನ್ನ ಪ್ರಿಯೆಗೆ ತನಗೆ ಮೆಚ್ಚಿಗೆಯಾದದ್ದನ್ನು ನೀಡುವ ದೃಶ್ಯದಂತಿದೆ. ಕಳಿತ ಹಣ್ಣೊಂದನ್ನು ನೋಡಿ ಅದರಿಂದ ಆಕರ್ಷಿತನಾದ ಆತ ಅದನ್ನು ಕೈಗೆತ್ತಿಕೊಂಡು ತಿರುಗಿಸಿ ತಿರುಗಿಸಿ ನೋಡುತ್ತಾನೆ. ಹಾ! ಎಂದೋ, ಚೆನ್ನಾಗಿದೆ! ಎಂದೋ ತನಗರಿವಿಲ್ಲದೆ ಉದ್ಗರಿಸುತ್ತಾನೆ. ಅದೇ ರೀತಿ ಗಿಳಿ ತನ್ನ ಮೂತಿಯನ್ನು ಅತ್ತಿತ್ತ ತಿರುಗಿಸಿ, ಅತ್ತಿತ್ತ ಬಗ್ಗಿಸಿ ಕಳಿತ ಹಣ್ಣನ್ನು ಪರೀಕ್ಷಿಸುತ್ತದೆ, ಅದನ್ನು ಮೆಚ್ಚಿ ಪಕ್ಕಗಳಿಂದ ಅಪ್ಪಿ ಸಂತೋಷಪಡುತ್ತದೆ, ತನಗೆ ಸಹಜವಾದ ರೀತಿಯಲ್ಲಿ ಸಂತಸದ ಧ್ವನಿ ಹೊರಡಿಸುತ್ತದೆ.

ಮನುಷ್ಯನ ಮುಂದಿನ ಕಾರ್ಯವಾದರೋ ಹರಿತ ಅಲಗೊಂದನ್ಬೆತ್ತಿ ಹಣ್ಣನ್ನು ಎಚ್ಚರದಿಂದ ಕೊಯ್ಯುವುದು, ಮೆಲ್ಲನೆ ಕಚ್ಚಿ ಅದರ ರುಚಿ ನೋಡುವುದು, ಅಚ್ಚರಿಯನ್ನೂ ಆನಂದವನ್ನೂ ಅನುಭವಿಸುವುದು, ಆಹಾ ಎಂದು ತೃಪ್ತಿಯನ್ನು ಸೂಚಿಸುವುದು. ಅದೇ ರೀತಿ ಗಿಳಿಯೂ ತನ್ನ ಕೊಕ್ಕಿನಿಂದ ಹಣ್ಣನ್ನು ಮೆಲ್ಲನೆ ಸೀಳಿ ಅದರ ರಸಧಾರೆಗೆ ಬಾಯೊಡ್ಡಿ ಹೀರಿ ಆನಂದದಿಂದ ಉದ್ಗರಿಸುತ್ತದೆ. ಮನುಷ್ಯ ತನ್ನ ತೃಪ್ತಿ ತನ್ನವಳಿಗೂ ದೊರೆಯಲಿ ಎಂದು ಅವಳನ್ನು ಕರೆದು ಅದನ್ನು ಕೊಟ್ಟು ಸಂತೋಷ ಪಡಿಸುತ್ತಾನೆ. ಗಿಳಿ ಮನುಷ್ಯನಿಗೆ ತಾನೇನೂ ಕಡಿಮೆಯಲ್ಲ ಎಂದು ಅದೂ ತನ್ನ ಇನಿಯಳನ್ನು ಹತ್ತಿರ ಕರೆದು ಹಣ್ಣು ತೋರಿ ಅದರ ರುಚಿಯ ವಿಶೇಷತೆಯನ್ನು ಹೊಗಳಿ ತಿನ್ಬಿಸುತ್ತದೆ: “ತನ್ನ ಇನಿಯಳ್ಗಂ ಕರೆದಿತ್ತದಂ ತಣಿಪುಗುಂ” ಎಂದು ಕವಿ ಕೈಲಾಸದ ಇಂಥ ಒಂದು ದೃಶ್ಯಮಾಲಿಕೆಯನ್ನು ನಮ್ಮ ಕಣ್ಣಿಗೆ ಕಟ್ಟಿದಾಗ ಈ ಗಿಳಿಯ ಬಳಗ ಶಿವ ಶಿವೆಯರ ನಿವಾಸ ಸ್ಥಾನದ್ದಲ್ಲವೇ, ಅದರಿಂದಲೇ ಹೀಗೆ ಎನ್ನಿಸುತ್ತದೆ.

