ಏಕಾಂಗಿ ಬದುಕು-1
ಹುಟ್ಟುತ್ತಾ ಏಕಾಂಗಿ, ಸತ್ತಾಗಲೂ ಏಕಾಂಗಿ, ನಡುವೆ ಬೆಳೆಯುತ್ತಾ ಬದುಕುವ ಸಮಯದಲ್ಲಿ ಏನೆಲ್ಲಾ ಸಂಪಾದಿಸಿದೆವು ಎಂದು ತಿರುಗಿ ನೋಡಿದರೆ, ಒಂದಷ್ಟು ಪ್ರೀತಿ,ಸ್ನೇಹ, ವಾತ್ಸಲ್ಯ, ಮಮತೆ….ಹೀಗೆ ಅನೇಕ ಭಾವಬಂಧನಗಳನ್ನು ಸಂಪಾದಿಸಿಕೊಂಡು ಬರುತ್ತೇವೆ.ಅಪ್ಪ, ಅಮ್ಮ, ಅಣ್ಣಾ,ತಂಗಿ, ಮತ್ತಿತರ ಸಂಬಂಧಗಳನ್ನು ಹೊತ್ತು ತರುವ ಈ ಬದುಕು ಅನೇಕ ಸ್ನೇಹಿತರನ್ನು , ಕಾಣದ ಬಂಧುಗಳನ್ನು, ಸಹಾಯಕರನ್ನು, ನೆರೆಹೊರೆಯವರನ್ನು ಹೊತ್ತು ತರುತ್ತೇವೆ. ಇವುಗಳ ಆಪ್ತತೆಯ ಕೊಂಡಿಯಲ್ಲಿ ಬಂಧಿಗಳಾಗುತ್ತೇವೆ. ಸದಾ ಹೊಸ ಹೊಸ ಸದಸ್ಯರು ಪರಿಚಯವಾಗುತ್ತಲೇ ಇರುತ್ತಾರೆ.ನಾವು ಕೂಡಾ ಯಾವುದನ್ನು ಲೆಕ್ಕಿಸದೆ ಮನದ ಗೂಡಲ್ಲಿ ಬೆಚ್ಚಗೆ ಸೇರಿಸಿಕೊಂಡು ಬಿಡುತ್ತೇವೆ. ಆತ್ಮೀಯತೆಯಿಂದ ಹೆಚ್ಚಾದ ಕೂಡಲೇ ನಾವು ಹಿಂದೆ ಮುಂದೆ ಯೋಚಿಸದೆ ಅಲ್ಲೊಂದು ಅವರಿಗಾಗಿ ಗುಡಿಯನ್ನು ಕಟ್ಟಿಬಿಡುತ್ತೇವೆ. ಪೂಜಿಸುತ್ತೇವೆ, ಆರಾಧಿಸುತ್ತೇವೆ. ಕೊನೆಗೆ ಅವರಂತೆಯೇ ನಾವು ಎಂದು ಭಾವಿಸುತ್ತೇವೆ. ಎರಡು ದೇಹ ಒಂದೇ ಪ್ರಾಣ ಅನ್ನುವ ಅತಿರೇಕಕ್ಕೂ ಹೋಗುತ್ತೇವೆ.
ಕರೆದಲ್ಲಿ, ಹೋದಲ್ಲಿ,ಬಂದಲ್ಲಿ,ನಿಂತಲ್ಲಿ,ಕುಳಿತಲ್ಲಿ ಎಲ್ಲಾ ಕಡೆ ನಿಧಾನವಾಗಿ ಆವರಿಸಿಕೊಳ್ಳುವ ಈ ಸಂಬಂಧಗಳು ಅದೆಷ್ಟು ಅಪ್ಯಾಯಮಾನವಾಗಿರುತ್ತದೆಯೋ ಸಂಬಂಧಗಳ ಹೆಸರು ಕೂಗುವಿಕೆಯ ಆನಂದದ ಅನುರಣನ ಕೂಡಾ ಅಷ್ಟೇ ಅಪ್ಯಾಯಮಾನವಾಗಿರುತ್ತದೆ ಎಂದು ಭಾವಿಸುತ್ತೇವೆ. ಬೆಳೆಯುವ ಸಂಬಂಧಗಳು ಆಕಾಶಕ್ಕಿಂತ ಅಗಲವಾಗಿ , ಭೂಮಿಗಿಂತ ಸುಂದರವಾಗಿ ಕಂಡುಬಂದದ್ದು ಸುಳ್ಳಲ್ಲ.ಈ ಭರದಲ್ಲಿ ಮಾತನಾಡಿಸಲು ಒಂದಷ್ಟು ಸ್ವತಂತ್ರ , ಸಮಾನತೆಯ ಅವಕಾಶವನ್ನು ಬಳಸುತ್ತೇವೆ. ಅಮ್ಮ, ಅಪ್ಪ ನಲ್ಲದವರು ಅಮ್ಮ ಅಪ್ಪನಾಗುವರು.