ವಾಟ್ಸಾಪ್ ಕಥೆ 42 : ಸ್ವರ್ಗ-ನರಕ.
ಒಂದೂರಿಗೆ ಒಮ್ಮೆ ಕುದುರೆಯೇರಿ ರಾಜದೂತನೊಬ್ಬ ಕಾರಣಾಂತರದಿಂದ ಬಂದಿಳಿದ. ಆ ಊರಿನ ಜನರು ಮುಗ್ಧರು. ರಾಜ್ಯದ ರಾಜನೆಂದರೆ ಅಪಾರ ಗೌರವ. ಅವನನ್ನು ರಾಜನೇ ಬಂದನೆಂಬಂತೆ ಉಪಚಾರ ಮಾಡಿದರು. ಅವನಿಗೆ ತುಂಬ ಸಂತೋಷವಾಯಿತು. ಅವನಿಗೆ ರುಚಿಕರವಾದ ಭೋಜನ ಮಾಡಿಸಿ ಮಲಗಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿಕೊಟ್ಟರು. ಇನ್ನೇನಾದರೂ ಬೇಕಾದರೆ ಕೂಗಿ ಕರೆದರೆ ನಾವು ಸಮೀಪದಲ್ಲೇ ಇರುತ್ತೇವೆ. ತಕ್ಷಣ ಹಾಜರಾಗುತ್ತೇವೆ. ಎಂದು ಹೋದರು.
ರಾಜದೂತನು ಸುಖವಾಗಿ ಮಲಗಿದ. ಮಧ್ಯರಾತ್ರಿಯಲ್ಲಿ ಅವನಿಗೆ ಬಾಯಾರಿಕೆಯಾಗಿ ಗಂಟಲೆಲ್ಲ ಒಣಗಿದ ಅನುಭವವಾಯಿತು. ಎದ್ದು ಸುತ್ತಮುತ್ತ ಹುಡುಕಾಡಿದ. ಕುಡಿಯಲು ನೀರನ್ನು ಎಲ್ಲಿಯೂ ಇಟ್ಟಿರಲಿಲ್ಲ. ”ನೀರು..ನೀರು” ಎಂದು ಕೂಗಿದ. ಸಮೀಪದಲ್ಲೇ ಇರುತ್ತೇವೆಂದ ಜನರ್‍ಯಾರೂ ಬರಲೇ ಇಲ್ಲ. ಅವನಿಗೆ ಬಾಯಾರಿಕೆಯ ತೀವ್ರತೆ ಹೆಚ್ಚಾಯಿತು. ಸ್ವಲ್ಪ ಹೊತ್ತು ಆಲೋಚಿಸಿದ. ತಲೆಯಲ್ಲಿ ಏನೋ ಉಪಾಯ ಸುಳಿಯಿತು. ತಕ್ಷಣ ”ಬೆಂಕಿ .ಬೆಂಕಿ” ಎಂದು ಕೂಗಿದ. ಕೂಡಲೇ ಹಲವಾರು ಜನರು ಓಡಿಬಂದರು. ತಮ್ಮ ಕೈಗೆ ಯಾವಯಾವ ಪಾತ್ರೆಗಳು ಸಿಕ್ಕಿದವೋ ಅದರಲ್ಲೆಲ್ಲಾ ನೀರು ತುಂಬಿಕೊಂಡು ಬಂದಿದ್ದರು.
ಬಂದವರು ಎಲ್ಲಿದೆ ಬೆಂಕಿ ಎಂದು ಕೇಳಿದರು. ಅದಕ್ಕೆ ರಾಜದೂತನು ತನ್ನ ಗಂಟಲಿನೆಡೆಗೆ ಕೈ ತೋರುತ್ತಾ ”ಇಲ್ಲಿದೆ ಬೆಂಕಿ, ಅದನ್ನಾರಿಸಲು ಒಂದು ಚೊಂಬು ನೀರು ಸಾಕು. ಉಳಿದೆಲ್ಲವನ್ನೂ ಹಿಂದಕ್ಕೆ ತೆಗೆದುಕೊಂಡು ಹೋಗಿ” ಎಂದನು. ಎಲ್ಲರೂ ಅವನನ್ನು ಬಯ್ದುಕೊಂಡು ಎಡವಟ್ಟು ಮನುಷ್ಯ ಎಂದು ಹೋದರು.
ಅತಿಥಿಯು ‘ನೀರು ನೀರು’ ಎಂದು ಕೂಗಿದಾಗ ಒಬ್ಬರೂ ಬರಲಿಲ್ಲ. ಅದೇ ‘ಬೆಂಕಿ ಬೆಂಕಿ’ ಎಂದಾಗ ಹತ್ತಾರು ಜನರು ಓಡಿಬಂದರು, ನೀರನ್ನೂ ತಂದರು. ಪ್ರಪಂಚದ ರೀತಿಯೇ ಹೀಗೆ. ಒಳ್ಳೆಯದನ್ನು ಮಾಡಿದರೆ ನೀವು ಸ್ವರ್ಗಕ್ಕೆ ಹೋಗುತ್ತೀರಿ ಎಂದು ಹೇಳಿದರೆ ಯಾರೂ ಕೇಳುವುದಿಲ್ಲ. ಅದೇ ಕೆಟ್ಟಕೆಲಸ ಮಾಡಿದರೆ ನೀವು ನರಕಕ್ಕೆ ಹೋಗುತ್ತೀರಿ ಎಂದರೆ ಹೆದರಿ ಜನರು ಮಾತು ಕೇಳುತ್ತಾರೆ. ಅಷ್ಟರ ಮಟ್ಟಿಗೆ ಸ್ವರ್ಗ-ನರಕಗಳು ಉಪಯೋಗಕಾರಿಯಾಗಿವೆ.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಉತ್ತಮ ಸಂದೇಶವನ್ನೊಳಗೊಂಡ ಕಥೆ
ಅಬ್ಬಾ, ಎಷ್ಟು ಸರಳ, ಸುಂದರ ಸಂದೇಶವನ್ನೊಳಗೊಂಡ ಚಿಕ್ಖ ಚೊಕ್ಕ ಕಥೆ. ಮನಸ್ಸಿಗೆ ಮುದ ನೀಡಿತು.
ಧನ್ಯವಾದಗಳು ಪದ್ಮಾ ಮೇಡಂ
ನಿಮ್ಮ ಪ್ರೀತಿಯ ಪ್ರತಿಕ್ರಿಯೆ ಗೆ ಧನ್ಯವಾದಗಳು ನಯನ ಮೇಡಂ
ಸೊಗಸಾದ ಸಂದೇಶ ಹೊತ್ತ ಸಣ್ಣಕಥೆ ಇಷ್ಟವಾಯ್ತು ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಚಿಕ್ಕ ಹಾಗೂ ಚೊಕ್ಕ ಕಥೆ ತುಂಬಾ ಚೆನ್ನಾಗಿದೆ ನಾಗರತ್ನ ಮೇಡಂ
ಧನ್ಯವಾದಗಳು ಸಾರ್