ಸಹಜ ನುಡಿಗಳ ರಸಕಾರಂಜಿ: ಪಂಡಿತ ಷಡಕ್ಷರಿ “ಮೊದಲಗ್ಗದ ಸಕ್ಕದಮಿರೆ | ಕನ್ನಡಮುದಯಿಸಿ ರಾಜಿಸದೆ |  ಕರ್ಣಕಮನೀಯತೆಯಿಂ” ||ಎಂದು ಕನ್ನಡದ ಅಭಿಮಾನವನ್ನು ಮೆರೆದಿದ್ದಾನೆ. ಈ ಅಭಿಮಾನ ಬರಿಯ ಮಾತಾಗಿರದೆ ಆತನ ಕಾವ್ಯಗಳಲ್ಲಿ ಅಲ್ಲಲ್ಲಿ ಕನ್ನಡ-ಸೊಗಸಿನ ರಸಕಾರಂಜಿಯಾಗಿದೆ. ಷಡಕ್ಷರಿಯ ಸ್ವಭಾವೋಕ್ತಿಗಳೂ ಇತರ ಅಲಂಕಾರಗಳಂತೆ ಕನ್ನಡದ ಮೂಲಕ ರಂಜಿಸುತ್ತವೆ. ಹೀಗೆ ಆಗುವಾಗಲೂ ಕವಿ ಕುಮಾರವ್ಯಾಸನಿಗೆ ಮೈಮರೆಯಲು ಕೃಷ್ಣ ಸ್ತುತಿ ನೆವವಾದರೆ ಷಡಕ್ಷರಿಗೆ ಪ್ರಕೃತಿ ಸನ್ನಿಧಿಯೊಂದೆ ಸಾಕು! ನಿಸರ್ಗದ ಸಹಜತೆಯಲ್ಲಿ ಮಾನವ ಸ್ವಭಾವವನ್ನು ಗುರುತಿಸಿ ಅದನ್ನು ಕಾವ್ಯಾತ್ಮಕವಾಗಿ ಅಷ್ಟೇ ಸಹಜ ನುಡಿಗಳಿಂದ ಮಿಡಿಯಬಲ್ಲ ಷಡಕ್ಷರಿ ಪ್ರಕೃತಿ ಚಿತ್ರವನ್ನು ಹೊಗಳಿಕೆಯ ಅತಿಶಯವನ್ನು ಅಂಟಿಸದೆ ಇದ್ದುದು ಇದ್ದಂತೆ ಬಿಡಿಸಿದ್ದಾನೆ ಎನ್ನುವುದು ಹೌದಾದರೂ ಅದು ಅಷ್ಟು ಸುಲಭವಾದ ಕಾರ್ಯವೇನೂ ಅಲ್ಲ. “ತೂಗುತೆ ತೊನೆಯುತೆ ಬಳ್ಕುತೆ ಬಾಗುತೆ ಕಂಪಿಡುತೆ ಕನಕರುಚಿದಾಳುತ್ತಂ | ರಾಗಿಸುತೆ ರಂಜಿಸುತೆ ಸೊಂ ಪಾಗಿರ್ದುವು ಕಣ್ಗೆ ಗಂಧಶಾಲಿವನಂಗಳ್” ||ಎಂದು ಷಡಕ್ಷರಿಯ ಲೇಖನಿ ಸ್ಪರ್ಷಿಸಿದ ಈ ಪ್ರಕೃತಿ ಚಿತ್ರ ಸಹಜವೂ ಸುಂದರವೂ ಆಗಿದೆ.

ಬೆಳೆದು ಕನಕ ಕಾಂತಿಗೆ ತಿರುಗಿದ ಭತ್ತದ ಗದ್ದೆಯು ಹೊತ್ತ ತೆನೆಯ ಭಾರಕ್ಕೆ ಬಾಗಿ ತೂಗುತ್ತದೆ. ಅದರ ಸುವಾಸನೆ ಸುತ್ತೆಲ್ಲ ಹಬ್ಬುತ್ತದೆ. ಗಂಧಶಾಲಿ ವನವಾಗಿಬಿಟ್ಟಿದೆ. ತನ್ನ ಸುವಾಸನೆಯಿಂದ ಆಕರ್ಷಿಸುವ ಗಂಧಶಾಲಿ ವನವು ಕಣ್ಣಿಗೂ ಸೊಂಪಾಗಿದೆ. ಅಲ್ಲಿ “ಎಳೆ ಗಿಳಿಗಳ ಬಳಗಂ ಗಳ ಗಳನಿಳಿತಂದೆಳಸಿ ಬಳಸಿ ಸುಳಿದೊಳಪುಗುತಂ | ನಳನಳಿಸಿ ಬೆಳೆದು ಕಳಿಯಾದ ಕಳಮೆಯ ಕಣಿಶಂಗಳಂ ಕರಂ ಖಂಡಿಸುಗುಂ” || ಎಂದೆನ್ನುವ ಈ ಕಂದ ಪದ್ಯ ನಳ ನಳಿಸುವಂತೆ ಬೆಳೆದು ನಿಂತ ಗದ್ದೆಗೆ ಎರಗಿ ತೆನೆಗಳನ್ನು ಕತ್ತರಿಸುವ ಎಳೆಗಿಳಿಗಳ ಬಳಗದ ಕ್ರಿಯೆಯನ್ನು ವರ್ಣಿಸುತ್ತ ತನ್ನ ಪದಗತಿಯಲ್ಲಿಯೆ ಭಾವದೀಪ್ತಿಯನ್ನು ಸ್ಫುರಿಸುತ್ತದೆ.