ಅಣ್ಣ ತಂಗಿಯಲ್ಲದವರು ಅಣ್ಣತಂಗಿ,ಅಕ್ಕ ತಮ್ಮ,ಆಂಟಿ,ಅಂಕಲ್, ಅಜ್ಜಿ,ಅಜ್ಜ ಹೀಗೆ ಹಲವು ಸಂಬಂಧಗಳು ನಮ್ಮ ಸುತ್ತ ಗಿರಕಿಹೊಡೆಯಲು ಪ್ರಾರಂಭಿಸುತ್ತದೆ. ಒಮ್ಮೊಮ್ಮೆ ಇದೇ ಸರ್ವೋತ್ತಮ ಎನಿಸಿಬಿಡುತ್ತದೆ. ಯಾರೋ ಏನೋ ಬದುಕುವ ಭರವಸೆಗಳನ್ನು ನೀಡಿದಾಗ ನಂಬಿಕೆಯ ಪ್ರಪಾತದಲ್ಲಿ ಬಿದ್ದಿರುತ್ತೇವೆ. ನಂಬಿಕೆ ನಿಜವಾದರೆ ಸರಿ. ಇಲ್ಲವೇ ಪ್ರಪಾತದಿಂದ ಏಳಲು ಆಗದಷ್ಟು ಆಳಕ್ಕೆ ಮುಳುಗಿ ಕೆಸರಲ್ಲಿ ಹೂತು ಹೋಗಿರುತ್ತೇವೆ . ನಿದಿರೆಯ ಕೋಶದೊಳಗೂ ಎಂಥೆಂಥ ಭಾವಗಳ ಭದ್ರಕೋಟೆಯೊಳಗೆ ಬಂಧಿಯಾಗುವೆವು ಎಂಬುದು ನಮಗೆ ಮಾತ್ರ ಗೊತ್ತಾಗುವ ಸತ್ಯ.ಎಲ್ಲಾ ಸಂಬಂಧಗಳು ಒಮ್ಮೆ ಮುರಿದು ಹೋಗುತ್ತವೆ ಎನ್ನುವ ಸತ್ಯ ಮಾತ್ರ ಅಂದಿನಿಂದ ಇಂದಿನವರೆಗೂ ಯಾರೂ ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಸಮಯ ಸಂದರ್ಭಗಳು ಹೇಳಿಕೇಳಿ ಬರುವುದಿಲ್ಲ.
ಒಂದಲ್ಲಾ ಒಂದು ದಿನ ಕಳಚಿಹೋಗುವ ಸಂಬಂಧಗಳಿಗೆ ಅದೆಷ್ಟು ಮೌಲ್ಯದ ಸಮಯವನ್ನು ಅವರಿಗಾಗಿ ಮೀಸಲಿಟ್ಟಿದ್ದೆವು ಎಂಬುದನ್ನು ನೆನಪಿಸಿಕೊಳ್ಳಲೂ ಸಾಧ್ಯವಿಲ್ಲ. ನೆನಪಿಸಿಕೊಂಡಾಗ ಅಯ್ಯೋ ಒಂದು ಅಮೂಲ್ಯ ಸಮಯವನ್ನು ಇವರಿಗಾಗಿಯೇ ನಾನು ಮೀಸಲಿಟ್ಟದ್ದು ಎಂದು ಕೊರಗುತ್ತೇವೆ. ಕೊರಗಿದ ನಂತರವೂ ಕೊನೆಯಲ್ಲಿ ಎಲ್ಲಾ ಕಳೆದುಕೊಂಡ ನಂತರ ಉಳಿವುದು ಒಂಟಿತನದ ಹಪತಪ. ಅಲ್ಲವೇ..? ಆಡಿ,ಹಾಡಿ ಕುಣಿದು ಕುಪ್ಪಳಿಸಿದ ಆ ಕ್ಷಣಗಳು ಒಮ್ಮೆ ಕಣ್ಮುಂದೆ ನಿಂತಾಗ ಮೌನಿ
ಹೃದಯ, ಏಕಾಂಗಿತನದಲ್ಲಿ ಭಾವನೆಗಳ ತಾಕಲಾಟದಲ್ಲಿ ನಿಂತು ಬಿಡುತ್ತದೆ. ಒಮ್ಮೆ ಹಿಂದಿನ ಇತಿಹಾಸವನ್ನು ಮರುಕಳಿಸುತ್ತದೆ.
