ವಾಟ್ಸಾಪ್ ಕಥೆ 44 : ಅಂತಸ್ತಿಗಿಂತ ಕರ್ಮನಿಷ್ಠೆ ದೊಡ್ಡದು.
ಒಂದೂರು. ಅಲ್ಲಿ ಒಬ್ಬ ಜಮೀನುದಾರ ಮತ್ತು ಅವನಲ್ಲಿ ಸೇವೆಯಲ್ಲಿದ್ದ ಸಹಾಯಕರಿಬ್ಬರೂ ಒಂದೇ ದಿನ ತೀರಿಹೋದರು. ಸತ್ತ ನಂತರ ಅವರಿಬ್ಬರ ಆತ್ಮಗಳು ಯಮಧರ್ಮರಾಜನ ಆಸ್ಥಾನದಲ್ಲಿ ವಿಚಾರಣೆಗಾಗಿ ನಿಂತವು. ಜಮೀನುದಾರನ ಖಾತೆಯಲ್ಲಿನ ವಿವರಗಳೆಲ್ಲವನ್ನು ಪರಿಶೀಲಿಸಿದ ನಂತರ ಯಮಧರ್ಮನು ಅವನಿಗೆ ಅಲ್ಲಿ ಸೇವಕನ ಕೆಲಸ ನಿರ್ವಹಿಸುವಂತೆ ಆದೇಶಿಸಿದ. ಸೇವಕನ ವಿವರಗಳನ್ನು ಪರಿಶೀಲಿಸಿ ಅವನಿಗೆ ಯಾವ ಕೆಲಸವನ್ನೂ ಹೇಳದೇ ಬಿಟ್ಟುಬಿಟ್ಟ. ಇದರಿಂದ ಜಮೀನುದಾರನ ಆತ್ಮಕ್ಕೆ ಕಸಿವಿಸಿಯಾಯಿತು. ಅದು ”ಯಮಧರ್ಮರಾಜಾ ತಾವು ಹೀಗೆ ಮಾಡಬಹುದೇ? ನಾನು ಬದುಕಿದ್ದಾಗ ಎಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಮಿಗಿಲಾಗಿ ಪ್ರತಿದಿನವೂ ತಪ್ಪದೆ ದೇವರ ಪೂಜೆಯನ್ನು ಮಾಡುತ್ತಿದ್ದೆ. ಹೀಗಿದ್ದೂ ನನಗೆ ಸೇವಕನಾಗಿ ಕೆಲಸ ಮಾಡಲು ಆದೇಶಿಸಿದ್ದೀರಿ. ಇದು ಸರಿಯೇ?” ಎಂದು ಕೇಳಿತು.
ಆಗ ಯಮ ಧರ್ಮರಾಜನು ನೌಕರನ ಕಡೆ ತಿರುಗಿ ನಸುನಗುತ್ತಾ ”ನೀನೇನು ಮಾಡುತ್ತಿದ್ದೆ ಹೇಳು” ಎಂದು ಆಜ್ಞಾಪಿಸಿದ.
”ಸ್ವಾಮೀ ನಾನೇನು ಮಾಡಲು ಸಾಧ್ಯವಿತ್ತು. ಬೆಳಗಿನಿಂದ ಬೈಗಿನವರೆಗೂ ಒಡೆಯರ ಹೊಲದಲ್ಲಿ ದುಡಿಯುತ್ತಿದ್ದೆ. ಬೇರೆ ಏನೇ ಕೆಲಸ ಹೇಳಿದರೂ ನಿಷ್ಠೆಯಿಂದ ಮಾಡುತ್ತಿದ್ದೆ. ನನಗೆ ಸಿಗುತ್ತಿದ್ದ ಸಂಬಳದಿಂದ ಕಷ್ಟದಲ್ಲಿ ಜೀವನ ನಡೆಸುತ್ತಿದ್ದೆ. ಪೂಜೆ, ಆರತಿ, ನೈವೇದ್ಯ ಮಾಡಲು ನನ್ನಲ್ಲಿ ಹಣವಿರುತ್ತಿರಲಿಲ್ಲ. ನಾನು ಬಡತನದಲ್ಲಿ ಬಾಳುತ್ತಿದ್ದೆ. ಹಣವುಳಿದ ದಿನ ಎಣ್ಣೆಕೊಂಡು ದೀಪವನ್ನು ಉರಿಸಿ ದಾರಿಹೋಕರಿಗೆ ಅನುಕೂಲವಾಗುವಂತೆ ಬೆಳಕು ತೋರಿಸುತ್ತಿದ್ದೆ. ಸ್ವಂತಕ್ಕೆಂದು ನಾನೇನೂ ಭಗವಂತನಲ್ಲಿ ಬೇಡಲಿಲ್ಲ. ಸಿಕ್ಕಿದ ಮಜೂರಿಯಲ್ಲಿ ಇನ್ನೇನೂ ಮಾಡಲು ಸಾಧ್ಯವಿರಲಿಲ್ಲ ಸ್ವಾಮಿ” ಎಂದು ವಿವರಗಳನ್ನು ನೀಡಿದ.
ಆಗ ಯಮಧರ್ಮರಾಜನು ಜಮೀನುದಾರನನ್ನು ”ಈ ಸೇವಕನ ಕರ್ಮನಿಷ್ಠೆಯನ್ನು ಗಮನಿಸಿದೆಯಾ? ಭಗವಂತನು ಧನ ಸಂಪತ್ತಿನಿಂದಲ್ಲ ಪ್ರಾಮಾಣಿಕ ಕರ್ಮನಿಷ್ಠೆಯನ್ನು ಪರಿಗಣಿಸಿ ಮೆಚ್ಚುತ್ತಾನೆ. ಅವನಂತೆ ಕರ್ಮನಿಷ್ಠೆಯನ್ನು ನೀನೂ ಕಲಿಯಲೆಂದೇ ನಿನಗೆ ಸೇವಕನಾಗಿ ಕಾರ್ಯ ನಿರ್ವಹಿಸಲು ಹೇಳಿದೆ” ಎಂದನು.
ಯಮಧರ್ಮನಿಂದ ಸಮಝಾಯಿಷಿ ಕೇಳಿದ ಜಮೀನುದಾರನ ವಿವೇಕದ ಕಂಗಳು ತೆರೆದವು. ಬದುಕಿನಲ್ಲಿ ಒಬ್ಬ ವ್ಯಕ್ತಿಯ ಸ್ಥಾನಮಾನ ಅವನು ಮಾಡುವ ನಿಸ್ವಾರ್ಥ ಸೇವೆ, ಕರ್ತವ್ಯನಿಷ್ಠೆಯಲ್ಲಿದೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಅರ್ಥಪೂರ್ಣ ಕಥೆ
ಧನ್ಯವಾದಗಳು ನಯನಮೇಡಂ
ಕರ್ತವ್ಯನಿಷ್ಠೆಯ ಹಿರಿಮೆಯನ್ನು ಸಾರುವ ಕಥೆಯು ಸೂಕ್ತ ಚಿತ್ರದೊಂದಿಗೆ ಎಂದಿನಂತೆ ಚಂದ…ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಕರ್ಮನಿಷ್ಟೆಯ ಮಹತ್ವವನ್ನು ಸಾರುವ ಸಂದೇಶ ಹೊಂದಿದ ಸುಂದರ ಕಥೆ.
ಧನ್ಯವಾದಗಳು ಪದ್ಮ ಮೇಡಂ
ಒಳ್ಳೆಯ ಕಥೆ…
ಧನ್ಯವಾದಗಳು ಕೃಷ್ಣಪ್ರಭಾ ಮೇಡಂ..