ಷಡಕ್ಷರಿಯು ಈ ಮೇಲಿನ ಎರಡು ಕಂದ ಪದ್ಯಗಳಲ್ಲಿ ಒಂದೇ ಸಮಯದಲ್ಲಿ ಬೇರೆ ಬೇರೆ ಇಂದ್ರಿಯಗಳ ಮೂಲಕ ಅನುಭವಿಸುವ ಸೌಂದರ್ಯಾನುಭೂತಿಯೂ ವ್ಯಕ್ತವಾಗಿದೆ. ಗದ್ದೆಯ ಸ್ವರ್ಣಕಾಂತಿ ಮತ್ತು ಬಾಗಿ ತೂಗುವ ಸೊಂಪು ಕಣ್ಣಿಗೆ ಚೆಲುವಾದರೆ ಅದರ ಸುಗಂಧವು ನಾಸಿಕವನ್ನು ಅರಳಿಸಿದೆ. ಈ ಸಂತಸದ ಕ್ಷಣದಲ್ಲಿಯೇ ಗಿಳಿಯ ಬಳಗ ಉಲಿಯುತ್ತ ಕೇಕೆ ಹಾಕುತ್ತ ಗದ್ದೆಯ ಒಳ ಪ್ರವೇಶ ಮಾಡುತ್ತವೆ, ಕಣಿಶಂಗಳನ್ನು ಖಂಡಿಸುತ್ತವೆ. ಒಂದು ಕ್ರಿಯೆ ಕಿವಿಗೆ ಹಿತವಾದದ್ದು, ಇನ್ನೊಂದು “ಕರಂ ಖಂಡಿಸುಗುಂ” ಎನ್ನುವಾಗ ಮನಸ್ಸಿಗೆ ಕಳವಳಕಾರಿಯಾದದ್ದು. ಆದರೆ ಇಲ್ಲಿ ಒಂದನ್ನು ಹೊಗಳುವ ಇನ್ನೊಂದನ್ನು ತೆಗಳುವ ದೃಷ್ಟಿ ಇಲ್ಲ. ವರ್ಣನಾ ವಸ್ತುವಿನಲ್ಲಿ ತನ್ಮಯತೆಯನ್ನು ಪಡೆದೂ ಪಡೆಯದ ಕವಿಯ ಅದೂರಾಂತರ ಪ್ರಜ್ಞೆ ಇದು. ಅವನ ಸೂಕ್ಷ್ಮಸಂವೇದಿಯಾದ ಮನಸ್ಸು ಅಲ್ಲಲ್ಲಿ ನುಡಿಯನ್ನು ಮಿಡಿಯುತ್ತದೆ, ಗತಿ ಭಾವಸ್ಪಂದಿ ಆಗುತ್ತದೆ, ಅಷ್ಟೇ.

ಕಾವ್ಯೋದ್ದೇಶದ ಎಚ್ಚರ: ಕವಿಯ ಶಬ್ದಾಡಂಬರ ಕಾವ್ಯದ ಆರಂಭದ ಪದ್ಯಗಳಲ್ಲಿಯೇ ವ್ಯಕ್ತವಾಗುತ್ತದೆ. ಆದರೆ ಕವಿ ತನ್ನ ಶಬ್ದಾಡಂಬರದಲ್ಲಿ ಮರೆಯಾಗಿಸದ ಅವನ ಕಾವ್ಯೋದ್ದೇಶದ ಎಚ್ಚರ ಆಶ್ಚರ್ಯವನ್ನುಂಟು ಮಾಡುತ್ತದೆ. ಇದಕ್ಕೊಂದು ದೃಷ್ಟಾಂತ ಪೌರಾಣಿಕ ಹಿನ್ನೆಲೆಯಲ್ಲಿ ಸಮುದ್ರವನ್ನು ವರ್ಣಿಸುತ್ತ ಶಿವಾಧಿಕ್ಯವನ್ನು ಮೆರೆಸುವ ಈ ಪದ್ಯ. “ಕುಡಿದಂ ಕುಂಭಜನೆನ್ನ ಆತ್ಮವಧುವೊಳ್‌ ಕೂಡಿರ್ದನೆಂದು | ಇಂದ್ರಂ ಕಡೆದಂ ತನ್ನ ಹಿತಾದ್ರಿಗಾಂ ಶರಣಂ ಎಂದು ‌ಆ ರಾಘವಂ ಕಟ್ಟಿ ಮೇಣ್‌ ತಡೆದಂ ಕಾದೊಳಕೆಯ್ದನೆಂದು ಪಗೆಯಂ | ಹಾಲಾಹಲಂಗೊಟ್ಟೊಡಂ ಮೃಢನೋರ್ವಂ ಮುಳಿಯಂ | ಗಂಡೆಂದುಲಿವವೊಲ್‌ ಉದ್ಘೋಷಿಕುಂ ಸಾಗರಂ” ||

ಈ ಸಮುದ್ರ-ವರ್ಣನೆಯಲ್ಲಿ ಜ್ಞಾನಿಯಾದ ಕುಂಭಜ, ಮೂರು ಲೋಕಕ್ಕೆ ಒಡೆಯನಾದ ಭೋಗಪತಿ ಇಂದ್ರ, ಪರಾಕ್ರಮಿಯೂ, ವಿಷ್ಣುವಿನ ಅವತಾರಿಯೂ ಆದ ಶ್ರೀರಾಮ ಇವರು ಒಂದೊಂದು ಸಾಮಾನ್ಯ ಸಂಗತಿಗೇ ಸಮುದ್ರನನ್ನು ಹಗೆಯಾಗಿ ಕಂಡು ಕಾಡಿದ್ದಾರೆ; ಆದರೆ ಮೂರು ಲೋಕದ ದೈವ ಶಿವ, ಆತ ಸಮುದ್ರ ಮಥನದ ಸಮಯದಲ್ಲಿ ಸಮುದ್ರ ಮೂರು ಲೋಕವನ್ನು ಸುಡುವಂಥ ವಿಷವಿತ್ತರೂ ಹಗೆಯಾಗಿ ಅದನ್ನು ಕಾಣಲಿಲ್ಲ, ದ್ವೇಷಿಸಿಲ್ಲ, ಸಿಟ್ಟಿಗೇಳಲೂ ಇಲ್ಲ. ನಿಜವಾಗಿ ದೇವರಲ್ಲೆಲ್ಲ ಪುರಾಣಪುರುಷನಾದ ಪರಶಿವನೊಬ್ಬನೇ ಗಂಡು ಎಂದು ಸಮುದ್ರ-ಪುರುಷ ಘೋಷಿಸುತ್ತಾನೆ ಎನ್ನುತ್ತಾನೆ ಕವಿ! ಹೀಗೆ ಷಡಕ್ಷರಿ ಪ್ರಕೃತಿ ವರ್ಣನೆಯಲ್ಲಿ ಮಾನವಸ್ವಭಾವಗಳೊಂದಿಗೆ ಪೌರಾಣಿಕ ವಿಷಯಗಳನ್ನೂ ವಿವರಿಸಬಲ್ಲ ಪ್ರೌಢನಾಗಿದ್ದಾನೆ. ಪಾಂಡಿತ್ಯ ಪ್ರದರ್ಶನವೆ ಉದ್ದೇಶ ಎನ್ನುವಂತೆ ಇತರ ವೃತ್ತಗಳಲ್ಲಿ ಸಮುದ್ರವನ್ನು ವರ್ಣಿಸಿರುವ ಕವಿ ಈ ಪದ್ಯದಲ್ಲ್ಲಿ ಕಡಲಿನ ಭೂತವನ್ನು ಗಮನಿಸಿ ತನ್ನ ಪ್ರಗಲ್ಭತೆಯನ್ನು ಮೆರೆಯುತ್ತಾನೆ. ಒಂದು ವಿಷಯವನ್ನು ಅವಲೋಕಿಸುವಾಗ ಕವಿ ಪೂರ್ವದ ಮತ್ತು ವರ್ತಮಾನದ ಸಂಗತಿಗಳನ್ನು ಗಮನಿಸಿ ಭವಿಷ್ಯವನ್ನು ಧ್ವನಿಸುತ್ತಾನೆ ಎನ್ನುವುದರ ಸೂಚಕ ಈ ವೃತ್ತ-ಪದ್ಯ.