ಸಾವಿರಾರು ಜನ ಏಕಾಂಗಿಯಾಗಿದ್ದುಕೊಂಡು ಸಾಧನೆಯ ತುತ್ತತುದಿಯನೇರಿದವರ ಬದುಕಿನ ಚಿತ್ರಣವನ್ನು ಕಣ್ಮುಂದೆ ತಂದುಕೊಡುತ್ತದೆ. ಭಗವಾನ್ ಕೃಷ್ಣ ಒಂಟಿಯಾಗಿ ಮಹಾಭಾರತ ಪರ್ವದ ರಥವನೋಡಿಸುವ ಸಾರಥಿಯಾಗಿ ಮೆರೆದುದು ನಾವ್ಯಾರೂ ಮರೆಯುವಂತಿಲ್ಲ.ಭಗವಾನ್ ಬುದ್ಧನ ಜೀವನದ ಮೊದಲ ರಾತ್ರಿಯ ಏಕಾಂಗಿಯ ಪಯಣ ಹಾಗೂ ದುಃಖದ ದಾರಿಯ ಸತ್ಯವನ್ನು ಬಟ್ಟಾಬಯಲು ಮಾಡ ಹೊರಟ ಬದುಕಿನ ವಿಮುಖದ ಹೆಜ್ಜೆಗಳನ್ನು ಮರೆಯುವಂತಿಲ್ಲ. ಸತಿ ಸಾವಿತ್ರಿ ತನ್ನ ಗಂಡನ ಬದುಕಿನ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಯಮಲೋಕಕ್ಕೆ ಹೊರಟ ಏಕಾಂಗಿಯ ತುಳಿತದ ಹೆಜ್ಜೆಗಳನಂತೂ ಮರೆತೂ ಮರೆಯುವಂತಿಲ್ಲ. ಅರ್ಧರಾತ್ರಿಯ ನೀರವತೆ,ನಿರ್ಜನ ಪ್ರದೇಶದ ನಟ್ಟಿರುಳಲ್ಲಿ ದಟ್ಟಡವಿಯ ನಡುವೆ ಒಂಟಿಯಾಗಿ ಕಳೆದ ನಳದಮಯಂತಿ ನಮ್ಮಿಂದ ಮರೆಯಾಗಲು ಸಾಧ್ಯವೇ…. ಹೀಗೆ ಎಷ್ಟೋ ಏಕಾಂಗಿಯ ಬದುಕು ಒಗ್ಗಟ್ಟಿನಿಂದ ಸಾಗಿ ಒಂಟಿತನದಲ್ಲಿ ಜಯ ಗಳಿಸಿರುವುದನ್ನು ಅನೇಕ ಉದಾಹರಣೆಗಳಿಂದ ನೋಡಬಹುದು.
ಪ್ರತಿಯೊಬ್ಬ ಸಾಧಕರೂ ಏಕಾಂಗಿ ಬದುಕು ಕಟ್ಟಿಕೊಳ್ಳುವ ಮೊದಲು ನೋವು, ನಲಿವು, ಅವಮಾನ,ಅಸಹನೆ, ಕುಗ್ಗಿಸಿಕೊಂಡ ಆತ್ಮಸ್ಥೈರ್ಯ,ಒದ್ದಾಟ, ಒತ್ತಡ ಇವುಗಳನ್ನು ಅನುಭವಿಸಿಯೇ ಹೋರಾಟದ ಹಾದಿಯನ್ನು ಸವೆಸುವುದು. ನಂತರ ಗೆಲುವಿನ ಹಾದಿತುಳಿಯುವುದು. ಸಾವಿಗಿಂತಲೂ ಘೋರವಾದ ಒಂಟಿತನದ ಹಪತಪವನ್ನು ಹೊತ್ತೊಯ್ಯಲಾಗದೆ ಚಡಪಡಿಸುವ ಈ ಬದುಕು ಹತಾಶೆ ನೋವು ಅವಮಾನಗಳನ್ನು ತಂದುಕೊಡುತ್ತದೆ. ಹೀಗಿದ್ದಾಗ ಬದುಕಿನ ವಿಮುಖದ ಹೆಜ್ಜೆಗಳನ್ನು ಒಂದೊಂದಾಗಿ ಜೊತೆಯಾಗಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಪ್ರತೀ ಜೀವಿಯು ಅವಮಾನ, ಸೋಲು, ನೋವನ್ನು ಅನುಭವಿಸಿ ತಮ್ಮ ಕನಸನ್ನು ನನಸಾಗಿಸಲು ಹೊಸ ಪ್ರಯತ್ನಗಳನ್ನು ಏಕಾಂಗಿಯಾಗಿಯೇ ಹೋರಾಡುವುದು ಅಕ್ಷರಶಃ ಸತ್ಯ.