ಷಡಕ್ಷರಿ ಎಷ್ಟು ವೃಕ್ಷಗಳ ಹೆಸರನ್ನು ತಿಳಿದಿದ್ದಾನೆಂದು ಸಂತೋಷಿಸುವುದಿದ್ದರೆ ಈ ವೃತ್ತ ಚೆನ್ನಾಗಿದೆ. “ಎಲವಂ ಸಂಪಿಗೆ ಹೊನ್ನೆ ಚೆನ್ನೆ ಕವಳಂ | ಕಾರಾಚಮಾಚಂ ಪುಲಿಂ ಗಿಲೆರಂ ಗುರ್ಗುಳಮತ್ತಿ ಮಲ್ತೆ ಮಧುಕಂ ಮಂಗಾರೆ ಪಚ್ಚಾರಿದಿಂ ಡಲಮಾಲಂ ಬೆಳವಿಂಗಳಂ ಪುಣಿಸೆ | ಜಾಲಂ ಬೇಲಮಂ ಕೋಲೆ ಬೊಬ್ಬುರಿ ಮಾವಂಬಟೆ ಕಕ್ಕೆ ಬಿಕ್ಕೆ ಬಕುಳಂ | ಬೇವೆತ್ತಿಕಂ ಕಿಂಶುಕಂ” || ವೃತ್ತವೊಂದನ್ನು ಇಷ್ಟು ನಾಮವಾಚಕ ಮಾಡುವ ಕವಿ ಗದ್ಯವನ್ನು ವಿರೋಧಾಭಾಸಕ್ಕೆ ಬಳಸಿ ಪಂಡಿತರಿಗೆ ಸವಾಲೆಸೆಯುತ್ತಾನೆ. ಪಾಂಡಿತ್ಯವೂ ಅಭ್ಯಾಸ ಸಿದ್ಧಿಯೂ ಇಲ್ಲದಾತ ಇದನ್ನು ಅರ್ಥಮಾಡಿಕೊಳ್ಳಲಾರ. “ಸುವಂಶಾನ್ವಿತಮಾಗಿಯುಂ ಕುಜಾತಿ ಸಮೃದ್ಧಂಮುಂ ಶಬಲೋಪಯುಕ್ತಮಾಗಿಯುಮ್‌ ಅವಿಗ್ರಹಾಶ್ರಯಮುಮ್‌ | ಮದನಾಗಮ ಹಿತಸ್ಥಿತಿಯಾಗಿಯಾಮ್‌ |  ಶಂಬರವಿಲಾಸಾಸ್ಪದಮುಮ್…‌|  …ಸರ್ವದಾರೂಪ ಶೋಭಿತಮಾಗಿಯುಮ್‌ | ಆತನು ಶೋಭಾಸ್ಪದಂ” || ಎನ್ನುವ ಈತನ ಗದ್ಯದಲ್ಲಿಯ ಶಬ್ದ ಸಂಪತ್ತಿ, ಅದನ್ನು ಬಳಸುವಾಗ ಅಲ್ಲಲ್ಲಿ ಜಾಗ್ರತವಾದ ಪ್ರತಿಭಾ ವಿಶೇಷ ಇವನ್ನು ಗಮನಿಸಿದರೆ ಪ್ರತಿಯೊಂದು ಶಬ್ದವೂ, ವಾಕ್ಯವೂ ಅರ್ಥ ರಮ್ಯತೆಯನ್ನು ಪಡೆಯುವುದು ಪರಿಸರ ಪ್ರಭಾವದಿಂದ ಮತ್ತು ಪ್ರತಿಭೆ ವಸ್ತುವಿನ ಪರಿಸರವನ್ನೂ ಅದನ್ನು ತಕ್ಕ ರೀತಿಯಲ್ಲಿ ವ್ಯಕ್ತಗೊಳಿಸಬಲ್ಲ ಸಾಮರ್ಥ್ಯವನ್ನೂ ಗುರುತಿಸುತ್ತದೆ ಎಂಬುದು ಸುಸ್ಪಷ್ಟ. ಷಡಕ್ಷರಿ ಕನ್ಬಡದ ಗಂಡುತನವನ್ನೂ ಸಂಸ್ಕೃತದ ಲಾಲಿತ್ಯವನ್ನೂ ಬಳಸಿಕೊಂಡಿರುವುದು ಇಲ್ಲಿ ಸ್ಪಷ್ಟವಾಗಿದೆ. ಆತನ ಈ ಪಾಂಡಿತ್ಯವನ್ನು ಲಕ್ಷಿಸಿ ಡಾ. ಹೆಚ್.‌ ತಿಪ್ಪೇರುದ್ರಸ್ವಾಮಿಯವರು “ಷಡಕ್ಷರಿ ಎಂದರೆ ಮನಸ್ಸಿಗೆ ಬರುವುದು ಪಾಂಡಿತ್ಯದ ಆಯುಧಾಗಾರ. ಈತನ ಕಾವ್ಯಗಳು ಪಾಂಡಿತ್ಯ ಪ್ರದರ್ಶನದಲ್ಲಿ ಒಂದು ಮೈಲಿಗಲ್ಲು” ಎಂದಿದ್ದಾರೆ. (ಶರಣ ಚರಿತ ಮಾನಸ”, ಪು.50).

ರೂಪಕಗಳ ಪ್ರೌಢಿಮೆ: ರೂಪಕಗಳನ್ನು ನಿರ್ಮಿಸುವ ಪ್ರೌಢಿಮೆಯಲ್ಲಿ ಬಸವಣ್ಣ, ಕುಮಾರವ್ಯಾಸ ಮತ್ತು ಷಡಕ್ಷರಿಯ ಹೆಸರುಗಳು ಬಹು ಮುಖ್ಯವಾದವು. ಭೀಷ್ಮ ಪರ್ವದ ಕೊನೆಯಲ್ಲಿ ಅಸ್ತ್ರ ಸನ್ಯಾಸ ಪಡೆದ ಭೀಷ್ಮ ಶರಮಂಚದಲ್ಲಿ ಒರಗುತ್ತಾನೆ, ಆತನನ್ನು ಉಪಚರಿಸಿ ಪಾಂಡವ ಕೌರವರು ಪಾಳೆಯಕ್ಕೆ ಮರಳುತ್ತಾರೆ. ಕುಮಾರವ್ಯಾಸ ಆ ಸನ್ನಿವೇಶದ ಭೀಷ್ಮನನ್ನು “ಪಡುವಣ ವಿಪುಲ ಸ್ತಂಭ ದೀಪಿಕೆಯಂತೆ ರವಿ ಮೆರೆದ” ಎನ್ನುತ್ತಾನೆ. ಈ ಗೌರವ ಭೀಷ್ಮನ ಹೊರತು ದ್ರೋಣ, ಅಭಿಮನ್ಯು, ಜಯದ್ರಥ ಮೊದಲಾದವರಿಗೆ ಸಂದಿದ್ದರೆ ಮಾತು ದೊಡ್ಡದಾಗಿ ಅದನ್ನು ತುಂಬುವ ಪಾತ್ರ ಸಣ್ಣದಾಗುತ್ತಿತ್ತು, ಅದರ ಧ್ವನಿಶಕ್ತಿಗೆ ಹರವಿಲ್ಲದೆ ಅಪವ್ಯಯವಾಗುತ್ತಿತ್ತು. ಹಾಗೆಯೇ ಪ್ರಕೃತಿಯ ಸಹಜ ಕ್ರಿಯೆಯನ್ನು ಹೇಳುವ ಮಾತು ತನ್ನ ಸಂದರ್ಭೋಚಿತ ಗುಣದಿಂದ ಅರ್ಥ ಪರಂಪರೆಯನ್ನು ಹುಟ್ಟಿಸುತ್ತದೆ. ಒಬ್ಬ ಕವಿಯ ಹಿರಿಮೆಯನ್ನು ಗುರುತಿಸುವಾಗ ಆ ಸುಂದರ ವಾಕ್ಯವೊಂದನ್ಬಲ್ಲ, ಅದರ ಪ್ರಯೋಜನವನ್ನೂ ಗಮನಿಸಬೇಕಾಗುತ್ತದೆ. ದೀರ್ಘವಾದ ಪ್ರಕೃತಿ ವರ್ಣನೆಗಳಲ್ಲಿ ತಲ್ಲೀನನಾಗುವ ಷಡಕ್ಷರಿ ಅಲ್ಲಲ್ಲಿ ಮಹಾಕವಿಗೊಪ್ಪುವ ಪ್ರತಿಭಾ ಸಂಪತ್ತಿಯನ್ನು ಅಭಿವ್ಯಕ್ತಗೊಳಿಸಿದ್ದಾನೆ.