ಕನಸಿನ ಸಾಕಾರಕ್ಕೆ ಒಮ್ಮೊಮ್ಮೆ ಸಹಬಾಳ್ವೆ ಎಷ್ಟು ಮುಖ್ಯವೋ ಏಕಾಂಗಿತನದ ಹೋರಾಟಕ್ಕೆ ಹೊಂದಿಕೊಂಡ ಬದುಕಿನ ನಡುವೆ ಅನುಭವಿಸಿದ ಸೋಲು,ಅವಮಾನಗಳೂ ಅತೀ ಮುಖ್ಯ. ಭೌತಿಕವಾಗಿ ನಾವು ಏನು ಕಳೆದುಕೊಳ್ಳುವೆವೋ ಅದನ್ನು ಮಾನಸಿಕವಾಗಿ ಸಾಧಿಸಲು ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡುವ ಅನುಭವವೇ ಮುಖ್ಯ..ಅದು ಸಾಕಾರಗೊಳ್ಳಲು ಏಕಾಂಗಿಯ ಪಯಣ ಅತೀ ಅಗತ್ಯ. ನಮಗರಿವಿಲ್ಲದಂತೆ ಬಂದು ಸೇರುವ ಬಾಂಧವ್ಯಗಳ ವ್ಯಕ್ತಿತ್ವಗಳನ್ನು ನಿರಾಕರಿಸುವುದರ ಮೂಲಕ ಏಕಾಂಗಿತನದ ಅನುಭವವು ಅತೀ ಹಿತವೆನಿಸುತ್ತದೆ. ಎಲ್ಲಾ ಸಮಯದಲ್ಲೂ ಅಲ್ಲದಿದ್ದರೂ ಬಹುತೇಕ ಸಮಯದಲ್ಲಿ ಸಹಾಯವಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ.
ನಾನ್ಯಾರು? ನನ್ನೊಳಗಿನ ಅಹಂಮಿಕೆ ಏನು? ನಾನೇಗಬೇಕು? ಯಾವುದಕ್ಕೆ? ಯಾರಿಗೆ? ಮಹತ್ವ ಕೊಡಬೇಕು ? ಜಗತ್ತನ್ನು ಎಷ್ಟು ಪ್ರೀತಿಸಬೇಕು? ನಮ್ಮದಲ್ಲದ ವ್ಯಕ್ತಿತ್ವಗಳ ಜೊತೆ ಹೊಂದಾಣಿಕೆ ಹೇಗೆ ಮಾಡಿಕೊಳ್ಳಬೇಕು, ಯಾವುದು ಅಸಭ್ಯ, ಯಾವುದು ಹಿಂಸೆ, ಯಾವುದು ಅಹಿಂಸೆ, ಯಾವುದು ಅಹಂ, ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ದುರಾಲೋಚನೆ,ಯಾವುದು ದುರಾಲೋಚನೆ ಹೀಗೆ ಇನ್ನಿತರ ಸತ್ಯಾಸತ್ಯಗಳ ನಡುವೆ ಮನಸು ಗಿರಕಿಹೊಡೆದು ಒಂದು ಸಮಸ್ಥಿತಿಗೆ ಬರುವುದು
ಏಕಾಂಗಿಯಾಗಿ ಹೊರಟಾಗಲೇ.ಏಕಾಂಗಿಯ ಬದುಕು ಹೇಗೆ ಯಾವರೀತಿ ತಿರುವು ಪಡೆಯುವುದು ಎಂದು ಅವರವರ ಅನುಭವದ ಮೂಲಕವೇ. ಏನಂತೀರಿ……?
-ಸಿ .ಎನ್. ಭಾಗ್ಯಲಕ್ಷ್ಮಿ ನಾರಾಯಣ.
ಧನ್ಯವಾದಗಳು ಮೇಡಂ
ಖಂಡಿತ ಏಕಾಂಗಿ ತನದ ಬದುಕು ಹೇಗೆ ಎಂಬುದು ಅನುಭವಿಸಿದವರಿಗೇ ಗೊತ್ತು ..ಲೇಖನ ಆಪ್ತ ವಾಗಿ ಮೂಡಿಬಂದಿದೆ ಸೋದರಿ..
ಧನ್ಯವಾದಗಳು ಮೇಡಂ
Nice
ಏಕಾಂಗಿ ಬದುಕಿನ ನೋವು ನಲಿವುಗಳನ್ನು ಬಹಳ ಆತ್ಮೀಯವಾಗಿ ಚಿತ್ರಿಸಿರುವಿರಿ ಮೇಡಂ… ಧನ್ಯವಾದಗಳು.
ಮನಸ್ಸನ್ನು ಚಿಂತನೆಗೆ ಹಚ್ಚುವ ಚಂದದ ಲೇಖನ