ಖಾಂಡವ ವನ ದಹನದ ಸಮಯದಲ್ಲಿ ಅಗ್ನಿ ವನವನ್ನು ದಹಿಸುವ ಈ ಮಾತು ಕುಮಾರವ್ಯಾಸನದು: “ಕರುಳ ತುಂಬಿಯ ತನಿಗೆದರಿ ಮುಖ | ಸರಸಿಜವ ಚುಂಬಿಸಿ ತಮಾಲದ ತುರುಬ ಹಿಡಿದದರ ಪ್ರವಾಳದ ರಸವ ನೆರೆ ಸವಿದು | ವಿರುಪಯೋಧರ ಬಿಲ್ಪವನು ಹೊ ಯ್ದೊರಸಿ ಕದಳಿಯ ನುಣ್ಪೊಡೆಯ ನಿ ಟ್ಟೊರೆಸಿ ರಮಿಸಿತು ವನಸಿರಿಯ ಪಿಪ್ಪಲ ದಳಾಂಗದಲಿ” || ಇದು ಆದಿಪರ್ವದ ಖಾಂಡವ ದಹನ ಕಾರ್ಯದಲ್ಲಿ ಕುಮಾರ ವ್ಯಾಸ ಕಂಡ ಅಗ್ನಿರತಿ. ಸುಟ್ಟು ಅಗ್ನಿಯ ಆಹಾರವಾಗುವ ಕಾಡು ಅವನ ರತಿಕ್ಷೇತ್ರವೂ ಹೌದು ಎಂದರೆ, ಅದು ಅವನ ಅಜೀರ್ಣಕ್ಕೆ ಔಷಧಿ ಎಂದರೆ ಇಷ್ಟು ಸುಂದರವಾದ ಪದ್ಯದ ಸಾರ್ಥಕತೆಯಾದರೂ ಏನು ಎಂಬುದನ್ನು ತೀವ್ರವಾಗಿಯೇ ಆಲೋಚಿಸಬೇಕಾಗುತ್ತದೆ. ಪಂಡಿತಮಾನ್ಯ ಷಡಕ್ಷರಿ ವಾಯುರತಿಯನ್ನು ರೂಪಕವಾಗಿ ಹೇಳುವುದರೊಂದಿಗೆ ಅರ್ಥಸಾರ್ಥಕತೆಯನ್ನು ಪಡೆದಿರುವುದು ಗಮನಾರ್ಹವಾಗುತ್ತದೆ: “ಪುಳಿನ ನಿತಂಬಮಂ ಪದೆದು ಸೋಂಕಿ |ತೆರಳ್ಚಿ ತರಂಗನೀವಿಯಂ ವಿಳಸಿತ ಚಕ್ರವಾಕ ಯುಗ್ಮಮನಪ್ಪಿ ಮದಾಳಿ ಮಾಲೆಯೆಂಬಳಕಮನೊತ್ತಿ ನೇರ್ಪಡಿಸಿ ತತ್ಸರಸೀ ರಮೆಯಂಬುಜಾಸ್ಯ ಮಂಡಳಮನೊರಲ್ದು ಚುಂಬಿಸಿ | ಭುಜಂಗನವೊಲ್‌ ಸುಳಿಗಂ ಸಮೀರಣಂ” ||

ನಿತಂಬ, ಮಳಲರಾಶಿ, ತರಂಗ, ಸೀರೆಯ ನಿರಿಗೆ, ಒಂದನ್ನೊಂದು ಬಿಡದೆ ಅಂಟಿಕೊಂಡಿರುವ ಚಕ್ರವಾಕ ದ್ವಯಗಳು, ಸ್ತನಗಳು, ಗುಂಗುರು ಕೂದಲು, ತುಂಬಿಗಳ ಹಿಂಡು ಹೀಗೆ ಶೃಂಗಾರ ಸೌಭಾಗ್ಯೆಯಾದ ಸರಸ್ಸು ಪ್ರೇಮಾತುರೆ! ಪ್ರಿಯ ಸಮೀರಣ ಪ್ರೇಮದಿಂದ ಆಕೆಯ ನಿತಂಬವನ್ನು ಸೋಕುತ್ತಾನೆ, ನಿರಿಗೆಗಳನ್ನು ನೇವರಿಸುತ್ತಾನೆ, ಕುಚದ್ವಯಗಳನ್ನಾಲಂಗಿಸಿ ಸುರುಳಿ ಕೂದಲುಗಳಲ್ಲಿ ಕೈಯಾಡಿಸುತ್ತಾನೆ. ಹೀಗೆ ಕಮಲಮುಖಿಯಾದ ಸರಸ್ಸನ್ನು ರತಿಕೇಳಿಗೆ ಸಿದ್ಧಗೊಳಿಸಿ ಕಾದಲ-ಗಾಳಿ ಅನುರಾಗದಿಂದ ಚುಂಬಿಸಿ ಭುಜಂಗನಂತೆ ಅಪ್ಪಿ ಮುಂದರಿಯುತ್ತಾನೆ. ಹೀಗೆ ರತಿಕೇಳಿಯಲ್ಲಿ ಸುಖಿಸುವ ಮಂದಮಾರುತನ ಚಿತ್ರವು ಹೆಣೆಯಾಟದಲ್ಲಿ ತೊಡಗಿದ ಹಾವುಗಳೆರಡರ ತನ್ಮಯತೆಯನ್ನು ಮನುಷ್ಯ-ರತಿಯ ವಿನ್ಯಾಸವನ್ನು ಪುನಃ ಸೃಷ್ಟಿಸುತ್ತದೆ.

ಈ ಸಮೀರಣ ತಾನು ಒಲಿದ ಹಳ್ಳಿ-ಸುಂದರಿ, ಕಾಡು-ಚೆಲುವೆಯನ್ನು ಒಲಿಸಿಕೊಂಡದ್ದನ್ನು ಕವಿ ವರ್ಣಿಸುವುದು ಹೀಗೆ: “ಸುಳಿದುದು ಬಾಳಿನುಡ್ದೊಡೆಯನಪ್ಪುತೆ ಕಂಪನಮಂ ನಿಮಿರ್ಚಿ ಸಾರ್ದುಎಳವಿ ಸುಗುಚ್ಚಮೆಂಬ ಮೊಲೆಯಂ ಮಧುಘರ್ಮಕಣಾಳಿಯಂ ಪದಂಗೊಳಿಸಿ | ಲತಾಂಗಮಂ ಪದೆದು ಸೋಂಕಿ ನವಾಂಕುರ ರೋಮಹರ್ಷಮಂ ಬಳಯಿಸಿ ತದ್ವನ ಸ್ಥಳಿಗೆ ಕಾಮುಕನಂತಿರೆ ಮಂದಮಾರುತಂ” || ಒಲಿದು, ಕಚಕುಳಿಯಿಟ್ಟು ಒಲಿಸಿ ದೀಪ್ತರತಿಯನ್ನು ಹೊಂದುವ ಮಂದಮಾರುತ ಸಹಜವಾಗಿ ಕವಿಗೆ ಸುಟ್ಟು ರತಿಸುವ, ರತಿಸಿ ಸುಡುವ ಅಗ್ನಿಯೊಂದಿಗೆ ಸಹಧರ್ಮಿಯಾಗಿ ಕಾಣಲಾರ. ಆತ ಸುಳಿದಲ್ಲೆಲ್ಲ ಹಬ್ಬುವುದು ಸುಖದ ಸುವಾಸನೆಯೇ!

ಸರ್ವವ್ಯಾಪಿಪ್ರಕೃತಿ-ರಮಣೀಯಕಾವ್ಯ:  ಪ್ರಕೃತಿಯು ಸರ್ವ ವ್ಯಾಪಿಯಾಗಿ ಷಡಕ್ಷರಿಯ ಕಾವ್ಯ ರಮಣೀಯವಾಗಿದೆ. ಕವಿ ಪ್ರಕೃತಿ ವರ್ಣನೆಯನ್ನು ಭಾವಿಸುತ್ತ ಒಂದೊಮ್ಮೆ ಕಥಾನಕದ ಜಾಡನ್ನು ಮರೆತರೆ ಅದು ಅವನ ವರ್ಣನಾಸಕ್ತಿಯಿಂದ ಆಗುವ ದೋಷ ಆಗಿರದೆ ಪ್ರಕೃತಿಪ್ರಿಯತೆಯಿಂದ ಆಗುವ ತಲ್ಲೀನತೆ ಮಾತ್ರ ಅಷ್ಟೇ. “ಕವಿಯ ಶೈಲಿ ಝೇಂಕರಿಪ ತುಂಬಿಗಳಿಂಚರದಂತೆ ಮನೋಜ್ಞವಾಗಿದೆ. ʼಇಲ್ಲಿ ಚಂಪೂ ಶೈಲಿಯ ಪ್ರೌಢಿಮೆಯಿದ್ದರೂ ಪ್ರಸಾದಕ್ಕೆ ಬಾಧೆಯಿಲ್ಲʼ. ಸಂಸ್ಕೃತ ಮಾರ್ಗದ ಬಿಗುವಿಗೂ ಕನ್ನಡ ದೇಶೀಯ ಸರಳತೆಗೂ ಅವೆರಡರ ಲಲಿತವಾದ ಮಿಶ್ರಣಕ್ಕೂ ಒಳ್ಳೆಯ ಉದಾಹರಣೆಗಳನ್ನು ಈತನ ಕೃತಿಗಳಿಂದ ಕೊಡಬಹುದು. ಈತನ ವೃತ್ತ-ಪದ್ಯಗಳಲ್ಲಿ ಕಂಡುಬರುವ ಶಕ್ತಿಯೆಂದರೆ ಅದು ಭಾವಕ್ಕೆ ತಕ್ಕಂತೆ ಏರಬಲ್ಲುದು, ಇಳಿಯಬಲ್ಲುದು” ಎನ್ನುತ್ತದೆ ಶಬರಶಂಕರ ವಿಳಾಸ ಪ್ರಬಂಧಂ, (ಸಂ. ಡಾ|| ಜಿ. ಶಿವರುದ್ರಪ್ಪ, ಶ್ರೀ ಬಿ.ಎನ್.‌ ಶಾಸ್ತ್ರಿ, xivii, xIviii). ಕಾವ್ಯಾಭ್ಯಾಸ ಪ್ರಿಯರೆಲ್ಲರಿಗೂ ಈ ಮಾತು ಸರ್ವವೇದ್ಯ.

ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ವೃಷಭೇಂದ್ರವಿಜಯ ಎಂಬ ದೀರ್ಘ ಕಾವ್ಯಗಳನ್ನು ಸೃಷ್ಟಿಸಿದ ಷಡಕ್ಷರಿಯ ಪ್ರಕೃತಿ ಪ್ರಿಯತೆ ಕಾವ್ಯದ ಅರ್ಥಪುಷ್ಠಿಯನ್ನು ಸಾಧಿಸಿದಂತೆ ಕೆಲವೊಮ್ಮೆ ತೂಕಡಿಸಿದ್ದೂ ಉಂಟು. ಆದರೆ ಶಿವನ ಭಕ್ತರ ಮತ್ತು ಶಿವನ ಮಹಿಮೆಯನ್ನು ಹೊಗಳುವ ಅವನ ಗಮನ, ದೃಷ್ಟಿಗೆ ಮಾತ್ರ ಅವನ ಪ್ರಕೃತಿಪ್ರಿಯತೆ ಎಲ್ಲೂ ಕುಂದು ತರುವುದಿಲ್ಲ ಎಂದೆನ್ನಲೇಬೇಕು. ಆತನ ಪ್ರಕೃತಿ ವರ್ಣನೆಯು ಭಕ್ತನ ಬದುಕಿನ ಶೃಂಗಾರ ಭಾವಾಭಿವ್ಯಕ್ತಿಯ ಪರಿಸರ ನಿರ್ಮಾಣದಲ್ಲಿ, ಭಕ್ತೋಲ್ಲಾಸದಲ್ಲಿ, ಶೃಂಗಾರ ವಿಲಾಸದಲ್ಲಿ ಉಪಮೆಯಾಗಿ, ರೂಪಕವಾಗಿ, ಸ್ವಭಾವೋಕ್ತಿಯಾಗಿ ಹಲ ವಿಧದಿಂದ ಕಾವ್ಯಾರ್ಥವನ್ನು ಪುಷ್ಟಿಗೊಳಿಸಲು ದುಡಿದಿದೆ. ಕವಿ ಕಾಡಿನಲ್ಲಿ, ಕಾಲುದಾರಿಯಲ್ಲಿ, ರಾಜಬೀದಿಯಲ್ಲಿ ಪ್ರಕೃತಿಯ ರಮಣೀಯತೆಯನ್ನು ಅವಲೋಕಿಸಿದ್ದಾನೆ. ಅದರ ಸೂಕ್ಷ್ಮ ಸಂಗತಿಗಳನ್ನು ನುಡಿಯುಡಿಗೆಯಲ್ಲಿ ಪ್ರತಿಬಿಂಬಿಸಿ ಕೃತಾರ್ಥನಾಗಿದ್ದಾನೆ.

ಡಾ. ಹೆಚ್.‌ ತಿಪ್ಪೇರುದ್ರಸ್ವಾಮಿಯವರು ಷಡಕ್ಷರಿಯ ಕಾವ್ಯವನ್ನು ಕುರಿತು “ರಾಜಶೇಖರ ವಿಲಾಸದಿಂದಲೇ ಅಮರವಾಗಿ ಉಳಿಯಬಲ್ಲ ಷಡಕ್ಷರಿಯ ಕಾವ್ಯಕೀರ್ತಿ ಶಬರಶಂಕರ ವಿಲಾಸದಿಂದ ವೃದ್ಧಿಗೊಂಡು, ವೃಷಭೇಂದ್ರ ವಿಜಯದಿಂದ ……ಸಾರ್ಥಕಗೊಂಡಿದೆ” ಎಂದಿದ್ದಾರೆ ತಮ್ಮ ʼಶರಣ ಚರಿತ ಮಾನಸʼ ಕೃತಿಯಲ್ಲಿ. ಇದರೊಂದಿಗೆ ಷಡಕ್ಷರಿಯ ರಮಣೀಯವಾದ ಪ್ರಕೃತಿ ವರ್ಣನೆಗಳನ್ನು ಬೇರೆಯಾಗಿ ಜೋಡಿಸಿಟ್ಟರೆ ಅವು ತಮ್ಮ ರೂಪಕಾದಿ ಕಾವ್ಯಗುಣಗಳಿಂದ ಕನ್ನಡ ಸಾಹಿತ್ಯದಲ್ಲಿ ಅಮರವಾಗಿ ನಿಲ್ಲುತ್ತವೆ ಎಂದರೆ ಅತ್ಯುಕ್ತಿಯಾಗಲಾರದು. ಮಹಾ ಪಂಡಿತನಾಗಿಯೂ ಪ್ರಕೃತಿಪ್ರಿಯನಾಗಿಯೂ ಮೆರೆದ ಕನ್ನಡ ಕವಿಗಳಲ್ಲಿ ಷಡಕ್ಷರಿಯ ಹೆಸರು ಅಗ್ರ ಪಂಕ್ತಿಗೆ ಸೇರತಕ್ಕದ್ದು.

-ಗಜಾನನ ಈಶ್ವರ ಹೆಗಡೆ

7 Responses

  1. Manjuraj H N says:

    ಷಡಕ್ಷರದೇವಕವಿಯ ಪಾಂಡಿತ್ಯದೊಳಗಿನ ಪ್ರತಿಭಾಸಂಪನ್ನತೆಯನ್ನು ಅಷ್ಟೇ ಅಕ್ಕರೆಯಿಂದ ಉಣಬಡಿಸಿದ ಮತ್ತು
    ನಮ್ಮ ತಿಳಿವನ್ನು ವಿಸ್ತರಿಸಿದ ನಿಮಗೆ ನನ್ನ ಅನಂತ ನಮನಗಳು ಗುರುಗಳೇ. ಧನ್ಯವಾದಗಳು

  2. ಮಹಾಬಲ says:

    ಸೊಗಸಾಗಿದೆ

  3. ಅಭ್ಭಾ…ಷಡಕ್ಷರದೇವ ಕವಿಯ…ಪರಿಸರ ಪ್ರಿಯತೆಯ ಮೂಲಕ ಆತನ ಪಾಂಡಿತ್ಯ ವನ್ನು ತಮ್ಮ ಅನುಭವದ ಮೂಸೆಯಲ್ಲಿ ಪಡಿಮೂಡಿಸಿರುವ ರೀತಿ ಅನನ್ಯ…ಧನ್ಯವಾದಗಳು ಸಾರ್

  4. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  5. Padmini Hegde says:

    ಷಡಕ್ಷರಿಯ ಕಾವ್ಯ ಜೇಂಗೊಡದಂತೆ ಎನ್ನುವುದರ ಚಿತ್ರಣ ಸೊಗಸಾಗಿದೆ

  6. ಶಂಕರಿ ಶರ್ಮ says:

    ಷಡಕ್ಷರಿದೇವರ ಹಳೆಗನ್ನಡ ಕವನಗಳಲ್ಲಿರುವ ಪ್ರಕೃತಿಯ ಸೊಬಗಿನ ವರ್ಣನೆಯನ್ನು ಅಷ್ಟೇ ಸೊಗಸಾಗಿ ನಮಗೆ ಉಣಬಡಿಸಿದ ಉತ್ಕೃಷ್ಟ ಲೇಖನ…ಧನ್ಯವಾದಗಳು ಸರ್.

  7. ಪದ್ಮಾ ಆನಂದ್ says:

    ಅಗ್ರಪಂಕ್ತಿಗೆ ಸೇರಬೇಕಾದ ಕವಿ ಷಡಕ್ಷರಿಯ ಕಾವ್ಯದ ಪ್ರೌಢಿಮೆಯು ಸೊಗಸಾಗಿ ಅನಾವರನಗೊಂಡಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: